Tag: teacher

  • ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ- ಬೋರ್ಡ್‍ನಲ್ಲಿ ಬರೆದು ಶಿಕ್ಷಕ ಆತ್ಮಹತ್ಯೆ

    ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ- ಬೋರ್ಡ್‍ನಲ್ಲಿ ಬರೆದು ಶಿಕ್ಷಕ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಬೋರ್ಡ್ ನಲ್ಲಿ ಬರೆದು ಶಿಕ್ಷಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಚಂದ್ರಶೇಖರ್(32) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನಾಗಿದ್ದು, ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕನಗಾನಕೊಪ್ಪ ಗ್ರಾಮದ ನಿವಾಸಿ. ಚಂದ್ರಶೇಖರ್ ಅವರು ಮಂಚೇನಹಳ್ಳಿಯ ಅನುದಾನಿತ ಆಚಾರ್ಯ ಪ್ರೌಢಶಾಲೆಯ ಶಿಕ್ಷಕಕನಾಗಿ ಕೆಲಸ ಮಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿಯಿಂದ ಅನುದಾನಿತ ಶಿಕ್ಷಕನಾಗಿ ಅನುಮೋದನೆ ಮಾಡದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತನ್ನ ಆತ್ಮಹತ್ಯೆಗೆ ಆಚಾರ್ಯ ಪ್ರೌಢಶಾಲೆ ಆಡಳಿತ ಮಂಡಳಿ ಕಾರಣ ಎಂದು ಚಂದ್ರಶೇಖರ್ ಡೆತ್‍ನೋಟ್ ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಶಾಲೆಯ ಬೋರ್ಡ್ ನಲ್ಲಿ ವಿದ್ಯಾರ್ಥಿಗಳೇ ನಿಮ್ಮ ಭವಿಷ್ಯ ಉಜ್ವಲವಾಗಲಿ. ಹಾಗೂ ನನ್ನೆಲ್ಲಾ ಪ್ರೀತಿ ಪಾತ್ರರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಕೂಡ ಬರೆದಿದ್ದಾರೆ.

    ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ನೆಚ್ಚಿನ ವಿದ್ಯಾರ್ಥಿ ಭೇಟಿಯಾಗಲು 125 ಕಿ.ಮೀ ಕ್ರಮಿಸಿದ ಟೀಚರ್!

    ನೆಚ್ಚಿನ ವಿದ್ಯಾರ್ಥಿ ಭೇಟಿಯಾಗಲು 125 ಕಿ.ಮೀ ಕ್ರಮಿಸಿದ ಟೀಚರ್!

    – ಆನ್‍ಲೈನ್ ಕ್ಲಾಸಿಗೆ ಗೈರಾಗ್ತಿದ್ದ ವಿದ್ಯಾರ್ಥಿ
    – ಶಿಕ್ಷಕಿ ಕಂಡು ವಿದ್ಯಾರ್ಥಿ ಅಚ್ಚರಿ

    ತಿರುವನಂತಪುರಂ: ಶಿಕ್ಷಕಿಯೊಬ್ಬರು ತನ್ನ ನೆಚ್ಚಿನ ವಿದ್ಯಾರ್ಥಿಯನ್ನು ಭೇಟಿಯಾಗಲು ಬರೋಬ್ಬರಿ 125 ಕಿ.ಮೀ ಕ್ರಮಿಸಿದ ಘಟನೆಯೊಂದು ಕೇರಳದ ಮರಯೂರ್ ಎಂಬಲ್ಲಿ ನಡೆದಿದೆ.

    ಕೋಥಮಂಗಲಂ ಮಾರ್ ಬೆಸಿಲ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಪ್ರೀತಿ ಎನ್ ಕುರಿಯಾಕೋಸ್ ಅವರು ಏಕಾಏಕಿ ಭೇಟಿ ಮೂಲಕ ವಿದ್ಯಾರ್ಥಿಯನ್ನು ಅಚ್ಚರಿಗೆ ಒಳಪಡಿಸಿದ್ದಾರೆ.

    ಕೊರೊನಾ ವೈರಸ್ ನಿಂದಾಗಿ ವಿದ್ಯಾರ್ಥಿಗಳಿಗೆ ಎಲ್ಲೆಡೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು. ಈ ವೇಳೆ ಪ್ರೀತಿ ಅವರ ನೆಚ್ಚಿನ ವಿದ್ಯಾರ್ಥಿ ಪ್ರತಿದಿನ ಗೈರಾಗುತ್ತಿದ್ದನು. ಹೀಗಾಗಿ ಶಿಕ್ಷಕಿ ಆ ವಿದ್ಯಾರ್ಥಿಯನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಅಲ್ಲದೆ ಮರೂರಿನಲ್ಲಿರುವ ವಿದ್ಯಾರ್ಥಿ ನಿವಾಸಕ್ಕೆ ತೆರಳಲು 125 ಕಿ.ಮೀ ಪ್ರಯಾಣಿಸಿದ್ದಾರೆ.

    ಪ್ರೀತಿ ಅವರು ಹಿಂದಿ ಶಿಕ್ಷಕಿಯಾಗಿದ್ದರು. ತಿಂಗಳುಗಳ ಹಿಂದೆ ಆನ್‍ಲೈನ್ ತರಗತಿಗಳು ಪ್ರಾರಂಭವಾಗಿದ್ದರೂ, ಮರಯೂರ್‍ನ 10 ನೇ ತರಗತಿ ವಿದ್ಯಾರ್ಥಿ ಅವರಿಗೆ ಹಾಜರಾಗುತ್ತಿರಲಿಲ್ಲ. ಪ್ರತಿ ಬಾರಿಯೂ ತನ್ನ ಕ್ಲಾಸಿಗೆ ಗೈರಾಗುತ್ತಿದ್ದರಿಂದ ವಿದ್ಯಾರ್ಥಿಯ ಹಿನ್ನೆಲೆಯನ್ನು ಶಿಕ್ಷಕಿ ಕಲೆಹಾಕಿದ್ದಾರೆ. ವಿದ್ಯಾರ್ಥಿ ಅನ್‍ಲೈನ್ ತರಗತಿಗೆ ಹಾಜರಾಗಲು ಎದರಿಸುವ ಸಮಸ್ಯೆ ಬಗ್ಗೆ ಅರಿತುಕೊಂಡರು. ವಿದ್ಯಾರ್ಥಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದ ಸೌಲಭ್ಯಗಳಿಲ್ಲ. ಅಲ್ಲದೆ ಪಠ್ಯಪುಸ್ತಕಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿದುಕೊಂಡರು. ಹೀಗಾಗಿ ಶಿಕ್ಷಕಿ ವಿದ್ಯಾರ್ಥಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ತೀರ್ಮಾನಿಸಿದರು. ಅಂತೆಯೇ ಭೇಟಿಗೆ ತೆರಳಿ ಮನೆಮುಂದೆ ನಿಂತಿದ್ದನ್ನು ನೋಡಿ ವಿದ್ಯಾರ್ಥಿ ಆಶ್ವರ್ಯಗೊಳಗಾದನು.

    ಭೇಟಿ ವೇಳೆ ಶಿಕ್ಷಕಿ, ವಿದ್ಯಾರ್ಥಿಗೆ ತಾವು ತಂದಿದ್ದ ಹೊಸ ಮೊಬೈಲ್ ಫೋನ್ ಹಾಗೂ ಓದಲು ಬೇಕಾದ ಅಗತ್ಯ ವಸ್ತುಗಳನ್ನು ವಿದ್ಯಾರ್ಥಿಗೆ ನೀಡಿದರು. ಯಾವುದೇ ಹಣದ ಅಪೇಕ್ಷೆ ಇಲ್ಲದೆ ಪ್ರೀತಿಯಿಂದಲೇ ಈ ಎಲ್ಲಾ ವಸ್ತುಗಳನ್ನು ಶಿಕ್ಷಕಿ ತಮ್ಮ ವಿದ್ಯಾರ್ಥಿಗೆ ನೀಡಿದ್ದಾರೆ. ಕಾಂತಲೂರು ಪಂಚಾಯ್ತಿಯ ಪಥಡಿಪಾಲಂ ನಿವಾಸಿಯಾಗಿರುವ ವಿದ್ಯಾರ್ಥಿ, ಬೆಸಿಲ್ ಶಾಲೆ ಬಳಿ ಇರುವ ಅನಾಥಾಶ್ರಮದಲ್ಲಿ ಓದಿಗಾಗಿ ಆಶ್ರಯ ಪಡೆದಿದ್ದನು. ಆದರೆ ಕೊರೊನಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಅದು ಮುಚ್ಚಿತ್ತು.

    ಶಾಲೆಯ ದಾಖಲೆ ಪತ್ರಗಳಲ್ಲಿ ನಮೂದಾಗಿದ್ದ ಒಂದು ನಂಬರಿನಿಂದ ನಾನು ವಿದ್ಯಾರ್ಥಿಯನ್ನು ಸಂಪರ್ಕ ಮಾಡಿದೆ. ಆದರೆ ಆ ನಂಬರ್ ಬೇರೆ ಯಾರಿಗೋ ಹೋಯಿತು. ನಂತರ ಮರಯೂರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ನನ್ನ ಹಳೆಯ ಗೆಳೆಯ ಹೆಚ್ಚುವರಿ ಎಸ್‍ಐ ಎಂಎಂ ಶಮೀರ್ ಅವರ ಸಹಾಯವನ್ನು ಕೋರಿದೆ. 3-4 ದಿನಗಳ ಬಳೀಕ ಅವರು ನನಗೆ ವಿದ್ಯಾರ್ಥಿ ಹಾಗೂ ಆತನ ಕುಟುಂಬವನ್ನು ಪತ್ತೆ ಹಚ್ಚಿ ತಿಳಿಸಿದರು ಎಂದು ಪ್ರೀತಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

    ಸಹಪಾಠಿ ಪೊಲೀಸ್ ಅಧಿಕಾರಿ ಕೂಡ ವಿದ್ಯಾರ್ಥಿಯ ಬಗ್ಗೆ ಮಾಹಿತಿ ಕೇಳಿದಾಗ, ಆನ್ ಲೈನ್ ತರಗತಿಗೆ ಹಾಜರಾಗಲೆಂದು ವಿದ್ಯಾರ್ಥಿಯ ತಂದೆ ಮೊಬೈಲ್ ಕೊಡಿಸಿದ್ದರು. ಆದರೆ ಆತನಿಗೆ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದರಿಂದ ತರಗತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಾಪಸ್ ಅಂಗಡಿಗೆ ನೀಡಿರುವ ಕುರಿತು ತಿಳಿದುಬಂತು. ಈ ವಿಚಾರವನ್ನು ಕೂಡ ಅಧಿಕಾರಿ ಶಿಕ್ಷಕಿ ಬಳಿ ತಿಳಿಸಿದ್ದಾರೆ.

    ಇಷ್ಟೆಲ್ಲ ಸಮಸ್ಯೆಗಳನ್ನು ಅರಿತ ಶಿಕ್ಷಕಿ, ಒಂದು ನಿಮಿಷನೂ ತಡಮಾಡದೇ ಹೊಸ ಮೊಬೈಲ್ ಖರೀದಿಸಿ, ನೋಟ್ ಬುಕ್ಸ್, ಪಠ್ಯಪುಸ್ತಕ, ಸ್ಕೂಲ್ ಬ್ಯಾಗ್, ಪೆನ್, ಮಾಸ್ಕ್ ಗಳು ಹಾಗೂ ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ವಿದ್ಯಾರ್ಥಿಯ ಮನೆಯತ್ತ ಪ್ರಯಾಣ ಬೆಳೆಸಿ, ಆತನ ಕೈಗೆ ಹಸ್ತಾಂತರ ಮಾಡಿದರು. ಈ ವೇಳೆ ಶಿಕ್ಷಕಿಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ವಿದ್ಯಾರ್ಥಿ, ಚೆನ್ನಾಗಿ ಓದಿ ಒಳ್ಳೆಯ ಅಂಕ ಗಳಿಸುವುದಾಗಿ ಭರವಸೆ ನೀಡಿದ್ದಾನೆ.

  • ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಕೊಟ್ಟು ನಿವೃತ್ತರಾದ ಉಡುಪಿ ಶಿಕ್ಷಕ

    ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಕೊಟ್ಟು ನಿವೃತ್ತರಾದ ಉಡುಪಿ ಶಿಕ್ಷಕ

    – ಪಬ್ಲಿಕ್ ಹೀರೋ ಮುರಲಿ ಮಾನವೀಯತೆ

    ಉಡುಪಿ: ನಿವೃತ್ತಿ ಹಣ ಬಂದ್ರೆ ಒಂದು ಕಾರು ತಗೋಬೇಕು. ಬ್ಯಾಂಕಲ್ಲಿ ಫಿಕ್ಸೆಡ್ ಡೆಪೋಸಿಟ್ ಇಟ್ಟು ಬಡ್ಡಿಯಲ್ಲೇ ಜೀವನ ಮಾಡಬೇಕು. ಸುಂದರ ಮನೆ ಕಟ್ಟಿ ಆರಾಮಾಗಿ ಇರಬೇಕು ಅಂತ ಸರ್ಕಾರಿ ಉದ್ಯೋಗಿಗಳು ಲೆಕ್ಕಾ ಹಾಕ್ತಾರೆ. ಆದ್ರೆ ಉಡುಪಿಯ ನಮ್ಮ ಪಬ್ಲಿಕ್ ಹೀರೋ ಎಲ್ಲರಂತಲ್ಲ. ಇವರು ಮಾಡಿರೋ ಕೆಲಸ ದೇಶಕ್ಕೆ ಮಾದರಿ.

    ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಉಡುಪಿಯ ನಿಟ್ಟೂರು ಹೈಸ್ಕೂಲಿನ ಹೆಡ್ ಮಾಸ್ಟರ್ ಮುರಲಿ ಕಡೆಕಾರು ಉದಾಹರಣೆ. ಮುರಲಿ ಸರ್ ನವೆಂಬರ್ 1 ಕ್ಕೆ ನಿವೃತ್ತಿ ಆಗಿದ್ದು ಸುದೀರ್ಘ 37 ವರ್ಷ ಶಿಕ್ಷಣ ಸೇವೆ ಮಾಡಿ ರಿಟೈರ್ಡ್ ಆಗಿದ್ದಾರೆ. ಸರ್ಕಾರದಿಂದ ಬಂದ ಮೊತ್ತದಲ್ಲಿ ತನ್ನದೇ ಶಾಲೆಯ ಕೊರಗ ಸಮುದಾಯದ ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಮಳೆಗಾಲದಲ್ಲಿ ಸೋರುತ್ತಿದ್ದ, ಬೇಸಿಗೆಯಲ್ಲಿ ಸುಡುತ್ತಿದ್ದ ಮನೆಗೆ ಮುಕ್ತಿ ಸಿಕ್ಕಿದ್ದು, ಸುಂದರ ಸೂರು ನಯನಾ ಕುಟುಂಬಕ್ಕೆ ಸಿಕ್ಕಿದೆ.

    ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದೆ ತಮ್ಮ ಶಾಲೆಯಲ್ಲಿರುವ 170 ವಿದ್ಯಾರ್ಥಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳುತ್ತಾರೆ. ಕುಟುಂಬದ ಆರ್ಥಿಕ ಸ್ಥಿತಿ ಮನೆಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕೊಡಿಸುತ್ತಾರೆ. ಗುಡಿಸಲು ಮಾದರಿಯ ಮನೆಯಲ್ಲಿದ್ದ ನಯನಾಳಿಗೆ ತನ್ನ ಸ್ವಂತ ಹಣದಲ್ಲಿ ಮನೆ ಕಟ್ಟಿ ಕೊಡಬೇಕು ಎಂಬ ಅಭಿಲಾಷೆ ಕೈಗೂಡಿದೆ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ನಯನಾಳ ಮನೆಯಲ್ಲಿ ದೀಪ ಬೆಳಗಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿದ್ಯಾರ್ಥಿನಿ ನಯನ, ನಮ್ಮ ಮನೆ ಮಳೆಗಾಲದಲ್ಲಿ ಐದಾರು ಕಡೆ ಸೋರುತ್ತಿತ್ತು. ಮನೆಯಲ್ಲಿ ಏಳು ಜನ ಇರುವುದು ಬಹಳ ಕಷ್ಟವಾಗಿತ್ತು. ಮುರಲಿ ಸರ್ ನಮ್ಮ ಕಷ್ಟ ಅರಿತು ಮನೆ ಕಟ್ಟಿಕೊಟ್ಟಿದ್ದಾರೆ. ನಾನು ಚೆನ್ನಾಗಿ ಕಲಿತು ಶಾಲೆಗೂ ಮುರಲಿ ಸರ್ ಗೂ ಹೆಸರು ತಂದು ಕೊಡುತ್ತೇನೆ ಎಂದಾಗ ಅಳು ಮಾತನ್ನು ತಡೆಯಿತು.

    ಮುರಲಿ ಕಡೆಕಾರು ನಮ್ಮ ಪಬ್ಲಿಕ್ ಹೀರೋ ಎಂಬೂದು ಮತ್ತೊಂದು ಹೆಮ್ಮೆ. ಮೂವತ್ತೇಳು ವರ್ಷದಲ್ಲಿ ಮುರಲಿ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ರಾಜ್ಯದಲ್ಲೇ ಶಾಲೆಯಲ್ಲಿ ಮೊದಲು ಬಿಸಿಯೂಟ, ಉಚಿತ ಗ್ಯಾಸ್, ವಿದ್ಯುತ್, ಸ್ಕಾಲರ್ಶಿಪ್, ಉಳಿತಾಯ ಖಾತೆಮನೆ, ವಿದ್ಯೆ, ಉದ್ಯೋಗ ಹೀಗೆ ಸೇವೆಯೆಂಬ ಯಜ್ಞವನ್ನೇ ಕೈಗೊಂಡಿದ್ದರು. ಶಿಕ್ಷಕನ ಕೆಲಸಕ್ಕೆ ಚೌಕಟ್ಟು ಪರಿಧಿ, ಮಿತಿಯೇ ಇಲ್ಲ ಎಂಬೂದು ಮುರಲಿ ಪಾಲಿಸಿಕೊಂಡು ಬಂದಿರುವ ನಿಯಮ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮುರಲಿ, ನನ್ನದು ನೆಮ್ಮದಿಯ ನಿವೃತ್ತಿ. ಅನುದಾನಿತ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ ಎಂಬುವುದು ನನಗೆ ಹೆಮ್ಮೆ. ಬಡಮಕ್ಕಳ ಕಷ್ಟ ಏನು ಎಂದು ಅರಿಯಲು, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಬಡ ಮಕ್ಕಳ ಕಣ್ಣಲ್ಲಿ ಪ್ರೀತಿಯ ಮಿಂಚು ಕಾಣಲು ನನಗೆ ಸಾಧ್ಯವಾಗಿದೆ. ಶಿಕ್ಷಕನಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಅವಕಾಶ ಇದೆ. ಮಕ್ಕಳ ಪೋಷಕರ ಊರವರ ಪ್ರೀತಿ ಗಳಿಸುವ ಅವಕಾಶ ಒಂದಿದ್ದರೆ ಅದು ಶಿಕ್ಷಕರಿಗೆ ಮಾತ್ರ ಎಂದರು.

    ಈ ಮೂಲಕ ವೃತ್ತಿ ಜೀವನವನ್ನು ಸಾರ್ಥಕ ಕಾರ್ಯದ ಮೂಲಕ ಮುರಲಿ ಮುಗಿಸಿದ್ದಾರೆ. ರಿಟೈರ್ಡ್ ಮೆಂಟ್ ಆದ ಮುರಲಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ. ತನ್ನ ಕರ್ತವ್ಯದ ಜೊತೆ ಏನೆಲ್ಲಾ ಮಾಡುವ ಅವಕಾಶ ಇದೆ ಎಂಬೂದು ರಾಜ್ಯದ ಎಲ್ಲಾ ಶಿಕ್ಷಕರಿಗೆ ಮುರಲಿ ಮಾದರಿ.

  • ವಿದ್ಯಾರ್ಥಿನಿ ಕಣ್ಣೀರಿಗೆ ಮಿಡಿದ ಸಚಿವ- ಸರ್ಕಾರವೇ ಭರಿಸಲಿದೆ ಶಿಕ್ಷಕಿಯ ಚಿಕಿತ್ಸಾ ವೆಚ್ಚ

    ವಿದ್ಯಾರ್ಥಿನಿ ಕಣ್ಣೀರಿಗೆ ಮಿಡಿದ ಸಚಿವ- ಸರ್ಕಾರವೇ ಭರಿಸಲಿದೆ ಶಿಕ್ಷಕಿಯ ಚಿಕಿತ್ಸಾ ವೆಚ್ಚ

    ಬೆಂಗಳೂರು: ಮೂಡಬಿದಿರೆ ತಾಲೂಕಿನ ಶಿರ್ತಾಡಿಯ ಶಿಕ್ಷಕಿ ಎನ್. ಪದ್ಮಾಕ್ಷಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಶಿಕ್ಷಕ ದಂಪತಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವರದಿಗಳನ್ನು ಗಮನಿಸಿದ ತಕ್ಷಣವೇ ಸಚಿವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಅಲ್ಲದೆ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸರ್ಕಾರದ ಸೂಚನೆಯಂತೆ ಶಿಕ್ಷಕಿ ಪದ್ಮಾಕ್ಷಿಯವರ ಪುತ್ರಿ ಐಶ್ವರ್ಯಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಂಪರ್ಕಿಸಿದ್ದಾರೆ. ತಮ್ಮ ತಾಯಿಯ ಚಿಕಿತ್ಸೆ ಕುರಿತು ಸರ್ಕಾರ ಪೂರ್ಣ ಕಾಳಜಿ ವಹಿಸಲಿದ್ದು, ಯಾವುದೇ ಆತಂಕ ಬೇಡ ಎಂದು ಸಾಂತ್ವನ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೂ ಸಹ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಶಿಕ್ಷಕಿಯ ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ನನ್ನ ಅಮ್ಮನನ್ನ ಉಳಿಸಿಕೊಡಿ – ಶಿಕ್ಷಣ ಸಚಿವರಿಗೆ ವಿದ್ಯಾರ್ಥಿನಿ ಪತ್ರ

    ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿರುವ ದ.ಕ. ಜಿಲ್ಲಾಧಿಕಾರಿಯವರು ರೋಗಿಯ ಕಡೆಯಿಂದ ಯಾವುದೇ ರೀತಿಯ ಹಣ ಪಡೆಯದೇ ಚಿಕಿತ್ಸೆ ನೀಡಲು ಸೂಚಿಸಿದ್ದು, ಚಿಕಿತ್ಸಾ ಬಿಲ್ ಅನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆಂದು ಸಚಿವರು ಹೇಳಿದ್ದಾರೆ.

  • ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದ ಶಿಕ್ಷಕಿ

    ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದ ಶಿಕ್ಷಕಿ

    ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ಇಬ್ಬರು ಮಕ್ಕಳ ಜೊತೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಶ್ರೀದೇವಿ (38), ಅನುಷಾ (10), ನೂತನ್ (08) ಆತ್ಮಹತ್ಯೆಗೆ ಶರಣಾದ ತಾಯಿ ಮಕ್ಕಳು. ದಾವಣಗೆರೆ ನಗರದ ಹೊರವಲಯದ ಎಚ್ ಕಲ್ಪನಹಳ್ಳಿ ಬಳಿ ತುಂಗಭದ್ರ ಕಾಲುವೆಯಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆಯ ಜಯನಗರದಲ್ಲಿ ಮೃತರು ವಾಸವಾಗಿದ್ದರು. ವೃತ್ತಿಯಲ್ಲಿ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದ ಶ್ರೀದೇವಿ ಅವರು ಪತಿ ಜೊತೆ ಮನೆ ಕಟ್ಟುವ ವಿಚಾರವಾಗಿ ಜಗಳ ಮಾಡಿಕೊಂಡಿದ್ದರು.

    ಇದರಿಂದ ನೊಂದ ಶ್ರೀದೇವಿ ಮಕ್ಕಳನ್ನು ತಮ್ಮ ಸ್ಕೂಟಿಯಲ್ಲಿ ಕರೆದುಕೊಂಡು ಬಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಶವಗಳನ್ನು ಹೊರ ತೆಗೆಯಲಾಗಿದ್ದು, ಜಿಲ್ಲಾಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಶಿಕ್ಷಕನಿಗೆ ಗುಂಡೇಟು- ಆರೋಪಿಯನ್ನ ಥಳಿಸಿ ಕೊಂದ ಗ್ರಾಮಸ್ಥರು

    ಶಿಕ್ಷಕನಿಗೆ ಗುಂಡೇಟು- ಆರೋಪಿಯನ್ನ ಥಳಿಸಿ ಕೊಂದ ಗ್ರಾಮಸ್ಥರು

    -ಮನೆಯ ಮುಂದೆ ಕುಳಿತಿದ್ದ ಶಿಕ್ಷಕ
    -ಗ್ರಾಮದಲ್ಲಿ ನೀರವ ಮೌನ

    ಲಕ್ನೋ: ಶಿಕ್ಷಕರೊಬ್ಬರನ್ನ ಗುಂಡಿಕ್ಕಿ ಕೊಂದ ಅಪರಿಚಿತನನ್ನ ಗ್ರಾಮಸ್ಥರು ಥಳಿಸಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದ ರಾಂಪುರ ಬಂಗಾರಾ ಗ್ರಾಮದಲ್ಲಿ ನಡೆದಿದೆ.

    ಸುಧೀರ್ ಸಿಂಗ್ ಕೊಲೆಯಾದ ಶಿಕ್ಷಕ. ಇಂದು ಬೆಳಗ್ಗೆ ಶಿಕ್ಷಕ ಸುಧೀರ್ ಸಿಂಗ್ ಮನೆಯ ಮುಂದೆ ಕುಳಿತಿದ್ದರು. ಈ ವೇಳೆ ಗೊರಖ್‍ಪುರ ಮೂಲದ ಓರ್ವ ಸುಧೀರ್ ಸಿಂಗ್ ಅವರ ಮೇಲೆ ಫೈರಿಂಗ್ ಮಾಡಿದ್ದಾನೆ. ಗುಂಡಿನ ಸದ್ದು ಕೇಳಿ ಹೊರ ಬಂದ ಗ್ರಾಮಸ್ಥರು ಆರೋಪಿಯನ್ನ ಹಿಡಿದಿದ್ದಾರೆ.

    ಗುಂಡೇಟು ತಗುಲಿದ ಶಿಕ್ಷಕ ಸುಧೀರ್ ಸಿಂಗ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಕೋಲುಗಳಿಂದ ಆರೋಪಿಯನ್ನ ಥಳಿಸಿದ್ದಾರೆ. ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಸದ್ಯ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಗ್ರಾಮಸ್ಥರು ಎರಡು ಸಾವುಗಳಿಂದ ಆತಂಕದಲ್ಲಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಶವಗಳನ್ನ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

    ಶಿಕ್ಷಕ ಸುಧೀರ್ ಸಿಂಗ್ ಮೇಲೆ ಫೈರಿಂಗ್ ಮಾಡಿದ ಗೊರಖ್‍ಪುರ ಮೂಲದ ವ್ಯಕ್ತಿ ಇಂದು ಬೆಳಗ್ಗೆ ರಾಂಪುರ ಬಂಗಾರಾ ಗ್ರಾಮಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ರೆ ಸುಧೀರ್ ಸಿಂಗ್ ಮೇಲೆ ಏಕೆ ಗುಂಡಿನ ದಾಳಿ ನಡೆಸಿದ್ದ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಸ್ಥರಿಂದ ಥಳಿತಕ್ಕೊಳಗಾದ ಆರೋಪಿ ಸಹ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕ

    ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕ

    -ಉಪಹಾರ, ಹಣ್ಣು ವಿತರಣೆ

    ಕಾರವಾರ: ಇದು ಬಡ ಮಕ್ಕಳ ಹಸಿವಿಗೆ ತುತ್ತು ನೀಡಿದ ಮಾದರಿ ಶಿಕ್ಷಕರ ಕಥೆ. ಪಾಠದ ಜೊತೆಗೆ ಬೆಳಗ್ಗೆ ಹಸಿವಿನಿಂದ ಶಾಲೆಗೆ ಬರುವ ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಬೆಳಗಿನ ಉಪಹಾರದ ವ್ಯವಸ್ಥೆಯನ್ನ ಮಾಡಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿಗಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ರಾಮಚಂದ್ರ ನಾಯ್ಕ್ ಬಡ ಮಕ್ಕಳಿಗಾಗಿ ಉಪಹಾರ ಆರಂಭಿಸಿದ್ದಾರೆ. ಈ ಶಾಲೆಗೆ ಬರುವ ಮಕ್ಕಳು ಬಡ ಕುಟುಂಬದವರು. ವಿದ್ಯಾರ್ಥಿಗಳು ಬೆಳಗ್ಗೆ ಉಪಹಾರ ಸೇವಿಸದೇ ಬರುತ್ತಿರೋದು ರಾಮಚಂದ್ರ ಅವರ ಗಮನಕ್ಕೆ ಬಂದಿದೆ. ಪೊಷಕರನ್ನು ಕರೆದು ತಿಳಿ ಹೇಳಿದರೂ ಹಲವು ಮಕ್ಕಳು ಹಸಿವಿನಿಂದಲೇ ಶಾಲೆಗೆ ಬರುತ್ತಿದ್ದರು. ಇದನ್ನು ಅರಿತ ರಾಮಚಂದ್ರ ನಾಯ್ಕ್, ಸರ್ಕಾರ ಮಧ್ಯಾಹ್ನ ನೀಡುವ ಬಿಸಿಯೂಟದ ಜೊತೆಗೆ ತಮ್ಮ ಹಣದ ಮೂಲಕ ಬೆಳಗಿನ ಉಪಹಾರ ಸಹ ಪ್ರಾರಂಭಿಸಿದರು.

    ರಾಮಚಂದ್ರ ಗುರುಗಳ ಕಾರ್ಯ ನೋಡಿ ಒಂದಿಷ್ಟು ದಾನಿಗಳು ಸಹ ಸಹಾಯ ಹಸ್ತ ನೀಡಿದ್ದಾರೆ. ಶಾಲೆಗೆ ಬರುವ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆಯನ್ನು ಗಮನಿಸಿದ ಅವರು, ಪ್ರತಿ ದಿನ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ಖರೀದಿಸಿ 45 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಕೊರೊನಾ ಬಂದಿದ್ದರಿಂದ ಶಾಲೆಗೆ ರಜೆ ನೀಡಿದ್ರೂ ಪ್ರತಿ ದಿನ ತಮ್ಮ ಬೈಕ್ ನಲ್ಲಿ ಮಕ್ಕಳ ಮನೆ ಮನೆಗೆ ತೆರಳಿ ಬಾಳೆಹಣ್ಣು ನೀಡುತ್ತಾ ಬಂದಿದ್ದಾರೆ. ವಿದ್ಯಾಗಮ ಆರಂಭಕ್ಕೂ ತಿಂಗಳ ಮುಂಚೆಯೇ ಕೋವಿಡ್ ಸುರಕ್ಷಾ ಕ್ರಮದೊಂದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.

    ಹಾಸನ ಜಿಲ್ಲೆಯಿಂದ 201 ರಲ್ಲಿ ಶಾಲೆಗೆ ವರ್ಗಾವಣೆಗೊಂಡಿದ್ದ ರಾಮಚಂದ್ರ ಗುರುಗಳು ಒಂದು ವರ್ಷದಿಂದ ಬಡ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ಜೊತೆಗೆ ಹಣ್ಣುಗಳನ್ನು ಸಹ ನೀಡುತ್ತಾ ಬಂದಿದ್ದಾರೆ. ಇವರ ಈ ಕಾರ್ಯದಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಸಹ ಏರಿಕೆಯಾಗಿದೆ. ಇದಲ್ಲದೇ ಇವರು ಪ್ರತಿ ತಿಂಗಳ ಸಂಬಳದಲ್ಲಿ ದೇಶದ ರಕ್ಷಣಾ ನಿಧಿ, ಪ್ರಧಾನ ಮಂತ್ರಿ ಹಾಗೂ ಸಿಎಂ ನಿಧಿಗೆ ಹಣ ಪಾವತಿಮಾಡುವ ಮೂಲಕ ದೇಶಾಭಿಮಾನ ಮೆರೆಯುತ್ತಿದ್ದಾರೆ.

    ಮಕ್ಕಳು ಶಾಲೆಗೆ ಬಂದಾಗ ಹಸಿವಿನಿಂದ ಹೊಟ್ಟೆ ಹಿಡಿದು ಕೂರುವುದು ಗಮನಕ್ಕೆ ಬಂತು. ಆಗ ಮಕ್ಕಳಿಗೆ ವಿಚಾರಿಸಿದಾಗ ಬೆಳಗಿನ ಉಪಹಾರ ಮಾಡದೇ ಬರುತ್ತಿರುವುದು ಗಮನಕ್ಕೆ ಬಂತು. ಪೊಷಕರನ್ನು ವಿಚಾರಿಸಿದಾಗ ಇವರ ಸಮಸ್ಯೆ ಅರಿವಿಗೆ ಬಂದು ಮಕ್ಕಳು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ನನ್ನ ಸ್ವಂತ ಹಣದಿಂದ ಬೆಳಗಿನ ಉಪಹಾರ ಪ್ರಾರಂಭಿಸಿದೆ. ನಮ್ಮ ಶಾಲೆಯ ಮಕ್ಕಳಲ್ಲದೇ ಅಂಗನವಾಡಿ ಹಾಗೂ ಇತರೆ ಮಕ್ಕಳೂ ಇಲ್ಲಿ ಬಂದು ಉಪಹಾರ ಸೇವಿಸುತ್ತಾರೆ. ಅಪೌಷ್ಟಿಕತೆ ನೀಗಿಸಲು ಹಣ್ಣುಗಳನ್ನು ನೀಡುತ್ತಿದ್ದೇನೆ ಎಂದು ಶಿಕ್ಷಕ ರಾಮಚಂದ್ರ ನಾಯ್ಕ್ ಹೇಳುತ್ತಾರೆ.

    ಈ ಹಿಂದೆಯೂ ಇವರು ಕಾರ್ಯನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುತುಗನ್ನೆ ಶಾಲೆಯಲ್ಲಿ ಸಹ ಮಕ್ಕಳ ಅಪೌಷ್ಟಿಕತೆ ನೀಗಿಸಲು ತಮ್ಮ ಸ್ವಂತ ಹಣದಿಂದ ಹಣ್ಣುಗಳನ್ನು ನೀಡುತ್ತಿದ್ದರು. ಇಲ್ಲಿಯೂ ಸಹ ಬಡ ಮಕ್ಕಳ ಸಮಸ್ಯೆ ಅರಿತು ಬೆಳಗಿನ ಉಪಹಾರ ಹಾಗೂ ಹಣ್ಣುಗಳನ್ನು ನೀಡುವ ಮೂಲಕ ಬಡ ಮಕ್ಕಳ ಜೊತೆ ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

  • ಅಪಘಾತಕ್ಕೆ ಬಲಿಯಾದ ಶಿಕ್ಷಕನ ಬಳಿಯಿದ್ದ ಒಂದೂವರೆ ಲಕ್ಷ ಮರಳಿಸಿದ ಪಿಎಸ್‍ಐ

    ಅಪಘಾತಕ್ಕೆ ಬಲಿಯಾದ ಶಿಕ್ಷಕನ ಬಳಿಯಿದ್ದ ಒಂದೂವರೆ ಲಕ್ಷ ಮರಳಿಸಿದ ಪಿಎಸ್‍ಐ

    – ಆಂಜನೇಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ

    ಹಾವೇರಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಶಿಕ್ಷಕನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಮೊಬೈಲ್ ಫೋನ್ ನ್ನ ಮೃತ ಶಿಕ್ಷಕನ ಪತ್ನಿಗೆ ಮರಳಿಸಿ ಪಿಎಸ್‍ಐ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ನಿಸ್ಸೀಮ ಆಲದಕಟ್ಟಿ ಗ್ರಾಮದ ಬಳಿ ನಡೆದ ಬೈಕ್ ಅಪಘಾತದಲ್ಲಿ ಶಿಕ್ಷಕ 45 ವರ್ಷದ ಪರಶುರಾಮ ಕೋಲೂರ ಮೃತಪಟ್ಟಿದ್ರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದ ಪಿಎಸ್‍ಐ ಆಂಜನೇಯ, ಮೃತನ ಬಳಿ ಇದ್ದ ಒಂದೂವರೆ ಲಕ್ಷ ರುಪಾಯಿ ನಗದು ಹಣ ಮತ್ತು ಒಂದು ಮೊಬೈಲ್ ಫೋನ್ ನ್ನ ಮೃತನ ಪತ್ನಿ ದೀಪಾಳಿಗೆ ಒಪ್ಪಿಸಿದ್ದಾರೆ.

    ಹಣ ಮತ್ತು ಮೊಬೈಲ್ ಮರಳಿಸಿ ಮಾನವೀಯತೆ ಮೆರೆದ ಪಿಎಸ್‍ಐ ಆಂಜನೇಯ ಕಾರ್ಯಕ್ಕೆ ಮೃತನ ಪತ್ನಿ ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಪಾಠ ಇಲ್ಲ, 9 -12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು

    ಪಾಠ ಇಲ್ಲ, 9 -12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಹೋಗಬಹುದು

    ನವದೆಹಲಿ: ಕೇಂದ್ರ ಸರ್ಕಾರದ ಹೊಸ ಅನ್‌ಲಾಕ್‌ 4 ಮಾರ್ಗಸೂಚಿಯಲ್ಲಿ ಶಾಲೆ ತೆರೆಯಲು ಅನುಮತಿ ನೀಡಿಲ್ಲ. ಆದರೆ ಪೋಷಕರ ಒಪ್ಪಿಗೆ ಪಡೆದು ಶಾಲೆಗೆ ತೆರಳಿ ಮಾರ್ಗದರ್ಶನ ಪಡೆಯಲು ಅನುಮತಿ ಸಿಕ್ಕಿದೆ.

    ಸೆಪ್ಟೆಂಬರ್‌ 21ರಿಂದ ಕಂಟೈನ್ಮೆಂಟ್ ಪ್ರದೇಶದ ಹೊರಗಡೆ ಇರುವ ಪ್ರದೇಶದಲ್ಲಿರುವ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ ವೇಳೆ ಶಾಲೆಗಳಿಗೆ ತೆರಳಿ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಅನುಮತಿ ನೀಡಲಾಗಿದೆ. ಈ ರೀತಿ ಮಾರ್ಗದರ್ಶನ ಪಡೆಯಲು ಪೋಷಕರ ಅನುಮತಿ ಕಡ್ಡಾಯ ಎಂದು ಸೂಚಿಸಲಾಗಿದೆ.

    ಈ ವೇಳೆ ಶೇ.50ರಷ್ಟು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಆನ್‌ಲೈನ್‌ ತರಗತಿಗಾಗಿ ಶಾಲೆಗೆ ಬಂದು ಪಾಠ ಮಾಡಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಿದೆ. ಇದನ್ನೂ ಓದಿ: ಇನ್ನು ಮುಂದೆ ಸಮಾರಂಭಗಳಲ್ಲಿ 100 ಜನ ಭಾಗವಹಿಸಬಹುದು

    ಸೆ.21ರಿಂದ ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಪ್ರಯೋಗಾಲಯ ಬಳಸಬಹುದು ಮತ್ತು ಶೈಕ್ಷಣಿಕ ಚಟುವಟಿಕೆ ಆರಂಭಿಸಬಹುದು ಎಂದು ಹೇಳಿದೆ.

    ಪರಿಸ್ಥಿತಿಯನ್ನು ನೋಡಿಕೊಂಡು ಉನ್ನತ ಶಿಕ್ಷಣ ಇಲಾಖೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಬಹುದಾಗಿದೆ ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

  • ಜಲಾಶಯದ ಬಳಿ ಸಿಕ್ತು ಶಿಕ್ಷಕರ ಮೊಬೈಲ್, ಬೈಕ್ – ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

    ಜಲಾಶಯದ ಬಳಿ ಸಿಕ್ತು ಶಿಕ್ಷಕರ ಮೊಬೈಲ್, ಬೈಕ್ – ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

    ಚಿಕ್ಕಬಳ್ಳಾಪುರ: ಜಕ್ಕಲಮಡುಗು ಜಲಾಶಯಕ್ಕೆ ಹಾರಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಚಿಕ್ಕಗೌರಿಬಿದನೂರು ತಾಲೂಕಿನ ಬೊಮ್ಮಸಂದ್ರ ಗ್ರಾಮದ ಶಿಕ್ಷಕ ಶ್ರೀನಾಥ್ ರೆಡ್ಡಿಗೆ ಸೇರಿದ ಬೈಕ್ ಹಾಗೂ ಮೊಬೈಲ್ ಜಲಾಶಯದ ಬಳಿ ಪತ್ತೆಯಾಗಿದೆ. ಜಲಾಶಯದ ನೀರಿನಲ್ಲಿ ಶ್ರೀನಾಥ್ ರೆಡ್ಡಿ ಚಪ್ಪಲಿಗಳು ಸಹ ಪತ್ತೆಯಾಗಿವೆ. ಹೀಗಾಗಿ ಶಿಕ್ಷಕ ಶ್ರೀನಾಥ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನುಮಾನ ವ್ಯಕ್ತವಾಗಿದ್ದು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಆಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದು, ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ತಿಳಿದು ಬಂದಿಲ್ಲ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತೆ.