Tag: teacher

  • ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಖಾಸಗಿ ಅನುದಾನರಹಿತ ಶಿಕ್ಷಕ-ಶಿಕ್ಷಕೇತರರಿಗೆ ಆರ್ಥಿಕ ಪ್ಯಾಕೇಜ್ ನೀಡಿ – ಸುರೇಶ್ ಕುಮಾರ್

    ಬೆಂಗಳೂರು: ನಮ್ಮ ವಿದ್ಯಾರ್ಥಿಗಳ ಹಿತ ಕಾಯುತ್ತಿರುವ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕ-ಶಿಕ್ಷಕೇತರ ಸಮುದಾಯಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಕೋವಿಡ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಕ್ಷೇತ್ರವೂ ಪ್ರಧಾನವಾದ ಕ್ಷೇತ್ರವಾಗಿದೆ. ಸರ್ಕಾರ ವಿಧಿಸಿದ ಲಾಕ್ ಡೌನ್ ರಾಜ್ಯಾದ್ಯಂತ ಇರುವ ಸಾವಿರಾರು ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಮೇಲೆ ಅವಲಂಬಿಸಿದ್ದ ಹಲವು ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ಭೌತಿಕ ತರಗತಿಗಳು ನಡೆಯದ ಕಾರಣ, ಪೋಷಕರು ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ನಿರೀಕ್ಷಿತ ರೀತಿಯಲ್ಲಿ ಆಸಕ್ತಿ ತೋರಲಿಲ್ಲ. ಇದೂ ಕೂಡಾ ಬಹು ವಿಧದ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಯಿತು.

    ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾಯಕದಲ್ಲಿ ಸಾವಿರಾರು ವಿದ್ಯಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ. ಈ ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಲಕ್ಷಾಂತರ (ಅಂದಾಜು ಎರಡು ಲಕ್ಷ) ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾ ಸಂಸ್ಥೆಗಳ ಆಡಳಿತ ವರ್ಗಗಳು ನೀಡುವ ವೇತನ-ಭತ್ಯೆಗಳನ್ನು ಸಂತೃಪ್ತಿಯಿಂದ ಸ್ವೀಕರಿಸಿ ಮಕ್ಕಳ ಭವಿಷ್ಯವನ್ನ ಕಾಯುತ್ತಿದ್ದಾರೆ.

    ಆದರೆ, ಖಾಸಗಿ ಶಾಲೆಗಳಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಬಜೆಟ್ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಧಕ, ಬೋಧಕೇತರ ಸಿಬ್ಬಂದಿ ಮುನ್ನೆಲೆಗೆ ಬಾರದ, ಅತಿಯಾದ ಸಮಸ್ಯೆಗೆ ಸಿಲುಕಿರುವ ಸಮುದಾಯದವರಾಗಿದ್ದಾರೆ. ಪೋಷಕ-ಶಾಲೆಗಳ ನಡುವಿನ ಸಮಸ್ಯೆಗಳ ನೇರ ಪರಿಣಾಮ ಈ ಸಮುದಾಯದ ಮೇಲಾಗಿದೆ. ಅಸಂಖ್ಯ ಶಿಕ್ಷಕರು, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿದ್ದಾರೆ. ಹಣ್ಣು ತರಕಾರಿ ಮಾಡಿದ್ದಾರೆ. ಇದನ್ನು ನಾವು ಹಲವು ಮಾಧ್ಯಮಗಳಲ್ಲಿ ನೋಡಿದ್ದೇವೆ. ಕೇಳಿದ್ದೇವೆ. ಅವರ ನೆರವಿಗೆ ಧಾವಿಸುವುದೂ ಸಹ ಸರ್ಕಾರದ ಜವಾಬ್ದಾರಿಯಾಗಿದೆ.

    ಶಿಕ್ಷಣದಂತಹ ಪವಿತ್ರ ವೃತ್ತಿಯನ್ನು ಕೈಗೆತ್ತಿಕೊಂಡ ಇಂತಹ ಶಿಕ್ಷಕ ಸಮುದಾಯಕ್ಕೆ ನಾಗರಿಕ ಸಮಾಜದ ಪ್ರತಿಕ್ರಿಯೆ ತನ್ನದೇ ಆದ ದೂರಗಾಮಿ, ನಕಾರಾತ್ಮಕವಾದ ಪರಿಣಾಮವನ್ನು ಬೀರಬಲ್ಲುದು. ಮುನ್ನೆಲೆಗೆ ಬಾರದ ಹಾಗೂ ತಮ್ಮ ಆಯ್ಕೆಯ ಬೌದ್ಧಿಕ ಕ್ಷೇತ್ರ ಕಲ್ಪಿಸುವ ಸಾಮಾಜಿಕ ಸಂಕೋಚದ ಕಾರಣ, ಈ ವರ್ಗ ಗದ್ದಲದ ಹೋರಾಟಕ್ಕೂ ಮುಂದಾಗಿಲ್ಲ.

    ಆದರೆ, ಈ ಸಮುದಾಯ ತೀವ್ರ ಆರ್ಥಿಕ-ಭೌತಿಕ ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಸತ್ಯ. ಹಾಗಾಗಿ ಇಂತಹ ಸಂದರ್ಭದಲ್ಲಿ ತಾವು ಈ ವರ್ಗದ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಾದ ತುರ್ತು ಅವಶ್ಯಕತೆ ಇರುತ್ತದೆ. ಈ ವರ್ಗಕ್ಕೆ ನೀಡುವ ಸಹಕಾರವು ನಮ್ಮ ಮಕ್ಕಳ ಭವಿಷ್ಯ ಕಾಯುವಂತಹ ನಿರ್ಣಯವಾಗುತ್ತದೆ. ಆದ ಕಾರಣ, ದಯವಿಟ್ಟು, ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ, ಬಜೆಟ್ ಅನುದಾನರಹಿತ ಶಾಲೆ ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗೆ ತಾವು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಈ ಸಮುದಾಯಕ್ಕೆ ವಿಶ್ವಾಸ ತುಂಬಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ.

    
    

  • ಪತ್ನಿ ಮನೆಗೆ ಹೋಗೋದಾಗಿ ಹೇಳಿ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

    ಪತ್ನಿ ಮನೆಗೆ ಹೋಗೋದಾಗಿ ಹೇಳಿ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ

    ಮೈಸೂರು: ಶಿಕ್ಷಕನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕೋಗಿಲೂರು ಗ್ರಾಮದ ನಿವಾಸಿ. ಇವರು ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೊರೊನಾ ಪಾಸಿಟಿವ್ ದೃಢವಾಗುತ್ತಿದ್ದಂತೆಯೇ ಮೃತ ಲೋಕೇಶ್ ಗೆ ಕುಟುಂಬಸ್ಥರು ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೆ ವಾರ್ ರೂಂನಿಂದ ಕರೆ ಮಾಡಿ ಆತಂಕ ಪಡೆದಂತೆ ತಿಳಿಸಿದ್ದರು. ಆದರೂ ಭಯದಿಂದ ಮನೆ ಬಿಟ್ಟು ಹೋಗಿ ಲೋಕೇಶ್ ಸಾವಿಗೆ ಶರಣಾಗಿದ್ದಾರೆ.

    ಲೋಕೇಶ್ ಗೆ ಕಳೆದ ವರ್ಷವಷ್ಟೇ ಮದುವೆಯಾಗಿತ್ತು. ತನ್ನ ಪತ್ನಿ ಮನೆಗೆ ಹೋಗುವುದಾಗಿ ಹೇಳಿದ್ದ ಲೋಕೇಶ್, ಪತ್ನಿ ಮನೆ ಬಳಿ ಬೈಕ್ ನಿಲ್ಲಿಸಿ ಅಲ್ಲಿಯೇ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಹಾಸನ ಜಿಲ್ಲೆಯ ಅರಕಲಗೂಡಿನ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋವಿಡ್ ಕೆಲಸದಲ್ಲಿ ಮೃತಪಟ್ಟ ಶಿಕ್ಷಕರ ವಿವರ ಸಲ್ಲಿಸುವಂತೆ ಸೂಚನೆ: ಸುರೇಶ್ ಕುಮಾರ್

    ಕೋವಿಡ್ ಕೆಲಸದಲ್ಲಿ ಮೃತಪಟ್ಟ ಶಿಕ್ಷಕರ ವಿವರ ಸಲ್ಲಿಸುವಂತೆ ಸೂಚನೆ: ಸುರೇಶ್ ಕುಮಾರ್

    ಬೆಂಗಳೂರು: ಕೋವಿಡ್ ಕೆಲಸದಲ್ಲಿ, ಉಪಚುನಾವಣೆಯಲ್ಲಿ ನಿರತರಾಗಿ ಮೃತಪಟ್ಟ ಶಿಕ್ಷಕರ, ಉಪನ್ಯಾಸಕರ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

    ಕೋವಿಡ್ ಕಾರ್ಯದಲ್ಲಿ ನಿರತರಾದ ಹಾಗೂ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಲವು ಶಿಕ್ಷಕರು ಹಾಗೂ ಪದವಿಪೂರ್ವ ಉಪನ್ಯಾಸಕರು ಸಾವನ್ನಪ್ಪಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಸುರೇಶ್ ಕುಮಾರ್ ಈ ಕುರಿತಂತೆ ಕೂಡಲೇ ಶಿಕ್ಷಕರ ವರದಿಯನ್ನು ಮಂಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

    ಕಳೆದ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಕೋವಿಡ್ ಕಾರಣದಿಂದ ಮೃತಪಟ್ಟ ಶಿಕ್ಷಕರು ಹಾಗೂ ಉಪನ್ಯಾಸಕರ ವಯೋಮಾನ ಸಹಿತವಾಗಿ ಮೃತಪಟ್ಟ ಖಚಿತ ಕಾರಣಗಳನ್ನು ನೀಡಬೇಕು. ಈ ವರದಿಯನ್ನು ಶೀಘ್ರದಲ್ಲೇ ತಮಗೆ ಮಂಡಿಸಬೇಕೆಂದು ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ನಿರ್ದೇಶಕರಿಗೆ ಸೂಚಿಸಿರುವ ಸಚಿವರು, ಇದು ದುರದೃಷ್ಟಕರವಾದ ಸಂಗತಿಯಾಗಿದ್ದು, ಶಿಕ್ಷಕರ ಕುಟುಂಬಗಳ ಬಗ್ಗೆ ತಮ್ಮ ತೀವ್ರವಾದ ಸಂತಾಪವಿದೆ ಎಂದಿದ್ದಾರೆ.

  • ಕೋವಿಡ್ ಸೋಂಕಿತರ ಸಹಾಯಕ್ಕಾಗಿ ಆಟೋ ಓಡಿಸುತ್ತಿರುವ ಶಿಕ್ಷಕ

    ಕೋವಿಡ್ ಸೋಂಕಿತರ ಸಹಾಯಕ್ಕಾಗಿ ಆಟೋ ಓಡಿಸುತ್ತಿರುವ ಶಿಕ್ಷಕ

    ಮುಂಬೈ: ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ, ಮುಂಬೈನ ಶಾಲಾ ಶಿಕ್ಷಕರೊಬ್ಬರು ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ವೃತ್ತಿಯಲ್ಲಿ ಶಿಕ್ಷಕರಾಗಿರುವ ದತ್ತಾತ್ರೇಯ ಸಾವಂತ್ ಆಟೋ ಓಡಿಸುತ್ತಿದ್ದಾರೆ. ಮುಂಜಾಗ್ರತೆ ಕ್ರಮಗಳೊಂದಿಗೆ ಪಿಪಿಇ ಕಿಟ್ ಧರಿಸಿ, ವಾಹನವನ್ನು ಸ್ಯಾನಿಟೈಸ್‍ಗೊಳಿಸಿ, ಸೋಂಕಿತರನ್ನು ಆಸ್ಪತ್ರೆ, ಕೋವಿಡ್ ಕೇಂದ್ರ ಮತ್ತು ಮನೆಗಳಿಗೆ ಕರೆದೊಯ್ಯುತ್ತಿದ್ದಾರೆ.

    ಈ ಕುರಿತಂತೆ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ ಅತೀ ವೇಗವಾಗಿ ಹೆಚ್ಚಾಗುತ್ತಿದೆ. ಅನೇಕ ಮಂದಿ ಚಿಕಿತ್ಸೆ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ರೋಗಿಗಳು ಸರ್ಕಾರದಿಂದ ಸರಿಯಾದ ಸಮಯಕ್ಕೆ ಸಹಾಯ ಪಡೆಯುತ್ತಿದ್ದಾರೋ ಇಲ್ಲವೋ, ಖಾಸಗಿ ಅಂಬುಲೆನ್ಸ್ ಕೂಡ ಕೈಗೆಟಕುವಂತಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ವಾಹನಗಳು ಕೋವಿಡ್ ಸೋಂಕಿತರಿಗೆ ಸೇವೆಯನ್ನು ಒದಗಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ನನ್ನ ಕಡೆಯಿಂದ ಸೋಕಿಂತರಿಗೆ ಉಚಿತವಾಗಿ ಸೇವೆ ಲಭ್ಯವಿರುತ್ತದೆ.

    ನಾನು ಕೊರೊನಾ ಸೋಂಕಿತರನ್ನು ಕೋವಿಡ್ ಕೇಂದ್ರ, ಆಸ್ಪತ್ರೆಗಳಿಗೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುತ್ತೇನೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಂತಹ ರೋಗಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ದತ್ತಾತ್ರೇಯ ಸಾವಂತ್‍ರವರು ಮುಂಬೈ ಉಪನಗರ ಘಾಟ್ಕೋಪರ್ ನಿವಾಸಿಯಾಗಿದ್ದು, ಜ್ಞಾನಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾವಂತ್ ಕಳೆದ ಕೆಲವು ದಿನಗಳಿಂದ ಈಶಾನ್ಯ ಮುಂಬೈನಲ್ಲಿ ಆಟೋ ಓಡಿಸುವ ಮೂಲಕ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೂ 26 ಕೋವಿಡ್ ಸೋಂಕಿತರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲರೂ ಇದೀಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾಗುವವರೆಗೂ ತಮ್ಮ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

  • ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದ ಶಿಕ್ಷಕ ಸಾವು?

    ಮೂಗಿಗೆ ನಿಂಬೆ ರಸ ಹಾಕಿಸಿಕೊಂಡಿದ್ದ ಶಿಕ್ಷಕ ಸಾವು?

    ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಲಿಂಬೆ ಹಣ್ಣಿನ ಹನಿ ಕುರಿತಾದ ಸುದ್ದಿ ಕೇಳಿ ಜಿಲ್ಲೆಯ ಶಿಕ್ಷಕರೊಬ್ಬರು ಮೂಗಿನೊಳಗೆ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡು ಇದೀಗ ಸಾವನ್ನಪ್ಪಿದ್ದಾರೆ.

    ರಾಯಚೂರು ಜಿಲ್ಲೆ ಸಿಂಧನೂರು ನಗರದ ಶರಣಬಸವೇಶ್ವರ ಕಾಲೋನಿಯ ಶಾಲಾ ಶಿಕ್ಷಕ ಬಸವರಾಜ್ ಮೃತ ದುರ್ದೈವಿ. ಮೂಗಿನಲ್ಲಿ ನಿಂಬೆಹಣ್ಣಿನ ಹನಿ ಬಿಟ್ಟುಕೊಂಡರೆ ಕೊರೊನಾ ಬರುವುದಿಲ್ಲ ಎಂದುಕೊಂಡು ಬಸವರಾಜ್ ಅವರು ಬೆಳಗ್ಗೆ ಮೂಗಿಗೆ ನಿಂಬೆಹಣ್ಣಿನ ಹನಿ ಬಿಟ್ಟು ಕೊಂಡಿದ್ದರು. ನಂತರ ಕೆಲಸಮಯಗಳ ಬಳಿಕ ಬಸವರಾಜ್ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಸಂಬಂಧಿಕರು ಅಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ಮಾರ್ಗ ಮಧ್ಯದಲ್ಲೇ ಬಸವರಾಜ್ ಕೊನೆಯುಸಿರೆಳೆದಿದ್ದಾರೆ.

    ಆರೋಗ್ಯದಿಂದಿದ್ದ ಬಸವರಾಜ್ ಅವರು ನಿಂಬೆಹಣ್ಣಿನ ರಸ ಮೂಗಿಗೆ ಬಿಟ್ಟು ಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದಾಗಿ ನಿಂಬೆ ಹಣ್ಣಿನ ರಸದಿಂದಾಗಿ ಸಾವನ್ನಪ್ಪಿರಬಹುದೆಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಬಸವರಾಜ್ ಮೃತಪಡಲು ನಿಜವಾದ ಕಾರಣ ಏನು ಎನ್ನುವುದು ಇನ್ನೂ ದೃಢಪಟ್ಟಿಲ್ಲ

  • ತರಗತಿಯಲ್ಲೇ ಕುಳಿತು ಕುಡಿದ ಶಿಕ್ಷಕನ ಅಮಾನತ್ತಿಗೆ ಪೋಷಕರ ಮಾಸ್ಟರ್ ಪ್ಲ್ಯಾನ್

    ತರಗತಿಯಲ್ಲೇ ಕುಳಿತು ಕುಡಿದ ಶಿಕ್ಷಕನ ಅಮಾನತ್ತಿಗೆ ಪೋಷಕರ ಮಾಸ್ಟರ್ ಪ್ಲ್ಯಾನ್

    ಹೈದರಾಬಾದ್: ತರಗತಿಯಲ್ಲಿ ಕುಳಿತು ಕುಡಿಯುತ್ತಾ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಕೆ. ಕೋಟೇಶ್ವರ ರಾವ್ ಅಮಾನತು ಆಗಿರುವ ಶಿಕ್ಷಕ. ಈತ ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದವನಾಗಿದ್ದಾನೆ. ಶಾಲೆಯಲ್ಲಿ ಮದ್ಯ ಸೇವನೆಯನ್ನು ಮಾಡಿ ಅಮಾನತು ಆಗಿ ಕೆಲಸವನ್ನು ಕಳೆದುಕೊಂಡಿದ್ದಾನೆ.

    ಕೋಟೇಶ್ವರ ರಾವ್ ಶಿಕ್ಷಕರ ಕೊಠಡಿಯಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡಿದ್ದನಂತೆ. ಈ ಕುರಿತಾಗಿ ಕೇಳಿದರೆ ಮಕ್ಕಳಿಗೆ ಮಕ್ಕಳ ಪಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದನಂತೆ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಬಟ್ಟೆ ಬಿಚ್ಚು ಎಂದು ರಾವ್ ಹೇಳಿದ್ದನಂತೆ. ಈ ಶಿಕ್ಷಕ ಶಾಲೆಯಲ್ಲಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ನಿರ್ಧರಿಸಿದ ಪೋಷಕರು ರಾವ್ ಶಾಲೆಯಲ್ಲಿ ಕುಳಿತು ಕುಡಿಯುತ್ತಾ ಇರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಕೋಟೇಶ್ವರ ರಾವ್ ಶಾಲೆಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ವೀಡಿಯೋವನ್ನು ಪೋಷಕರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಿಕ್ಷಣ ಇಲಾಖೆಗೆ ಈ ಕುರಿತಾಗಿ ದೂರು ನೀಡಲಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಕ್ಷಕನ ಅಮಾನತು ಮಾಡಿದ್ದಾರೆ.

  • ಅಂಗನವಾಡಿಯಲ್ಲ ಹಾವಿನ ಮನೆ- 40 ಹಾವು, 2 ಚೇಳು ಪತ್ತೆ

    ಅಂಗನವಾಡಿಯಲ್ಲ ಹಾವಿನ ಮನೆ- 40 ಹಾವು, 2 ಚೇಳು ಪತ್ತೆ

    ಹೈದರಾಬಾದ್: ಬರೋಬ್ಬರಿ 40 ಹಾವು, 2 ವಿಷಕಾರಿ ಚೇಳುಗಳು ಒಂದು ಅಂಗನವಾಡಿ ಕೇಂದ್ರದಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ಮೆಹಬೂಬಾದ್ ಜಿಲ್ಲೆಯಲ್ಲಿ ನಡೆದಿದೆ.

    ನೆಲ್ಲಿಕುಡುರು ಮಂಡಲದ ಕೋಟಪಲ್ಲಿಯ ಅಂಗನವಾಡಿ ಕೆಂದ್ರದಲ್ಲಿ ಹಾವುಗಳಿರುವುದು ಕಂಡು ಬಂದಿದೆ. ಒಂದು ಹಾವಿನ ಮರಿಯನ್ನು ನೋಡಿದ ಅಂಗನವಾಡಿ ಶಿಕ್ಷಕಿ ಶ್ರೀಜ್ಯೋತಿ ಆಚೆ ಓಡಿ ಬಂದು ಬಾಗಿಲು ಮುಚ್ಚಿ ಗ್ರಾಮಸ್ಥರನ್ನು ಕರೆಯುತ್ತಾರೆ. ಹಾವು ಅಡಗಿದ್ದ ಕಲ್ಲನ್ನು ತೆಗೆದಾಗ ಬರೋಬ್ಬರಿ 40 ಹಾವಿನ ಮರಿಗಳು ಹಾಗೂ 2 ಚೇಳು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅದೃಷ್ಟವಶಾತ್ ಈ ವೇಳೆ ಅಂಗನವಾಡಿಯಲ್ಲಿರುವ ಮಕ್ಕಳಿಗೆ ಯಾವುದೇ ಪ್ರಾಣಾಪಯವಾಗಿಲ್ಲ.

    ಹಳೆಯ ಕಟ್ಟಡವಾದ್ದರಿಂದ ಹಾವು, ಚೇಳು ಸುಲಭವಾಗಿ ಒಳಗೆ ಬರುತ್ತವೆ. ಹೀಗಾಗಿ ತಕ್ಷಣ ಕಟ್ಟಡವನ್ನು ದುರಸ್ಥಿಗೊಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಅಂಗನವಾಡಿ ಕೇಂದ್ರಕ್ಕೆ ವಿಷಕಾರಿ ಹಾವುಗಳನ್ನು ಕಂಡ ಪಾಲಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳಿಗೆ ಕಲಿಕೆ ಬೇಕಾಗಿದೆಯೆ ಹೊರತು ಭಯದ ವಾತಾವರಣವಲ್ಲ.

  • 47 ಭಾಷೆ ಮಾತನಾಡುವ ರೋಬೋಟ್ ತಯಾರಿಸಿದ ಮುಂಬೈ ವ್ಯಕ್ತಿ

    47 ಭಾಷೆ ಮಾತನಾಡುವ ರೋಬೋಟ್ ತಯಾರಿಸಿದ ಮುಂಬೈ ವ್ಯಕ್ತಿ

    ಮುಂಬೈ: ಐಐಟಿ ಬಾಂಬೆಯ ಕೇಂದ್ರಿಯ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಶಿಕ್ಷಕರೊಬ್ಬರು ಮನುಷ್ಯ ಮಾದರಿಯ ರೋಬೋಟ್‍ನನ್ನು ತಯಾರಿಸಿದ್ದಾರೆ.

    ಹೌದು ಶಿಕ್ಷಕ ದಿನೇಶ್ ಪಟೇಲ್ ತಯಾರಿಸಿರುವ ಈ ರೋಬೋಟ್ ಒಂಬತ್ತು ಸ್ಥಳೀಯ ಭಾಷೆಗಳನ್ನು ಮತ್ತು 38 ವಿದೇಶಿ ಭಾಷೆಗಳನ್ನು ಮಾತನಾಡುತ್ತದೆ. ಅಂದರೆ ಇಂಗ್ಲಿಷ್, ಹಿಂದಿ, ಭೋಜ್‍ಪುರಿ, ಮರಾಠಿ, ಬಾಂಗ್ಲಾ, ಗುಜರಾತಿ, ತಮಿಳು, ತೆಲುಗು ಮತ್ತು ಮಲಯಾಳಂ ಹೀಗೆ 9 ಭಾರತೀಯ ಭಾಷೆಯನ್ನು ಮಾತನಾಡುತ್ತದೆ ಎಂದು ಹೇಳಿದ್ದಾರೆ.

    ಬಾಲಿವುಡ್‍ನ ರೋಬೋಟ್ ಸಿನಿಮಾ ನೋಡಿ ಪ್ರೇರಿತರಾದ ದಿನೇಶ್ ಪಟೇಲ್ ರೋಬೋಟ್‍ನನ್ನು ತಯಾರಿಸಿ ಅದಕ್ಕೆ ಶಾಲು ಎಂದು ಹೆಸರಿಟ್ಟಿದ್ದಾರೆ. ಈ ರೋಬೋಟ್ ನೋಡಲು ಮಹಿಳೆ ಮಾದರಿಯೇ ಇದ್ದು ಮನುಷ್ಯರಂತೆ ಮಾತನಾಡುತ್ತದೆ. ಈ ರೋಬೋಟ್‍ನನ್ನು ತಯಾರಿಸಲು ಪ್ಲಾಸ್ಟಿಕ್, ರಟ್ಟು, ಮರ, ಅಲ್ಯೂಮಿನಿಯಂ ಮುಂತಾದ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಮಾರು 50,000 ರೂ. ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೆ ಇದನ್ನು ಸಿದ್ಧಪಡಿಸಲು ಮೂರು ವರ್ಷಗಳ ಕಾಲ ಬೇಕಾಯಿತು ಎಂದು ತಿಳಿಸಿದ್ದಾರೆ.

    ಪಟೇಲ್‍ರವರು ಶಾಲು ವಿಷಯಗಳನ್ನು ಕಂಠ ಪಾಠ ಮಾಡುತ್ತದೆ ಹಾಗೂ ಸಾಮಾನ್ಯ ಜ್ಞಾನ, ಗಣಿತ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಅಲ್ಲದೆ ಶಾಲು ಸ್ವಾಗತವನ್ನು ಕೋರುತ್ತದೆ. ಭಾವನೆಗಳನ್ನು ತೋರಿಸುತ್ತದೆ. ನ್ಯೂಸ್ ಪೇಪರ್, ರೆಸಿಪಿ ಹೀಗೆ ಹಲವು ರೀತಿಯ ಚಟುವಟಿಕೆಗಳನ್ನು ಮಾಡುತ್ತದೆ. ಅಲ್ಲದೆ ರೋಬೋಟ್ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡಲು ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅನ್ನು ಬಳಸಿರುವುದಾಗಿ ಹೇಳಿಕೊಂಡಿದ್ದಾರೆ.

    ಇದೀಗ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುಪ್ರಸಿತ್ ಚಕ್ರವರ್ತಿಯವರು ರೋಬೋಟ್ ತಯಾರಿಸಿದ ವಿಚಾರವಾಗಿ ದಿನೇಶ್ ಪಟೇಲ್‍ರವರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ರೋಬೋಟ್ ಕುರಿತಂತೆ ಇದು ನಿಜಕ್ಕೂ ಒಂದು ದೊಡ್ಡ ಬೆಳವಣಿಗೆಯಾಗಿದ್ದು, ರೋಬೋಟ್‍ನನ್ನು ಶಿಕ್ಷಣ, ಮನರಂಜನೆ ಮತ್ತು ಇತರ ಕ್ಷೇತ್ರಗಳಲ್ಲಿ ಕೂಡ ಬಳಸಬಹುದು ಶಾಲು ಮುಂದಿನ ವಿಜ್ಞಾನಿಗಳಿಗೆ ಸ್ಫೂರ್ತಿಯಾಗಬಹುದು ಎಂದು ಹೇಳಿದ್ದಾರೆ.

  • ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    ಡ್ರೆಸ್ ಚೆನ್ನಾಗಿಲ್ಲ- ವಿದ್ಯಾರ್ಥಿನಿಯನ್ನ ತರಗತಿಯಿಂದ ಹೊರಹಾಕಿದ ಶಿಕ್ಷಕಿ

    – ಶಿಕ್ಷಕಿ ನಡೆಗೆ ಪೋಷಕರ ವಿರೋಧ

    ಒಟ್ಟಾವಾ: ತರಗತಿಗೆ ವಿಭಿನ್ನವಾದ ಡ್ರೆಸ್ ಧರಿಸಿ ಹೋಗಿದ್ದ 17 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿ ಶಾಲೆಯಿಂದ ಹೊರ ಹಾಕಿರುವ ಘಟನೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಕಮ್ಲೂಪ್ಸ್‍ನಲ್ಲಿರುವ ನಾರ್ಕಾಮ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.

    ಕರಿಸ್ ವಿಲ್ಸನ್ ಎಂಬ ವಿದ್ಯಾರ್ಥಿನಿ ಬಿಳಿ ಬಣ್ಣದ ಉದ್ದ ತೋಳಿನ ಟಿ-ಶರ್ಟ್ ಹಾಗೂ ಮೊಣಕಾಲು ಉದ್ದ ಬರುವ ಕಪ್ಪು ಬಣ್ಣದ ಟಾಪ್ ಧರಿಸಿದ್ದಳು. ಅಲ್ಲದೆ ಈ ನೀ ಲೆಂಥ್ ಟಾಪ್‍ನನ್ನು ಭುಜದ ಮೇಲೆ ಲೇಸ್ ಮಾದರಿ ವಿನ್ಯಾಸಗೊಳಿಸಲಾಗಿತ್ತು. ವಿದ್ಯಾರ್ಥಿನಿ ಧರಿಸಿದ್ದ ಈ ಡ್ರೆಸ್ ಟೈಟ್ ಫಿಟ್‍ನಿಂದ ಕೂಡಿದ್ದು, ಶಾಲೆಯಲ್ಲಿರುವ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುತ್ತದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯನ್ನು ಪ್ರಿನ್ಸಿಪಾಲ್ ಕಚೇರಿಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾರೆ. ಬಳಿಕ ಆಕೆಯನ್ನು ಶಾಲೆಯಿಂದ ಹೊರಹಾಕಿದ್ದಾರೆ.

    ಈ ವಿಚಾರವಾಗಿ ಬಾಲಕಿಯ ತಂದೆ ಕ್ರಿಸ್ಟೋಫರ್ ವಿಲ್ಸನ್ ವೀಡಿಯೋವೊಂದನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಮಗಳು ಇಂದು ಶಾಲೆಗೆ ಹೊರಡುವಾಗ ಬಹಳ ಉತ್ಸುಕಳಾಗಿ ಹೋದಳು. ಆದರೆ ಮನೆಗೆ ಹಿಂದಿರುಗುವ ವೇಳೆ ಕಣ್ಣೀರಿಡುತ್ತಾ ಬಂದಿದ್ದಾಳೆ. ನನ್ನ ಮಗಳು ಧರಿಸಿದ್ದ ಡ್ರೆಸ್ ಪುರುಷ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಶಾಲೆಯಿಂದ ಹೊರದಬ್ಬಿದ್ದಾರೆ. ಆದರೆ ಆಕೆ ಧರಿಸಿದ್ದ ಡ್ರೆಸ್ ಕೆಟ್ಟ ರೀತಿಯಲ್ಲಿರಲಿಲ್ಲ. ಇದೊಂದು ಸಾಧಾರಣ ಉಡುಪಾಗಿದೆ. ನಾನು ಈ ವ್ಯವಸ್ಥೆಯನ್ನು ಖಂಡಿಸುತ್ತೇನೆ. 2021ನೇ ಇಸವಿಯಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿದೆ ಎಂಬುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

  • ಫಾರ್ಮ್‍ಹೌಸ್‍ಗೆ ಯುವತಿಯ ಎಳೆದೊಯ್ದು ಮದ್ಯ ಕುಡಿಸಿ ಮೂವರು 2 ದಿನ ನಿರಂತರ ಅತ್ಯಾಚಾರಗೈದ್ರು!

    ಫಾರ್ಮ್‍ಹೌಸ್‍ಗೆ ಯುವತಿಯ ಎಳೆದೊಯ್ದು ಮದ್ಯ ಕುಡಿಸಿ ಮೂವರು 2 ದಿನ ನಿರಂತರ ಅತ್ಯಾಚಾರಗೈದ್ರು!

    – ಮೂವರು ಆರೋಪಿಗಳಿಗೆ ಬಲೆ ಬಿಸಿದ ಪೊಲೀಸರು

    ಭೋಪಾಲ್: ಮನೆಗೆ ಹೋಗುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಕರೆದೊಯ್ದು, 2 ದಿನಗಳಕಾಲ ನಿರಂತರವಾಗಿ ಅತ್ಯಾಚಾರ ಮಾಡಿ ಯುವತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಮಧ್ಯ ಪ್ರದೇಶದ ಶಹ್ದೋಲ್ ಜಿಲ್ಲೆಯಲ್ಲಿ ನಡೆದಿದೆ.

    20 ವರ್ಷದ ಯುವತಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ. ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರು ಸೇರಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

    ಯುವತಿ ಒಬ್ಬಳೇ ಮನೆಗೆ ತೆರಳುತ್ತಿರುವುದನ್ನು ಗಮನಿಸಿದ ಮೂವರು ಕಾಮುಕರು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ. ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗಿದ್ದಾರೆ. ಕೊಠಡಿಯಲ್ಲಿ ಆಕೆಯ ಮೇಲೆ ಒಬ್ಬರ ಮೇಲೊಬ್ಬರಂತೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರಕ್ಕೂ ಮುನ್ನ ಅಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದ್ದು ಬಳಿಕ ನಿರಂತರ 2 ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರಗೈದಿದ್ದಾರೆ. ತಮ್ಮ ಕಾಮ ತೃಷೆ ತೀರಿಸಿಕೊಂಡ ಬಳಿಕ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

    ಯುವತಿ ಕಾಣದೇ ಇರುವುದರಿಂದ ಗಾಬರಿಗೊಂಡ ಪಾಲಕರು ಜೈತ್ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ಸಲ್ಲಿಕೆ ಮಾಡಿದ್ದರು. ಯುವತಿ 2 ದಿನಗಳ ನಂತರ ಮನೆಗೆ ಬಂದಿದ್ದಾಳೆ. ನಡೆದ ಘಟನೆಯ ಕುರಿತಾಗಿ ಹೇಳಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಯುವತಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 376 ಅಡಿ (ಸಾಮೂಹಿಕ ಅತ್ಯಾಚಾರ), 342 ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪರಾರಿಯಾಗಿರುವ ಆರೋಪಿಗಳಿಗೆ ಬಲೆ ಬೀಸಿದ್ದೇವೆ ಎಂದು ಶಹಾದೋಲ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅವಧೇಶ್ ಗೋಸ್ವಾಮಿ ಹೇಳಿದ್ದಾರೆ.