Tag: tax

  • ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು  ಹೀಗೆ

    ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಪ್ರಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಸರ್ಕಾರದ ಬಳಿ ಕೃಷಿಗೆ ತೆರಿಗೆ ವಿಧಿಸುವ ಯಾವುದೇ ಯೋಜನೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೃಷಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಸರ್ಕಾರದಲ್ಲಿ ಇಲ್ಲ. ಕೃಷಿ ವಲಯ ಈಗ ಸಂಕಷ್ಟದಲ್ಲಿದೆ. ಹೀಗಾಗಿ ತೆರಿಗೆ ವಿಧಿಸಬೇಕೇ ಎನ್ನುವ ಬಗ್ಗೆ ಯಾವುದೇ ಪ್ರಶ್ನೆಯೇ ಉದ್ಭಸುವುದಿಲ್ಲ ಎಂದು ಹೇಳಿದರು.

    ಈಗಾಗಲೇ ನಾನು ಈ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಶ್ರೀಮಂತ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ನಾವು ಈಗ ಕೃಷಿಯನ್ನು ಬೆಂಬಲಿಸಬೇಕು. ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಇದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಯಾವೊಂದು ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಲಾರದು ಎಂದು ತಿಳಿಸಿದರು.

    ಚರ್ಚೆಗೆ ಕಾರಣ ಏನು?
    ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‍ರಾಯ್ ಈ ಹಿಂದೆ, ಕೃಷಿ ಆದಾಯಕ್ಕೆ ವಿನಾಯಿತಿ ಇರುವುದರಿಂದ ತೆರಿಗೆ ಕಳ್ಳರು ದುರುಪಯೋಗ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಒಂದು ಮಿತಿಯ ಬಳಿಕ ಕೃಷಿಯಿಂದ ಬರುವ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಅಷ್ಟೇ ಅಲ್ಲದೇ ವೈಯಕ್ತಿಕ ಆದಾಯ ತೆರಿಗೆಯಲ್ಲಿರುವ ಎಲ್ಲ ವಿನಾಯಿತಿಗಳನ್ನೂ ತೆಗೆದು ಹಾಕಬೇಕೆಂದು ಹೇಳಿದ್ದರು. ಇವರ ಹೇಳಿಕೆಯಿಂದಾಗಿ ಸರ್ಕಾರ ಕೃಷಿಗೆ ತೆರಿಗೆ ವಿಧಿಸುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

  • ನೋಟ್ ಬ್ಯಾನ್: ಬರೋಬ್ಬರಿ 246 ಕೋಟಿ ರೂ. ಹಣವನ್ನು ಠೇವಣಿ ಇಟ್ಟ ತಮಿಳುನಾಡು ಉದ್ಯಮಿ!

    ನೋಟ್ ಬ್ಯಾನ್: ಬರೋಬ್ಬರಿ 246 ಕೋಟಿ ರೂ. ಹಣವನ್ನು ಠೇವಣಿ ಇಟ್ಟ ತಮಿಳುನಾಡು ಉದ್ಯಮಿ!

    ಚೆನ್ನೈ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ತಮಿಳುನಾಡು ಮೂಲದ ಉದ್ಯಮಿಯೊಬ್ಬರು ಬರೊಬ್ಬರಿ 246 ಕೋಟಿ ರೂ. ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.

    ನಾಮಕ್ಕಳ್ ಜಿಲ್ಲೆಯ ತಿರುಚಿನ್ಗೊಡ್‍ನ ಉದ್ಯಮಿ ಇಷ್ಟೊಂದು ಮೊತ್ತದ ಹಳೆ ನೋಟುಗಳನ್ನು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದ್ದಾರೆ. ಉದ್ಯಮಿ ಹೆಸರನ್ನು ಐಟಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದರೆ ಈ ಠೇವಣಿಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಡಿಯಲ್ಲಿ ಶೇ.45ರಷ್ಟು ತೆರಿಗೆ ಬೀಳಲಿದೆ.

    ಜಮೆ ಮಾಡಿದ ಬಳಿಕ ಉದ್ಯಮಿ ನಾಪತ್ತೆಯಾಗಿದ್ದು, 15 ದಿನಗಳ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಪಿಎಂಜಿಕೆವೈ ಯೋಜನೆ ಬಗ್ಗೆ ತಿಳಿಸಿದ್ದಾರೆ. ಇದಾದ ಬಳಿಕ ಉದ್ಯಮಿ ಈ ಯೋಜನೆಯ ಅಡಿಯಲ್ಲಿ ಹಣವನ್ನು ಠೇವಣಿ ಇಡುವುದಾಗಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ತಮಿಳುನಾಡು ಮತ್ತು ಪುದುಚ್ಚೇರಿಯಲ್ಲಿ 200 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ಕಂಪೆನಿಗಳು ಸುಮಾರು 600 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

    ಈಗಾಗಲೇ ಬಹಳಷ್ಟು ಜನ ಪಿಎಂಜಿಕೆವೈ ಯೋಜನೆಯ ಅಡಿಯಲ್ಲಿ ಹಣವನ್ನು ಇಟ್ಟಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಹಣವನ್ನು ಇಡಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಈ ಅವಧಿಯ ಒಳಗಡೆ ಹಣವನ್ನು ಠೇವಣಿ ಇಡದಿದ್ದರೆ, ಏಪ್ರಿಲ್ 1 ರಿಂದ ದಂಡದ ಮೊತ್ತ ಏರಿಸಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಏನಿದು ಪಿಎಂಜಿಕೆವೈ?
    ಪಿಎಂಜಿಕೆವೈ ಯೋಜನೆ ಅಡಿ ಠೇವಣಿ ಇಟ್ಟ ಹಣ ಕಪ್ಪು ಹಣಗಳಿಗೆ ಶೇ. 49.9 ರಷ್ಟು ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಶೇ.25ರಷ್ಟು ಹಣವನ್ನು ಆರ್‍ಬಿಐಯಲ್ಲಿ 4 ವರ್ಷಗಳ ಕಾಲ ಠೇವಣಿ ಇಡಬೇಕಾಗುತ್ತದೆ. ಈ ರೀತಿಯಾಗಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಾಗುತ್ತದೆ.

    ಇಲಾಖೆ ನಡೆಸುವ ದಾಳಿಯಲ್ಲಿ ಕಪ್ಪು ಹಣ ಸಿಕ್ಕಿ ಬಿದ್ದರೆ ಶೇ.137.25ರಷ್ಟು ದಂಡ ಹಾಗೂ ಬೇನಾಮಿ ಕಾಯ್ದೆ ಅನ್ವಯ ಏಳು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ತಿಳಿಸಿದೆ.

  • ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಪ್ಯಾನ್ ನಂಬರ್, ಆ್ಯಪ್ ಮೂಲಕವೇ ಟ್ಯಾಕ್ಸ್ ಕಟ್ಟಿ

    ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಪ್ಯಾನ್ ನಂಬರ್, ಆ್ಯಪ್ ಮೂಲಕವೇ ಟ್ಯಾಕ್ಸ್ ಕಟ್ಟಿ

    ನವದೆಹಲಿ: ಇನ್ಮುಂದೆ ನೀವು ಪ್ಯಾನ್ ಕಾರ್ಡ್‍ಗಾಗಿ ವಾರಾನುಗಟ್ಟಲೆ ಕಾಯುವ ಅವಶ್ಯಕತೆ ಇರುವುದಿಲ್ಲ. ಶೀಘ್ರದಲ್ಲೇ ನೀವು ಕೆಲವೇ ನಿಮಿಷಗಳಲ್ಲಿ ಪ್ಯಾನ್ ನಂಬರ್ ಪಡೆಯಬಹುದು ಹಾಗೂ ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ತೆರಿಗೆ ಕಟ್ಟಬಹುದಾಗಿದೆ.

    ತೆರಿಗೆ ಪಾವತಿದಾರರಿಗೆ ಸಹಾಯವಾಗುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆಧಾರ್ ಇ-ಕೆವೈಸಿ ವ್ಯವಸ್ಥೆಯ ಮೂಲಕ ಪ್ಯಾನ್ ನಂಬರ್ ವಿತರಿಸಲು ಮುಂದಾಗಿದೆ. ಇದರ ಸಹಾಯದಿಂದ ವ್ಯಕ್ತಿ ತನ್ನ ವಿಳಾಸ ಮತ್ತು ಇನ್ನಿತರ ಮಾಹಿತಿಯನ್ನ ಹೆಬ್ಬೆರಳಿನ ಗುರುತು ಹಾಗೂ ಇತರೆ ಬಯೋಮೆಟ್ರಿಕ್ ಫೀಚರ್ಸ್ ಬಳಸಿ ಪರಿಶೀಲನೆ ಮಾಡಬಹುದಾಗಿದೆ. ಇ- ಕೆವೈಸಿ ಮೂಲಕ ಸಿಮ್ ಕಾರ್ಡ್ ನೀಡಬಹುದಾದ್ರೆ ಅದೇ ರೀತಿ ಪ್ಯಾನ್ ನಂಬರ್ ಕೂಡ ನೀಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ಪ್ಯಾನ್ ಕಾರ್ಡ್ ಪಡೆಯಲು 2 ರಿಂದ 3 ವಾರ ಬೇಕು. ಆದ್ರೆ ಈ ವ್ಯವಸ್ಥೆ ಬಂದ ನಂತರ 5 ರಿಂದ 6 ನಿಮಿಷಗಳಲ್ಲಿ ಪ್ಯಾನ್ ನಂಬರ್ ಸಿಗುತ್ತದೆ. ನಂತರ ಕಾರ್ಡನ್ನು ತಲುಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಇದಲ್ಲದೆ ಹೊಸ ಕಂಪೆನಿಗಳಿಗೆ ಪ್ಯಾನ್ ವಿತರಿಸಲು ಈಗಾಗಲೇ ಸಿಬಿಡಿಟಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸಹಯೋಗ ಮಾಡಿಕೊಂಡಿವೆ.

    ಇದಲ್ಲದೆ ಅನ್‍ಲೈನ್‍ನಲ್ಲಿ ತೆರಿಗೆ ಪಾವತಿ ಮಾಡಲು, ಪ್ಯಾನ್ ನಂಬರ್‍ಗಾಗಿ ಅರ್ಜಿ ಹಾಕಲು ತೆರಿಗೆ ಇಲಾಖೆ ಆ್ಯಪ್ ಸಿದ್ಧಪಡಿಸಿದೆ. ಈಗಾಗಲೇ ತೆರಿಗೆ ಇಲಾಖೆ ಆನ್‍ಲೈನ್ ಸೇವೆಗಳನ್ನು ಒದಗಿಸುತ್ತಿದ್ದು ಈ ಆ್ಯಪ್ ಮೂಲಕ ಹಿರಿಯ ಹಾಗೂ ಯುವ ತೆರಿಗೆದಾರರಿಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಹೇಳಲಾಗಿದೆ.

  • ಟೆನಿಸ್ ಆಟಗಾರ್ತಿ ಸಾನಿಯಾಗೆ ಸೇವಾ ತೆರಿಗೆ ಇಲಾಖೆಯಿಂದ ಶಾಕ್

    ಹೈದರಾಬಾದ್: ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ಸೇವಾ ತೆರಿಗೆ ಇಲಾಖೆ ಶಾಕ್ ನೀಡಿದೆ.

    20 ಲಕ್ಷ ರೂ. ಸರ್ವಿಸ್ ಟ್ಯಾಕ್ಸ್ ಪಾವತಿ ಮಾಡದ ಸಾನಿಯಾ ಮಿರ್ಜಾಗೆ ಹೈದರಾಬಾದ್‍ನ ಸೇವಾ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಫೆ.6ರಂದು ಸಮನ್ಸ್ ಜಾರಿ ಮಾಡಿದ್ದಾರೆ. ಇದೇ 16ರೊಳಗೆ ಖುದ್ದು ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಾಗಿ ದಂಡ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

    ಸಾನಿಯಾ ಮಿರ್ಜಾ 2014ರಲ್ಲಿ ತೆಲಂಗಾಣ ರಾಯಭಾರಿಯಾಗಿ ನೇಮಕವಾಗಿದ್ದರು. ರಾಯಭಾರಿಯಾಗಿದ್ದಕ್ಕೆ ತೆಲಂಗಾಣ ಸರ್ಕಾರ 1 ಕೋಟಿ ರೂ. ಹಣವನ್ನು ಬಹುಮಾನವಾಗಿ ನೀಡಿತ್ತು. ಈ ಬಹುಮಾನಕ್ಕೆ ಸೇವಾ ತೆರಿಗೆಯನ್ನು ಸಾನಿಯಾ ಪಾವತಿ ಮಾಡಿರಲಿಲ್ಲ. ಪಾವತಿ ಮಾಡದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಮತ್ತು ದಂಡ ಸೇರಿ ಒಟ್ಟು 20 ಲಕ್ಷ ರೂ. ಹಣವನ್ನು ಪಾವತಿ ಮಾಡುವಂತೆ ಇಲಾಖೆ ಸೂಚಿಸಿದೆ.

    ಅಷ್ಟೇ ಅಲ್ಲದೇ ನಮ್ಮ ಅನುಮತಿ ಇಲ್ಲದೇ ದೇಶವನ್ನು ಬಿಟ್ಟು ಹೊರಗಡೆ ತೆರಳುವಂತಿಲ್ಲ ಎಂದು ಇಲಾಖೆ ಸಾನಿಯಾ ಮಿರ್ಜಾಗೆ ಸೂಚಿಸಿದೆ.

  • ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ? ಎಷ್ಟು ಕಂಪೆನಿಗಳು ಆದಾಯ ತೋರಿಸಿವೆ?

    ನವದೆಹಲಿ: ದೇಶದಲ್ಲಿ ಸಂಘಟಿತ ವಲಯದಲ್ಲಿ 4.2 ಕೋಟಿ ಉದ್ಯೋಗಿಗಳಿದ್ದು, ಇವರಲ್ಲಿ 1.74 ಕೋಟಿ ಮಂದಿ ವೇತನ ಆಧಾರಿತ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ. ವ್ಯಕ್ತಿಗತ/ಸಂಸ್ಥೆಯ ರೂಪದಲ್ಲಿ 5.6 ಕೋಟಿ ಸಣ್ಣ ಉದ್ದಿಮೆಗಳಿದ್ದು, ಇದರಲ್ಲಿ 1.81 ಕೋಟಿ ಮಂದಿ ತೆರಿಗೆ ಸಲ್ಲಿಕೆ ಮಾಡುತ್ತಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಮಾರ್ಚ್ 2014ರವರೆಗೆ 13.94 ಲಕ್ಷ ಕಂಪೆನಿಗಳು ನೋಂದಣಿಯಾಗಿದ್ದು, ಇದರಲ್ಲಿ 5.97 ಲಕ್ಷ ಕಂಪೆನಿಗಳು ತೆರಿಗೆಯನ್ನು ಪಾವತಿ ಮಾಡಿವೆ. 2.76 ಲಕ್ಷ ಕಂಪೆನಿಗಳು ನಷ್ಟ ಅಥವಾ ಶೂನ್ಯ ಆದಾಯ ತೋರಿಸಿವೆ. 2.85 ಲಕ್ಷ ಕಂಪನಿಗಳು 1 ಕೋಟಿ ರೂ.ಗಿಂತಲೂ ಕಡಿಮೆ ಆದಾಯ ತೋರಿಸಿದರೆ, 28,667 ಕಂಪೆನಿಗಳು 1 ಕೋಟಿಯಿಂದ 10 ಕೋಟಿ ರೂ. ಲಾಭ ತೋರಿಸಿವೆ. 7,781 ಕಂಪೆನಿಗಳು 10 ಕೋಟಿ ರೂ.ಗೂ ಅಧಿಕ ಲಾಭವಿದೆ ಎಂದು ತೋರಿಸಿವೆ.

    3.7 ಕೋಟಿ ಜನ ತೆರಿಗೆ ಮಾಹಿತಿ ಸಲ್ಲಿಸಿದ್ದು, 99 ಲಕ್ಷ ಜನ 2.50 ಲಕ್ಷ ರೂ.ಗಿಂತ ಕಡಿಮೆ ಆದಾಯ ತೋರಿಸಿದ್ದಾರೆ. 1.95 ಕೋಟಿ ಮಂದಿ  2.50 ಲಕ್ಷ ರೂ. – 5 ಲಕ್ಷ ರೂ ಆದಾಯ ತೋರಿಸಿದರೆ, 52 ಲಕ್ಷ ಮಂದಿ 5 ಲಕ್ಷ – 10 ಲಕ್ಷ ರೂ. ಆದಾಯ ತೋರಿಸಿದ್ದಾರೆ. 24 ಲಕ್ಷ ಮಂದಿ ತಮ್ಮ ಬಳಿ 10 ಲಕ್ಷ ರೂ.ಗಿಂತ ಅಧಿಕ ಆದಾಯವಿದೆ ಎಂದು ಪ್ರಕಟಿಸಿದ್ದಾರೆ.

    76 ಲಕ್ಷ ಮಂದಿ 5 ಲಕ್ಷ ಆದಾಯ ತೋರಿಸಿದ್ದು, ಇವರಲ್ಲಿ 56 ಲಕ್ಷ ವೇತನದಾರರು ಇದ್ದಾರೆ. 1.72 ಲಕ್ಷ ಮಂದಿ 50 ಲಕ್ಷಕ್ಕಿಂತ ಹೆಚ್ಚು ಆದಾಯ ತೋರಿಸಿದ್ದಾರೆ.

    ನ.8ರಿಂದ ಡಿ.30ರವರೆಗೆ 1.09 ಕೋಟಿ ಖಾತೆಗಳಲ್ಲಿ 2 ಲಕ್ಷದಿಂದ 80 ಲಕ್ಷ ರೂ.ವರೆಗೆ ಜಮೆಯಾಗಿದೆ. ಈ ಖಾತೆಗಳಲ್ಲಿ ಸರಾಸರಿ ಜಮೆ 5.03 ಲಕ್ಷ ರೂಪಾಯಿ ಆಗಿದೆ. 1.48 ಲಕ್ಷ ಖಾತೆಗಳಲ್ಲಿ ತಲಾ 80 ಲಕ್ಷ ರೂ.ಗಿಂತ ಅಧಿಕ ಮೊತ್ತ ಜಮೆಯಾಗಿದ್ದು, ಈ ಖಾತೆಗಳಲ್ಲಿ ಸರಾಸರಿ ಜಮೆ 3.31 ಕೋಟಿ ರೂ. ಆಗಿದೆ. ಕಳೆದ 5 ವರ್ಷಗಳಲ್ಲಿ 1.25 ಕೋಟಿ ಕಾರು ಮಾರಾಟವಾಗಿದೆ ಎನ್ನುವ ಅಂಶ ಬಜೆಟ್‍ನಲ್ಲಿದೆ.

  • ಬಜೆಟ್ 2017: ಜನರ ನಿರೀಕ್ಷೆಗಳೇನು?

    ನೋಟ್ ಬ್ಯಾನ್ ಮಾಡಿದ ಬಳಿಕ ಮೋದಿ ಸರ್ಕಾರದ ಬಜೆಟ್ ಮೇಲೆ ಜನರಿಗೆ ಭಾರೀ ನಿರೀಕ್ಷೆ ಇದೆ. ಹಾಗಾದ್ರೆ ಮೋದಿ ಡ್ರೀಮ್ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಅವರಿಂದ ಜನರ ನಿರೀಕ್ಷೆಗಳೇನಿರಬಹುದು ಎಂಬುದರ ವಿವರ ಇಲ್ಲಿದೆ.

    ಜಿಎಸ್‍ಟಿ ಬಜೆಟ್
    – ಒಂದೇ ರಾಷ್ಟ್ರ, ಒಂದೇ ತೆರಿಗೆಗೆ ಬಜೆಟ್‍ನಲ್ಲಿ ಮೊದಲ ಒತ್ತು
    – ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಜಾರಿ
    – ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟ ನಕಾಶೆ ಸಿದ್ಧ
    – ಕೇಂದ್ರ ಸರ್ಕಾರ-ರಾಜ್ಯ ಸರ್ಕಾರಗಳ ನಡುವೆ ತೆರಿಗೆಗಳ ಹಂಚಿಕೆ
    – ಜಿಎಸ್‍ಟಿ ಜಾರಿಯಿಂದ ರಾಜ್ಯಗಳಿಗಾಗುವ ನಷ್ಟ ಭರಿಸಲು ಸಂಪನ್ಮೂಲ ಕ್ರೋಢೀಕರಣ

    – ಜಿಎಸ್‍ಟಿ ಜಾರಿಯಾಗಬಹುದಾದ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಹೆಚ್ಚಳ
    – ಶೇಕಡಾ 16-18ರ ನಡುವೆ ಸೇವಾ ತೆರಿಗೆ ವಿಧಿಸುವ ಸಾಧ್ಯತೆ
    – ಹೋಟೆಲ್, ಮನರಂಜನೆ, ಔಟಿಂಗ್ ದುಬಾರಿಯಾಗುವುದು ನಿಶ್ಚಿತ
    – ಸಿಗರೇಟ್, ಸ್ಪೋಟ್ರ್ಸ್ ಯುಟಿಲಿಟಿ ವಾಹನಗಳು ಮತ್ತಷ್ಟು ದುಬಾರಿ

    – ಆಹಾರ ಪದಾರ್ಥಗಳಿಗೆ ಜಿಎಸ್‍ಟಿಯಿಂದ ವಿನಾಯಿತಿ
    – ಚಿನ್ನದ ಮೇಲಿನ ಕಸ್ಟಂ ಸುಂಕ ಇಳಿಕೆ ಸಾಧ್ಯತೆ

    ಆದಾಯ ತೆರಿಗೆ
    – ವಿನಾಯಿತಿ ಮಿತಿಯನ್ನು ಕನಿಷ್ಠ 4 ಲಕ್ಷಕ್ಕೆ ಏರಿಸಬೇಕು
    – ಪ್ರಸ್ತುತ 2.50 ಲಕ್ಷ ರೂ. ವಿನಾಯಿತಿ ಇದೆ
    – ಗೃಹ ಸಾಲಗಳಿಗೆ ಪಾವತಿಸುವ ಬಡ್ಡಿ ವಿನಾಯಿತಿ ಮಿತಿಯನ್ನು 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಸಬೇಕು
    – ಸೆಕ್ಷನ್80 ಸಿ ಅಡಿ 1.5 ಲಕ್ಷದವರೆಗೆ ಇರುವ ತೆರಿಗೆ ಕಡಿತ ಮಿತಿಯನ್ನು ಕನಿಷ್ಠ 3 ಲಕ್ಷಕ್ಕೆ ಹೆಚ್ಚಿಸುವುದು

    – ಎನ್‍ಪಿಎಸ್ [ನ್ಯಾಷನಲ್ ಪೆನ್ಷನ್ ಸ್ಕೀಮ್]ಗೆ ತೆರಿಗೆ ವಿನಾಯಿತಿ
    – ಈಗ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಿಂಪಡೆದ ಹಣಕ್ಕೆ ಶೇ.60 ತೆರಿಗೆ ಇದೆ
    – ಪಿಎಫ್‍ಗೆ ಹೋಲಿಸಿದರೆ ಇದು ದುಬಾರಿ
    – ಜೊತೆಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು
    – ಕಾರ್ಪೋರೇಟ್ ತೆರಿಗೆ ಇಳಿಕೆ ಸಾಧ್ಯತೆ

    ಗೃಹ
    – ಮನೆ ಬಾಡಿಗೆ, ವೈದ್ಯಕೀಯ ಸೇವೆ ಇತ್ಯಾದಿ ಅಂಶಗಳು ಹಿಂದೆ ನಿಗದಿಯಾಗಿದ್ದು ಇವುಗಳ ಮಿತಿಯನ್ನು ಹೆಚ್ಚಿಸಬೇಕು
    – ಎಚ್‍ಆರ್‍ಎ ಮಿತಿ ಕಳೆದ ಬಜೆಟ್‍ನಲ್ಲಿ 24 ಸಾವಿರದಿಂದ 60 ಸಾವಿರಕ್ಕೆ ಏರಿಸಲಾಗಿತ್ತು. ಈ ಮಿತಿಯನ್ನು ಮತ್ತಷ್ಟು ಏರಿಸಬೇಕು
    – ಪ್ರಧಾನಮಂತ್ರಿ ಬಡವರ ಕಲ್ಯಾಣ ಯೋಜನೆಯಡಿ ವಸತಿ ಯೋಜನೆಗೆ ಒತ್ತು
    – 9 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಶೇಕಡಾ 3ರಷ್ಟು ಬಡ್ಡಿ ವಿನಾಯಿತಿ
    – 12 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 4ರಷ್ಟು ಬಡ್ಡಿ ವಿನಾಯಿತಿ

    ಕ್ಯಾಶ್‍ಲೆಸ್‍ಗೆ ಉತ್ತೇಜನ
    – ನಗದು ರಹಿತ ಅರ್ಥವ್ಯವಸ್ಥೆಗೆ ಅರುಣ್ ಜೇಟ್ಲಿ ಬಜೆಟ್‍ನಲ್ಲಿ ಪ್ರಮುಖ ಆದ್ಯತೆ
    – ಕಾರ್ಡ್ ಪೇಮೆಂಟ್, ಟೋಲ್ ಪಾವತಿಗೆ ಡಿಸ್ಕೌಂಟ್
    – ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದ ಬೆಲೆ ಕಡಿಮೆಯಾಗಬೇಕು (ಈಗ ಒಂದು ಯಂತ್ರದ ಬೆಲೆ 8 ಸಾವಿರ ರೂ. ಇದೆ)
    – ಡಿಜಿಟಲ್ ವ್ಯಾಲೆಟ್ ಬಳಕೆಗೆ ವಿಶೇಷ ವಿಮೆ ಸೌಲಭ್ಯ
    – ಬ್ಯಾಂಕ್‍ನಿಂದ 50 ಸಾವಿರ ರೂಪಾಯಿಗಿಂತ ಹೆಚ್ಚು ಡ್ರಾ ಮಾಡಿದರೆ ತೆರಿಗೆ
    – ದೊಡ್ಡ ಮೊತ್ತದ ವ್ಯವಹಾರಗಳಲ್ಲಿ ನಗದು ಚಲಾವಣೆ ಮೇಲೆ ಸಂಪೂರ್ಣ ನಿರ್ಬಂಧ
    – ಸ್ಮಾರ್ಟ್‍ಫೋನ್ ಖರೀದಿಗೆ ಸಣ್ಣ ವ್ಯಾಪಾರಸ್ಥರಿಗೆ 1 ಸಾವಿರ ರೂಪಾಯಿ ಸಬ್ಸಿಡಿ
    – ಸರ್ಕಾರಿ ಸಂಸ್ಥೆಗಳಿಗೆ ಡಿಜಿಟಲ್ ಮೂಲಕವಷ್ಟೇ ಪಾವತಿಗೆ ಅವಕಾಶ
    – ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿ ಶಿಫಾರಸ್ಸಿಗೆ ಬಜೆಟ್‍ನಲ್ಲಿ ಸ್ಥಾನ

    ಆಧಾರ್/ಪ್ಯಾನ್ ಕಾರ್ಡ್
    – 50 ಸಾವಿರ ರೂಪಾಯಿಗಿಂತ ಮೇಲ್ಪಟ್ಟ ಖರೀದಿಗೆ ಪ್ಯಾನ್ ಕಡ್ಡಾಯ
    – ಈಗಿರುವ 2 ಲಕ್ಷ ರೂಪಾಯಿ ಮಿತಿ 50 ಸಾವಿರಕ್ಕೆ ಇಳಿಕೆ
    – ಪ್ಯಾನ್ ಅಥವಾ ಆಧಾರ್ ಕಾರ್ಡ್ ದಾಖಲೆ ನೀಡಿದರಷ್ಟೇ ಖರೀದಿಗೆ ಅವಕಾಶ
    – ಚಿನ್ನ ಖರೀದಿಗೂ ಪ್ಯಾನ್, ಆಧಾರ್ ಕಡ್ಡಾಯಗೊಳಿಸಲಿರುವ ಕೇಂದ್ರ ಸರ್ಕಾರ
    – ರೈಲ್ವೆಯಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್‍ಗೆ ಆಧಾರ್ ಕಾರ್ಡ್ ಕಡ್ಡಾಯ

    ಕೃಷಿ/ ರೈತ
    – ಬರದಿಂದ ಕಂಗೆಟ್ಟ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ
    – ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಹಣ ಒದಗಿಸಬೇಕು
    – ಸಾಲ ಪಾವತಿ ಮಾಡಲು ಅವಧಿ ವಿಸ್ತರಣೆ
    – ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ
    – ಕೃಷಿ ಕ್ಷೇತ್ರಕ್ಕೆ ಅರುಣ ಆಯ್ಯವ್ಯಯದಲ್ಲಿ ಬಂಪರ್
    – ಸಾಲ ವಿತರಣೆ ಗುರಿ 9 ಲಕ್ಷ ಕೋಟಿ ರೂ. ನಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಳ
    – ಬೆಳೆ ವಿಮೆ ಯೋಜನೆಗೆ 10 ಸಾವಿರ ಕೋಟಿ ರೂಪಾಯಿ ನಿಧಿ

    ರಿಯಲ್ಟಿ ಕ್ಷೇತ್ರ
    – ರಿಯಾಲ್ಟಿ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು
    – ಸ್ಥಾನ ನೀಡದೇ ಇದ್ದ ಕಾರಣ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ
    – ಮನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ
    – ಅಗ್ಗದ ದರದಲ್ಲಿ ಗೃಹ ನಿರ್ಮಾಣಕ್ಕೆ ತೆರಿಗೆ ವಿನಾಯಿತಿ ಘೋಷಣೆ ಸಾಧ್ಯತೆ

    ಎಫ್‍ಎಂಸಿಜಿ
    – ನೋಟ್ ನಿಷೇಧದಿಂದಾಗಿ ಎಫ್‍ಎಂಸಿಜಿಗೆ ಹೊಡೆತ ಬಿದ್ದಿದೆ
    – ಎಫ್‍ಎಂಸಿಜಿ ಕ್ಷೇತ್ರ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು

    ಅಟೋಮೊಬೈಲ್
    – ನೋಟ್ ಬ್ಯಾನ್ ಬಳಿಕ ಭಾರೀ ಹೊಡೆತ ಬಿದ್ದಿದೆ
    – ಎಸ್‍ಯುವಿ ಖರೀದಿ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕು
    – ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾರು ದರ ದುಬಾರಿ ಸಾಧ್ಯತೆ

    ಸ್ಟಾರ್ಟ್ ಅಪ್ ಕಂಪೆನಿ
    – ಕನಿಷ್ಠ 5 ವರ್ಷ ತೆರಿಗೆ ವಿನಾಯಿತಿ ಘೋಷಿಸಬೇಕು
    – ಈಗ ಮೊದಲ 3 ವರ್ಷ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ

    ವಿದ್ಯಾರ್ಥಿಗಳು
    – ಉನ್ನತ ಶಿಕ್ಷಣದ ಶುಲ್ಕ ಕಡಿಮೆಯಾಗಬೇಕು (ಎಂಬಿಬಿಎಸ್, ಐಐಟಿ ಇತ್ಯಾದಿ)
    – ಗ್ಯಾಜೆಟ್‍ಗಳ ಬೆಲೆ ಕಡಿಮೆ ಆಗಬೇಕು
    – ಸ್ಕಾಲರ್‍ಶಿಪ್ ಹಣ ಜಾಸ್ತಿ ಮಾಡಬೇಕು

    ಮಹಿಳೆಯರು
    – ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಬೇಕು
    – ಎಲ್‍ಪಿಜಿ ಬೆಲೆ ಇಳಿಕೆಯಾಗಬೇಕು
    – ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚಿನ ಬಡ್ಡಿ ನೀಡಬೇಕು

    ರೈಲು
    – ರೈಲು ಖಾಸಗೀಕರಣಕ್ಕೆ ಈ ಬಾರಿ ಪ್ರಮುಖ ಒತ್ತು
    – ಖಾಸಗಿ ವಲಯದ ಜೊತೆ ಸೇರಿ ಹಳಿ, ಸ್ಟೇಷನ್‍ಗಳ ಅಭಿವೃದ್ಧಿ
    – ಹಳಿಗಳ ಮೇಲೆ ಓಡಲಿದೆ ಖಾಸಗಿ ಕಂಪನಿಗಳ ರೈಲು
    – ವಿಮಾನಯಾನ ಮಾದರಿಯಲ್ಲೇ ಖಾಸಗಿ ರೈಲು ಓಡಾಟಕ್ಕೆ ಅನುಮತಿ
    – ಇಂಟರ್ ಸಿಟಿ ರೈಲು ಸೇವೆಯನ್ನು ಆರಂಭಿಸಬೇಕು
    – ಹೆಚ್ಚು ಪ್ರಯಾಣಿಕರು ಸಂಚರಿಸುವ ಕಡೆ ಹಳಿ ಡಬ್ಲಿಂಗ್
    – ನಗರ ಅಲ್ಲದೇ ಇತರ ರೈಲ್ವೇ ನಿಲ್ದಾಣಗಳಲ್ಲೂ ವೈಫೈ ವ್ಯವಸ್ಥೆ
    – ದೇಶದ ಎಲ್ಲ ಜಿಲ್ಲೆಗಳಲ್ಲಿ ರೈಲು ಸಂಚರಿಸಬೇಕು (ಸದ್ಯ ಕೊಡಗಿಗೆ ರೈಲಿಲ್ಲ)
    – ಸಬ್ಸಿಡಿ ದರದಲ್ಲಿ ಟಿಕೆಟ್ ಸೌಲಭ್ಯ ಬಹುತೇಕ ಕೊನೆ

    ಪೆಟ್ರೋಲ್/ಡೀಸೆಲ್/ ಗ್ಯಾಸ್
    – ಅರುಣ್ ಜೇಟ್ಲಿ ಬಜೆಟ್‍ಗೆ ಕಚ್ಚಾತೈಲ ದರ ಏರಿಕೆ ಗ್ರಹಣ
    – ಬ್ಯಾರೆಲ್‍ಗೆ 55 ರಿಂದ 60 ಡಾಲರ್‍ನಷ್ಟು ದರವಿದ್ದರೆ 26 ಸಾವಿರ ಕೋಟಿ ರೂ.
    – ಬ್ಯಾರೆಲ್‍ಗೆ 65 ಡಾಲರ್‍ಗಿಂತ ಹೆಚ್ಚಾದರೆ ಗ್ರಾಹಕರಿಗೆ ಇನ್ನಷ್ಟು ಹೊರೆ ನಿಶ್ಚಿತ
    – ದೇಶೀಯ ಕಚ್ಚಾತೈಲ ಉದ್ಯಮಕ್ಕೆ ಸೆಸ್ ಕಡಿತ ಸೇರಿದಂತೆ ತೆರಿಗೆ ರಿಯಾಯಿತಿ
    – ಶೇಕಡಾ 20ರಷ್ಟು ಮೌಲ್ಯ ವರ್ಧಿತ ತೆರಿಗೆ ಇಳಿಕೆ

    ಖಾಸಗೀಕರಣ
    – ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ