Tag: tax

  • ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ನವದೆಹಲಿ: ತೈಲ ಬೆಲೆ ಏರಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಸುಂಕ ಕಡಿತದಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 2.50 ರೂ. ಇಳಿಕೆಯಾಗಲಿದೆ.

    ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಒಟ್ಟು 2.50 ರೂ ಕಡಿತವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದರು.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ತೈಲ 76 ಡಾಲರ್ ನಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಯಲ್ಲಿ ಅಮೆರಿಕ ಚೀನಾ ವಾಣಿಜ್ಯ ಸಮರ, ಇರಾನ್ ನಿಂದ ತೈಲ ಖರೀದಿಗೆ ನಿರ್ಬಂಧ ಹೇರಿದ ಪರಿಣಾಮ ಡಾಲರ್ ಮುಂದೆ ರೂಪಾಯಿ ದುರ್ಬಲವಾಗುತ್ತಿದ್ದು 73 ರೂ. ಗಡಿ ದಾಟಿದೆ. ಹೀಗಾಗಿ ತೈಲ ಬೆಲೆ ಭಾರತದಲ್ಲಿ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    2014 ರಿಂದ 2016 ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ. ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ:  ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ. ನಿಂದ 21.48 ರೂ., ಡೀಸೆಲ್ ಮೇಲೆ 3.56 ರೂ.ನಿಂದ 17.33 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು. 2016 ರ ವರೆಗೆ ಈ ಏರಿಕೆ ಮಾಡಿದ್ದು, 2017 ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕದಿಂದ ಸಂಗ್ರಹವಾದ ಹಣವನ್ನು ಜನರ ಕಲ್ಯಾಣ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!

    ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!

    ಬೆಂಗಳೂರು: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿದ್ದರೆ ಆಶ್ಚರ್ಯಕರ ರೀತಿಯಲ್ಲಿ ಇದರಿಂದ ಕರ್ನಾಟಕ ಸರ್ಕಾರಕ್ಕೆ ಬರುತ್ತಿರುವ ಆದಾಯದಲ್ಲಿ ಭಾರೀ ಕುಸಿತವಾಗುತ್ತಿದೆ.

    ಹೌದು. ಕರ್ನಾಟಕ ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ ಬಜೆಟ್ ನಂತರದ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೈಲದಿಂದ ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗಿದೆ.

    ಎಷ್ಟೆಷ್ಟು ಆದಾಯ?
    ಜೂನ್ ತಿಂಗಳು – 1247 ಕೋಟಿ ರೂ. ಆದಾಯ ಬಂದಿತ್ತು. ಇದಾದ ನಂತರ ಜುಲೈ 5 ರಂದು ಕುಮಾರಸ್ವಾಮಿ ಬಜೆಟ್ ಮಂಡಿಸಿದ್ದರು. ಆದರೆ ಜುಲೈನಲ್ಲಿ 1,222 ಕೋಟಿ ರೂ. ಬಂದಿದ್ದರೆ ಆಗಸ್ಟ್ ನಲ್ಲಿ ಮತ್ತಷ್ಟು ಆದಾಯ ಇಳಿಕೆಯಾಗಿದ್ದು 1,205 ಕೋಟಿ ರೂ.ಬಂದಿದೆ.

    ಹೆಚ್ಚುವರಿ ಆದಾಯಕ್ಕಾಗಿ ಸುಂಕ ಹೆಚ್ಚಿಸಿದ್ರೂ ಯಾಕೆ ಆದಾಯ ಕುಸಿಯುತ್ತಿದೆ ಎಂದು ಹೆಚ್‍ಡಿಕೆ ಸರ್ಕಾರ ಈಗ ತಲೆ ಕೆಡಿಸಿಕೊಂಡಿದೆ. ರೈತರ ಸಾಲ ಮನ್ನಾ ಸಲುವಾಗಿ ಕಳೆದ ಬಜೆಟ್‍ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಶೇ.2 ರಷ್ಟು ಹೆಚ್ಚಳವಾಗಿತ್ತು. ಇದರಿಂದಾಗಿ ಪ್ರತಿ ತಿಂಗಳು 1,500 ಕೋಟಿ ಆದಾಯ ಸಿಗುತ್ತೆ ಎಂದು ಸರ್ಕಾರ ಭಾವಿಸಿತ್ತು. ಆದರೆ ಮೊದಲಿಗಿಂತ ಆದಾಯ ಕಡಿಮೆಯಾಗಿದೆ. ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ

    ರಾಜ್ಯ ಪೆಟ್ರೋಲ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಸೇರಿದಂತೆ ಹಲವರು ಈ ಮಾಹಿತಿಯನ್ನು ಒಪ್ಪುತ್ತಿಲ್ಲ. ಕಡಿಮೆಯಾಗಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದು, ಆದಾಯ ಲೆಕ್ಕ ಹಾಕುವ ವಿಚಾರದಲ್ಲಿ ಎಲ್ಲೋ ಲೋಪವಾಗಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೈಕ್, ಲ್ಯಾಪ್‍ಟಾಪ್ ಉಚಿತ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಇನ್ನೂ ಬಂದಿಲ್ಲ ಯಾಕೆ? ಸರ್ಕಾರಗಳ ನಿಲುವು ಏನು?

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಇನ್ನೂ ಬಂದಿಲ್ಲ ಯಾಕೆ? ಸರ್ಕಾರಗಳ ನಿಲುವು ಏನು?

    ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಭಾರತ್ ಬಂದ್ ನಡೆಯುತ್ತಿರುವ ಸಂದರ್ಭದಲ್ಲೇ ಈಗ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತರಬೇಕು ಎನ್ನುವ ಆಗ್ರಹ ಕೇಳಿಬಂದಿದೆ.

    ಜನರು ಮತ್ತು ರಾಜಕೀಯ ಪಕ್ಷಗಳು ಆಗ್ರಹಿಸುತ್ತಿದ್ದರೂ ಜಿಎಸ್‍ಟಿ ವ್ಯಾಪ್ತಿಗೆ ತೈಲ ಬರುವುದು ಅಷ್ಟು ಸುಲಭವಿಲ್ಲ. ಜಿಎಸ್‍ಟಿ ವ್ಯಾಪ್ತಿಗೆ ತಂದರೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಹಾಕುವ ಸಂಭವವೇ ಹೆಚ್ಚು.

    ಅಡುಗೆ ಅನಿಲ (ಎಲ್‍ಪಿಜಿ), ಸೀಮೆಎಣ್ಣೆ, ನಾಫ್ತಾ ಗಳಿಗೆ ಜಿಎಸ್‍ಟಿ ಅನ್ವಯವಾಗುತ್ತಿದೆ. ಆದರೆ ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಯಾಕೆ ಬಿಟ್ಟುಕೊಡಲ್ಲ?
    ರಾಜ್ಯ ಸರ್ಕಾರಗಳಿಗೆ ಅತಿಹೆಚ್ಚು ಆದಾಯ ಮೂಲವೇ ತೈಲ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಹಾಕಿದರೆ ರಾಜ್ಯ ಸರ್ಕಾರ ವ್ಯಾಟ್ ಹಾಕುತ್ತದೆ. ಈ ಮೂಲಕ ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಸುಲಭವಾಗಿ ಆದಾಯ ಸಂಗ್ರಹವಾಗುತ್ತದೆ. ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಲು ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಸಹ ಹಾಕಿದೆ. ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಹೆಚ್ಚಳ ಮಾಡಲು ಇರುವ ಏಕೈಕ ಮಾರ್ಗ ಎಂದರೆ ತೈಲ. ಹೀಗಾಗಿ ಯಾವುದೇ ಸರ್ಕಾರ ಪೆಟ್ರೋಲನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲು ಒಪ್ಪಿಗೆ ನೀಡುತ್ತಿಲ್ಲ.  ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ಕಾಂಗ್ರೆಸ್, ಬಿಜೆಪಿ ನಿಲುವು ಏನು?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.

    ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಹಿಂದೆಯೇ ಬೆಂಬಲಿಸಿದ್ದರು. ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಲಿಲ್ಲ. ಆದರೆ ಈಗಲಾದರೂ ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ಉತ್ತರಿಸಿದ್ದರು.

    ಈ ಹಿಂದೆ ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಕಳೆದ ವಾರ ಜಿಎಸ್‍ಟಿ ವ್ಯಾಪ್ತಿಯ ಅಡಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಸುಶೀಲ್ ಮೋದಿ, ಎಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿದೆ. ಆದರೆ ಇದನ್ನು ವ್ಯಾಪ್ತಿಗೆ ತರುವುದು ಜಿಎಸ್‍ಟಿ ಕೌನ್ಸಿಲ್‍ಗೆ ಬಹಳ ಸವಾಲಿದೆ ಎಂದು ತಿಳಿಸಿದ್ದರು.  ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ರಾಜಕೀಯ ಪಕ್ಷಗಳ ನಿಲುವು ಏನು?
    ಜಿಎಸ್‍ಟಿ ವ್ಯಾಪ್ತಿಗೆ ತೈಲವನ್ನು ತರದ್ದಕ್ಕೆ ಕಾಂಗ್ರೆಸ್ ಬಿಜೆಪಿಯನ್ನು ದೂರಿದರೆ, ಬಿಜೆಪಿ ನಾಯಕರು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತದೆ. ಒಂದು ವೇಳೆ ಜಿಎಸ್‍ಟಿ ವ್ಯಾಪ್ತಿಗೆ ತೈಲ ತಂದರೆ ರಾಜ್ಯ ಸರ್ಕಾರಕ್ಕೆ ನಷ್ಟ ಹೆಚ್ಚು. ಹೀಗಾಗಿ ವಿವಿಧ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು ಜಿಎಸ್‍ಟಿ ವ್ಯಾಪ್ತಿಗೆ ತೈಲ ತರಬೇಕು ಎಂದು ಆಗ್ರಹಿಸುತ್ತಿದ್ದರೆ ಹೊರತು ಎಲ್ಲ ಪಕ್ಷಗಳು ಒಟ್ಟಾಗಿ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಿಲ್ಲ. ದೇಶದ ಆರ್ಥಿಕತೆಗೆ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾಗದ ರಾಜ್ಯಗಳಿಂದಲೇ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಎನ್‍ಡಿಎ ಹೊರತಾಗಿರುವ ಪಕ್ಷಗಳು ಆಡಳಿತದಲ್ಲಿದೆ. ಹೀಗಾಗಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಒಪ್ಪಿಗೆ ನೀಡಿದರೆ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ತೈಲ ಬರಬಹುದು. ಈ ರಾಜ್ಯಗಳು ಒಪ್ಪಿಗೆ ನೀಡಿದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಬೆಂಬಲ ನೀಡಲೇಬೇಕಾಗುತ್ತದೆ.

    ತೈಲ ಬೆಲೆ ಕಡಿಮೆಯಾಗಬಾರದು:
    ತೈಲ ಬೆಲೆ ಕಡಿಮೆಯಾಗಬೇಕು ಎಂದು ಜನ ಸಾಮಾನ್ಯರು ಹೇಳುತ್ತಿದ್ದರೆ ಕೆಲವರು ತೈಲ ಬೆಲೆ ಕಡಿಮೆ ಮಾಡಬಾರದು ಎನ್ನುವ ವಾದವನ್ನು ಮುಂದಿಡುತ್ತಿದ್ದಾರೆ. ಒಂದು ವೇಳೆ ತೈಲ ಬೆಲೆ ಇಳಿಕೆಯಾದರೆ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿಯುತ್ತದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತದೆ. ನಗರದಲ್ಲಿ ಮತ್ತಷ್ಟು ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ ತೈಲ ದರವನ್ನು ಇಳಿಸುವ ಬದಲು ಸಮೂಹ ಸಾರಿಗೆ ವ್ಯವಸ್ಥೆಗಳಾದ ಬಸ್ಸು, ರೈಲುಗಳ ಪ್ರಯಾಣ ದರವನ್ನು ಇಳಿಸಬೇಕು. ಹೇಗೆ ಪ್ರತಿನಿತ್ಯ ಬಳಸುವ ವಸ್ತುಗಳು ಬೆಲೆಗಳು ಏರಿಕೆಯಾಗುತ್ತದೋ ಅದೇ ರೀತಿಯಾಗಿ ತೈಲ ಬೆಲೆ ಏರಿಕೆಯಾದರೆ ತಪ್ಪಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರೀ ಏರಿಕೆಯಾದಾಗ ನಮ್ಮಲ್ಲಿ ಬೆಲೆ ಇಳಿಸಿದರೆ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‌ಗೆ 40 ರೂ.ಅಷ್ಟೇ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ದೇಶ ಒಂದೇ ತೆರಿಗೆಗೆ ಒಂದು ವರ್ಷ – 10 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್‍ಟಿ ಸಂಗ್ರಹ

    ಒಂದೇ ದೇಶ ಒಂದೇ ತೆರಿಗೆಗೆ ಒಂದು ವರ್ಷ – 10 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್‍ಟಿ ಸಂಗ್ರಹ

    ಬೆಂಗಳೂರು: ಒಂದೇ ದೇಶ ಒಂದೇ ತೆರಿಗೆ ಅಥವಾ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ಒಂದು ವರ್ಷ.

    ಕಳೆದ ವರ್ಷ ಜೂನ್ 30ರಂದು ಸಂಸತ್ ಭವನದಲ್ಲಿ ನಡೆದಿದ್ದ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಿಎಸ್‍ಟಿಯನ್ನು ದೇಶಕ್ಕೆ ಅರ್ಪಿಸಿದ್ರು. ಈ ಮೂಲಕ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗಿದ್ದ 12 ಬಗೆಯ ಪರೋಕ್ಷ ತೆರಿಗೆಗಳು ರದ್ದಾಗಿ ಒಂದೇ ತೆರಿಗೆ ಪದ್ಧತಿಯಲ್ಲಿ ವಿಲೀನವಾಗಿದ್ದವು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ತೆರಿಗೆ ಎಂದು ಟೀಕಿಸಿದ್ದರು. ಶೇಕಡಾ 28ರಷ್ಟು ತೆರಿಗೆ ದರದ ಜೊತೆಗೆ ಜಿಎಸ್‍ಟಿಯಲ್ಲಿ ಶೇ.0, ಶೇ.5, ಶೇ.12, ಶೇ.18ರಷ್ಟು ತೆರಿಗೆ ದರಗಳಿವೆ. ಕರ್ನಾಟಕದಲ್ಲಿ ಒಟ್ಟು 7 ಲಕ್ಷ ಮಂದಿ ಜಿಎಸ್‍ಟಿ ತೆರಿಗೆ ಪಾವತಿದಾರರಿದ್ದಾರೆ. ವಿಚಿತ್ರ ಅಂದ್ರೆ ನಮ್ಮಲ್ಲಿ ಜಿಎಸ್‍ಟಿಯಿಂದ ಆಗಿರುವ ತೆರಿಗೆ ಸಂಗ್ರಹದ ಹೆಚ್ಚಳ ಶೇ.1ರಷ್ಟು ಮಾತ್ರ.

    ಒಂದು ವರ್ಷದಲ್ಲಿ ಜಿಎಸ್‍ಟಿಯಿಂದಾದ ಬದಲಾವಣೆಗಳು:
    1. 65 ಲಕ್ಷದಷ್ಟಿದ್ದ ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ 1 ಕೋಟಿ 12 ಲಕ್ಷದ 15 ಸಾವಿರದ 693ಕ್ಕೆ ಹೆಚ್ಚಳ.
    2. ತೆರಿಗೆ ವ್ಯಾಪ್ತಿಗೆ ಬಂದ ಹೊಸಬರ ಸಂಖ್ಯೆ 48 ಲಕ್ಷದ 38 ಸಾವಿರದ 726.
    3. ಜಿಎಸ್‍ಟಿಯಿಂದಾಗಿ ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಶೇ.14ರಷ್ಟು ಹೆಚ್ಚಳ
    4. ಸಣ್ಣ-ಮಧ್ಯಮ ಉದ್ದಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ವ್ಯಾಪ್ತಿಗೆ ಬಂದಿವೆ.

    ಜಿಎಸ್‍ಟಿ ಅಳವಡಿಕೆಯಿಂದ ಒಂದು ವರ್ಷದಲ್ಲಾದ ತೆರಿಗೆ ಸಂಗ್ರಹದ ಮೊತ್ತ
    `ಒಂದೇ ದೇಶ ಒಂದೇ ತೆರಿಗೆ’ಗೆ ಒಂದು ವರ್ಷ..!
    ಯಾವಾಗ -ಎಷ್ಟು ( ಕೋಟಿ ರೂ.ಗಳಲ್ಲಿ)
    ಜುಲೈ – 94,063
    ಆಗಸ್ಟ್ – 93,590
    ಸೆಪ್ಟೆಂಬರ್ – 93,029
    ಅಕ್ಟೋಬರ್ – 95,132
    ನವೆಂಬರ್ – 85,931

    ಡಿಸೆಂಬರ್ – 83,716
    ಜನವರಿ – 88,929
    ಫೆಬ್ರವರಿ – 88,047
    ಮಾರ್ಚ್ – 89,264

    ಏಪ್ರಿಲ್ – 1,03,458
    ಮೇ – 94,016
    ಒಟ್ಟು – 10,09,175
    ಸರಾಸರಿ – 91,743

  • ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ರಾಜ್ಯದ ಪವರ್ ಫುಲ್ ಸಚಿವರ ಗುಟ್ಟು ರಟ್ಟು – ಐಟಿ ಇಲಾಖೆ ಡಿಕೆಶಿ ಮೇಲೆ ಕೇಸ್ ಹಾಕಿದ್ದು ಯಾಕೆ?

    ಬೆಂಗಳೂರು: ರಾಜ್ಯದ ಪವರ್ ಫುಲ್ ಮಿನಿಸ್ಟರ್ ಅಂತಾನೇ ಕರೆಸಿಕೊಳ್ಳುವ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಏನಾಯಿತು? ಮತ್ತು ಯಾವ ಆಧಾರದ ಮೇಲೆ ಪ್ರಕರಣ ದಾಖಲು ಮಾಡಲಾಗ್ತಾಯಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸಿವ್ ಮಾಹಿತಿಗಳು ಲಭ್ಯವಾಗಿವೆ.

    ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಐಟಿ ದಾಳಿ ವೇಳೆ ವಶಪಡಿಸಿಕೊಂಡ ಬಹುತೇಕ ಆಸ್ತಿ ಪತ್ರಗಳಿಗೆ ಸರಿಯಾದ ದಾಖಲೆಗಳಿಲ್ಲ. ಸಚಿವರು ದಾಖಲೆಯಿಲ್ಲದೇ ಹಲವು ಕಡೆ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೋಟ್ಯಂತರ ರುಪಾಯಿಗಳನ್ನು ಕೇವಲ ಚೀಟಿಗಳಲ್ಲಿ ಬರೆದುಕೊಳ್ಳಲಾಗಿತ್ತು ಮತ್ತು ಈ ಎಲ್ಲ ವ್ಯವಹಾರಗಳಿಗೆ ಯಾವುದೇ ರೀತಿಯಲ್ಲಿ ಸಚಿವರು ತೆರಿಗೆಯನ್ನು ಪಾವತಿ ಮಾಡಿಲ್ಲ. ದಾಳಿ ಸಮಯದಲ್ಲಿ ಸಚಿವರು ಕೆಲ ದಾಖಲೆಗಳನ್ನು ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ.

    ಐಟಿ ದಾಳಿ ವೇಳೆ 5 ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಟ್ಯಾಕ್ಸ್ ಕಟ್ಟದೆ ಇರುವುದು ಬೆಳಕಿಗೆ ಬಂದಿದೆ. ಇನ್ನೂ ಹಲವು ಕಂಪೆನಿಗಳ ಜೊತೆ ಡಿ.ಕೆ.ಶಿವಕುಮಾರ್ ಒಪ್ಪಂದ ಮಾಡಿಕೊಂಡಿದ್ದು, ಅರ್ಧ ಹಣವನ್ನು ಚೆಕ್ ಮೂಲಕ ಮತ್ತು ಇನ್ನರ್ಧ ಹಣವನ್ನು ಕ್ಯಾಶ್ ಮೂಲಕ ಪಡೆದಿದ್ದಾರೆ. ಕ್ಯಾಶ್ ನಲ್ಲಿ ಪಡೆದ ಹಣಕ್ಕೆ ಸಚಿವರು ತೆರಿಗೆ ಪಾವತಿ ಮಾಡಿಲ್ಲ. ಈ ರೀತಿಯ ವ್ಯವಹಾರದಲ್ಲಿ ಒಂದು ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು 7 ಕೋಟಿ ರೂಪಾಯಿಗೂ ಹೆಚ್ಚಿನ ಹಣಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಡಿ.ಕೆ ಶಿವಕುಮಾರ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾರೆ. ಜವಬ್ದಾರಿಯುತ ಸಚಿವರಾಗಿ ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಿದ್ದಾರೆ. ಕಾನೂನಿನ ಬಗ್ಗೆ ಅರಿವಿದ್ರೂ ಮೋಸ ಮಾಡಿದ್ದು, ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಐಟಿ ಇಲಾಖೆ ಕೋರ್ಟ್ ಗೆ ಮನವಿ ಮಾಡಿದೆ.

  • ನೋಟ್ ನಿಷೇಧ, ಜಿಎಸ್‍ಟಿಯಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳ: ಆರ್ಥಿಕ ಸಮೀಕ್ಷೆ

    ನೋಟ್ ನಿಷೇಧ, ಜಿಎಸ್‍ಟಿಯಿಂದ ತೆರಿಗೆದಾರರ ಸಂಖ್ಯೆ ಹೆಚ್ಚಳ: ಆರ್ಥಿಕ ಸಮೀಕ್ಷೆ

    ನವದೆಹಲಿ: ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ನೋಟ್ ನಿಷೇಧ ಮತ್ತು ಜಿಎಸ್‍ಟಿ ತೆರಿಗೆ ಜಾರಿಯಿಂದ ಪರೋಕ್ಷ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

    ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. 500 ಮತ್ತು 1 ಸಾವಿರ ರೂ. ನೋಟುಗಳ ನಿಷೇಧ ಮತ್ತು ಜಿಎಸ್‍ಟಿ ಜಾರಿ ಬಳಿಕ 18 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದು, ಪರೋಕ್ಷ ತೆರಿಗೆದಾರರ ಸಂಖ್ಯೆ ಶೇ 50ರಷ್ಟು ಹೆಚ್ಚಿದೆ ಎಂದು ತಿಳಿಸಿದರು.

    ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) 6.75%ರಿಂದ 7ರಿಂದ 7.5% ಏರಿಕೆಯಾಗಲಿದ್ದು, ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ 4% ಅಂಕಗಳಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಕಾರಣ ಮುಂದಿನ ವರ್ಷಗಳಲ್ಲಿ ಜಿಡಿಪಿ ಮೇಲೆ ಪರಿಣಾಮ ಬೀರಬಹುದು.

    ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ 70% ಕೊಡುಗೆ ನೀಡಿವೆ. ಕೃಷಿಕ್ಷೇತ್ರ ಈ ವರ್ಷ ಶೇ 2.1ರ ಬೆಳವಣಿಗೆ ಸಾಧಿಸಿದ್ದು ಖಾಸಗಿ ಬಂಡವಾಳ ಹೂಡಿಕೆ ಏರಿಕೆಯಾಗಬಹುದು. ತಯಾರಿಕಾ ವಲಯ 8% ರ ಬೆಳವಣಿಗೆಯಾಗಲಿದೆ.

  • ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೆಂಬಲಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

    ಕಳೆದ ವಾರ ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಕಳೆದ ವಾರ ಜಿಎಸ್‍ಟಿ ವ್ಯಾಪ್ತಿಯ ಅಡಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಸುಶೀಲ್ ಮೋದಿ, ಎಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿದೆ. ಆದರೆ ಇದನ್ನು ವ್ಯಾಪ್ತಿಗೆ ತರುವುದು ಜಿಎಸ್‍ಟಿ ಕೌನ್ಸಿಲ್‍ಗೆ ಬಹಳ ಸವಾಲಿದೆ ಎಂದು ತಿಳಿಸಿದ್ದರು.

    ಬೆಂಗ್ಳೂರಿನಲ್ಲಿ ಎಷ್ಟು ಇರಲಿದೆ?
    ಪೆಟ್ರೋಲ್, ಡೀಸೆಲ್ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತಂದರೆ ಬೆಂಗಳೂರಿನಲ್ಲಿ 40 ರೂ. ಆಗಬಹುದು ಎಂದು ಈ ಹಿಂದೆ ವೆಬ್‍ಸೈಟ್ ಸುದ್ದಿ ಪ್ರಕಟ ಮಾಡಿತ್ತು. Factly.in ವೆಬ್‍ಸೈಟ್ ಈ ವರದಿ ಪ್ರಕಟಿಸಿದ್ದು ಒಂದು ವೇಳೆ ಪೆಟ್ರೋಲ್‍ಗೆ ಶೇ.18 ರಷ್ಟು ತೆರಿಗೆ ವಿಧಿಸಿದರೆ ಬೆಲೆ 40 ರೂ. ಆಗುತ್ತದೆ ಎಂದು ಹೇಳಿದೆ. ಪ್ರಸ್ತುತ ಭಾರತದಲ್ಲಿ ವಸ್ತುಗಳ ಮೇಲೆ ಶೇ.5, ಶೇ.12, ಶೇ.18, ಶೇ.28 ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಈ ಪೆಟ್ರೋಲ್ ಗೆ ಎಷ್ಟು ಜಿಎಸ್‍ಟಿ ಹಾಕಿದ್ರೆ ಎಷ್ಟು ರೂ. ಆಗಬಹುದು ಎನ್ನುವ ವಿವರಣೆಯಲ್ಲಿ ಈ ವೆಬ್‍ಸೈಟ್ ಪ್ರಕಟಿಸಿದೆ.

    ಎಷ್ಟು ತೆರಿಗೆ ಆದ್ರೆ ಎಷ್ಟು ರೂ.?
    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.17 ರೂ. ಇದೆ ಎಂದು ಪರಿಗಣಿಸಿಜಿಎಸ್‍ಟಿ ವ್ಯಾಪ್ತಿಗೆ ತಂದು ಶೇ.12 ತೆರಿಗೆ ವಿಧಿಸಿದರೆ 38.01 ರೂ., ಶೇ.18 ತೆರಿಗೆ ವಿಧಿಸಿದರೆ 40.05 ರೂ., ಶೇ.28 ತೆರಿಗೆ ವಿಧಿಸಿದರೆ 43.44 ರೂ. ಆಗಬಹುದು. ಒಂದು ವೇಳೆ ಜಿಎಸ್‍ಟಿ ಶೇ. 28 ಮತ್ತು ಹೆಚ್ಚುವರಿಯಾಗಿ ಶೇ.22 ಜಿಎಸ್‍ಟಿ ಸೆಸ್ ವಿಧಿಸಿದರೂ ಬೆಲೆ 50.91 ರೂ. ಆಗಲಿದೆ.

    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 58.82 ರೂ. ಇದೆ. ಜಿಎಸ್‍ಟಿ ಅಡಿಯಲ್ಲಿ ಡೀಸೆಲ್ ಬಂದರೆ ಶೇ.12 ತೆರಿಗೆ ಹಾಕಿದ್ರೆ 36.65 ರೂ. ಆಗುತ್ತದೆ. ಒಂದು ವೇಳೆ ಶೇ.18ರಷ್ಟು ತೆರಿಗೆ ವಿಧಿಸಿದರೆ 38.61 ರೂ. ಆದರೆ ಶೇ.28 ತೆರಿಗೆ ವಿಧಿಸಿದರೆ 41.88 ರೂ. ಆಗುತ್ತದೆ. ಜಿಎಸ್‍ಟಿ ಶೇ.28 ಜೊತೆಗೆ ಹೆಚ್ಚುವರಿ ಸೆಸ್ 22 ಹಾಕಿದ್ರೆ ಡೀಸೆಲ್ ಬೆಲೆ 49.8 ಆಗಬಹುದು.

    ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
    ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.

    ಬೆಲೆ ಯಾಕೆ ಜಾಸ್ತಿ?
    ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. 2014ರಿಂದ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.  ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    ಜಿಎಸ್‍ಟಿಯಲ್ಲಿ ಪೆಟ್ರೋಲ್ ಬೆಲೆ

    ಜಿಎಸ್‍ಟಿಯಲ್ಲಿ ಡೀಸೆಲ್ ಬೆಲೆ

  • `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲು

    `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲು

    ತಿರುವನಂತಪುರ: ಸ್ಯಾಂಡಲ್ ವುಡ್‍ನ ಯಶಸ್ವಿ ಚಿತ್ರ `ಹೆಬ್ಬುಲಿ’ ಸಿನಿಮಾದ ನಾಯಕಿ ಅಮಲಾ ಪೌಲ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಮಲಾ ಪೌಲ್ ಜೊತೆ ನಟ ಫಹಾದ ಫಾಸಿಲ್ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ.

    ಇಬ್ಬರೂ ಕಲಾವಿದರು ಕೇರಳ ನಿವಾಸಿಗಳಾಗಿದ್ದು, ತೆರಿಗೆ ತಪ್ಪಿಸುವ ಸಲುವಾಗಿ ಪುದುಚೇರಿಯಲ್ಲಿ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕಾರು ಖರೀದಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಕೇರಳ ರಾಜ್ಯದಲ್ಲಿ 20 ಲಕ್ಷ ರೂ. ಮೇಲಿನ ವಿಲಾಸಿ ಕಾರುಗಳಿಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ಕಾರ್ ಖರೀದಿಸಿದ್ದಾರೆ. ನಟ ಫಹಾದ್ ಫಾಸಿಲ್ ಕಾರ್ ಖರೀದಿ ಮಾಡಲು ಅಲೆಪ್ಪಿ ವಿಳಾಸ ನೀಡಿ ಲೋನ್ ಪಡೆದಿದ್ದಾರೆ. ಅಂತೆಯೇ ಅಮಲಾ ಕೂಡ ಪುದುಚೇರಿಯಲ್ಲಿ ಬಾಡಿಗೆ ಕೋಣೆ ವಿಳಾಸ ನೀಡಿ `ಎಸ್ ಕ್ಲಾಸ್ ಬೆಂಜ್ ಕಾರ್` ಖರೀದಿಸಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಲವರು ಇದೇ ವಿಳಾಸ ನೀಡಿ ಕಾರು ಖರೀದಿಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ವಿರುದ್ಧ ನಾನು ಈಗ ಮಾತನಾಡಬೇಕಾಗಿದೆ. ಈ ಊಹಾಪೋಹ ಸುದ್ದಿಗಳಿಂದ ನನಗೂ ಮತ್ತು ಕುಟುಂಬಸ್ಥರು ಮಾನಸಿಕವಾಗಿ ತುಂಬಾ ನೋವಾಗಿದೆ. ಇದೇ ವರ್ಷ ನಾನು ಕೋಟ್ಯಾಂತರ ರೂ. ತೆರಿಗೆಯನ್ನು ಪಾವತಿಸಿದ್ದೇನೆ. ಆದರೂ ತೆರಿಗೆಗೆ ಸಂಬಂಧಿಸಿದ ಅಧಿಕಾರಿಗಳು ನನ್ನ ಕಡೆಯಿಂದ ಕಾನೂನು ಬಾಹಿರ ಚಟುವಟಿಕೆ ನಡೆದಿದೆ ಎಂದು ಹೇಳುತ್ತಿದ್ದಾರೆ. ನಾನು ಒಬ್ಬ ಭಾರತ ದೇಶದ ಪ್ರಜೆಯಾಗಿದ್ದು, ದೇಶದ ಯಾವುದೇ ಭಾಗದಲ್ಲಿ ಆಸ್ತಿಯನ್ನು ಖರೀದಿಸುವ ಹಕ್ಕು ನನಗಿದೆ ಎಂದು ನಂಬಿದ್ದೇನೆ ಎಂದು ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ.

  • ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಗುವಾಹಟಿ: ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ. ನೀವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಇನ್ನು ಮುಂದೆ ಇಳಿಕೆಯಾಗಲಿವೆ. ಬರೋಬ್ಬರೀ 178 ದಿನಬಳಕೆ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 10%ರಷ್ಟು ಇಳಿಕೆಯಾಗಿದೆ.

    28% ರಷ್ಟಿದ್ದ ಜಿಎಸ್‍ಟಿ ತೆರಿಗೆಯನ್ನು 18%ಕ್ಕೆ ಇಳಿಸಲಾಗಿದೆ. ಶುಕ್ರವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 23ನೇ ಸಭೆಯಲ್ಲಿ 178 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು 18% ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ 28% ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರೆಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಒಟ್ಟು 178 ವಸ್ತುಗಳ ಮೇಲಿನ ತೆರಿಗೆಯನ್ನು 18% ಇಳಿಸಲಾಗಿದ್ದು, ನವೆಂಬರ್ 15 ರಿಂದ ಪರಿಷ್ಕೃತ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.

    ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಪ್ರತಿಕ್ರಿಯಿಸಿ, ಗ್ರಾನೈಟ್, ಮಾರ್ಬಲ್, ಚಾಕ್ಲೇಟ್, ಚೂಯಿಂಗ್‍ಗಮ್, ವಾಚ್, ಬ್ಲೇಡ್, ಸ್ಟೌ, ಸೌಂದರ್ಯವರ್ಧಕಗಳು, ಶಾಂಪು ಮೇಲಿನ ತೆರಿಗೆಯನ್ನು ಇಳಿಸಲಾಗಿದೆ ಎಂದು ತಿಳಿಸಿದರು.

    ಪೇಂಟ್, ಸೀಮೆಂಟ್ ಜೊತೆ ಲಕ್ಷುರಿ ಉತ್ಪನ್ನಗಳಾದ ವಾಶಿಂಗ್ ಮಶೀನ್, ಏರ್ ಕಂಡಿಷನ್ ಸೇರಿದಂತೆ 50 ಉತ್ಪನ್ನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ 28% ತೆರಿಗೆಯನ್ನು ಮುಂದುವರಿಸಲಾಗಿದೆ. ಸೆಣಬು ಮತ್ತು ಹತ್ತಿಯ ಕೈ ಚೀಲಗಳ ಮೇಲಿನ ತೆರಿಗೆಯನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ.

    ಮುಂದಿನ ದಿನಗಳಲ್ಲಿ 28% ತೆರಿಗೆ ವಿಧಿಸುವ ವಸ್ತುಗಳು 18% ತೆರಿಗೆ ವ್ಯಾಪ್ತಿಗೆ ಬರಲಿದೆ. ಈಗಲೇ ಈ ವಸ್ತುಗಳ ಮೇಲೆ ತೆರಿಗೆ ಇಳಿಸಿದರೆ ಆದಾಯ ಸಂಗ್ರಹಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಸುಶೀಲ್ ಮೋದಿ ತಿಳಿಸಿದರು.

    ಜುಲೈ ಒಂದರಂದು ದೇಶದಲ್ಲಿ ಜಿಎಸ್‍ಟಿ ಜಾರಿಯಾಗಿದ್ದು, ವಸ್ತುಗಳ ಮೇಲೆ 0%, 5%, 12%, 18%, 28% ತೆರಿಗೆ ವಿಧಿಸಲಾಗುತ್ತಿದೆ.

     

     

  • ಡಿಕೆಶಿ ಮನೆಯಲ್ಲಿ ನಗನಾಣ್ಯ ಪತ್ತೆ: ಬಿಜೆಪಿ ಸೇರ್ಪಡೆ ಆಮಿಷ ಆರೋಪಕ್ಕೆ ಐಟಿ ಕೆಂಡಾಮಂಡಲ

    ಡಿಕೆಶಿ ಮನೆಯಲ್ಲಿ ನಗನಾಣ್ಯ ಪತ್ತೆ: ಬಿಜೆಪಿ ಸೇರ್ಪಡೆ ಆಮಿಷ ಆರೋಪಕ್ಕೆ ಐಟಿ ಕೆಂಡಾಮಂಡಲ

    ಬೆಂಗಳೂರು: ಐಟಿ ದಾಳಿ ಬಿಜೆಪಿ ಪ್ರೇರಿತ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯಲು ದಾಳಿ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆದಾಯ ತೆರಿಗೆ ಇಲಾಖೆ ಗರಂ ಆಗಿದೆ.

    ಗುರುವಾರ ಸಂಜೆ ಕರ್ನಾಟಕ ಗೋವಾ ಪ್ರಾಂತ್ಯದ ಐಟಿ ಇಲಾಖೆ ಮಹಾನಿರ್ದೇಶಕರಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಿಎಂ ಆರೋಪವನ್ನು ಅಲ್ಲಗಳೆದಿದ್ದಾರೆ. ಐಟಿ ಅಧಿಕಾರಿಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ಇಲಾಖೆ ವೃತ್ತಪರತೆ ಹೊಂದಿದ್ದು, ಮುಖ್ಯಮಂತ್ರಿ ಆರೋಪ ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಡಿಕೆಶಿ ಮನೆ ಮೇಲೆ ನಡೆದ ರೇಡ್‍ಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಕೂಡ ಬಿಟ್ಟುಕೊಟ್ಟಿದ್ದಾರೆ. ದಾಳಿ ವೇಳೆ, ನೂರಾರು ಕೋಟಿ ಅಘೋಷಿತ ಆಸ್ತಿ, ಚಿನ್ನಾಭರಣ ಪತ್ತೆಯಾಗಿರುವುದಾಗಿ ಮಾಧ್ಯಮ ಪ್ರಕಟಣೆ ತಿಳಿಸಲಾಗಿದೆ.

    ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
    ನಮ್ಮ ಐಟಿ ದಾಳಿಯನ್ನ ಕೆಲವು ರಾಜಕೀಯ ಮುಖಂಡರು ಕೆಲ ಆರೋಪಗಳನ್ನ ಮಾಡುತ್ತಿದ್ದಾರೆ. ಐಟಿ ದಾಳಿ, ಐಟಿ ಇಲಾಖೆ ರಾಜಕೀಯ ಪ್ರೇರಿತ ಎಂದು ಆರೋಪಗಳನ್ನ ಮಾಡಿದ್ದಾರೆ. ಆದರಲ್ಲೂ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿ, ಐಟಿ ಅಧಿಕಾರಿಗಳು ದಾಳಿ ವೇಳೆ ಸಚಿವರನ್ನು ಬಿಜೆಪಿಗೆ ಸೇರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ನಾವು ಪ್ರಬಲವಾಗಿ ತಳ್ಳಿಹಾಕುತ್ತಿದ್ದೇವೆ. ಐಟಿ ಇಲಾಖೆ ವೃತ್ತಿಪರ, ರಾಜಕೀಯೇತರ ಇಲಾಖೆ. ದಾಳಿಯ ಸಂದರ್ಭದಲ್ಲಿ ನೂರಾರು ಕೋಟಿ ಅಘೋಷಿತ ಆಸ್ತಿ, ಚಿನ್ನಾಭರಣಗಳು ಪತ್ತೆಯಾಗಿವೆ. ಇದನ್ನು ದಾಳಿಯ ಸಂದರ್ಭದಲ್ಲಿ ಅವರು ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿಯಿಂದ ನಿಮಗೆ ಆಹ್ವಾನ ಬಂದಿತ್ತಾ: ಡಿಕೆಶಿ ತಿಳಿಸಿದ್ದು ಹೀಗೆ

    ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಪತ್ನಿ ಉಷಾಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಇದನ್ನೂ ಓದಿ: ನಾನು ತೆರೆದ ಪುಸ್ತಕ, ಯಾವುದಕ್ಕೂ ಭಯಪಡಲ್ಲ: ಡಿಕೆ ಶಿವಕುಮಾರ್

    ಇದನ್ನೂ ಓದಿ:  Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?

    ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ