Tag: tax

  • ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್‌

    ಮಂಡ್ಯ: ದೀಪಾವಳಿ ಕೊಡುಗೆ (Deepavali Gift) ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇರ ಆರೋಪ ಮಾಡಿದರು.

    ಮಂಡ್ಯ ನಗರದ (Mandya City) ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನ ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ

    Khata 2

    ಬೆಂಗಳೂರು (Bengaluru) ನಗರದ ಜನರಿಗೆ ದೀಪಾವಳಿ ಕೊಡುಗೆ ನೀಡೋದಕ್ಕೆ ಬದಲಾಗಿ ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ (A Khata) ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4 ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು. ಇದನ್ನೂ ಓದಿ: ಐನಾಕ್ಸ್‌ವಿಂಡ್‌ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್‌

    Khata

    ಹಣ ಮಾಡುವುದಕ್ಕೆಂದೇ ಈ ಸರ್ಕಾರ ಇದೆ
    ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲೂ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ

    ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

    ಸಂಸದರ ನಿಧಿಯಲ್ಲಿ ಆಟೋ ನಿಲ್ದಾಣ ಲೋಕಾರ್ಪಣೆ
    ಮಂಡ್ಯದ ಸಂಜಯ ನಗರ ವೃತ್ತದಲ್ಲಿ ಸಂಸದರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಸುಸಜ್ಜಿಯ ಆಟೋ ನಿಲ್ದಾಣವನ್ನು ಇದೇ ಸಂದರ್ಭದಲ್ಲೂ ಹೆಚ್‌ಡಿಕೆ ಉದ್ಘಾಟಿಸಿದರು. ಇದನ್ನೂ ಓದಿ: ಎಪಿಎಲ್‌ಗೆ ಬದಲಾದ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್; ದಾಖಲೆ ಇದ್ರೆ 45 ದಿನದೊಳಗೆ ಮತ್ತೆ ಬಿಪಿಎಲ್ ಕಾರ್ಡ್ ಭಾಗ್ಯ

    ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದರು.

    ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

  • ವಿಜಯದಶಮಿಗೆ ಎಲ್ಲಾ ರಾಜ್ಯಗಳಿಗೂ ಕೇಂದ್ರದಿಂದ ಬಂಪರ್‌ ಉಡುಗೊರೆ – ರಾಜ್ಯಕ್ಕೆ 3705 ಕೋಟಿ ರೂ. ಕೊಡುಗೆ: ಪ್ರಹ್ಲಾದ್ ಜೋಶಿ‌

    ವಿಜಯದಶಮಿಗೆ ಎಲ್ಲಾ ರಾಜ್ಯಗಳಿಗೂ ಕೇಂದ್ರದಿಂದ ಬಂಪರ್‌ ಉಡುಗೊರೆ – ರಾಜ್ಯಕ್ಕೆ 3705 ಕೋಟಿ ರೂ. ಕೊಡುಗೆ: ಪ್ರಹ್ಲಾದ್ ಜೋಶಿ‌

    ನವದೆಹಲಿ: ದೇಶದ ಜನತೆಗೆ Next Gen GST ಕೊಡುಗೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಕರ್ನಾಟಕ (Karnataka) ಸೇರಿದಂತೆ ಎಲ್ಲಾ ರಾಜ್ಯಗಳಿಗೂ ದಸರಾ-ದೀಪಾವಳಿ ಹಬ್ಬದ ವೇಳೆ ಹೆಚ್ಚುವರಿ ತೆರಿಗೆ ಹಂಚಿಕೆಯ (Tax Devolution) ಉಡುಗೊರೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಆಶಯದಂತೆ ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಕೇಂದ್ರ ಹಣಕಾಸು ಸಚಿವಾಲಯ ಒಟ್ಟಾರೆ 1,01,603 ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ. ದಸರಾ-ದೀಪಾವಳಿ ಹಬ್ಬಗಳ ಋತುವಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ನಿರ್ಣಯ ಕೈಗೊಂಡು ಎಲ್ಲಾ ರಾಜ್ಯಗಳಿಗೂ ನೆರವಾಗುವಂತೆ ತೆರಿಗೆ ಹಂಚಿಕೆಯ ಒಂದು ಮುಂಗಡ ಕಂತು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 3705 ಕೋಟಿ ರೂ. ಹೆಚ್ಚುವರಿ ತೆರಿಗೆ ಪಾಲನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೆರಿಗೆ ಪಾಲು| ಕರ್ನಾಟಕಕ್ಕೆ 3,705 ಕೋಟಿ, ಬಿಹಾರಕ್ಕೆ ಬಂಪರ್‌- ಯಾವ ರಾಜ್ಯಕ್ಕೆ ಎಷ್ಟು?

    ಸಮರ್ಪಕವಾಗಿ ರಾಜ್ಯಗಳು ಬಳಸಿಕೊಳ್ಳಲಿ: ರಾಜ್ಯಗಳ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಹಾಗೂ ಅಭಿವೃದ್ಧಿ, ಕಲ್ಯಾಣ ಕಾರ್ಯಗಳ ವೆಚ್ಚಕ್ಕೆ ಆರ್ಥಿಕ ನೆರವು ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ದೇಶದ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಬುಧವಾರ ರಾತ್ರಿ ಒಟ್ಟಾರೆ 1,01,603 ಕೋಟಿ ರೂ. ತೆರಿಗೆ ಹಂಚಿಕೆಯನ್ನು ಮುಂಗಡ ಕಂತಾಗಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 10ರಂದು ಬಿಡುಗಡೆ ಆಗಬೇಕಾದ ಸಾಮಾನ್ಯ ಮಾಸಿಕ ಹಂಚಿಕೆ ಜೊತೆಗೇ ಈ ಹೆಚ್ಚುವರಿ ತೆರಿಗೆ ಪಾಲಿನ ಹಣವೂ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳಿಗೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.

    ರೈತರಿಗೆ ಬೆಂಬಲ ಬೆಲೆ ತಲುಪಿಸಿ: ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಾಂತ ವಿಪರೀತ ಮಳೆಯಿಂದ ರೈತರು ಬೆಳೆಹಾನಿಗೆ ಒಳಗಾಗಿದ್ದಾರೆ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಯ ನೆರವು ಕಲ್ಪಿಸಿದೆ. ರಾಜ್ಯ ಸರ್ಕಾರ ಅನ್ನದಾತರಿಗೆ ಇದನ್ನು ಸಮರ್ಪಕವಾಗಿ ತಲುಪಿಸಲಿ ಎಂದು ಒತ್ತಾಯಿಸಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ವಿಶೇಷವಾಗಿ ಕರ್ನಾಕಟದ ರೈತರಿಗಾಗಿಯೇ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದಿನಕಾಳು, ಸೋಯಾಬಿನ್‌, ಶೇಂಗಾ ಮತ್ತು ಸೋಯಾಬಿನ್‌ ಖರೀದಿಗೆ ಸೂಚಿಸಿದ್ದ ಕೇಂದ್ರ ಸರ್ಕಾರ, ಇದೀಗ ಹಿಂಗಾರು ಹಂಗಾಮಿನ ದ್ವಿದಳ ಧಾನ್ಯಗಳು ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆಯನ್ನೂ ಹೆಚ್ಚಿಸಿ ರೈತರ ನೆರವಿಗೆ ಬಂದಿದೆ.

    ಮುಂಬರುವ ಹಿಂಗಾರು ಹಂಗಾಮಿನ ಮಾರುಕಟ್ಟೆಯಲ್ಲಿ ಖರೀದಿಸುವ ಗೋಧಿ, ಕುಸುಬೆ, ಬಾರ್ಲಿ, ಮಸೂರ್‌, ಸಾಸಿವೆ, ಕಡಲೆ ಹೀಗೆ ವಿವಿಧ ಧಾನ್ಯಗಳಿಗೆ ಕೇಂದ್ರ ಸರ್ಕಾರ ಈ ಬಾರಿ ಅತಿ ಹೆಚ್ಚಿನ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಇದರ ಲಾಭವನ್ನು ಸಮರ್ಪಕವಾಗಿ ಒದಗಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್‌ – ಡಿಎ 3% ಏರಿಕೆ

  • ತೆರಿಗೆ ಪಾಲು| ಕರ್ನಾಟಕಕ್ಕೆ 3,705 ಕೋಟಿ, ಬಿಹಾರಕ್ಕೆ ಬಂಪರ್‌- ಯಾವ ರಾಜ್ಯಕ್ಕೆ ಎಷ್ಟು?

    ತೆರಿಗೆ ಪಾಲು| ಕರ್ನಾಟಕಕ್ಕೆ 3,705 ಕೋಟಿ, ಬಿಹಾರಕ್ಕೆ ಬಂಪರ್‌- ಯಾವ ರಾಜ್ಯಕ್ಕೆ ಎಷ್ಟು?

    ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ (Karnataka)  ರಾಜ್ಯಕ್ಕೆ ತೆರಿಗೆ ಪಾಲಿನ (Tax Devolution) ಕಂತಿನ ರೂಪದಲ್ಲಿ 3,705 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

    ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಒಟ್ಟು 1,01,603 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಇದು ಅಕ್ಟೋಬರ್ 10 ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ ಹಂಚಿಕೆ 81,735 ಕೋಟಿ ರೂ. ಜೊತೆಗೆ ಹೆಚ್ಚುವರಿಯಾಗಿದೆ ಎಂದು ಹೇಳಿದೆ. ಅತಿ ಹೆಚ್ಚು ಹಣ ಉತ್ತರ ಪ್ರದೇಶಕ್ಕೆ 18,227 ಕೋಟಿ ರೂ., ಚುನಾವಣೆ ನಡೆಯಲಿರುವ ಬಿಹಾರಕ್ಕೆ (Bihar) 10,219 ಕೋಟಿ ರೂ. ಹಂಚಿಕೆಯಾಗಿದೆ.  ಇದನ್ನೂ ಓದಿ:  57 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಅಸ್ತು

    ಯಾವ ರಾಜ್ಯಕ್ಕೆ ಎಷ್ಟು?
    ಬಿಹಾರ: 10,219 ಕೋಟಿ ರೂ.
    ಛತ್ತೀಸ್‌ಗಢ: 3,462 ಕೋಟಿ ರೂ.
    ಗೋವಾ: 392 ಕೋಟಿ ರೂ.
    ಗುಜರಾತ್: 3,534 ಕೋಟಿ ರೂ.
    ಹರಿಯಾಣ: 1,111 ಕೋಟಿ ರೂ.

    ಹಿಮಾಚಲ ಪ್ರದೇಶ: 843 ಕೋಟಿ ರೂ.
    ಜಾರ್ಖಂಡ್: 3,360 ಕೋಟಿ ರೂ.
    ಕರ್ನಾಟಕ: 3,705 ಕೋಟಿ ರೂ.
    ಕೇರಳ: 1,956 ಕೋಟಿ ರೂ.
    ಮಧ್ಯಪ್ರದೇಶ: 7,976 ಕೋಟಿ ರೂ.

    ಮಹಾರಾಷ್ಟ್ರ: 6,418 ಕೋಟಿ ರೂ.
    ಮಣಿಪುರ: 727 ಕೋಟಿ ರೂ.
    ಮೇಘಾಲಯ: 779 ಕೋಟಿ ರೂ.
    ಮಿಜೋರಾಂ: 508 ಕೋಟಿ ರೂ.
    ನಾಗಾಲ್ಯಾಂಡ್: 578 ಕೋಟಿ ರೂ. ಇದನ್ನೂ ಓದಿ:  RSS ಶತಮಾನೋತ್ಸವ – ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ

    ಒಡಿಶಾ: 4,601 ಕೋಟಿ ರೂ.
    ಪಂಜಾಬ್: 1,836 ಕೋಟಿ ರೂ.
    ರಾಜಸ್ಥಾನ: 6,123 ಕೋಟಿ ರೂ.
    ಸಿಕ್ಕಿಂ: 394 ಕೋಟಿ ರೂ.
    ತಮಿಳುನಾಡು: 4,144 ಕೋಟಿ ರೂ.

    ತೆಲಂಗಾಣ: 2,136 ಕೋಟಿ ರೂ.
    ತ್ರಿಪುರ:719 ಕೋಟಿ ರೂ.
    ಉತ್ತರ ಪ್ರದೇಶ: 18,227 ಕೋಟಿ ರೂ.
    ಉತ್ತರಾಖಂಡ: 1,136 ಕೋಟಿ ರೂ.
    ಪಶ್ಚಿಮ ಬಂಗಾಳ: 7,644 ಕೋಟಿ ರೂ.

  • ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ; ಪ್ರತಿ ಟಿಕೆಟ್‍ಗೆ ಇಷ್ಟೇ ಬೆಲೆ

    ಇನ್ಮುಂದೆ ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ; ಪ್ರತಿ ಟಿಕೆಟ್‍ಗೆ ಇಷ್ಟೇ ಬೆಲೆ

    ಬೆಂಗಳೂರು: ಮಲ್ಟಿಪ್ಲೆಕ್ಸ್‌ ಥಿಯೇಟರ್‌ಗಳಲ್ಲಿ (Multiplex Theatre) ನಡೆಯುತ್ತಿದ್ದ ಲೂಟಿಗೆ ಕೊನೆಗೂ ರಾಜ್ಯ ಸರ್ಕಾರ ಕಡಿವಾಣ ಹಾಕಿದ್ದು, ಸಿನಿಮಾ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ ಮಾಡಿ ರಾಜ್ಯ ಸರ್ಕಾರ (Karnataka Government) ಇಂದು ಅಧಿಸೂಚನೆ ಹೊರಡಿಸಿದೆ.

    ಟಿಕೆಟ್‌ ದರ ಎಷ್ಟು?
    ಇನ್ಮುಂದೆ ರಾಜ್ಯದ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರಮಂದಿಗಳಲ್ಲಿ, ಎಲ್ಲಾ ಭಾಷಯ ಚಿತ್ರಗಳಿಗೆ ಹಾಗೂ ಎಲ್ಲಾ ಪ್ರದರ್ಶನಕ್ಕೆ ಎಲ್ಲಾ ರೀತಿಯ ತೆರಿಗೆ ಹೊರತುಪಡಿಸಿ ಟಿಕೆಟ್‌ ದರ (Cinema Ticket Price) 200 ರೂ. ಮೀರದಂತೆ ಆದೇಶದಲ್ಲಿ ತಿಳಿಸಿದೆ. 75 ಆಸನಗಳು ಅಥವಾ ಅದಕ್ಕಿಂತ ಕಡಿಮೆ ಆಸನಗಳ ಪ್ರಿಮಿಯಂ ಸೌಲಭ್ಯವಿರುವ ಬಹುಪರದೆ ಚಿತ್ರ ಮಂದಿರಗಳನ್ನು ನಿಗದಿಪಡಿಸಿರುವ 200 ರೂ.ಗಳ ಗರಿಷ್ಠ ಟಿಕೆಟ್‌ ದರ ಮಿತಿಯಿಂದ ಹೊರಗಿಟ್ಟಿದೆ.

    ದರ ಕಡಿಮೆಯಾಗಿದ್ದು ಯಾಕೆ?
    ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ. ಒಂದೊಂದು ಮಾಲ್ ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನ ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್, ಆಂಧ್ರಪ್ರದೇಶದಲ್ಲಿ ಗರಿಷ್ಠ 150 ರೂ. ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

    ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.

    ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ಹಿನ್ನೆಲೆ ಏಕರೂಪ ದರ ನಿಗಡಿಮಾಡಿ ರಾಜ್ಯ ಸರ್ಕಾರ ಆದೇಶ ಹೊಡಿಸಿದೆ.

  • ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

    ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ – ಸೆ.22 ರಿಂದ ಜಾರಿ| ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ

    –  ಇನ್ಶೂರೆನ್ಸ್ ಜಿಎಸ್‌ಟಿ ಮುಕ್ತ, ಜೀವರಕ್ಷಕ ಔಷಧಿಗಳ ಬೆಲೆ ಇಳಿಕೆ
    – ದಿನಬಳಕೆ, ಎಲೆಕ್ಟ್ರಿಕ್‌ ವಸ್ತುಗಳು ಅಗ್ಗ

    ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ ಸಿಹಿಸುದ್ದಿ ನೀಡಿದ್ದು 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ (GST Slab) ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ.

    ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ ಐಷರಾಮಿ ವಸ್ತುಗಳಿಗೆ 40% ಜಿಎಸ್‌ಟಿಯ ಸ್ಲ್ಯಾಬ್ ಅನ್ವಯವಾಗಲಿದೆ.

    ದೆಹಲಿಯಲ್ಲಿ ಎರಡು ದಿನಗಳ ಕಾಲ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯುತ್ತಿದ್ದು ಮೊದಲ ದಿನದ ಸಭೆಯ ಬಳಿಕ ಬುಧವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman),  ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಸ್ಲ್ಯಾಬ್‌ ಬದಲಾವಣೆ ಮಾಡಲಾಗಿದೆ. ದಿನ ಬಳಕೆ ವಸ್ತುಗಳು, ಆರೋಗ್ಯ ವಲಯ ಸೇರಿ ಹಲವು ವಲಯಗಳಿಗೆ ಅನುಕೂಲವಾಗಲಿದೆ. ಸಾಕಷ್ಟು ಚರ್ಚೆ ಬಳಿಕ ನಿರ್ಧಾರಕ್ಕೆ ಬರಲಾಗಿದ್ದು ಎಲ್ಲರೂ ಒಮ್ಮತದಿಂದ ಬೆಂಬಲವನ್ನು ನೀಡಿದ್ದಾರೆ. ಇದಕ್ಕಾಗಿ ನಾನು ಜಿಎಸ್‌ಟಿ ಕೌನ್ಸಿಲ್ ನ ಎಲ್ಲ ಸದಸ್ಯರಿಗೂ ಅಭಾರಿಯಾಗಿದ್ದಾನೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿಯವರು ಈ ದೀಪಾವಳಿಗೆ ಜನರಿಗೆ ಗಿಫ್ಟ್‌ ನೀಡಲಾಗುವುದು ಎಂದು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ತಿಳಿಸಿದ್ದರು. ಆದರೆ ದೀಪಾವಳಿಗೂ ಮೊದಲೇ ದಸರಾ ಸಮಯದಲ್ಲಿ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ.

    ಸರ್ಕಾರಗಳು ಈ ವಸ್ತುಗಳ ಮೇಲೆ ಯಾವುದೇ ಹೆಚ್ಚುವರಿ ಸುಂಕ, ಸೆಸ್‌ ವಿಧಿಸುವುದಿಲ್ಲ ಎಂದು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದೆ. 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಅಡಿ ವಸ್ತುಗಳಿಗೆ  5% , 12%, 18%, 28 % ತೆರಿಗೆ ವಿಧಿಸಲಾಗುತ್ತಿತ್ತು.

    ದುಬಾರಿಯಾದ ವಸ್ತುಗಳು
    ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು: ಸಿಗರೇಟ್, ಸಿಗಾರ್, ಗುಟ್ಕಾ, ಪಾನ್ ಮಸಾಲ, ತಂಬಾಕು ಆಧಾರಿತ ಅಗೆಯುವ ವಸ್ತುಗಳು

    ಈ ವಸ್ತುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮದಿಂದಾಗಿ 96% ವರೆಗೆ ವಿವಿಧ ಸೆಸ್

    ಸಕ್ಕರೆ-ಸಿಹಿಗೊಳಿಸಿದ ಪಾನೀಯಗಳು: ಕಾರ್ಬೊನೇಟೆಡ್ ಪಾನೀಯಗಳು, ಎನರ್ಜಿ ಡ್ರಿಂಕ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳು

    ಈ ಹಿಂದೆ 28% ತೆರಿಗೆ ವಿಧಿಸಲಾಗಿದ್ದ ಪಾನೀಯಗಳು ಈಗ ಆಯ್ದ ವಸ್ತುಗಳ ಮೇಲೆ 40% ಸ್ಲ್ಯಾಬ್ ಜೊತೆಗೆ 12% ಸೆಸ್ ಅನ್ನು ವಿಧಿಸಲಾಗಿದೆ.

    ಜೂಜು ಮತ್ತು ಬೆಟ್ಟಿಂಗ್: ಲಾಟರಿ ಟಿಕೆಟ್‌ಗಳು, ಕ್ಯಾಸಿನೊ ಸೇವೆಗಳು ಮತ್ತು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೆಲವು ಸಂದರ್ಭಗಳಲ್ಲಿ ಹೆಚ್ಚುವರಿ ಸೆಸ್ ಇಲ್ಲದೆ 40% ತೆರಿಗೆ

    ಐಷಾರಾಮಿ ವಾಹನಗಳು: 1,500 ಸಿಸಿ ಎಂಜಿನ್‌ಗಿಂತ ಹೆಚ್ಚಿನ ಸಾಮರ್ಥ್ಯದ ಎಸ್‌ಯುವಿಗಳಂತಹ ಉನ್ನತ ದರ್ಜೆಯ ಕಾರುಗಳು ಮತ್ತು 4 ಮೀಟರ್‌ಗಿಂತ ಉದ್ದದ ವಾಹನಗಳು 40% ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ, ಜೊತೆಗೆ 22% ಪರಿಹಾರ ಸೆಸ್ ಕೂಡ ಸೇರುತ್ತದೆ.

    ಸಂಸ್ಕರಿಸಿದ ಜಂಕ್ ಫುಡ್‌ಗಳು: ಹೆಚ್ಚಿನ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕ್ ಮಾಡಿದ ತಿಂಡಿಗಳಂತಹ ವಸ್ತುಗಳು ಸಹ 40% ಏರಿಕೆ

  • ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್‌ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?

    ದೀಪಾವಳಿಗೆ ದೇಶವಾಸಿಗಳಿಗೆ ಗಿಫ್ಟ್‌ – ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ?

    – ಜೀವರಕ್ಷಕ ಔಷಧಿಗಳು, ಇನ್ಶೂರೆನ್ಸ್ ಜಿಎಸ್‌ಟಿ ಮುಕ್ತ ಸಾಧ್ಯತೆ
    – ದಿನಬಳಕೆ, ಎಲೆಕ್ಟ್ರಿಕ್‌ ವಸ್ತುಗಳು ಅಗ್ಗ

    ನವದೆಹಲಿ: ದೀಪಾವಳಿಗೆ (Deepavali) ದೇಶವಾಸಿಗಳಿಗೆ ಗಿಫ್ಟ್ ಸಿಗಲಿದೆ ಎಂದು ಪ್ರಧಾನಿ ಮೋದಿ (Narendra Modi) ಅವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಘೋಷಣೆ ಮಾಡಿದ್ದರು. ಅದರಂತೆಯೇ 8 ವರ್ಷಗಳ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ (GST Slab) ಪರಿಷ್ಕರಣೆ ಮಾಡಲಾಗುತ್ತಿದೆ.

    ಹಾಲಿ ಇರುವ ಶೇ.5, ಶೇ.12, ಶೇ.8 ಶೇ.28 ತೆರಿಗೆ ಪದ್ಧತಿ ಬದಲಿಗೆ 2 ಸ್ಲ್ಯಾಬ್‌ಗಳಿಗೆ ಅಂದರೆ ಶೇ.5 ಹಾಗೂ ಶೇ.18ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ `ಲಾಭ & ಪಾಪ’ ಟ್ಯಾಕ್ಸ್ ಅಂತ ಹೆಸರಿಡಲಾಗ್ತಿದೆ. ಈ ಪ್ರಸ್ತಾಪಕ್ಕೆ ಈಗಾಗಲೇ ಜಿಎಸ್‌ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿ ಒಪ್ಪಿಗೆ ಸೂಚಿಸಿದೆ.

    ದೆಹಲಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿರುವ ಜಿಎಸ್‌ಟಿ ಕೌನ್ಸಿಲ್‌ (GST Council ಸಭೆ ನಡೆಯುತ್ತಿದ್ದು ಜಿಎಸ್‌ಟಿ ಮಂಡಳಿಯ ಸಚಿವರ ಮಟ್ಟದ ಸಮಿತಿಯ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

    ಶೇ.12 ರ ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು ಶೇ.5 ಕ್ಕೆ ಇಳಿಕೆ ಹಾಗೂ ಶೇ.28 ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು ಶೇ.18ಕ್ಕೆ ಇಳಿಸಲು ತೀರ್ಮಾನವಾಗಿದೆ. ಹೊಸ ಜಿಎಸ್‌ಟಿ ಪದ್ಧತಿಯಿಂದ ಕರ್ನಾಟಕ ಸರ್ಕಾರಕ್ಕೆ 15 ಸಾವಿರ ಕೋಟಿ ರೂ. ತೆರಿಗೆ ನಷ್ಟವಾಗುವ ಸಾಧ್ಯತೆಯಿದೆ. ಕರ್ನಾಟಕದ ಪರವಾಗಿ ಸಚಿವ ಕೃಷ್ಣ ಬೈರೇಗೌಡ ಜಿಎಸ್‌ಟಿ ಸಭೆಯಲ್ಲಿ ಭಾಗಿ ಆಗಿದ್ದಾರೆ. ಇದನ್ನೂ ಓದಿ: ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

    ಯಾವುದು ಅಗ್ಗ?
    ಆರೋಗ್ಯ: ಜೀವ ರಕ್ಷಕ ಔಷಧಿಗಳು ಅಗ್ಗ
    ಕ್ಯಾನ್ಸರ್ ಔಷಧಿಗೆ ಜಿಎಸ್‌ಟಿಯೇ ಇಲ್ಲ
    ಅಗತ್ಯ ಔಷಧಿಗಳು ಶೇ.12ರಿಂದ ಶೇ.5ಕ್ಕೆ ಇಳಿಕೆ
    ವೈಯಕ್ತಿಕ ಹೆಲ್ತ್ & ಲೈಫ್ ಇನ್ಶುರೆನ್ಸ್‌ಗೆ ಜಿಎಸ್‌ಟಿ ಇಲ್ಲ

    ದಿನ ಬಳಕೆ ವಸ್ತುಗಳು – ಶೇ.12ರಿಂದ ಶೇ.5ಕ್ಕೆ ಇಳಿಕೆ
    ಪನೀರ್, ಪಿಜ್ಜಾ ಬ್ರೆಡ್, ಹಪ್ಪಳ, ಹಣ್ಣಿನ ರಸ, ಎಳನೀರು, ಬಟರ್, ಚೀಸ್, ಪಾಸ್ತಾ & ಐಸ್‌ಕ್ರೀಂ)

    ಆಟೋಮೊಬೈಲ್ – ಶೇ.28ರಿಂದ ಶೇ.18ಕ್ಕೆ ಇಳಿಕೆ
    1200 ಸಿಸಿ ಒಳಗಿನ ಸಣ್ಣ ಕಾರುಗಳು + 350 ಸಿಸಿ ಒಳಗಿನ ಬೈಕ್‌ಗಳು + ವಾಹನಗಳ ಬಿಡಿ ಭಾಗಗಳು

    ವಸತಿ ಆತಿಥ್ಯ & ಮನರಂಜನೆ – ಶೇ.12ರಿಂದ ಶೇ.5ಕ್ಕೆ ಇಳಿಕೆ
    ಹೊಟೇಲ್ ವಾಸ್ತವ್ಯ + ಸಿನಿಮಾ ಟಿಕೆಟ್‌ಗಳು

    ಬುಕ್ಕಿಂಗ್ – ಶೇ.12ರಿಂದ ಶೇ.5ಕ್ಕೆ ಇಳಿಕೆ
    7,500 ರೂ. ಮೇಲ್ಪಟ್ಟ ಬುಕ್ಕಿಂಗ್‌ಗೆ

    ಕೃಷಿ & ರಸಗೊಬ್ಬರ : ಶೇ.18ರಿಂದ ಶೇ.5ಕ್ಕೆ ಇಳಿಕೆ
    ಸಲ್ಫರಿಕ್ ಆಸಿಡ್, ನೈಟ್ರಿಕ್ ಆಸಿಡ್, ಅಮೋನಿಯಾ

    ಜವಳಿ: ಶೇ.12ರಿಂದ ಶೇ.5ಕ್ಕೆ ಇಳಿಕೆ
    ಸಿಂಥೆಟಿಕ್ ನೂಲು, ಕೈಯಿಂದ ಫೈಬರ್ ನೂಲು, ಕಾರ್ಪೆಟ್, ಕರಕುಶಲ ವಸ್ತುಗಳು)

    ಸೋಲಾರ್ ಕುಕ್ಕರ್: ಶೇ.12ರಿಂದ ಶೇ.5ಕ್ಕೆ ಇಳಿಕೆ

    ಲೇಖನ ಸಾಮಾಗ್ರಿ – ಶೇ.12ರಿಂದ ಶೇ.5ಕ್ಕೆ ಇಳಿಕೆ
    ಮ್ಯಾಪ್, ಚಾರ್ಟ್‌ಗಳು, ನೋಟ್‌ಬುಕ್‌ಗಳು, ಪೆನ್ಸಿಲ್ **ರಬ್ಬರ್ – ಮೊದಲು ಶೇ.12ರಷ್ಟಿತ್ತು. ಈಗ ಜಿಎಸ್‌ಟಿ ಇಲ್ಲ. )

    ಬಾತ್‌ರೂಮ್ ವಸ್ತುಗಳು
    ಟೂಥ್‌ಪೌಡರ್ (ಶೇ.12ರಿಂದ ಶೇ.5ಕ್ಕೆ ಇಳಿಕೆ)
    ಟೂಥ್‌ಪೇಸ್ಟ್ (ಶೇ.18ರಿಂದ ಶೇ.5ಕ್ಕೆ ಇಳಿಕೆ)
    ಶಾಂಪೂ, ಸೋಪು, ಎಣ್ಣೆ (ಶೇ.18ರಿಂದ ಶೇ.5ಕ್ಕೆ ಇಳಿಕೆ)
    ಛತ್ರಿ: ಶೇ.12ರಿಂದ ಶೇ.5ಕ್ಕೆ ಇಳಿಕೆ ಇದನ್ನೂ ಓದಿ:  2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್‌, ಅಫ್ಘಾನ್‌, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ

    ಯಾವುದು ದುಬಾರಿ?
    ಶೇ.40 ಜಿಎಸ್‌ಟಿ
    ತಂಬಾಕು & ಪಾನ್ ಮಸಾಲ ( ಪಾಪದ ಸುಂಕ)
    ಐಷಾರಾಮಿ ವಾಹನಗಳು
    20-40 ಲಕ್ಷ ಬೆಲೆಯ ಎಲೆಕ್ಟ್ರಿಕ್‌ ವಾಹನಗಳು – ಶೇ.5ರಿಂದ ಶೇ.18ಕ್ಕೆ ಏರಿಕೆ
    40 ಲಕ್ಷ ರೂ. ಮೀರಿದ ಐಷಾರಾಮಿ ಇವಿಗಳು – ಶೇ.40

    ಕಲ್ಲಿದ್ದಲು ಮತ್ತು ಕೆಲವು ಇಂಧನ ಉತ್ಪನ್ನಗಳು – ಶೇ.5ರಿಂದ ಶೇ.18ಕ್ಕೆ ಏರಿಕೆ
    ಸೆಸ್ ತೆಗೆದುಹಾಕಿದ ನಂತರ ಕಲ್ಲಿದ್ದಲು 5% ರಿಂದ 18% ಕ್ಕೆ ಏರಬಹುದು, ಇದು ವಿದ್ಯುತ್ ಉತ್ಪಾದಕರಿಗೆ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ವಿದ್ಯುತ್ ಸುಂಕಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
    2,500 ರೂ.ಗಿಂತ ಹೆಚ್ಚಿನ ಬೆಲೆಯ ಬಟ್ಟೆಗಳು – 12% ರಿಂದ 18%ಕ್ಕೆ ಏರಿಕೆ

  • ಇಂದು ಜಿಎಸ್‌ಟಿ ಮಂಡಳಿ ಸಭೆ: ತೆರಿಗೆ ಕಡಿತ, 2-ಸ್ಲ್ಯಾಬ್ ರಚನೆ ಬಗ್ಗೆ ಪ್ರಮುಖ ನಿರ್ಧಾರ ಸಾಧ್ಯತೆ

    ಇಂದು ಜಿಎಸ್‌ಟಿ ಮಂಡಳಿ ಸಭೆ: ತೆರಿಗೆ ಕಡಿತ, 2-ಸ್ಲ್ಯಾಬ್ ರಚನೆ ಬಗ್ಗೆ ಪ್ರಮುಖ ನಿರ್ಧಾರ ಸಾಧ್ಯತೆ

    – ಎಂಟು ವರ್ಷಗಳ ಬಳಿಕ GST ವ್ಯವಸ್ಥೆಯಲ್ಲಿ ಪರಿಷ್ಕರಣೆ
    – ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆ

    ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಅತಿದೊಡ್ಡ ಬದಲಾವಣೆಗೆ ಕೇಂದ್ರ ಮುಂದಾಗಿದೆ. 8 ವರ್ಷಗಳ ಬಳಿಕ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪರಿಷ್ಕರಣೆಯಾಗಲಿದೆ. ಜಿಎಸ್‌ಟಿ ಮಂಡಳಿಯು ಇಂದಿನಿಂದ ಎರಡು ದಿನಗಳ ಸಭೆಯನ್ನು ಆರಂಭಿಸಲಿದೆ.

    ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ಮೂಲಕ ವ್ಯಾಪಕ ತೆರಿಗೆ ಪರಿಷ್ಕರಣೆಯ ವಿಚಾರ ಈಗಾಗಲೇ ಚರ್ಚೆಯ ಮೇಜಿನ ಮೇಲಿದೆ. ಸಭೆಯಲ್ಲಿ ಸ್ಲ್ಯಾಬ್ ಬದಲಾವಣೆ ಬಗ್ಗೆ ಬಹುಮತದಿಂದ ನಿರ್ಧಾರ‌ ಕೈಗೊಳ್ಳಲಾಗುವುದು. ಕೌನ್ಸಿಲ್‌ನ ಒಪ್ಪಿಗೆಯ ನಂತರ ಹೊಸ ದರಗಳ ಕುರಿತಾದ ಅಧಿಸೂಚನೆಗಳು 5-7 ದಿನಗಳಲ್ಲಿ ಜಾರಿಗೊಳ್ಳಬಹುದು. ಹೊಸ ನಿಯಮಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.

    ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆಗೆ ಕೇಂದ್ರ ಮುಂದಾಗಿದೆ. 5%, 12%, 18%, 28% ತೆರಿಗೆ ಪದ್ದತಿಗೆ ಪೂರ್ಣ ವಿರಾಮ ಹಾಕಿ, 5% ಮತ್ತು 18% ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. 12% ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು 5% ಗೆ ಮತ್ತು 28% ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು 18% ಇಳಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ.

    ಇಂದಿನಿಂದ ಎರಡು ದಿನ ದೆಹಲಿಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವ ವಹಿಸಲಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 31 ಸದಸ್ಯರು ಭಾಗಿಯಾಗಲಿದ್ದಾರೆ. ಒಟ್ಟು 33 ಸದಸ್ಯರ ಸಮ್ಮುಖದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ-ಬಾಧಕಗಳ ಬಳಿಕ ಬಹುಮತದ ಮೂಲಕ ನಿರ್ಧಾರ ಕೈಗೊಳ್ಳಲಾಗುವುದು.
    ಜಿಎಸ್‌ಟಿ ಪರಿಷ್ಕರಣೆಗೆ ಈಗಾಗಲೇ ಬಹುತೇಕ ರಾಜ್ಯಗಳು ಸಮ್ಮತಿ ಸೂಚಿಸಿವೆ.

    ಪ್ರಸುತ್ತ ವ್ಯವಸ್ಥೆಯಲ್ಲಿ ಯಾವ ಸ್ಲ್ಯಾಬ್‌ಗಳಲ್ಲಿ ಯಾವ ವಸ್ತುಗಳಿವೆ?

    0% GST ಯಾವುದೇ ತೆರಿಗೆ ಇಲ್ಲ
    ವಸ್ತುಗಳು
    * ತಾಜಾ ಹಾಲು, ತಾಜಾ ಹಣ್ಣುಗಳು ಮತ್ತು ತರಕಾರಿಗಳು (ಬ್ರ್ಯಾಂಡ್ ಇಲ್ಲದವು)
    * ಅಕ್ಕಿ, ಗೋಧಿ, ರಾಗಿ ಮತ್ತು ಇತರ ಧಾನ್ಯಗಳು (ಬ್ರ್ಯಾಂಡ್ ಇಲ್ಲದವು)
    * ಮಾಂಸ, ಮೀನು (ಪ್ಯಾಕ್ ಮಾಡದವು)
    * ನೈಸರ್ಗಿಕ ಜೇನು (ಬ್ರ್ಯಾಂಡ್ ಇಲ್ಲದವು)
    * ಸಿಂಧೂರ, ಕಂಕಣ, ಬಳೆಗಳು
    * ಸ್ಯಾನಿಟರಿ ನ್ಯಾಪ್‌ಕಿನ್‌ಗಳು
    * ಪುಸ್ತಕಗಳು, ಸ್ಲೇಟ್‌ಗಳು, ಪೆನ್ಸಿಲ್‌ಗಳು (ಶೈಕ್ಷಣಿಕ)

    ಸೇವೆಗಳು
    * ಆರೋಗ್ಯ ಸೇವೆಗಳು (ಆಸ್ಪತ್ರೆಗಳು, ಚಿಕಿತ್ಸೆ)
    * ಶಿಕ್ಷಣ ಸೇವೆಗಳು (ಶಾಲೆ, ಕಾಲೇಜುಗಳು)
    * ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ತೆರೆದ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ (BSBD) ಖಾತೆಗಳ ಸೇವೆಗಳು

    5% GST ( ಈ ಸ್ಲ್ಯಾಬ್‌ನಲ್ಲಿ ದೈನಂದಿನ ಅಗತ್ಯ ವಸ್ತುಗಳು ಮತ್ತು ಕೆಲವು ಸೇವೆಗಳು ಸೇರಿವೆ)
    ವಸ್ತುಗಳು
    * ಸಕ್ಕರೆ, ಚಹಾ, ಕಾಫಿ (ರೋಸ್ಟೆಡ್ ಕಾಫಿ ಬೀನ್ಸ್)
    * ಖಾದ್ಯ ತೈಲ (ಎಡಿಬಲ್ ಆಯಿಲ್)
    * ಔಷಧಿಗಳು (ಜೀವರಕ್ಷಕ ಔಷಧಿಗಳು ಸೇರಿದಂತೆ)
    * ದೇಶೀ ಸಿಹಿತಿಂಡಿಗಳು (ಬಾಂದ್‌ವಾಲೆ, ಲಾಡು)
    * ತೂಗು 500 ರೂ.ಗಿಂತ ಕಡಿಮೆ ಇರುವ ಶೂಗಳು
    * ಎಲ್‌ಪಿಜಿ ಸಿಲಿಂಡರ್ (ಗೃಹಬಳಕೆ)
    * ಪ್ಯಾಕ್ ಮಾಡಿದ ಆಹಾರ ವಸ್ತುಗಳು (ಬ್ರ್ಯಾಂಡ್‌ ಇರುವವು, ಉದಾ: ಪ್ಯಾಕ್ ಮಾಡಿದ ಹಾಲು)
    * ಕೃಷಿ ಉಪಕರಣಗಳು
    * ರೋಗನಿರ್ಣಯ ಕಿಟ್‌ಗಳು

    -ಸೇವೆಗಳು
    * ರೈಲು ಪ್ರಯಾಣ (ಸಾಮಾನ್ಯ ದರ್ಜೆ, ಸ್ಲೀಪರ್)
    * ಆರ್ಥಿಕ ದರ್ಜೆಯ ವಿಮಾನ ಟಿಕೆಟ್‌ಗಳು
    * ಟೂರ್ ಆಪರೇಟರ್ ಸೇವೆಗಳು
    * ಕೆಲವು ಜಾಬ್ ವರ್ಕ್ ಸೇವೆಗಳು

    12% GST (ಈ ಸ್ಲ್ಯಾಬ್‌ನಲ್ಲಿ ಸಾಮಾನ್ಯವಾಗಿ ಬಳಸುವ, ಆದರೆ ಅಗತ್ಯವಲ್ಲದ ವಸ್ತುಗಳು ಮತ್ತು ಸೇವೆಗಳು ಸೇರಿವೆ)
    ವಸ್ತುಗಳು
    * ಬೆಣ್ಣೆ, ತುಪ್ಪ, ಚೀಸ್
    * ಮೊಬೈಲ್ ಫೋನ್‌ಗಳು
    * ಫ್ರೂಟ್ ಜ್ಯೂಸ್, ಒಣಗಿದ ಹಣ್ಣುಗಳು
    * ಆಗರ್‌ಬತ್ತಿ
    * ಛತ್ರಿಗಳು
    * ರೋಸ್ಟೆಡ್ ಚಿಕೋರಿ
    * ಇಟ್ಟಿಗೆಗಳು
    * 500 ರೂ.ಗಿಂತ ಹೆಚ್ಚಿರುವ ಶೂಗಳು

    ಸೇವೆಗಳು
    * ರೈಲು ಸರಕು ಸಾಗಾಟ
    * ವಿಮಾನ ಪ್ರಯಾಣ (ಆರ್ಥಿಕ ದರ್ಜೆಯಲ್ಲದವು)
    * ರಿಯಲ್ ಎಸ್ಟೇಟ್‌ನಲ್ಲಿ ವಾಣಿಜ್ಯ ಮತ್ತು ವಸತಿ ಲಾವಾದೇವಿಗಳು
    * ಹೋಟೆಲ್ ಕೊಠಡಿಗಳು (ದಿನಕ್ಕೆ 1,000 ರೂ. ರಿಂದ 7,500 ರೂ. ವರೆಗೆ)

    18% GST (ಈ ಸ್ಲ್ಯಾಬ್‌ನಲ್ಲಿ ಹೆಚ್ಚಿನ ಗ್ರಾಹಕ ಉತ್ಪನ್ನಗಳು ಮತ್ತು ಸೇವೆಗಳು ಸೇರಿವೆ)
    ವಸ್ತುಗಳು
    * ಕೂದಲ ಎಣ್ಣೆ, ಟೂತ್‌ಪೇಸ್ಟ್, ಸಾಬೂನು
    * ಐಸ್ ಕ್ರೀಮ್
    * ಕಾಸ್ಮೆಟಿಕ್ಸ್ (ಪರ್ಫ್ಯೂಮ್, ಟಾಯ್‌ಲೆಟ್‌ರೀಸ್)
    * ಮೊಬೈಲ್ ಫೋನ್‌ಗಳು
    * ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು
    * ಪಾಸ್ಟಾ, ಕಾರ್ನ್‌ಫ್ಲೇಕ್ಸ್, ಬಿಸ್ಕತ್ತು
    * ಟಿವಿ (ನಿರ್ದಿಷ್ಟ ಗಾತ್ರದವರೆಗೆ)

    ಸೇವೆಗಳು
    * ಟೆಲಿಕಾಂ ಸೇವೆಗಳು
    * ರೆಸ್ಟೋರೆಂಟ್ ಸೇವೆಗಳು (ಆಲ್ಕೊಹಾಲ್ ಪರವಾನಗಿ ಇರುವವು)
    * ಈವೆಂಟ್ ಟಿಕೆಟ್‌ಗಳು
    * ಬಾಡಿಗೆ ಸೇವೆಗಳು
    * ಸಲಹಾ, ವೃತ್ತಿಪರ, ಕೊರಿಯರ್ ಮತ್ತು ಐಟಿ ಸೇವೆಗಳು
    * ಲೋನ್‌ಗಳ ಮೇಲಿನ ಪ್ರೊಸೆಸಿಂಗ್ ಶುಲ್ಕಗಳು (ಪ್ರಿನ್ಸಿಪಾಲ್ ಮತ್ತು ಬಡ್ಡಿಯ ಮೇಲೆ ಜಿಎಸ್‌ಟಿ ಇಲ್ಲ)

    28% GST (ಈ ಸ್ಲ್ಯಾಬ್‌ನಲ್ಲಿ ಐಷಾರಾಮಿ ವಸ್ತುಗಳು ಮತ್ತು ಸೇವೆಗಳು ಸೇರಿವೆ. ಕೆಲವು ವಸ್ತುಗಳಿಗೆ ಹೆಚ್ಚುವರಿ ಸೆಸ್ ಕೂಡ ವಿಧಿಸಲಾಗುತ್ತದೆ)
    ವಸ್ತುಗಳು
    * ಐಷಾರಾಮಿ ಕಾರುಗಳು, ಹೈ-ಎಂಡ್ ಮೋಟರ್‌ಸೈಕಲ್‌ಗಳು
    * ತಂಪು ಪಾನೀಯಗಳು (ಕೋಕ್, ಪೆಪ್ಸಿ)
    * ತಂಬಾಕು ಉತ್ಪನ್ನಗಳು, ಸಿಗರೇಟ್‌ಗಳು
    * ಎಸಿ, ರೆಫ್ರಿಜರೇಟರ್‌ಗಳು, ಡಿಶ್‌ವಾಶಿಂಗ್ ಮೆಷಿನ್‌ಗಳು
    * ಸಿಮೆಂಟ್
    * ಕಾಫಿ ಎಕ್ಸ್‌ಟ್ರಾಕ್ಟ್‌ಗಳು, ಎಸೆನ್ಸ್‌ಗಳು

    -ಸೇವೆಗಳು
    * ಗೇಮಿಂಗ್, ಜೂಜಾಟ, ಕ್ಯಾಸಿನೊಗಳು
    * ಐಷಾರಾಮಿ ಹೋಟೆಲ್ ವಸತಿಗಳು (ದಿನಕ್ಕೆ 7,500 ರೂ.ಗಿಂತ ಹೆಚ್ಚು)
    * ಅಮ್ಯೂಸ್‌ಮೆಂಟ್ ಪಾರ್ಕ್‌ಗಳು

    ವಿಶೇಷ ದರಗಳು
    * 0.25%: ಕಟ್ ಮಾಡಿದ ಮತ್ತು ಸೆಮಿ-ಪಾಲಿಶ್ ಮಾಡಿದ ಕಲ್ಲುಗಳು (ಉದಾ: ಡೈಮಂಡ್, ರತ್ನಗಳು)
    * 3%**: ಚಿನ್ನ, ಬೆಳ್ಳಿ, ಆಭರಣಗಳು (ಜಾಬ್ ವರ್ಕ್‌ಗೆ 5% ಜಿಎಸ್‌ಟಿ)
    * ಸೆಸ್ : ತಂಬಾಕು, ಏರಿಯೇಟೆಡ್ ವಾಟರ್, ಪೆಟ್ರೋಲ್, ಮೋಟಾರ್ ವಾಹನಗಳ ಮೇಲೆ 1% ರಿಂದ 204% ವರೆಗೆ ಸೆಸ್ ವಿಧಿಸಲಾಗುತ್ತದೆ.

    ಯಾವ ವಸ್ತುಗಳ ಬೆಲೆಯಲ್ಲಿ ನಿರೀಕ್ಷೆ ಮಾಡಬಹುದು?
    1. 12% ರಿಂದ 5% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
    – ಆಹಾರ ಉತ್ಪನ್ನಗಳು: ಪ್ಯಾಕ್ ಮಾಡಿದ ಒಣಗಿದ ಹಣ್ಣುಗಳು, ಫ್ರೂಟ್ ಜ್ಯೂಸ್, ದೇಶೀ ಸಿಹಿತಿಂಡಿಗಳು
    – ಗೃಹೋಪಯೋಗಿ ವಸ್ತುಗಳು: ಛತ್ರಿಗಳು, ಕೃಷಿ ಉಪಕರಣಗಳು, ಕೆಲವು ರೀತಿಯ ಶೂಗಳು (500 ರೂ.ಗಿಂತ ಹೆಚ್ಚಿನ ಬೆಲೆಯವು)
    – ಇತರೆ: ಆಗರ್‌ಬತ್ತಿ, ಕೆಲವು ಇಟ್ಟಿಗೆಗಳು, ಕೆಲವು ರೀತಿಯ ಬಟ್ಟೆಗಳು (ಗಾರ್ಮೆಂಟ್ಸ್)

    2. 28% ರಿಂದ 18% ಕ್ಕೆ ಸ್ಥಳಾಂತರಗೊಳ್ಳುವ ವಸ್ತುಗಳು
    – ಗೃಹೋಪಯೋಗಿ ಉಪಕರಣಗಳು;
    * ಏರ್ ಕಂಡಿಷನರ್‌ಗಳು (ಎಸಿ)
    * ರೆಫ್ರಿಜರೇಟರ್‌ಗಳು
    * ಟಿವಿಗಳು (32 ಇಂಚಿಗಿಂತ ದೊಡ್ಡವು)
    * ಡಿಶ್‌ವಾಶಿಂಗ್ ಮೆಷಿನ್‌ಗಳು

    – ದೈನಂದಿನ ಬಳಕೆಯ ವಸ್ತುಗಳು:
    * ಟೂತ್‌ಪೇಸ್ಟ್, ಸಾಬೂನು, ಶಾಂಪೂ
    * ಕಾಸ್ಮೆಟಿಕ್ಸ್ (ಕೆಲವು ರೀತಿಯವು)
    * ಏರ್ ಆಯಿಲ್

    ಇತರೆ
    * ಸಿಮೆಂಟ್
    * ಪೇಂಟ್ ಮತ್ತು ವಾರ್ನಿಷ್
    * ಸೆರಾಮಿಕ್ ಟೈಲ್ಸ್
    * ಸ್ಯಾನಿಟರಿ ವೇರ್
    * ಕೆಲವು ಎಲೆಕ್ಟ್ರಾನಿಕ್ಸ್ (ಕಂಪ್ಯೂಟರ್ ಮಾನಿಟರ್‌ಗಳು, ಪ್ರಿಂಟರ್‌ಗಳು)

    3. ವಿಶೇಷ ವಿನಾಯಿತಿಗಳು:
    * ಆರೋಗ್ಯ ಮತ್ತು ಜೀವ ವಿಮೆ : ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಪ್ರಸ್ತಾವನೆ ಇದೆ. ಇದರಿಂದ ವಿಮಾ ಪ್ರೀಮಿಯಂಗಳ ಬೆಲೆ ಗಣನೀಯವಾಗಿ ಕಡಿಮೆಯಾಗಬಹುದು, ವಿಶೇಷವಾಗಿ ಮಧ್ಯಮ ವರ್ಗದವರಿಗೆ ಇದು ದೊಡ್ಡ ಉಳಿತಾಯವನ್ನು ಒದಗಿಸುತ್ತದೆ

    * ಕೃಷಿ, ಜವಳಿ, ಫಲವತ್ತತೆ, ನವೀಕರಿಸಬಹುದಾದ ಶಕ್ತಿ, ಆರೋಗ್ಯ, ಕರಕುಶಲ ವಸ್ತುಗಳು, ಸಾರಿಗೆ : ಈ ಕ್ಷೇತ್ರಗಳಲ್ಲಿನ ಉತ್ಪನ್ನಗಳು 5% ಸ್ಲ್ಯಾಬ್‌ಗೆ ಸ್ಥಳಾಂತರಗೊಂಗಲಿವೆ, ಇದರಿಂದ ರೈತರು, ಕಿರು-ಸಣ್ಣ ಉದ್ದಿಮೆಗಳು (MSMEs) ಮತ್ತು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನವಾಗಲಿದೆ.

    * ನಿರ್ಮಾಣ ವಸ್ತುಗಳು: ಸಿಮೆಂಟ್ (28% ರಿಂದ 18%), ಸ್ಟೀಲ್ (18% ರಿಂದ 5% ಕ್ಕೆ ಸಂಭಾವ್ಯ ಸ್ಥಳಾಂತರ), ಪೇಂಟ್, ಸೆರಾಮಿಕ್ ಟೈಲ್ಸ್, ಮತ್ತು ಸ್ಯಾನಿಟರಿ ವೇರ್‌ಗಳ ಮೇಲಿನ ಜಿಎಸ್‌ಟಿ ಕಡಿಮೆಯಾದರೆ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ಅಂಡರ್-ಕನ್‌ಸ್ಟ್ರಕ್ಷನ್ ವಸತಿ ಯೋಜನೆಗಳ ಬೆಲೆ ಕಡಿಮೆಯಾಗಬಹುದು, ಇದು ಗೃಹ ಖರೀದಿದಾರರಿಗೆ ಪ್ರಯೋಜನಕಾರಿಯಾಗಿದೆ.

    ಈ ಕ್ರಮದಿಂದ ಮಧ್ಯಮ ವರ್ಗಕ್ಕೆ ತೆರಿಗೆ ಭಾರ ಇಳಿಕೆ, ಶ್ರೀಮಂತರಿಗೆ ಹೊರೆಯಾಗಲಿದೆ. ಐಷರಾಮಿ ವಸ್ತುಗಳ ಮೇಲಿನ ತೆರಿಗೆ ಏರಿಕೆಗೆ ತಯಾರಿ ನಡೆದಿದ್ದು, 5%, 18% ಜೊತೆಗೆ 40% ಹೊಸ ಸ್ಲ್ಯಾಬ್ ಸೇರ್ಪಡೆ ಆಗಲಿದೆ. ತಂಬಾಕು, ಪಾನ್ ಮಸಾಲ, ಏರಿಯೇಟೆಡ್ ಪಾನೀಯಗಳು, ಐಷಾರಾಮಿ ಕಾರುಗಳು, ಮತ್ತು ಆನ್‌ಲೈನ್ ಗೇಮಿಂಗ್‌ನಂತಹ ಉತ್ಪನ್ನಗಳು ಮೇಲೆ ತೆರಿಗೆ ಏರಿಕೆ ಆಗಬಹುದು. 28% ರಿಂದ 40% ಏರಿಕೆಗೆ ಸರ್ಕಾರದ ಚಿಂತನೆ ನಡೆಸಿದೆ. ಕೆಲವು ಐಷಾರಾಮಿ ವಾಹನಗಳು 40% ಸ್ಲ್ಯಾಬ್‌ಗೆ ಸೇರಬಹುದು.

  • ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

    ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

    ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಲ್ಲಿ (GST) 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದು ಹಾಕಲು ಸಚಿವರ ಸಮಿತಿ (Group of Ministers) ಒಪ್ಪಿಗೆ ನೀಡಿದೆ.

     ಸಚಿವರ ಸಮಿತಿಯ ಸಂಚಾಲಕ ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಪ್ರತಿಕ್ರಿಯಿಸಿ ಕೇಂದ್ರವು ಮಾಡಿದ ಪ್ರಸ್ತಾವನೆಗಳ ಕುರಿತು ಕೆಲ ರಾಜ್ಯಗಳು ಸಲಹೆಗಳನ್ನು ನೀಡಿವೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿ (GST Council) ಇವುಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

    ಸಚಿವರ ಸಮಿತಿ ಒಪ್ಪಿಗೆ ನೀಡದ ಬಳಿಕ  ಪ್ರಸ್ತಾಪ  ಅಂತಿಮವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಮತ್ತು ಎಲ್ಲಾ ರಾಜ್ಯಗಳ ಮಂತ್ರಿಗಳನ್ನು ಸದಸ್ಯರನ್ನಾಗಿ ಹೊಂದಿರುವ ಜಿಎಸ್‌ಟಿ ಮಂಡಳಿಗೆ ಹೋಗಲಿದೆ. ಈ ಮಂಡಳಿಯೂ ರಾಜ್ಯಗಳ ಪಾಲು ಮತ್ತು ಆದಾಯ ನಷ್ಟಕ್ಕೆ ಪರಿಹಾರದ ಕುರಿತಾದ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರತಿಕ್ರಿಯೆಯನ್ನು ಪರಿಗಣಿಸುತ್ತದೆ.

     

    ಪಶ್ಚಿಮ ಬಂಗಾಳ ಆರೋಗ್ಯ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, ರಾಜ್ಯಗಳು ಆದಾಯವನ್ನು ಕಳೆದುಕೊಳ್ಳುವುದರಿಂದ ನಮಗೆ ಹೇಗೆ ಪರಿಹಾರ ನೀಡಲಾಗುವುದು ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ನಾನು ಸಭೆಯಲ್ಲಿ ಎತ್ತಿದ್ದೇನೆ. ಎಷ್ಟು ಪ್ರಮಾಣದ ಆದಾಯ ನಷ್ಟವಾಗಬಹುದು ಎನ್ನುವುದು ನಮಗೆ ತಿಳಿದಿಲ್ಲ. ಈ ವಿವರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ತಿಳಿಯಬಹುದು ಎಂದು ಅವರು ತಿಳಿಸಿದರು.

    ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ನೀಡಲಾದ ಪ್ರಸ್ತಾಪದಲ್ಲಿ ಎಷ್ಟು ನಷ್ಟ ಉಂಟಾಗುತ್ತಿದೆ ಎಂಬುದನ್ನು ಉಲ್ಲೇಖಿಸಲಾಗಿಲ್ಲ. ಆದರೆ ಸಾಮಾನ್ಯ ಜನರು ಇದರಿಂದ ಪ್ರಯೋಜನ ಪಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದರು.  ಇದನ್ನೂ ಓದಿ: 3 ವರ್ಷದಿಂದ ಅಶ್ಲೀಲ ಮೆಸೇಜ್‌ ಕಳಿಸ್ತಿದ್ದಾರೆ, ಹೋಟೆಲ್‌ಗೆ ಕರೀತಿದ್ದಾರೆ ರಾಜಕಾರಣಿ ವಿರುದ್ಧ ನಟಿ ರಿನಿ ಜಾರ್ಜ್ ಆರೋಪ

    ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ನರೇಂದ್ರ ಮೋದಿ (Narendra Modi) ಜಿಎಸ್‌ಟಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ದೀಪಾವಳಿಗೆ ಡಬಲ್‌ ಗಿಫ್ಟ್‌ ಸಿಗಲಿದೆ ಎಂದು ಹೇಳಿದ್ದರು.

    ಪ್ರಸ್ತುತ ಈಗ ಅಗತ್ಯ ವಸ್ತುಗಳಿಗೆ 0%, ಮೂಲಭೂತ ಅಗತ್ಯಗಳಿಗೆ ಬೇಕಾದ ವಸ್ತುಗಳಿಗೆ 5%, ಪ್ರಮಾಣಿತ ಸರಕುಗಳಿಗೆ 12%, ಹೆಚ್ಚಿನ ಗ್ರಾಹಕ ಉತ್ಪನ್ನಗಳಿಗೆ 18%, ಐಷಾರಾಮಿ ಸರಕುಗಳಿಗೆ 28% ಜಿಎಸ್‌ಟಿ ವಿಧಿಸಲಾಗುತ್ತಿದೆ.  ಇದನ್ನೂ ಓದಿ: ಇಮ್ಯೂನೋಥೆರಪಿಗೆ ಬಳಸುವ ಔಷಧ & ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್‌ ಸುಂಕಕ್ಕೆ ವಿನಾಯಿತಿಗೆ ಮನವಿ

    ಸದ್ಯ ಈಗ ಇರುವ ಸ್ಲ್ಯಾಬ್‌ಗಳ ಪೈಕಿ 5% ಮತ್ತು 18% ಸ್ಲ್ಯಾಬ್‌ ಮಾತ್ರ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯಡಿಯಲ್ಲಿ 28% ನಲ್ಲಿರುವ 90% ರಷ್ಟು ವಸ್ತುಗಳನ್ನು 18%ಕ್ಕೆ ವರ್ಗಾಯಿಸಲಾಗುತ್ತದೆ, 12% ರಷ್ಟು ಸ್ಲ್ಯಾಬ್‌ನಲ್ಲಿರುವ 99% ರಷ್ಟು ವಸ್ತುಗಳನ್ನು 5% ಸ್ಲ್ಯಾಬ್‌ಗೆ ವರ್ಗಾಯಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

    ಐಷಾರಾಮಿ ಸರಕುಗಳಿಗೆ 40% ದರ ಅನ್ವಯಿಸುತ್ತದೆ. ಇದರಲ್ಲಿ ತಂಬಾಕು, ಗುಟ್ಕಾ ಮತ್ತು ಸಿಗರೇಟ್ ಸೇರಿವೆ. ಸರ್ಕಾರಿ ಮೂಲಗಳ ಪ್ರಕಾರ 40% ವರ್ಗವು ಕೇವಲ 5-7 ವಸ್ತುಗಳನ್ನು ಮಾತ್ರ ಹೊಂದಿರುತ್ತದೆ. ರೆಫ್ರಿಜರೇಟರ್, ಎಸಿ, ವಾಷಿಂಗ್‌ ಮಷೀನ್‌ನಂತ ವಸ್ತುಗಳನ್ನು ಇದರಿಂದ ಹೊರಗಿಡಲಾಗುತ್ತದೆ.

    ಒಟ್ಟು ಜಿಎಸ್‌ಟಿ ಆದಾಯದ ಪೈಕಿ 67% ಆದಾಯ 18% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿದೆ. 11% ಮತ್ತು 5% ಆದಾಯ ಕ್ರಮವಾಗಿ 28% ಮತ್ತು 12% ಬಂದರೆ, 12% ಆದಾಯ 5% ಸ್ಲ್ಯಾಬ್‌ನಲ್ಲಿರುವ ವಸ್ತುಗಳಿಂದ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ. ತೆರಿಗೆ ಪರಿಷ್ಕರಣೆಯಾದರೂ ಪೆಟ್ರೋಲ್‌, ಡೀಸೆಲ್‌ ದರಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗುತ್ತದೆ.

  • ಕರ್ನಾಟಕದಲ್ಲಿ 39,577 ಕೋಟಿ ಜಿಎಸ್‌ಟಿ ವಂಚನೆ, ವರ್ತಕರಿಗೆ ನಾವು ನೋಟಿಸ್‌ ನೀಡಿಲ್ಲ: ಸೀತಾರಾಮನ್‌

    ಕರ್ನಾಟಕದಲ್ಲಿ 39,577 ಕೋಟಿ ಜಿಎಸ್‌ಟಿ ವಂಚನೆ, ವರ್ತಕರಿಗೆ ನಾವು ನೋಟಿಸ್‌ ನೀಡಿಲ್ಲ: ಸೀತಾರಾಮನ್‌

    ನವದೆಹಲಿ: ಕರ್ನಾಟಕದಲ್ಲಿ (Karnataka) 2024-25ನೇ ಆರ್ಥಿಕ ವರ್ಷದಲ್ಲಿ 1,254 ಪ್ರಕರಣಗಳಲ್ಲಿ 39,577 ಕೋಟಿ ರೂ. ಮೊತ್ತದ ಜಿಎಸ್‌ಟಿ ವಂಚನೆ (GST Fraud) ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ತಿಳಿಸಿದರು.

    ಬಿಜೆಪಿ ಸಂಸದರಾದ ಡಾ.ಕೆ. ಸುಧಾಕರ್‌ ಹಾಗೂ ತೇಜಸ್ವಿ ಸೂರ್ಯ ಪ್ರಶ್ನೆಗೆ ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಅವರು, ಈ ಪ್ರಕರಣಗಳಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿದ ಬಳಿಕ 1,623 ಕೋಟಿ ರೂ. ಮೊತ್ತ ಸ್ವಯಂಪ್ರೇರಿತವಾಗಿ ಪಾವತಿ ಆಗಿದೆ. ಎಂದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ವಂಚನೆ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ ಎಂದರು. ಇದನ್ನೂ ಓದಿ: ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

    ಸಣ್ಣ ವರ್ತಕರಿಗಿಲ್ಲ ನೋಟಿಸ್‌: ಯುಪಿಐ (UPI) ವಹಿವಾಟುಗಳ ಆಧಾರದಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಣ್ಣ ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಯಾವುದೇ ನೋಟಿಸ್‌ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಯುಪಿಐ ಮೂಲಕ ವಾರ್ಷಿಕ 40 ಲಕ್ಷ ರೂ. ಹೆಚ್ಚಿನ ವಹಿವಾಟು ನಡೆಸಿದ್ದ ಬೇಕರಿ, ಹೋಟೆಲ್, ಬೀಡಾ ಅಂಗಡಿ ಮತ್ತು ಟೀ ಅಂಗಡಿ ಮಾಲೀಕರಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ನೋಂದಣಿ ಮಾಡಿಸಿ ಮತ್ತು ಜಿಎಸ್‌ಟಿ ಪಾವತಿಸಿ ಎಂದು ಸೂಚಿಸಿದ್ದರು. ಈ ಕ್ರಮಕ್ಕೆ ಆಕ್ಷೇಪ ಎದುರಾಗಿತ್ತು. ನೋಟಿಸ್‌ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ವರ್ತಕರು ಪ್ರತಿಭಟನೆ ನಡೆಸಿದ್ದರು. ಜಿಎಸ್‌ಟಿ ಕೇಂದ್ರದ್ದು ಎಂದು ಕಾಂಗ್ರೆಸ್‌ ದೂರಿದ್ದರೆ, ಕರ್ನಾಟಕದಲ್ಲಿ ಮಾತ್ರ ಈ ರೀತಿ ವಸೂಲು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದರು. ಇದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು.

    ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿದ್ದ 9,000 ಸಣ್ಣ ವರ್ತಕರು ಇಲ್ಲಿಯವರೆಗೂ ಪಾವತಿಸಬೇಕಿದ್ದ ಜಿಎಸ್‌ಟಿ ಮನ್ನಾ ಮಾಡಲು ಸಮ್ಮತಿಸಿದ್ದರು.

    ಸರಕುಗಳ ವಾರ್ಷಿಕ ವಹಿವಾಟು ಮಿತಿಯನ್ನು 40 ಲಕ್ಷ ರೂ. ಹಾಗೂ ಸೇವಾ ವಹಿವಾಟು ಮಿತಿಯನ್ನು 20 ಲಕ್ಷ ರೂ.ಗೆ ಸರ್ಕಾರ ನಿಗದಿಪಡಿಸಿದೆ. ಈ ಮಿತಿ ದಾಟಿದವರು ಜಿಎಸ್‌ಟಿ ನೋಂದಣಿ ಮಾಡಿಸುವುದು ಹಾಗೂ ನಿಯಮದಂತೆ ತೆರಿಗೆ ಪಾವತಿಸುವುದು ಕಡ್ಡಾಯ.

  • ಕರ್ನಾಟಕಕ್ಕೆ 46,933 ಕೋಟಿ ತೆರಿಗೆ ಹಣ ಬಿಡುಗಡೆ – ಕೇಂದ್ರ ಹಣಕಾಸು ಸಚಿವಾಲಯ

    ಕರ್ನಾಟಕಕ್ಕೆ 46,933 ಕೋಟಿ ತೆರಿಗೆ ಹಣ ಬಿಡುಗಡೆ – ಕೇಂದ್ರ ಹಣಕಾಸು ಸಚಿವಾಲಯ

    ನವದೆಹಲಿ: 2024-25ನೇ ಹಣಕಾಸು ವರ್ಷದಲ್ಲಿ ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿ ಕರ್ನಾಟಕ ರಾಜ್ಯಕ್ಕೆ 46,933 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.

    ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಈರಣ್ಣ ಕಡಾಡಿ ಕೇಳಿದ ಪ್ರಶ್ನೆಗೆ ಲಖಿತ ಉತ್ತರ ನೀಡಿದ ಸಚಿವರು, 2022-23ರಲ್ಲಿ 34,596 ಕೋಟಿ ರೂ. ಹಾಗೂ 2023-24ರಲ್ಲಿ 41,193 ಕೋಟಿ ರೂ. ಬಿಡುಗಡೆಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ

    ಸ್ಥಳೀಯ ಸಂಸ್ಥೆಗಳು, ವಿಪತ್ತು ನಿರ್ವಹಣೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಲ್ಲಿ ಕ್ರಮವಾಗಿ 426 ಕೋಟಿ ರೂ., 3532 ಕೋಟಿ ರೂ. ಹಾಗೂ 826 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು ಎಂದು ವಿವರ ನೀಡಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬಳಿಕ ಮೊದಲ ಬಾರಿಗೆ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ