Tag: Tawang

  • PublicTV Explainer: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್‌ ಮಾಡೋದೇಕೆ?

    PublicTV Explainer: ಚೀನಾ-ಭಾರತ ಗಡಿ ಸಂಘರ್ಷ – ಚೀನಾ ಯಾಂಗ್‌ಟ್ಸೆ ಪ್ರದೇಶವನ್ನೇ ಟಾರ್ಗೆಟ್‌ ಮಾಡೋದೇಕೆ?

    ಜೂನ್ 2020 ರಲ್ಲಿ ಲಡಾಖ್‌ನ (Ladakh) ಗಾಲ್ವಾನ್ (Galwan) ಕಣಿವೆಯಲ್ಲಿ ಭಾರತ-ಚೀನಾ ಸೇನಾಪಡೆಗಳ (India China Border Clash) ನಡುವಿನ ಮಾರಣಾಂತಿಕ ಎನ್‌ಕೌಂಟರ್‌ ಘಟನೆ ಸಂಭವಿಸಿ ಎರಡೂವರೆ ವರ್ಷಗಳ ನಂತರ ತವಾಂಗ್‌ನಲ್ಲಿ ಮತ್ತೆ ಘರ್ಷಣೆ ನಡೆದಿದೆ. ಗಡಿ ವಿಚಾರವಾಗಿ ಚೀನಾ ಮತ್ತು ಭಾರತದ (India) ನಡುವಿನ ತಿಕ್ಕಾಟ ಹೊಸದೇನು ಅಲ್ಲ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ದಿಟ್ಟ ನಿಲುವನ್ನು ತೆಗೆದುಕೊಂಡು ಚೀನಾಗೆ (China) ಸ್ಪಷ್ಟ ಸಂದೇಶ ರವಾನಿಸುವ ಅಗತ್ಯವಿದೆ. ಭಾರತ ಮತ್ತು ಚೀನಾ ನಡುವೆ ಹಿಂದಿನಿಂದಲೂ ಇರುವ ಈ ಗಡಿ ವಿವಾದದ ಬಗ್ಗೆ ಒಂದಷ್ಟು ಒಳನೋಟ ಇಲ್ಲಿದೆ.

    ತವಾಂಗ್: ಭಾರತ-ಚೀನಾ ಘರ್ಷಣೆಯ ತಾಣ
    ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ (Tawang) ಸೆಕ್ಟರ್‌ನ ಮೇಲ್ಭಾಗದ ಯಾಂಗ್‌ಟ್ಸೆ (Yantse) ಎಂಬ ಪ್ರದೇಶದಲ್ಲಿ ಎರಡು ಕಡೆಯ ಸೈನಿಕರು ಘರ್ಷಣೆ ನಡೆಸಿದರು. ಗಡಿ ಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವಿನ ಗಂಭೀರ ವಿವಾದದ ಬಿಂದುಗಳಲ್ಲಿ ಇದು ಕೂಡ ಒಂದಾಗಿದೆ. ತವಾಂಗ್ ಆರನೇ ದಲೈ ಲಾಮಾ ಅವರ ಜನ್ಮಸ್ಥಳ. ಟಿಬೆಟಿಯನ್ ಬೌದ್ಧರ ಪ್ರಮುಖ ಯಾತ್ರಾ ಕೇಂದ್ರ. 14 ನೇ ದಲೈ ಲಾಮಾ ಅವರು 1959 ರಲ್ಲಿ ಟಿಬೆಟ್‌ನಿಂದ ಭಾರತಕ್ಕೆ ಬಂದ ನಂತರ ತವಾಂಗ್‌ನಲ್ಲಿ ಆಶ್ರಯ ಪಡೆದರು. ಮುಂದುವರಿಯುವ ಮೊದಲು ಅಲ್ಲಿ ಮಠದಲ್ಲಿ ಕೆಲ ದಿನಗಳನ್ನು ಕಳೆದಿದ್ದರು. ಇದನ್ನೂ ಓದಿ: ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

    ತವಾಂಗ್‌ನಲ್ಲಿ ಮೂರು ಪ್ರದೇಶಗಳಿವೆ. ಲುಂಗ್ರೂ ಹುಲ್ಲುಗಾವಲಿನ ಉತ್ತರಕ್ಕೆ ತವಾಂಗ್ ಪಟ್ಟಣದಿಂದ ಸುಮಾರು 25 ಕಿಮೀ ದೂರದಲ್ಲಿರುವ ಯಾಂಗ್‌ಟ್ಸೆ ಪ್ರದೇಶಗಳಲ್ಲಿ ಒಂದಾಗಿದೆ. ಇದು ಭಾರತೀಯ ಸೇನೆ ಮತ್ತು PLA ನಡುವಿನ ಸಂಘರ್ಷದ ತಾಣವಾಗಿದೆ. ವಿಶೇಷವಾಗಿ ಎತ್ತರದ ಪ್ರದೇಶವು ಭಾರತದ ಭಾಗದಲ್ಲಿರುವುದರಿಂದ ಇದು ಚೀನಾದ ಕಮಾಂಡಿಂಗ್ ಚಟುವಟಿಕೆ ವೀಕ್ಷಣೆಗೆ ಸಹಾಯವಾಗಿದೆ.

    ಕಳೆದ ಅಕ್ಟೋಬರ್‌ನಲ್ಲಿ ಪಿಎಲ್‌ಎ ಮತ್ತು ಭಾರತೀಯ ಸೇನೆಯ ಗಸ್ತು ತಂಡಗಳು ಯಾಂಗ್‌ಟ್ಸೆಯಲ್ಲಿ ಮುಖಾಮುಖಿಯಾಗಿದ್ದು ಗಲಾಟೆಗೆ ಕಾರಣವಾಯಿತು. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. 2016ರಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು.

    ಎಲ್‌ಎಸಿ ಎಂದರೇನು?
    ಭಾರತೀಯ ನಿಯಂತ್ರಿತ ಪ್ರದೇಶವನ್ನು ಚೀನೀ ನಿಯಂತ್ರಿತ ಪ್ರದೇಶದಿಂದ ಪ್ರತ್ಯೇಕಿಸುವುದೇ ಎಲ್‌ಎಸಿ. ಇದನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಪೂರ್ವ ವಲಯ (ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ), ಮಧ್ಯ ವಲಯ (ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ) ಮತ್ತು ಪಶ್ಚಿಮ ವಲಯ (ಲಡಾಖ್). ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಚೀನಾ ವಿರುದ್ಧ ಮಾತನಾಡಲು ಅವಕಾಶವೇ ಇಲ್ಲ – ಖರ್ಗೆ ಕಿಡಿ

    ಭಾರತ ಮತ್ತು ಚೀನಾ LACಯನ್ನು ಪರಸ್ಪರ ಒಪ್ಪುತ್ತಿಲ್ಲ. ಭಾರತವು LACಯನ್ನು 3,488 ಕಿಮೀ ಉದ್ದ ಎಂದು ಪರಿಗಣಿಸುತ್ತದೆ. ಆದರೆ ಚೀನಿಯರು ಇದನ್ನು ಕೇವಲ 2,000 ಕಿಮೀ ಎಂದು ಪರಿಗಣಿಸುತ್ತಾರೆ. ಮಧ್ಯಮ ವಲಯದಲ್ಲೂ ಭಿನ್ನಾಭಿಪ್ರಾಯವಿದೆ.

    1962ರ ಚೀನಾ ದಾಳಿ
    1962ರ ಅಕ್ಟೋಬರ್‌ 20ರಂದು ಚೀನಾ ಎರಡು ಕಡೆ ಅನಿರೀಕ್ಷಿತ ದಾಳಿ ನಡೆಸಿತು. ಭಾರತ ಯುದ್ಧಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ 20,000 ಭಾರತೀಯ ಯೋಧರು 80,000 ಚೀನೀಯರ ಮುಂದೆ ಹತಾಶರಾಗಬೇಕಾಯಿತು. ಒಂದು ತಿಂಗಳ ಕಾಲ ನಡೆದ ಯುದ್ಧ ನವಂಬರ್‌ 21ರಂದು ಕೊನೆಗೊಂಡಿತು.

    1993, 1996ರ ಒಪ್ಪಂದ
    ಭಾರತ ಮತ್ತು ಚೀನಾ ನಡುವೆ ಲಡಾಕ್‌ನಿಂದ ಅರುಣಾಚಲ ಪ್ರದೇಶದ ತನಕ 4,000 ಕಿಲೋಮೀಟರ್‌ ಉದ್ದದ ಗಡಿಯಲ್ಲಿ ವಿಶ್ವಾಸ ವೃದ್ಧಿಸಲು ಈ ಹಿಂದೆ ಮೂರು ಸಲ ಒಪ್ಪಂದ ಏರ್ಪಟ್ಟಿತ್ತು. 1993, 1996 ಮತ್ತು 2013ರ ಉಭಯ ದೇಶಗಳ ನಡುವೆ ನಡೆದ ಒಪ್ಪಂದಗಳಲ್ಲಿ ಅನೇಕ ವಿಚಾರಗಳನ್ನು ನಮೂದಿಸಿವೆ. ಆದರೆ ಚೀನಾ ಮಾತ್ರ ತನ್ನ ಎಲ್ಲೆ ಮೀರಿ ಒಪ್ಪಂದವನ್ನು ಉಲ್ಲಂಘಿಸುತ್ತಲೇ ಇದೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್‌ ಕಣ್ಣು ಹಾಕಿದ್ದು ಯಾಕೆ?

    ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಹೇಳೋದೇನು?
    ಚೀನಾವು, ಅರುಣಾಚಲ ಪ್ರದೇಶದ ಸುಮಾರು 90,000 ಚದರ ಕಿಮೀನ ಇಡೀ ರಾಜ್ಯವನ್ನು ತನ್ನ ಭೂಪ್ರದೇಶವೆಂದು ಹೇಳಿಕೊಂಡಿದೆ. ಇದು ಚೈನೀಸ್ ಭಾಷೆಯಲ್ಲಿ ಪ್ರದೇಶವನ್ನು “ಝಂಗ್ನಾನ್” ಎಂದು ಕರೆಯುತ್ತದೆ. ಚೀನೀ ನಕ್ಷೆಗಳು ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ತೋರಿಸುತ್ತವೆ.

    ಭಾರತದ ಭೂಪ್ರದೇಶಕ್ಕೆ ಚೀನೀ ಹೆಸರು
    ಭಾರತದ ಭೂಪ್ರದೇಶಕ್ಕೆ ಏಕಪಕ್ಷೀಯ ಹಕ್ಕು ಸಾಧಿಸಲು ಚೀನಾ ಪ್ರಯತ್ನಗಳನ್ನು ಮಾಡುತ್ತದೆ. ಈ ಕಾರ್ಯತಂತ್ರದ ಭಾಗವಾಗಿ, ಇದು ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನೀ ಹೆಸರುಗಳನ್ನು ನೀಡಲು ಪ್ರಯತ್ನಿಸಿದೆ. ಇದು 2017 ರಲ್ಲಿ ಅಂತಹ ಆರು ಹೆಸರುಗಳು ಮತ್ತು 2021 ರಲ್ಲಿ 15 ಹೆಸರುಗಳ ಪಟ್ಟಿಯನ್ನು ಪ್ರಕಟಿಸಿತು. ಆದರೆ ಇದನ್ನು ಭಾರತ ತಳ್ಳಿಹಾಕಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.

    ಚೀನಾ ಪಡೆ ʼಯಾಂಗ್‌ಟ್ಸೆಯನ್ನೇ ಟಾರ್ಗೆಟ್‌ ಮಾಡೋದೇಕೆ?
    ಈ ಪ್ರದೇಶವು ಹುಲ್ಲುಗಾವಲು ಪ್ರದೇಶ ಮಾತ್ರವಲ್ಲದೆ, ಚೀನಾದ ಕಡೆಯ ಗಡಿಯಿಂದ ಟಿಬೆಟಿಯನ್ನರು ಪೂಜಿಸುವ ಪವಿತ್ರ ಜಲಪಾತಕ್ಕೆ ಹೊಂದಿಕೊಂಡಿದೆ. ತವಾಂಗ್ ಮೊನಾಸ್ಟರಿಯು ಲಾಸಾದ ಪೊಟಾಲಾ ಅರಮನೆಯ ನಂತರ ಎರಡನೇ ಅತಿದೊಡ್ಡ ಮೊನಾಸ್ಟರಿಯಾಗಿದೆ. 6 ನೇ ದಲೈ ಲಾಮಾ ತವಾಂಗ್‌ ನವರಾಗಿದ್ದರು. ಇದರೊಂದಿಗೆ ತವಾಂಗ್‌ನ ಭೌಗೋಳಿಕ, ಸಾಮಾಜಿಕ-ಜನಾಂಗೀಯ, ಮತ್ತು ಸಾಂಸ್ಕೃತಿಕ ನಿರಂತರತೆ ಸುತ್ತಮುತ್ತಲ ಜನರೊಂದಿಗೆ ಇದೆ. ಈ ಪ್ರದೇಶವು ನೈಸರ್ಗಿಕವಾಗಿ ಅಪರೂಪದ ಕಾಮೋತ್ತೇಜಕವನ್ನು ಬೆಳೆಯಲು ಹೆಸರುವಾಸಿಯಾಗಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಸ್ವಾಭಾವಿಕವಾಗಿ, ಚೀನೀಯರು ಇದರ ಲಾಭ ಪಡೆಯಲು ಬಯಸುತ್ತಾರೆ ಎಂಬುದು ನಿವೃತ್ತ ಮೇಜರ್‌ ಜನರಲ್‌ ಸುಧಾಕರ್‌ ಅವರ ಅಭಿಪ್ರಾಯ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

    ಪಿಎಲ್‌ಎ ಘರ್ಷಣೆಗೆ ಮತ್ತೊಂದು ಕಾರಣವಿದೆ. ಈ ಪ್ರದೇಶವು ಭಾರತದ ಭಾಗದಲ್ಲಿರುವ ಸೆಲಾ ಪಾಸ್‌ನ ಪ್ರಾಬಲ್ಯ ಸಾಧಿಸಲು ಕಡಿಮೆ ವೈಮಾನಿಕ ದೂರವನ್ನು ಒದಗಿಸುತ್ತದೆ. ಭಾರತದ ಭಾಗದಲ್ಲಿ ಪೂರ್ಣ ವೇಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಡೆಯುತ್ತಿರುವುದರಿಂದ, ಸೆಲಾ ಪಾಸ್‌ನ ಕೆಳಗಿರುವ ಸುರಂಗವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಕೂಡ ಚೀನಾ ಕ್ಯಾತೆಗೆ ಪ್ರಮುಖ ಕಾರಣವಾಗಿರಬಹುದು.

    ಡಿ.9ರ ನಂತರ ನಡೆದಿದ್ದೇನು?
    ಚೀನಾ ಸೈನಿಕರು ಹಿಮಾಚಲ ಪ್ರದೇಶದ ತವಾಂಗ್‌ನಲ್ಲಿ ಡಿ.9 ರಂದು ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಿದ್ದು ಕಳವಳ ಮೂಡಿಸುವ ಸಂಗತಿಯಾಗಿದ್ದು, ಎರಡೂ ದೇಶಗಳ ಗಡಿ ಬಿಕ್ಕಟ್ಟಿಗೆ ಮತ್ತಷ್ಟು ಇಂಬುಕೊಟ್ಟಂತಿದೆ. ಸಂಘರ್ಷದ ಬಗ್ಗೆ ಭಾರತದ ಕೇಂದ್ರ ಸರ್ಕಾರ ನೀಡಿದ ಸ್ಪಷ್ಟನೆಗೆ ಪ್ರತಿಪಕ್ಷಗಳು ಅತೃಪ್ತಿ ವ್ಯಕ್ತಪಡಿಸಿವೆ. ಘರ್ಷಣೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚೀನಾಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಭಾರತ ಸರ್ಕಾರ ನಿರ್ಲಕ್ಷ್ಯ ಧೋರಣೆ ಹೊಂದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

    ಡಿ.9ರಂದು ಚೀನಾ ಸೈನಿಕರು ಮತ್ತು ಭಾರತದ ಯೋಧರ ನಡುವೆ ಸಂಘರ್ಷ ನಡೆಯಿತು. ಅದಾದ ಎರಡು ಮೂರು ದಿನದಲ್ಲಿ ವಿಷಯ ಬಹಿರಂಗಗೊಂಡಿತು. ತಕ್ಷಣ ಎಚ್ಚೆತ್ತ ಸರ್ಕಾರ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಘರ್ಷಣೆ ಬಗ್ಗೆ ಸ್ಪಷ್ಟನೆ ನೀಡಿತು. ಇದರ ಬೆನ್ನಲ್ಲೇ ಚೀನಾ ಸರ್ಕಾರವು ಸಹ, ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪ್ರತಿಕ್ರಿಯಿಸಿತ್ತು. ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಬಡಿದಾಟ – ಚೀನಿ ಯೋಧರಿಗೆ ತಿರುಗೇಟು ಕೊಟ್ಟ ಭಾರತ

    ಪೀಪಲ್ಸ್‌ ಲಿಬರೇಷನ್ಸ್‌ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರ ಕರ್ನಲ್ ಲಾಂಗ್ ಶಾವೊಹುವಾ, “ನಮ್ಮ ಪಡೆಗಳ ಪ್ರತಿಕ್ರಿಯೆಯು ವೃತ್ತಿಪರ, ದೃಢ ಮತ್ತು ಪ್ರಮಾಣಿತವಾಗಿದೆ. ಇದು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಸಹಾಯ ಮಾಡಿದೆ. ಕಟ್ಟುನಿಟ್ಟಾಗಿ ನಿಯಂತ್ರಿಸಲು ಭಾರತದ ಕಡೆಯವರನ್ನೂ ಕೇಳುತ್ತೇವೆ. ಮುಂಚೂಣಿ ಪಡೆಗಳನ್ನು ನಿಗ್ರಹಿಸಿ ಮತ್ತು ಶಾಂತಿ ಕಾಪಾಡಲು ಚೀನಾದೊಂದಿಗೆ ಸಹಕರಿಸಿ” ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್‌ ಕಣ್ಣು ಹಾಕಿದ್ದು ಯಾಕೆ?

    ಭಾರತ, ಚೀನಾ ಸಂಘರ್ಷ – ಅರುಣಾಚಲ ಪ್ರದೇಶದ ಮೇಲೆ ಡ್ರ್ಯಾಗನ್‌ ಕಣ್ಣು ಹಾಕಿದ್ದು ಯಾಕೆ?

    ನವದೆಹಲಿ: ತನ್ನ ಗಡಿಯನ್ನು ಹೊಂದಿದ ರಾಷ್ಟ್ರಗಳ ಜೊತೆ ಕಿರಿಕ್‌ ಮಾಡುತ್ತಿರುವ ಚೀನಾ ಮತ್ತೆ ಭಾರತದ ಜೊತೆ ಕಿತ್ತಾಟ ಆರಂಭಿಸಿದೆ. ಅರುಣಾಚಲ ಪ್ರದೇಶ(Arunachal Pradesh) ತವಾಂಗ್‍ನಲ್ಲಿ(Tawang) ಪ್ರಾಂತ್ಯವನ್ನು ಕಬಳಿಸಬೇಕೆಂಬ ದುರ್ಬುದ್ಧಿಯೇ ಈಗ ಘರ್ಷಣೆಗೆ ಕಾರಣವಾಗಿದೆ.

    ಅರುಣಾಚಲದಲ್ಲಿ ಭಾರತದ(India) ಸಾರ್ವಭೌಮತ್ವವವನ್ನು ಇಡೀ ವಿಶ್ವವೇ ಗುರುತಿಸಿರುವುದನ್ನು ಡ್ರ್ಯಾಗನ್ ದೇಶಕ್ಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ಇಡೀ ಅರುಣಾಚಲ ನಮ್ಮದು ಎಂದು ಚೀನಾ(China) ಕ್ಯಾತೆ ತೆಗೆಯುತ್ತಲೇ ಇದೆ. ಪ್ರಮುಖವಾಗಿ ತವಾಂಗ್ ವಶಕ್ಕೆ ಪಡೆಯಲು ಪ್ರಯತ್ನಿಸ್ತಿದೆ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

     
    ಚೀನಾದ ಕಣ್ಣು ಏಕೆ?
    ಈಶಾನ್ಯ ಭಾರತದ ಅತಿ ದೊಡ್ಡ ರಾಜ್ಯ ಅರುಣಾಚಲ ಪ್ರದೇಶವಾಗಿದ್ದು ಟಿಬೆಟ್, ಭೂತಾನ್, ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿದೆ. ಈಶಾನ್ಯ ಭಾರತದ ಪಾಲಿಗೆ ಅರುಣಾಚಲ ರಕ್ಷಣಾ ಕವಚವಾಗಿದ್ದು ಟಿಬೆಟ್, ಬ್ರಹ್ಮಪುತ್ರ ಕಣಿವೆಯಲ್ಲಿರುವುದರಿಂದ ತವಾಂಗ್‍ಗೆ ಭೌಗೋಳಿಕ ಪ್ರಮುಖ್ಯತೆಯಿದೆ.

    ಚೀನಾದ ಕಡೆ ಕ್ಷಿಪಣಿಗಳನ್ನು ಗುರಿಯಾಗಿಸಲು ಅರುಣಾಚಲ ಸೂಕ್ತ ಪ್ರದೇಶವಾಗಿದೆ. ಅಷ್ಟೇ ಅಲ್ಲದೇ ಚೀನಾದ ವೈಮಾನಿಕ ದಾಳಿಗೆ ಇಲ್ಲಿಂದಲೇ ತಿರುಗೇಟು ನೀಡಬಹುದು.

    ತವಾಂಗ್ ಮೇಲೆ ಹಿಡಿತ ಸಾಧಿಸಿ ಈಶಾನ್ಯ ಭಾರತಕ್ಕೆ ನುಗ್ಗಲು ಚೀನಾ ಷಡ್ಯಂತ್ರ್ಯ ಮಾಡಿದ್ದು ಅರುಣಾಚಲವನ್ನು ದಕ್ಕಿಸಿಕೊಂಡರೇ ಭೂತಾನ್‌ಗೆ ನುಗ್ಗುವುದು ಸುಲಭವಾಗಲಿದೆ. ಟಿಬೆಟಿಯನ್ನರ ಬೌದ್ಧ ಧರ್ಮದ ಜೊತೆಗೆ ಅರುಣಾಚಲಕ್ಕೆ ನಿಕಟ ಬಾಂಧವ್ಯ ಹೊಂದಿದ್ದು ತವಾಂಗ್‍ನಲ್ಲಿ ಗಾಂಡೆನ್ ನಂಗ್ಯಾಲ್ ಲಾಟ್ಸೆ ಬೌದ್ಧ ಮಂದಿರವಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

    ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

    ನವದೆಹಲಿ: ಅರುಣಾಚಲ ಪ್ರದೇಶದ(Arunachal Pradesh) ತವಾಂಗ್ ಸೆಕ್ಟರ್‌ನಲ್ಲಿ ಭಾರತದ ಸೈನಿಕರು(Indian Army) ಮತ್ತೆ ಕೆಚ್ಚೆದೆಯ ಹೋರಾಟ ನಡೆಸಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಇದ್ದರೂ ಆಕ್ರಮಣಕಾರಿ ಹೋರಾಟ ಮಾಡಿ ಚೀನಿ ಸೈನಿಕರನ್ನು ನಮ್ಮ ಹೆಮ್ಮೆಯ ಯೋಧರು ಓಡಿಸಿದ್ದಾರೆ. ಈ ಘರ್ಷಣೆಯ ಬಳಿಕ  ಚೀನಾ(China) ʼವಾರ್ನಿಂಗ್‌ ಶಾಟ್‌ʼ ಮೂಲಕ ಎಚ್ಚರಿಕೆಯ ಸಂದೇಶ ಕಳುಹಿಸಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.

    ಡಿಸೆಂಬರ್ 9ರಂದು ಭಾರತ-ಚೀನಾ ಸೇನೆಗಳ ನಡುವೆ ನಡೆದ ಸಂಘರ್ಷದ ಹಿನ್ನೆಲೆ, ಮುನ್ನೆಲೆಗಳನ್ನು ಕೆದಕುತ್ತಾ ಹೋದಂತೆ ಚೀನಾ ಕುತಂತ್ರದ ಸ್ಫೋಟಕ ಮಾಹಿತಿಗಳು ಮಾಹಿತಿಗಳು ಲಭ್ಯ ಆಗುತ್ತಿವೆ.

    ಸಂಘರ್ಷಕ್ಕೆ ಕಾರಣ ಏನು?
    ಚೀನಾದ ಗಡಿಯಿಂದ ಕೇವಲ 100 ಕಿಲೋಮಿಟರ್ ದೂರದಲ್ಲಿರುವ ಉತ್ತರಾಖಂಡ್‍ನ ಔಲಿಯಲ್ಲಿ ನವೆಂಬರ್ 17ರಿಂದ ಕೈಗೊಂಡಿದ್ದ ಭಾರತ-ಅಮೆರಿಕ ಸೇನೆಗಳ ಜಂಟಿ ಸೈನಿಕ ಶಿಕ್ಷಣ ಕಾರ್ಯಕ್ರಮ ʼಯುದ್ಧ್ ಅಭ್ಯಾಸ್-2022ʼ ಡಿಸೆಂಬರ್ 2ರಂದು ಮುಗಿದಿತ್ತು. ಈ ಜಂಟಿ ಸಮರಾಭ್ಯಾಸಕ್ಕೆ ಚೀನಾ ಆರಂಭದಿಂದಲೂ ತಗಾದೆ ತೆಗೆಯುತ್ತಲೇ ಇತ್ತು.

    ನವೆಂಬರ್ 30ರಂದು ಮಾತನಾಡಿದ್ದ ಚೀನಾದ ವಿದೇಶಾಂಗ ಇಲಾಖೆ ಪ್ರತಿನಿಧಿ, ಗಡಿ ಒಪ್ಪಂದಗಳನ್ನು ಭಾರತ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಭಾರತ ನಾವು ಯಾರೊಂದಿಗೆ ಯುದ್ಧ ಮಾಡಬೇಕು ಎಂಬುದನ್ನು ಮೂರನೇ ದೇಶದಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿತ್ತು. ನಮ್ಮ ಮತ್ತು ಭಾರತದ ವಿಚಾರದಲ್ಲಿ ಮೂಗುತೂರಿಸಬೇಡಿ ಎಂದು ಅಮೆರಿಕಗೂ ಚೀನಾ ಎಚ್ಚರಿಕೆ ನೀಡಿತ್ತು.

    ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ಮುಗಿದ ಒಂದು ವಾರಕ್ಕೆ ಸರಿಯಾಗಿ, ಪೂರ್ವ ತಯಾರಿಯೊಂದಿಗೆ ತವಾಂಗ್ ಗಡಿಗೆ ಬಂದ ಚೀನಾ ಸೇನೆ ಸಂಘರ್ಷಕ್ಕೆ ಇಳಿದಿತ್ತು.

    ಗಡಿಯಲ್ಲಿ ಆಸಲಿಗೆ ಆಗಿದ್ದೇನು?
    ಡಿ.9ರ ಬೆಳಗ್ಗೆ ಯಾಂಗ್‍ಟ್ಸೆ ಬಳಿಯ ಗಡಿ ವಾಸ್ತವ ರೇಖೆ(ಎಲ್‍ಎಸಿ) ಬಳಿ ದೊಣ್ಣೆ, ರಾಡ್ ಸಮೇತ ಚೀನಾದ 600 ಸೈನಿಕರು ಬಂದಿದ್ದಾರೆ. ಎಲ್‌ಎಸಿ ದಾಟಿ ಮುಂದಕ್ಕೆ ಬರುತ್ತಿದ್ದಂತೆ ಅಲ್ಲೇ ಗಸ್ತು ತಿರುಗುತ್ತಿದ್ದ 50 ಭಾರತದ ಸೈನಿಕರು ಅವರನ್ನು ತಡೆದು ಪ್ರಶ್ನೆ ಮಾಡಿದ್ದಾರೆ.

    ಪ್ರಶ್ನೆ ಮಾಡಿದ ಕೂಡಲೇ ಚೀನಿ ಸೈನಿಕರು ಭಾರತೀಯ ಸೈನಿಕರ ಜೊತೆ ಮುಷ್ಠಿ ಯುದ್ಧಕ್ಕೆ ಮುಂದಾಗಿದ್ದಾರೆ. ಅನೀರಿಕ್ಷಿತ ದಾಳಿ ವಿಚಲಿತಗೊಳ್ಳದ ಭಾರತ ಸೈನಿಕರು ಸರಿಯಾಗಿ ತಿರುಗೇಟು ನೀಡಿದ್ದಾರೆ. ನಂತರ ದೊಣ್ಣೆ ಹಿಡಿದು ಎರಡು ಕಡೆಯ ಸೈನಿಕರು ಬಡಿದಾಡಿಕೊಂಡಿದ್ದಾರೆ, ಪರಸ್ಪರ ಕಲ್ಲು ತೂರಿದ್ದಾರೆ.

    ಕಡಿಮೆ ಸಂಖ್ಯೆಯಲ್ಲಿದ್ದರೂ ಭಾರತದ ಸೈನಿಕರ ಆಕ್ರಮಣಕ್ಕೆ ಚೀನಾ ಸೈನಿಕರು ದಂಗಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸಮರೋಪಾದಿಯಲ್ಲಿ ರಣತಂತ್ರ ರೂಪಿಸಿದ ಭಾರತೀಯ ಸೇನೆಯ ಮೂರು ಸೇನಾ ಯೂನಿಟ್‌ಗಳು ಸ್ಥಳಕ್ಕೆ ಆಗಮಿಸಿವೆ. ಘರ್ಷಣೆಯ ವೇಳೆ ಕೆಲ ಚೀನಿ ಸೈನಿಕರನ್ನು ಭಾರತದ ಸೈನಿಕರು ವಶಕ್ಕೆ ಪಡೆದಿದ್ದರು. ಭಾರತದ ಯೋಧರ ಸಾಹಸಕ್ಕೆ ಬೆಚ್ಚಿದ ಚೀನಿ ಸೈನಿಕರು ಮರಳಿ ತಮ್ಮ ನೆಲೆಯತ್ತ ತೆರಳಿದ್ದಾರೆ. ಅಷ್ಟೇ ಅಲ್ಲದೇ ಭಾರತೀಯ ಸೈನಿಕರು ಮತ್ತೆ ದಾಳಿ ನಡೆಸಬಹುದು ಎಂಬ ಕಾರಣಕ್ಕೆ ಚೀನಿ ಸೈನಿಕರು ʼವಾರ್ನಿಂಗ್‌ ಶಾಟ್‌ʼ ಸಿಡಿಸಿ ಎಚ್ಚರಿಕೆ ನೀಡಿದ್ದಾರೆ.

    ಗಲ್ವಾನ್‌ ಗಲಾಟೆಯ ಬಳಿಕ ಚೀನಾ ತನ್ನ ಗಡಿ ಭಾಗದಲ್ಲಿ ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನುವುದು ಭಾರತೀಯ ಯೋಧರಿಗೆ ತಿಳಿದಿತ್ತು. ಈ ಕಾರಣಕ್ಕೆ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಚೀನಾ ಯೋಧರಿಗಿಂತಲೂ ಶಕ್ತಿಶಾಲಿ ಆಯುಧಗಳನ್ನು ಭಾರತದ ಸೈನಿಕರು ಹೊಂದಿದ್ದರು.  ಒಟ್ಟು  ಸಂಘರ್ಷ 25-30 ನಿಮಿಷಗಳ ಕಾಲ ನಡೆದಿತ್ತು ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ಇದನ್ನೂ ಓದಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ: ಅಮಿತ್ ಶಾ

    ಭಾರತದ ಸೈನಿಕರ ಮೇಲೆ ದಾಳಿ ನಡೆಸಲೆಂದೇ ಚೀನಾ ಸಿದ್ಧತೆ ನಡೆಸಿಕೊಂಡು ಬಂದಿದ್ದರೂ ಭಾರತದ ಸೈನಿಕರ ಹೋರಾಟದ ಕಿಚ್ಚಿಗೆ ತಲೆಬಾಗಿದ್ದಾರೆ. ಈ ಘರ್ಷಣೆಯಲ್ಲಿ ಭಾರತದ 9 ಮಂದಿ ಚೀನಾದ 22 ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘರ್ಷಣೆಯ ಬಳಿಕ ಡಿ .11ರಂದು ಕಮಾಂಡರ್ ಮಟ್ಟದಲ್ಲಿ ಧ್ವಜ ಸಭೆ ನಡೆದು, ಶಾಂತಿ, ಯಥಾಸ್ಥಿತಿಗೆ ಉಭಯ ದೇಶಗಳ ಒಪ್ಪಿಗೆ ನೀಡಿವೆ.

    ಏನಿದು ವಾರ್ನಿಂಗ್‌ ಶಾಟ್‌?
    ಮಿಲಿಟರಿಯಲ್ಲಿ ವಾರ್ನಿಂಗ್‌ ಶಾಟ್‌ಗೆ ವಿಶೇಷ ಮಹತ್ವವಿದೆ. ಒಂದು ದೇಶದ ಸೈನಿಕರು ತನ್ನ ಶಕ್ತಿ ಪ್ರದರ್ಶನಕ್ಕೆ ಮುನ್ನಾ ವಿರೋಧಿ ಪಡೆಯ ಸೈನಿಕರಿಗೆ ನೀಡುವ ಕೊನೆಯ ಎಚ್ಚರಿಕೆಯನ್ನು ವಾರ್ನಿಂಗ್‌ ಶಾಟ್‌ ಎಂದು ಕರೆಯಲಾಗುತ್ತದೆ. ಈ ಎಚ್ಚರಿಕೆಯನ್ನು ಉಲ್ಲಂಘಿಸಿಯೂ ಮುಂದುವರೆದರೆ ನಾವು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ ಎಂಬ ಸಂದೇಶವನ್ನು ವಾರ್ನಿಂಗ್‌ ಶಾಟ್‌ ಮೂಲಕ ಕಳುಹಿಸಲಾಗುತ್ತದೆ.

    ಚೀನಾ- ಭಾರತದ ಗಡಿಯನ್ನು ಗಸ್ತು ತಿರುಗುವಾಗ ಶಸ್ತ್ರಾಸ್ತ್ರಗಳನ್ನು ಒಯ್ಯುವಂತಿಲ್ಲ. ಹೀಗಿದ್ದರೂ ಎಲ್‌ಸಿಎಯನ್ನು ದಾಟಿ ಬಂದ ಚೀನಾ ಭಾರತದ ಸೈನಿಕರಿಂದ ಪೆಟ್ಟು ತಿಂದು ಹೋಗಿದ್ದು ಮಾತ್ರವಲ್ಲದೇ ವಾರ್ನಿಂಗ್‌ ಶಾಟ್‌ ಸಹ ಸಿಡಿಸಿದ್ದು ಅಚ್ಚರಿಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರವಾಗಿದೆ: ಚೀನಾ ಪ್ರತಿಕ್ರಿಯೆ

    ಭಾರತದೊಂದಿಗಿನ ಗಡಿ ಪರಿಸ್ಥಿತಿ ಸ್ಥಿರವಾಗಿದೆ: ಚೀನಾ ಪ್ರತಿಕ್ರಿಯೆ

    ಬೀಜಿಂಗ್: ಭಾರತದೊಂದಿಗೆ (India) ತನ್ನ ಗಡಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ಚೀನಾದ (China) ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದರು.

    ಕಳೆದ ವಾರ ಅರುಣಾಚಲ ಪ್ರದೇಶದ (Arunachal Pradesh) ತವಾಂಗ್‍ನಲ್ಲಿ (Tawang) ಚೀನಾ ಘರ್ಷಣೆ ನಡೆಸಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ ನಂತರ ಈ ಹೇಳಿಕೆಯನ್ನು ಚೀನಾ ಸರ್ಕಾರ ನೀಡಿದೆ.

    ಚೀನಾ-ಭಾರತದ ಗಡಿ ಪರಿಸ್ಥಿತಿಯು ಒಟ್ಟಾರೆ ಸ್ಥಿರವಾಗಿದೆ. ಎರಡೂ ಕಡೆಯ ಸಚಿವರು ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಅಡೆತಡೆಯಿಲ್ಲದ ಮಾತುಕತೆಯನ್ನು ನಡೆಸಿದ್ದೇವೆ. ಎರಡೂ ಕಡೆಯವರು ಸಹಿ ಮಾಡಿದ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಟ್ಟಾಗಿ ಚೀನಾ-ಭಾರತದ ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

    ತವಾಂಗ್ ಸೆಕ್ಟರ್‌ನಲ್ಲಿ ಡಿಸೆಂಬರ್ 9ರ ಬೆಳಗ್ಗೆ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯಲ್ಲೂ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    Live Tv
    [brid partner=56869869 player=32851 video=960834 autoplay=true]