Tag: Tattoo

  • ನಯನತಾರಾಗೆ ಕಾಡಿದ ಟ್ಯಾಟು

    ನಯನತಾರಾಗೆ ಕಾಡಿದ ಟ್ಯಾಟು

    ಚೆನ್ನೈ: ಬಹುಭಾಷಾ ನಟಿ, ಕ್ಯೂಟ್ ಬೆಡಗಿ ನಯನತಾರಾ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹೆಸರು ವಾಸಿ, ಅದೇ ರೀತಿ ಅವರು ಬೆಳೆದಿದ್ದಾರೆ ಸಹ. ಘಟಾನುಘಟಿ ನಾಯಕರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ದಕ್ಷಿಣ ಸಿನಿ ರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ನಟನೆಯಲ್ಲಿನ ಅವರ ಸಾಧನೆ ಜೊತೆಗೆ ನಿಜ ಜೀವನದಲ್ಲಿ ಅವರ ಸರಣಿ ಪ್ರೇಮ್ ಕಹಾನಿಗಳು ಸಹ ಅಷ್ಟೇ ಚರ್ಚೆಯಾಗಿದ್ದವು. ಇದೆಲ್ಲದರ ನಡುವೆ ಒಂದು ಟ್ಯಾಟು ನಯನತಾರಾ ಅವರನ್ನು ತುಂಬಾ ಚಿಂತೆಗೆ ದೂಡಿತ್ತು.

    ಹೌದು ನಟಿ ನಯನತಾರಾ ಅವರಿಗೆ ಆ ಟ್ಯಾಟು ಸಖತ್ ಹಿಂಸೆ ನೀಡಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಬಣ್ಣದ ಬದುಕಿನ ರೀತಿ ನಿಜ ಜೀವನದಲ್ಲಿಯೂ ಕೆಲವು ಲವ್ ಸ್ಟೋರಿಗಳಿದ್ದು, ಇವೇನು ಗುಟ್ಟಾಗಿ ಉಳಿದಿಲ್ಲ. ಸಿಂಬು, ಪ್ರಭುದೇವ, ವಿಘ್ನೇಶ್ ಶಿವನ್ ಜೊತೆ ನಯನತಾರಾ ಪ್ರೀತಿಯಲ್ಲಿ ಬಿದ್ದ ವಿಚಾರ ತಿಳಿದೇ ಇದೆ. ಹೀಗೆ ಸರಣಿ ಪ್ರೇಮ್‍ಕಹಾನಿಗಳಲ್ಲಿ ಒಂದು ಟ್ಯಾಟು ನಯನತಾರಾಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ. ಇದು ಅವರನ್ನು ದುಃಸ್ವಪ್ನವಾಗಿ ಸಹ ಕಾಡಿದೆ. ಇದನ್ನು ತಗೆಸಲು ಸಹ ಅವರು ಇನ್ನಿಲ್ಲದ ಪ್ರಯತ್ನ ಪಟ್ಟಿದ್ದರು.

    ಅದ್ಯಾವ ಪ್ರೇಮ, ಯಾರ ಜೊತೆಗೆ ಅಂತೀರಾ ಇಲ್ಲಿದೆ ನೋಡಿ ಉತ್ತರ. ಖ್ಯಾತ ಡ್ಯಾನ್ಸರ್ ಪ್ರಭುದೇವ ಜೊತೆ ನಯನತಾರಾ 2010ರಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. ಮದುವೆ ಆಗುತ್ತೇವೆ ಎಂಬ ಭರವಸೆ ಇದ್ದಿದ್ದರಿಂದ ಹಚ್ಚೆ ಹಾಕಿಸಿಕೊಂಡಿದ್ದರು. ಆದರೆ ಲವ್ ಶುರುವಾಗಿ ಮೂರೇ ವರ್ಷಕ್ಕೆ ವೈಮನಸ್ಸು ಉಂಟಾಯಿತು. ಪ್ರಭುದೇವ ಮತ್ತು ನಯನತಾರಾ ಬ್ರೇಕಪ್ ಮಾಡಿಕೊಂಡರು.

    ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಯನತಾರಾ ಸಲುಗೆ ಬೆಳೆಸಿಕೊಂಡರು. ಹೀಗೆ ಪ್ರೀತಿ ಸಹ ಬೆಳೆಯಿತು ಆದರೆ ನಯನತಾರಾ ಕೈ ಮೇಲೆ ಇರುವ ಪ್ರಭುದೇವ ಹೆಸರು ವಿಘ್ನೇಶ್ ಶಿವನ್‍ಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಗಾಸಿಪ್‍ಗಳು ಹರಿದಾಡಲಾರಂಭಿಸಿದವು. ಇದು ನಯನತಾರಾ ಅವರಿಗೂ ಇರುಸುಮುರುಸು ಉಂಟು ಮಾಡಿತ್ತು. ಹೀಗಾಗಿ ಟ್ಯಾಟು ತಗೆಸಲೇಬೇಕು ಎಂಬ ನಿರ್ಧಾರವನ್ನು ನಯನತಾರಾ ಮಾಡಿದ್ದರು.

    ಅಂದಹಾಗೆ ನಯನತಾರಾ ಹಾಕಿಸಿಕೊಂಡ ಟ್ಯಾಟು ಏನು ಗೊತ್ತಾ? ಇಲ್ಲಿದೆ ನೋಡಿ, ಇಂಗ್ಲಿಷ್‍ನ ಪಿ ಅಕ್ಷರದ ಮುಂದೆ ತಮಿಳಿನ ಅಕ್ಷರಗಳನ್ನು ಸೇರಿಸಿ, ಪ್ರಭು ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಇದು ವಿಘ್ನೇಶ್ ಅವರಿಗೆ ಮಾತ್ರವಲ್ಲ ಸ್ವತಃ ನಯನತಾರಾ ಅವರಿಗೆ ದುಃಸ್ವಪ್ನವಾಗಿ ಕಾಡಲು ಶುರುವಾಯಿತು. ಅದು ಪರ್ಮನೆಂಟ್ ಟ್ಯಾಟು ಆಗಿದ್ದರಿಂದ ಅಳಿಸುವುದು ಸಹ ಅಷ್ಟು ಸುಲಭವಾಗಿರಲಿಲ್ಲ. ಆದರೆ ಇದಕ್ಕೆ ಮುಕ್ತಿ ಕಾಣಿಸಲೇಬೇಕಿತ್ತು. ಹೀಗಾಗಿ ಉಪಾಯ ಮಾಡಿದ ನಯನತಾರಾ, ಪ್ರಭು ಇದ್ದಿದ್ದನ್ನು ಪಾಸಿಟಿವಿಟಿ ಎಂದು ಬದಲಾಯಿಸಿದರು. ನಂತರ ಈ ಹಚ್ಚೆಯನ್ನು ಬೇಕಂತಲೇ ಹೆಚ್ಚು ಕಾಣುವಂತೆ ಪ್ರದರ್ಶನ ಮಾಡುತ್ತಿದ್ದರು.

    ತೆಲುಗು, ತಮಿಳು ಮತ್ತು ಮಲಯಾಳಂ ಇಂಡಸ್ಟ್ರಿಗಳಲ್ಲಿ ನಯನತಾರಾ ಪ್ರಸಿದ್ಧಿ ಪಡೆದಿದ್ದಾರೆ. ಅಲ್ಲದೆ ‘ಸೂಪರ್’ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿಯೂ ನಟಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ನೀಡಿ 17 ವರ್ಷಗಳಾದರೂ ಅದೇ ಚಾರ್ಮ್ ಉಳಿಸಿಕೊಂಡು ಬಂದಿದ್ದು, ಈಗಲೂ ಸ್ಟಾರ್ ನಟರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  • ಪ್ರೇಮ ವಿಚಾರ ಶಂಕೆ – ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

    ಪ್ರೇಮ ವಿಚಾರ ಶಂಕೆ – ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯ ಚಿತ್ರಾವತಿ ಡ್ಯಾಂ ಬಳಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಯುವಕನ ಮುಖ ಮೂತಿ ನೋಡದೆ ಕೊಚ್ಚಿ ಕೊಲೆ ಮಾಡಲಾಗಿದೆ.

    ಯುವಕನ ಸರಿ ಸುಮಾರು 22 ರಿಂದ 25 ವರ್ಷದ ಪ್ರಾಯದವನಾಗಿದ್ದು, ಯುವಕನ ಗುರುತು ಪತ್ತೆಯಾಗಿಲ್ಲ. ಯುವಕನ ಕೈ ಮೇಲೆ ಗುರುಪ್ರೀತ್ ಎಂದು ಟ್ಯಾಟೂ ಗುರುತಿದೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರೇಮ ವಿಚಾರದಲ್ಲಿ ಯುವಕನ ಕೊಲೆ ನಡೆದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

    ಸದ್ಯ ಮೃತ ಯುವಕ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ಯುವಕನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಎಲ್ಲೋ ಕೊಲೆ ಮಾಡಿ ತದನಂತರ ಕಾರಿನಲ್ಲಿ ತಂದು ಮೃತದೇಹ ಬಿಸಾಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಪ್ರಭಾರ ಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಎದೆ ಮೇಲೆ ತನ್ನ ಟ್ಯಾಟೂ ನೋಡಿ ಅಭಿಮಾನಿಯನ್ನು ತಬ್ಬಿಕೊಂಡ ವಿರಾಟ್

    ಎದೆ ಮೇಲೆ ತನ್ನ ಟ್ಯಾಟೂ ನೋಡಿ ಅಭಿಮಾನಿಯನ್ನು ತಬ್ಬಿಕೊಂಡ ವಿರಾಟ್

    ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಭಿಮಾನಿಯ ಎದೆ ಮೇಲೆ ತನ್ನ ಚೆಹೆರೆಯ ಹಾಗೂ ಅವಾರ್ಡ್ ಗಳ ಟ್ಯಾಟೂ ನೋಡಿ ತಬ್ಬಿಕೊಂಡಿದ್ದಾರೆ.

    ಒಡಿಶಾ ಮೂಲದ ಪಿಂಟು ಬೆಹೆರಾ ತನ್ನ ಎದೆ ಮೇಲೆ ವಿರಾಟ್ ಕೊಹ್ಲಿ ಮುಖದ ಹಾಗೂ ಬೆನ್ನಿನ ಮೇಲೆ ಅವರ ಜೆರ್ಸಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬುಧವಾರ ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ನಂತರ ವಿರಾಟ್ ಪಿಂಟು ಅವರನ್ನು ಭೇಟಿ ಮಾಡಿದ್ದಾರೆ.

    ವಿರಾಟ್ 2008ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದಿದ್ದರು. ಅಲ್ಲದೆ 2013 ಅರ್ಜುನ ಅವಾರ್ಡ್ ಹಾಗೂ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಹಾಗಾಗಿ ಪಿಂಟು ತಮ್ಮ ಬೆನ್ನಿನ ಮೇಲೆ ಇದನ್ನೆಲ್ಲಾ ಸೇರಿಸಿ ಒಟ್ಟು 15 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದು, ಇದನ್ನು ನೋಡಿದ ವಿರಾಟ್ ಅಭಿಮಾನಿಯನ್ನು ತಬ್ಬಿಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ.

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್, ಮಾಜಿ ನಾಯಕ ಎಂ.ಎಸ್ ಧೋನಿ ನಂತರ ವಿರಾಟ್ ಕೊಹ್ಲಿ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೆ ಇತ್ತೀಚೆಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ವೈಝಾಗ್ ಟೆಸ್ಟ್‌ನ ಮೊದಲ ದಿನದಲ್ಲಿ ಸೌತ್ ಅಫ್ರಿಕಾ ಬೌಲರ್‌ಗಳ ಬೆವರಿಳಿಸಿದ ಭಾರತದ ಆರಂಭಿಕ ಜೋಡಿ ಔಟ್ ಆಗದೆ ದ್ವಿಶತಕದ ಜೊತೆಯಾಟವಾಡಿದರು. ಇದರಲ್ಲಿ ಶತಕ ಸಿಡಿಸಿ ಮಿಂಚಿದ ರೋಹಿತ್ ಶರ್ಮಾ 174 ಎಸೆತದಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ನೊಂದಿಗೆ 115 ರನ್ ಗಳಿಸಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ಕನ್ನಡಿಗ ಮಯಾಂಕ್ ಆಗರವಾಲ್ 183 ಎಸೆತದಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್‌ನೊಂದಿಗೆ84 ರನ್ ಸಿಡಿಸಿ ಔಟಾಗದೆ ಉಳಿದಿದ್ದಾರೆ.

  • ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಬೆಂಗಳೂರು: ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಪೂಜಾ ಹತ್ಯೆ ಪ್ರಕರಣವನ್ನು ಬೆಂಗ್ಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

    ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪತ್ತೆಯಾದಾಗ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಬಾಗಲೂರು ಪೊಲೀಸರು ಕೊಲೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ಕರೆಗಳನ್ನು ಪರಿಶೀಲಿಸಿದ್ದಾರೆ. ಆಗ ಪೂಜಾ ಬಳಸುತ್ತಿದ್ದ ಫೋನ್ ನಂಬರ್ ಪತ್ತೆಯಾಗಿದೆ.

    ಪೂಜಾಳ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಆಕೆಯ ದೇಹದ ಗುರುತು ಬೇಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮೊದಲು ಪೊಲೀಸರು ಪೂಜಾಳ ಪತಿ ಸೌದೀಪ್ ದೇಗೆ ಫೋಟೋ ಕಳುಹಿಸಿದ್ದರು. ಆಗ ಸೌದೀಪ್ ತನ್ನ ಪತ್ನಿಯ ದೇಹವನ್ನು ಗುರುತಿಸಿರಲಿಲ್ಲ. ಬಳಿಕ ಸೌದೀಪ್ ತನ್ನ ಪತ್ನಿಯ ದೇಹದ ಮೇಲಿದ್ದ ಟ್ಯಾಟೂ ನೋಡಿ ನನ್ನ ಪತ್ನಿ ಪೂಜಾ ಸಿಂಗ್ ದೇ ಎಂದು ಗುರುತಿಸಿದ್ದರು.

    ಬಾಗಲೂರು ಪೊಲೀಸರು ಯಾವುದೇ ಸುಳಿವು ಇಲ್ಲದಿದ್ದರೂ ಕೇವಲ ಟ್ಯಾಟೂ ಮೇಲೆ ಪ್ರಕರಣ ಭೇದಿಸಿದ್ದಾರೆ. ಆರೋಪಿ ನಾಗೇಶ್ ಹತ್ಯೆ ವೇಳೆ ಪೂಜಾಸಿಂಗ್ ಗೆ 15 ರಿಂದ 20 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಆಗಿದ್ದೇನು?
    ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ ಮೆಂಟ್ ಮಾಡುತ್ತಿದ್ದರು. ಜುಲೈ 30ರಂದು ಕೆಲಸಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದಳು. ಹೀಗೆ ಬಂದವಳು ಕೆಲಸ ಮುಗಿಸಿ ಓಲಾ ಕ್ಯಾಬ್ ಮಾಡಿಕೊಂಡು ತಾನು ಉಳಿದುಕೊಂಡಿದ್ದ ಪರಪ್ಪನ ಆಗ್ರಹಾರ ಹೋಟೆಲಿಗೆ ಹೋಗಿದ್ದಾಳೆ. ಮಾರನೇ ದಿನ ಮುಂಜಾನೆ ನಾಲ್ಕು ಗಂಟೆಗೆ ತೆರಳಬೇಕಿದೆ. ಹಾಗಾಗಿ ಅದೇ ಕ್ಯಾಬ್ ಚಾಲಕನಿಗೆ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೇಳಿದ್ದಾಳೆ. ನಾಗೇಶ್ ಬೆಳಗ್ಗೆ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಈಕೆಯ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು ಆಕೆಯನ್ನು ಕೊಲೆ ಮಾಡಿದ್ದಾನೆ.

    ಹಣದ ಆಸೆಗೆ ಬಿದ್ದು ಕೊಲೆ ಮಾಡಿದ ನಾಗೇಶನಿಗೆ ಕೇವಲ 500 ರೂ. ಹಾಗೂ ಎರಡು ಮೊಬೈಲ್ ಸಿಕ್ಕಿದೆ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

  • ಮತ್ತೆ ಸದ್ದು ಮಾಡ್ತಿದೆ ನಟಿ ಎದೆ ಪಕ್ಕದಲ್ಲಿ ಪವನ್ ಕಲ್ಯಾಣ್ ಟ್ಯಾಟೋ

    ಮತ್ತೆ ಸದ್ದು ಮಾಡ್ತಿದೆ ನಟಿ ಎದೆ ಪಕ್ಕದಲ್ಲಿ ಪವನ್ ಕಲ್ಯಾಣ್ ಟ್ಯಾಟೋ

    ಹೈದರಾಬಾದ್: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರ ಹೆಸರು ಹಾಗೂ ಅವರ ಭಾವಚಿತ್ರವನ್ನು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳಾ ಅಭಿಮಾನಿ ಮತ್ತು ನಟಿ ತನ್ನ ನೆಚ್ಚಿನ ನಟನ ಹೆಸರನ್ನ ಎದೆಯ ಪಕ್ಕದ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ನಟಿ ಆಶು ರೆಡ್ಡಿ ಪವನ್ ಕಲ್ಯಾಣ್ ಹೆಸರನ್ನು ಟ್ಯಾಟೋ ಹಾಕಿಸಿಕೊಂಡು ಅನೇಕ ದಿನಾಗಳಾಗಿವೆ. ಆದರೆ ಇದೀಗ ಅವರ ಫೋಟೋ ಮತ್ತೆ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ. ಆಶು ರೆಡ್ಡಿ ಅವರ ನೆಚ್ಚಿನ ನಟ ಪವನ್ ಕಲ್ಯಾಣ್. ಹೀಗಾಗಿ ಅವರ ಹೆಸರನ್ನು ಎದೆಯ ಭಾಗದಲ್ಲಿ (ಎದೆಯ ಪಕ್ಕದಲ್ಲಿ) ಟ್ಯಾಟೂ ಹಾಕಿಸಿಕೊಂಡಿದ್ದರು.

    ಟ್ಯಾಟೂ ಫೋಟೋವನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ “ಟ್ಯಾಟೋ ಹಾಕಿಸಿಕೊಂಡರೆ ಪವನ್ ಕಲ್ಯಾಣ್ ಜೊತೆ ನನಗೆ ಅಫೇರ್ ಇದ್ಯಾ?” ಎಂದು ಪ್ರಶ್ನೆ ಮಾಡಿದ್ದು, ಜೊತೆ ಉತ್ತರ ಕೊಡಿ ಎಂದು ನಿರ್ದೇಶಕ ಕತ್ತಿ ಮಹೇಶ್ ಅವರಿಗೆ ಟ್ಯಾಗ್ ಮಾಡಿದ್ದರು. ಆಶು ರೆಡ್ಡಿ ಈಗ ತೆಲುಗಿನ ಬಿಗ್‍ಬಾಸ್ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದಾರೆ. ಹೀಗಾಗಿ ಹಳೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

    ನಟಿ ಆಶು ರೆಡ್ಡಿ ಅವರು ಡಬ್‍ಸ್ಮಾಶ್ ವಿಡಿಯೋಗಳನ್ನು ಮಾಡುವ ಮೂಲಕ ಖ್ಯಾತಿ ಪಡೆದಿದ್ದು, ಕೆಲವು ಸಿನಿಮಾಗಲ್ಲಿ ಕೂಡ ನಟಿಸಿದ್ದಾರೆ. ಇವರು ನಟಿ ಸಮಂತಾ ಅವರನ್ನೆ ಹೋಲುವಂತೆ ಕಾಣುತ್ತಾರೆ. ಹಾಗಾಗಿ ಇವರನ್ನ ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಆಶು ರೆಡ್ಡಿ ಅವರು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ಪವನ್ ಹೆಸರನ್ನ ತನ್ನ ಎದೆಯ ಭಾಗದಲ್ಲಿ ಟ್ಯಾಟೂ ಹಾಕಿಕೊಂಡಿದ್ದಾರೆ.

  • ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಸ್ಪೀಕರ್ ಸರಳತೆ ನೋಡಿ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿದ ಅಭಿಮಾನಿ

    ಕೋಲಾರ: ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅಭಿಮಾನಿಯೋರ್ವ ಬೆನ್ನ ಮೇಲೆ ಅವರ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಯುವಕ ಶ್ರೀನಾಥ್ ತನ್ನ ಬೆನ್ನ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶ್ರೀನಾಥ್‍ಗೆ ರಮೇಶ್ ಕುಮಾರ್ ಅವರ ಟ್ಯಾಟೂ ಹಾಕಿಸಿಕೊಳ್ಳಲು ಅವರ ಆದರ್ಶ ನಡೆಯೇ ಕಾರಣವಂತೆ, ಅವರನ್ನು ಚಿಕ್ಕವಯಸ್ಸಿನಿಂದಲೂ ಬಹಳ ಆರಾಧಿಸುತ್ತೇನೆ. ದೊಡ್ಡ ದೊಡ್ಡ ಪದವಿಯಲ್ಲಿದ್ದರೂ ಜನರ ಜೊತೆ ಬೆರೆಯುವ ಅವರ ಸರಳತೆ ನೋಡಿ ನಾನು ಅವರ ಪಕ್ಕ ಅಭಿಮಾನಿಯಾಗಿಬಿಟ್ಟೆ ಎಂದು ಹೇಳಿದ್ದಾರೆ.

    ಮೊದಲಿನಿಂದಲೂ ಅವರನ್ನು ಆರಾಧಿಸುತ್ತಿದ್ದ ನನಗೆ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ವೇಳೆ ಬಡವರಿಗಾಗಿ ಜಾರಿಗೆ ತಂದ ಆರೋಗ್ಯ ಯೋಜನೆಗಳು, ಬರಗಾಲದಿಂದ ತತ್ತರಿಸಿದ್ದ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ತಂದಿದ್ದು ಇವೆಲ್ಲವೂ ನನಗೆ ಆದರ್ಶ ಎನ್ನಿಸಿ ಜೀವನ ಪರ್ಯಂತ ಅವರ ನೆನಪು ಇರುವಂತೆ ಮಾಡಲು ತನ್ನ ಬೆನ್ನು ಮೇಲೆ ಸುಮಾರು 50 ಸಾವಿರ ಖರ್ಚು ಮಾಡಿ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದು ಶ್ರೀನಾಥ್ ಹೇಳಿದ್ದಾರೆ.

    ರಮೇಶ್‍ಕುಮಾರ್ ಒಬ್ಬ ಅಪರೂಪದ ಸಂವಿಧಾನವನ್ನು ಪರಿಪಾಲಿಸುವ ರಾಜಕಾರಣಿ. ಅವರು ಯಾವುದೇ ಒತ್ತಡಕ್ಕೆ ಒಳಗಾಗುವ ರಾಜಕಾರಣಿ ಅಲ್ಲ ಎನ್ನುತ್ತಾರೆ ಶ್ರೀನಾಥ್.

  • ಸತತ 7 ಗಂಟೆಯ ನಂತ್ರ ಬೆನ್ನಿನ ಮೇಲೆ ಮೂಡಿದ ಅಭಿಮನ್ಯು

    ಸತತ 7 ಗಂಟೆಯ ನಂತ್ರ ಬೆನ್ನಿನ ಮೇಲೆ ಮೂಡಿದ ಅಭಿಮನ್ಯು

    ರಾಮನಗರ: ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರಸ್ವಾಮಿ ಮೇಲಿನ ಅಭಿಮಾನಕ್ಕೆ ಅಭಿಮಾನಿಯೊಬ್ಬ ತನ್ನ ಬೆನ್ನಿನ ಮೇಲೆ ನಿಖಿಲ್ ಭಾವಚಿತ್ರವನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ರಾಮನಗರ ತಾಲೂಕಿನ ಹೊಂಬೇಗೌಡನದೊಡ್ಡಿ ಗ್ರಾಮದ ಚನ್ನೇಗೌಡ ತನ್ನ ಬೆನ್ನಿನ ಮೇಲೆ ನಿಖಿಲ್ ಕುಮಾರಸ್ವಾಮಿಯ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಅಭಿಮಾನ ತೋರ್ಪಡಿಸಿದ್ದಾರೆ. ಮುನಿರತ್ನ ‘ಕುರುಕ್ಷೇತ್ರ’ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿರುವ ಅಭಿಮನ್ಯು ಪಾತ್ರದ ಗೆಟಪನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ರಾಮನಗರದ ಮಧು ಟ್ಯಾಟೂ ಸೆಂಟರ್‌ನಲ್ಲಿ ಸುಮಾರು 7 ಗಂಟೆಗಳ ಕಾಲ ಟ್ಯಾಟೂ ಬಿಡಿಸಿದ್ದಾರೆ. ಅಲ್ಲದೆ ನಿಖಿಲ್ ಭಾವಚಿತ್ರದ ಅಡಿಯಲ್ಲಿ ಯುವರಾಜ ನಿಖಿಲ್‍ಗೌಡ ಎಂದು ಬರೆಸಿಕೊಂಡಿದ್ದಾರೆ. ನಿಖಿಲ್ ಟ್ಯಾಟೂ ನೋಡಲು ಯುವಕರ ದಂಡು ಸಹ ಟ್ಯಾಟೂ ಸೆಂಟರ್‌ಗೆ ಮುಗಿಬಿದ್ದಿತ್ತು.

    ಇತ್ತೀಚೆಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿನಲ್ಲಿ ಸಾರಥಿಯಾಗಿದ್ದ ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಅಭಿಮಾನಿಯೊಬ್ಬ ಸಂಗೊಳ್ಳಿ ರಾಯಣ್ಣ ಗೆಟಪ್‍ನ ಟ್ಯಾಟೂವನ್ನು ಹಾಕಿಸಿಕೊಂಡಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿಯ ಭಾವಚಿತ್ರವನ್ನು ನಿಖಿಲ್ ಅಭಿಮಾನಿ ತನ್ನ ಬೆನ್ನ ಮೇಲೆ ಮೂಡಿಸಿಕೊಂಡಿದ್ದಾರೆ. ಈ ಮೂಲಕ ರಾಮನಗರದಲ್ಲಿ ಇದೀಗ ನಟ ದರ್ಶನ್ ಹಾಗೂ ನಟ ನಿಖಿಲ್ ಅಭಿಮಾನಿಗಳ ನಡುವೆ ಟ್ಯಾಟೂ ಕೌಂಟರ್‌ಗಳು ಶುರುವಾಗಿದೆ ಎನ್ನಲಾಗುತ್ತಿದೆ.

  • ಸುಮಲತಾ ಗೆದ್ದಿದ್ದಕ್ಕೆ ಅಭಿಮಾನಿಯಿಂದ ಬೆನ್ನಿನ ಮೇಲೆ ದರ್ಶನ್ ಟ್ಯಾಟೂ

    ಸುಮಲತಾ ಗೆದ್ದಿದ್ದಕ್ಕೆ ಅಭಿಮಾನಿಯಿಂದ ಬೆನ್ನಿನ ಮೇಲೆ ದರ್ಶನ್ ಟ್ಯಾಟೂ

    ರಾಮನಗರ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ಖುಷಿಗೊಂಡ ದರ್ಶನ್ ಅಭಿಮಾನಿಯೊಬ್ಬ ಬೆನ್ನಿನ ತುಂಬ ದರ್ಶನ್ ಟ್ಯಾಟು ಹಾಕಿಸಿಕೊಂಡು ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.

    ರಾಮನಗರ ತಾಲೂಕಿನ ಕರೇನಹಳ್ಳಿ ಗ್ರಾಮದ ಕಾರ್ತಿಕ್ ಎಂಬವರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿನ ನಟ ದರ್ಶನ್ ರಾಯಣ್ಣ ಗೆಟಪ್‍ನ ಚಿತ್ರವನ್ನು ಬೆನ್ನಿನ ಪೂರ್ತಿಯಾಗಿ ಹಾಕಿಸಿಕೊಂಡಿದ್ದಾರೆ. ರಾಮನಗರದ ಮಧು ಟ್ಯಾಟು ಸೆಂಟರ್ ನಲ್ಲಿ ಸೋಮವಾರ ಕಾರ್ತಿಕ್ ಟ್ಯಾಟು ಹಾಕಿಸಿಕೊಂಡಿದ್ದಾರೆ.

    ನಟ ದರ್ಶನ್‍ರ ಅಭಿಮಾನಿಯಾಗಿರುವ ಕಾರ್ತಿಕ್ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಗೆದ್ದಿದ್ದಕ್ಕೆ ಖುಷಿಯಾಯಿತು. ಸುಮಲತಾ ಬೆನ್ನಿಗೆ ನಿಂತು ಚುನಾವಣೆಯ ಪ್ರಚಾರದಲ್ಲಿ ದರ್ಶನ್ ಪಾಲ್ಗೊಂಡು ಗೆಲುವಿಗೆ ಕಾರಣವಾಗಿದ್ದಕ್ಕೆ ಖುಷಿಯಾಗಿದ್ದು ಟ್ಯಾಟು ಹಾಕಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

    ಟ್ಯಾಟು ಹಾಕಿದ ಮಧು ಸಹ ದರ್ಶನ್ ಅಭಿಮಾನಿಯಾಗಿದ್ದು, ದರ್ಶನ್ ಟ್ಯಾಟುವಿಗೆ ಶೇ 50%ರಷ್ಟು ರಿಯಾಯಿತಿ ನೀಡಿದ್ದಾರೆ. ದರ್ಶನ್ ಅವರನ್ನು ದೂರದಿಂದಲೇ ನೋಡಿದ್ದೇನೆ. ಹತ್ತಿರದಿಂದ ಒಮ್ಮೆಯಾದರೂ ನೋಡಬೇಕು ಹಾಗೂ ಮಾತನಾಡಿಸಬೇಕು ಎಂಬ ಆಸೆಯಿರುವುದಾಗಿ ಟ್ಯಾಟು ಹಾಕಿಸಿಕೊಂಡ ಕಾರ್ತಿಕ್ ತನ್ನ ಹಂಬಲವನ್ನು ವ್ಯಕ್ತಪಡಿಸಿದ್ದಾರೆ.

  • ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು – ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡ ಯುವಕ

    ಮಂಡ್ಯ: ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ಯುವಕರೊಬ್ಬರು ತನ್ನ ಎದೆ ಮೇಲೆ ಮಂಡ್ಯದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

    ಕೆಆರ್ ಪೇಟೆಯ ಹೊಸ ಹೊಳಲು ಗ್ರಾಮದ ಯುವಕ ಸಚಿನ್ ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನೊಬ್ಬ ಹೊಸ ಮತದಾರ, ನನ್ನ ಮೊದಲ ವೋಟ್ ನಿಖಿಲ್‍ಗೆ ಹಾಕಬೇಕು. ಅಲ್ಲದೇ ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಸಚಿನ್, ನಿಖಿಲ್ ಮೇಲಿನ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡಿದ್ದಾರೆ.

    ಸಚಿನ್ ಬುಧವಾರ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಕೆಆರ್ ಪೇಟೆಯಲ್ಲಿ ದೇವೇಗೌಡರ ಬೃಹತ್ ಸಮಾವೇಶ ಇರುವ ಹಿನ್ನೆಲೆಯಲ್ಲಿ ಸಚಿನ್ ಸಮಾರಂಭಕ್ಕೆ ಹಾಜರಾಗಿದ್ದಾರೆ. ಸಮಾರಂಭದ ವೇಳೆ ನಿಖಿಲ್ ಪ್ರಚಾರಕ್ಕೆ ಬಂದಾಗ ಸಚಿನ್ ಆ ಟ್ಯಾಟೂ ತೋರಿಸಲು ಯತ್ನಿಸಿದ್ದಾರೆ.

    ಜೆಡಿಎಸ್ ಕಾರ್ಯಕರ್ತ ಕೆಆರ್ ಪೇಟೆಯ ಬ್ಯಾಲದಕೆರೆಯ ಪದ್ಮನಾಭ್ ಎಡ ಹಾಗೂ ಬಲ ಎದೆಯ ಮೇಲೆ ಎಚ್.ಡಿ ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದೇವೇಗೌಡರು ಹಾಗು ಕುಮಾರಸ್ವಾಮಿ ಮೇಲಿನ ಅಭಿಮಾನದಿಂದ ಕಾರ್ಯಕರ್ತ ಪದ್ಮಾನಾಭ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಆರ್ ಪೇಟೆಯ ಜೆಡಿಎಸ್ ಸಮಾವೇಶದಲ್ಲಿ ಹಚ್ಚೆಯ ಹಾಕಿಸಿಕೊಂಡಿರುವ ಅಭಿಮಾನಿಗಳು ಆಗಮಿಸಿದ್ದಾರೆ.

  • ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ಗರಂ

    ಮಂಡ್ಯ: ರೌಡಿ ಶೀಟರ್ ಗಳ ಕೈ ಮೇಲಿದ್ದ ಟ್ಯಾಟೂಗಳನ್ನು ನೋಡಿ ಮಂಡ್ಯ ಎಸ್‍ಪಿ ಶಿವಪ್ರಕಾಶ್ ದೇವರಾಜ್ ಗರಂ ಆಗಿದ್ದಾರೆ.

    ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುವ ಸಾಧ್ಯತೆ ಇದೆ ಎಂದು ಬುದ್ಧಿವಾದ ಹೇಳಿದ್ದಾರೆ. ಶನಿವಾರ ಮಂಡ್ಯದ ಡಿಆರ್ ಗ್ರೌಂಡ್‍ನಲ್ಲಿ ರೌಡಿಶೀಟರ್ ಗಳ ಪೆರೇಡ್ ಹಮ್ಮಿಕೊಳ್ಳಲಾಗಿತ್ತು. ಮಂಡ್ಯ ಜಿಲ್ಲೆಯ ಎಲ್ಲ ರೌಡಿಶೀಟರ್ ಗಳನ್ನು ಒಂದು ಕಡೆ ಕರೆಸಿ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೆ ಸನ್ಮಾರ್ಗದಲ್ಲಿ ನಡೆಯುವಂತೆ ಎಚ್ಚರಿಕೆ ನೀಡಲಾಯಿತು.

    ಈ ವೇಳೆ ಬಹುತೇಕ ರೌಡಿ ಶೀಟರ್‍ಗಳು ಟ್ಯಾಟೂ ಹಾಕಿಸಿಕೊಂಡಿದ್ದನ್ನು ಗಮನಿಸಿದ ಎಸ್‍ಪಿ ಗರಂ ಆಗಿದ್ದಲ್ಲದೇ ಅಸುರಕ್ಷಿತವಾಗಿ ಟ್ಯಾಟೂ ಹಾಕಿಸಿಕೊಂಡರೆ ಏಡ್ಸ್ ಬರುತ್ತೆ ಎಂದು ತಿಳುವಳಿಕೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv