Tag: tatanagar

  • ಕರ್ನಾಟಕಕ್ಕೆ ಜಾರ್ಖಂಡ್‍ನಿಂದ ಬರುತ್ತಿದೆ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು

    ಕರ್ನಾಟಕಕ್ಕೆ ಜಾರ್ಖಂಡ್‍ನಿಂದ ಬರುತ್ತಿದೆ ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು

    ನವದೆಹಲಿ: ಕರ್ನಾಟಕದ ಕೋವಿಡ್ 19 ಸೋಂಕಿತರಿಗೆ ಸಹಾಯವಾಗಲೆಂದು ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ತನ್ನ ಪ್ರಯಾಣವನ್ನು ಬೆಳೆಸಿದೆ.

    ಜಾರ್ಖಂಡ್ ರಾಜ್ಯದ ಟಾಟಾ ನಗರದಿಂದ ಬೆಂಗಳೂರಿಗೆ 6 ಕಂಟೈನರ್ ಮೆಡಿಕಲ್ ಆಕ್ಸಿಜನ್ ಹೊತ್ತುಕೊಂಡು ಬರುತ್ತಿರುವ ರೈಲಿನ ವಿಡಿಯೋವನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

    ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಕಳೆದ ವಾರ ಎತ್ತಿ ಹಿಡಿದಿತ್ತು.

    ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಅತ್ಯುತ್ತಮ ಆದೇಶ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

    ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಮೇ 7 ರಂದು ಕೇಂದ್ರಕ್ಕೆ ಆದೇಶಿಸಿತ್ತು.