Tag: Tanvir Seth

  • ಮೇಯರ್ ಚುನಾವಣೆ ಎಫೆಕ್ಟ್ – ಸೇಠ್ ಆಪ್ತರಿಗೆ ಅಮಾನತು ಶಿಕ್ಷೆ

    ಮೇಯರ್ ಚುನಾವಣೆ ಎಫೆಕ್ಟ್ – ಸೇಠ್ ಆಪ್ತರಿಗೆ ಅಮಾನತು ಶಿಕ್ಷೆ

    – ಸೇಠ್ ಆಪ್ತರಿಗೆ ಸಿದ್ದರಾಮಯ್ಯ ಶಾಕ್

    ಮೈಸೂರು: ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಆಂತರಿಕ ಕಲಹಗಳು ಬಹಿರಂಗಗೊಂಡಿದ್ದವು. ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಮಾಧ್ಯಮಗಳ ಮುಂದೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇಂದು ತನ್ವೀರ್ ಸೇಠ್ ಬಣದಲ್ಲಿ ಗುರುತಿಸಿಕೊಂಡಿದ್ದ ಮೂವರನ್ನ ಕಾಂಗ್ರೆಸ್ ನಿಂದ ಅಮಾನತುಗೊಳಿಸಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಆದೇಶ ಹೊರಡಿಸಿದ್ದಾರೆ.

    ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಡಿಸಿಸಿ ಉಪಾಧ್ಯಕ್ಷ ಅನ್ವರ್ ಪಾಷ(ಅಣ್ಣು) ಮತ್ತು ಕೆಪಿಸಿಸಿ ಸದಸ್ಯ ಪಿ.ರಾಜು ಅಮಾನತ್ತಾದ ಕಾಂಗ್ರೆಸ್ ಮುಖಂಡರು. ಸಿದ್ದರಾಮಯ್ಯರ ವಿರುದ್ಧ ಪ್ರತಿಭಟನೆ ಮಾಡಿ, ಘೋಷಣೆ ಕೂಗಿದ ಆರೋಪದಡಿ ಮೂವರನ್ನ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರತಿಭಟನೆ ಸಂಬಂಧ ನೋಟಿಸ್ ನೀಡಲಾಗಿತ್ತು. ಅಬ್ದುಲ್ ಖಾದರ್ ಬುಧವಾರ ನೋಟಿಸ್ ಗೆ ಲಿಖಿತ ಉತ್ತರ ನೀಡಿದ್ದರು. ಉತ್ತರ ನೀಡಿದ ಮರುದಿನವೇ ಮೂವರ ಅಮಾನತು ಆಗಿದೆ. ಇದನ್ನೂ ಓದಿ: ಮನೆ ಕಟ್ಟಿದೋರು ನಾವು, ರಾಜ್ಯ ಆಳಲು ಬರೋರು ನೂರಾರು ಜನ: ತನ್ವೀರ್ ಸೇಠ್

    ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಿದ್ರೆ, ಉಪ-ಮೇಯರ್ ಪರವಾಗಿ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ತನ್ವೀರ್ ಸೇಠ್ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಚರ್ಚೆಗಳು ನಡೆದಿದ್ದವು. ಇದನ್ನೂ ಓದಿ: ಪಕ್ಷ ಬಲಪಡಿಸುವ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಆಕ್ರೋಶ

  • ಮುಸ್ಲಿಂ ನಾಯಕ ಯಾರು ಅನ್ನೋದನ್ನು ಜನ ಗುರುತಿಸುತ್ತಾರೆ: ತನ್ವೀರ್ ಸೇಠ್‍ಗೆ ಜಮೀರ್ ತಿರುಗೇಟು

    ಮುಸ್ಲಿಂ ನಾಯಕ ಯಾರು ಅನ್ನೋದನ್ನು ಜನ ಗುರುತಿಸುತ್ತಾರೆ: ತನ್ವೀರ್ ಸೇಠ್‍ಗೆ ಜಮೀರ್ ತಿರುಗೇಟು

    ಬೆಂಗಳೂರು: ಹಜ್ ಖಾತೆ ಮುಸ್ಲಿಂ ಸಚಿವರಿಗೆ ಸೇರಬೇಕು. ಹೀಗಾಗಿ ಖಾತೆಯನ್ನು ಸಚಿವ ಯು.ಟಿ.ಖಾದರ್ ಅವರಿಗೆ ನೀಡಬೇಕು ಇಲ್ಲವೇ ನನಗೆ ನೀಡಬೇಕು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಜ್ ಖಾತೆ ಕೈತಪ್ಪಿರುವುದಕ್ಕೆ ರೋಷನ್ ಬೇಗ್ ಅವರಿಗೆ ಅಸಮಾಧಾನ ಇರೋದು ಸಹಜ. ಪಾಪ ಅವರು ಕೂಡ ಹಜ್ ಖಾತೆ ನಿಭಾಯಿಸಿದವರು. ಆದರೆ ಈಗ ಅವರು ಸಚಿವರಾಗಿಲ್ಲ. ಸಚಿವರಾಗದೇ ಅವರಿಗೆ ಹಜ್ ಖಾತೆ ಹೇಗೆ ನೀಡಲು ಬರುತ್ತದೆ ಎಂದು ಅವರು ಪ್ರಶ್ನಿಸಿದರು.

    ಹಜ್ ಖಾತೆಯನ್ನು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಅವರಿಗೆ ನೀಡಿದರೆ ಸಂತೋಷವಿದೆ. ಸದ್ಯ ಹಜ್ ಯಾತ್ರೆಗೆ ರಾಜ್ಯದಿಂದ 5,200 ಮಂದಿಗೆ ತೆರಳಲು ಅವಕಾಶವಿದೆ. ನನಗೆ ಹಜ್ ಖಾತೆ ದೊರೆತರೆ 2 ಸಾವಿರ ಮಂದಿಗೆ ಸಿಗುವಂತೆ ಮಾಡುತ್ತೇನೆ ಎಂದು ಸಚಿವ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಜ್ ಯಾತ್ರೆಗೆ ಭಾರತದಿಂದ ಈಗ ಎಷ್ಟು ಮಂದಿ ತೆರಳುತ್ತಿದ್ದಾರೆ?

    ನಾನು ಹೊಂದಾಣಿಕೆ ಮಾಡಿಕೊಂಡು ಹೋಗುವ ರಾಜಕಾರಣಿಯಲ್ಲ. ಯಾರಿಗೂ ವಿನಾಕಾರಣ ಸವಾಲು ಹಾಕುವುದಿಲ್ಲ. ಆದರೆ ನನಗೆ ಸವಾಲು ಹಾಕುವವರಿಗೆ ಉತ್ತರ ನೀಡದೇ ಬಿಡುವುದಿಲ್ಲ. ನಾನೊಬ್ಬ ಸಮಾಜ ಸೇವಕ, ಸಮಾಜ ಸೇವೆಗೆ ಬಂದವನು. ಇದೇ ಬೇಕು ಎಂದು ಪಟ್ಟು ಹಿಡಿದಿಲ್ಲ. ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ್ ಕೃಪೆಯಿಂದ ನಾನು ಮಂತ್ರಿಯಾಗಿಲ್ಲ. ನನ್ನ ಹಣೆಬರಹದಲ್ಲಿ ಮಂತ್ರಿ ಸ್ಥಾನವಿತ್ತು. ಹೀಗಾಗಿ ಆಗಿರುವೆ ಎಂದು ಸಚಿವರು ಟಾಂಗ್ ನೀಡಿದರು.

    ಶಾಸಕ ತನ್ವೀರ್ ಸೇಠ್ ಅವರನ್ನು ನಾನು ಸೋಲಿಸಲು ಪ್ರಯತ್ನಿಸಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ತಕ್ಷಣವೇ ಅವರು ಹೈಕಮಾಂಡ್ ಗೆ ದೂರು ಕೊಡಬೇಕಿತ್ತು. ಆದರೆ ಈಗ ನನ್ನನ್ನು ಜಮೀರ್ ಅಹಮದ್ ಸೋಲಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸುವುದು ಸೂಕ್ತವಲ್ಲ. ಹೈಕಮಾಂಡ್ ಅರ್ಹತೆ ಇದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಕೊಡುತ್ತದೆ. ಹೀಗಾಗಿ ನನಗೆ ಸಚಿವ ಸ್ಥಾನ ದೊರೆತಿದೆ. ಅರ್ಹತೆ ಇಲ್ಲದೆ ಮಂತ್ರ ಮಾಡಲು ನಾನು ರಾಹುಲ್ ಗಾಂಧಿ ಅವರ ಸಂಬಂಧಿಯಲ್ಲ. ತನ್ವೀರ್ ಸೇಠ್ ಜೊತೆಗೆ ಅವರ ಕ್ಷೇತ್ರಕ್ಕೆ ಹೋಗಿ ಕೇಳಿದರೆ, ಜನರು ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಅರ್ಥವಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರು ನನಗ್ಯಾಕೆ ಬೇಕು: ಮಾಧ್ಯಮಗಳ ಮುಂದೆ ಕಾರಣ ಬಿಚ್ಚಿಟ್ಟ ಜಮೀರ್ ಅಹ್ಮದ್

    ಬಿಪಿಎಲ್ ಕಾರ್ಡ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆಗೆ ಕೇಂದ್ರದಿಂದ ಆದೇಶ ಬಂದಿದೆ. ಬಿಪಿಎಲ್ ಕಾರ್ಡ್ ನಲ್ಲಿ ಕುಟುಂಬದ ಸದಸ್ಯರನ್ನು ಹಾಗೂ ಆಧಾರ್ ಸಂಖ್ಯೆ ಸೇರಿಸಲು ಮುಂದಿನ ಆರು ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಿರುವೆ ಎಂದು ಅವರು ಸ್ಪಷ್ಟ ಪಡಿಸಿದರು.

  • ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್

    ಬೆಂಗಳೂರು: ಕನಿಷ್ಟ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಟ ಹುಚ್ಚ ವೆಂಕಟ್ ಇವರ ಬೆಂಬಲಕ್ಕೆ ನಿಂತಿದ್ದಾರೆ.

    ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲಿ 2ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿದ್ದು, ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಹುಚ್ಚ ವೆಂಕಟ್ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ಹೆಣ್ಣುಮಕ್ಕಳ ವಿಚಾರವಾಗಿ ಮೊದಲು ಧ್ವನಿ ಎತ್ತಿದ್ದು ನಾನು. ಹೆಣ್ಮಕ್ಕಳ ವಿಚಾರ ಬಂದರೆ ಸಾಯುವವರೆಗೂ ಧ್ವನಿ ಎತ್ತುವುದು ನಾನು. ಹಣ್ಮಕ್ಕಳನ್ನು ಈ ರೀತಿ ಬೀದಿಯಲ್ಲಿ ಕೂರಿಸುವುದು ಸರಿಯಲ್ಲ ಎಂದು ಆಕ್ರೋಶದಿಂದ ಹೇಳಿದ್ರು.

    ನಾನು ತನ್ವೀರ್ ಸೇಠ್ ಅವರನ್ನ ಕೇಳ್ತೀನಿ, ನಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅವರು ಈ ರೀತಿ ಬೀದಿಯಲ್ಲಿ ಕೂತಿದ್ದರೆ ಸುಮ್ಮನಿರುತ್ತೀರಾ? ಈ ಹೆಣ್ಣು ಮಕ್ಕಳು ಏನಾಗಬೇಕು ನಿಮಗೆ? ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿಲ್ವಾ? 2000 ರೂಪಾಯಿಯಲ್ಲಿ ನಾವು-ನೀವು ಬದುಕುವುದಕ್ಕೆ ಆಗುತ್ತಾ? ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಪ್ರಶ್ನಿಸಿದರು.

    ತನ್ವೀರ್ ಸೇಠ್ ಈ ವಿಚಾರದಲ್ಲಿ ತಲೆ ಹಾಕಬೇಕು. ಸಿದ್ದರಾಮಯ್ಯ ಅವರು ತೀರ್ಮಾನ ತೆಗೆದುಕೊಳ್ಳಬೇಕು. 2000 ರೂಪಾಯಿಯಲ್ಲಿ ನಾನು, ನೀವು ಹೆಂಡತಿ ಮಕ್ಕಳನ್ನು ಸಾಕುವುದಕ್ಕೆ ಆಗುತ್ತಾ? ಇವರು ತುಂಬಾ ಒಳ್ಳೆಯ ಅಡುಗೆ ಮಾಡುತ್ತಾರೆ. ನೀವು ಸಂಬಂಳ ಕೊಟ್ಟಿಲ್ಲ ಅಂದ್ರೆ ಅವರು ಕೆಟ್ಟ ಅಡುಗೆ ಮಾಡಿದ್ರೆ ಆಗ ನಿಮ್ಮ ಹೆಸರು ಹಾಳಾಗಲ್ವಾ? ಆದ್ರೆ ಅವರಿಗೂ ಮಕ್ಕಳು ಇದ್ದಾರೆ. ಆದ್ದರಿಂದ ಅವರು ಆ ರೀತಿ ಮಾಡುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಯಮ್ಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿಕೊಂಡರು. ಇದನ್ನು ಓದಿ: 3ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ- ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ


    ನೀವು ಮನೆಯಲ್ಲಿ ಮಲಗಿದ್ದೀರಾ. ಆದರೆ ನಮ್ಮ ಹೆಣ್ಣು ಮಕ್ಕಳು ಬೀದಿಯಲ್ಲಿ ಮಲಗಿದ್ದಾರೆ. ಒಂದು ಹೆಣ್ಣು ಮಗುವಿಗೆ ರಕ್ಷಣೆ ಎಲ್ಲಿದೆ? ಹೆಣ್ಮಮಕ್ಕಳು ಬೀದಿಯಲ್ಲಿ ಇರಬಾದರು. ನಮ್ಮ ಮನೆಯಲ್ಲೂ ತಾಯಿ, ಹೆಂಡತಿ ಇದ್ದಾರೆ. ಆದ್ದರಿಂದ ಈ ಹೆಣ್ಣುಮಕ್ಕಳು ಬೀದಿಯಲ್ಲಿ ಕೂತಿದ್ದರೆ ಈ ಹುಚ್ಚ ವೆಂಕಟ್ ಬೀದಿಯಲ್ಲಿ ಕೂತುಕೊಳ್ಳುತ್ತಾನೆ. ಹೆಣ್ಣುಮಕ್ಕಳ ವಿಷಯ ಬಂದರೆ ನಾನು ಜೈಲಿಗೂ ಹೋಗಲು ಸಿದ್ಧನಾಗಿದ್ದೇನೆ. ನೀವು ಬರೀ ಸಂಬಳ ಜಾಸ್ತಿ ಮಾಡುವುದು ಅಷ್ಟೆ ಅಲ್ಲ. ಇಲ್ಲಿ ಕೂತಿರುವ ಹೆಣ್ಣು ಮಕ್ಕಳಿಗೆ ಕ್ಷಮೆ ಕೇಳಬೇಕು. ಇಲ್ಲ ಅಂದರೆ ಇಡೀ ಕರ್ನಾಟಕದಲ್ಲಿರುವ ಹೆಣ್ಣುಮಕ್ಕಳು ಬರುತ್ತಾರೆ. ಹೆಣ್ಣುಮಕ್ಕಳ ಶಕ್ತಿ ಗೊತ್ತಾ ನಿಮಗೆ? ನಮ್ಮ ತಾಯಿ ಕೂಡ ಒಂದು ಹೆಣ್ಣು ಮರಿಯಬೇಡಿ ಎಂದು ಹೇಳಿದ್ರು.

    https://www.youtube.com/watch?v=EHcPajzmgA4

     

  • ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತನ್ವೀರ್ ಸೇಠ್ ಆಯ್ತು, ಈಗ ಶಾಸಕ ಸುರೇಶ್ ಬಾಬುಗೆ 10 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ

    ತುಮಕೂರು: ಕೆಲವು ದಿನಗಳ ಹಿಂದೆ ಸಚಿವ ತನ್ವೀರ್ ಸೇಠ್‍ಗೆ 10 ಕೋಟಿ ರೂ. ನೀಡುವಂತೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದ. ಇದೀಗ ತುಮಕೂರಿನ ಚಿಕ್ಕನಾಯಕಹಳ್ಳಿ ಶಾಸಕ ಸುರೇಶ್ ಬಾಬುಗೆ ರವಿ ಪೂಜಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ.

    ಕೂಡಲೇ 10 ಕೋಟಿ ರೂ. ಕೊಡಬೇಕು. ಇಲ್ಲದಿದ್ರೆ ನಿನ್ನ ಪ್ರಾಣಕ್ಕೆ ಅಪಾಯ ಅಂತಾ ಜೀವ ಬೆದರಿಕೆ ಹಾಕಿದ್ದಾನೆ. ಸುರೇಶ್ ಬಾಬು ಜೊತೆ ಹಿಂದಿಯಲ್ಲಿ ಮಾತನಾಡಿರುವ ರವಿಪೂಜಾರಿ, ಕರೆ ಬಳಿಕ ಮೆಸೇಜ್ ಕೂಡ ಮಾಡಿ ಬೆದರಿಕೆ ಹಾಕಿದ್ದಾನೆ. ಶಾಸಕರು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿತ್ತು. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸಚಿವ ಸೇಠ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದರು. ಇದನ್ನೂ ಓದಿ: ತೀರ್ಥಹಳ್ಳಿಯ ಚಿನ್ನ-ಬೆಳ್ಳಿ ವರ್ತಕನಿಗೆ ರವಿ ಪೂಜಾರಿ ಬೆದರಿಕೆ- ಅಬ್ಬಾ ಇಷ್ಟು ಹಣಕ್ಕೆ ಬೇಡಿಕೆ!

    https://www.youtube.com/watch?v=CVoLaIKwhk0

  • ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ

    ಬೆಂಗಳೂರು: ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 62ನೇ ಅದ್ಧೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಸಿಎಂ ಅವರು ರಾಷ್ಟ್ರಧ್ವಜ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ನಾಡ ಧ್ವಜಾರೋಹಣ ಹಾರಿಸಿದರು.

    ಸಿಎಂ ಅವರು ಬಿಳಿ ಬಣ್ಣದ ಪಾರಿವಾಳ, ರಾಜ್ಯೋತ್ಸವದ ಬಲೂನ್ ಹಾರಿ ಬಿಟ್ಟು ಸಮಾರಂಭಕ್ಕೆ ಚಾಲನೆ ನೀಡಿದರು. ಈ ವೇಳೆ ಭಾಗಿಯಾಗಿದ್ದ ಸಾವಿರಾರು ವಿದ್ಯಾರ್ಥಿಗಳು ಹಳದಿ, ಕೆಂಪು ಬಲೂನ್‍ಗಳನ್ನು ಹಾರಿಸಿದರು. ವಿವಿಧ ಶಾಲಾ ತಂಡಗಳು ಪಥ ಸಂಚಲನ ಮಾಡಿ ಸಿದ್ದರಾಮಯ್ಯ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೆ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ “ಕನ್ನಡ ಸೌರಭ” ಸುಲಭ ಕನ್ನಡ ಕಲಿಗೆಗಾಗಿ ಇ ಕಲಿಕೆ ವೆಬ್ ಸೈಟ್ ಅನ್ನು ಸಿಎಂ ಅವರು ಬಿಡುಗಡೆ ಮಾಡಿದರು. ನಂತರ ಅರಬಿಂದೋ ಮೆಮೋರಿಯಲ್ ಶಾಲೆಯ 100 ವಿದ್ಯಾರ್ಥಿಗಳಿಂದ ನಾಡಗೀತೆ ಮತ್ತು ರೈತಗೀತೆ ಗಾಯನ ನಡೆಯಿತು.

    ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ, ವಿಶಾಲ ಕರ್ನಾಟಕದ ದಿನವನ್ನು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಲಿಪಿ ಹಾಗೂ ದೀರ್ಘ ಇತಿಹಾಸ ಇದೆ. ಕನ್ನಡಿಗರು ಉದಾರಿಗಳು, ಬೇರೆ ಜನರನ್ನು ಪ್ರೀತಿಸುವ ಮನಸ್ಸು ಇರೋರು. ಭಾಷೆಯ ಬಗ್ಗೆ ಉದಾರವಾಗಿರಬೇಕಾಗಿಲ್ಲ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

    ಕಳೆದ 61 ವರ್ಷಗಳಲ್ಲಿ ನಾಡಿನ ಅಭಿವೃದ್ದಿ ಸಾಕಷ್ಟು ಆಗಿದೆ. ಆದರೆ ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡುವಲ್ಲಿ ಇನ್ನೂ ಯಶಸ್ಸು ಸಾಧಿಸಿಲ್ಲ. ಕರ್ನಾಟಕದಲ್ಲಿ ವಾಸಿಸುವವರೆಲ್ಲ ಕನ್ನಡಿಗರೇ, ಇಲ್ಲಿರುವವರೆಲ್ಲಾ ಕನ್ನಡ ಭಾಷೆ ಕಲಿಯಲೇಬೇಕು. ನಾನು ಮೊದಲು ಕನ್ನಡಿಗ ನಂತರ ಭಾರತೀಯ ಅನ್ನೋ ಭಾವನೆ ಬರಬೇಕು. ಯಾವ ಭಾಷೆಯಾದರೂ ಕಲಿಯಿರಿ. ಕನ್ನಡ ಕಲಿಯದೇ ಇರೋದು ಕನ್ನಡಕ್ಕೆ ಮಾಡಿದ ಅವಮಾನ ಆಗುತ್ತೆ. ಕನ್ನಡೇತರರಿಗೆ ಕನ್ನಡ ಕಲಿಯುವ ವಾತಾವರಣ ನಿರ್ಮಾಣ ಮಾಡಬೇಕಾದುದ್ದು, ಕನ್ನಡಿಗರ ಕರ್ತವ್ಯ ಎಂದರು.

    ಇತ್ತೀಚೆಗೆ ಪೋಷಕರಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿದೆ. ಕನ್ನಡ ಭಾಷೆಯನ್ನು ಕಲಿಯೋದ್ರಿಂದ ಜ್ಞಾನ ಭಂಡಾರ ಜಾರಿ ಆಗುತ್ತೆ. ಪ್ರಾದೇಶಿಕ ಭಾಷೆ ಉಳಿವಿಗಾಗಿ ಪಿಎಂ ಸೇರಿದಂತೆ ಎಲ್ಲಾ ರಾಜ್ಯದ ಸಿಎಂಗಳಿಗೆ ಆಯಾ ರಾಜ್ಯಗಳ ಮಾತೃ ಭಾಷೆಯಲ್ಲೇ ಶಿಕ್ಷಣ ನೀಡುವ ತಿದ್ದುಪಡಿ ಬರುವಂತೆ ಪತ್ರ ಬರೆದಿದ್ದೇವೆ. ಆದರೆ ಪ್ರಧಾನಿಗಳು ಯಾವುದಕ್ಕೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದರು.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ಕನ್ನಡ ನಾಡು ನುಡಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ ಕಡ್ಡಾಯವಾಗಿ ಶಾಲೆಗಳಲ್ಲಿ ಕಲಿಯಬೇಕು ಅನ್ನೋ ಆದೇಶವನ್ನು ಸರ್ಕಾರ ಹೊರಡಿಸಿದೆ. ಗುರು ಚೇತನದ ಮೂಲಕ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ವಿಶ್ವಾಸ ಕಿರಣ ಕಾರ್ಯಕ್ರಮದ ಮೂಲಕ ರಜಾ ದಿನಗಳಲ್ಲಿ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡಿದ್ದೇವೆ. ಶಿಕ್ಷಣ ಇಲಾಖೆಗೆ ಸಿದ್ದರಾಮಯ್ಯ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಜನವರಿ ಫೆಬ್ರವರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ ಮುಕ್ತಾಯವಾಗಲಿದೆ. ಅಷ್ಟೇ ಅಲ್ಲದೇ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ಶಿಫಾರಸ್ಸು ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರು ನಾಗರೀಕರು ಬಂದಿರಲಿಲ್ಲ. ಕಾರ್ಯಕ್ರಮಕ್ಕೆ ಬಿಜೆಪಿ ನಾಯಕರಿಗೆ ಆಹ್ವಾನವಿದ್ದರೂ ಗೈರು ಹಾಜರಾಗಿದ್ದರು. ಇದರಿಂದ ಬಹುತೇಕ ಕ್ರೀಡಾಂಗಣ ಖಾಲಿ ಖಾಲಿ ಇತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶಾಲಾ ಮಕ್ಕಳು ಮತ್ತು ಶಾಲಾ ಶಿಕ್ಷಕರು ಮಾತ್ರ ಪಾಲ್ಗೊಂಡಿದ್ದರು.

    ಕಾರ್ಯಕ್ರಮದಲ್ಲಿ ಇಂದು ನಿಧನರಾದ ಶಾಸಕ ಚಿಕ್ಕಮಾದು ಅವರಿಗೆ ಮಕ್ಕಳು ಮತ್ತು ಅಧಿಕಾರಿಗಳು ಎಲ್ಲರು ಎದ್ದು ನಿಂತು ಒಂದು ನಿಮಿಷ ಶ್ರದ್ಧಾಂಜಲಿ ಸಲ್ಲಿಸಿದರು.

         

  • ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಚರ್ಮರೋಗ: ಪಬ್ಲಿಕ್ ಟಿವಿ ವರದಿಗೆ ಎಚ್ಚೆತ್ತ ಆರೋಗ್ಯ ಇಲಾಖೆ

    – ನಾಲ್ಕು ಗ್ರಾಮಗಳಲ್ಲಿ ವೈದ್ಯರ ತಂಡದಿಂದ ನಿರಂತರ ತಪಾಸಣೆ

    ರಾಯಚೂರು: ಜಿಲ್ಲೆಯ ಕೃಷ್ಣಾನದಿ ತೀರದ ಗ್ರಾಮಗಳ ಜನ ಕಲುಷಿತ ನೀರನ್ನ ಬಳಸಿ ವಿವಿಧ ಚರ್ಮರೋಗಗಳಿಗೆ ತುತ್ತಾಗುತ್ತಿರುವ ಕುರಿತ ಪಬ್ಲಿಕ್ ಟಿವಿ ವರದಿಗೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕಳೆದ ಮೂರು ದಿನಗಳಿಂದ ರಾಯಚೂರು ತಾಲೂಕಿನ ಆತ್ಕೂರು, ಡಿ.ರಾಂಪೂರ್, ಬೂರ್ದಿಪಾಡ್, ಸರ್ಜಾಪುರ ಗ್ರಾಮಗಳಲ್ಲಿ ವೈದ್ಯರ ತಂಡ ಆರೋಗ್ಯ ತಪಾಸಣೆ ಶಿಬಿರ ನಡೆಸಿದೆ.

    ನದಿ ತೀರದ ಗ್ರಾಮಗಳ ಜನರ ಚರ್ಮರೋಗಕ್ಕೆ ಕೃಷ್ಣನದಿ ನೀರು ಹಾಗೂ ಬಿಸಿಲು ಕಾರಣ ಅಂತ ವೈದ್ಯರು ಹೇಳಿದ್ದಾರೆ. ನದಿಯಲ್ಲಿನ ನಿಂತ ನೀರಲ್ಲಿ ಹೆಚ್ಚಾಗಿರುವ ಫಂಗಸ್‍ನಿಂದಾಗಿ ಚರ್ಮರೋಗಗಳು ಕಾಣಿಸಿಕೊಂಡಿವೆ.  ಹೀಗಾಗಿ ವೈದ್ಯರು ಆಂಟಿ ಫಂಗಲ್, ಆಂಟಿ ಸ್ಟೆಮಿ ಮಾತ್ರೆ ಹಾಗು ಮುಲಾಮುಗಳನ್ನು ನೀಡುತ್ತಿದ್ದಾರೆ. ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ನೀರನ್ನ ಶುದ್ಧೀಕರಿಸಿ ಬಳಸುವಂತೆ ಜಾಗೃತಿಯನ್ನ ಮೂಡಿಸುತ್ತಿದ್ದಾರೆ.

    ಹೆಚ್ಚು ಕಾಲ ನಿಂತ ನೀರನ್ನ ಬಳಸುವುದಿರಿಂದ ವಾಂತಿ, ಬೇಧಿ, ಅತೀಸಾರದಂತಹ ಕಾಯಿಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಮಾದರಿಗಳನ್ನ ಸಂಗ್ರಹಿಸಿರುವ ಆರೋಗ್ಯ ಇಲಾಖೆ ಪ್ರಯೋಗಾಯಲಕ್ಕೆ ಕಳುಹಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾರಾಯಣಪ್ಪ ನದಿ ನೀರನ್ನ ಶುದ್ಧಿಕರಿಸುವಂತೆ ಜಿಲ್ಲಾ ಆರೋಗ್ಯ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಗ್ರಾಮ ಪಂಚಾಯ್ತಿಗೆ ನೀರನ್ನ ಶುದ್ದಿಕರಿಸಿ ಕೊಳಾಯಿಗೆ ಬಿಡುವಂತೆ ಸೂಚಿಸಿದ್ದು, ನೀರಿನ ಕ್ಲೋರಿನೇಷನ್ ನಡೆದಿದೆ.

    ಪಬ್ಲಿಕ್ ಟಿವಿ ವರದಿಗೆ ಕೂಡಲೇ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಈಗ ವೈದ್ಯರ ತಂಡ ಚಿಕಿತ್ಸೆಗೆ ಮುಂದಾಗಿದೆ. ಗ್ರಾಮಗಳಿಗೆ ಶುದ್ಧ ನೀರಿನ ಸರಬರಾಜು ಮಾಡುವ ಅಗತ್ಯವಿದೆ.

  • ರಾಯಚೂರಿನಲ್ಲಿ ಬಿಸಿಲಲ್ಲೇ ಪಾಠ ಮಾಡ್ತಾರೆ: ತಲೆ ಮೇಲೆ ಟವಲ್ ಹಾಕ್ಕೊಂಡು ಹುಡುಗ್ರು ಪಾಠ ಕೇಳ್ತಾರೆ

    ರಾಯಚೂರಿನಲ್ಲಿ ಬಿಸಿಲಲ್ಲೇ ಪಾಠ ಮಾಡ್ತಾರೆ: ತಲೆ ಮೇಲೆ ಟವಲ್ ಹಾಕ್ಕೊಂಡು ಹುಡುಗ್ರು ಪಾಠ ಕೇಳ್ತಾರೆ

    – ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡಗಳಿಲ್ಲ
    -ಪ್ರಾಣಭಯ, ಆರೋಗ್ಯ ಭಯದಲ್ಲೇ ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳು

    ರಾಯಚೂರು: ಬಿಸಿಲು ಅಂದ್ರೆ ಥಟ್ ಅಂತ ನೆನಪಾಗೋದು ರಾಯಚೂರು ಜಿಲ್ಲೆ. ಆದ್ರೆ ಇಂತಹ ಬಿಸಿಲನ್ನೇ ಲೆಕ್ಕಿಸದೇ ಇಲ್ಲಿನ ವಿದ್ಯಾರ್ಥಿಗಳು ಮೈದಾನದಲ್ಲಿ ಕುಳಿತು ಪ್ರತಿನಿತ್ಯ ಪಾಠ ಕೇಳ್ತಿದ್ದಾರೆ. ಇದು ತಪ್ಪು ಮಾಡಿದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುತ್ತಿರೋ ಶಿಕ್ಷೆಯಲ್ಲ. ಬದಲಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಉಸ್ತುವಾರಿ ಜಿಲ್ಲೆಯಲ್ಲಿ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಘೋರಾತಿಘೋರ ಶಿಕ್ಷೆ.

    ಮೈದಾನದಲ್ಲೇ ಪಾಠ: ರಾಯಚೂರು ತಾಲೂಕಿನ ಮಂಜರ್ಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವಿಲ್ಲದೆ ಪ್ರತಿದಿನ ತಲೆ ಮೇಲೆ ಟವಲ್, ಕರ್ಚಿಫ್ ಹಾಕಿಕೊಂಡು ಬಿರುಬಿಸಿಲಿನಲ್ಲಿ ಪಾಠ ಕೇಳುತ್ತಿದ್ದಾರೆ. 1958 ರಲ್ಲಿ ನಿರ್ಮಿಸಲಾದ ಶಾಲೆ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ತಕ್ಕಮಟ್ಟಿಗೆ ಇರುವ ಎರಡು ಕೊಠಡಿಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಪಾಠಮಾಡಲು ಸಾಧ್ಯವಿಲ್ಲ. ಹೀಗಾಗಿ ಮರದ ಕೆಳಗೆ ಹಾಗೂ ಮೈದಾನದಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಹೊತ್ತು ಕಳೆದಂತೆ ಬಿಸಿಲು ಏರುವುದರಿಂದ ಮಕ್ಕಳು ತಮ್ಮ ರಕ್ಷಣೆಗಾಗಿ ನಿತ್ಯ ಶಾಲೆಗೆ ಟವೆಲ್ ತರುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಆಗಾಗ ಮಕ್ಕಳು ಆರೋಗ್ಯ ಸಮಸ್ಯೆಗಳಿಗೂ ತುತ್ತಾಗುತ್ತಿದ್ದಾರೆ. 131 ಬಾಲಕರು, 139 ಬಾಲಕಿಯರು ಸೇರಿ ಒಟ್ಟು 270 ವಿದ್ಯಾರ್ಥಿಗಳು ಕಟ್ಟಡವಿಲ್ಲದ ಶಾಲೆಯಲ್ಲಿ ಓದುತ್ತಿದ್ದಾರೆ.

    ಶಾಲೆಗೆ ಜಾಗ ಕೊಡಲ್ಲ: ಇನ್ನೂ ಗ್ರಾಮದಲ್ಲಿ ಶಾಲೆಗೆ ಅಂತ ಯಾವ ಜಾಗವೂ ಇಲ್ಲ, ಸದ್ಯ ಇರುವ ಜಾಗವನ್ನ ಈ ಹಿಂದೆ ಯಾರೋ ದಾನ ಮಾಡಿದ್ದು. ಈಗ ಅವರ ಮಕ್ಕಳು ಇದ್ದ ಜಾಗದಲ್ಲೇ ಶಾಲೆ ಕಟ್ಟಿಕೊಳ್ಳಿ ಒಂದಿಂಚು ಹೆಚ್ಚು ಜಾಗವನ್ನೂ ಕೊಡುವುದಿಲ್ಲ ಅಂತಿದ್ದಾರೆ. ಶಾಲೆಯ ಮುಂದೆ ಮಾರಿಕಾಂಬ ದೇವಾಲಯವಿರುವುದರಿಂದ ಮೈದಾನ ಉಳಿದುಕೊಂಡಿದೆ. ಶಿಕ್ಷಣ ಇಲಾಖೆ ಹೆಸರಿನಲ್ಲಿ ಜಾಗವಿಲ್ಲದಿರುವುದರಿಂದ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಎಚ್‍ಕೆಆರ್‍ಡಿಬಿ ಅನುದಾನಕ್ಕೆ ಅರ್ಜಿ ಹಾಕಿರುವ ಕೇತ್ರಶಿಕ್ಷಣಾಧಿಕಾರಿಗಳು, ಹಣ ಬಿಡುಗಡೆಯಾದ್ರೆ ಮುಂದುವರೆಯುವುದಾಗಿ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಶಾಲೆಯ ಮರು ನಿರ್ಮಾಣ ನಡೆಯಬೇಕಿದೆ. ಅಧಿಕಾರಿಗಳು ಭೂದಾನಿಗಳ ಮನವೊಲಿಸಿ ಇಲ್ಲವೇ ಪರ್ಯಾಯ ಜಾಗದಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಯನ್ನ ನಿರ್ಮಿಸಬೇಕಿದೆ. ಜಿಲ್ಲಾ ಉಸ್ತುವಾರಿ ಹೊತ್ತಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡಲೇ ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.