Tag: Tanveer Sait

  • ಜಮೀರ್ ಅಹ್ಮದ್‍ಗೆ ಏಕವಚನದಲ್ಲೇ ತಿರುಗೇಟು ಕೊಟ್ಟ ತನ್ವೀರ್ ಸೇಠ್

    ಜಮೀರ್ ಅಹ್ಮದ್‍ಗೆ ಏಕವಚನದಲ್ಲೇ ತಿರುಗೇಟು ಕೊಟ್ಟ ತನ್ವೀರ್ ಸೇಠ್

    ಮೈಸೂರು: ಮೈಸೂರಿನ ಎನ್.ಆರ್. ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ  ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಏಕ ವಚನದಲ್ಲೇ ತಿರುಗೇಟು ನೀಡಿದ್ದಾರೆ.

    ಅವನ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಇದು ಸಭ್ಯತೆ ಇರುವವನು ಆಡುವ ಮಾತಲ್ಲ. ಜಮೀರ್ ಅಹ್ಮದ್ ಜೊತೆ ನಾನು ರಾಜಕೀಯವಾಗಿ ಅಥವಾ ವೈಯುಕ್ತಿವಾಗಿ ಸಂಘರ್ಷಕ್ಕೆ ಸಿದ್ಧ. ಆದರೆ, ಮಾಧ್ಯಮಗಳ ಮುಂದೆ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದರು.

    ನಮ್ಮ ಜನಾಂಗ ಒಪ್ಪಿಕೊಳ್ಳುವ ನಾಯಕತ್ವ ಅವನಲ್ಲಿ ಇಲ್ಲ ಎಂದು ಹೇಳಿದ್ದೇನೆ. ಈಗಲೂ ನಾನು ಅದನ್ನೆ ಹೇಳುತ್ತಿದ್ದೇನೆ. ಮೊನ್ನೆಯ ನನ್ನ ಕ್ಷೇತ್ರಕ್ಕೆ ಬಂದು ಕೆಟ್ಟ ಹುಳುವಾಗಿ ಬೆಳೆದಿರುವವರ ಪರವಾಗಿ ಜಮೀರ್ ಕೆಲಸ ಮಾಡಿದ ಎಂದು ಆರೋಪಿಸಿದರು. ಇದನ್ನೂ ಓದಿ: ಮುಸ್ಲಿಂ ನಾಯಕ ಯಾರು ಅನ್ನೋದನ್ನು ಜನ ಗುರುತಿಸುತ್ತಾರೆ: ತನ್ವೀರ್ ಸೇಠ್‍ಗೆ ಜಮೀರ್ ತಿರುಗೇಟು

    ಶಕ್ತಿ ಪ್ರದರ್ಶನ ಜನರನ್ನು ಸೇರಿಸಿ ತೋರಿಸುವುದಲ್ಲ. ಜನರನ್ನ ಮನಸ್ಸನ್ನ ಗೆದ್ದು ತೋರಿಸುವುದು ಎಂದು ಚಾಟಿ ಬೀಸಿದರು. ನಾನು ಕ್ಷೇತ್ರ ಬಿಟ್ಟು ಹೊರಗೆ ಹೋಗಿದ್ದೇನೋ ಇಲ್ಲವೊ. ನನಗೆ ಎಷ್ಟು ಜನರ ಬೆಂಬಲ ಇದೆ ಎಂದು ಅಹಂ ತೋರಿಸುವ ಅಗತ್ಯ ನನಗೆ ಇಲ್ಲ ಎಂದರು.

    ಬಹುತೇಕ ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಪರ ಇದ್ದರು. ನಾಲ್ಕು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ಕೇಳಿದ್ದೇವು. ಕೆಲವು ಜನಾಂಗದವರು ಡಿಸಿಎಂ ಸ್ಥಾನ ಕೇಳುತ್ತಿದ್ದಾರೆ. ಅವರು ಪಕ್ಷಕ್ಕೆ ಬೆಂಬಲಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಮುಸ್ಲಿಂಮರು ಮಾತ್ರ ಸಂಪೂರ್ಣವಾಗಿ ಕಾಂಗ್ರೆಸ್ ಪರ ಇದ್ದರು. ನಾವು ಸಂಘಟಿತರಾಗಿ ಸ್ಥಾನ ಕೇಳುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.

    ಹೈಕಮಾಂಡ್ ನನಗೆ ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡಬೇಡಿ ಎಂದಿದ್ದು ಅದನ್ನು ನಾನು ಪಾಲಿಸುತ್ತಿದ್ದೇನೆ. ಜಮೀರ್ ನೀಡಿರುವ ಸವಾಲನ್ನು ನಾನು ಸ್ವೀಕರಿಸುವುದು ಇಲ್ಲ, ತಳ್ಳಿಹಾಕೋದು ಇಲ್ಲ. ಕ್ಷೇತ್ರಕ್ಕೆ ಬರುವುದು ಬಿಡುವುದು ಜಮೀರ್ ಗೆ ಬಿಟ್ಟದ್ದು ಎಂದು ತನ್ವೀರ್ ಸೇಠ್ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರು ನನಗ್ಯಾಕೆ ಬೇಕು: ಮಾಧ್ಯಮಗಳ ಮುಂದೆ ಕಾರಣ ಬಿಚ್ಚಿಟ್ಟ ಜಮೀರ್ ಅಹ್ಮದ್

  • ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ನಡುರಸ್ತೆಯಲ್ಲೇ ಸಚಿವ ತನ್ವೀರ್ ಸೇಠ್ ಗೆ ಫುಲ್ ಕ್ಲಾಸ್- ತಡೆಯಲು ಬಂದ ಆಪ್ತನಿಗೆ ಅವಾಜ್ ಹಾಕಿದ ಮತದಾರ

    ಮೈಸೂರು: ಮತ ಕೇಳಲು ಬಂದ ಸಚಿವರಿಗೆ ಮತದಾರ ಕ್ಲಾಸ್ ತೆಗೆದುಕೊಂಡ ಘಟನೆ ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ನಡೆದಿದೆ.

    ಮೈಸೂರಿನ ಎನ್ ಆರ್ ಕ್ಷೇತ್ರದ ಶಾಸಕ ಹಾಗೂ ಸಚಿವ ತನ್ವೀರ್ ಸೇಠ್ ಮತದಾರನಿಂದ ತರಾಟೆಗೆ ಒಳಗಾಗಿದ್ದಾರೆ. ಮತದಾರ ರಸ್ತೆಯಲ್ಲಿ ಏಕಾಂಗಿಯಾಗಿ ನಿಂತು ಸಚಿವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದನ್ನು ತಡೆಯಲು ಬಂದ ಸಚಿವರ ಆಪ್ತ ಕಾರ್ಯದರ್ಶಿಯನ್ನು ಲೆಕ್ಕಿಸದೆ ಅವಾಜ್ ಹಾಕಿದ್ದಾರೆ.

    ಮೈಸೂರಿನ ಕನ್ನಡಪರ ಹೋರಾಟಗಾರ ಪರಮೇಶ್, ತನ್ವೀರ್ ಸೇಠ್ ಗೆ ಕ್ಲಾಸ್ ತೆಗೆದುಕೊಂಡ ವ್ಯಕ್ತಿ. ಎನ್.ಆರ್. ಕ್ಷೇತ್ರದ ರಾಘವೇಂದ್ರ ನಗರದಲ್ಲಿ ಮತಯಾಚನೆಗಾಗಿ ತನ್ವೀರ್ ಸೇಠ್ ಪಾದಯಾತ್ರೆ ನಡೆಸುತ್ತಿದ್ದರು. ಈ ವೇಳೆ ಎದುರಾದ ಮತದಾರ ಪರಮೇಶ್, ತನ್ವೀರ್ ಸೇಠ್‍ಗೆ ಹಲವು ನಿಮಿಷಗಳ ಕಾಲ ಪ್ರಶ್ನೆಗಳ ಸುರಿಮಳೆಗೈದರು.

    ರಸ್ತೆ ರೀಪೇರಿ ಮಾಡಿಸಿಲ್ಲ. ನಾನು ಅಂದಿನಿಂದಲೂ ನಿಮಗೆ ನಿಮ್ಮ ತಂದೆ ಹಾಗೂ ನಿಮಗೆ ಮತ ಹಾಕ್ತಿದ್ದೀವಿ. ಆದ್ರೆ ಮನೆ ಬಳಿ ಕೆಲಸ ಮಾಡಿಕೊಡಿ ಅಂತ ಬಂದ್ರೆ ಕ್ಯಾರೇ ಅನ್ನೊಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

  • ಶಾಲಿನಿ ರಜನೀಶ್ ವರ್ಗಾವಣೆ ಮಾಡುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

    ಶಾಲಿನಿ ರಜನೀಶ್ ವರ್ಗಾವಣೆ ಮಾಡುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

    ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನ ವರ್ಗಾವಣೆ ಮಾಡಿ ಅಂತ ಸ್ವತಃ ಶಿಕ್ಷಣ ಸಚಿವ ತನ್ವೀರ್ ಸೇಠ್, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

    ಪೋಷಕರ ಹಾಗೂ ಮಕ್ಕಳ ಮಾಹಿತಿಯನ್ನ ಖಾಸಗಿ ಸಂಸ್ಥೆಗೆ ನೀಡುವ ಕುರಿತು ಎಂಓಯು ಮಾಡಿಕೊಂಡಿದ್ದ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಚಿವರ ಮಾತನ್ನು ಶಾಲಿನಿ ರಜನೀಶ್ ಮೀರಿದ್ರು. ಸಚಿವರ ಮಾತು ಕೇಳದೆ ನಿರ್ಧಾರಗಳನ್ನ ತೆಗೆದುಕೊಂಡಿದ್ರು. ಇದರಿಂದ ಆಕ್ರೋಶಗೊಂಡಿರುವ ಸಚಿವ ತನ್ವೀರ್ ಸೇಠ್, ಶಾಲಿನಿ ರಜನೀಶ್ ಅವರನ್ನು ಶಿಕ್ಷಣ ಇಲಾಖೆಯಿಂದ ವರ್ಗಾವಣೆ ಮಾಡಿ ಅಂತ ಸಿಎಂಗೆ ಪತ್ರ ಬರೆದಿದ್ದಾರೆ.

    ಅಲ್ಲದೆ ಈ ಹಿಂದೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಅಜಯ್ ಸೇಠ್‍ರನ್ನ ಪ್ರಭಾರ ಕೆಲಸ ನಿರ್ವಹಿಸಲು ಆದೇಶ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರದಲ್ಲಿ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.

  • ಶಾಲಾ ಮಕ್ಕಳ, ಪೋಷಕರ ಮಾಹಿತಿ ಬಿಕರಿ- ಕಾನೂನು ಮೀರಿ ಶಿಕ್ಷಣ ಇಲಾಖೆ ಒಪ್ಪಂದ

    ಶಾಲಾ ಮಕ್ಕಳ, ಪೋಷಕರ ಮಾಹಿತಿ ಬಿಕರಿ- ಕಾನೂನು ಮೀರಿ ಶಿಕ್ಷಣ ಇಲಾಖೆ ಒಪ್ಪಂದ

    ಬೆಂಗಳೂರು: ಶಾಲಾ ಮಕ್ಕಳ, ಪೋಷಕರ ಮಾಹಿತಿಯನ್ನೇ ಸರ್ಕಾರ ಖಾಸಗಿ ಕಂಪನಿಗೆ ಮಾರಾಟ ಮಾಡ್ತಿದೆ ಅನ್ನೋ ಅಚ್ಚರಿಯ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    1 ಕೋಟಿ 12 ಲಕ್ಷ ಮಕ್ಕಳ, ಪೋಷಕರ ಮಾಹಿತಿಯನ್ನು ಉತ್ತರ ಭಾರತದ ಸ್ಕೂಲ್ ಜಿ ಲಿಂಕ್ ಎಂಬ ಖಾಸಗಿ ಕಂಪನಿಗೆ ನೀಡಲು ಶಿಕ್ಷಣ ಇಲಾಖೆ ತಿಳುವಳಿಕೆ ಒಪ್ಪಂದ(ಎಂಒಯು) ಮಾಡಿಕೊಂಡಿದೆ. ಇದರ ಜೊತೆಗೆ ಶಿಕ್ಷಕರು, ಉಪನ್ಯಾಸಕರ ಮಾಹಿತಿಯನ್ನೂ ಖಾಸಗಿಯವರಿಗೆ ನೀಡುತ್ತಿದೆ ಎನ್ನಲಾಗಿದೆ.

    ಕಾನೂನು ಮೀರಿ ಶಿಕ್ಷಣ ಇಲಾಖೆ ಈ ಒಪ್ಪಂದ ಮಾಡಿಕೊಂಡಿದ್ದು, ಖಾಸಗಿ ಕಂಪನಿ ಮಾಹಿತಿಗಳನ್ನ ಪಡೆದು ಆಪ್ ಮೂಲಕ ಸಾರ್ವಜನಿಕರಿಗೆ ನೀಡುತ್ತದೆ ಎಂಬುದಾಗಿ ತಿಳಿದುಬಂದಿದೆ.

    ಮಹಿಳಾ ಐಎಎಸ್ ಅಧಿಕಾರಿ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಅಧಿಕಾರಿಗಳ ಮಾತಿಗೂ ಬೆಲೆ ಕೊಡದೆ ಮಾಹಿತಿಗಳನ್ನ ಶೇರ್ ಮಾಡಲು ಎಂಒಯು ಒಪ್ಪಂದ ಮಾಡಿಕೊಂಡಿದ್ದಾರೆ. ಶಾಲಿನಿ ರಜನೀಶ್ ಜೊತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಾದನ್, ಸಹಾಯಕ ನಿರ್ದೇಶಕ ವೆಂಕಟೇಶ್ ಎಂಒಯುಗೆ ಸಹಿ ಮಾಡಿರುವುದಾಗಿ ಮಾಹಿತಿ ಲಭಿಸಿದೆ.


    ಎಂಒಯುದಲ್ಲಿ ರಾಜ್ಯದ 1 ಕೋಟಿ 12 ಲಕ್ಷ ಮಕ್ಕಳ ಮಾಹಿತಿ, ಮಕ್ಕಳ ಪೋಷಕರ ಫೋನ್ ನಂಬರ್, ವಿಳಾಸ, ಕುಟುಂಬದ ಮಾಹಿತಿ ಇರುತ್ತದೆ. ಒಟ್ಟಾರೆ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಜನರ ಮಾಹಿತಿಗಳು ಇಲ್ಲಿರುತ್ತದೆ. ಗೌಪ್ಯ ಮಾಹಿತಿಯನ್ನ ಖಾಸಗಿಯವರಿಗೆ ನೀಡಬಾರದು ಅನ್ನೋ ನಿಯಮವಿದೆ. ಆದ್ರೂ ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ಖಾಸಗಿ ಅವರಿಗೆ ನೀಡೋದು ಅಪರಾಧವಾಗಿದೆ. ಯಾರ ಅನುಮತಿ ಇಲ್ಲದೆ ಶಾಲಿನಿ ರಜನೀಶ್ ಅವರು ಎಂಒಯು ಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಎದ್ದಿದೆ.

    ಕ್ಯಾನ್ಸಲ್ ಮಾಡ್ತೀವಿ: ಈ ಸಂಬಂಧ ಶಿಕ್ಷಣ ಸಚಿವ ತನ್ವೀರ್ ಸೇಠ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಒಯು ಅಂಶಗಳು ನನಗೆ ತೋರಿಸಿದ್ದೇ ಬೇರೆ ಎಂಒಯು ಆಗಿರೋದು ಬೇರೆ. ನನ್ನ ಧಿಕ್ಕನ್ನೆ ಇಲಾಖೆ ಅಧಿಕಾರಿ ತಪ್ಪಿಸಿದ್ದಾರೆ. ಎಂಒಯು ಬದಲಾವಣೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಖಾಸಗಿ ಸಂಸ್ಥೆಗೆ ಮಾಹಿತಿ ನೀಡೋದು ಅಪರಾಧ. ಈ ಎಂಒಯುನಲ್ಲಿ ಸರ್ಕಾರದ ವಿರೋಧಿ ಅಂಶಗಳೇ ಹೆಚ್ಚಾಗಿವೆ. ಅಧಿಕಾರಿಗಳು ನಾವು ಮಾಡಿದ್ದೇ ಸರಿ ಅಂತ ಅಂದುಕೊಂಡಿದ್ದಾರೆ. ಪೋಷಕರ, ಮಕ್ಕಳ, ಶಿಕ್ಷಕರ ಮಾಹಿತಿ ನೀಡಬೇಕು ಅನ್ನೋ ಎಂಒಯು ಆಗಿರೋದು ನಿಜ. ಇದು ನನ್ನ ಗಮನಕ್ಕೆ ಬಾರದೆ ಆಗಿದೆ. ಎಂಒಯು ಅನ್ನು ಕ್ಯಾನ್ಸಲ್ ಮಾಡುತ್ತೇವೆ. ಅಧಿಕಾರಿಯ ವರ್ತನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ. ಪೋಷಕರಿಗೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಅಂತ ಹೇಳಿದ್ದಾರೆ.

  • ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ತೀವ್ರಗೊಳ್ಳೋ ಸಾಧ್ಯತೆ- ಈ ಬಾರಿಯ ಬಜೆಟ್‍ನಲ್ಲಿ ಸಿಗುತ್ತಾ ಭರ್ಜರಿ ಗಿಫ್ಟ್?

    ಬೆಂಗಳೂರು: ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಮತ್ತೆ ಮಂಗಳವಾರ ಕೂಡ ಬಿಸಿಯೂಟ ಕಾರ್ಯಕರ್ತೆಯರು ಬೀದಿಗಳಿದ್ದು, ಇಂದೂ ಕೂಡ ಮುಂದುವರೆಯುವ ಸಾಧ್ಯತೆಗಳಿವೆ.

    ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸಿರುವ ಸಾವಿರಕ್ಕೂ ಹೆಚ್ಚು ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಬೀದಿಗಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ರು. ಮಂಗಳವಾರ ಸ್ವತಃ ಸಚಿವ ತನ್ವೀರ್ ಸೇಠ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಿಎಂ ಜೊತೆ ಮಾತಾನಾಡಿ ಸಂಜೆ 6 ಗಂಟೆಯೊಳಗೆ ಬೇಡಿಕೆ ಈಡೆರಿಸುತ್ತೇವೆ ಅಂತಾ ಭರವಸೆ ನೀಡಿದ್ರು.

    ಆದ್ರೆ ಭರವಸೆ ನೀಡಿ ತೆರಳಿದ ಸಚಿವ ತನ್ವೀರ್ ಸೇಠ್ ಆ ಕಡೆ ತಲೆ ಹಾಕಲೇ ಇಲ್ಲ. ಹೀಗಾಗಿ ಇದೀಗ ಪ್ರತಿಭಟನಾಕಾರರು ಸುಳ್ಳು ಭರವಸೆ ನೀಡಿ ಓಡುವ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 15 ಸಾವಿರ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ 2100 ರೂ. ಸಂಬಳ ನೀಡುತ್ತಿರುವ ಸರ್ಕಾರ, ಕಳೆದ ಎರಡು ತಿಂಗಳಿನಿಂದ ಸಂಬಳವೂ ಪಾವತಿ ಮಾಡಿಲ್ಲ. ಹೀಗಾಗಿ ಲಿಖಿತ ಭರವಸೆ ಕೊಟ್ಟರೆ ಮಾತ್ರ ಧರಣಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಅಲ್ಲದೇ ಬೇಡಿಕೆ ಈಡೇರದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಈ ಹಿಂದೆ ಹಲವು ಬಾರಿ ಕನಿಷ್ಠ ವೇತನ, ಪಿಎಫ್, ಇಎಸ್‍ಐ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರು ಬೀದಿಗೆ ಇಳಿದ್ರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೀಗಾಗಿ ಬಿಸಿಯೂಟ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೇ ಅಹೋರತ್ರಿ ಧರಣಿ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ ಅಂತಾ ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇಂದು ರಾಜ್ಯದ ವಿವಿಧ ಭಾಗಗಳಿಂದ ಮತ್ತಷ್ಟು ಕಾರ್ಯಕರ್ತೆಯರು ಆಗಮಿಸಲಿದ್ದು, ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ.

  • ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಸಾವಿರಾರು ಬಿಸಿಯೂಟ ಸಿಬ್ಬಂದಿಗಳಿಂದ ಪ್ರತಿಭಟನೆ- ಸಚಿವ ತನ್ವೀರ್ ಸೇಠ್ ಮನೆ ಮುತ್ತಿಗೆಗೆ ಪೊಲೀಸರ ತಡೆ

    ಬೆಂಗಳೂರು: ಬಿಸಿಯೂಟ ಸಿಬ್ಬಂದಿಗಳಿಂದ ಇವತ್ತು ನಗರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ನಡೆಸಲು ರಾಜ್ಯದ ವಿವಿಧ ಜಿಲ್ಲೆ ಗಳಿಂದ ಬಿಸಿಯೂಟ ತಯಾರಕರು ಬೆಂಗಳೂರಿಗೆ ಅಗಮಿಸಿದ್ದು, ಐವತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

    ಶಿಕ್ಷಣ ಸಚಿವ ತನ್ವೀರ್ ಸೇಠ್ ಮನೆಗೆ ಮುತ್ತಿಗೆ ಹಾಕಲು ಬಿಸಿಯೂಟ ಕಾರ್ಯಕರ್ತೆಯರು ಮುಂದಾಗಿದ್ದು, ಫ್ರೀಡಂ ಪಾರ್ಕ್ ನಿಂದ ತನ್ವೀರ್ ಸೇಠ್ ನಿವಾಸದ ಕಡೆ ಹೊರಟಿದ್ದರು. ಮುತ್ತಿಗೆಗೆ ಹೊರಟ ರ‍್ಯಾಲಿಯನ್ನು ಪೊಲೀಸರು ತಡೆದ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ , ಬ್ಯಾರಿಕೇಡ್ ಗಳನ್ನ ತಳ್ಳಿದ್ದಾರೆ.

    ಸಚಿವ ತನ್ವೀರ್‍ ಸೇಠ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನಮ್ಮೆಲ್ಲರ ಕಷ್ಟ ಅವರಿಗೆ ಅರ್ಥವಾಗ್ತಿಲ್ವಾ? ನಾವು ನಮ್ಮ ಹಕ್ಕನ್ನ ಕೇಳ್ತಿದ್ದೀವಿ. ಕನಿಷ್ಟ ವೇತನ ಕೊಡಿ. ನ್ಯಾಯಯುತವಾಗಿ ನಮಗೆ ಕೊಡಬೇಕಾದ ವೇತನ ಕೊಡಿ. ಸಚಿವರು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿ ಭರವಸೆ ನೀಡೋವರಗೆ ಪ್ರತಿಭಟನೆ ಹಿಂಪಡೆಯವುದಿಲ್ಲ ಎಂದು ಆಗ್ರಹಿಸಿದ್ದಾರೆ. ರಸ್ತೆ ಮಧ್ಯಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಪ್ರತಿಭಟನೆ ಯಾಕೆ?: ಕನಿಷ್ಠ ವೇತನ, ಕೆಲಸ ಖಾಯಂ, ಪಿಎಫ್, ಐಎಸ್‍ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಬಿಸಿಯೂಟ ತಯಾರಕರ ಸಂಘ ಹಾಗೂ ಎಐಟಿಯುಸಿ ವತಿಯಿಂದ ಪ್ರತಿಭಟನೆ ನಡೆಯುತ್ತಿದೆ.

    ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಇವತ್ತು ಬಿಸಿಯೂಟ ಇರುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಜಿಲ್ಲಾ ಅಡುಗೆ ಸಹಾಯಕರು ಪ್ರತಿಭಟನೆ ಮಾಡ್ತಿರೋದ್ರಿಂದ ಜಿಲ್ಲೆಗಳಲ್ಲಿ ಮಾತ್ರ ಇಂದು ಬಿಸಿಯೂಟದ ಸಮಸ್ಯೆ ಎದುರಾಗಲಿದೆ.

    ಈ ಹಿಂದೆ ಸಾಕಷ್ಟು ಭಾರಿ ಪ್ರತಿಭಟನೆ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಪ್ರತಿಭಟನೆಯಲ್ಲಿ ಇಲಾಖೆ 5200 ರೂ. ಕನಿಷ್ಟ ವೇತನ ನೀಡುವ ಭರವಸೆ ನೀಡಿತ್ತು. ಪ್ರಸಕ್ತ ವರ್ಷದಿಂದ ಪ್ರತಿ ತಿಂಗಳು 5200 ರೂ. ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಆದ್ರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

    ಈ ವೇಳೆ ಪ್ರತಿಭಟನೆಗೆ ಬಂದಿದ್ದ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದು, ಸ್ಥಳದಲ್ಲೇ ಅವರನ್ನ ಸಹೋದ್ಯೋಗಿಗಳು ಆರೈಕೆ ಮಾಡಿದ್ದಾರೆ.

     

  • ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಮಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಹಾಕಿದ್ದು ನಾನೇ ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಸದ್ಯ ರವಿ ಪೂಜಾರಿ ತಾನೇ ಸಚಿವರಿಗೆ ಬೆದರಿಕೆ ಹಾಕಿದ್ದು ಅಂತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾನೆ.

    ಆಡಿಯೋದಲ್ಲಿ ಏನಿದೆ?: ತನ್ವೀರ್ ಸೇಠ್ ಹೆಸರಿಗಸ್ಟೇ ಶಿಕ್ಷಣ ಸಚಿವ. ಅವರಿಂದ ಬಡವರಿಗೆ ತೊಂದರೆಗಳಾಗುತ್ತಿದೆ. ಅವರು ಶ್ರೀಮಂತರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಡವರ ಪರವಾದ ಯಾವ ಕೆಲಸಗಳನ್ನೂ ಮಾಡ್ತಿಲ್ಲ. ಈ ಬಗ್ಗೆ ಬಡವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಶ್ರೀಮಂತರಿಂದ ಸಂಗ್ರಹಿಸಿದ ಹಣ ಸಚಿವರ ಹತ್ರ ಬೇಕಾದಷ್ಟು ಇದೆ. ಅದರಲ್ಲಿ ಹತ್ತು ಕೋಟಿ ನನಗೆ ಕೊಡಲೇಬೇಕು ಅಂತಾ ಹೇಳಿದ್ದೇನೆ.

    ತನ್ವೀರ್ ಸೇಠ್ ನೀಡಿದ ಪೊಲೀಸ್ ಕೇಸ್‍ಗೆ ತಲೆಕೆಡಿಸಿಕೊಳ್ಳಲ್ಲ. ದೂರು ಕೊಟ್ರೆ ಕೊಡಲಿ, ನಾನೇನು ತಲೆಕೆಡಿಸಿಕೊಳ್ಳಲ್ಲ ಅಂತಾ ರವಿ ಪೂಜಾರಿ ಹೇಳಿದ್ದಾನೆ.

    ಬೆದರಿಕೆ ಕರೆ ಬಂದ ಬಳಿಕ ತನ್ವೀರ್ ಸೇಠ್ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ.

    https://youtu.be/CVoLaIKwhk0

  • 10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಭೂಗತ ಪಾತಕಿಯಿಂದ ಬೆದರಿಕೆ ಸಂದೇಶ ಬಂದಿದೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿದೆ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿದೆ.

     

    ಈ ಬಗ್ಗೆ ಸಚಿವ ಸೇಠ್ ಕೊಟ್ಟಿರುವ ದೂರು ಇದೀಗ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆ ಆಗಿದೆ. ಇಂಟರ್‍ನ್ಯಾಷನಲ್ ನಂಬರ್‍ನಿಂದ ಬೆದರಿಕೆ ಬಂದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಆಯ್ತು, ಈಗ ಖಾಸಗಿ ಶಾಲೆಗಳಿಗೂ ಅಂಕುಶ

    ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಆಯ್ತು, ಈಗ ಖಾಸಗಿ ಶಾಲೆಗಳಿಗೂ ಅಂಕುಶ

    ಬೆಂಗಳೂರು: ಖಾಸಗಿ ಶಾಲೆಗಳ ಧನದಾಹಿ ತನಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಬಂದಿದೆ. ಖಾಸಗಿ ಶಾಲೆಗಳ ಶುಲ್ಕ ನಿಗದಿ ಮುಂದಿನ ವರ್ಷದಿಂದ ಜಾರಿ ಮಾಡಲಾಗುತ್ತದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ಪಿಯುಸಿ ಬೋರ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಖಾಸಗಿ ಶಾಲೆಗಳ ಶುಲ್ಕ ನಿಗದಿ ಸಂಬಂಧ ಈಗಾಗಲೇ ಕರಡು ಮಸೂದೆ ಸಿದ್ಧವಾಗಿದೆ. ಅಧಿವೇಶನದಲ್ಲಿ ಮಂಡಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಶುಲ್ಕ ನೀತಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

    ಒಂದು ವೇಳೆ ಶುಲ್ಕ ನಿಗದಿ ಮಾಡಿದ ಮೇಲೆ ಹೆಚ್ಚುವರಿ ಶುಲ್ಕ ಪಡೆದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾತ್ರವಲ್ಲ ಹೆಚ್ಚುವರಿ ಶುಲ್ಕ ಮರು ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

     

    ಪರೀಕ್ಷಾ ಸಿದ್ಧತೆ: ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದು, ಮಾರ್ಚ್ 1-13 ದ್ವಿತಿಯ ಪಿಯುಸಿ ಹಾಗೂ ಮಾರ್ಚ್ 23 ರಿಂದ ಏಪ್ರಿಲ್ 6 ವರೆಗೆ ಪರೀಕ್ಷೆ ನಡೆಯಲಿದೆ. ಚುನಾವಣಾ ಆಯೋಗಕ್ಕೂ ಪರೀಕ್ಷಾ ವೇಳಾಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಕಳೆದ ವರ್ಷದಂತೆ ಈ ವರ್ಷವೂ ಕರ್ನಾಟಕ ಸೆಕ್ಯೂರ್ ಎಕ್ಸಾಂ ಸಿಸ್ಟಮ್ ಅಳವಡಿಸಲಾಗುತ್ತೆ ಎಂದು ಹೇಳಿದರು.

    ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣವಾಗುತ್ತದೆ ಎನ್ನುವ ಗೊಂದಲಕ್ಕೆ ತೆರೆ ಎಳೆದ ಸಚಿವರು, ಹಿಂದಿನ ವರ್ಷದಂತೆ ಎರಡೂ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುತ್ತೇವೆ. ಪರೀಕ್ಷಾ ಅಕ್ರಮ ತಡೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಪಿಯುಸಿ ಬೋರ್ಡ್ ಸಿಬ್ಬಂದಿಯನ್ನು ಬದಲಾವಣೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಹೋಬಳಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಿ ಖಾಸಗಿ ಶಾಲೆಗಳ ಸಮಾನ ಶಾಲೆ ನಿರ್ಮಾಣ ಮಾಡುವುದಾಗಿ ತಿಳಿಸಿದರು.

    ಶಿಕ್ಷಕರ ಬಡ್ತಿ: ಇದೇ ಮೊದಲ ಬಾರಿಗೆ ಬಡ್ತಿ ಮೀಸಲಾತಿ ನಿಯಮದಲ್ಲಿ ಈ ಬಾರಿ 11 ಸಾವಿರ ಶಿಕ್ಷಕರಿಗೆ ಬಡ್ತಿ ನೀಡುತ್ತಿದ್ದೇವೆ. 6-8 ತರಗತಿ ಶಿಕ್ಷಕರಿಗೆ ಹೈಸ್ಕೂಲ್ ಶಿಕ್ಷಕರಾಗಿ ಬಡ್ತಿ ನೀಡಲಾಗುತ್ತೆ. ಶಿಕ್ಷಕರಿಗೆ ಪರೀಕ್ಷೆ ನಡೆಸುವ ಮೂಲಕ ಬಡ್ತಿಗೆ ಆಯ್ಕೆ ಮಾಡಲಾಗುತ್ತದೆ. ಹೈಸ್ಕೂಲ್ ಶಿಕ್ಷಕರನ್ನು ಪಿಯುಸಿ ಉಪನ್ಯಾಸಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡುವ ನಿರ್ಧಾರ ತೆಗೆದುಕೊಂಡಿವೆ ಎಂದರು.

    ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಫೆಬ್ರವರಿಯಲ್ಲಿ ಮುಕ್ತಾಯವಾಗಲಿದ್ದು, ಜನವರಿಯಲ್ಲಿ ಟಿಇಟಿ ಪರೀಕ್ಷೆ ನಡೆಸಲಾಗುತ್ತೆ ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಮುಂದಿನ ಚುನಾವಣೆ ಕ್ಷೇತ್ರ ಕುರಿತು ಸ್ಪಷ್ಟಪಡಿಸಿದ ಅವರು, ಪ್ರಸ್ತುತ ನನ್ನ ಸ್ವಕ್ಷೇತ್ರ ಮೈಸೂರು ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಖಚಿತ ಪಡಿಸಿದರು.

    ಕಾಯ್ದೆ ಹಿನ್ನೆಲೆ: 1998-99 ಶುಲ್ಕ ನಿಗಧಿ ಮಾಡಲಾಗಿತ್ತು. ಇದರ ಅನ್ವಯ ಖಾಸಗಿ ಶಾಲೆಯೊಂದರ ಒಟ್ಟಾರೆ ಸಿಬ್ಬಂದಿಯ ಸಂಬಳ ಹಾಗೂ 30% ಹೆಚ್ಚುವರಿಯನ್ನು ಒಟ್ಟು ಮಾಡಿ ವಿದ್ಯಾರ್ಥಿಗಳ ಅನುಗುಣಕ್ಕೆ ಭಾಗಿಸಿದ ಮೊತ್ತವನ್ನು ಶುಲ್ಕವಾಗಿ ಪಡೆಯುವ ನಿಯಮ ರೂಪಿಸಲಾಗಿತ್ತು. ಇದರ ಅನ್ವಯ ಹೆಚ್ಚುವರಿ ಪಡೆದ 30% ಶುಲ್ಕದಲ್ಲಿ ಶಾಲೆಯ ಇನ್ನಿತರ ಖರ್ಚುಗಳು ಕರೆಂಟ್ ಬಿಲ್, ಬಾಡಿಗೆ ಇತ್ಯಾದಿಗಳನ್ನು ಮಾಡಬೇಕಿತ್ತು.

    ಸುಮಾರು 18- 19 ವರ್ಷಗಳಿಂದ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಆದರೆ ಹಿಂದಿನ ಶುಲ್ಕ ನಿಗಧಿಯನ್ನ ಗಾಳಿಗೆ ತೂರಿ ಮನಸೋ ಇಚ್ಛೆ ಖಾಸಗಿ ಶಾಲೆಗಳು ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದವು. ಲಕ್ಷ ಲಕ್ಷ ಹಣವನ್ನು ಪೋಷಕರಿಂದ ಪಡೆಯುತ್ತಿದ್ದರು.

    ಖಾಸಗಿ ಶಾಲೆಗಳ ವಿರೋಧ: ಕಾಯ್ದೆಗೆ ಕೆಲವು ಮಧ್ಯಮ ವರ್ಗದ ಶಾಲೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಶಿಕ್ಷಣ ಇಲಾಖೆ 2015ರಲ್ಲಿ ಶುಲ್ಕ ಪರಿಷ್ಕರಣೆ ಸಂಬಂಧ ಕರಡು ರಚಿಸಿತ್ತು. ಇದರಲ್ಲಿ ಶಿಕ್ಷಕರ ಸಂಬಳ ಒಟ್ಟು ಮೊತ್ತ ಮತ್ತು ಗ್ರಾಮೀಣ ಪ್ರದೇಶಗಳಿಗೆ 50%, ಅರೆ ನಗರ ಪ್ರದೇಶಗಳಿಗೆ 60%, ನಗರ ಪಾಲಿಕೆಗಳಿಗೆ 75% ಹಾಗೂ ಬಿಬಿಎಂಪಿ ವಲಯಗಳಿಗೆ 100% ಶುಲ್ಕ ಹೆಚ್ಚಳ ಪಡೆಯುವ ಪ್ರಸ್ತಾಪ ಮಾಡಲಾಗಿತ್ತು. ಅಲ್ಲದೆ ಪ್ರತೀ ವರ್ಷ 10% ರಿಂದ 15% ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಅನೇಕ ಖಾಸಗಿ ಶಾಲೆಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಖಾಸಗಿ ಶಾಲೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಖಾಸಗಿ ಶಾಲೆಗಳು ಶುಲ್ಕ ವರ್ಗೀಕರಣ ಸರಿ ಇಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಕರಡು ಮಸೂದೆ ಮಂಡನೆಯಾಗಿರಲಿಲ್ಲ.

    ಏನು ಲಾಭ?
    ಕಾಯ್ದೆ ಜಾರಿಯಾದರೆ ಖಾಸಗಿ ಶಾಲೆಗಳ ಧನದಾಹಿ ತನಕ್ಕೆ ಬ್ರೇಕ್ ಬೀಳಲಿದೆ. ಶಾಲೆಗಳು ಮನಸ್ಸಿಗೆ ಬಂದಂತೆ ಶುಲ್ಕ ಪಡೆಯಲು ಸಾಧ್ಯವಾಗುವುದಿಲ್ಲ. ಲಕ್ಷ ಲಕ್ಷ ರೂ. ಹಣ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ. ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ತಕ್ಕಂತೆ ಶುಲ್ಕ ಪರಿಷ್ಕರಣೆ ಮಾಡಲಾಗುತ್ತೆ. ಏಕರೂಪ ಶುಲ್ಕ ಮಾಡಲು ಸಾಧ್ಯವಾಗದೇ ಇದ್ದರೂ ಮನ ಬಂದಂತೆ ಶುಲ್ಕ ಪಡಿಯುವ ಶಾಲೆಗಳಿಗೆ ಬ್ರೇಕ್ ಬೀಳುತ್ತದೆ.

     

  • ಅಮಿತ್ ಶಾ, ಕಲ್ಲಡ್ಕ ಭಟ್ ವಿರುದ್ಧ ಸಚಿವ ತನ್ವೀರ್ ಸೇಠ್ ಹೀಗಂದ್ರು!

    ಅಮಿತ್ ಶಾ, ಕಲ್ಲಡ್ಕ ಭಟ್ ವಿರುದ್ಧ ಸಚಿವ ತನ್ವೀರ್ ಸೇಠ್ ಹೀಗಂದ್ರು!

    ರಾಯಚೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾವ ಭ್ರಮೆಯಲ್ಲಿದ್ದಾರೋ ಗೊತ್ತಿಲ್ಲ, ಕನ್ನಡಿ ನೋಡಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತನ್ವೀರ್ ಸೇಠ್, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರಗಳನ್ನ ನೋಡಿಯೇ ಅಮಿತ್ ಶಾ ಮಾತನಾಡಿದ್ದಾರೆ ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ್ ಶಿಕ್ಷಣ ಸಂಸ್ಥೆಗೆ ಶಿಕ್ಷಣ ಇಲಾಖೆ ಅನುದಾನ ನೀಡುತ್ತಿಲ್ಲ. ಸಂಸ್ಥೆಯ ಶಾಲೆಗಳು ಅನುದಾನಿತ ಶಾಲೆಗಳಲ್ಲ ಖಾಸಗಿ ಶಾಲೆಗಳು. ಮುಜರಾಯಿ ಇಲಾಖೆ ಬಿಸಿಯೂಟ ನೀಡುತ್ತಿತ್ತು ಈಗ ನಿಲ್ಲಿಸಿದೆ. ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕೆಲಸಕ್ಕೆ ಮಾತ್ರ ಸೀಮಿತವಾಗಿರಬೇಕು. ಮಕ್ಕಳ ಮೂಲಕ ಹಿರಿತನದ ಮಾತು ಆಡಿಸುವುದು ಸರಿಯಲ್ಲ ಅಂತ ಅಸಮಧಾನ ವ್ಯಕ್ತಪಡಿಸಿದರು.

    ಆ ಸಂಸ್ಥೆಯ ಶಾಲೆಗೆ ಬಿಸಿಯೂಟ ಒದಗಿಸುವುದು ನಮಗೆ ಹೊರೆಯಲ್ಲ. ಅನುದಾನಕ್ಕೆ ಒಳಪಡಿಸಿಕೊಳ್ಳಲು ಮನವಿ ಮಾಡಲಿ. ಬಳಿಕ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಅಂತ ಸಚಿವರು ಹೇಳಿದ್ದಾರೆ.