Tag: Tanker lorry

  • ಬೆಳ್ಳಂಬೆಳಗ್ಗೆ ಸರಣಿ ಅಪಘಾತ- ನೆಲಮಂಗಲದಲ್ಲಿ ತಪ್ಪಿತು ಭಾರೀ ಅನಾಹುತ

    ಬೆಳ್ಳಂಬೆಳಗ್ಗೆ ಸರಣಿ ಅಪಘಾತ- ನೆಲಮಂಗಲದಲ್ಲಿ ತಪ್ಪಿತು ಭಾರೀ ಅನಾಹುತ

    ನೆಲಮಂಗಲ: ಬೆಳ್ಳಂಬೆಳಗ್ಗೆ ನಿದ್ರೆಯ ಮಂಪರಿನಲ್ಲಿ ಬಸ್ ಹಾಗೂ ಎರಡು ಲಾರಿಗಳ ಮಧ್ಯೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ಬೆಂಗಳೂರು ಹೊರವಲಯ ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಸಮೀಪದ ಮಾದಾವರ ಬಳಿ ಸರಣಿ ಅಪಘಾತವಾಗಿದೆ. ಕೆಎಸ್‍ಆರ್‍ಟಿಸಿಯ ಓಲ್ವೋ ಬಸ್, ಪೆಟ್ರೋಲ್ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಡಿಕ್ಕಿಯಾಗಿದೆ. ಇದೇ ವೇಳೆ ಹಿಂದಿನಿಂದ ಕಟ್ಟಿಗೆ ತುಂಬಿಕೊಂಡು ಬಂದ ಮತ್ತೊಂದು ಲಾರಿಯಿಂದ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸರಣಿ ಅಪಘಾತವಾಗಿದೆ.

    ಪೆಟ್ರೋಲ್ ಲಾರಿಯಲ್ಲಿದ್ದ ಇಬ್ಬರಿಗೆ ಹಾಗೂ ಕಟ್ಟಿಗೆ ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

    ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ. ನೆಲಮಂಗಲ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಟ್ಯಾಂಕರ್ ಲಾರಿ ಹರಿದು ಬಾಲಕ ಅಪ್ಪಚ್ಚಿ- ಚಾಲಕ ಪರಾರಿ

    ಟ್ಯಾಂಕರ್ ಲಾರಿ ಹರಿದು ಬಾಲಕ ಅಪ್ಪಚ್ಚಿ- ಚಾಲಕ ಪರಾರಿ

    – ಆಧಾರ್ ಕಾರ್ಡ್ ಮಾಡಿಸಲು ಅಪ್ಪನ ಜೊತೆಗೆ ಬಂದಿದ್ದ ಬಾಲಕ

    ಹುಬ್ಬಳ್ಳಿ: ಟ್ಯಾಂಕರ್ ಲಾರಿ ಹರಿದು ಬಾಲಕನೊಬ್ಬ ಅಪ್ಪಚ್ಚಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನಿವಾಸಿ ವೀರೇಶ್ ಹಿರೇಮಠ (7) ಮೃತ ಬಾಲಕ. ವೀರೇಶ್ ಆಧಾರ್ ಕಾರ್ಡ್ ಮಾಡಿಸಲು ಅಜ್ಜಿ, ಅಪ್ಪ ಹಾಗೂ ಅಣ್ಣನ ಜೊತೆ ಇಂದು ಹೊರಟಿದ್ದ. ಈ ವೇಳೆ ಹುಬ್ಬಳ್ಳಿಯ ಸಾಯಿಬಾಬಾ ಮಂದಿರ ಬಳಿ ಸೈಕಲ್ ಹಿಡಿದು ರಸ್ತೆ ದಾಟುತ್ತಿದ್ದಾಗ ಆತನ ಮೇಲೆ ಟ್ಯಾಂಕರ್ ಲಾರಿ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಬಾಲಕನ ಮೇಲೆ ಲಾರಿ ಹರಿಯುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತವಾಯಿತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಲಕನ ಮೃತದೇಹವನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ.

    ಈ ಕುರಿತು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.