Tag: tamtam vehicle

  • ಅಪಘಾತ ಸ್ಥಳಕ್ಕೆ ಬಂದ ಪೊಲೀಸರಿಗೆ ಕಲ್ಲು ಹೊಡೆದು ಓಡಿಸಿದ ಜನ

    ಅಪಘಾತ ಸ್ಥಳಕ್ಕೆ ಬಂದ ಪೊಲೀಸರಿಗೆ ಕಲ್ಲು ಹೊಡೆದು ಓಡಿಸಿದ ಜನ

    ವಿಜಯಪುರ: ಜಿಲ್ಲೆಯ ಕೊಲ್ಹಾರ ಪ್ರದೇಶದ ಬಳಿ ಸರ್ಕಾರಿ ಬಸ್ಸಿಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅವರ ವಾಹನದ ಮೇಲೆ ಕಲ್ಲು ತೂರಾಟ ನಡಿಸಿದ್ದಾರೆ.

    ಕೊಲ್ಹಾರ ಬಳಿ ಪೊಲೀಸರ ದಂಡ ತಪ್ಪಿಸಲು ಹೋಗಿ ಸರ್ಕಾರಿ ಬಸ್‍ಗೆ ಟಂಟಂ ಡಿಕ್ಕಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 7 ಮಂದಿ ಗಾಯಗೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದರು. ಆಗ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರನ್ನು ಕೊಂತಿಕಲ್ ಗ್ರಾಮದ ಕಸ್ತೂರಿ ಸುರೇಶ ಗುಳದಾಳ(32), ಬಾಗಲಕೋಟೆ ಜಿಲ್ಲೆಯ ಸಿಂದಗಿ ಗ್ರಾಮದ ಲಕ್ಷ್ಮಿ ನಿಂಗಪ್ಪ ಆಲಗುಂಡಿ(5), ಗಿರಿಸಾಗರದ ರಾಮಣ್ಣ ಯಮನಪ್ಪ ಮುತ್ತಲದಿನ್ನಿ(70) ಎಂದು ಗುರುತಿಸಲಾಗಿದೆ.

    ಟಂಟಂ ಚಾಲಕ ವಾಹನದಲ್ಲಿ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ. ಈ ವೇಳೆ ಕೊಲ್ಹಾರ ಬಳಿ ಇದ್ದ ಪೊಲೀಸರು ಟಂಟಂ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಇದನ್ನು ಕಂಡ ಚಾಲಕ ವಾಹನ ನಿಲ್ಲಿಸಿದರೆ ಪೊಲೀಸರಿಗೆ ದಂಡ ಕಟ್ಟಬೇಕಲ್ಲ ಎನ್ನುವ ಕಾರಣಕ್ಕೆ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಆತುರದಲ್ಲಿ ಮುಂದೆ ಬರುತ್ತಿದ್ದ ಬಸ್ಸಿಗೆ ಟಂಟಂ ವಾಹನವನ್ನು ಡಿಕ್ಕಿ ಹೊಡಿಸಿದ್ದಾನೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.

    ಪೊಲೀಸರು ಹಾಕುವ ಭಾರೀ ದಂಡದಿಂದಲೇ ಈ ಅಪಘಾತ ನಡೆದಿದೆ. ಜನರ ಜೀವ ಹೋಗಲು ಪೊಲೀಸರೇ ಕಾರಣವೆಂದು ಆರೋಪಿಸಿ ಸಾರ್ವಜನಿಕರು ರೊಚ್ಚಿಗೆದ್ದು, ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಐ ವಾಹನ ಹಾಗೂ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಪಿಎಸ್‍ಐ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಪಿಎಸ್‍ಐ ಹಾಗೂ ಪೇದೆಗಳ ಮೇಲೆ ಹಲ್ಲೆ ನಡೆಸಿ ಪೊಲೀಸರನ್ನು ಸ್ಥಳದಿಂದ ಓಡಿಸಿದ್ದಾರೆ. ಆದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

  • ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ಟಂಟಂ, ಲಾರಿ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ, 10 ಕುರಿಗಳ ಸಾವು

    ರಾಯಚೂರು: ಟಂಟಂ ವಾಹನ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಬಳಿ ನಡೆದಿದೆ.

    ಬೆಳಗಿನ ಜಾವ 6 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಕನ್ನಾಳ ಗ್ರಾಮದ 40 ವರ್ಷದ ಮೌಲಪ್ಪ, 44 ವರ್ಷದ ಯಮನೂರು ಹಾಗೂ ಸಂಗನಾಳ ಗ್ರಾಮದ ಗಣಪತಿ ಬಾಲಪ್ಪ ಮೃತ ದುರ್ದೈವಿಗಳು.

    ಕನ್ನಾಳದಿಂದ ಸಿಂಧನೂರಿಗೆ ಕುರಿ ಸಂತೆಗೆ ಬರುತ್ತಿದ್ದ ಟಂಟಂ ಹಾಗೂ ತೌಡು ತುಂಬಿಕೊಂಡು ಕೊಪ್ಪಳದ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಟಂಟಂನಲ್ಲಿದ್ದ 10 ಕುರಿಗಳು ಸಹ ಸ್ಥಳದಲ್ಲೇ ಸಾವನ್ನಪ್ಪಿವೆ. ಅಲ್ಲದೇ ವಾಹನದಲ್ಲಿದ್ದ ನಾಲ್ಕು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ತಾವರಗೇರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ತುರುವಿಹಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

  • ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಅಪಘಾತಕ್ಕೀಡಾಗಿ ಅಯ್ಯಯ್ಯೋ ಸಹಾಯ ಮಾಡಿ ಅಂತಾ ನರಳಾಡಿದ್ರೂ ಸಹಾಯಕ್ಕೆ ಜನ ಬರಲೇ ಇಲ್ಲ

    ಹಾವೇರಿ: ಇತ್ತೀಚೆಗೆ ಅಪಘಾತಗಳು ನಡೆದ ಸಂದರ್ಭದಲ್ಲಿ ಜನರು ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇಂತದ್ದೇ ಒಂದು ಘಟನೆ ಇದೀಗ ಹಾವೇರಿಯಲ್ಲೂ ನಡೆದಿದೆ.

    ಹೌದು. ಶುಕ್ರವಾರ ಸಂಜೆ ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದ ಬಳಿ ಟಾಟಾ ಅಪೆ ಮತ್ತು ಟಂಟಂ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ನೆಲೋಗಲ್ ಗ್ರಾಮದ 70 ವರ್ಷದ ದಸ್ತಗೀರಸಾಬ ನರಳಾಡುತ್ತಿದ್ರು. ಆದ್ರೂ ಜನ ಅವರ ಸಹಾಯಕ್ಕೆ ಬರದೇ ಕಾಲಹರಣ ಮಾಡುವ ಮೂಲಕ ಮಾನವೀಯತೆ ಮರೆತಿದ್ದರು.

    ಅಯ್ಯಯ್ಯೋ… ಯಪ್ಪಾ… ಎಂದು ಗೋಗರೆಯುತ್ತಿದ್ದರೂ ಜನ ನೋಡ್ತಾ ನಿಂತಿದ್ರೇ ಹೊರತು, ಆಸ್ಪತ್ರೆಗೆ ಸೇರಿಸಲಿಲ್ಲ. ಒಂದು ಗಂಟೆ ನರಳಾಡಿದ್ಮೇಲೆ ಆಂಬುಲೆನ್ಸ್ ಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಯಿತು.

    ಸದ್ಯಕ್ಕೆ ದಸ್ತಗಿರಸಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=9HAc3AWyIBg&feature=youtu.be