Tag: tamilnadu

  • ಆಸ್ಪತ್ರೆಯಲ್ಲಿ 1 ಬಾರಿಯೂ ಜಯಲಲಿತಾ ಭೇಟಿಗೆ ಬಿಡಲಿಲ್ಲ: ಪನ್ನೀರ್ ಸೆಲ್ವಂ

    – ಜಯಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು

    ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಗ್ನರಾಗಿದ್ದ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ತಿರುಗಿಬಿದದ್ದಿದ್ದಾರೆ. ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಒಂದು ಬಾರಿಯೂ ಅವರನ್ನು ನೋಡಲು ನನ್ನನ್ನು ಬಿಟ್ಟಿರಲಿಲ್ಲ ಎಂದು ಪನ್ನೀರ್ ಸೆಲ್ವಂ ಟ್ವೀಟ್ ಮಾಡಿದ್ದಾರೆ.

    ನಾನು ಪ್ರತಿದಿನ ಅಮ್ಮನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುತ್ತಿದ್ದೆ. ಆದ್ರೆ ಒಂದು ಬಾರಿಯೂ ಅವರನ್ನು ಭೇಟಿಯಾಗುವ ಅವಕಾಶ ಸಿಗಲಿಲ್ಲ ಎಂದು ಒನ್ನೀರ್ ಸೆಲ್ವಂ ಹೇಳಿದ್ದಾರೆ. ವರದಿಗಾರರೊಂದಿಗೆ ಮಾತನಾಡಿರುವ ಅವರು, ಇನ್ಫೆಕ್ಷನ್ ಆಗುತ್ತದೆ ಎಂಬ ಭಯದಿಂದ ಜಯಲಲಿತಾರನ್ನು ನೋಡಲು ಆಗಲಿಲ್ಲ ಎಂದು ಪ್ರತಿದಿನ ನನ್ನ ಕುಟುಂಬದವರಿಗೆ ಹೇಳುತ್ತಿದೆ. ಪ್ರತಿದಿನ ನನ್ನ ಕುಟುಂಬದವರು, ನೀವು ಆಸ್ಪತ್ರೆಯಲ್ಲಿ ಅಮ್ಮನನ್ನು ನೋಡಿದ್ರಾ ಅಂತ ಕೇಳ್ತಿದ್ರು. ಹೌದು ಅಂತ ಹೇಳಬೇಕು ಎಂದುಕೊಂಡರೂ ಸುಳ್ಳು ಹೇಳಲು ಮನಸ್ಸಾಗಲಿಲ್ಲ ಎಂದಿದ್ದಾರೆ.

    ಜಯಲಲಿತಾ ಚಿಕಿತ್ಸೆಯ ಬಗ್ಗೆ ಅನುಮಾನಗಳಿದ್ದು, ಅದಕ್ಕೆ ಉತ್ತರ ಬೇಕು. ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ. ಮಂಗಳವಾರದಂದು ಎಐಎಡಿಂಕೆಯ ಕಾರ್ಯಕರ್ತ ಪಿಹೆಚ್ ಪಂಡಿಯನ್, ಜಯಲಲಿತಾ ಅವರ ಸಾವು ಸಹಜ ಸಾವಲ್ಲ ಎಂದು ಆರೋಪಿಸಿದ್ದರು.

    ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾರನ್ನು ಶಶಿಕಲಾ ಸೇರಿದಂತೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಭೇಟಿ ಮಾಡಿದ್ದರು. ಸಿಎಂಬರ್ 5 ರಂದು ಜಯಲಲಿತಾ ನಿಧನರಾದ್ರು.

  • ಶಶಿಕಲಾ ವಿರುದ್ಧ ಸೆಲ್ವಂ ಬಂಡಾಯದ ಕಹಳೆ – ಖಜಾಂಚಿ ಸ್ಥಾನದಿಂದ ಕಿತ್ತೆಸೆದ ಶಶಿಕಲಾ

    – ಪನ್ನೀರ್ ಸೆಲ್ವಂಗೆ ಡಿಎಂಕೆ ಸಪೋರ್ಟ್

    ಚೆನ್ನೈ: ಜಯಲಲಿತಾ ನಿಧನದ ನಂತರ ಅಸ್ಥಿರತೆಯಲ್ಲಿದ್ದ ತಮಿಳುನಾಡಿನ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಅಮ್ಮನಿಲ್ಲದ ತಮಿಳುನಾಡಿನಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಅಮ್ಮನ ನಂಬಿಕಸ್ಥ ಬಂಟ ಪನ್ನೀರ್ ಸೆಲ್ವಂ. ಚಿನ್ನಮ್ಮ ಶಶಿಕಲಾ ವಿರುದ್ಧ ಅಮ್ಮನ ಬಲಗೈ ಬಂಟ ಪನ್ನೀರ್ ಸೆಲ್ವಂ ಬಂಡಾಯದ ಕಹಳೆ ಊದಿದ್ದಾರೆ.

    ಶಶಿಕಲಾ ನಟರಾಜನ್‍ಗಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ಓಪಿಎಸ್, ಅಚ್ಚರಿಯ ಬೆಳವಣಿಗೆಯಲ್ಲಿ ರಾತ್ರೋರಾತ್ರಿ ಚಿನ್ನಮ್ಮನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪನ್ನೀರ್ ಸೆಲ್ವಂ, ಚೆನ್ನೈನ ಮರೀನಾ ಬೀಚ್‍ನಲ್ಲಿರೋ ಜಯಲಲಿತಾ ಸಮಾಧಿಗೆ ದಿಢೀರ್ ಭೇಟಿಕೊಟ್ಟು ಸುಮಾರು 45 ನಿಮಿಷಗಳ ಕಾಲ ಧ್ಯಾನ ಮಾಡಿದ್ರು. ಬಳಿಕ ಮಾಧ್ಯಮದ ಜೊತೆ ಮಾತಾಡಿ, ಶಶಿಕಲಾ ಅವ್ರು ತನ್ನನ್ನ ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರು ಅಂತ ಬಾಂಬ್ ಹಾಕಿದ್ರು. ನಾನು ಸಿಎಂ ಆಗಬೇಕು ಅಂತ ಆಸ್ಪತ್ರೆಯಲ್ಲಿದ್ದಾಗ ಅಮ್ಮ ಬಯಸಿದ್ರು. ಆದ್ರೆ, ಶಶಿಕಲಾ ಟೀಂ ನನಗೆ ಗೊತ್ತಿಲ್ಲದೇ ಶಾಸಕಾಂಗ ಪಕ್ಷದ ಸಭೆ ಕರೆದು ಅವಮಾನ ಮಾಡ್ತು. ಈಗ ಅಮ್ಮನ ಆತ್ಮವೇ ಬಂದು ಜನರಿಗೆ ಸತ್ಯ ಹೇಳುವಂತೆ ತಿಳಿಸಿದೆ. ಈಗ ಜನ ಹಾಗೂ ಕಾರ್ಯಕರ್ತರಿಗೆ ಸತ್ಯ ತಿಳಿಸುತ್ತಿದ್ದೇನೆ ಅಂತ ಹೇಳಿ ತಮಿಳುನಾಡು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ರು.

    ಜಯಾ ಸಮಾಧಿಯಿಂದ ತನ್ನ ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂಗೆ ಅಭೂತರ್ಪ ಬೆಂಬಲ ವ್ಯಕ್ತವಾಯ್ತು. ಜನರು ಸೆಲ್ವಂ ನಿವಾಸದ ಮುಂದೆ ಜಮಾಯಿಸಿ ಶಶಿಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದರ ಬೆನ್ನಲ್ಲೇ ಪೋಯಸ್ ಗಾರ್ಡನ್ ನಿವಾಸದ ಮುಂದೆ ಶಶಿಕಲಾ ಅಭಿಮಾನಿಗಳು ಸೇರತೊಡಗಿದ್ರು.

    ತುರ್ತು ಸಭೆ ಕರೆದ ಶಶಿಕಲಾ: ದಂಗೆಯ ಮುನ್ನೆಚ್ಚರಿಕೆ ಅರಿತ ಶಶಿಕಲಾ ತಕ್ಷಣವೇ ತುರ್ತು ಸಭೆ ನಡೆಸಿದ್ರು. ಮಧ್ಯರಾತ್ರಿ 1 ಗಂಟೆವರೆಗೆ ನಡೆದ ಸಭೆಯಲ್ಲಿ ಪಕ್ಷದ ಖಜಾಂಚಿ ಸ್ಥಾನದಿಂದ ಪನ್ನೀರ್ ಸೆಲ್ವಂಗೆ ಗೇಟ್‍ಪಾಸ್ ಕೊಡಲಾಯಿತು. ಸಭೆಯಲ್ಲಿ 20 ಸಚಿವರು 80 ಶಾಸಕರು ಹಾಜರಿದ್ರು. ಸಭೆ ಬಳಿಕ ಮಾತನಾಡಿದ ಶಶಿಕಲಾ, ಅಣ್ಣಾಡಿಎಂಕೆ ಪಕ್ಷದ ಶಾಸಕರು ಒಂದೇ ಕುಟುಂಬ, ಬಿಕ್ಕಟ್ಟಿನ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂಗೆ ನಾನು ಒತ್ತಡ ಹಾಕಿಲ್ಲ, ಅವ್ರನ್ನ ಪಕ್ಷದಿಂದ ಹೊರಹಾಕ್ತೇವೆ ಅಂತ ಶಾಂತಚಿತ್ತವಾಗೇ ಉತ್ತರಿಸಿದ್ರು. ಈ ಹೈಡ್ರಾಮಾಗೆ ಡಿಎಂಕೆ ಕಾರಣ ಅಂತ ದೂರಿದ ಪಕ್ಷದ ಹಿರಿಯ ನಾಯಕ ತಂಬಿದೊರೈ, ಚಿನ್ನಮ್ಮ ಶಶಿಕಲಾಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕೊಡಬೇಕು ಅಂದ್ರು.

    ನನ್ನ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ: ನಾನು ಎಐಎಡಿಎಂಕೆ ಪಕ್ಷದ ಕಟ್ಟಾಳು. ಯಾರೂ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವಂತಿಲ್ಲ. ನನ್ನನ್ನ ಖಜಾಂಚಿ ಮಾಡಿದ್ದು ಅಮ್ಮ. ನಾನು ಅದನ್ನ ಮುಂದುವರಿಸ್ತೇನೆ. ನನ್ನ ಸ್ಥಾನವನ್ನ ಯಾರಿಂದಲೂ ಕಸಿದುಕೊಳ್ಳೋಕೆ ಸಾಧ್ಯವಿಲ್ಲ. ಈ ಬೆಳವಣಿಗೆಯಲ್ಲಿ ಡಿಎಂಕೆಯ ಪಾತ್ರವಿಲ್ಲ. ಪ್ರತಿಪಕ್ಷ ನಾಯಕರತ್ತ ನೋಡೋದು, ನಗು ಚೆಲ್ಲೋದು ಅಪರಾಧ ಅಲ್ಲವೇ ಅಲ್ಲ. ಖಂಡಿತಾ ಕ್ರೈಮ್ ಅಲ್ಲ ಅಲ್ವಾ. (ಕಳೆದ ಕೆಲ ದಿನಗಳ ಹಿಂದೆ ನಡೆದ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸ್ಟಾಲಿನ್ ಕಡೆ ಸೆಲ್ವಂ ನಗು ಚೆಲ್ಲಿದ್ದರು) ನಾಳೆ ಏನಾಗುತ್ತೆ ಕಾದು ನೋಡಿ ಅಂತ ಪನ್ನೀರ್ ಸೆಲ್ವಂ ಪ್ರತಿಕ್ರಿಯಿಸಿದ್ದಾರೆ.

    ಕ್ಷಿಪ್ರ ರಾಜಕೀಯದಿಂದಾಗಿ ತಮಿಳುನಾಡಿನ ರಾಜಕೀಯ ಲೆಕ್ಕಾಚಾರವನ್ನ ನೋಡಬೇಕಾಗಿದೆ. ತಮಿಳುನಾಡು ಅಸೆಂಬ್ಲಿಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ.
    * ಒಟ್ಟು ಕ್ಷೇತ್ರ – 235
    * ಸರಳ ಬಹುಮತ – 118
    * ಎಐಎಡಿಂಕೆ – 134
    * ಡಿಎಂಕೆ – 89
    * ಕಾಂಗ್ರೆಸ್ – 8
    * ಐಯುಎಂಎಲ್ – 1
    * ಖಾಲಿ – 1 (ಜಯಲಲಿತಾ ಸಾವಿನಿಂದ ಆರ್.ಕೆ. ನಗರ ಖಾಲಿ ಇದೆ)

    ಈಗ ಒಂದು ವೇಳೆ ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಸರ್ಕಾರ ರಚಿಸ್ತಾರೆ ಎಂದಾದರೆ ಪನ್ನೀರ್ ಸೆಲ್ವಂಗೆ ಅಣ್ಣಾಡಿಎಂಕೆಯಿಂದ 2/3 ಮೆಜಾರಿಟಿ ಅಂದ್ರೆ ಕನಿಷ್ಟ 90 ಶಾಸಕರ ಬೆಂಬಲದೊಂದಿಗೆ ಹೊರ ಹೋದರೆ ಪಕ್ಷಾಂತರ ಕಾಯ್ದೆ ಅನ್ವಯ ಆಗಲ್ಲ. ಅಷ್ಟು ಎಂಎಲ್‍ಎಗಳು ಸೆಲ್ವಂ ಹಿಂದೆ ಹೋಗ್ತಾರಾ? ಆದ್ರೆ ಪನ್ನೀರ್ ಸೆಲ್ವಂ ಜನನಾಯಕರಲ್ಲವಾದ್ದರಿಂದ ಅಷ್ಟೂ ಎಂಎಲ್‍ಎಗಳ ಬೆಂಬಲ ಸಿಗುವುದಲ್ಲ ಅಂತ ಹೇಳಲಾಗಿದೆ. ಆದರೂ, ಪನ್ನೀರ್ ಸೆಲ್ವಂಗೆ ಡಿಎಂಕೆ ಬಾಹ್ಯ ಬೆಂಬಲ ನೀಡೋದಾಗಿ ಘೋಷಿಸಿದೆ. ಒಂದೊಮ್ಮೆ 8 ಸೀಟ್ ಹೊಂದಿರೋ ಕಾಂಗ್ರೆಸ್ ಸಹ ಸಪೋರ್ಟ್ ಕೊಟ್ರೆ ಸೆಲ್ವಂ ಹಾಗೂ ಶಶಿಕಲಾ ನಡುವಿನ ನಂಬರ್ ಗೇಮ್ ಹೀಗಿರಲಿದೆ:
    * 90 ಶಾಸಕರ ಬೆಂಬಲ ಇದ್ದರೆ ಸೆಲ್ವಂ ಬಚಾವ್
    * ಸದ್ಯ ಸೆಲ್ವಂಗೆ 50 ಶಾಸಕರ ಬೆಂಬಲ..?
    * ಶಶಿಕಲಾ ನಟರಾಜನ್‍ಗೆ 84 (ಆದ್ರೆ ನೂರಕ್ಕೂ ಅಧಿಕ ಶಾಸಕರು ಮಧ್ಯರಾತ್ರಿ ಶಶಿಕಲಾ ಸಭೆಯಲ್ಲಿದ್ದರು)
    * ಸೆಲ್ವಂ+ಡಿಎಂಕೆ+ಕಾಂಗ್ರೆಸ್ – 147

    ಇತ್ತ ಸೆಲ್ವಂ, ಶಶಿಕಲಾ ಮಧ್ಯೆ ರಾಜಕೀಯ ಘರ್ಷಣೆ ನಡೀತಿದ್ರೆ. ಅತ್ತ ಶಶಿಕಲಾ ವಿರುದ್ಧವಾಗಿ ಅಖಾಡಕ್ಕೆ ಇಳಿಯೋಕೆ ಜಯಾ ಸೊಸೆ ದೀಪಾ ಸಜ್ಜಾಗ್ತಿದ್ದಾರೆ.

  • ಪನ್ನೀರ್‍ಸೆಲ್ವಂ ಹೇಳಿದ ಅಮ್ಮನ ‘ಆತ್ಮ’ಕಥೆ!

    – ನಾನೇ ಸಿಎಂ ಆಗಬೇಕೆಂದು ಅಮ್ಮಾ ಬಯಸಿದ್ದರು
    – ಶಶಿಕಲಾ ವಿರುದ್ಧ ಪನ್ನೀರ್ ಸೆಲ್ವಂ ಅಸಮಾಧಾನ
    – ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ
    – ಕೊನೆಗೂ ಮನದ ದುಗುಡ ಹೊರಹಾಕಿದ ಒಪಿಎಸ್

    ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ ಎಂಬ ಸುದ್ದಿಯ ನಡುವೆಯೇ ತಮಿಳುನಾಡು ಸಿಎಂ ಒ.ಪನ್ನೀರ್‍ಸೆಲ್ವಂ ತುಟಿಬಿಚ್ಚಿದ್ದಾರೆ. ಪನ್ನೀರ್‍ಸೆಲ್ವಂ ಮಾತುಗಳನ್ನು ನೋಡಿದರೆ ಅವರು ಬಂಡಾಯದ ಬಾವುಟ ಹಾರಿಸಿದ ಲಕ್ಷಣ ಸ್ಪಷ್ಟವಾಗಿ ಗೋಚರಿಸಿದೆ. ತಮಿಳುನಾಡಿನಲ್ಲಿ ಮಂಗಳವಾರ ರಾತ್ರಿ 9 ಗಂಟೆ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಆರಂಭವಾದವು. ಮರೀನಾ ಬೀಚ್‍ನಲ್ಲಿರುವ ಜಯಲಲಿತಾ ಸಮಾಧಿ ಬಳಿಗೆ ಆಗಮಿಸಿದ ಪನ್ನೀರ್ ಸೆಲ್ವಂ ಸಮಾಧಿ ಮುಂದೆ ಕೂತು ಧ್ಯಾನ ಮಗ್ನರಾದರು. ಸುಮಾರು ಅರ್ಧ ಗಂಟೆಗಳ ಕಾಲ ಇದೇ ರೀತಿಯಲ್ಲಿಯೇ ಒಪಿಎಸ್ ಕೂತಿದ್ದರು. ಇದಾದ ಬಳಿಕ ಪನ್ನೀರ್‍ಸೆಲ್ವಂ ಮಾಧ್ಯಮಗಳ ಮುಂದೆ ಬಂದು ಮಾತಿಗೆ ನಿಂತರು. ಮಾತಿನ ನಡುವೆಯೇ ಒಪಿಎಸ್ ಕಣ್ಣೀರನ್ನೂ ಹಾಕಿದರು.

    ಸಮಾಧಿಗೆ ನಮಿಸಿದ ಬಳಿಕ ಬಂದ ಒ.ಪನ್ನೀರ್‍ಸೆಲ್ವಂ ಹೇಳಿದ್ದಿಷ್ಟು.

    ನನ್ನ ನಾಯಕಿಗೆ ನಾನು ಗೌರವ ಸಲ್ಲಿಸಿದ್ದೇನೆ. ನಾನು ದೇಶದ ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೆಲವು ಸತ್ಯವನ್ನು ಹೇಳಬೇಕೆಂದು ಅಮ್ಮನ ಆತ್ಮ ನನಗೆ ಹೇಳಿದೆ. ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ನಾನೇ ಸಿಎಂ ಆಗಬೇಕು ಎಂದು ಸಾವಿಗೂ ಮುನ್ನ ಹೇಳಿದ್ದರು ಎಂದು ಪನ್ನೀರ್‍ಸೆಲ್ವಂ ಸ್ಪಷ್ಟಪಡಿಸಿದರು.

    ನನ್ನ ಮೇಲೆ ಒತ್ತಡ ಹಾಕಿ ರಾಜೀನಾಮೆ ಪಡೆದಿದ್ದಾರೆ. ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನನ್ನು ಪದೇ ಪದೇ ಅವಮಾನಿಸಿದರು. ಶಶಿಕಲಾ ಸಿಎಂ ಆಗಬೇಕೆಂದು ಕೆಲವರು ನನಗೆ ಹೇಳಿದರು. ನಾನು ಇದರ ಅಗತ್ಯವೇನು ಎಂದು ಪ್ರಶ್ನಿಸಿದ್ದಕ್ಕೆ ಒಬ್ಬನೇ ವ್ಯಕ್ತಿ ಸಿಎಂ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರಬೇಕು ಎಂದು ಹೇಳಿದರು. ಪಕ್ಷದ ಕಚೇರಿಯಲ್ಲೇ ಶಾಸಕರ ಸಭೆ ನಡೆಯುತ್ತಿದ್ದರೂ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಎಲ್ಲಾ ವಿಚಾರಗಳನ್ನೂ ತಿಳಿಸುವಂತೆ ಜಯಲಲಿತಾ ಆತ್ಮ ನನಗೆ ಹೇಳಿದೆ. ಹೀಗಾಗಿ ನಾನು ಇದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದು ಪನ್ನೀರ್‍ಸೆಲ್ವಂ ಹೇಳಿದರು.

    ಕಳೆದ ಸೆಪ್ಟೆಂಬರ್‍ನಲ್ಲಿ ಮನೆಯಲ್ಲೇ ಕುಸಿದು ಬಿದ್ದಿದ್ದ ಜಯಲಲಿತಾ ಅವರನ್ನು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಲಲಿತಾ ಕಳೆದ ವರ್ಷ ಡಿಸೆಂಬರ್ 6ರಂದು ಸಾವನ್ನಪ್ಪಿದ್ದರು. ಅಂದು ಮಧ್ಯರಾತ್ರಿಯಲ್ಲೇ ಒ.ಪನ್ನೀರ್‍ಸೆಲ್ವಂ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕಳೆದ ಭಾನುವಾರ ಶಶಿಕಲಾ ನಟರಾಜನ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಇದಾದ ಬಳಿಕ ಒ.ಪನ್ನೀರ್‍ಸೆಲ್ವಂ ರಾಜೀನಾಮೆ ನೀಡಿದ್ದರು. ಆದರೆ ಮುಂದಿನ ಸಿಎಂ ಅಧಿಕಾರ ಸ್ವೀಕರಿಸುವವರೆಗೆ ನೀವೇ ಸಿಎಂ ಆಗಿ ಮುಂದುವರಿಯಿರಿ ಎಂದು ತಮಿಳುನಾಡಿನ ರಾಜ್ಯಪಾಲರು ಸೂಚಿಸಿದ್ದರು.

  • ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ

    ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿ ಏಪ್ರಿಲ್ 11 ರೊಳಗೆ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

    ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನ್ಯಾ. ದೀಪಕ್ ಮಿಶ್ರಾ, ನ್ಯಾ. ಅಮಿತವ್ ರಾಯ್, ನ್ಯಾ. ಎಂ. ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಆರಂಭವಾಯಿತು. ಎರಡೂ ಕಡೆಯ ವಾದ ಆಲಿಸಿದ ನ್ಯಾಯ ಪೀಠ ಮಾರ್ಚ್ 21ಕ್ಕೆ ವಿಚಾರಣೆ ಮುಂದೂಡಿತು.

    ವಾದ ಹೀಗಿತ್ತು:
    ಮೊದಲು ವಾದ ಆರಂಭಿಸಿದ ಕರ್ನಾಟಕ ಪರ ಫಾಲಿ ನಾರಿಮನ್ 1799 ರಲ್ಲಿಂದಲೇ ಕಾವೇರಿ ವಿವಾದ ಶುರುವಾಗಿದೆ. ಮದ್ರಾಸು ಸರ್ಕಾರ, ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್ ಸರ್ಕಾರದ ನಡುವೆ ಹಲವು ಒಪ್ಪಂದಗಳಾಗಿವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಅಂದಿನಿಂದ ಇಂದಿನ ತನಕ ನಡೆದ ಎಲ್ಲ ಪ್ರಮುಖ ಬೆಳವಣಿಗೆ ಗಳನ್ನು ಪೀಠದ ಗಮನಕ್ಕೆ ನಾರಿಮನ್ ತಂದರು.

    ನಾರಿಮನ್ ವಾದ ಆಲಿಸಿದ ನ್ಯಾ.ದೀಪಕ್ ಮಿಶ್ರಾ ಒಪ್ಪಂದ ಗಳ ಬಗ್ಗೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ ವಾದ ಮಂಡಿಸಲು ಅವಕಾಶ ನೀಡಿದರು. ಈ ವೇಳೆ ನಾಫಡೆ ನಮಗೆ ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯಧಿಕರಣದಿಂದ ಅನ್ಯಾಯ ಆಗಿದೆ. ಕಾವೇರಿ ಕರ್ನಾಟಕ ದಲ್ಲಿ ಹುಟ್ಟಿದ್ರೆ ಎಲ್ಲ ನೀರು ಕರ್ನಾಟಕ ಕ್ಕೆ ನೀಡಬೇಕೇ? ಕೆಳಗಿನ ಪ್ರದೇಶದವರು ಏನು ಮಾಡಬೇಕು? ನಮ್ಮ ಜನರಿಗೂ ಕುಡಿಯುವ ನೀರು ಬೇಕು ಮತ್ತೆ ನಿರ್ವಹಣಾ ಮಂಡಳಿಗೆ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡರು.

    ನ್ಯಾ. ಮಿಶ್ರಾ ಸದ್ಯಕ್ಕೆ ಹಂಚಿಕೆಯಾದಂತೆ ನೀರು ಹರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಎರಡು ಕಡೆಯ ವಕೀಲರು ಸಮ್ಮತಿ ಸೂಚಿಸಿದರು. ಈ ವೇಳೆ ನಾರಿಮನ್ 1892, 1924ರ ವೇಳೆ ಆದ ಜಲ ಒಪ್ಪಂದ ಬೇಡ, ನ್ಯಾಯಾಧಿಕರಣ ನೀರು ಹಂಚಿಕೆ ತೀರ್ಪು ಸಹ ಬೇಡ. 1956 ಕಾಯ್ದೆಯ ಅಂತರಾಜ್ಯ ನೀರು ಹಂಚಿಕೆ ಪ್ರಕಾರ ನೀರು ಹಂಚಿಕೆ ಆಗಬೇಕು ಎಂದು ಕೇಳಿಕೊಂಡರು. ಎರಡು ಕಡೆಯ ವಾದವನ್ನು ಆಲಿಸಿದ ಪೀಠ ಬ್ರಿಟಿಷರ ಕಾಲದ ಒಪ್ಪಂದಗಳ ಬಗ್ಗೆ ಈ ಕೆಳಗಿನಂತೆ ಪ್ರಶ್ನೆ ಕೇಳಿತು.

    ಸುಪ್ರೀಂ ಪ್ರಶ್ನೆಗಳು
    – ಮೈಸೂರು ಪ್ರಾಂತ್ಯ, ಮದ್ರಾಸ್ ಸರ್ಕಾರದ ನಡುವಿನ ಒಪ್ಪಂದಕ್ಕೆ ಸಿಂಧುತ್ವ ಇದೆಯೇ?
    – ಬ್ರಿಟಿಷ್ ಕಾಲದ ಒಪ್ಪಂದಗಳು ಈಗಲೂ ಹೇಗೆ ಜಾರಿಯಲ್ಲಿವೆ?
    – ಒಪ್ಪಂದಗಳನ್ನು ಈಗಲೂ ಮುಂದುವರೆಸಲು ಕಾರಣವೇನು?
    – ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ? ಬೇಡವೇ?
    – ಬ್ರಿಟೀಷ್ ಒಪ್ಪಂದಗಳನ್ನು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ಹೇಗೆ?

    ಈ ಅಂಶಗಳನ್ನು ಮತ್ತು ನ್ಯಾಯಾಧಿಕರಣ ಯಾವ ಅಂಶ ಆಧರಿಸಿ ತೀರ್ಪು ನೀಡಿದೆ ಎನ್ನುವುದನ್ನು ಪರಿಶೀಲಿಸಿ ಮುಂದಿನ ವಿಚಾರಣೆಯನ್ನು ನಡೆಸಲಾಗುವುದು ಎಂದು ಪೀಠ ತಿಳಿಸಿತು. ಕರ್ನಾಟಕದ ಪರ ಅನಿಲ್ ದಿವಾನ್, ಮೋಹನ್ ಕಾತರಕಿ, ಎಸ್ ಎಸ್ ಜವಳಿ, ಎಜಿ ಮಧುಸೂದನ್ ನಾಯಕ್, ಬ್ರಿಜೆಶ್ ಕಾಳಪ್ಪ ಕೋರ್ಟ್ ಕಲಾಪದಲ್ಲಿ ಉಪಸ್ಥಿತರಿದ್ದರು.

    1892ರಲ್ಲಿ ನಡೆದ ಒಪ್ಪಂದದಲ್ಲಿ ಏನಿತ್ತು?
    1876-78 ರಲ್ಲಿ ಉಂಟಾದ ಭೀಕರ ಕ್ಷಾಮ ತಲೆದೋರಿದಾಗ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಮುಂದಾದರು. ಈ ಯೋಜನೆಗೆ 1890ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ನಮ್ಮ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದರು. ಇದರ ಫಲವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು. ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.

    ಎಲ್ಲಿಯ ವೇದಾವತಿ, ಅದೆಲ್ಲಿಯ ಕಾವೇರಿ..?
    ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ಪ್ರದೇಶವಿದೆ. ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಗಾಗಿತ್ತು. ಇಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಅಗತ್ಯ. ಈ ಕಾರಣ ಮುಂದಿಟ್ಟು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.

    1924ರಲ್ಲಿ ಎರಡನೇ ಒಪ್ಪಂದ ಯಾಕೆ ನಡೆಯಿತು?
    1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಮೈಸೂರು ಸಂಸ್ಥಾನ ಕೆಲಸ ಮುಂದುವರೆಸಿತು. ಆದರೂ 1892ರ ಒಪ್ಪಂದದಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿತು. ಬ್ರಿಟಿಷರು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ಪ್ರಾಂತ್ಯ ಲಂಡನ್‍ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್‍ಗೆ ಮೇಲ್ಮನವಿ ಸಲ್ಲಿಸಿತು. ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲವಾದರೂ 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು.

    1924ರ ಒಪ್ಪಂದದಲ್ಲಿ ಏನಿತ್ತು?
    ಈ ಒಪ್ಪಂದ ಪ್ರಕಾರ ಕಾವೇರಿ ಜಲನಯದ ಪ್ರದೇಶದಲ್ಲಿ ಒಟ್ಟು 868 ಟಿಎಂಸಿ ನೀರು ಲಭ್ಯವಿದೆ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದಂತೆ ಶೇ.75ರಷ್ಟು ಭಾಗ(651 ಟಿಎಂಸಿ) ತಮಿಳುನಾಡು ಮತ್ತು ಪುದುಚೇರಿಗೆ, ಕರ್ನಾಟಕಕ್ಕೆ ಶೇ.23(200 ಟಿಎಂಸಿ) ಕೇರಳಕ್ಕೆ ಶೇ.2(17.36) ಟಿಎಂಸಿ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಕೆಆರ್‍ಎಸ್ ನಿರ್ಮಾಣಕ್ಕೆ ಮದ್ರಾಸ್ ಪ್ರಾಂತ್ಯ ವಿರೋಧ ವ್ಯಕ್ತಪಡಿಸಿದ ಕಾರಣ ಮೆಟ್ಟೂರಿನಲ್ಲಿ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿತು. ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ಈ ವೇಳೆ ನಿರ್ಬಂಧಗಳನ್ನು ವಿಧಿಸಿತ್ತು. ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು ಎನ್ನುವ ಷರತ್ತನ್ನು ವಿಧಿಸಲಾಗಿತ್ತು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರಿನಲ್ಲಿ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು.

    ತಮಿಳುನಾಡಿನಿಂದ ಒಪ್ಪಂದ ಬ್ರೇಕ್
    1924ರ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ತಮಿಳುನಾಡು ತನ್ನ ಕರಾರನ್ನು ಮೀರಿ 18 ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಅಷ್ಟೇ ಅಲ್ಲದೇ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು. ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು. ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ಸರ್ಕಾರ ನ್ಯಾಯಾಲಯಕ್ಕೆ ಹೋಯಿತು. ಆದರೆ 3 ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಪ್ರಕರಣವನ್ನು ಹಿಂಪಡೆಯಲಾಯಿತು.

    ಇದನ್ನೂ ಓದಿ: ಕಾವೇರಿಗಾಗಿ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ವಕೀಲರಿಗೆ ಕೊಟ್ಟಿದ್ದು ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

  • ಜಯಾ ಸಾವು ಸಹಜ ಸಾವಲ್ಲ, ಅದು ವ್ಯವಸ್ಥಿತ ಕೊಲೆ: ಎಐಎಡಿಎಂಕೆ ನಾಯಕನಿಂದ ಬಾಂಬ್

    ಚೆನ್ನೈ: ರಾಜಕೀಯ ಚದುರಂಗದಾಟದಲ್ಲಿ ಒಂದೇ ದಿನದಲ್ಲಿ ಅಣ್ಣಾ ಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿ ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣೀಟ್ಟಿದ್ದ ಶಶಿಕಲಾಗೆ ಒಂದರ ಮೇಲೊಂದರಂತೆ ವಿಘ್ನಗಳು ಎದುರಾಗುತ್ತಿವೆ.

    ಪ್ರಮಾಣ ವಚನಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದ ಶಶಿಕಲಾಗೆ ರಾಜ್ಯಪಾಲರ ಗೈರು ಹಾಜರಿ ಮೊದಲ ಶಾಕ್ ನೀಡಿದರೆ, ಇತ್ತ ಮಂಗಳವಾರ ಬೆಳಗ್ಗೆ ಚೆನ್ನೈನಲ್ಲಿ ಸುದ್ದಿಗೋಷ್ಠಿ ಮಾಡಿದ ಅಣ್ಣಾ ಡಿಎಂಕೆ ಪಕ್ಷದ ಮಾಜಿ ಶಾಸಕ ಪಾಂಡಿಯಾನ್ ಜಯಾ ಸಾವು ಸಹಜ ಸಾವಲ್ಲ, ಅದು ವ್ಯವಸ್ಥಿತ ಕೊಲೆ. ಆ ಕೊಲೆಗೆ ಶಶಿಕಲಾ ನೇರಹೊಣೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸೆಪ್ಟೆಂಬರ್ 22ರಂದು ಪೋಯಸ್ ಗಾರ್ಡನ್‍ನ ಜಯಾ ನಿವಾಸದಲ್ಲಿ ಜಗಳ ನಡೆದಿತ್ತು. ಈ ಜಗಳದಲ್ಲಿ ಯಾರೋ ಒಬ್ಬರು ಜಯಲಲಿತಾರನ್ನು ತಳ್ಳಿದ್ದರು ಆಗ ಜಯಾ ಕೆಳಕ್ಕೆ ಉರುಳಿ ಬಿದ್ದಿದ್ದರು. ಬಳಿಕ ಯಾರೂ ಆಸ್ಪತ್ರೆಗೆ ದಾಖಲು ಮಾಡಿರಲಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

    ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ನಿನ್ನೆ ವೈದ್ಯರು ನೀಡಿರುವ ಹೇಳಿಕೆಗಳೆಲ್ಲಾ ಶುದ್ಧ ಸುಳ್ಳು. ಜಯಾ ಶವದ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಶಶಿಕಲಾ ಅವರು ನಮಗೆಲ್ಲ ಮೋಸ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೇರಲು ಬಯಸಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

  • ಮಂಗಳವಾರದಿಂದ ಶಶಿಕಲಾ ರಾಜಕೀಯ ಪರ್ವ ಶುರು

    ಚೆನ್ನೈ/ ನವದೆಹಲಿ: ಮಂಗಳವಾರದಿಂದ ತಮಿಳುನಾಡಲ್ಲಿ ಹೊಸ ರಾಜಕೀಯ ಪರ್ವ ಶುರುವಾಗಲಿದೆ. ಬೆಳಗ್ಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಅಧಿಕಾರ ಸ್ವೀಕಾರ ಮಾಡ್ತಿದ್ದಾರೆ.

    ಜಯಲಲಿತಾ 2 ಬಾರಿ ಅಧಿಕಾರ ಸ್ವೀಕಾರ ಮಾಡಿದ ಮೂಹೂರ್ತದಲ್ಲೇ ಶಶಿಕಲಾ ಕೂಡಾ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಜಯಲಲಿತಾ ಮೃತಪಟ್ಟಾಗ ಆಕೆ ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ ಅಂತಾ ತುಂಬಾ ಗಂಭೀರವಾದ ಆರೋಪುಗಳು ಕೇಳಿ ಬಂದಿತ್ತು. ಆ ಎಲ್ಲಾ ಆರೋಪಗಳನ್ನು ಮೆಟ್ಟಿನಿಂತು ನಾಳೆ ಶಶಿಕಲಾ ತಮಿಳುನಾಡಿನ 3ನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.

    ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ಶಶಿಕಲಾ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮಾಜಿ ಸಿಎಂ ಜಯಲಲಿತಾ ಮತ್ತು ಶಶಿಕಲಾ ವಿರುದ್ಧದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

    ಈ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಶಶಿಕಲಾಗೆ ಟ್ವಿಟ್ಟರ್‍ನಲ್ಲೇ ಗೂಗ್ಲಿ ಎಸೆದಿದ್ದಾರೆ. ತಮಿಳುನಾಡು ವಿಧಾನಸಭೆ ಸ್ಥಾನಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಸದ್ಯದಲ್ಲೇ 234 ಯುವಕರಿಗೆ ಕೆಲಸ ಸಿಗಲಿವೆ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಪಕ್ಷದ ಸದಸ್ಯೆ ಕೆ.ಎಸ್.ಗೀತಾ ಶಶಿಕಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಶಶಿಕಲಾ ಅವರ ನೂರಾರು ಕೋಟಿ ಮೊತ್ತದ ಡೀಲ್‍ಗಳಿಗೆ ಸಿಎಂ ಪನ್ನೀರ್ ಸೆಲ್ವಂ ಸಹಿ ಹಾಕಲು ನಿರಾಕರಿಸಿದ್ರು. ಹೀಗಾಗಿ ಶಶಿಕಲಾ ಅವರು ಸಿಎಂ ಪನ್ನೀರ್ ಸೆಲ್ವಂ ಮತ್ತು ಶೀಲಾ ಬಾಲಕೃಷ್ಣನ್ ರಾಜೀನಾಮೆಗೆ ಒತ್ತಡ ಹೇರಿದ್ರು ಅಂತ ಹೇಳಿದ್ದಾರೆ.

    ಶಶಿಕಲಾ ಮೇಲಿರೋ ಕೇಸ್ ಏನು?
    1996ರಲ್ಲಿ ಜಯಲಲಿತಾ ದತ್ತು ಪುತ್ರನಿಗೆ ಅದ್ಧೂರಿ ವಿವಾಹ ಮಾಡಿದ್ದರು. ಈ ಸಂಬಂಧ ಜಯಲಲಿತಾ ವಿರುದ್ಧ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಾಗಿತ್ತು. ಜಯಲಲಿತಾ ಜೊತೆಗೆ ಶಶಿಕಲಾ ನಟರಾಜನ್ ವಿರುದ್ಧವೂ ಕೇಸ್ ದಾಖಲಾಗಿತ್ತು. ತಮಿಳುನಾಡಿನಿಂದ ಕೇಸ್ ವಿಚಾರಣೆಯನ್ನು ಬೇರೆ ಕಡೆ ವರ್ಗಾವಣೆ ಮಾಡುವಂತೆ ಡಿಎಂಕೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿಗೆ ವರ್ಗಾಯಿಸಿ ಇದಕ್ಕಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡುವಂತೆ 2003 ರಲ್ಲಿ ಆದೇಶ ಪ್ರಕಟಿಸುತ್ತದೆ. 2014ರ ಸೆ. 27ರಂದು ಜಯಾಗೆ 4 ವರ್ಷ ಜೈಲು, 100 ಕೋಟಿ ದಂಡ ಶಶಿಕಲಾ ಮತ್ತು ಇತರರಿಗೆ 4 ವರ್ಷ ಜೈಲು 10 ಕೋಟಿ ದಂಡ ವಿಧಿಸಿ ತೀರ್ಪು ನೀಡುತ್ತದೆ.

    2015 ಮೇ.11ರಂದು ಕರ್ನಾಟಕ ಹೈಕೋರ್ಟ್ ವಿಶೇಷ ನ್ಯಾಯಾಲಯದ ತೀರ್ಪು ರದ್ದುಗೊಳಿಸಿ ತೀರ್ಪು ಪ್ರಕಟಿಸುತ್ತದೆ. ಜಯಲಲಿತಾ, ಶಶಿಕಲಾ ಸೇರಿದಂತೆ ಉಳಿದ ಆರೋಪಿಗಳೂ ದೋಷಮುಕ್ತರಾಗುತ್ತದೆ. ಹೈಕೋರ್ಟ್ ತೀರ್ಪಿನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸುತ್ತದೆ. ಕಳೆದ ಜೂನ್ 7ರಂದು ವಿಚಾರಣೆ ನಡೆಸಿದ ಸುಪ್ರೀಂ ತೀರ್ಪು ಕಾಯ್ದಿರಿಸಿತ್ತು.

    ಮತ್ತೊಂದು ಕೇಸ್ ಯಾವುದು?
    1995-96ರಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಮೂರು ಕೇಸ್‍ಗಳ ಶಶಿಕಲಾ ವಿರುದ್ಧ ದಾಖಲಿಸಿತ್ತು. ವಿದೇಶಿ ಸಂಸ್ಥೆಗಳಿಗೆ ಯುಎಸ್, ಸಿಂಗಪೂರ್ ಡಾಲರ್ ರೂಪದಲ್ಲಿ ಪಾವತಿ ಜೆಜೆ ಟಿವಿಗಾಗಿ ತರಂಗಾಂತರ ಉಪಕರಣ ಬಾಡಿಗೆ ಪಡೆದಿದ್ದರು ಎನ್ನುವ ಆರೋಪ ಶಶಿಕಲಾ ಮೇಲಿದೆ. ಈ ಕೇಸನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

  • ಮಧುರೈನಲ್ಲಿ ಇಂದು ಜಲ್ಲಿಕಟ್ಟು: 38 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

    ಚೆನ್ನೈ: ಮಧುರೈ ಜಿಲ್ಲೆಯ ಅವನಿಪುರಂನಲ್ಲಿ ಇಂದು ಜಲ್ಲಿಕಟ್ಟು ಸ್ಪರ್ಧೆ ನಡೆದಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಸ್ಪರ್ಧೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂದಿನ ಸ್ಪರ್ಧೆಯನ್ನು ಕಂದಾಯ ಸಚಿವ ಆರ್‍ಬಿ ಉದಯ ಕುಮಾರ್ ಮತ್ತು ಜಿಲ್ಲಾಧಿಕಾರಿ ವೀರರಾಘವ ರಾವ್ ಉದ್ಘಾಟಿಸಿದ್ದರು. ಇನ್ನು ಈ ಸ್ಫರ್ಧೆಯಲ್ಲಿ ಸುಮಾರು 600 ಗೂಳಿಗಳು ಭಾಗವಹಿಸಿದ್ದವು. ಹಾಗೆಯೇ ಈ ಆಚರಣೆಯನ್ನು ನೋಡಲೆಂದು ಸಾವಿರಾರು ಮಂದಿ ಜಮಾಯಿಸಿದ್ದರು.

    ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಂಡ, ಆಂಬ್ಯುಲೆನ್ಸ್‍ಗಳನ್ನು ನಿಯೋಜಿಸಲಾಗಿತ್ತು. ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಆಚರಿಸಲಾಗುತ್ತಿತ್ತು. ಆದ್ರೆ ಸುಪ್ರೀಂ ಕೋರ್ಟ್ ಆಚರಣೆಗೆ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡೆ ಆಚರಿಸಲು ಸಾಧ್ಯವಾಗಿರಲಿಲ್ಲ.

    ಸಾವಿರಾರು ಜನರ ಪ್ರತಿಭಟನೆಯ ನಂತರ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಗ್ಞೆ ತಂದಿತ್ತು.

  • ತಮಿಳುನಾಡಲ್ಲಿ ನಾಳೆಯಿಂದ ಚಿನ್ನಮ್ಮನ ರಾಜ್ಯಭಾರ, ಪನೀರ್ ಸೆಲ್ವಂ ರಾಜೀನಾಮೆ

    ಚೆನ್ನೈ: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.

    ಇಂದು ಚೆನ್ನೈನ ಪೋಯಸ್ ಗಾರ್ಡನ್ ನಿವಾಸದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಎಐಎಡಿಎಂಕೆಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಶಶಿಕಲಾ ಆಯ್ಕೆಯಾಗಿದ್ದು, ಸಿಎಂ ಸ್ಥಾನಕ್ಕೆ ಓ ಪನೀರ್ ಸೆಲ್ವಂ ರಾಜೀನಾಮೆ ನೀಡಿದ್ದಾರೆ.

    ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಅಮ್ಮನಂತೆಯೇ ಇರ್ತೀನಿ, ಅವರ ಮಾರ್ಗದಲ್ಲೇ ನಡೆಯುತ್ತೇನೆ ಎಂದಿದ್ದ ಶಶಿಕಲಾ ಇಂದಿನ ಸಭೆಯ ಬಳಿಕ ಪಕ್ಷದ ಕಾರ್ಯಕರ್ತರ ಮುಂದೆ ಜಯಲಲಿತಾ ತುಂಬಾ ಇಷ್ಟಪಡುತ್ತಿದ್ದ ಹಸಿರು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು.

  • ವೀಡಿಯೋ: ಮೂಗಿನಿಂದ ಮಹಿಳೆಯ ತಲೆ ಹೊಕ್ಕಿದ್ದ ಜಿರಲೆ ಹೊರತೆಗೆದ್ರು

    ಚೆನ್ನೈ: ಮಹಿಳೆಯೊಬ್ಬರ ಕಿವಿಯೊಳಗೆ ಸೇರಿಕೊಂಡಿದ್ದ ಜಿರಲೆಯನ್ನು ಹೊರತೆಗೆದ ಘಟನೆ ಇತ್ತೀಚೆಗೆ ಚೀನಾದಲ್ಲಿ ನಡೆದಿತ್ತು. ಆದ್ರೆ ಮಹಿಳೆಯ ಮೂಗಿನ ಮೂಲಕ ಜಿರಲೆ ಒಳಹೋಗಿ ತಲೆಯಲ್ಲಿ ಸೇರಿಕೊಂಡಿತ್ತು ಎಂದರೆ ನೀವು ನಂಬಲೇ ಬೇಕು.

    ಇಂತಹದ್ದೊಂದು ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ, ತಮಿಳುನಾಡಿನಲ್ಲಿ. ಇಲ್ಲಿನ ನಿವಾಸಿ 42 ವರ್ಷದ ಸೆಲ್ವಿ ಅಂದು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದು ಮಲಗಿದ್ರು. ಮಧ್ಯರಾತ್ರಿ ವೇಳೆಗೆ ಸೆಲ್ವಿ ಅವರ ಮೂಗಿನಿಂದ ಯಾವುದೋ ಕೀಟ ಒಳಹೋದಂತೆ ಅನುಭವವಾಗಿದ್ದು, ಕೂಡಲೇ ಆಕೆಯ ಅಳಿಯನೊಂದಿಗೆ ಹತ್ತಿರದ ಆಸ್ಪತ್ರೆಗೆ ಓಡಿದ್ರು.

    ಮನೆಗೆಲಸ ಮಾಡೋ ಸೆಲ್ವಿ ಇಂಜಂಬಕ್ಕಂ ನಿವಾಸಿಯಾಗಿದ್ದು, ಘಟನೆಯ ಬಗ್ಗೆ ನೆನೆಸಿಕೊಳ್ಳುತ್ತಾ, ಮೂಗಿನಲ್ಲಿ ಏನೋ ಓಡಾಡ್ತಿದೆ ಅಂತ ಗೊತ್ತಾದಾಗ ನಿದ್ದೆಗಣ್ಣಿನಲ್ಲೇ ಮೂಗನ್ನು ಒರೆಸಿಕೊಳ್ಳುತ್ತಿದೆ. ಆದ್ರೆ ಅಷ್ಟರಲ್ಲಾಗಲೇ ಅದು ಒಳಹೋಗಿತ್ತು ಎಂದಿದ್ದಾರೆ. ಸೆಲ್ವಿ ಕ್ಲೀನಿಕ್‍ಗೆ ಹೋದಾಗ ವೈದ್ಯರು ಟಾರ್ಚ್ ಹಾಕಿ ನೋಡಿದ್ರು, ಇತರೆ ಕೆಲ ವೈದ್ಯರಿಗೆ ಕರೆ ಮಾಡಿ ವಿಚಾರಿಸಿದ್ರು. ಅದ್ರೆ ನಾನು ಏನೂ ಮಾಡಲಾರೆ ಎಂದು ಬೇರೊಂದು ಆಸ್ಪತ್ರೆಗೆ ಕಳಿಸಿದ್ರು. ಅಲ್ಲಿನ ವೈದ್ಯರು ಮೂಗಿನಲ್ಲಿ ಚರ್ಮ ಬೆಳೆಯುತ್ತಿದೆ ಎಂದು ಹೇಳಿದ್ದರು. ಆದರೆ ಸೆಲ್ವಿಗೆ ಮೂಗಿನಲ್ಲಿ ಕೀಟ ಹರಿದಾಡಿದಾಗಲೆಲ್ಲಾ ಉರಿಯಾಗಿ ಇಡೀ ರಾತ್ರಿ ನೋವು ಅನುಭವಿಸಿದ್ರು.

    ಮರುದಿನ ಬೆಳಿಗ್ಗೆ ಸರ್ಕಾರಿ ಸ್ಟ್ಯಾನ್ಲೀ ಮಡಿಕಲ್ ಕಾಲೇಜು ಆಸ್ಪತ್ರೆ ತಲುಪಿದ ಸೆಲ್ವಿಗೆ ವೈದ್ಯರು ನೇಝಲ್(ಮೂಗಿನ)ಎಂಡೋಸ್ಕೋಪಿ ಮಾಡಿದ್ರು. ಆಗ ಮಹಿಳೆ ಅಂದುಕೊಂಡಂತೆ ಜಿರಲೆ ಒಳಹೋಗಿರುವುದು ದೃಢವಾಯ್ತು.

    ಬುರುಡೆಯ ತಳದಲ್ಲಿ, ಸೆಲ್ವಿ ಅವರ ಎರಡು ಕಣ್ಣುಗಳ ಮಧ್ಯಭಾಗದಲ್ಲಿ ಜಿರಲೆ ಸೇರಿಕೊಂಡಿತ್ತು. ಅಲ್ಲದೆ ಅದು ಇನ್ನೂ ಜೀವಂತವಾಗಿತ್ತು. ಕೂಡಲೇ ಏನಾದ್ರೂ ಮಾಡದಿದ್ರೆ ಜಿರಲೆ ಒಳಗಡೆಯೇ ಸತ್ತುಹೋಗಿ ಇನ್ಫೆಕ್ಷನ್ ಆಗಿ ಮೆದುಳಿಗೂ ಹರಡುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾರೆ.

    ಸದ್ಯ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆ ಮಾಡದೆ ಸೆಲ್ವಿ ಅವರ ತಲೆ ಹೊಕ್ಕಿದ್ದ ಜಿರಲೆಯನ್ನ ಹೊರತೆಗೆದಿದ್ದಾರೆ.

    ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಇಂತಹ ಪ್ರಕರಣ ನೋಡಿದ್ದು ಇದೇ ಮೊದಲು ಅಂತ ಆಸ್ಪತ್ರೆಯ ಕಿವಿ ಮೂಗು ಗಂಟಲು(ಇಎನ್‍ಟಿ) ವಿಭಾಗದ ಮುಖ್ಯಸ್ಥರಾದ ಡಾ. ಎಮ್‍ಎನ್ ಶಂಕರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=Rr8VUWqmlFI