Tag: tamilnadu

  • ರಾಜಕೀಯ ಹೈಡ್ರಾಮಕ್ಕೆ ತೆರೆ: ಎಡಪ್ಪಾಡಿ ಪಳನಿಸ್ವಾಮಿ ಈಗ ತಮಿಳುನಾಡು ಸಿಎಂ

    ರಾಜಕೀಯ ಹೈಡ್ರಾಮಕ್ಕೆ ತೆರೆ: ಎಡಪ್ಪಾಡಿ ಪಳನಿಸ್ವಾಮಿ ಈಗ ತಮಿಳುನಾಡು ಸಿಎಂ

    ಚೆನ್ನೈ: 10 ದಿನಗಳ ತಮಿಳುನಾಡು ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿದೆ. ವಿ.ಕೆ.ಶಶಿಕಲಾ ಅವರ ನಿಷ್ಠಾವಂತ ಎಡಪ್ಪಾಡಿ ಪಳನಿಸ್ವಾಮಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಗುರುವಾರ ಸಂಜೆ ಸಂಜೆ 4 ಗಂಟೆ ವೇಳೆಗೆ ರಾಜಭವನದಲ್ಲಿ 63 ವರ್ಷದ ಪಳನಿಸ್ವಾಮಿ ಅವರಿಗೆ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಪಳನಿಸ್ವಾಮಿ ಪ್ರಮಾಣವಚನ ಸ್ವೀಕರಿಸಿದರು.

    ಪಳನಿಸ್ವಾಮಿ ಸಂಪುಟಕ್ಕೆ 27 ಶಾಸಕರು ಸೇರ್ಪಡೆಯಾಗಿದ್ದಾರೆ. ಏಕಕಾಲದಲ್ಲಿ 8 ಜನ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಇನ್ನು ನಾಲ್ವರು ಮಹಿಳೆಯರು ಪಳನಿಸ್ವಾಮಿ ಸಂಪುಟ ಸೇರಿದ್ದು, 18 ಖಾತೆಗಳನ್ನು ಪಳನಿಸ್ವಾಮಿ ಅವರೇ ಉಳಿಸಿಕೊಂಡಿದ್ದಾರೆ.

    ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಇ.ಕೆ.ಪಳನಿಸ್ವಾಮಿಯವರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ. 234 ಮಂದಿ ಸದಸ್ಯರುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 117 ಶಾಸಕರ ಬೆಂಬಲ ಬೇಕು. ಸದ್ಯ 134 ಮಂದಿ ಎಐಎಡಿಎಂಕೆ ಶಾಸಕರ ಪೈಕಿ 124 ಮಂದಿಯ ಬೆಂಬಲ ಪಳನಿ ಸ್ವಾಮಿಗೆ ಇದೆ.

    ಶಶಿಕಲಾ ಬಣಕ್ಕೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಅವರು ಅವಕಾಶ ನೀಡಿದ್ದಕ್ಕೆ ಪನ್ನೀರ್ ಸೆಲ್ವಂ ಬಣದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     

  • ಚಿನ್ನಮ್ಮ ಜೈಲಿಗೆ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಮಾ ಮತ್ತಷ್ಟು ಚುರುಕು

    ಚಿನ್ನಮ್ಮ ಜೈಲಿಗೆ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಮಾ ಮತ್ತಷ್ಟು ಚುರುಕು

    ಚೆನ್ನೈ: ಅಂತೂ ಇಂತು ಅಕ್ರಮ ಹಣ ಸಂಪಾದನೆ ಕೇಸ್‍ನಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಆಕೆಯ ಸಂಬಂಧಿಗಳಾದ ಇಳವರಸಿ ಮತ್ತು ಸುಧಾಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಯ್ತು. ಆದ್ರೆ ತಮಿಳುನಾಡಿನಲ್ಲಿ ಇಷ್ಟು ದಿನ ನಡೆದ ರಾಜಕೀಯ ಹೈಡ್ರಾಮ ಮತ್ತಷ್ಟು ಚುರುಕಾಗುವ ಲಕ್ಷಣ ಕಂಡುಬರುತ್ತಿದೆ.

    ಶಶಿಕಲಾ ಬೆಂಗಳೂರಿನ ಜೈಲು ಹಕ್ಕಿ ಆಗ್ತಿದ್ದ ಹಾಗೆ ಅತ್ತ ಚೆನ್ನೈನಲ್ಲಿ ರಾಜಕೀಯ ಗರಿಗೆದರಿದೆ. ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿದ ಪಳನಿಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. ಆದ್ರೆ ಹೊಸದಾಗಿ ಶಾಸಕರ ಪಟ್ಟಿ ಕೊಡುವಂತೆ ಗವರ್ನರ್ ತಾಕೀತು ಮಾಡಿದ್ರು.

    ಒಂದು ಕಡೆ ಇಷ್ಟೆಲ್ಲಾ ರಾಜಕೀಯ ಹೈಡ್ರಾಮಾ ನಡೆಯುತ್ತಿದ್ರೆ, ಅತ್ತ ಪನ್ನೀರ್ ಸೆಲ್ವಂ ಕೂಡ ತಮ್ಮದೇ ಲೆಕ್ಕಾಚಾರದಲ್ಲಿ ದಾಳ ಉರುಳಿಸುತ್ತಿದ್ದಾರೆ. ಬುಧವಾರ ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಅವಕಾಶ ಕೊಡುವಂತೆ ಕೋರಿದ್ದಾರೆ. ಜಯಾ ಸೋದರ ಸಂಬಂಧಿ ದೀಪಾ ಬೆಂಬಲ ಪಡೆದಿರುವ ಸೆಲ್ವಂ ಜೊತೆ 22 ಶಾಸಕರಿದ್ದಾರೆ ಎನ್ನಲಾಗಿದೆ.

    ಶಶಿಕಲಾ ಎಂಎಲ್‍ಎಗಳನ್ನು ಒತ್ತಡದಿಂದ ಕೂಡಿ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗೋಲ್ಡನ್ ಬೇ ರೆಸಾರ್ಟ್‍ನಿಂದ ಎಲ್ಲರನ್ನು ಖಾಲಿ ಮಾಡಿಸಿದ್ದು, ಕೆಲವರನ್ನು ವಿಚಾರಣೆ ಕೂಡ ಮಾಡ್ತಿದ್ದಾರೆ. ಅದ್ರಲ್ಲಿ ಯಾರಾದರೂ ಒಂದಿಬ್ಬರು ಹೌದು ಕೂಡಿ ಹಾಕಿದ್ರು ಅಂತಾ ಹೇಳಿದ್ರೆ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಪಳನಿಸ್ವಾಮಿ ವಿರುದ್ಧವೇ ಕಿಡ್ನಾಪ್ ಕೇಸ್ ಬೀಳುವ ಸಾಧ್ಯತೆಯೂ ಇದೆ.

    ಒಟ್ನಲ್ಲಿ ತಮಿಳುನಾಡು ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗ ಇದ್ದ ಸ್ಥಿತಿ ಮಧ್ಯಾಹ್ನಕ್ಕೆ ಇಲ್ಲದಂತೆ ಆಗುತ್ತಿದೆ. ಪನ್ನೀರ್ ಸೆಲ್ವಂಗೆ ಕುರ್ಚಿ ಸಿಗುತ್ತೋ ಇಲ್ಲಾ ಪಳನಿಸ್ವಾಮಿ ಸಿಎಂ ಆಗ್ತಾರೋ ಅನ್ನೋದ್ರ ಜೊತೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಾ ಅನ್ನೋದು ಕೂಡ ಅಷ್ಟೇ ಮುಖ್ಯವಾಗಿದೆ.

     

  • ಕಡೆಗೂ ಜೈಲು ಸೇರಿದ ಶಶಿಕಲಾ ನಟರಾಜನ್ – ಚಿನ್ನಮ್ಮ ಈಗ ಕೈದಿ ನಂಬರ್ 9234

    ಕಡೆಗೂ ಜೈಲು ಸೇರಿದ ಶಶಿಕಲಾ ನಟರಾಜನ್ – ಚಿನ್ನಮ್ಮ ಈಗ ಕೈದಿ ನಂಬರ್ 9234

    – ಮನೆ ಊಟದ ಮನವಿ ತಿರಸ್ಕರಿಸಿದ ವಿಶೇಷ ಕೋರ್ಟ್

    ಬೆಂಗಳೂರು: ಅಂತೂ ಇಂತೂ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ 4 ವರ್ಷಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

    ಶಶಿಕಲಾ ಜೊತೆ ಆಕೆಯ ಸಂಬಂಧಿ ಇಳವರಸಿ ಕೂಡಾ ಜೈಲುಪಾಲಾಗಿದ್ದಾರೆ. ಪರಪ್ಪನ ಅಗ್ರಹಾರ ಸೇರಿದ ಚಿನ್ನಮ್ಮ ಈಗ ಕೈದಿ ನಂ.9234 ಹಾಗೂ ಇಳವರಸಿ ಕೈದಿ ನಂ. 9235. ಶಶಿಕಲಾ  ನೀಡಲಾಗಿದೆ. ಶಶಿಕಲಾ ಸಾಮಾನ್ಯ ಕೈದಿ ವಾರ್ಡ್‍ನಲ್ಲಿ ನಾಲ್ಕು ವರ್ಷಗಳ ಸೆರೆವಾಸ ಅನುಭವಿಸಬೇಕಿದೆ. ಈಗಾಗಲೇ ಇಬ್ಬರು ಮಹಿಳಾ ಕೈದಿಗಳು ಈ ಸೆಲ್‍ನಲ್ಲಿ ಇದ್ದಾರೆ. ಹಾಗೆ ಶಶಿಕಲಾಗೆ 3 ಬಿಳಿ ಸೀರೆ, 2 ತಟ್ಟೆ, ಒಂದು ಚೊಂಬನ್ನು ನೀಡಲಾಗಿದೆ. ಅಲ್ದೆ ಸಾಮಾನ್ಯ ಕೈದಿಗಳು ನೋಡುವ ಟಿವಿಯನ್ನೇ ಶಶಿಕಲಾ ನೋಡಬೇಕು. ಶುಗರ್ ಇದೆ ಎಂದು ಮನೆ ಊಟ ಬೇಕೆಂದು ಕೇಳಿದ್ದ ಶಶಿಕಲಾ ಮನವಿಯನ್ನು ವಿಶೇಷ ಕೋರ್ಟ್ ತಿರಸ್ಕರಿಸಿದೆ. ಇದರ ಜೊತೆ ಶಶಿಕಲಾಗೆ ಕ್ಯಾಂಡಲ್ ತಯಾರಿ ಮಾಡುವ ಕೆಲಸ ನೀಡಲಾಗಿದ್ದು, 50 ರೂಪಾಯಿ ದಿನಗೂಲಿ ಕೂಡ ನೀಡಲಾಗುತ್ತದೆ. ಮತ್ತೋರ್ವ ಅಪರಾಧಿ ಸುಧಾಕರನ್ ಕೂಡ ಪರಪ್ಪನ ಅಗ್ರಹಾರಕ್ಕೆ ಬಂದು ಶರಣಾಗಿದ್ದಾರೆ.

    ಇನ್ನು ಶಶಿಕಲಾ ಪರಪ್ಪನ ಅಗ್ರಹಾರ ಕೋರ್ಟ್‍ನತ್ತ ಬರುತ್ತಿದ್ದಂತೆ ಜಯಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ರು. 30 ವರ್ಷ ಅಮ್ಮನ ಜೊತೆ ಇದ್ದುಕೊಂಡೇ ಮೋಸ ಮಾಡಿದ್ದೀರಿ ಅಂತ ಜಯಾ ಅಭಿಮಾನಿಗಳು ಇನೋವಾ ಕಾರಿನ ಗ್ಲಾಸ್ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು. ಈ ವೇಳೆ 4 ಸ್ಕಾರ್ಪಿಯೋ ಹಾಗೂ 1 ಇನೋವಾ ಕಾರು ಜಖಂ ಆಗಿದೆ.

    ಮಧ್ಯಾಹ್ನ 1.30ಕ್ಕೆ ವಿಶೇಷ ಕಾರಿನಲ್ಲಿ ಹೊರಟ ಶಶಿಕಲಾ ಸಂಜೆ 5 ಗಂಟೆ 15 ನಿಮಿಷಕ್ಕೆ ಪರಪ್ಪನ ಅಗ್ರಹಾರ ಜೈಲು ತಲುಪಿದ್ರು. ಜಯಲಲಿತಾ ಬಳಸುತ್ತಿದ್ದ ಟಯೋಟಾ ಪ್ರಾಡೋ ಕಾರಿನಲ್ಲೇ ಶಶಿಕಲಾ ಜೈಲಿಗೆ ಬಂದ್ರು. ತಮಿಳುನಾಡು ಪೊಲೀಸರು ಶಶಿಕಲಾ ನಟರಾಜನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆತಂದು ಪರಪ್ಪನ ಅಗ್ರಹಾರದ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ವಾಪಸ್ ಹೋದ್ರು. ಚೆನ್ನೈ, ವೆಲ್ಲೂರು, ಕೃಷ್ಣಗಿರಿ, ಹೊಸೂರು ಮಾರ್ಗವಾಗಿ ಶಶಿಕಲಾರನ್ನು ಬೆಂಗಳೂರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಯ್ತು. ಮಾರ್ಗದುದ್ದಕ್ಕೂ ಜಯಲಲಿತಾ ಹಾಗೂ ಶಶಿಕಲಾ ಅಭಿಮಾನಿಗಳು ಕಾರಿನತ್ತ ಕೈ ಬೀಸಿದ್ರು. ಶಶಿಕಲಾ ಜೈಲಿಗೆ ಹೋಗೋದನ್ನು ಕಂಡು ಕೆಲವರು ಮರುಗಿದ್ರು. ಕಣ್ಣೀರು ಹಾಕಿ ಚಿನ್ನಮ್ಮನನು ಜೈಲಿಗೆ ಕಳಿಸಬೇಡಿ ಅಂದ್ರು. ಪನ್ನೀರ್ ಸೆಲ್ವಂ ಅಭಿಮಾನಿಗಳು ಖುಷಿ ಪಟ್ರು.

    ಇತ್ತ ಶಶಿಕಲಾ ಬರುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿಗೆ ಶಶಿಕಲಾ ಪತಿ ನಟರಾಜನ್ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಬಂದು ನಿಂತಿದ್ರು. ಸಾಕಷ್ಟು ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿದ್ರು. ಶಶಿಕಲಾರನ್ನು ಜೈಲಿಗೆ ಹಾಕಬೇಡಿ ಅಂತಾ ಕೆಲವರು ಗಲಾಟೆ ಮಾಡಿದ್ರು.

  • ಮಧ್ಯಾಹ್ನದ ನಂತರ ಸೆಷನ್ಸ್ ಕೋರ್ಟ್‍ಗೆ ಶಶಿಕಲಾ ಶರಣು- ಪರಪ್ಪನ ಅಗ್ರಹಾರದಲ್ಲಿ ಟೈಟ್ ಸೆಕ್ಯೂರಿಟಿ

    ಮಧ್ಯಾಹ್ನದ ನಂತರ ಸೆಷನ್ಸ್ ಕೋರ್ಟ್‍ಗೆ ಶಶಿಕಲಾ ಶರಣು- ಪರಪ್ಪನ ಅಗ್ರಹಾರದಲ್ಲಿ ಟೈಟ್ ಸೆಕ್ಯೂರಿಟಿ

    ಬೆಂಗಳೂರು: ಅಕ್ರಮ ಅಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರನ್ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ಸತ್ತ್ರ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ.

    ಸುಪ್ರೀಂ ಕೋರ್ಟ್‍ನಿಂದ ಶಿಕ್ಷೆ ಪ್ರಕಟಿಸಿ ಆದೇಶ ಹೊರಬೀಳುತ್ತಿದ್ದಂತೆ ಚೆನ್ನೈನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಿದೆ. ಮಂಗಳವಾರವೇ ಬೆಂಗಳೂರಿಗೆ ಬಂದು ಶರಣಾಗಬೇಕಿದ್ದ ಶಶಿಕಲಾ ತಮ್ಮ ಬೆಂಬಲಿತ ಅಭ್ಯರ್ಥಿಯನ್ನು ಸಿಎಂ ಮಾಡುವ ಉದ್ದೇಶದಿಂದ ಚೆನ್ನೈನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಶಶಿಕಲಾ ಶರಣಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವ್ಯವಸ್ಥೆಗಳು ಅರಂಭಗೊಂಡಿದೆ. ಈ ಹಿಂದೆ ಜಯಲಲಿತಾರನ್ನು ಇರಿಸಲಾಗಿದ್ದ ಮಹಿಳಾ ಬ್ಯಾರಕ್‍ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

    ಜಯಲಲಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಸ್ಥಾಪಿಸಲಾಗಿದ್ದ ವಿಶೇಷ ಸತ್ತ್ರ ನ್ಯಾಯಾಲಯವನ್ನು ಮಂಗಳವಾರವೇ ಜೈಲು ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ. ವಿಶೇಷ ನ್ಯಾಯಾಧೀಶರಾಗಿ ಆಶ್ವಥ್ ನಾರಾಯಣ್ ರವರನ್ನು ನಿಯೋಜಿಸಲಾಗಿದೆ. ಶಶಿಕಲಾ ಕೋರ್ಟ್ ಗೆ ಹಾಜರಾಗಲಿದ್ದು, ಮುಂದಿನ ತೀರ್ಮಾನವನ್ನು 36 ನೇ ವಿಶೇಷ ಸತ್ತ್ರ ನ್ಯಾಯಾಲಯದ ನ್ಯಾಯಾಧೀಶರು ಕೈಗೊಳ್ಳಲಿದ್ದಾರೆ. ಕೋರ್ಟ್ ಸುತ್ತ ಮುತ್ತ ಪೆÇಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

    ಈ ಮಧ್ಯೆ ಶಶಿಕಲಾ ನಟರಾಜನ್ ತನ್ನ ಸಂಬಂಧಿ ದಿನಕರನ್‍ಗೆ ಎಐಎಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ ಪಟ್ಟಕಟ್ಟಿದ್ದಾರೆ. 2011ರಲ್ಲಿ ಜಯಲಲಿತಾ ದಿನಕರನ್‍ಗೆ ಪಕ್ಷದಿಂದ ಗೇಟ್‍ಪಾಸ್ ಕೊಟ್ಟಿದ್ದರು. ಆದ್ರೆ ಕಳೆದ ರಾತ್ರಿ ಕ್ಷಮಾಪಣಾ ಪತ್ರ ಬರೆಸಿಕೊಂಡು ಮತ್ತೆ ದಿನಕರನ್‍ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ದಿನಕರನ್ ಜೊತೆ ಮತ್ತೋರ್ವ ಸಂಬಂಧಿ ಡಾ.ವೆಂಕಟೇಶ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

  • ಇಂದು ಶಶಿಕಲಾ ಶರಣಾಗದಿದ್ದರೆ ಸೆಷನ್ ಕೋರ್ಟ್ ಕೊಡುತ್ತೆ ಅರೆಸ್ಟ್ ವಾರೆಂಟ್!

    ಇಂದು ಶಶಿಕಲಾ ಶರಣಾಗದಿದ್ದರೆ ಸೆಷನ್ ಕೋರ್ಟ್ ಕೊಡುತ್ತೆ ಅರೆಸ್ಟ್ ವಾರೆಂಟ್!

    ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿಯೆಂದು ಶಿಕ್ಷೆಗೆ ಗುರಿಯಾಗಿರುವ ದಿವಂಗತ ಜಯಲಲಿತಾ ಪರಮಾಪ್ತೆ, ಎಐಎಡಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಹಾಗೂ ಸಂಬಂಧಿಗಳಾದ ಸುಧಾಕರನ್ ಮತ್ತು ಇಳವರಸಿ ಇಂದು ಕೋರ್ಟ್ ಮುಂದೆ ಶರಣಾಗಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಮಂಗಳವಾರ ಮೇಲ್ಮನವಿ ಅರ್ಜಿ ವಿಚಾರಣೆಯ ತೀರ್ಪು ನೀಡಿದ ಸುಪ್ರೀಂಕೋರ್ಟ್, ಇಂದೇ ಶರಣಾಗಬೇಕು ಅಂತಾ ತೀರ್ಪಿನಲ್ಲಿ ಸೂಚಿಸಿತ್ತು. ಆದ್ರೂ ಮೂವರಲ್ಲಿ ಯಾರೊಬ್ಬರೂ ಶರಣಾಗಲಿಲ್ಲ. ಇಂದು ಸುಪ್ರೀಂಕೋರ್ಟ್‍ನಲ್ಲಿ ಮೇಲ್ವಿಚಾರಣ ಅರ್ಜಿ ಹಾಗೂ ಶರಣಾಗತಿಗೆ 4 ವಾರಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲಾಗುತ್ತೆ ಅಂತಾ ಶಶಿಕಲಾ ಗುಂಪಿನಿಂದ ಮಾಹಿತಿಯಿದ್ದು, ಅಂತಿಮವಾಗಿ ಉಳಿದಿರುವ ಏಕೈಕ ಮಾರ್ಗ ಅಂದ್ರೆ ಶರಣಾಗತಿ. 4 ವರ್ಷ ಜೈಲು ಶಿಕ್ಷೆ ಅನುಭವಿಸೋದು ಅಂತಾ ಹೇಳಲಾಗ್ತಿದೆ.

    ಬೆಂಗಳೂರಿನ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿ ಮಾಡಿರುವ ಕಾರಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲೇ 4 ವರ್ಷದಲ್ಲಿ ಉಳಿದಿರುವ ಶಿಕ್ಷೆಯನ್ನು ಅನುಭವಿಸಬೇಕಿದೆ. ಒಂದು ವೇಳೆ ಶಶಿಕಲಾ ಹಾಗೂ ಇಬ್ಬರು ಸಂಬಂಧಿಗಳು ಕೋರ್ಟ್‍ಗೆ ಶರಣಾಗಲು ವಿಳಂಬ ಮಾಡಿದ್ರೆ, ಹೈಕೋರ್ಟ್ ರಿಜಿಸ್ಟಾರ್ ಅವರಿಂದ ಸುಪ್ರೀಂಕೋರ್ಟ್‍ನ ಆದೇಶದ ಪ್ರತಿ ಪಡೆದು, ಸೆಷನ್ಸ್ ಕೋರ್ಟ್, ಈ ಮೂವರ ಮೇಲೂ ಅರೆಸ್ಟ್ ವಾರೆಂಟ್ ಬಳಸಿ ಬಂಧಿಸಿ ಕರೆತರುವಂತೆ ಸೂಚನೆ ನೀಡುವ ಸಾಧ್ಯತೆಗಳು ಕೂಡ ಹೆಚ್ಚಾಗಿವೆ.

    ಹಿರಿಯ ಅಧಿಕಾರಿಗಳ ಸಭೆ: ಇನ್ನು ಶಶಿಕಲಾ ನಟರಾಜನ್ ಜೈಲುಶಿಕ್ಷೆ ಅನುಭವಿಸಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಿರುವ ಕಾರಣ ತಡರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ರು. ಎಸಿಪಿ ಸೂರ್ಯ ನಾರಾಯಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ಕುರಿತು ಚರ್ಚಿಸಿದ್ರು. ಇನ್ನು ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಭದ್ರತೆಗಾಗಿ ಭಾರೀ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕಳೆದ ಬಾರಿ ಜೈಲಿನೊಳಗಡೆ ಜಯಲಲಿತಾ ಪಕ್ಕದಲ್ಲೇ ಶಶಿಕಲಾ ಕೂಡ ಇದ್ದರು. ಈಗಲೂ ಅದೇ ಸೆಲ್ ನೀಡಲು ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ಸ್ವಚ್ಚಗೊಳಿಸಲಾಗಿದೆ. ಶಶಿಕಲಾ ಅಗತ್ಯಗಳಿಗೆ ತಕ್ಕಂತೆ ಸೆಲ್ ಸಿದ್ದಗೊಳಿಸಲಾಗಿದ್ದು, ಇದ್ರಲ್ಲಿ ವಿಶೇಷವಾಗಿ ಫಾರಿನ್ ಕಮೋಡ್ ಟಾಯ್ಲೆಟ್, 24 ಗಂಟೆ ಶುದ್ಧ ಕುಡಿಯುವ ನೀರು ವ್ಯವಸ್ಥೆ, ಸ್ನಾನಕ್ಕೆ ಬಿಸಿ ನೀರು ಇರುವಂತೆ ವ್ಯವಸ್ಥೆ ಮಾಡಲಾಗಿದೆ.

  • ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಶಶಿಕಲಾ ರೆಸಾರ್ಟ್ ಬಿಟ್ಟರೂ ಶಾಸಕರ ಠಿಕಾಣಿ- ಅಧಿಕಾರಿಗಳಿಂದ ರೆಸಾರ್ಟ್‍ನ ವಿದ್ಯುತ್ ಸಂಪರ್ಕ ಕಟ್

    ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ತೀರ್ಪು ಪ್ರಕಟ ಆಗಲು ಸಮಯ ನಿಗದಿಯಾಗುತ್ತಿದ್ದ ಹಾಗೆ ಸೋಮವಾರವೇ ಶಾಸಕರ ಜೊತೆ ರೆಸಾರ್ಟ್ ಸೇರಿದ್ದ ಚಿನ್ನಮ್ಮ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ಬಂದಿದ್ದಾರೆ. ನಿನ್ನೆ ತಡರಾತ್ರಿ ಪೋಯಸ್ ಗಾರ್ಡನ್ ಮನೆಗೆ ತೆರಳುವುದಕ್ಕೆ ಮುಂಚೆ ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿರುವ ಶಶಿಕಲಾ, ಒಂದು ರೀತಿಯ ವಿದಾಯ ಭಾಷಣ ಮಾಡಿದ್ದಾರೆ.

    ನನಗೆ ಬೆಂಬಲ ಸೂಚಿಸಿದ ಎಲ್ಲಾ ಶಾಸಕರುಗಳಿಗೂ ಧನ್ಯವಾದ. ಎಐಡಿಎಂಕೆ ಪಕ್ಷ ಮಾತ್ರ ನನಗೆ ಮುಖ್ಯವಾಗಿದ್ದು, ನನ್ನನ್ನು ಪಕ್ಷದಿಂದ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಚಾರವನ್ನು ಅಲ್ಲಿನ ಜಯಾ ಟಿವಿ ಪ್ರಸಾರ ಮಾಡಿದೆ. ಇದಾದ ಬಳಿಕ ಪೋಯಸ್ ಗಾರ್ಡನ್ ಮನೆ ಮುಂದೆ ಜಮಾಯಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಚಿನ್ನಮ್ಮ, ನಾನು ಜೈಲಿಗೆ ಹೋಗುತ್ತಿದ್ದೇನೆ ಅಂತಾ ನೀವು ಅಳಬೇಡಿ ಅಂತಾ ಹೇಳಿದ್ದಾರೆ.

    ಬಳಿಕ ಜಯಲಲಿತಾ ಹಾಗೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಕೇಸ್ ಹಾಕಿದ್ದು ಡಿಎಂಕೆ ಅಂತಾ ದೂರಿದ್ದಾರೆ. ಇದರ ಮಧ್ಯೆ ಕೊವತ್ತೂರು ರೆಸಾರ್ಟ್ ಖಾಲಿ ಮಾಡುವಂತೆ ಎಐಡಿಎಂಕೆ ಪಕ್ಷದ ಶಶಿಕಲಾ ಗುಂಪಿನ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ರು. ಆದ್ರೆ ಶಾಸಕರು ಗೋಲ್ಡನ್ ಬೇ ರೆಸಾರ್ಟ್ ಖಾಲಿ ಮಾಡಲು ನಿರಾಕರಿಸಿದ್ರು, ಏನಾದ್ರು ಒತ್ತಾಯ ಮಾಡಿ ದಬ್ಬಾಳಿಕೆ ಮಾಡಿದ್ರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ರು. ಆ ಬಳಿಕ ರೆಸಾರ್ಟ್‍ಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತ ಮಾಡಲಾಗಿದೆ. ಆದ್ರೂ ಕೂಡ ಶಾಸಕರು ಅಲ್ಲೇ ಬೀಡುಬಿಟ್ಟಿದ್ದಾರೆ.

    ಜಯಾ ಸಮಾಧಿಗೆ ಪನ್ನೀರ್, ದೀಪಾ ಭೇಟಿ: ಮಂಗಳವಾರ ಬೆಳಗ್ಗೆ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಪ್ರಕಟ ಆಗ್ತಿದ್ದ ಹಾಗೆ ಜಯಲಲಿತಾ ಸೋದರ ಸಂಬಂಧಿಗಳಾದ ದೀಪಾ ಹಾಗೂ ದೀಪಕ್‍ರನ್ನು ಕರೆದು ಚಿನ್ನಮ್ಮ ಶಶಿಕಲಾ ಮಾತನಾಡಿದ್ರು. ಇದಾದ ಬಳಿಕ ಸಂಜೆ ದೀಪಾ, ಪನ್ನೀರ್ ಸೆಲ್ವಂ ಬಳಗ ಸೇರಿದ್ದು, ರಾತ್ರಿ ಜಯಾ ಸಮಾಧಿಗೆ ಪನ್ನೀರ್ ಸೆಲ್ವಂ ಹಾಗೂ ಈಗಾಗಲೇ ಪಕ್ಷದಿಂದ ವಜಾಗೊಂಡಿರುವ ಶಾಸಕರು ಹಾಗೂ ಸಂಸದರ ಜೊತೆ ಭೇಟಿ ನೀಡಿದ್ರು. ಇಂದಿನಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಅಂತಾ ದೀಪಾ ಸಮಾಧಿ ಬಳಿಯೇ ಘೋಷಣೆ ಮಾಡಿದ್ರು. ಈ ಮೂಲಕ ಪನ್ನೀರ್ ಸೆಲ್ವಂ ಬಣದ ಬಲ ನಿಧಾನವಾಗಿ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ಎಐಎಡಿಎಂ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯಪಾಲ ಸಿ ವಿದ್ಯಾಸಾಗರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಮನವಿ ಮಾಡಿದ್ರು. ಈ ವೇಳೆ ಹಲವು ಸಚಿವರು ಪಳನಿಸ್ವಾಮಿಗೆ ಸಾಥ್ ನೀಡಿದ್ರು.

  • ರಜನಿಕಾಂತ್ ಬಿಜೆಪಿಗೆ ಸೇರುತ್ತಾರಾ? ಹೊಸ ಪಕ್ಷ ಕಟ್ಟುತ್ತಾರಾ?

    ಚೆನ್ನೈ: ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವಿನ ರಾಜಕೀಯ ಗುದ್ದಾಟವನ್ನು ಬಿಜೆಪಿ ಎನ್‍ಕ್ಯಾಶ್ ಮಾಡಿಕೊಳ್ಳಲು ಮುಂದಾದಂತೆ ಕಾಣುತ್ತಿದ್ದು, ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಗಾಳ ಹಾಕಿದೆ.

    ಪಕ್ಷಕ್ಕೆ ಸೇರ್ಪಡೆಯಾದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನಿಮ್ಮನ್ನು ಬಿಂಬಿಸುತ್ತೇವೆ ಎಂದು ಬಿಜೆಪಿ ನಾಯಕರು ರಜನಿಕಾಂತ್ ಅವರಲ್ಲಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

    ಆರ್‍ಎಸ್‍ಎಸ್ ಒಲವುಳ್ಳ, ಸ್ವದೇಶಿ ಜಾಗರಣ್ ಮಂಚ್ ಸಹ ಸಂಚಾಲಕ ಗುರುಮೂರ್ತಿ ರಜನಿಕಾಂತ್ ಅವರನ್ನು ಭೇಟಿ ಮಾಡಿ ಹೊಸ ಪಕ್ಷವನ್ನು ಕಟ್ಟುವಂತೆ ಸಲಹೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಕೂಡಾ ರಜನಿಕಾಂತ್ ರಾಜಕೀಯಕ್ಕೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ.

    ಈ ನಡುವೆ ರಜನಿಕಾಂತ್ ರಾಜಕೀಯ ಎಂಟ್ರಿಗೆ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜಿನಿಕಾಂತ್ ರಾಜಕೀಯಕ್ಕೆ ಬರೋದು ಬೇಡ ಅಂತ ಸಲಹೆ ನೀಡಿದ್ದಾರೆ.

    ರಜನಿಕಾಂತ್ ಸಹೋದರ ಸತ್ಯನಾರಾಯಣ ರಾವ್ ಪ್ರತಿಕ್ರಿಯಿಸಿ, ರಜನಿ ರಾಜಕೀಯಕ್ಕೆ ಬರಲು ಈಗ ಕಾಲ ಕೂಡಿಬಂದಿದೆ. ತಮಿಳುನಾಡು ರಾಜಕೀಯದಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಅವರು ನೋಡಲಿದ್ದಾರೆ ಎಂದು ಹೇಳಿದ್ದಾರೆ.

    ಒಂದ್ವೇಳೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿಯಾದ್ರೆ ತಮಿಳುನಾಡಲ್ಲಿ ಸರ್ಕಾರ ಛಿದ್ರವಾಗಿ ರಾಷ್ಟ್ರಪತಿ ಆಡಳಿತ ಬಂದ್ರೂ ಅಚ್ಚರಿಯಿಲ್ಲ ಎನ್ನಲಾಗಿದೆ.

    ಶುಕ್ರವಾರ ಸಂಜೆ ಗುರುಮೂರ್ತಿ,ನಾನು ಕೇಳಿದ್ದಕ್ಕೆ ರಜನಿಕಾಂತ್ ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಸುಳ್ಳು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ರಾಜ್ಯಪಾಲರ ಜೊತೆ ಸೆಲ್ವಂ, ಶಶಿಕಲಾ ಚರ್ಚೆ- ಕೇಂದ್ರಕ್ಕೆ ವರದಿ ರವಾನಿಸಿದ ವಿದ್ಯಾಸಾಗರ್ ರಾವ್

    ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕಟ್ಟು ಒಂದು ರೀತಿಯಲ್ಲಿ ರೋಚಕ ಘಟ್ಟ ತಲುಪಿದೆ. ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಹಾಗೂ ಹೊಸ ಸರ್ಕಾರ ರಚನೆಗೆ ಅವಕಾಶ ಕೇಳ್ತಿರೋ ಶಶಿಕಲಾ ನಟರಾಜನ್ ಗುರುವಾರದಂದು ಚೆನ್ನೈನಲ್ಲಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನ ಭೇಟಿಯಾಗಿದ್ರು. ಇಬ್ಬರ ಭೇಟಿ ಬಳಿಕ ತಮಿಳುನಾಡಿನ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ರಾಜ್ಯಪಾಲರು ವರದಿ ರವಾನಿಸಿದ್ದಾರೆ.

    ಜೊತೆಗೆ ಸಾಂವಿಧಾನಿಕ ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದಾರೆ. ಶಶಿಕಲಾ ವಿರುದ್ಧ ಅಕ್ರಮ ಆಸ್ತಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ರೆ ಮತ್ತಷ್ಟು ಬಿಕ್ಕಟ್ಟು ಉಂಟಾಗಬಹುದು ಅಂತ ತಜ್ಞರು ಹೇಳಿದ್ದಾರೆ. ಹೀಗಾಗಿ ತಕ್ಷಣ ಸರ್ಕಾರ ರಚನೆಗೆ ಅವಕಾಶ ನೀಡದೇ ಕಾದು ನೋಡುವ ತಂತ್ರಕ್ಕೆ ಮೊರೆಹೋಗೋ ಸಾಧ್ಯತೆಯಿದೆ. ತೀರ್ಪು ಶಶಿಕಲಾ ವಿರುದ್ಧ ಬಂದ್ರೆ ಕೇಂದ್ರ ಸರ್ಕಾರನೂ ಪನ್ನೀರ್ ಸೆಲ್ವಂ ಪರ ನಿಲ್ಲುತ್ತೆ ಅಂತ ಮೂಲಗಳು ತಿಳಿಸಿವೆ.

    ಗುರುವಾರದಂದು ರಾಜ್ಯಪಾಲರನ್ನು ಭೇಟಿಯಾಗಿದ್ದ ಸೆಲ್ವಂ, ರಾಜೀನಾಮೆ ಹಿಂಪಡೀತಿನಿ. ಬಹುಮತ ಸಾಬೀತಿಗೆ ಅವಕಾಶ ಕೊಡಿ ಅಂತ ಕೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಧರ್ಮ ಗೆಲ್ಲುತ್ತೆ ಅಂತ ಮಾಧ್ಯಮಗಳ ಮುಂದೆನೂ ಹೇಳಿದ್ದಾರೆ. ಇನ್ನು ಶಶಿಕಲಾ ತನಗೆ 130 ಶಾಸಕರ ಬೆಂಬಲ ಇದೆ ಅಂತ ಸಹಿ ಇರೋ ಪತ್ರವನ್ನ ರಾಜ್ಯಪಾಲರಿಗೆ ನೀಡಿದ್ದಾರೆ. ಈ ಮಧ್ಯೆ, ಶಶಿಕಲಾ ಪರ ರೆಸಾರ್ಟ್ ಸೇರಿರೋ ಶಾಸಕರಲ್ಲಿ ಸುಮಾರು 30ರಷ್ಟು ಮಂದಿ ಸೆಲ್ವಂ ಪರವಾಗಿದ್ದಾರೆ ಅಂತ ತಿಳಿದುಬಂದಿದೆ.

  • ಇಂದು ಚೆನ್ನೈಗೆ ರಾಜ್ಯಪಾಲ: ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್‍ಗೆ ಸೆಲ್ವಂ ಪತ್ರ

    ಚೆನ್ನೈ: ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಇವತ್ತು ಸ್ವಲ್ಪ ಶಾಂತವಾಗೋ ಸಾಧ್ಯತೆಯಿದೆ. ರಾಜ್ಯದಲ್ಲಿ ಅಸ್ಥಿರತೆ ಉಂಟಾಗಿದ್ರೂ ಮುಂಬೈನಲ್ಲಿದ್ದ ತಮಿಳುನಾಡಿನ ಹೆಚ್ಚುವರಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇಂದು ಚೆನ್ನೈಗೆ ಆಗಮಿಸಲಿದ್ದಾರೆ.

    ಶಶಿಕಲಾ ಹಾಗೂ ಬೆಂಬಲಿಗ ಶಾಸಕರು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ. ರಾಜ್ಯಪಾಲರು ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡೋ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳಕ್ಕೆ ಹೋಗಿರೋ ಎಐಎಡಿಎಂಕೆಯ 130 ಶಾಸಕರು ರಾಷ್ಟ್ರಪತಿ ಮುಂದೆ ನಡೆಸಲು ಉದ್ದೇಶಿಸಿದ್ದ ಪರೇಡ್‍ನ್ನ ಕೈಬಿಟ್ಟಿದ್ದಾರೆ.

    ಇದಕ್ಕೂ ಮುನ್ನ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಪ್ರಮಾಣ ವಚನ ಕಾರ್ಯಕ್ರಮವನ್ನ ಮುಂದೂಡ್ತಿದ್ದಾರೆ ಅಂತ ಶಶಿಕಲಾ ಆರೋಪಿಸಿದ್ರು. ಪಕ್ಷದ ಖಜಾಂಚಿ ಹುದ್ದೆಯಿಂದ ವಜಾಗೊಂಡಿರೋ ಪನ್ನೀರ್ ಸೆಲ್ವಂ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್‍ಗೆ ಪತ್ರ ಬರೆದಿದ್ದು, ಚಾಲ್ತಿ ಖಾತೆಯಲ್ಲಿರೋ ಪಕ್ಷದ ನಿಧಿಯನ್ನು ಹಿಡಿದಿಟ್ಟುಕೊಳ್ಳಬೇಕು. ನನ್ನ ಲಿಖಿತ ಅನುಮತಿ ಇಲ್ಲದೆ ಬೇರೆಯವ್ರಿಗೆ ಪಾರ್ಟಿ ಫಂಡ್ ಅನ್ನು ಆಪರೇಟ್ ಮಾಡೋಕೆ ಅವಕಾಶ ನೀಡಬಾರದು ಅಂತ ಮನವಿ ಮಾಡಿದ್ದಾರೆ.

  • ಅಜ್ಞಾತ ಸ್ಥಳದತ್ತ ಶಶಿಕಲಾ ಬೆಂಬಲಿಗರು: ನಿನ್ನೆ ರಾತ್ರಿಯಿಂದ ಇಲ್ಲಿಯವರೆಗಿನ ಟೈಂ ಲೈನ್ ಇಲ್ಲಿದೆ

    ಚೆನ್ನೈ: ತಮಿಳುನಾಡಲ್ಲಿ ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕ್ಷಿಪ್ರ ರಾಜಕೀಯ ಕ್ರಾಂತಿ ಆಗ್ತಿದೆ. ಮಂಗಳವಾರ ರಾತ್ರಿ ಜಯಯಲಿತಾ ಸಮಾಧಿ ಮುಂದೆ ಪನ್ನೀರ್ ಸೆಲ್ವಂ ಧ್ಯಾನಕ್ಕೆ ಇಳಿದು ನಂತರ ನೀಡಿದ ಹೇಳಿಕೆ ಬಳಿಕ ರಾಜಕೀಯದ ಚದುರಂಗದಾಟ ಶುರುವಾಗಿದೆ.

    ನಾನು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ. ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತೇನೆ. ಜನ ಬಯಸಿದ್ದರೆ ಮತ್ತೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ. ಶಶಿಕಲಾರನ್ನ ಸಿಎಂ ಆಗೋಕೆ ಬಿಡಲ್ಲ ಅಂತಾ ಪನ್ನೀರ್ ಸೆಲ್ವಂ ರಣಕಹಳೆ ಊದಿದ್ದಾರೆ. ರಾಜ್ಯಪಾಲರ ಭೇಟಿಗೂ ಸಮಯ ಕೇಳಿದ್ದಾರೆ.

    ಆದರೆ ಯಾವುದೇ ಕಾರಣಕ್ಕೂ ಕುರ್ಚಿ ಬಿಡಲು ಶಶಿಕಲಾ ನಟರಾಜನ್ ಕೂಡಾ ರೆಡಿಯಿಲ್ಲ. ಶಶಿಕಲಾ ಶಾಸಕಾಂಗ ಪಕ್ಷದ ಸಭೆ ಕೂಡಾ ನಡೆಸಿದ್ದಾರೆ. ನಾನು ಕದ್ದುಮುಚ್ಚಿ ಶಾಸಕಾಂಗ ಸಭೆ ನಡೆಸಿಲ್ಲ. ಪನ್ನೀರ್ ಸೆಲ್ವಂ ಒಬ್ಬ ನಯವಂಚಕ. ಜಯಲಲಿತಾ ವಿರೋಧಿಗಳ ಜೊತೆಯೇ ಸೇರಿಕೊಂಡಿದ್ದಾರೆ ಅಂತಾ ಆರೋಪಿಸಿದ್ರು. ಪಕ್ಷದ ಒಗ್ಗಟ್ಟು ಒಡೆಯಲು ಯಾರಿಗೂ ಸಾಧ್ಯವಿಲ್ಲ. ಅಮ್ಮನನ್ನು ಪ್ರೀತಿಸುವವರೆಲ್ಲರೂ ನನಗೆ ಬೆಂಬಲಿಸುತ್ತೀರಿ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಈಗಾಗಲೇ 134 ಶಾಸಕರಲ್ಲಿ 131 ಮಂದಿ ಶಾಸಕರನ್ನು ಒಟ್ಟುಮಾಡಿಕೊಂಡಿರುವ ಶಶಿಕಲಾ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾಳೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಅಲ್ಲದೇ ಪ್ರಮಾಣ ವಚನಕ್ಕೆ ಬಾರದ ರಾಜ್ಯಪಾಲರ ವಿರುದ್ಧವೂ ದೂರು ನೀಡಲಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್ ಇನ್ನೂ ಚೆನ್ನೈಗೆ ಬಂದಿಲ್ಲ. ರಾಜ್ಯಪಾಲರು ಎಲ್ಲಿಯವರೆಗೆ ವಿಳಂಬ ಮಾಡುತ್ತಾರೋ ಅಲ್ಲಿಯವರೆಗೆ ಪನ್ನೀರ್ ಸೆಲ್ವಂಗೆ ಶಶಿಕಲಾ ವಿರುದ್ಧ ರಣತಂತ್ರ ಹೆಣೆಯಲು ಅವಕಾಶವಿದೆ.

    ನಿನ್ನೆ ರಾತ್ರಿಯಿಂದ ಏನಾಯ್ತು?
    * ರಾತ್ರಿ 9.09 – ಚೆನ್ನೈನ ಮರೀನಾ ಬೀಚ್‍ನ ಜಯಾ ಸಮಾಧಿಗೆ ಸೆಲ್ವಂ ಭೇಟಿ
    * ರಾತ್ರಿ 9.10 – ಜಯಾ ಸಮಾಧಿ ಮುಂದೆ ಸೆಲ್ವಂ ಧ್ಯಾನ ಆರಂಭ (ಧ್ಯಾನದ ಮಧ್ಯೆ ಕಣ್ಣೀರು ಹಾಕಿದ ಓಪಿಎಸ್)
    * ರಾತ್ರಿ 9.45 – ಸಮಾಧಿ ಮುಂದೆ ಧ್ಯಾನ ಅಂತ್ಯ
    * ರಾತ್ರಿ 9.54 – ಮಾಧ್ಯಮಗಳಿಗೆ ಸೆಲ್ವಂ ಪ್ರತಿಕ್ರಿಯೆ

    * ರಾತ್ರಿ 9.57 – ಶಶಿಕಲಾ ವಿರುದ್ಧ ಬಂಡಾಯದ ಕಹಳೆ
    * ರಾತ್ರಿ 10 ಗಂಟೆ – ಜಯಾ ಸ್ಮಾರಕದ ಬಳಿ ಪನ್ನೀರ್ ಸೆಲ್ವಂಗೆ ಜನಬೆಂಬಲ
    * ರಾತ್ರಿ 10.30 – ನಿವಾಸಕ್ಕೆ ಮರಳಿದ ಪನ್ನೀರ್ ಸೆಲ್ವಂ
    * ರಾತ್ರಿ 10.45 – ಸೆಲ್ವಂ ನಿವಾಸದ ಮುಂದೆ ಜನಸ್ತೋಮ

    * ರಾತ್ರಿ 10.45 – ಅತ್ತ ಪೋಯಸ್ ಗಾರ್ಡನ್ ಮುಂದೆ ಶಶಿಕಲಾ ಅಭಿಮಾನಿಗಳ ಜಮಾವಣೆ
    * ರಾತ್ರಿ 11 – ಎಐಎಡಿಎಂಕೆ ಶಾಸಕರು, ಸಚಿವರಿಗೆ ಶಶಿಕಲಾ ತುರ್ತು ಬುಲಾವ್
    * ಮಧ್ಯರಾತ್ರಿ 11.30 – ಶಶಿಕಲಾ ಮನೆಯಲ್ಲಿ 20 ಸಚಿವರು 80 ಶಾಸಕರು ಹಾಜರು
    * ಮಧ್ಯರಾತ್ರಿ 12 – ಪೋಯಸ್ ಗಾರ್ಡನ್ ನಿವಾಸದಲ್ಲಿ ಅಣ್ಣಾಡಿಎಂಕೆ ಪಕ್ಷದ ಸಭೆ
    * ಮಧ್ಯರಾತ್ರಿ 12.45 – ಪಕ್ಷದ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

    * ಮಧ್ಯರಾತ್ರಿ 1 ಗಂಟೆ – ಶಶಿಕಲಾ ನಾಯಕತ್ವದಲ್ಲಿ ಪಕ್ಷ ಅಧಿಕಾರ ನಡೆಸುತ್ತೆ – ಎಐಎಡಿಎಂಕೆ
    * ಮಧ್ಯರಾತ್ರಿ 1.13 – ಪೋಯಸ್ ಗಾರ್ಡನ್ ನಿವಾಸದಿಂದ ಹೊರಬಂದ ಶಶಿಕಲಾ
    * ಮಧ್ಯರಾತ್ರಿ 1.16 – ನಾವೆಲ್ಲಾ ಒಂದೇ ಕುಟುಂಬ. ಎಲ್ಲಾ 134 ಶಾಸಕರು ಒಗ್ಗಟ್ಟಾಗಿದ್ದೇವೆ – ಶಶಿಕಲಾ
    * ಮಧ್ಯರಾತ್ರಿ 1.17 – ಇದರ ಹಿಂದೆ ಡಿಎಂಕೆ ಕೈವಾಡ ಇದೆ. ಸೆಲ್ವಂರನ್ನ ಪಕ್ಷದಿಂದ ಉಚ್ಚಾಟಿಸ್ತೇವೆ -ಶಶಿಕಲಾ
    * ಮಧ್ಯರಾತ್ರಿ 1.20 – ಶಶಿಕಲಾ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಬೇಕು – ತಂಬಿದೊರೈ
    * ಮಧ್ಯರಾತ್ರಿ 1.40 – ನಾನು ಪಕ್ಷದ ನಿಷ್ಠಾವಂತ. ನನ್ನನ್ನ ಯಾರೂ ಹೊರಹಾಕೋಕೆ ಆಗಲ್ಲ – ಸೆಲ್ವಂ

    * ಬೆಳಗ್ಗೆ 9.08 – ಡಿಎಂಕೆಗೂ ಇದಕ್ಕೂ ಸಂಬಂಧವಿಲ್ಲ – ಡಿಎಂಕೆಯ ಟಿಕೆಎಸ್ ಇಳಂಗೋವನ್ ಹೇಳಿಕೆ
    * ಬೆಳಗ್ಗೆ 9.17 – ತಮಿಳುನಾಡು ರಾಜಕೀಯ ಅಸ್ಥಿರತೆಗೆ ಕೇಂದ್ರ ಕಾರಣ – ಕಾಂಗ್ರೆಸ್ ಆರೋಪ
    * ಬೆಳಗ್ಗೆ 9.27 – ಅಮ್ಮಾ ಭೇಟಿ ಮಾಡಲು ಶಶಿಕಲಾ ಅವಕಾಶ ಕೊಡಲಿಲ್ಲ – ಸೆಲ್ವಂ ಆರೋಪ
    * ಬೆಳಗ್ಗೆ 10.15 – ಶಶಿಕಲಾ ಪರ ಸುಬ್ರಮಣಿಯನ್ ಸ್ವಾಮಿ ಬ್ಯಾಟಿಂಗ್
    * ಬೆಳಗ್ಗೆ 10.16 – ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ರಾಜ್ಯಪಾಲರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ವೆಂಕಯ್ಯ ನಾಯ್ಡು

    * ಬೆಳಗ್ಗೆ 10.36 – ಸೆಲ್ವಂಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ ರಾಜ್ಯಸಭಾ ಸದಸ್ಯ ಮೈತ್ರೆಯನ್
    * ಬೆಳಗ್ಗೆ 10.47 – ಪನ್ನೀರ್ ಸೆಲ್ವಂ – ಪಾಂಡಿಯನ್ ಸುದ್ದಿಗೋಷ್ಠಿ – ವಿಧಾನಸಭೆಯಲ್ಲಿ ನನ್ನ ಬಲ ಏನೆಂದು ತೋರಿಸುವೆ. ಜಯಾ ಸಾವಿನ ಬಗ್ಗೆ ತನಿಖೆಗೆ ಆದೇಶ
    * ಬೆಳಗ್ಗೆ 11.37 – ಅಣ್ಣಾಡಿಎಂಕೆ ಕಚೇರಿಯಲ್ಲಿ ಶಶಿಕಲಾ ನೇತೃತ್ವದಲ್ಲಿ ಶಾಸಕರ ಸಭೆ. 130 ಶಾಸಕರು ಹಾಜರು
    * ಬೆಳಗ್ಗೆ 11.44 – ಇವತ್ತು ಮುಂಬೈನಲ್ಲೇ ಉಳಿಯಲು ರಾಜ್ಯಪಾಲ ವಿದ್ಯಾಸಾಗರ್ ರಾವ್ ನಿರ್ಧಾರ

    * ಮಧ್ಯಾಹ್ನ 12.10 – ಶಶಿಕಲಾಗೆ ಚುನಾವಣಾ ಆಯೋಗಕ್ಕೆ ಶಾಕ್. ಜನೆರಲ್ ಸೆಕ್ರೆಟರಿಯಾಗಿ ಆಯ್ಕೆಯಾದ ಬಗ್ಗೆ ವಿವರ ಕೋರಿ ನೋಟೀಸ್
    * ಮಧ್ಯಾಹ್ನ 1.10 – ಶಾಸಕರ ಸಭೆ ಬಳಿಕ ಶಶಿಕಲಾ ಸುದ್ದಿಗೋಷ್ಠಿ. ಪನ್ನೀರ್ ಸೆಲ್ವಂ ಒಬ್ಬ ವಂಚಕ. ಡಿಎಂಕೆ ಜೊತೆ ಸೇರಿದ್ದಾರೆ ಎಂದು ವಾಗ್ದಾಳಿ
    * ಮಧ್ಯಾಹ್ನ 1.37 – ಶಶಿಕಲಾ ಆರೋಪ ತಳ್ಳಿಹಾಕಿದ ಎಂ ಕೆ ಸ್ಟಾಲಿನ್
    * ಮಧ್ಯಾಹ್ನ 2.15 – ರಾಷ್ಟ್ರಪತಿಗಳ ಮುಂದೆ ಬಲಪ್ರದರ್ಶನ ಮಾಡಲು ಶಶಿಕಲಾ ಅಂಡ್ ಟೀಂ ಚಿಂತನೆ
    * ಮಧ್ಯಾಹ್ನ 3.20 – 130 ಶಾಸಕರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಶಶಿಕಲಾ