Tag: Tamilanadu

  • ನಾನು ಮೊದಲು ಕನ್ನಡಿಗ, ಅಮೇಲೆ ಭಾರತೀಯ: ಸಿ.ಟಿ.ರವಿಗೆ ಹೆಚ್‍ಡಿಕೆ ಟಾಂಗ್

    ನಾನು ಮೊದಲು ಕನ್ನಡಿಗ, ಅಮೇಲೆ ಭಾರತೀಯ: ಸಿ.ಟಿ.ರವಿಗೆ ಹೆಚ್‍ಡಿಕೆ ಟಾಂಗ್

    – ನಾವೇನು ಪಾಕಿಸ್ತಾನದವರಾ? ಚೀನಾದವರಾ?

    ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಬಿಜೆಪಿಯದ್ದು ದ್ವಿಮುಖ ನೀತಿ ಅಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವೇನು ಪಾಕಿಸ್ತಾನದವರಾ? ಚೀನಾದವರಾ? ಅಮೆರಿಕಾದವರಾ? ನಾವು ಭಾರತೀಯರೇ. ಬಿಜೆಪಿಯವರಿಗೆ ಮಾತ್ರ ಭಾರತೀಯರು ಅನ್ನೋ ಗುತ್ತಿಗೆ ಕೊಟ್ಟಿಲ್ಲ. ನಾವು ಹುಟ್ಟಿರೋದು ಈ ಮಣ್ಣಿನಲ್ಲಿ ಅಂತ ಕಿಡಿಕಾರಿದರು.

    ನಾನು ಭಾರತೀಯ ಅನ್ನೋದಕ್ಕಿಂತ ಮುಂಚೆ ನಾನು ಮೊದಲು ಕನ್ನಡಿಗ. ಕನ್ನಡಿಗನಾಗಿ ಕರ್ನಾಟಕಕ್ಕೆ ಆಗಿರೋ ಅನ್ಯಾಯದ ವಿರುದ್ಧ ಧ್ವನಿ ಎತ್ತೋದು ನನ್ನ ಕರ್ತವ್ಯ. ಅದನ್ನ ನಾನು ಮೇಕೆದಾಟು ವಿಚಾರದಲ್ಲಿ ಎತ್ತಿದ್ದೇನೆ ಅಂತ ಸಿ.ಟಿ.ರವಿಗೆ ತಿರುಗೇಟು ಕೊಟ್ಟರು.

    ಸಿ.ಟಿ.ರವಿ ಅವರು ಭಾರತೀಯರು ಇರಬಹುದು. ಮೊದಲು ಕರ್ನಾಟಕ, ನನ್ನ ತಾಯಿ ನನಗೆ ಮೊದಲು ಮುಖ್ಯ. ನನ್ನ ತಾಯಿ ಕಾಪಾಡಬೇಕಾದದ್ದು ನನ್ನ ಕರ್ತವ್ಯ. ಅವರು ಭಾರತೀಯರ ರೋಲ್ ಮಾಡೋದು ಬೇರೆ. ನನ್ನ ತಾಯಿ ಉಳಿದುಕೊಂಡ್ರೆ ತಾನೇ ಭಾರತೀಯರ ತಾಯಿ ಉಳಿಸಿಕೊಳ್ಳೋದು. ಸಿ.ಟಿ.ರವಿ ಇದನ್ನ ಅರ್ಥ ಮಾಡಿಕೊಳ್ಳಲಿ ಅಂತ ಕುಮಾರಸ್ವಾಮಿ ಕೆಂಡಾಮಂಡಲವಾದ್ರು. ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ‘ಮಿಷನ್ 123’: ಕುಮಾರಸ್ವಾಮಿ

    ಮೇಕೆದಾಟು ವಿಚಾರದಲ್ಲಿ ಬಿಜೆಪಿಯದ್ದು ಇಬ್ಭಾಗ ನೀತಿ ಮಾಡುತ್ತಿದ್ದು, ಇದರಲ್ಲಿ ಸಂಶಯವೇ ಇಲ್ಲ. ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದ ನಡವಳಿಕೆ ನೋಡಿದ್ದೇವೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿರೋದು ನೋಡಿದ್ದೇನೆ. ಹಾಸನದಲ್ಲಿ ಒಬ್ಬರು ನಮ್ಮ ಬಗ್ಗೆ ಮಾತಾಡಿದ್ದಾರೆ. ಅವರ ಪಕ್ಷ ಉಳಿಸಿಕೊಳ್ಳಲು ನಮ್ಮ ಪಕ್ಷವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಬಹಳ ದಿನ ನಡೆಯೋದಿಲ್ಲ ಅಂತ ಬಿಜೆಪಿ ವಿರುದ್ದ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಇಂದಿರಾ ಗಾಂಧಿ ಅವರ ಕುರಿತು ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್‍ಗೆ ಕೋಪ ಬಂದಿದೆ: ಸಿ.ಟಿ.ರವಿ

  • ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

    ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಬೇಕಾಗಿರುವ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನಗಳನ್ನು ನೀಡಲಿದೆ. ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಬಾರಿ ನವದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಎಲ್ಲ ಸದಸ್ಯರು ಸಭೆ ಸೇರಲಿದ್ದಾರೆ.

    ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೈನ್ ಅಧ್ಯಕ್ಷತೆಯಲ್ಲಿ ಆರಂಭವಾಗೋ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸ್ತಾರೆ. ಕರ್ನಾಟಕದ ಪರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

    ಶನಿವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಾಧಿಕಾರ ರಚನೆ ಸ್ವರೂಪ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಲು ನಿರ್ಧರಿಸಲಾಗಿತ್ತು. ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆಯಿಂದಾಗಿ ಬಹುತೇಕ ಡ್ಯಾಂ ಗಳು ಭರ್ತಿ ಹಂತಕ್ಕೆ ಬಂದಿವೆ. ಈ ಸಂಬಂಧ ಚರ್ಚೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ಬಳಿಕ ಬಿಡಬೇಕಾದ ನೀರಿನ ಪ್ರಮಾಣ ಕುರಿತು ಚರ್ಚೆ ನಡೆಯಲಿದೆ.

    ಪ್ರಾಧಿಕಾರದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗಬಹುದು..?
    1. ಜುಲೈನಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿರುವ ನೀರಿನ ಪ್ರಮಾಣದ ಬಗ್ಗೆ ನಿಯಂತ್ರಣ ಸಮಿತಿಗೆ ನಿರ್ದೇಶನ.
    2. ಪ್ರತಿ 10 ದಿನಕ್ಕೊಮ್ಮೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಬಿಡಬೇಕಿರುವ ನೀರಿನ ಪ್ರಮಾಣದ ಬಗ್ಗೆ ಮಾರ್ಗಸೂಚಿ.
    3. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಯಬೇಕಿರುವ ನೀರು 34 ಟಿಎಂಸಿ.
    4. ಕಾವೇರಿಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣದ ಮಾಹಿತಿ ಪ್ರಸ್ತಾಪ.
    5. ನಾಲ್ಕು ರಾಜ್ಯಗಳಲ್ಲಿ ಜೂನ್ 1ರಿಂದ ಜೂನ್ 30ರವರೆಗಿನ ಮಳೆಯ ಪ್ರಮಾಣದ ಬಗ್ಗೆ ಅಂಕಿ ಅಂಶ.
    6. ಒಳಹರಿವು, ಹೊರಹರಿವು, ಡ್ಯಾಂಗಳಲ್ಲಿ ಸಂಗ್ರಹ, ಮಳೆ ಪ್ರಮಾಣ, ಬೇಸಾಯ ಪ್ರದೇಶ.
    7. ಗೃಹ ಬಳಕೆ ಮತ್ತು ಕೈಗಾರಿಕೆ ಬಳಕೆಗೆ ಬೇಕಾಗಿರುವ ನೀರಿನ ಪ್ರಮಾಣದ ಮಾಹಿತಿ ಸಂಗ್ರಹದ ಸ್ವರೂಪದ ಬಗ್ಗೆ ನಿರ್ಧಾರ.
    8. ಡ್ಯಾಂಗಳಿಂದ ನಾಲೆಗಳಿಗೆ ಇನ್ನೂ ನೀರು ಬಿಟ್ಟಿಲ್ಲ, ಎಷ್ಟು ನೀರು ಬಿಡಬೇಕೆಂಬ ಬಗ್ಗೆ ಚರ್ಚೆ.
    9. ಕರ್ನಾಟಕ ಹೆಚ್ಚುವರಿ ನೀರನ್ನಷ್ಟೇ ಬಿಟ್ಟಿದೆ, ತನಗೆ ಬರಬೇಕಿದ್ದ ಪಾಲನ್ನು ಬಿಟ್ಟಿಲ್ಲ.
    10. ಹೀಗಾಗಿ ತಕ್ಷಣವೇ ತನ್ನ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದ ಸಾಧ್ಯತೆ.
    11. ಪ್ರಾಧಿಕಾರ ರಚನೆಯಲ್ಲಾದ ಲೋಪದ ಬಗ್ಗೆ ಕರ್ನಾಟಕದಿಂದ ವಾದ ಸಾಧ್ಯತೆ.