Tag: taluku hospital

  • ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಚಿತ್ರದುರ್ಗ: ರೋಗಿಗೆ ಔಷಧಿ ನೀಡುವಾಗ ಒಂದು ಡೋಸ್ ಹೆಚ್ಚು ಅಥವಾ ಕಡಿಮೆ ಆದರೂ ರೋಗಿಯ ಜೀವವೇ ಹೋಗಿರೋ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಡಿ ದರ್ಜೆ ಮಹಿಳಾ ನೌಕರರು ಫಾರ್ಮಾಸಿಸ್ಟ್ ಗಳಂತೆ ಔಷಧಿ ವಿತರಿಸುವ ಮೂಲಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ.

    ಮೊನ್ನೆ ಮೊನ್ನೆಯಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯಕ್ಕಾಗಿ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ವಿವಾದಕ್ಕೆ ತುತ್ತಾಗಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ರಾಮುಲು ಹೈಟೆಕ್ ವಾಸ್ತವ್ಯವನ್ನು ರದ್ದು ಮಾಡಿದ್ದರು. ಇದೀಗ ಇದೆ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಆಸ್ಪತ್ರೆ ಹೆಚ್ಚು ಕಡಿಮೆ 1000 ಹಾಸಿಗೆಗಳು ಇರುವ ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿ ನಿತ್ಯ ಸಾವಿರಾರು ಬಡ ರೋಗಿಗಳು ಟ್ರೀಟ್‍ಮೆಂಟ್‍ಗೆಂದು ಬರುತ್ತಿದ್ದು, 11 ಮಂದಿ ತಜ್ಞ ವೈದ್ಯರು ಕೂಡ ಇದ್ದಾರೆ. ಉತ್ತಮವಾಗಿ ಟ್ರೀಟ್‍ಮೆಂಟ್ ಕೂಡ ಕೊಡುತ್ತಿದ್ದಾರೆ. ಆದರೆ ಇಲ್ಲಿನ ಔಷಧಿ ವಿತರಣೆ ಕೇಂದ್ರದಲ್ಲಿ ಫಾರ್ಮಸಿಸ್ಟ್ ಇಲ್ಲ. ಇಲ್ಲಿ ರೋಗಿಗಳಿಂದ ಸ್ಲಿಪ್ ಪಡೆದು ಮಾತ್ರೆ ಟಾನಿಕ್ ಕೊಡೋದು ಡಾ.ಕಸ ಗುಡಿಸಮ್ಮ. ಆಶ್ಚರ್ಯ ಅನ್ನಿಸದ್ರೂ ಇದು ಸತ್ಯ. ಡಿ ದರ್ಜೆಯ ನೌಕರರಾಗಿರೋ ಮಹಿಳೆ ಇಲ್ಲಿ ಔಷಧಿ ವಿತರಣೆ ಮಾಡುತ್ತಿದ್ದಾರೆ. ಇದನ್ನು ನೋಡಿ ಬಡ ರೋಗಿಗಳು ಔಷಧಿ ತಗೋಬೇಕೋ ಬೇಡ್ವೋ..? ಏನಾಗುತ್ತೋ ಏನೋ..? ಎಂಬ ಭಯ ಆತಂಕದಲ್ಲಿ ಮುಂದೆ ಸಾಗುತ್ತಾರೆ. ಈ ವಿಚಾರವನ್ನು ಆರೋಗ್ಯ ಸಚಿವರು ಗಮನಿಸಿ ತುರ್ತಾಗಿ ಫಾರ್ಮಸಿಸ್ಟ್ ನೇಮಕ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಆದರೆ ಮಾತ್ರೆ ವಿತರಣೆಗೆ ಕೂತಿರೋ ಮಹಿಳೆಯದ್ದು ಏನೂ ತಪ್ಪಿಲ್ಲ. ಯಾಕಂದರೆ ಈಕೆಯನ್ನು ವೈದ್ಯಾಧಿಕಾರಿಗಳೇ ಇಲ್ಲಿ ಕೂರಿಸಿ ಔಷಧಿ ವಿತರಿಸಮ್ಮ ಅಂತ ಹೇಳಿದ್ದಾರೆ. ಆದರೆ ತಪ್ಪು ಮಾಡಿದೆ ಎಂದು ವೈದ್ಯಾಧಿಕಾರಿ ಬಸವರಾಜ್ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ. ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿ ಜಾರಿಕೊಳ್ಳುತ್ತಾರೆ.

  • ಹುಟ್ಟಿದ ಮಗು ನೋಡೋಕೆ ಕೊಡ್ಬೇಕು 2 ಸಾವಿರ ಲಂಚ- ದಾವಣಗೆರೆಯಲ್ಲಿದ್ದಾರೆ ಧನದಾಹಿ ಡಾಕ್ಟರ್ಸ್

    ಹುಟ್ಟಿದ ಮಗು ನೋಡೋಕೆ ಕೊಡ್ಬೇಕು 2 ಸಾವಿರ ಲಂಚ- ದಾವಣಗೆರೆಯಲ್ಲಿದ್ದಾರೆ ಧನದಾಹಿ ಡಾಕ್ಟರ್ಸ್

    ದಾವಣಗೆರೆ: ಸರ್ಕಾರಿ ಆಸ್ಪತ್ರೆಗಳು ಅಂದರೆ ಸಾಕು ಕೆಲ ವೈದ್ಯಾಧಿಕಾರಿಗಳಿಗೆ ಹಾಗೂ ವೈದ್ಯರಿಗೆ ಅಕ್ಷಯ ಪಾತ್ರೆ ಇದ್ದಂತೆ. ಬಡ ರೋಗಿಗಳಿಗಾಗಿ ಸರ್ಕಾರದಿಂದ ಬರುವ ಅನುದಾನವನ್ನು ನುಂಗಿ ನೀರು ಕುಡಿದಿರುವುದಲ್ಲದೇ, ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಹಣವನ್ನು ಬಡ ರೋಗಿಗಳಿಂದ ಕಸಿಯುತ್ತಿದ್ದಾರೆ. ಹರಿಗೆಯಾದ ನಂತರ ಪೋಷಕರು ಮಗುವನ್ನು ನೋಡಲು ಇಲ್ಲಿ ಹಣ ಇಟ್ಟರೆ ಮಾತ್ರ ಮಗುವಿನ ಮುಖ ನೋಡಲು ಸಾಧ್ಯ. ಅಲ್ಲದೆ ತಾಲೂಕು ಆಸ್ಪತ್ರೆಯ ವಾರ್ಡ್ ಗಳಲ್ಲಿ ಸುವ್ಯವಸ್ಥಿತವಾದ ಆಸನಗಳ ದಿಂಬು ಹಾಗೂ ಮ್ಯಾಟ್ ಗಳ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪ ಸಾಕಷ್ಟು ಕೇಳಿ ಬರುತ್ತಿದೆ.

    ಹೌದು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ದುಡ್ಡಿಲ್ಲ ಅಂದರೆ ಏನು ಕೆಲಸನೂ ಆಗಲ್ಲ. ಪ್ರಾಣ ಉಳಿಸೋ ವೈದ್ಯರುಗಳೇ ಇಲ್ಲಿ ಲಂಚ ಪಡೆಯುತ್ತಿದ್ದಾರೆ. ಹೆರಿಗೆ ವೈದ್ಯರಾದ ಹನುಮಂತಪ್ಪ ಹಾಗೂ ವೈದ್ಯ ಚಂದ್ರಪ್ಪ ಇವರಿಬ್ಬರೂ ಆಸ್ಪತ್ರೆಯ ಲಂಚ ತೆಗೆದುಕೊಳ್ಳುವವರು. ಯಾರಿಗಾದರು ಹೆರಿಗೆಯಾದರೆ ಬಳಿಕ ಮಗು ನೋಡಬೇಕು ಅಂದರೆ ಸಾವಿರಾರು ರೂಪಾಯಿ ಹಣ ಕೊಡಬೇಕಂತೆ. ಇಲ್ಲವೆಂದರೆ ಮಗುನಾ ನೋಡೋಕೆ ಬಿಡಲ್ವಂತೆ. ಇವರ ಲಂಚಾವತಾರಕ್ಕೆ ಇಲ್ಲಿನ ರೋಗಿಗಳು ಹೈರಾಣಾಗಿ ಹೋಗಿದ್ದಾರೆ. ವೈದ್ಯರ ಈ ಲಂಚಾವತಾರವನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಇಷ್ಟೇ ಅಲ್ಲ, ಸರ್ಕಾರ ರೋಗಿಗಳಿಗಾಗಿ ಪ್ರತಿ ವರ್ಷ ನೀಡೋ ದಿಂಬು ಮ್ಯಾಟ್‍ಗಳಲ್ಲೂ ಇಲ್ಲಿನ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಲಪಟಾಯಿಸ್ತಿದ್ದಾರೆ. ಈ ಬಗ್ಗೆ ತಾಲೂಕು ಮುಖ್ಯವೈದ್ಯಾಧಿಕಾರಿಗಳನ್ನು ಕೇಳಿದರೆ ಅದ್ಯಾವುದೋ ವೀಡಿಯೋ ಬಂದಿತ್ತು ಅಷ್ಟೇ. ಅದರ ಬಗ್ಗೆ ಮಾಹಿತಿ ಇಲ್ಲ ಎಂದು ಬೇಜಾವಾಬ್ದಾರಿ ಉತ್ತರ ನೀಡಿದ್ದಾರೆ.

    ಒಟ್ಟಿನಲ್ಲಿ ಬಡವರಿಗಾಗಿ ಎಂದು ಸರ್ಕಾರ ಆಸ್ಪತ್ರೆಗಳನ್ನ ನೀಡಿದರೆ, ಈ ವೈದ್ಯಾಧಿಕಾರಿಗಳು ಹಣಕ್ಕಾಗಿ ರೋಗಿಗಳ ರಕ್ತ ಹೀರುತ್ತಿದ್ದಾರೆ. ಇನ್ನಾದರೂ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚಾವತಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಜನ ಆಗ್ರಹಿಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]