Tag: Taluk Officer

  • ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರೂ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾವೇರಿ ಉಕ್ಕಿ ಹರಿದ ರಭಸಕ್ಕೆ ಮನೆ ಮಠಗಳನ್ನು ಕಳೆದುಕೊಂಡಿದ್ದ ಎಷ್ಟೋ ಜನರಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತ್ತಿಲ್ಲ. ನೂರಾರು ರೈತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಮಾತ್ರ ಎನ್‍ಡಿಆರ್ ಎಫ್ ನಿಂದ ಬಂದಿದ್ದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಬಳಸದೆ ಜಿಲ್ಲಾಧಿಕಾರಿಗೆ ವಾಪಸ್ಸ್ ಕಳುಹಿಸಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನಾದ್ಯಂತ ಆಗಿದ್ದ ಪ್ರಾಕೃತಿಕ ನಷ್ಟದ ತುರ್ತು ಸೇವೆಗಳಿಗೆ ಮತ್ತು ಪರಿಹಾರಗಳಿಗೆ ಬಳಸಲು ಜಿಲ್ಲಾಧಿಕಾರಿ ಒಂದು ಕೋಟಿ ರೂ. ಹಣವನ್ನು ವಿರಾಜಪೇಟೆಗೆ ನೀಡಿದ್ದರು. ಆದರೆ ತಾಲೂಕು ಕಚೇರಿ ಶಿರಸ್ತೆದಾರ್ ಪೊನ್ನು ಮತ್ತು ಕೇಸ್ ವರ್ಕರ್ ಧನಂಜಯ್ ಡಿಸಿ ನೀಡಿದ್ದ ಚೆಕನ್ನು ತಹಶೀಲ್ದಾರ್ ಅವರ ಖಾತೆಗೆ ಜಮಾಮಾಡಿಲ್ಲ. ಹೀಗಾಗಿ ಚೆಕ್ ಸಮಯ ಮುಗಿದುಹೋಗಿ ಬಳಕೆ ಬಾರದಂತಾಗಿದೆ.

    ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಕೇಳಿದರೆ, ಕೆಲಸದ ಒತ್ತಡದಿಂದ ಚೆಕನ್ನು ಖಾತೆಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆಕ್ ಹಾಗೆ ಉಳಿದಿದ್ದು, ಜಿಲ್ಲಾಧಿಕಾರಿಯವರಿಗೆ ವಾಪಸ್ಸ್ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಯಾರಿಂದ ತಪ್ಪಾಯಿತು ಅವರ ವಿರುದ್ಧ ತುಟಿ ಬಿಚ್ಚುತ್ತಿಲ್ಲ.

    ಪ್ರವಾಹ ಉಕ್ಕಿ ಹರಿದಾಗ ಸಂತ್ರಸ್ತ ಕೇಂದ್ರಗಳನ್ನು ನಡೆಸಲು ಇದೇ ತಾಲೂಕು ಆಡಳಿತ ಸ್ಥಳೀಯರಿಂದಲೇ ವಸ್ತುಗಳನ್ನು ಖರೀದಿಸಿತ್ತು. ಬಳಿಕ ಐದು ತಿಂಗಳಾದ್ರೂ ಬಡ ವ್ಯಾಪಾರಿಗಳಿಗೆ ಹಣವನ್ನು ಪಾವತಿಸದೆ ಇದ್ದ ಕಾರಣ ವ್ಯಾಪಾರಿಗಳು ಪರದಾಡುವಂತಾಗಿತ್ತು. ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಗೂ ವ್ಯಾಪಾರಿಗಳು ಮುಂದಾಗಿದ್ದರು. ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

    ತಕ್ಷಣಕ್ಕೆ ಸಿಕ್ಕಿದ್ದ 10 ಸಾವಿರ ಪರಿಹಾರ ಹಣ ಬಿಟ್ಟರೆ ಮತ್ತೆ ಯಾವುದೇ ಪರಿಹಾರ ಲಭಿಸಿಲ್ಲ. ಹೀಗಾಗಿ ಕೊಟ್ಟ ಹಣವನ್ನೂ ಬಳಸದೆ ಚೆಕನ್ನು ವಾಪಸ್ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆಯ ಶಿರಸ್ತೇದಾರ್ ಮತ್ತು ಕೇಸ್ ವರ್ಕರ್ ಧನಂಜಯ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಸರಿಯಾದ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಚೆಕ್ ವಾಪಸ್ ಆಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಮಲೆನಾಡಲ್ಲಿ ಭಾರೀ ಮಳೆ – ಮೂಡಿಗೆರೆ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಳೆದ 24 ಗಂಟೆ ಸಮಯದಿಂದ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.

    ಮೂಡಿಗೆರೆಯಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆಯಾಗಿತ್ತು. ಪರಿಣಾಮ ಹೇಮಾವತಿ ಮೈದುಂಬಿ ಹರಿಯುತ್ತಿದೆ. ಇತ್ತ ತಾಲೂಕಿನಾದ್ಯಂತ ಗದ್ದೆ-ತೋಟಗಳು ಜಲಾವೃತವಾಗಿದ್ದು, ಮುಂಜಾಗ್ರತ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ ತಾಲೂಕು ಅಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಮಳೆಯಿಂದ ಮುನ್ನೆಚ್ಛರಿಕೆಯ ಕ್ರಮವಾಗಿ ರಜೆ ನೀಡಲಾಗಿದೆ.

    ಇತ್ತ ಕಾವೇರಿ ಜಲಾನಯನ ಪ್ರದೇಶ ಮಡಿಕೇರಿಯ ಭಾಗಮಂಡಲದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಕಳೆದ ವರ್ಷದ ಜಲಪ್ರವಾಹದಿಂದ ಆತಂಕ ಈಗಲೂ ಜನರ ಮನದಲ್ಲಿ ಮನೆ ಮಾಡಿದೆ. ಅದರಲ್ಲೂ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ದುರಸ್ತಿ ಮಾಡಿದ್ದರೂ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡುವಿನಲ್ಲಿ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ.

    ಭಾರೀ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ರಭಸವೂ ಹೆಚ್ಚಿದೆ. ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆ ಭಾಗದ ಹತ್ತು ಎಕರೆಗೂ ಹೆಚ್ಚು ಪ್ರದೇಶಗಳ ಜಲಾವೃತವಾಗಿದೆ. ಇತ್ತ ಬೆಂಗಳೂರಿನಲ್ಲೂ ಇಂದು ಸಂಜೆ ವೇಳೆಗೆ ವರುಣನ ಸಿಂಚನವಾಯ್ತು. ಮುಂದಿನ 4 ದಿನಗಳ ಕಾಲ ಮಳೆ ಆಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

  • ಕೊಡಗಿಗೆ ಹಲವೆಡೆ ಅಗತ್ಯ ವಸ್ತು, ಸಂಗ್ರಹ – ಜಾತ್ರೆಗೆ ಕೂಡಿಟ್ಟ ಹಣ ನೀಡಿದ್ಳು ಬಾಲಕಿ!

    ಕೊಡಗಿಗೆ ಹಲವೆಡೆ ಅಗತ್ಯ ವಸ್ತು, ಸಂಗ್ರಹ – ಜಾತ್ರೆಗೆ ಕೂಡಿಟ್ಟ ಹಣ ನೀಡಿದ್ಳು ಬಾಲಕಿ!

    ಧಾರವಾಡ/ಹುಬ್ಬಳ್ಳಿ/ವಿಜಯಪುರ/ಬೆಂಗಳೂರು: ಮಳೆಯಿಂದಾಗಿ ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ವಾಣಿಜ್ಯ ನಗರಿಯ ವಿವಿಧ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಧಾರವಾಡದ ಎಸ್‍ಯುಸಿಐ ಸಂಘಟನೆ ಕಾರ್ಯಕರ್ತರು ಹಣ ಸಂಗ್ರಹ ಮಾಡಿ ಕಳಿಸಲು ಮುಂದಾಗಿದ್ದು, ನಗರದ ಜುಬ್ಲಿ ವೃತ್ತದಲ್ಲಿ ವಾಹನ ಸವಾರರ ಹಾಗೂ ಜನರ ಬಳಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದು ಸಹಾಯ ನೀಡುತ್ತಿದ್ದಾರೆ. ಇಂದು ಸಂಜೆಯವರೆಗೂ ಹಣ ಸಂಗ್ರಹಿ ಬಳಿಕ ಸಂಗ್ರಹವಾದ ಹಣ ಹಾಗೂ ವಸ್ತುಗಳನ್ನ ತಾಲೂಕಿ ಅಧಿಕಾರಿಗಳ ನೆರವಿನ ಮೂಲಕ ಪ್ರವಾಹ ಸಂತ್ರಸ್ತರಿಗೆ ತಲುಪಿಸಲಿದ್ದಾರೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ವ್ಯಾಪಾರಸ್ಥರ ಬಳಿ ಹಣ್ಣು, ಬ್ರೆಡ್ ಸೇರಿದಂತೆ ಅವಶ್ಯಕ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ತಹಶಿಲ್ದಾರರ ಮೂಲಕ ಕೊಡಗಿಗೆ ಸಂಗ್ರಹಿಸಿದ ಪ್ರವಾಹ ಸ್ಥಳಗಳಿಗೆ ತಲುಪಿಸಲಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳು ಸಾಥ್: ಹುಬ್ಬಳ್ಳಿ ನಗರದ ಕೆಎಚ್ ಪಾಟೀಲ್ ಕಾಲೇಜು ವಿದ್ಯಾರ್ಥಿಗಳು ಕೂಡ ಹಣ ಸಂಗ್ರಹ ಮಾಡಿ ಅವಶ್ಯಕ ವಸ್ತುಗಳನ್ನು ಖರೀದಿಸಿ ಪ್ಯಾಕ್ ಮಾಡಿ ಕಳುಹಿಸಿದ್ದಾರೆ. ಒಂದೇ ದಿನದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಪ್ಯಾಕ್ ಮಾಡಿದ್ದಾರೆ. ತಮ್ಮ ಕಾರ್ಯಕ್ಕೆ ಸಹಕಾರ ನೀಡುವಂತೆ ಇತರೇ ಕಾಲೇಜು ವಿದ್ಯಾರ್ಥಿಗಳನ್ನು ಪ್ರೇರೆಪಿಸಿದ್ದು, ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

    ಜಾತ್ರೆಗೆ ಕೂಡಿಟ್ಟ ಹಣ ನೀಡಿದ ಬಾಲಕಿ: ವಿಜಯಪುರ ತಾಲೂಕಿನ ಸಾರವಾಡ ಗ್ರಾಮದ ಸುಷ್ಮಿತಾ ತಮ್ಮ ಊರಿನ ಜಾತ್ರೆಗಾಗಿ ಕೂಡಿಟ್ಟ ಹಣವನ್ನ ಸಂತ್ರಸ್ತರ ನೆರವಿಗೆ ನೀಡಿ ಮಾನವೀಯತೆ ಮೆರೆದ್ದಾಳೆ. ಸುಷ್ಮಿತಾ ಸಾರವಾಡ ಗ್ರಾಮದ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಆರು ತಿಂಗಳಿಂದ ನಿಂದ ಕೂಡಿಟ್ಟ ಹಣವನ್ನು ನೀಡಿದ್ದಾಳೆ. ಬಾಲಕಿ ನಡೆ ಕಂಡ ಹಲವರು ಪ್ರೇರಣೆಗೊಂಡು ನೆರೆಯ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗುತ್ತಿದ್ದಾರೆ.

    ಅನೇಕಲ್ ವಿದ್ಯಾರ್ಥಿಗಳು ನೆರವು: ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಗೋಪಾಲ್ ರಾಜು ಕಾಲೇಜ್ ವಿದ್ಯಾರ್ಥಿಗಳು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಇಂದು ಆನೇಕಲ್ ಪಟ್ಟಣದಲ್ಲಿ ಪರಿಹಾರ ನಿಧಿ ಹಾಗೂ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗಿನಲ್ಲಿರುವಂತಹ ಸಂತ್ರಸ್ತರಿಗೆ ರವಾನೆ ಮಾಡಿದ್ದಾರೆ. ಮೈಸೂರಿನಲ್ಲೂ ಹಲವರು ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿ ಕೊಡವರ ನೆರವಿಗೆ ಅಗತ್ಯ ವಸ್ತುಗಳು ಹಾಗೂ ಹಣ ಕಾಸು ಸಹಾಯ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv