Tag: Taluk hospital

  • ಹೊನ್ನಾಳಿಯಲ್ಲಿ ಭಾರೀ ಮಳೆ – ತಾಲೂಕು ಆಸ್ಪತ್ರೆ ಒಳಗೆ ನುಗ್ಗಿದ ನೀರು

    ಹೊನ್ನಾಳಿಯಲ್ಲಿ ಭಾರೀ ಮಳೆ – ತಾಲೂಕು ಆಸ್ಪತ್ರೆ ಒಳಗೆ ನುಗ್ಗಿದ ನೀರು

    – ಜನರಲ್, ಐಸಿಯು ವಾರ್ಡ್‌ ಜಲಾವೃತ

    ದಾವಣಗೆರೆ: ಹೊನ್ನಾಳಿಯಲ್ಲಿ (Honnalli) ರಾತ್ರಿ ಭಾರೀ ಮಳೆಯಾಗಿದ್ದು (Rain) ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಗೆ (Taluk Hospital) ನೀರು ನುಗ್ಗಿದೆ. ಆಸ್ಪತ್ರೆಯ ಒಳಗೆ ಮಳೆ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದ್ದಾರೆ.

    ಜನರಲ್ ವಾರ್ಡ್, ಐಸಿಯು ವಾರ್ಡ್‌ಗಳಿಗೂ ನೀರು ನುಗ್ಗಿದ್ದು ಇಡೀ ಆಸ್ಪತ್ರೆ ಸಂಪೂರ್ಣ ಜಲಾವೃತವಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿ, ಔಷಧ ವಿತರಣಾ ಕೊಠಡಿ, ಹೆರಿಗೆ ವಾರ್ಡ್‌ಗೆ ನೀರು ನುಗ್ಗಿದ್ದು ವಾರ್ಡ್‌ನಲ್ಲಿದ್ದ ಬಾಣಂತಿಯರು ಹಾಗೂ ಐಸಿಯು ಘಟಕದಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.

     ಸರಿಯಾದ ರೀತಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕ್ರೀಡಾಂಗಣದಿಂದ ಆಸ್ಪತ್ರೆಗೆ ನೀರು ಹರಿದಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಆಸ್ಪತ್ರೆಯನ್ನು ಸಿಬ್ಬಂದಿ ಕ್ಲೀನ್‌ ಮಾಡಿದ್ದಾರೆ. ಇದನ್ನೂ ಓದಿ: ನರ್ಸರಿಯಲ್ಲಿ 4 ವರ್ಷದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ರೊಚ್ಚಿಗೆದ್ದ ಜನರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

    ಹೊನ್ನಾಳಿ ಪಟ್ಟಣದ ಹಲವು ರಸ್ತೆಗಳು ಜಲಾವೃತಗೊಂಡು ಬಡಾವಣೆಯ ಬೀದಿಗಳಲ್ಲೂ ಮೊಣಕಾಲುದ್ದ ನೀರು ನಿಂತಿದೆ . ಖಾಸಗಿ ಬಸ್ ನಿಲ್ದಾಣದಲ್ಲೂ ಎರಡು ಅಡಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ನಿಂತ ನೀರಿನಲ್ಲೇ ಬೈಕ್ ಸವಾರರು ಹಾಗೂ ಪ್ರಯಾಣಿಕರು ಸಂಚಾರ ಮಾಡಿದ್ದಾರೆ.

  • ವಿಚಾರಣೆಗೆ ಬಂದವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ರು

    ವಿಚಾರಣೆಗೆ ಬಂದವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ರು

    – ದೂರಿನ ಹಿನ್ನೆಲೆ ತನಿಖೆಗೆ ಬಂದಿದ್ದ ಅಧಿಕಾರಿಗಳು
    – ವೈದ್ಯಾಧಿಕಾರಿ ಪರ ನಿಂತ ಸ್ಥಳೀಯರು

    ಕಾರವಾರ: ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ವೈದ್ಯಾಧಿಕಾರಿಯ ವಿಚಾರಣೆ ನೆಡೆಸಲು ಬಂದ ಅಧಿಕಾರಿಗಳು ವೈದ್ಯರ ಉತ್ತಮ ಕಾರ್ಯ ಹಾಗೂ ಸಾರ್ವಜನಿಕರ ಅಕ್ರೋಶಕ್ಕೆ ಮಣಿದು ತಾಲೂಕು ವೈದ್ಯಾಧಿಕಾರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ ಅಪರೂಪದ ಘಟನೆ ಬುಧವಾರ ಭಟ್ಕಳದಲ್ಲಿ ಸಾಕ್ಷಿಯಾಯಿತು.

    ಭಟ್ಕಳ ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ರವರ ವಿರುದ್ಧ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಭಟ್ಕಳದ ಈಶ್ವರ್ ನಾಯ್ಕ್ ಎಂಬವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತ್ರತ್ವದ ತಂಡ ಭಟ್ಕಳದ ತಾಲೂಕು ಆಸ್ಪತ್ರೆಗೆ ಆಗಮಿಸಿ ತನಿಖೆ ನೆಡೆಸುತಿತ್ತು.

    ಈ ವಿಷಯ ಸುತ್ತಮುತ್ತಲ ಜನರಿಗೆ ತಿಳಿದು ಆಸ್ಪತ್ರೆಯಲ್ಲಿ ನೂರಾರು ಜನರು ಗುಂಪುಗೂಡಿದರು. ಹಾಳು ಬಿದ್ದಿದ್ದ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರಿಗೆ ಹಳೆಯ ದ್ವೇಷ ಇಟ್ಟುಕೊಂಡು ದೂರು ನೀಡಿದ ವ್ಯಕ್ತಿಯ ಮಾತು ಕೇಳಿ ಬಂದಿರುವುದಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು ನಂತರ ವೈದ್ಯಾಧಿಕಾರಿಯ ಪ್ರಾಮಾಣಿಕ ಕಾರ್ಯವೈಖರಿ ನೋಡಿ ಸಂತಸ ಪಟ್ಟ ತನಿಖಾಧಿಕಾರಿಗಳ ತಂಡ ಅವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.

    ನಾಯಿಗಳ ವಾಸಸ್ಥಾನವಾಗಿದ್ದ ತಾಲೂಕು ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆ ಮಾಡಿದ್ದ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್. ಭಟ್ಕಳ ತಾಲೂಕು ಆಸ್ಪತ್ರೆಗೆ ವರ್ಗವಾಗಿ ಬಂದಾಗ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲದೇ ಹಾಳು ಬಿದ್ದಿದ್ದ ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಿದ್ದರು.

    ರಾತ್ರಿ ಹಗಲು ಎನ್ನದೇ ಕರ್ತವ್ಯ ಮುಗಿದರೂ ರೋಗಿಗಳೊಂದಿಗೆ ಇದ್ದು ಅವರ ಯೋಗಕ್ಷೇಮ ನೋಡಿಕೊಳ್ಳುತಿದ್ದಾರೆ. ಇವರು ಹಲವು ದಾನಿಗಳ ಸಹಕಾರದೊಂದಿಗೆ 50 ಲಕ್ಷದ ಡೆಯಾಬಿಟಿಸ್ ಸೆಂಟರ್ ಸಹ ತೆರೆದು ಉಚಿತ ವಾಗಿ ಎಲ್ಲವೂ ಸಿಗುವಂತೆ ಮಾಡಿದ್ದರು.

    ಕೋವಿಡ್ ಸಂದರ್ಭದಲ್ಲಿ ಹೆದರದೇ ಕಾರ್ಯನಿರ್ವಹಿಸಿ ತಮಗೂ ಕೂಡ ಸೋಂಕು ಬಂದರೂ ಕಾರ್ಯವನ್ನು ಮರೆತಿರಲಿಲ್ಲ. ಹೀಗಾಗಿ ಜನರ ಪ್ರೀತಿ ಗಳಿಸಿದ್ದ ವೈದ್ಯೆ ಎಲ್ಲರ ಅಚ್ಚುಮೆಚ್ವಿನ ತಾಯಿಯಾಗಿದ್ದರು. ಹೀಗಿರುವಾಗ ಇವರ ಬಳಿಯೇ ಕೆಲಸ ಮಾಡುತಿದ್ದ ಈಶ್ವರ್ ನಾಯ್ಕ ಎಂಬಾತ ಬೇಡದೇ ಇರುವ ಕೆಲಸ ಮಾಡಿದ್ದಕ್ಕೆ ಹೊರಹಾಕಿದ್ದರಿಂದ ಸೇಡು ತೀರಿಸಿಕೊಳ್ಳಲು ತನ್ನ ಪ್ರಭಾವ ಬಳಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದನು.

    ಇನ್ನು ಆಸ್ಪತ್ರೆಯಲ್ಲಿ ನೂರಾರು ಜನ ಸೇರಿ ವೈದ್ಯರ ತನಿಖೆಗೆ ವಿರೋಧ ವ್ಯಕ್ತಪಡಿಸಿದರು. ಇನ್ನು ಒಂದುವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು. ಇದಲ್ಲದೇ ಪರಿಸ್ಥಿತಿ ಉಗ್ರವಾಗುತಿತ್ತು. ನಂತರ ಆಧಿಕಾರಿಗಳು ಇವರು ಮಾಡಿದ ಕೆಲಸಗಳನ್ನು ಪರಿಶೀಲಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಮರಳಿದರು.

  • ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ವಿಭಾಗ ಪ್ರಾರಂಭಿಸಲು ಸ್ಥಳೀಯರ ವಿರೋಧ

    ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ವಿಭಾಗ ಪ್ರಾರಂಭಿಸಲು ಸ್ಥಳೀಯರ ವಿರೋಧ

    ಹಾವೇರಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ ತಾಲೂಕು ಮಟ್ಟದಲ್ಲಿ ಸಹ ಕೊರೊನಾ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೊರೊನಾ ಆಸ್ಪತ್ರೆ ಪ್ರಾರಂಭಿಸಿದೆ. ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಆಸ್ಪತ್ರೆ ಆರಂಭಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಾಲೂಕು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋವಿಡ್-19 ಆಸ್ಪತ್ರೆ ಆರಂಭವಾಗಿದೆ. ತಾಲೂಕು ಸರಕಾರಿ ಆಸ್ಪತ್ರೆ ಕಂಪೌಂಡ್‍ಗೆ ಹೊಂದಿಕೊಂಡು ಸಾಕಷ್ಟು ಮನೆಗಳು ಇರುವುದರಿಂದ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಸರ್ಕಾರಿ ವಸತಿ ನಿಲಯಗಳಿಗೆ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

    ಕೋವಿಡ್-19 ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸಿ, ಇಲ್ಲವೇ ಆಸ್ಪತ್ರೆ ಸುತ್ತಮುತ್ತಲಿನ ಜನರಿಗೆ ಬೇರೆಡೆ ಮನೆಗಳ ವ್ಯವಸ್ಥೆ ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ ಸಾಮಾಜಿಕ ಅಂತರ ಮರೆತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

  • 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ವಾರಿಯರ್

    ಶಿವಮೊಗ್ಗ: 9 ತಿಂಗಳ ತುಂಬು ಗರ್ಭಿಣಿಯಾಗಿದ್ದರೂ ಕೊರೊನಾ ಎಂಬ ಸಂಕಷ್ಟದ ಕಾಲದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ಲೆಕ್ಕಿಸದೇ, ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ಕೆಲಸ ಮಾಡುವ ಇವರ ಹೆರಸು ರೂಪಾ, ಕೊರೊನಾದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಸೇವೆಯಿಂದ ವಿಮುಖರಾಗದೇ, ಮಾತೃತ್ವದ ರಜೆ ಕೂಡ ತೆಗೆದುಕೊಳ್ಳದೇ ಕೊರೊನಾ ವಾರಿಯರ್ ಅಂದ್ರೆ ಏನು ಎಂಬುದು ತೋರಿಸಿಕೊಟ್ಟಿದ್ದಾರೆ.

    ಇಡೀ ವಿಶ್ವವೇ ಕೊರೊನಾ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಕಣ್ಣಿಗೆ ಕಾಣದ ಒಂದು ವೈರಸ್ ನಿಂದ ಜನರು ಬಳಲುವಂತಾಗಿದ್ದು, ಯಾವಾಗಪ್ಪ ಇದು ಮುಗಿಯುತ್ತೇ ಎಂದು ಚಾತಕ ಪಕ್ಷಿಯಂತೆ ಜನರು ಕಾಯುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು ಕೊರೊನಾ ಸೋಂಕಿನಿಂದ ದೂರವಿರಬೇಕೆಂದು ಲಾಕ್‍ಡೌನ್ ಘೋಷಿಸಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಜೀವದ ಹಂಗನ್ನು ತೊರೆದು ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ಆಶಾ ಮತ್ತು ಅಂಗನವಾಡಿ ಹಾಗೂ ವೈದ್ಯಕೀಯ ಸಿಬ್ಬಂದಿ ಹಗಲಿರುಳು ಜನರ ಸೇವೆ ಮಾಡುತ್ತಿದ್ದಾರೆ.

    ಅಂತಹದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯೊಬ್ಬರು ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಇದರಲ್ಲೇನು ವಿಶೇಷತೆ ಅಂತಿರಾ? ವಿಶೇಷವಿದೆ. ಇವರು ಕೇವಲ ಒಬ್ಬ ವೈದ್ಯಕೀಯ ಸಿಬ್ಬಂದಿಯಾಗಿದ್ರೆ ಬೇರೆ ಮಾತು. ಆದರೆ ಈ ಮಹಿಳೆ ನಿಜವಾಗಿಯೂ ಗಟ್ಟಿಗಿತ್ತಿ. ಯಾಕೆಂದರೆ ಇವರು 9 ತಿಂಗಳ ತುಂಬು ಗರ್ಭಿಣಿ. ಈ ಕೊರೊನಾ ಎಂಬ ಸಂಕಷ್ಟದ ಸಮಯದಲ್ಲಿ ತಮ್ಮ ಸಂಕಷ್ಟವನ್ನೆಲ್ಲ ಮರೆತು ರೋಗಿಗಳ ಸೇವೆ ಮತ್ತು ಅವರ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.

    ಜನರು ರಸ್ತೆಗಿಳಿಯಲು ಅದರಲ್ಲೂ ವಿನಾಕಾರಣ ಆಸ್ಪತ್ರೆ ಒಳಗಡೆ ಅಲ್ಲ ಅದರ ಆವರಣಕ್ಕೂ ಹೋಗಲು ಹಿಂಜರಿಯುತ್ತಿರುವ ವೇಳೆಯಲ್ಲಿ ಈ ಕೊರೊನಾ ವಾರಿಯರ್ ರೂಪರವರು, ತಾವು ತುಂಬು ಗರ್ಭಿಣಿ ಎಂಬುದನ್ನು ಮರೆತು ತಮಗಾಗುವ ಆಯಾಸವನ್ನೆಲ್ಲಾ ಬದಿಗಿಟ್ಟು, ಸೇವೆಗೆ ಮುಂದಾಗಿದ್ದಾರೆ. ಪ್ರತಿದಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ದಾಖಲಾದವರ ಆರೈಕೆಯಲ್ಲಿ ತೊಡಗಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ರೆಸ್ಟ್ ಎಂಬ ಹೆಸರಿನಲ್ಲಿ ಮನೆಯಲ್ಲಿರಲು ಇವರಿಗೆ ಇಷ್ಟವಾಗುವುದಿಲ್ಲವಂತೆ. ಕಳೆದ 8-9 ವರ್ಷಗಳಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿಕೊಂಡು ಬಂದಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರು ಇತರೇ ಸಿಬ್ಬಂದಿಗೆ ಮಾದರಿಯಾಗಿದ್ದಾರೆ.

    ಶಿವಮೊಗ್ಗದ ಗಾಜನೂರು ಗ್ರಾಮದಿಂದ ಸುಮಾರು 60 ಕಿ.ಮೀ. ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್ಸಿನಲ್ಲೇ ಪಯಾಣಿಸಿ, ಸೇವೆ ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು 120 ಕಿ.ಮೀ. ಪ್ರಯಾಣ ಮಾಡುವ ಇವರು ಬಳಲದೇ ಲವಲವಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತೀರ್ಥಹಳ್ಳಿಯ ಜನರು ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಕೊರೊನಾ ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದಾರೆ.

    ಅಷ್ಟಕ್ಕೂ ತಮ್ಮ ಚೊಚ್ಚಲ ಹೆರಿಗೆಯ ಬೆರಳೆಣಿಕೆ ದಿನಗಳನ್ನು ಎಣಿಸುತ್ತಿರುವ ವಾರಿಯರ್ ರೂಪಾರವರು ಈ ರೀತಿ ನಿಸ್ವಾರ್ಥ ಸೇವೆಗೆ ಮುಂದಾಗಿರುವುದು ಆಸ್ಪತ್ರೆಯ ಇತರೇ ಸಿಬ್ಬಂದಿ ಮತ್ತು ಇಲ್ಲಿನ ವೈದ್ಯಾಧಿಕಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಆಸ್ಪತ್ರೆಯವರು 7 ತಿಂಗಳಾಗುತ್ತಿದ್ದಂತೆ ರಜೆ ತಗೆದುಕೊಳ್ಳಿ ಎಂದಿದ್ದರು ಕೂಡ ರೂಪಾರವರು ಇಲ್ಲ ನಾನು ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತೇನೆ. ನನಗೆ ರಜೆ ಬೇಡ ಎಂದಿದ್ದಾರಂತೆ. 9 ತಿಂಗಳ ನೋವು ಸಂಕಟವನ್ನೇಲ್ಲಾ ಅಸ್ಪತ್ರೆಯಲ್ಲಿ ಬರುವ ರೋಗಿಗಳ ಸೇವೆ ಮಾಡುತ್ತಾ ಮರೆತು ಆಸ್ಪತ್ರೆಯಲ್ಲಿ ಖುಷಿ, ಖುಷಿಯಾಗಿ, ಲವಲವಿಕೆಯಿಂದ ಓಡಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಮೊದಲು ತಮ್ಮ ಕುಟುಂಬದವರಿಗೆ ಇದು ಇಷ್ಟವಿಲ್ಲದೇ ಇದ್ದರೂ ಕೂಡ ಅವರ ಮನವೊಲಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳದೇ ಜನರ ಸೇವೆಗೆ ಮುಂದಾಗಿರುವುದಕ್ಕೆ ರೂಪಾರನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ.

    ಒಟ್ಟಾರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ದೇವರು ಎಂದು ಜನರು ಭಾವಿಸಿ ಬರುತ್ತಾರೆ. ಹೀಗಾಗಿ ಇಂತಹ ಸಂಕಷ್ಟದ ಸಮಯದಲ್ಲೂ ವಿರಮಿಸದೇ ಅವರ ಸೇವೆ ಮಾಡುವುದೇ ಮುಖ್ಯ ಎಂಬದು ರೂಪಾರವರ ತೀರ್ಮಾನ. ಏನೇ ಆಗಲಿ ಕೊರೊನಾ ವಾರಿಯರ್ ಆಗಿ ಇಂತಹ ಸಮಯದಲ್ಲಿಯೂ ಸೇವೆ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ರೂಪಾರವರಿಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.

  • ಹುಚ್ಚುನಾಯಿ ಕಡಿತಕ್ಕೆ ವೃದ್ಧೆ ಬಲಿ,  ಇಬ್ಬರ ಸ್ಥಿತಿ ಗಂಭೀರ- ಆಸ್ಪತ್ರೆಯಲ್ಲಿ ಔಷಧಿ ಸಿಗದೇ ಜನರ ಪರದಾಟ

    ಹುಚ್ಚುನಾಯಿ ಕಡಿತಕ್ಕೆ ವೃದ್ಧೆ ಬಲಿ, ಇಬ್ಬರ ಸ್ಥಿತಿ ಗಂಭೀರ- ಆಸ್ಪತ್ರೆಯಲ್ಲಿ ಔಷಧಿ ಸಿಗದೇ ಜನರ ಪರದಾಟ

    ಕಾರವಾರ: ಅತ್ತ ಹುಚ್ಚನಾಯಿಗಳ ಕಾಟ ಇತ್ತ ನಾಯಿ ಕಚ್ಚಿದರೆ ಚಿಕಿತ್ಸೆ ಪಡೆಯಲು ಆಸ್ಪತ್ರಗೆ ಹೋದರೆ ಔಷಧಿ ಸಿಗದೆ ಪರದಾಟ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹುಚ್ಚು ನಾಯಿ ಕಾಟ ಜಾಸ್ತಿಯಾಗಿದ್ದು ಓರ್ವ ವೃದ್ಧೆ ಇಂದು ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.

    ಮುಂಡಳ್ಳಿ ಗ್ರಾಮದ ನಿವಾಸಿ ವೃದ್ಧೆ ಜಟ್ಟಮ್ಮ ಹುಚ್ಚುನಾಯಿ ಕಡಿತದಿಂದ ಸಾವನ್ನಪ್ಪಿದ್ದಾರೆ. ವೃದ್ಧೆಯ ಮಗ ಶ್ರೀನಿವಾಸ್ ಕುಪ್ಪಯ್ಯ(60), ಪಕ್ಕದ ಮನೆಯ ರಿತೀಶ್(18) ಹಾಗೂ ಜ್ಯೋತಿ ಅವರಿಗೂ ಕೂಡ ಈ ಹುಚ್ಚುನಾಯಿ ಕಚ್ಚಿದೆ.

    ಹುಚ್ಚುನಾಯಿ ಕಡಿತಕ್ಕೆ ಒಳಗಾದ ಮೂವರಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಗೆಯೇ ಯುವತಿಗೆ ಚಿಕ್ಕಪುಟ್ಟ ಗಾಯವಾಗಿದ್ದು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಭಟ್ಕಳದ ಮುಂಡಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಯಿಗಳ ಕಾಟ ಮಿತಿಮೀರಿದೆ. ಈ ಹಿಂದೆ ನಾಯಿಗಳ ಹಿಂಡು ಮಕ್ಕಳ ಹಾಗೂ ಮಹಿಳೆಯರ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಸ್ಥಳೀಯರು ನಾಯಿಯನ್ನು ಹಿಡಿಯುವಂತೆ ಗ್ರಾಮಪಂಚಾಯ್ತಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಸಹ ಮಾಡಿದ್ದರು. ಆದರೆ ಈ ಬಗ್ಗೆ ಯಾವ ಅಧಿಕಾರಿಯೂ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಾಯಿಗಳನ್ನು ಸ್ಥಳಾಂತರಿಸುವ ಅಥವಾ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಪ್ರಯತ್ನ ಸಹ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ನಾಯಿ ಕಚ್ಚಿದರೆ ಚಿಕಿತ್ಸೆ ನೀಡುವುದಿರಲಿ ಇದಕ್ಕೆ ಸೂಕ್ತ ಚುಚ್ಚುಮದ್ದು ಸಹ ತಾಲೂಕು ಆಸ್ಪತ್ರೆಯಲ್ಲಿ ಸಂಗ್ರಹವಿಲ್ಲ. ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಅಥವಾ ಉಡುಪಿಗೆ ಕೊಂಡೊಯ್ಯುವಂತೆ ಸಲಹೆ ಮಾಡುತ್ತಾರೆ ಇಲ್ಲಿನ ವೈದ್ಯರು. ಇಂದು ನಾಯಿ ಕಚ್ಚಿದ್ದರಿಂದ ವೃದ್ಧೆ ಜೊತೆ ಮಗ ಹಾಗೂ ಮತ್ತೊಬ್ಬ ಯುವಕ ಸಹ ಗಂಭೀರ ಗಾಯಗೊಂಡಿದ್ದು, ಚುಚ್ಚುಮದ್ದು ಹಾಗೂ ಚಿಕಿತ್ಸೆ ನೀಡದೇ ತಾಲೂಕು ಆಸ್ಪತ್ರೆಯ ವೈದ್ಯರು ಮಂಗಳೂರಿಗೆ ಹೋಗುವಂತೆ ಸಲಹೆ ನೀಡುವ ಮೂಲಕ ಒಂದು ಜೀವ ಬಲಿಯಾಗಲು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.