Tag: Taluk Administration

  • ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.

    ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.

  • ಜಲಪ್ರಳಯದ ಊರಲ್ಲಿ ಜಲಕ್ಷಾಮ – ನೀರಿಗಾಗಿ ಖಾಲಿ ಕೊಡಗಳಲ್ಲಿ ಹೊಡೆದಾಟ

    ಜಲಪ್ರಳಯದ ಊರಲ್ಲಿ ಜಲಕ್ಷಾಮ – ನೀರಿಗಾಗಿ ಖಾಲಿ ಕೊಡಗಳಲ್ಲಿ ಹೊಡೆದಾಟ

    ಗದಗ: ಜಲಪ್ರಳಯದ ಊರಲ್ಲಿ ಜಲಕ್ಷಾಮ ಎದುರಾಗಿದ್ದು, ಕುಡಿಯುವ ನೀರಿಗಾಗಿ ಖಾಲಿ ಕೊಡಗಲ್ಲಿ ಜನರು ಹೊಡೆದಾಡುತ್ತಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.

    ಪ್ರವಾಹ ಬಂದು ಹೋದ ಮೇಲೆ ಸಂತ್ರಸ್ತರು ಕುಡಿಯುವ ಹನಿ ನೀರಿಗೂ ಪರದಾಡುತ್ತಿದ್ದಾರೆ. ಕುಡಿಯಲು, ನೀರು ನುಗ್ಗಿ ಕೆಸರಾಗಿರುವ ಮನೆ ತೊಳೆಯಲು, ಜಾನುವಾರುಗಳಿಗೂ ಕುಡಿಯುವ ನೀರಿಲ್ಲದೇ ಮೂಕ ರೋಧನೆ ಕೇಳತೀರದಾಗಿದೆ.

    ಪ್ರವಾಹ ತಗ್ಗಿದ ಬಳಿಕ ತಾಲೂಕು ಆಡಳಿತ ನಾಪತ್ತೆಯಾಗಿದೆ. ನೀರಲ್ಲಿ ಮುಳುಗಿದ ಜನರಿಗೆ ಈಗ ಕುಡಿಯೋಕೆ ನೀರಿಲ್ಲ. ಸಂಘ ಸಂಸ್ಥೆಯಿಂದ ಪೂರೈಸಿದ ಟ್ಯಾಂಕರ್ ನೀರಿಗಾಗಿ ಕೊಡಗಳನ್ನು ಹಿಡಿದು ಸಂತ್ರಸ್ತರು ಹೊಡೆದಾಡಿಕೊಳ್ಳುತ್ತಿದ್ದಾರೆ.

    ಟ್ಯಾಂಕರ್‍ ಗಳಿಂದ ನೀರು ಪೂರೈಸದ ತಾಲೂಕು ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಂತ್ರಸ್ತರು ಬೇಸರಗೊಂಡು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಪ್ರವಾಹ ನಿಂತ ಮೇಲೆ ಸಂತ್ರಸ್ತರ ಗೋಳು ಕೇಳೊರಾರು ಎಂಬ ಪ್ರಶ್ನೆ ನೆರೆಹಾವಳಿ ಗ್ರಾಮಗಳಲ್ಲಿ ಎದುರಾಗಿದೆ.

  • ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ನಾರಾಯಣಪುರ ಡ್ಯಾಂ ಭರ್ತಿ – ಪ್ರವಾಹ ಭೀತಿಯಲ್ಲಿ ಗ್ರಾಮಗಳು

    ರಾಯಚೂರು: ಮಳೆಯಿಂದ ಜಿಲ್ಲೆಯ ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದು, ಕೃಷ್ಣನದಿಯ ಅಕ್ಕಪಕ್ಕದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಕಾಡುತ್ತಿದೆ.

    ನಾರಾಯಣಪುರ ಡ್ಯಾಂ ಸಂಪೂರ್ಣ ಭರ್ತಿಯಾದ ಕಾರಣ ಕೃಷ್ಣನದಿಗೆ 50 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಸಂಜೆ 4 ಗಂಟೆ ವೇಳೆಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುವ ಸಾಧ್ಯತೆ ಇದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿ ಅಕ್ಕಪಕ್ಕದ ಗ್ರಾಮದ ಗ್ರಾಮಸ್ಥರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

    ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕೃಷ್ಣಾ ನದಿಗೆ ಇಳಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ.