Tag: Taliban

  • ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ: ವಿ.ಎಸ್ ಉಗ್ರಪ್ಪ

    ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ: ವಿ.ಎಸ್ ಉಗ್ರಪ್ಪ

    ಚಿತ್ರದುರ್ಗ: ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ ಎಂದು ಕಾಂಗ್ರೆಸ್‍ನ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೂತನ ಕೇಂದ್ರ ಸಚಿವ ಭಗವಂತ ಖೂಬಾ ಅವರ ಪರಿಚಯ ಮಾಡಿಕೊಡುವ ನೆಪದಲ್ಲಿ ನಡೆಸಿದ ಜನಾಶೀರ್ವಾದ ಯಾತ್ರೆ ವೇಳೆ ಯಾದಗಿರಿಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿದ್ದಾರೆ. ಈ ಮೂಲಕ ಬಿಜೆಪಿಯವರಲ್ಲಿ ತಾಲಿಬಾನ್ ಸಂಸ್ಕೃತಿ ಎದ್ದು ಕಾಣಿಸುತ್ತಿದೆ. ಈ ಬಗ್ಗೆ ಜವಬ್ದಾರಿಯುತವಾದ ಸ್ಥಾನದಲ್ಲಿದ್ದೂ, ಶಾಂತಿ ಕದಡಿಸಿರುವ ಅವರ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ, ಅಥವಾ ತಪ್ಪಾಗಿದೆ ಇನ್ಮುಂದೆ ತಿದ್ದಿಕೊಳ್ಳುತ್ತೇವೆ ಎನ್ನಬೇಕಿದ್ದ ಗೃಹ ಸಚಿವರು ಅದರ ಬದಲಾಗಿ ಉಡಾಫೆ ಉತ್ತರ ನೀಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಕರ್ನಾಟಕ ರಾಜ್ಯದಲ್ಲಿ ಈ ಬಿಜೆಪಿ ಗುಂಡಿನ ಸಂಸ್ಕೃತಿ ಹುಟ್ಟು ಹಾಕುತ್ತಿದೆ ಎಂಬಂತೆ ಭಾಸವಾಗುತ್ತಿದ್ದು, ಇಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮುಂದೆ ಇನ್ಯಾರ ಮೇಲೆ ಹಾರಿಸ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

    ಸಚಿವ ಈಶ್ವರಪ್ಪ, ಹಿಂದೆ ನಮ್ಮ ಸಂಖ್ಯೆ ಕಡಿಮೆ ಇದ್ದಾಗ ಒಂದು ಏಟು ಯಾರಾದರು ಹೊಡೆದರು ಕೂಡ ತಲೆತಗ್ಗಿಸಿಕೊಂಡು ಹೋಗಿ ಅಂತ ನಮ್ಮ ಹಿರಿಯರು ಹೇಳುತ್ತಿದ್ದರು. ಈಗ ಹಾಗೆಲ್ಲಾ ಆಗಲ್ಲ. ಯಾರಾದರು ಒಂದೇಟು ಹೊಡೆದರೆ, ನಾವು ಎರಡು ಏಟು ಹೊಡೆಯುತ್ತೇವೆ ಎಂದಿದ್ದಾರೆ. ಈ ಎಲ್ಲಾ ಸನ್ನಿವೇಶಗಳನ್ನು ಗಮನಿಸಿ ಬಿಜೆಪಿ ನಾಯಕರಿಗೆ ನಾನು ಮನವಿಮಾಡುತ್ತೇನೆ ಗೂಂಡಾ ಹಾಗೂ ತಾಲಿಬಾನ್ ಸಂಸ್ಕೃತಿ ತೋರುವ ಮೂಲಕ ಶಾಂತಿಯುತವಾಗಿರುವ ಕರ್ನಾಟಕವನ್ನು ಬಿಹಾರ ಹಾಗೂ ಉತ್ತರ ಪ್ರದೇಶ ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ಅದು ನಾಡಬಂದೂಕು ಅಲ್ಲ – ಬೆಂಬಲಿಗರ ನಡೆ ಸಮರ್ಥಿಸಿಕೊಂಡ ಸಚಿವ ಭಗವಂತ ಖೂಬಾ

    ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಮುಖಂಡರಾದ ಸಂಪತ್ ಕುಮಾರ್ ಇದ್ದರು.

  • ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಐ ಲವ್ ತಾಲಿಬಾನ್ ಎಂದು ಪೋಸ್ಟ್ ಹಾಕಿದ್ದ ಯುವಕ ಅರೆಸ್ಟ್

    ಬಾಗಲಕೋಟೆ: ಐ ಲವ್ ತಾಲಿಬಾನ್ ಎಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದ ಜಮಖಂಡಿಯ ಆಸೀಫ್ ಗಲಗಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಆಸೀಫ್ ಗಲಗಲಿ, ಅವಿವೇಕಿ ತಾಲಿಬಾನ್ ಉಗ್ರರ ಬಗ್ಗೆ ಪ್ರೀತಿ ತೋರಿದ್ದನು. ಈತ ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ಐಲವ್ ತಾಲಿಬಾನಿ ಎಂದು ಬರೆದುಕೊಂಡಿದ್ದ. ಈ ಪೋಸ್ಟ್ ವೈರಲ್ ಆಗಿತ್ತು. ಈ ಬಗ್ಗೆ ಸ್ವ ಸಮುದಾಯದವರು ಈತನ ದೇಶದ್ರೋಹ ಕೃತ್ಯವನ್ನು ಖಂಡಿಸಿದ್ದರು.

    Social media logos

    ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಿರುಕುಳ ಹಿನ್ನೆಲೆಯಲ್ಲಿ ಅಫ್ಘಾನ್ ದೇಶ ಬಿಟ್ಟು ಜನ ಓಡಿ ಹೋಗುತ್ತಿದ್ದಾರೆ. ಹೀಗಿರುವಾಗ ತಾಲಿಬಾನಿಗಳ ಮೇಲೆ ಪ್ರೀತಿ ತೋರಿದ್ದಕ್ಕೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿತ್ತು. ಈ ಪೋಸ್ಟ್ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಾಪತ್ತೆಯಾಗಿದ್ದ ಆಸೀಫ್ ಗಲಗಲಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಮಖಂಡಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪಬ್ಲಿಕ್‌ ಟಿವಿ ನೇರ ಪ್ರಸಾರ ವೀಕ್ಷಿಸಿ

  • ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

    ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?

    ಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ. ಕೆಲವೇ ದಿನಗಳಲ್ಲಿ ಅಧಿಕೃತ ಸರ್ಕಾರ ರಚನೆಯಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ ಎಂದಿರುವ ವಕ್ತಾರರು ಷರಿಯತ್ ಕಾನೂನಿನ ಅಡಿಯಲ್ಲಿ ಆಡಳಿತ ನಡೆಸುವುದಾಗಿ ಹೇಳಿದ್ದಾರೆ. 1996 ಮಾದರಿಯಲ್ಲಿ ಈಗ ತಾಲಿಬಾನ್ ಈಗ ಇರುವುದಿಲ್ಲ, ಷರಿಯತ್ ವ್ಯಾಪ್ತಿಯಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ನೀಡುವುದಾಗಿಯೂ ತಾಲಿಬಾನ್ ವಕ್ತಾರರು ಹೇಳಿದ್ದಾರೆ.

    ಆದರೆ ಈ ಹೇಳಿಕೆ ನಡುವೆಯೇ ಅಫ್ಘಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯರನ್ನು ಕೆಲಸದಿಂದ ವಜಾ ಮಾಡಲಾಗುತ್ತಿದೆ. ಸರ್ಕಾರಿ ಸಾಮ್ಯದ ಸುದ್ದಿ ವಾಹಿನಿವೊಂದರ ಪ್ರಮುಖ ನಿರೂಪಕಿಯನ್ನೂ ಈಗ ಕೆಲಸದಿಂದ ತೆಗೆದು ಹಾಕಲಾಗಿದೆ. ಮಹಿಳೆಯರಿಗೆ ಸ್ವಾತಂತ್ರ್ಯ ನೀಡುವುದಾಗಿ ಹೇಳಿದ್ದ ತಾಲಿಬಾನ್ ಷರಿಯತ್ ಕಾನೂನು ಹೇಗೆ ಅರ್ಥೈಸಿ ಕೊಳ್ಳುತ್ತಿದೆ ಎನ್ನುವುದು ಇಲ್ಲಿಯವರೆಗೂ ಗೊಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಷರಿಯತ್ ಕಾನೂನು ಎಂದರೇನು? ಇದನ್ನು ಅಫ್ಘಾನ್ ನಲ್ಲಿ ತಾಲಿಬಾನ್ ಅರ್ಥೈಸಿಕೊಂಡಿದೆ. ಈ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರ ಭವಿಷ್ಯ ಹೇಗಿರಲಿದೆ ಎಂದು ನೋಡೋಣ.

    ಷರಿಯಾ ಎಂದರೇನು?
    ಷರಿಯತ್ ಅಥಾವ ಶರಿಯಾ ಖುರಾನ್, ಪ್ರವಾದಿ ಮುಹಮ್ಮದ್ ಅವರ ಜೀವನ ಕಥೆಗಳು ಮತ್ತು ಧಾರ್ಮಿಕ ವಿದ್ವಾಂಸರ ತೀರ್ಪುಗಳನ್ನು ಆಧರಿಸಿದೆ. ಇದು ಇಸ್ಲಾಂನ ನೈತಿಕ ಮತ್ತು ಕಾನೂನು ಚೌಕಟ್ಟನ್ನು ರೂಪಿಸುತ್ತದೆ. ಖುರಾನ್ ನೈತಿಕ ಜೀವನಕ್ಕೆ ಒಂದು ಮಾರ್ಗವನ್ನು ವಿವರಿಸುತ್ತದೆ, ಆದರೆ ಇಲ್ಲಿ ಒಂದು ನಿರ್ದಿಷ್ಟ ಕಾನೂನುಗಳಿಲ್ಲ. ಷರಿಯತ್‍ನ ಒಂದು ವ್ಯಾಖ್ಯಾನವು ಮಹಿಳೆಯರಿಗೆ ವ್ಯಾಪಕವಾದ ಹಕ್ಕುಗಳನ್ನು ನೀಡಬಲ್ಲದು, ಇನ್ನೊಂದು ಮಹಿಳೆಯರಿಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡಬಹುದು. ಆದರೆ ತಾಲಿಬಾನ್ ಹೇರುವ ಕೆಲವು ನಿಯಮಗಳು ಷರಿಯತ್ ಕಾನೂನುಗಳನ್ನು ಮೀರಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಷರಿಯತ್ ನ ವ್ಯಾಖ್ಯಾನಗಳು ಮುಸ್ಲಿಂ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿದೆ ಮತ್ತು ಎಲ್ಲಾ ಹಲವು ಸರ್ಕಾರಗಳು ತಮ್ಮ ಕಾನೂನು ವ್ಯವಸ್ಥೆಯನ್ನು ಷರಿಯಾದ ಮೇಲೆ ಆಧರಿಸಿವೆ. ತಾಲಿಬಾನ್ ಷರಿಯಾ ಕಾನೂನಿನ ಅಡಿಯಲ್ಲಿ ಸರ್ಕಾರ ಸ್ಥಾಪಿಸುತ್ತಿದ್ದಾರೆ ಎಂದರೆ ಅವರು ಇಸ್ಲಾಮಿಕ್ ವಿದ್ವಾಂಸರು ಅಥವಾ ಇತರ ಇಸ್ಲಾಮಿಕ್ ಅಧಿಕಾರಿಗಳು ಒಪ್ಪುವ ರೀತಿಯಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಅರ್ಥವಲ್ಲ.

    ಷರಿಯಾ ಏನು ಸೂಚಿಸುತ್ತದೆ?
    ಕಳ್ಳತನ ಮತ್ತು ವ್ಯಭಿಚಾರದಂತಹ ಕೆಲವು ನಿರ್ದಿಷ್ಟ ಅಪರಾಧಗಳನ್ನು ಷರಿಯತ್ ಪಟ್ಟಿ ಮಾಡುತ್ತದೆ ಮತ್ತು ಆರೋಪಗಳ ಪರಿಸ್ಥಿತಿಯ ಮಾನದಂಡಗಳ ಆಧಾರದಲ್ಲಿ ಶಿಕ್ಷೆಗಳನ್ನು ವಿಧಿಸುತ್ತದೆ. ಅಲ್ಲದೇ ಇದು ಯಾವಾಗ ಮತ್ತು ಹೇಗೆ ಪ್ರಾರ್ಥನೆ ಮಾಡಬೇಕು, ಮದುವೆ ಅಥಾವ ವಿಚ್ಛೇದನ ಹೇಗೆ ಮಾಡಬೇಕು ಎನ್ನುವುದನ್ನು ನೈತಿಕ ನೆಲೆಗಟ್ಟಿನಲ್ಲಿ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುತ್ತದೆ. ಪುರುಷ ಬೆಂಗಾವಲು ಇಲ್ಲದೆ ಮಹಿಳೆಯರು ಮನೆಯಿಂದ ಹೊರಬರುವುದನ್ನು ಅಥವಾ ಹೆಚ್ಚಿನ ಉದ್ಯೋಗಗಳಲ್ಲಿ ಕೆಲಸ ಮಾಡುವುದನ್ನು ಷರಿಯತ್ ಕಾನೂನು ತಡೆಯುವುದಿಲ್ಲ.

    ತಾಲಿಬಾನ್ ಈ ಹಿಂದೆ ಷರಿಯಾವನ್ನು ಹೇಗೆ ಅರ್ಥೈಸಿತು?
    1996 ರಿಂದ 2001 ರವರೆಗೆ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಿಸಿದಾಗ, ಅವರು ದೂರದರ್ಶನ ಮತ್ತು ಸಂಗೀತ ಉಪಕರಣಗಳನ್ನು ನಿಷೇಧಿಸಿದರು. ನಡವಳಿಕೆ, ಉಡುಗೆ ಮತ್ತು ಚಲನೆಯ ಮೇಲಿನ ನಿರ್ಬಂಧಗಳನ್ನು ಹೇರಿದರು. ಪರಿಶೀಲನೆಗೆ ನೈತಿಕತೆ ಪೊಲೀಸ್ ಅಧಿಕಾರಿಗಳು ನೇಮಿಸಿದರು, ತಮ್ಮ ನಿಯಮಗಳನ್ನು ಪಾಲಿಸದ ಮಹಿಳೆಯರನ್ನು ಅವಮಾನಿಸಿದರು ಮತ್ತು ಚಾವಟಿ ಏಟಿನಿಂದ ಶಿಕ್ಷಿಸಿದರು. 1996 ರಲ್ಲಿ, ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಮಹಿಳೆಯೊಬ್ಬಳು ಉಗುರು ಬಣ್ಣ ಧರಿಸಿದ್ದಕ್ಕಾಗಿ ಹೆಬ್ಬೆರಳಿನ ತುದಿಯನ್ನು ಕತ್ತರಿಸಿದ್ದರು. ವ್ಯಭಿಚಾರದ ಆರೋಪ ಹೊತ್ತ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು. ಮಹಿಳೆಯರು ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷ ರಕ್ಷಕರಿಲ್ಲದೆ ಮನೆಯಿಂದ ಹೊರ ಹೋಗುವುದನ್ನು ನಿಷೇಧಿಸಿದರು, ಹುಡುಗಿಯರ ಶಾಲೆಗೆ ಹೋಗದಂತೆ ತಡೆದರು ಮತ್ತು ನಿಯಮ ಉಲ್ಲಂಘಿಸಿದ ಜನರನ್ನು ಸಾರ್ವಜನಿಕವಾಗಿ ಹೊಡೆದು ಶಿಕ್ಷಿಸಿದರು. ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳಿಂದ ಗುಂಡಿನ ದಾಳಿ

    ಈಗಿನ ಪರಿಸ್ಥಿತಿ ಏನು?
    ಮಹಿಳೆಯರಿಗೆ ಷರಿಯತ್ ಕಾನೂನು ಅಡಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುವುದು ಎನ್ನಲಾಗಿದೆ. ಅದಕ್ಕೆ ಪೂರಕ ಎನ್ನುವಂತೆ ಮಹಿಳಾ ನಿರೂಪಕಿ ತಾಲಿಬಾನ್ ವಕ್ತಾರರ ಸಂದರ್ಶನ ನಡೆಸುವ ಮೂಲಕ ಭರವಸೆ ಹುಟ್ಟಿಸುವ ಪ್ರಯತ್ನ ಮಾಡಲಾಯಿತು. ಆದರೆ ಇದಾದ ಒಂದೆರಡು ದಿನಗಳಲ್ಲಿ ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಮಹಿಳೆಯರು ಕಾರ್ಯ ನಿರ್ವಹಿಸದಂತೆ ಒತ್ತಡ ಹೇರಲಾಗಿದೆ. ಮಹಿಳೆಯರನ್ನು ಪ್ರವೇಶ ನೀಡದ ಬಗ್ಗೆ ಮಹಿಳಾ ನಿರೂಪಕಿ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

    ಸದ್ಯ ಕಾಬೂಲ್‍ನ ಹೊರಗೆ, ಕೆಲವು ಮಹಿಳೆಯರಿಗೆ ಪುರುಷ ಸಂಬಂಧಿಕರ ಸಹಾಯವಿಲ್ಲದೆ ಮನೆಯಿಂದ ಹೊರಹೋಗಬೇಡಿ ಎಂದು ಹೇಳಲಾಗಿದೆ ಮತ್ತು ತಾಲಿಬಾನ್ ಮಹಿಳೆಯರನ್ನು ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ತಾಲಿಬಾನಿಗಳು ಕೆಲವು ಮಹಿಳಾ ಚಿಕಿತ್ಸಾಲಯಗಳು ಮತ್ತು ಬಾಲಕಿಯರ ಶಾಲೆಗಳನ್ನು ಮುಚ್ಚಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ “ಇಸ್ಲಾಮಿಕ್ ಕಾನೂನಿನ ಮಿತಿಯೊಳಗೆ” ಅಥವಾ ತಮ್ಮ ಹೊಸದಾಗಿ ಸ್ಥಾಪಿತವಾದ ಆಡಳಿತದ ಅಡಿಯಲ್ಲಿ ಶರಿಯಾ ಹಕ್ಕುಗಳನ್ನು ಹೊಂದಿರುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಆದರೆ ಇದರ ಅರ್ಥವೇನೆಂದು ಈವರೆಗೂ ಸ್ಪಷ್ಟವಾಗುತ್ತಿಲ್ಲ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

  • ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

    ಕಾಬೂಲ್‍ನಲ್ಲಿ ಕನ್ನಡಿಗರು ಸೇರಿ 450 ಭಾರತೀಯರ ಒದ್ದಾಟ – ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಸಾಧ್ಯತೆ

    ಕಾಬೂಲ್: ತಾಲಿಬಾನ್ ತೆಕ್ಕೆಯಲ್ಲಿರುವ ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿಲುಕಿಕೊಂಡಿದ್ದು, ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ.

    ಕಾಬೂಲ್ ಏರ್‌ಪೋರ್ಟ್‌ ಅಮೆರಿಕ ಸೈನಿಕರ ನಿಯಂತ್ರಣದಲಿದ್ರೂ ಏರ್‌ಪೋರ್ಟ್‌ ಹೊರಗಿನ ಭದ್ರತೆ ಅಮೆರಿಕ ಸೈನಿಕರ ಕೈಯಲ್ಲಿ ಇಲ್ಲ. ಹೀಗಾಗಿ ಭಾರತೀಯರನ್ನು ಏರ್‌ಪೋರ್ಟಿಗೆ ಕರೆತರಲು ಸಾಧ್ಯವಾಗ್ತಿಲ್ಲ. ಪ್ರತಿ ಚೆಕ್‍ಪೋಸ್ಟ್ ಗಳಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ಮಾಡಿ, ಏರ್‌ಪೋರ್ಟ್‌ಗೆ ಬಿಡದೇ ಹಾಗೆಯೇ ವಾಪಸ್ ಕಳಿಸ್ತಿದ್ದಾರೆ. ಹೀಗಾಗಿ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಮನೆಯಿಂದ ಹೊರಬೀಳದಿರಲು ಕಾಬೂಲ್‍ನಲ್ಲಿರುವ ಭಾರತೀಯರು ನಿರ್ಧರಿಸಿದ್ದಾರೆ. ಹೀಗೆ ಕಾಯ್ತಾ ಇರೋರಲ್ಲಿ 20ರಿಂದ 30 ಮಂದಿ ಕನ್ನಡಿಗರು ಇದ್ದಾರೆ ಎನ್ನಲಾಗಿದ್ದು, ಈ ಪೈಕಿ ಏಳು ಮಂದಿಯ ವಿವರಗಳು ಲಭ್ಯ ಆಗಿವೆ. ಇದನ್ನೂ ಓದಿ:  ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಾಕ್ಷಸಿ ಆಡಳಿತ – ರಸ್ತೆ ರಸ್ತೆಗಳಲ್ಲಿ ಕ್ರೌರ್ಯ, ವಿರೋಧಿಗಳ ಸಂಹಾರ

    ಪಬ್ಲಿಕ್ ಟಿವಿ ಜೊತೆ ಕಾಬೂಲ್ ಏರ್‌ಪೋರ್ಟ್‌ ಹೊರಭಾಗದಿಂದ ಮಾತನಾಡಿದ ತೀರ್ಥಹಳ್ಳಿ ಮೂಲದ ಫಾದರ್ ರಾಬರ್ಟ್ ರೊಡ್ರಿಗೇಸ್, ತಾವು ಎದುರಿಸ್ತಿರುವ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಪಾಕಿಸ್ತಾನದವರನ್ನು ಬಿಟ್ಟು ಕಳಿಸ್ತಿದ್ದಾರೆ. ಆದ್ರೆ ಭಾರತೀಯರನ್ನು ವಾಪಸ್ ಕಳಿಸಲು ತಾಲಿಬಾನಿಗಳು ಸುಲಭಕ್ಕೆ ಒಪ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ತಾಲಿಬಾನಿಗಳ ಜೊತೆ ಸಂಪರ್ಕ ಸಾಧಿಸಿ ಭಾರತೀಯರನ್ನು ಕರೆತರಲು ಮೋದಿ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸ್ತಿದೆ. ನಾಳೆಯೊಳಗೆ ಎಲ್ಲರನ್ನು ಏರ್‌ಲಿಫ್ಟ್ ಮಾಡುವ ಸಂಭವ ಇದೆ. ಇದನ್ನೂ ಓದಿ: ದೆಹಲಿಯ ಆಸ್ಪತ್ರೆಗಳ ಮೇಲೆ ಅಫ್ಘಾನಿಸ್ತಾನ ಅವಲಂಬಿತವಾಗಿದೆ: ಪರಿಸ್ಥಿತಿ ಬಿಚ್ಚಿಟ್ಟ ಜಾನ್

    ಕಾಬೂಲ್‍ನಲ್ಲಿ ಕನ್ನಡಿಗರು ಅತಂತ್ರ..!
    * ರಾಬರ್ಟ್ ರೊಡ್ರಿಗೇಸ್, ತೀರ್ಥಹಳ್ಳಿ
    * ಸಿಸ್ಟರ್ ಥೆರೆಸಾ ಕ್ರಾಸ್ಟಾ, ಮಂಗಳೂರು
    * ಹಿರೇಖ್ ದೇವ್‍ನಾಥ್, ಮಾರತ್‍ಹಳ್ಳಿ, ಬೆಂಗಳೂರು
    * ತನ್ವೀರ್, ಬಳ್ಳಾರಿ
    * ಅಶ್ವಥಿ, ಬೆಂಗಳೂರು
    * ವಿನ್ಸೆಂಟ್, ಮಂಗಳೂರು
    * ಫಾ. ಜೆರೋಮ್ ಸಿಕ್ವೇರಾ, ಸಿದ್ದನಕಟ್ಟೆ, ದಕ್ಷಿಣ ಕನ್ನಡ

    ಇತ್ತ ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದ ಮಲ್ಪೆ ಮೂಲದ ಜಾನ್ ಸ್ವಗ್ರಾಮಕ್ಕೆ ಮರಳಿದ್ದಾರೆ. ಜಾನ್ ವಿಮಾನದಲ್ಲಿ ಕುಳಿತ ಒಂದು ಗಂಟೆಯೊಳಗೆ ತಾಲಿಬಾನ್ ಉಗ್ರರು ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದರು. ಈ ಮೂಲಕ ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ರು. ಒಂದು ವೇಳೆ, ಒಂದು ಗಂಟೆ ತಡವಾಗಿದ್ದಲ್ಲಿ ಜಾನ್‍ಗೆ ಮಲ್ಪೆಗೆ ಬರಲು ಸಾಧ್ಯ ಆಗ್ತಿರಲಿಲ್ಲ. ಈಗಲೂ ಅಲ್ಲಿ ಪ್ರಾಣಭಯದೊಂದಿಗೆ ಒದ್ದಾಡಬೇಕಿತ್ತು. ಆ ದೇವರೇ ನನ್ನನ್ನು ಕರೆಸಿಕೊಂಡರು ಎಂದು ಜಾನ್ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಜಾನ್ ಸುರಕ್ಷಿತವಾಗಿ ವಾಪಸ್ ಆಗಿದ್ದಕ್ಕೆ ಕುಟುಂಬಸ್ಥರು ಖುಷಿಯಾಗಿದ್ದಾರೆ.

  • ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಾಕ್ಷಸಿ ಆಡಳಿತ – ರಸ್ತೆ ರಸ್ತೆಗಳಲ್ಲಿ ಕ್ರೌರ್ಯ, ವಿರೋಧಿಗಳ ಸಂಹಾರ

    ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಾಕ್ಷಸಿ ಆಡಳಿತ – ರಸ್ತೆ ರಸ್ತೆಗಳಲ್ಲಿ ಕ್ರೌರ್ಯ, ವಿರೋಧಿಗಳ ಸಂಹಾರ

    – ಸೇನಾಧಿಕಾರಿ ಕಣ್ಣಿಗೆ ಬಟ್ಟೆ ಹಾಕಿ ರಣಭೀಕರ ಹತ್ಯೆ
    – ಉಗ್ರರಿಂದ ಮಕ್ಕಳ ರಕ್ಷಿಸಲು ಪೋಷಕರ ಒದ್ದಾಟ

    ಕಾಬೂಲ್: ನಾವು ಬದಲಾಗಿದ್ದೇವೆ, ನಾವು ಉದಾರವಾದಿಗಳು. ಪ್ರತೀಕಾರ ತೆಗೆದುಕೊಳ್ಳಲ್ಲ, ಎಲ್ಲರನ್ನು ಕ್ಷಮಿಸಿದ್ದೇವೆ ಅಂತ ತಾಲಿಬಾನಿಗಳು ಮೊನ್ನೆಯಷ್ಟೇ ಹೇಳಿದ್ರು. ಆದರೆ ಸೈತಾನರ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಅಫ್ಘಾನಿಸ್ತಾನದಲ್ಲಿ ಕಾಣುತ್ತಿದ್ದೇವೆ. ರಾಕ್ಷಸಿ ಸಂತಾನ ತಾಲಿಬಾನಿಗಳಿಂದ ನರಬೇಟೆ ಶುರುವಾಗಿದೆ.

    ಅಫ್ಘಾನ್ ಧ್ವಜ ಹಾರಿಸಿದ್ರು ಎಂಬ ಕಾರಣಕ್ಕೆ ನಡುಬೀದಿಯಲ್ಲೇ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ವಿರೋಧಿಗಳನ್ನು ಹಿಂಸಿಸತೊಡಗಿದ್ದಾರೆ. ಮನೆ ಮನೆಗೆ ಭೇಟಿ ಕೊಟ್ಟು ಶೋಧ ಕಾರ್ಯ ನಡೆಸ್ತಿದ್ದಾರೆ. ವಿರೋಧಿಗಳ ಸುಳಿವು ನೀಡಿ ಎಂದು ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕ್ತಿದ್ದಾರೆ. ಅವರು ಶರಣಾದ್ರೆ ಏನೂ ಮಾಡಲ್ಲ.. ಇಲ್ಲ ಅಂದ್ರೆ ಕೊಂದು ಹಾಕ್ತೀವಿ ಅಂತಾ ವಾರ್ನಿಂಗ್ ನೀಡತೊಡಗಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

    ಬದ್ಗೀಸ್ ಪ್ರಾಂತ್ಯದಲ್ಲಂತೂ ಓರ್ವ ಸೇನಾಧಿಕಾರಿಯನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾರೆ. ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಗುಂಡಿನ ಮಳೆಗೈದಿದ್ದಾರೆ. ಕೆಲವರನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಅಫ್ಘನ್ನರು ಆತಂಕದಲ್ಲಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಅಫ್ಘನ್‍ನಿಂದ ಎಸ್ಕೇಪ್ ಆಗಲು ನೋಡ್ತಿದ್ದಾರೆ. ಏರ್‍ಪೋರ್ಟ್ ಯಾವಾಗ ಓಪನ್ ಆಗುತ್ತೆ ಅಂತಾ ಕಾಯ್ತಿದ್ದಾರೆ. ಆದರೆ ಆಫ್ಘನ್ನರನ್ನು ವಿದೇಶಕ್ಕೆ ಹೋಗಲು ತಾಲಿಬಾನಿಗಳು ಬಿಡ್ತಿಲ್ಲ. ಏರ್‍ಪೋರ್ಟ್ ಮುಂದೆ ಗುಂಪು ಚದುರಿಸಲು ತಾಲಿಬಾನಿಗಳು ಯದ್ವಾ ತದ್ವಾ ಗುಂಡು ಹಾರಿಸಿದ್ದಾರೆ. ಜನ ಪ್ರಾಣಭಯದಿಂದ ತತ್ತರಿಸಿ ಹೋಗಿದ್ದಾರೆ. ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ಮಹಿಳೆಯೊಬ್ಬರ ಆರ್ತನಾದ ಕೇಳಲಾಗದೇ ಏರ್‍ಪೋರ್ಟ್‍ನ ಮುಳ್ಳುತಂತಿ ಗೋಡೆಯ ಮೇಲೆ ಹತ್ತಿದ ಅಮೆರಿಕ ಸೈನಿಕರು, ಆ ಮಹಿಳೆ ಮತ್ತು ಮಗುವೊಂದನ್ನು ಏರ್‍ಪೋರ್ಟ್ ಒಳಗೆ ಎಳೆದುಕೊಂಡಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಒಂದು ಮಗುವನ್ನು ಅಮೆರಿಕ ಸೈನಿಕರು ಎತ್ತಿಕೊಳ್ಳುತ್ತಾರೆ. ಎಲ್ಲರಿಗೂ ಈ ಅದೃಷ್ಟ ದಕ್ಕಲ್ಲ ನೋಡಿ. ಹೀಗಾಗಿಯೇ ಕೆಲ ಆಫ್ಘನ್ ಪೋಷಕರು, ತಮ್ಮ ಮುಂದಿನ ತಲೆಮಾರಾದ್ರೂ ತಾಲಿಬಾನಿಗಳ ಕ್ರೂರದೃಷ್ಟಿಗೆ ಬೀಳದಿರಲಿ ಎಂದು ಏರ್‍ಪೋರ್ಟ್ ಕಾಂಪೌಂಡ್ ಬಳಿ ನಿಂತು ಮಕ್ಕಳನ್ನು ಒಳಗೆ ಎಸೆಯುತ್ತಿದ್ದಾರೆ. ಹೀಗೆ ಎಸೆಯುವಾಗ ಕೆಲ ಮಕ್ಕಳು ಮುಳ್ಳಿನ ತಂತಿಗೆ ಸಿಲುಕಿ ಒದ್ದಾಡೋದನ್ನು ನೋಡಲು ಆಗ್ತಿಲ್ಲ ಎಂದು ಅಧಿಕಾರಿಯೊಬ್ಬರು ಕಣ್ಣೀರು ಇಟ್ಟಿದ್ದಾರೆ.

    ಈ ಮಧ್ಯೆ ಅಫ್ಘಾನಿಸ್ತಾನದ ಭಾಗ್ಲಾನ್, ಬಾನು ಸೇರಿ ಮೂರು ರಾಜ್ಯಗಳು ತಾಲಿಬಾನ್ ಕೈತಪ್ಪಿದೆ. ಅಲ್ಲಿನ ಸ್ಥಳೀಯರು ತಿರುಗಿಬಿದ್ದಿದ್ದು, ಭೀಕರ ಕಾಳಗದಲ್ಲಿ ಹಲವು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. ತಾಲಿಬಾನ್ – ಪಾಕ್ ಬಾಂಧವ್ಯ ಜಗಜ್ಜಾಹೀರಾಗಿದೆ. ತಾಲಿಬಾನ್ ಆಹ್ವಾನದ ಮೇರೆಗೆ ಪಾಕ್ ವಿದೇಶಾಂಗ ಸಚಿವರು ಭಾನುವಾರ ಕಾಬೂಲ್ ತೆರಳಲಿದ್ದಾರೆ.

  • ಅಫ್ಘಾನ್‍ನಲ್ಲಿ ತಾಲಿಬಾನಿಗಳ ಅಟ್ಟಹಾಸ- ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆ

    ಅಫ್ಘಾನ್‍ನಲ್ಲಿ ತಾಲಿಬಾನಿಗಳ ಅಟ್ಟಹಾಸ- ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆ

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು, ಭಾರತದ ರಫ್ತು ಹಾಗೂ ಆಮದು ವ್ಯವಹಾರಕ್ಕೆ ನಿರ್ಬಂಧ ಹೇರಿದೆ. ಇದರ ಎಫೆಕ್ಟ್ ನಿಂದಾಗಿ ಭಾರತದಲ್ಲಿ  ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೇರಿದೆ.

    ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಎಲ್ಲ ಆಮದು ಹಾಗೂ ರಫ್ತುಗಳನ್ನು ನಿಲ್ಲಿಸಿದ್ದಾರೆ ಎಂದು ಭಾರತೀಯ ರಫ್ತು ಸಂಸ್ಥೆ(ಎಫ್‍ಐಇಒ)ಯ ಮಹಾನಿರ್ದೇಶಕ(ಡಿಜಿ) ಡಾ.ಅಜಯ್ ಸಹಾಯ್ ಹೇಳಿದ್ದಾರೆ. ವರದಿಗಳ ಪ್ರಕಾರ, ತಾಲಿಬಾನ್ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

    ಅಫ್ಘಾನಿಸ್ತಾನದಲ್ಲಿನ ಪ್ರಕ್ಷುಬ್ಧತೆಯಿಂದಾಗಿ ಮುಂಬರುವ ದಿನಗಳಲ್ಲಿ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಎಫ್‍ಐಇಒ ಕಳವಳ ವ್ಯಕ್ತಪಡಿಸಿದೆ. ಭಾರತ ಶೇ.85ರಷ್ಟು ಡ್ರೈ ಫ್ರೂಟ್ಸ್ ನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಇದರ ನೇರ ಪರಿಣಾಮ ಭಾರತದ ಮೇಲಾಗುತ್ತಿದೆ. ಡ್ರೈ ಫ್ರೂಟ್ಸ್ ಗಳ ಬೆಲೆ ಗಗನಕ್ಕೇರುತ್ತಿದೆ. ಹಬ್ಬಗಳ ಸೀಸನ್‍ನಲ್ಲೇ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರ ಕಣ್ಣು ಕೆಂಪಾಗುವಂತೆ ಮಾಡಿದೆ.

    ಡಾ.ಅಜಯ್ ಸಹಾಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಪಾಕಿಸ್ತಾನದ ಮಾರ್ಗವಾಗಿ ಭಾರತಕ್ಕೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಪ್ರಸ್ತುತ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆ ನಿಲ್ಲಿಸಿದೆ, ಹೀಗಾಗಿ ಆಮದು ನಿಂತಿದೆ. ವಾಣಿಜ್ಯ ವಹಿವಾಟು ಶೀಘ್ರ ಆರಂಭವಾಗದಿದ್ದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಅಲ್ಲದೆ ವ್ಯಾಪಾರಿಗಳು ಪರ್ಯಾಯ ಪೂರೈಕೆ ಮೂಲಗಳನ್ನು ಹುಡುಕಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಇದನ್ನೂ ಓದಿ:ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    2020-21ನೇ ಆರ್ಥಿಕ ವರ್ಷದಲ್ಲಿ ಅಫ್ಘಾನಿಸ್ತಾನದೊಂದಿಗಿನ ಭಾರತದ ಆಮದು ಬಿಲ್ 3,753.47 ಕೋಟಿ ರೂ.ಗಳಾಗಿದ್ದು, ಅದರಲ್ಲಿ 2,389.86 ಕೋಟಿ ರೂ. ಖಾದ್ಯ ಹಣ್ಣುಗಳು, ನಟ್ಸ್ ಹಾಗೂ ಸಿಟ್ರಸ್ ಹಣ್ಣುಗಳಾಗಿವೆ.

    ಅಫ್ಘಾನ್-ಭಾರತದ ವ್ಯಾಪಾರ ವಹಿವಾಟು
    ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2020-21ರಲ್ಲಿ 1.4 ಬಿಲಿಯನ್ ಡಾಲರ್, 2019-20ರಲ್ಲಿ 1.52 ಬಿಲಿಯನ್ ಡಾಲರ್ ಆಗಿತ್ತು. ಭಾರತದಿಂದ 826 ಮಿಲಿಯನ್ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡಲಾಗುತ್ತಿತ್ತು. 2020-21ರಲ್ಲಿ 510 ಮಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ:ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

    ಆಮದು, ರಫ್ತುಗಳ ವಿವರ
    ಭಾರತಕ್ಕೆ ಅಫ್ಘಾನಿಸ್ತಾನ ಒಣ ದ್ರಾಕ್ಷಿ, ವಾಲ್‍ನಟ್, ಬಾದಾಮಿ, ಸಂಜೂರದ ಹಣ್ಣು, ಪೈನ್ ನಟ್ಸ್, ಪಿಸ್ತಾ, ಒಣಗಿದ ಏಪ್ರಿಕಾಟ್ ಹಾಗೂ ತಾಜಾ ಹಣ್ಣುಗಳಾದ ಏಪ್ರಿಕಾಟ್, ಚೆರ್ರಿ, ಕಲ್ಲಂಗಡಿ ಹಾಗೂ ಕೆಲ ಔಷಧಿ ಗಿಡಮೂಲಿಕೆಗಳನ್ನು ರಫ್ತು ಮಾಡುತ್ತಿತ್ತು. ಅದೇ ರೀತಿ ಭಾರತ ಅಫ್ಘಾನಿಸ್ತಾನಕ್ಕೆ ಚಹಾ, ಕಾಫಿ, ಮೆಣಸು, ಹತ್ತು, ಆಟಿಕೆಗಳು, ಪಾದರಕ್ಷೆಗಳು ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ರಫ್ತು ಮಾಡುತ್ತಿತ್ತು.

  • ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ಕಾಬೂಲ್: ನೀನು ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು ಎಂದು ಹೇಳಿ ಮಹಿಳಾ ಪತ್ರಕರ್ತೆಗೆ ಅಫ್ಘಾನಿಸ್ತಾನದ ಸರ್ಕಾರಿ ವಾಹಿನಿಯಿಂದ ಗೇಟ್‍ಪಾಸ್ ನೀಡಲಾಗಿದೆ.

    ನಾವು ಬದಲಾಗಿದ್ದೇವೆ. ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದಿದ್ದ ತಾಲಿಬಾನಿಗಳ ನಿಜ ರೂಪ ಈಗ ನಿಧಾನವಾಗಿ ಪ್ರಕಟವಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮಹಿಳಾ ಪತ್ರಕರ್ತರು ಕೆಲಸಕ್ಕೆ ಬರದಂತೆ ತಾಲಿಬಾನ್ ಸೂಚಿಸಿದೆ ಎಂದು RTA Pashto ನಿರೂಪಕಿ ಶಬ್ನಮ್ ದವ್ರನ್ ಹೇಳಿದ್ದಾರೆ. ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು ಈಗ ಅಲ್ಲಿ ತನಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ 

    ಶಬ್ನಮ್ ದವ್ರನ್ ಹೇಳಿದ್ದೇನು?
    ತಾಲಿಬಾನ್ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಮರುದಿನ ಬೆಳಿಗ್ಗೆ ನನ್ನ ಕಚೇರಿಗೆ ಹೋದೆ. ಅಲ್ಲಿ ನನ್ನನ್ನು ಕೆಲಸಕ್ಕೆ ಸೇರಿಸುವುದಿಲ್ಲ ಎಂದು ಹೇಳಿದರು. ಯಾಕೆ ಈ ನಿರ್ಧಾರ? ಕಾರಣ ಏನು ಎಂದು ಪ್ರಶ್ನಿಸಿದ್ದಕ್ಕೆ, ಅವರು ಈಗ ನಿಯಮಗಳು ಬದಲಾಗಿದೆ ಮತ್ತು ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎಂದು ಉತ್ತರಿಸಿದರು.   ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

    ಮಹಿಳೆಯರಿಗೆ ಅಧ್ಯಯನ ಮಾಡಲು ಮತ್ತು ಕೆಲಸಕ್ಕೆ ಹೋಗಲು ಅನುಮತಿ ನೀಡಲಾಗುವುದು ಎಂದು ತಾಲಿಬಾನ್ ಮೊದಲೇ ಘೋಷಿಸಿದಾಗ ನಾನು ಬಹಳ ಉತ್ಸುಕನಾಗಿದ್ದೆ. ಆದರೆ ನನ್ನ ಕಚೇರಿಯಲ್ಲಿ ನನಗೆ ವಾಸ್ತವ ಅನುಭವ ಆಗಿದೆ. ಅಲ್ಲಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂದು ನನಗೆ ಹೇಳಲಾಯಿತು. ನಾನು ಅವರಿಗೆ ನನ್ನ ಗುರುತಿನ ಚೀಟಿಯನ್ನು ತೋರಿಸಿದ್ದರೂ, ಅವರು ನನ್ನನ್ನು ಮನೆಗೆ ಹೋಗುವಂತೆ ಸೂಚಿಸಿದರು.

    ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸಕ್ಕೆ ಬರಬೇಡಿ ಎಂದು ಕೇಳಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಈ ರೀತಿಯ ಆದೇಶವನ್ನು ನೀಡಿಲ್ಲ. ನನ್ನ ಪುರುಷ ಸಹೋದ್ಯೋಗಿಗೆ ಕೆಲಸಕ್ಕೆ ಹೋಗಲು ಅನುಮತಿ ನೀಡಲಾಯಿತು. ಆದರೆ ನನಗೆ ಆಗಲಿಲ್ಲ. ಮಹಿಳೆಯರಿಗೆ ಇನ್ನು ಮುಂದೆ ಆರ್ ಟಿಎಯಲ್ಲಿ  ಕೆಲಸ ಮಾಡಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

    ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಏನಾಗಬಹುದು ಎಂಬ ಕಲ್ಪನೆ ನಮ್ಮೆಲ್ಲರಿಗೂ ಇತ್ತು. ಆದರೆ ಆ ಸಂದರ್ಶನದ ನಂತರ ನಿರ್ಧಾರಗಳು ಬದಲಾಗಬಹುದು. ಸದ್ಯಕ್ಕೆ, ನನಗೆ ಏನೂ ಅರ್ಥವಾಗುತ್ತಿಲ್ಲ. ಭವಿಷ್ಯದಲ್ಲಿ ಏನಾಗಲಿದೆ ಎಂದು ನನಗೆ ತಿಳಿದಿಲ್ಲ. ನಾನು ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಬದುಕುವುದು ಕಷ್ಟ. ನನಗೆ ಯಾರಾದರೂ ಇಲ್ಲಿ ಸಹಕಾರ ನೀಡಿದರೆ ಖಂಡಿತವಾಗಿಯೂ ನಾನು ಈ ದೇಶವನ್ನೇ ತೊರೆಯುತ್ತೇನೆ.

  • ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

    ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ

    ಕಾಬೂಲ್: ಅಫ್ಘಾನಿಸ್ತಾನವನ್ನು ಹಿಡಿತಕ್ಕೆ ಪಡೆದಿರುವ ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸ ನಿಂತಿಲ್ಲ. ಈಗ ಭಾರತೀಯ ರಾಯಭಾರ ಕಚೇರಿಗೆ ದಾಳಿ ಮಾಡಿ ದಾಖಲೆಗಳನ್ನು ಹುಡುಕಾಡಿದ್ದಾರೆ ಎಂದು ವರದಿಯಾಗಿದೆ.

    ಹೇರತ್ ಮತ್ತು ಕಂದಹಾರ್ ನಲ್ಲಿರುವ  ಭಾರತದ ರಾಯಭಾರ ಕಚೇರಿಗೆ ದಾಳಿ ಮಾಡಿರುವ ತಾಲಿಬಾನ್ ಉಗ್ರರು ದಾಖಲೆಗಳಿಗಾಗಿ ಹುಡುಕಾಡಿದ್ದಾರೆ ಮತ್ತು ರಾಯಭಾರ ಕಚೇರಿಯಲ್ಲಿದ್ದ ವಾಹನಗಳನ್ನು ಕೊಂಡೊಯ್ದಿದ್ದಾರೆ. ಕಾಬೂಲ್ ಮತ್ತು ಜಲಾಲಬಾದ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆದಿದ್ಯಾ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.

    ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಮತ್ತು ತಾಲಿಬಾನ್‍ನ ಉಪನಾಯಕ ಸಿರಾಜುದ್ದೀನ್ ಹಕ್ಕಾನಿಯ ಸಹೋದರ ಅನಸ್ ಹಕ್ಕಾನಿ ನೇತೃತ್ವದ ಹಕ್ಕಾನಿ ನೆಟ್‍ವರ್ಕ್‍ನ ಸುಮಾರು 6 ಸಾವಿರ ಕಾರ್ಯಕರ್ತರು ರಾಜಧಾನಿಯಾದ ಕಾಬೂಲ್ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ವರದಿಯಾಗಿದೆ.

    ಅಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಎನ್‍ಡಿಎಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದವರಿಗೆ ಮನೆ ಮನೆಯಲ್ಲೂ ತಾಲಿಬಾನ್ ಬಂದೂಕುಧಾರಿಗಳು ಹುಡುಕಾಡುತ್ತಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಇನ್ನೂ 450 ಭಾರತೀಯರು ಸಿಲುಕಿಕೊಂಡಿದ್ದು ಅವರನ್ನು ಭಾರತಕ್ಕೆ ವಾಪಸ್ ಕರೆತರುವುದೇ ಈಗ ಸರ್ಕಾರಕ್ಕೆ ಸವಾಲಾಗಿದೆ. ಅಮೆರಿಕ ಮತ್ತು ಇತರೆ ರಾಯಭಾರ ಕಚೇರಿಗಳ ಮೂಲಕ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ವಿದೇಶಾಂಗ ಸಚಿವಾಲಯ ಮಾಡುತ್ತಿದೆ. ಇದನ್ನೂ ಓದಿ: ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ 

    ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡು ನಾಲ್ಕು ದಿನವಾದ್ರೂ ಇನ್ನೂ ಅಲ್ಲಿ ಸರ್ಕಾರ ರಚನೆ ಆಗಿಲ್ಲ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರುವುದೇ ಹರಸಾಹಸವಾಗಿದೆ. ಪ್ರತಿ ಚೆಕ್‍ಪೋಸ್ಟ್‍ಗಳಲ್ಲೂ ಬಂದೂಕುಧಾರಿ ತಾಲಿಬಾನಿಗಳು ತಪಾಸಣೆ ಮಾಡ್ತಿರುವ ಕಾರಣ ತಾಲಿಬಾನಿಗಳ ಅಧಿಕೃತ ಒಪ್ಪಿಗೆ ಸಿಗದ ಹೊರತು ಜೀವಭಯದಿಂದಾಗಿ ಕಾಬೂಲ್‍ನಲ್ಲಿ ಸಿಲುಕೊಂಡಿರುವ ಕೆಲವು ಭಾರತೀಯರು ಮನೆಬಿಟ್ಟು ಹೊರಬರಲು ಸಿದ್ಧರಿಲ್ಲ.

    ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತದ ರಾಯಭಾರ ಕಚೇರಿಗೆ 10 ಕಿಲೋ ಮೀಟರ್ ದೂರವಿದೆ. ವಿಮಾನ ನಿಲ್ದಾಣಕ್ಕೆ ಅಮೆರಿಕ ಸೈನಿಕರ ಪಹರೆ ಇದ್ದರೂ ಹೊರಗಿನ ಭದ್ರತೆ ಅಮೆರಿಕ ಸೈನಿಕರ ಕೈಯಲ್ಲಿ ಇಲ್ಲ. ಹೀಗಾಗಿ ತಾಲಿಬಾನಿಗಳ ಸ್ಥಳೀಯ ನಾಯಕರೊಂದಿಗೆ ಸಂಪರ್ಕ ಸಾಧಿಸುವುದು ಕೂಡಾ ಸವಾಲಾಗಿದೆ ಎಂದು ವರದಿ ಆಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್

    ನಾಲ್ಕು ದಿನಗಳ ಹಿಂದೆ ಭಾರತದ ರಾಜತಾಂತ್ರಿಕ ಸಿಬ್ಬಂದಿ, ಸೈನಿಕರನ್ನು ಕರೆತರುವ ವೇಳೆ ಚೆಕ್‍ಪೋಸ್ಟ್ ನಲ್ಲಿ ತಾಲಿಬಾನಿಗಳು ತಡೆಹಾಕಿದ್ದರು. ಆ ಬಳಿಕ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಕರೆತರಲು ಭಾರತಕ್ಕೆ 1 ದಿನ ಹಿಡಿದಿತ್ತು.

  • ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಾರಂಭಿಸಿದ್ದರು. ಈ ವೇಳೆ ಅಮೆರಿಕಾಗೆ ತೆರಳಲುತ್ತಿದ್ದ ವಿಮಾನ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನದ ಮೇಲಿಂದ ಮೂವರು ಬಿದ್ದಿದ್ದರು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಮೂವರಲ್ಲಿ ಓರ್ವ ಅಘ್ಘಾನ್‍ನ ಯುವ ಫುಟ್‍ಬಾಲ್ ಆಟಗಾರ ಎಂದು ವರದಿಯಾಗಿದೆ.

    ಆಗಸ್ಟ್ 16ರಂದು ಅಘ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ ವಿಮಾನಗಳನ್ನೇರಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿಮಾನದಿಂದ ಮೂವರು ಕೆಳಗೆ ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಆ ಮೂವರಲ್ಲಿ ಒಬ್ಬರು ಶಫೀವುಲ್ಲಾ ಮತ್ತೊಬ್ಬರು ಫಿದಾ ಮೊಹಮ್ಮದ್ ಎಂದು ಗುರುತು ಪತ್ತೆಯಾಗಿತ್ತು. ಬಳಿಕ ಇದೀಗ ಇನ್ನೊಬ್ಬರ ಗುರುತು ಕೂಡ ಪತ್ತೆಯಾಗಿದ್ದು ಅವರನ್ನು ಅಘ್ಘಾನಿಸ್ತಾನದ ಯುವ ಫುಟ್‍ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಅಘ್ಘಾನಿಸ್ತಾನದ ರಾಷ್ಟ್ರೀಯ ಫುಟ್‍ಬಾಲ್ ತಂಡ ಯುವ ಆಟಗಾರರಾದ ಝಾಕಿ ಅನ್ವಾರಿ ಅವರ ಸಾವಿನ ಬಗ್ಗೆ ದೃಢಪಡಿಸಿ ಸಂತಾಪ ಸೂಚಿಸಿದೆ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

    ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ.

    ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ.  ಇದನ್ನೂ ಓದಿ: ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಕಾಬೂಲ್: ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮುಂದುವರಿದಿದೆ. ಇದೀಗ ಅಘ್ಘಾನ್ ಕ್ರಿಕೆಟ್ ಮಂಡಳಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ತಾಲಿಬಾನಿಗಳು ಕಸರತ್ತು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ತಾಲಿಬಾನಿಗಳು ಅಘ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಗೆ ಮುತ್ತಿಗೆ ಹಾಕಿ ಅಲ್ಲಿನ ಮಾಜಿ ಕ್ರಿಕೆಟಿಗರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದ್ದು, ಕೆಲದಿನಗಳ ಹಿಂದೆ ಕ್ರಿಕೆಟ್ ತಂಡಕ್ಕೂ ತಾಲಿಬಾನಿಗಳು ಕಾಟ ಕೊಡುವ ಬಗ್ಗೆ ಅಲ್ಲಿನ ಕ್ರಿಕೆಟ್ ಆಟಗಾರರು ತಮ್ಮ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಐಸ್‍ಕ್ರೀಮ್ ಸವಿದು, ಜಿಮ್ ಮಾಡಿ ಫುಲ್ ಎಂಜಾಯ್ ಮೂಡ್‍ನಲ್ಲಿ ತಾಲಿಬಾನಿಗಳು

    ತಾಲಿಬಾನ್ ಉಗ್ರರು ಅಘ್ಘಾನಿಸ್ತಾನದ ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಘ್ಘಾನಿಸ್ತಾನದ ಕ್ರಿಕೆಟಿಗರ ಭವಿಷ್ಯ ಅಪಾಯಕ್ಕೆ ಸಿಲುಕಿದೆ. ಈ ನಡುವೆ ಅಘ್ಘಾನಿಸ್ತಾನ ತಂಡ ಮುಂಬರುವ ಟಿ20 ವಿಶ್ವಕಪ್‍ಗೂ ಅರ್ಹತೆ ಪಡೆದುಕೊಂಡಿದೆ.

    ಅಘ್ಘಾನಿಸ್ತಾನದ ಸ್ಟಾರ್ ಕ್ರಿಕೆಟರ್ ರಶೀದ್ ಖಾನ್, ಅಘ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಿದ್ದಾರೆ. ಜನರು ಭಯ ಭೀತಿಯಿಂದ ದೇಶ ತೊರೆಯುತ್ತಿದ್ದಾರೆ. ಇವೆಲ್ಲವನ್ನೂ ನೋಡಿ ನನಗೆ ನಿದ್ದೆ ಮಾಡಲಾಗುತ್ತಿಲ್ಲ. ದಯವಿಟ್ಟು ಎಲ್ಲರೂ ನಮಗಾಗಿ ಪ್ರಾರ್ಥಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್