Tag: Talakaveri

  • ದುರಂತದ ಬಳಿಕ ತಲಕಾವೇರಿಯಲ್ಲಿ ನಾಳೆ ಪೂಜೆ ಪ್ರಾರಂಭ

    ದುರಂತದ ಬಳಿಕ ತಲಕಾವೇರಿಯಲ್ಲಿ ನಾಳೆ ಪೂಜೆ ಪ್ರಾರಂಭ

    – ನಾಳೆ ಪೂಜೆಗೆ ಪೂರ್ವ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

    ಮಡಿಕೇರಿ: ತಲಕಾವೇರಿಯಲ್ಲಿ ನಾಳೆಯಿಂದ ಪೂಜೆ ನೆರವೇರುವುದರಿಂದ ದೇವಾಲಯದಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್.ಕೆ.ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಸಾಲಿನ ಗಜರಾಜಗಿರಿ ಬೆಟ್ಟ ಕುಸಿದಿದ್ದರಿಂದ ಇಲ್ಲಿ ಪೂಜಿಸುತ್ತಿದ್ದ ಪ್ರಧಾನ ಅರ್ಚಕರ ಕುಟುಂಬವೇ ಕಣ್ಮರೆ ಆಗಿದೆ. ಹೀಗಾಗಿ ವಾರದಿಂದ ತಲಕಾವೇರಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ.

    ನಾಳೆ ತಲಕಾವೇರಿಯಲ್ಲಿ ಪೂಜೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಥಳಕ್ಕೆ ಭೇಟಿ ನೀಡಿದರು. ಇದೇ ವೇಳೆ ದೇವಾಲಯಕ್ಕೆ ಸಂಪರ್ಕ ಸಲ್ಪಿಸುವ ರಸ್ತೆ ಮೇಲೆಯೇ ಮಣ್ಣಿನ ರಾಶಿ ಹಾಗೂ ಕೆಸರು ಬಿದ್ದಿರುವುದನ್ನು ಕಂಡು, ನಾಳೆಯೊಳಗೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ನಾಳೆಯಿಂದ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಿಂದ ಇದೇ ಮೊದಲ ಬಾರಿ ಇಷ್ಟು ದಿನಗಳು ತಲಕಾವೇರಿಯಲ್ಲಿ ಪೂಜೆ ಸ್ಥಗಿತಗೊಂಡಿದ್ದವು.

  • ‘ವಿಮಾನ ಅಪ್ಪಳಿಸಿದಂತೆ ಕೇಳಿದ್ದು, ರಾತ್ರಿಯೇ ಓಡಿದ್ವಿ- ಕಿ.ಮೀಗಟ್ಟಲೆ ದೂರದಿಂದ ಕೊಚ್ಚಿ ಬಂದವು ಸಾವಿರಾರು ಮರಗಳು’

    ‘ವಿಮಾನ ಅಪ್ಪಳಿಸಿದಂತೆ ಕೇಳಿದ್ದು, ರಾತ್ರಿಯೇ ಓಡಿದ್ವಿ- ಕಿ.ಮೀಗಟ್ಟಲೆ ದೂರದಿಂದ ಕೊಚ್ಚಿ ಬಂದವು ಸಾವಿರಾರು ಮರಗಳು’

    – ಭೀಕರ ದೃಶ್ಯದ ಅನುಭವ ಹಂಚಿಕೊಂಡ ಚೇರಂಗಾಲ ಗ್ರಾಮಸ್ಥರು
    – ತಲಕಾವೇರಿಯಲ್ಲಿ ಕುಸಿದ ಭೂಮಿ
    – ಜೋಡುಪಾಲದಲ್ಲಿ ಸಂಭವಿಸಿದಂತೆ ಮತ್ತೆ ಭೂಕುಸಿತ

    ಮಡಿಕೇರಿ: “ಕೊಡಗಿನಲ್ಲಿ ಮಳೆ ಬರುವುದು ಸಾಮಾನ್ಯ. ಆದರೆ ನಿನ್ನೆ ರಾತ್ರಿ ವಿಮಾನ ಅಪ್ಪಳಿಸದಂತೆ ಏನೋ ಧ್ವನಿ ಕೇಳಿತು. ಕೂಡಲೇ ನಾವೆಲ್ಲ ಮನೆಯಿಂದ ಹೊರ ಬಂದೆವು. ನೋಡಿದಾಗ ಮನೆಯ ಮುಂಭಾಗವೇ ನೀರಿನಲ್ಲಿ ಭಾರೀ ಸಂಖ್ಯೆಯ ಮರಗಳನ್ನು ನೋಡಿ ಜೀವ ಉಳಿಸಿದರೆ ಸಾಕು ಎಂದು ಭಾವಿಸಿ ಮನೆಯನ್ನು ಖಾಲಿ ಮಾಡಿದೆವು” – ಇದು ಕೊಡಗಿನ ಚೇರಂಗಾಲದ ಗ್ರಾಮಸ್ಥರು ರಾತ್ರಿ ನಡೆದ ಘಟನೆಯನ್ನು ವಿವರಿಸಿದ ರೀತಿ.

    ಎರಡು ವರ್ಷದ ಹಿಂದೆ ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ಸಂಭವಿಸಿದಂತೆ ಮತ್ತೆ ಚೇರಂಗಾಲದಲ್ಲಿ ಭೂ ಕುಸಿತ ಸಂಭವಿಸಿದೆ. ತಲಕಾವೇರಿ ಕಾಡಿನಿಂದ ಸಾವಿರಾರು ಮರಗಳು ನೀರಿನ ಚಿಕ್ಕ ಕೊಲ್ಲಿಯಲ್ಲಿ ತೇಲಿಕೊಂಡು ಬಂದಿದ್ದು, ಗ್ರಾಮದ ಮನೆಗಳ ಮುಂಭಾಗ ಶೇಖರಣೆಯಾಗಿವೆ. ಇದರಿಂದಾಗಿ ಕೊಲ್ಲಿಯ ನೀರೆಲ್ಲ ಮನೆಗೆ ನುಗ್ಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ.

    ರಾತ್ರಿ 9ಗಂಟೆ ಹೊತ್ತಿಗೆ ವಿಮಾನ ಅಪ್ಪಳಿಸಿದ ಹಾಗೆ ಭಾರೀ ಶಬ್ದ ಕೇಳಿತು, ಆಗ ಕೊಲ್ಲಿಯಲ್ಲಿ ರಭಸವಾಗಿ ನೀರು ಹರಿದು ಬಂದಿದ್ದು, ಇದರೊಂದಿಗೆ ಸಾವಿರಾರು ಮರಗಳು ಸಹ ತೇಲಿ ಬಂದಿವೆ. ನೀರು ಮನೆಗೆ ನುಗ್ಗಿದ್ದು, ಕುಟುಂಬಸ್ಥರು ಪಕ್ಕದ ಮನೆಗೆ ಹೋಗಿದ್ದಾರೆ. ಇಂತಹ ಅನಾಹುತ ಇಲ್ಲಿಯವರೆಗೆ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

    ಕಾಡು ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಿಂದ ಮರಗಳು ಕೊಚ್ಚಿ ಬಂದಿದ್ದು, ಮರಗಳ ರಾಶಿ ಕೊಲ್ಲಿಯಲ್ಲಿ ನಿಂತಿದ್ದರಿಂದ ಕೊಲ್ಲಿಯ ನೋರು ಮನೆಗೆಳಿಗೆ ನುಗ್ಗಿದೆ. ಅಲ್ಲದೆ ಮರಗಳ ಹೊಡೆತಕ್ಕೆ ವಿದ್ಯುತ್ ಕಂಬಗಳು ಬಿದ್ದಿವೆ. ಹೀಗಾಗಿ ಮನೆಯ ವಿದ್ಯುತ್ ಸಂಪರ್ಕ ಸಹ ಕಡಿತವಾಗಿದೆ. ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಸೇತುವೆ ಕೊಚ್ಚಿ ಹೋಗಿದ್ದರಿಂದ ಇಲ್ಲಿನ 10 ಮನೆಗಳಿಗೆ ಸಂಪರ್ಕವಿಲ್ಲ. ಇದರಿಂದಾಗಿ ಹೊರಗಿನವರಿಗೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಪಿಡಿಒಗೆ ಮಾಹಿತಿ ನೀಡಲಾಗಿದೆ. ಭಾಗಮಂಡಲದ ಸಂಪರ್ಕ ಸಹ ಕಡಿತವಾಗಿದ್ದರಿಂದ ಗ್ರಾಮಸ್ಥರೂ ಎಲ್ಲಿಗೂ ಹೋಗದ ಸ್ಥಿತಿಯಲ್ಲಿದ್ದಾರೆ. ನಮಗೆ ಏನಾದರೂ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

  • ಕುಲದೇವಿಯ ದರ್ಶನಕ್ಕಿಲ್ಲ ಬಸ್ ಭಾಗ್ಯ – ಭಕ್ತರಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ

    ಕುಲದೇವಿಯ ದರ್ಶನಕ್ಕಿಲ್ಲ ಬಸ್ ಭಾಗ್ಯ – ಭಕ್ತರಿಂದ ಜನಪ್ರತಿನಿಧಿಗಳಿಗೆ ಹಿಡಿಶಾಪ

    ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.

    ಭಕ್ತಿಯ ಕ್ಷೇತ್ರವಾಗಿರುವ ತಲಕಾವೇರಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಬಂದು ಹೋಗುತ್ತಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಗ್ಗೆ 7.30 ರಿಂದ 8.30 ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆ.ಎಸ್.ಆರ್.ಟಿ.ಸಿ ಬಸ್ ಮಾತ್ರ ತಲಕಾವೇರಿಗೆ ತೆರಳುತ್ತದೆ. ಆ ನಂತರ ಯಾವುದೇ ಬಸ್‍ಗಳ ಸಂಚಾರ ಇರುವುದಿಲ್ಲ.

    ಇದರಿಂದ ಭಕ್ತರು ಮಾತ್ರವಲ್ಲದೆ ಸ್ಥಳೀಯ ಗ್ರಾಮಸ್ಥರಿಗೂ ಅನಾನುಕೂಲವಾಗಿದೆ. ಭಾಗಮಂಡಲದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಕಳೆದ ಮಳೆಗಾಲದಲ್ಲಿ ಸಂಚಾರ ಅಸ್ತವ್ಯಸ್ಥಗೊಂಡ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ. ಆದರೆ ಕೆ.ಎಸ್.ಆರ್.ಟಿ.ಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಬಸ್‍ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜ್ಯದ ಎಲ್ಲಾ ಪುಣ್ಯಕ್ಷೇತ್ರಗಳಿಗೂ ಅಗತ್ಯವಿರುವಷ್ಟು ಬಸ್‍ಗಳ ವ್ಯವಸ್ಥೆಯನ್ನು ಕೆ.ಎಸ್.ಆರ್.ಟಿ.ಸಿ ಮಾಡಿದೆ. ಆದರೆ ಕನ್ನಡ ನಾಡಿನ ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಜೀವನದಿ ಕಾವೇರಿಯ ಕ್ಷೇತ್ರಕ್ಕೆ ಬಸ್‍ಗಳನ್ನೇ ನಿಯೋಜಿಸದೆ ಅನ್ಯಾಯ ಮಾಡಲಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ವ್ಯವಸ್ಥೆ ಸಾರ್ವಜನಿಕರ ಸೇವೆಗಾಗಿ ಇದೆಯೇ ಹೊರತು ಲಾಭ ಮಾಡುವುದಕ್ಕಾಗಿ ಅಲ್ಲ. ಆದ್ದರಿಂದ ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

  • ಬ್ರಹ್ಮಕುಂಡಿಕೆಯಲ್ಲಿ ಉದ್ಭವಿಸಿದ ಕೊಡಗಿನ ಕುಲದೇವತೆ

    ಬ್ರಹ್ಮಕುಂಡಿಕೆಯಲ್ಲಿ ಉದ್ಭವಿಸಿದ ಕೊಡಗಿನ ಕುಲದೇವತೆ

    – ಪುಣ್ಯಸ್ನಾನದಲ್ಲಿ ಮಿಂದೆದ್ದ ಭಕ್ತಸ್ತೋಮ

    ಮಡಿಕೇರಿ: ಕೊಡಗಿನ ಕುಲದೇವತೆ ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ. ಈ ಅಪರೂಪದ ಕ್ಷಣಗಳಿಗೆ ಉಸ್ತುವಾರಿ ಸಚಿವ ವಿ ಸೋಮಣ್ಣ ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಾಕ್ಷಿಯಾದರು.

    ಅತ್ತ ಭಾವ ಪರವಶರಾಗಿ ಕಾವೇರಿ ಭಕ್ತರು ಸ್ತುತಿಸುತ್ತಿದ್ದರೆ, ಇತ್ತ ಪುರೋಹಿತರು ಮಹಾ ಸಂಕಲ್ಪ ಪೂಜೆ, ಮಹಾಪೂಜೆ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಮಾಡುತ್ತಿದ್ದರು. ನಿಗದಿಯಂತೆ ರೋಹಿಣಿ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ರಾತ್ರಿ 12 ಗಂಟೆ 57 ನಿಮಿಷಕ್ಕೆ ಸರಿಯಾಗಿ ವಿಶ್ವಕ್ಕೆ ತನ್ನ ದರ್ಶನ ನೀಡಿದಳು.

    ಭಕ್ತರ ಸಂತಸ ಭಕ್ತಿ ಭಾವಕ್ಕೆ ಪಾರವೇ ಇರಲಿಲ್ಲ. ಅಲೆ ಅಲೆಯಾಗಿ ತೂಗುತ್ತಾ ತೀರ್ಥಕುಂಡಿಕೆಯಿಂದ ಪವಿತ್ರ ಜಲ ಉಕ್ಕಿಬಂದಿದ್ದನ್ನು ಕಂಡ ಭಕ್ತರು “ಜೈ ಜೈಮಾತಾ, ಕಾವೇರಿ ಮಾತಾ” ಎಂದು ಘೋಷ ಮೊಳಗಿಸುತ್ತಾ ಕಾವೇರಿ ಮಾತೆಯ ದರ್ಶನ ಪಡೆದು ಪುನೀತರಾದರು.

    ಕಾವೇರಿ ತನ್ನ ಸಹೋದರಿ ಗಂಗೆಯೊಂದಿಗೆ ಸೇರಿ ತುಲಾ ಸಂಕ್ರಮಣದ ಈ ಕಾಲದಲ್ಲಿ ತೀರ್ಥ ಸ್ವರೂಪಿಣಿಯಾಗಿ ಉಕ್ಕಿಬರುತ್ತಾಳೆ. ಈ ಸಮಯದಲ್ಲಿ ತಲಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸಂಗ್ರಹ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಉಸ್ತುವಾರಿ ಸಚಿವ ವಿ ಸೋಮಣ್ಣ, ಕಂದಾಯ ಸಚಿವ ಆರ್ ಅಶೋಕ್, ವಿರಾಜಪೇಟೆ ಶಾಸಕ ಕೆ. ಜಿ ಬೋಪಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಆಗಮಿಸಿದ್ದರು.

    ತೀರ್ಥ ಉದ್ಭವವಾದ ಒಂದು ತಿಂಗಳ ಕಾಲ ತುಲಾ ಸಂಕ್ರಮಣ ಮಹೋತ್ಸವ ನಡೆಯಲಿದ್ದು, ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಭಕ್ತರು ತಲಕಾವೇರಿಗೆ ಭೇಟಿ ನೀಡಿ ತಾಯಿ ಕೃಪೆಗೆ ಪಾತ್ರರಾಗಲಿದ್ದಾರೆ.

  • ತಲಕಾವೇರಿಯಲ್ಲಿ ತೀರ್ಥೋದ್ಭವ ತಯಾರಿ – ಮಧ್ಯರಾತ್ರಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ

    ತಲಕಾವೇರಿಯಲ್ಲಿ ತೀರ್ಥೋದ್ಭವ ತಯಾರಿ – ಮಧ್ಯರಾತ್ರಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ

    ಮಡಿಕೇರಿ: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

    ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ. ಮಧ್ಯರಾತ್ರಿ 12.59ಕ್ಕೆ ಸಲ್ಲುವ ಕರ್ಕಾಟಕ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರಲಿದೆ. ಈ ವಿಸ್ಮಯ ನೋಡಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ನೆರವೇರಲಿದೆ.

    ಇಂದು ಸಂಜೆ ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ ಕಾವೇರಿ ಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಮಂಡ್ಯ, ಮೈಸೂರು, ಹಾಸನ ಸೇರಿ ರಾಜ್ಯ, ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸಲಿದ್ದು, ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಕಾವೇರಿ ಮಾತೆಯ ದರ್ಶನ ಪಡೆಯಲಿದ್ದಾರೆ. ಹೀಗಾಗಿ ಈಗಾಗಲೇ ಲೈಟಿಂಗ್ ವ್ಯವಸ್ಥೆ, ಭದ್ರತೆಗಾಗಿ ಸಿಸಿಟಿವಿ ಸೇರಿ 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.

    ತಲಕಾವೇರಿಯಲ್ಲಿ ಭಕ್ತರು ತೀರ್ಥಸ್ವರೂಪಿಣಿ ಕಾವೇರಿಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ತೀರ್ಥೋದ್ಭವದ ವಿಸ್ಮಯವನ್ನ ನೋಡಲು ಭಕ್ತರ ದಂಡೇ ತಲಕಾವೇರಿಗೆ ಆಗಮಿಸುತ್ತಿದೆ.

  • ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಬಿರುಕು

    ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಬಿರುಕು

    ಮಡಿಕೇರಿ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಸತತ ಮಳೆ ಭಾರೀ ಅವಾಂತರ ಸೃಷ್ಟಿ ಮಾಡಿದ್ದು, ಪರಿಣಾಮ ಕಾವೇರಿ ತಾಯಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದೆ. ಕೊಡವರ ಕುಲ ದೈವ ಕಾವೇರಿಯ ತವರು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಿರುಕು ಕಾಣಿಸಿಕೊಂಡಿದ್ದು, ಇಲ್ಲಿ ಕಳೆದ 15 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬಿರುಕು ಮೂಡಿತ್ತು. ಇದೀಗ ಮತ್ತೆ ಪವಿತ್ರ ಕ್ಷೇತ್ರ ತಲಕಾವೇರಿಯ ಜಲಮೂಲದ ನೆಲೆಯಾಗಿರುವ ಬ್ರಹ್ಮಗಿರಿ ಬೆಟ್ಟದಲ್ಲೂ ಬೃಹತ್ ಬಿರುಕು ಕಾಣಿಸಿಕೊಂಡಿದೆ.

    ದೇಶದ ಜೀವನದಿಯ ಉಗಮ ಸ್ಥಾನ, ಕೊಡಗಿನ ಪವಿತ್ರ ಕ್ಷೇತ್ರ ತಲಕಾವೇರಿಯ ಜಲ ಮೂಲದ ನೆಲೆಯೆನಿಸಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಇದೀಗ ಆಪತ್ತು ತಲೆದೂರಿದೆ. ಈ ವರ್ಷದ ಜಲಸ್ಫೋಟದ ಮಳೆಯ ಆರ್ಭಟಕ್ಕೆ ಬೆಟ್ಟದ ಬಹುತೇಕ ಕಡೆ ಬಿರುಕು ಕಾಣಿಸಿಕೊಂಡಿದೆ. ಮೇಲ್ನೋಟಕ್ಕೆ ಅಪಾಯಕಾರಿ ಚಿತ್ರಣ ಮೂಡಿಸುತ್ತದೆ. ಅಲ್ಲದೆ ಬ್ರಹ್ಮಗಿರಿ ಬೆಟ್ಟದಲ್ಲಿ ಕಳೆದ 15 ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು.

    ತಲಕಾವೇರಿಯಿಂದ ಒಂದು ಕಿ.ಮೀ ಮುಂದೆ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದು, ಕೋಳಿಕಾಡು ಪೈಸಾರಿ ಜಾಗದಲ್ಲಿ ಬೆಟ್ಟ ಕುಸಿಯುವ ಸ್ಥಳಕ್ಕೆ ಹೋಗಿ ವರದಿ ಮಾಡಿದ್ದರು. ಇದೀಗ ಮತ್ತೆ ಬ್ರಹ್ಮಗಿರಿ ತಪ್ಪಲಿನಲ್ಲಿ ದೂಡ್ಡ ಪ್ರಮಾಣದಲ್ಲಿ ಬೆಟ್ಟದ ಮೇಲೆ ಬಿರುಕು ಮೂಡುತ್ತಿದ್ದು ಸ್ಥಳೀಯರಲ್ಲಿ ಮತ್ತೆ ಅತಂಕ ಮನೆ ಮಾಡುತ್ತಿದೆ.

    ಸಾರ್ವಜನಿಕರ ಅಭಿಪ್ರಾಯದಂತೆ 2014ರಲ್ಲಿ ಅರಣ್ಯ ಇಲಾಖೆಯಿಂದ ಬ್ರಹ್ಮಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ಅಲ್ಲಲ್ಲಿ ತೆಗೆಯಲಾಯಿತು. ಅಲ್ಲದೆ ಅರಣ್ಯ ಸಸಿಗಳನ್ನು ನೆಡಲಾಯಿತು. ಅರಣ್ಯತೋಪು ಮತ್ತು ಇಂಗು ಗುಂಡಿಗಳ ಸಲುವಾಗಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಲಾಯಿತು. ಇದೇ ರೀತಿಯ ಕಾರ್ಯ 2016ರವರೆಗೂ ಮುಂದುವರಿಯಿತು. ಬ್ರಹ್ಮಗಿರಿ ಬೆಟ್ಟದಲ್ಲಿ ಈ ಯಂತ್ರಗಳನ್ನು ಬಳಸಿದ ಹಿನ್ನೆಲೆಯಲ್ಲಿ ನೆಲದ ಮಣ್ಣಿನ ಪದರ ಸಡಿಲಗೊಂಡು ಈಗಿನ ಮಳೆಯ ಸಂದರ್ಭ ಬೆಟ್ಟ ಬಿರುಕು ಬಿಟ್ಟು ಈ ದುರಂತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

    15 ದಿನಗಳ ಹಿಂದೆಯೂ ಭೂಮಿ ಬಿರುಕು ಬಿಟ್ಟಿದ್ದು, ಈಗ ಮತ್ತೆ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಮಿ ಬಿರುಕುಬಿಟ್ಟಿದೆ. ಬೆಟ್ಟದ ಮೇಲ್ಭಾಗದಲ್ಲಿ 10 ಅಡಿಗೂ ಹೆಚ್ಚು ಉದ್ದ ಆಳದ ಕಂದಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಕಾವೇರಿ ತಾಯಿಯ ಭಕ್ತರು ಆತಂಕಕ್ಕೆ ಒಳಗಾಗಿದ್ದಾರೆ.

  • ಪುರಾತನ ಲಿಂಗಕ್ಕಾಗಿ ಕಾವೇರುತ್ತಿದೆ ಜೀವನದಿ ತವರು..!

    ಪುರಾತನ ಲಿಂಗಕ್ಕಾಗಿ ಕಾವೇರುತ್ತಿದೆ ಜೀವನದಿ ತವರು..!

    ಮಡಿಕೇರಿ: ಕನ್ನಡಿಗರ ಪಾಲಿನ ಅನ್ನದಾತೆ. ಕೊಡಗಿನ ಜನರ ಕುಲದೇವತೆ ಜೀವನದಿ ಕಾವೇರಿಯ ಹುಟ್ಟು ನೆಲ ಈಗ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಭಕ್ತರು ಮತ್ತು ದೇವಾಲಯ ಆಡಳಿತ ಮಂಡಳಿ ನಡುವಿನ ಜಿದ್ದಿಗೆ ಕಾರಣವಾಗಿದೆ.

    ಜೀವನದಿ ಕಾವೇರಿ ತವರಲ್ಲಿ ನೂರಾರು ವರ್ಷ ಹಳೆಯದಾದ, ಅಗಸ್ತ್ಯ ಮುನಿ ಪ್ರತಿಷ್ಠಾಪನೆ ಮಾಡಿದ್ದು ಎನ್ನಲಾದ ಲಿಂಗವೊಂದನ್ನು ಅಗೆದು ತೆಗೆದಿರೋದು ಈಗ ವಿವಾದ ಸೃಷ್ಟಿಸಿದೆ. ಹಳೆಯ ಲಿಂಗದಲ್ಲಿ ದೈವಿಕ ಶಕ್ತಿ ಅಂತಾ ಅದನ್ನು ಮಣ್ಣಿನಡಿ ಹುದುಗಿಸಿ ಇಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ತಲಕಾವೇರಿಯಲ್ಲಿ ಕೇರಳದ ಜ್ಯೋತಿಷಿಗಳಾದ ನಾರಾಯಣ ಪೊದುವಾಳ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆದಿತ್ತು. ಆಗ ಹುದುಗಿಸಲಾಗಿದ್ದ ಹಳೆಯ ಲಿಂಗ ಇಲ್ಲಿನ ಬೆಳವಣಿಗೆಗೆ ತೊಡಕಾಗಿದೆ. ಮಾತ್ರವಲ್ಲದೇ ಅದನ್ನು ತೆಗೆದು ಬಂಗಾಳ ಕೊಲ್ಲಿಯ ಪೂಂಪ್‍ಹಾರ್‍ನಲ್ಲಿ ವಿಸರ್ಜಿಸಿದರೆ ದೋಷ ಪರಿಹಾರವಾಗುತ್ತದೆ ಎಂದು ಸಲಹೆ ನೀಡಿದ್ದರು. ಹೀಗಾಗಿ ದೇವಾಲಯ ಸಮಿತಿ ಮಣ್ಣಿನಡಿ ಹುದುಗಿಸಿದ್ದ ಲಿಂಗವನ್ನು ಅಗೆದು, ತೆಗೆದು ಪೂಂಪ್‍ಹಾರ್ ನಲ್ಲಿ ವಿಸರ್ಜನೆ ಮಾಡಲು ಮುಂದಾಗಿದೆ. ಇದು ಭಕ್ತರನ್ನು ಕೆರಳಿಸಿದೆ.

    ಹೊಸದಾಗಿ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿ ಭಕ್ತರನ್ನು ಗಣನೆಗೆ ತೆಗೆದುಕೊಳ್ಳದೆ ತನ್ನಿಚ್ಛೆಯಂತೆ ತೀರ್ಮಾನ ಕೈಗೊಳ್ಳುತ್ತಿದೆಯಂತೆ. ಕುಂಡಿಕೆ ಬಳಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯವಾದ ಕುಂಕುಮಾರ್ಚನೆ ಹಾಗೂ ತೀರ್ಥ ಪ್ರೋಕ್ಷಣೆಯನ್ನು ದೇವಾಲಯದ ಪೌಳಿಗೆ ಸ್ಥಳಾಂತರಿಸಲಾಗಿದೆ. ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಿದ್ದಕ್ಕೂ ಕಿಡಿಕಾರಿದ್ದಾರೆ. ನಾವು ಜ್ಯೋತಿಷಿಯ ಸಲಹೆಯಂತೆ ಲಿಂಗ ತೆಗೆದಿದ್ದೇವೆ. ಆದರೆ ಕೆಲವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದರ ಹಿಂದೆ ಕೆಲವು ವ್ಯಕ್ತಿಗಳ ಕೈವಾಡವೂ ಇದೆ ಅಂತಾ ದೇವಸ್ಥಾನದವರು ಆರೋಪಿಸಿದ್ದಾರೆ.

    ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲಿ ರಾಜಕೀಯ ಆಗುತ್ತಿದೆಯಂತೆ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ಮುಂದುವರಿಸಬೇಕು. ಸಮಿತಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲೇ ಗೊಂದಲ ಇದೆ. ಅನಾವಶ್ಯಕವಾಗಿ ಆಗಾಗ್ಗೆ ಅಷ್ಟಮಂಗಲ ಪ್ರಶ್ನೆ ನಡೆಸಿ ಭಕ್ತರಲ್ಲಿ ಗೊಂದಲ ಮೂಡಿಸುವ ಕಾರ್ಯ ಆಗುತ್ತಿದೆ ಎಂದು ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv