Tag: Tablo

  • ದಸರಾ ಸ್ತಬ್ಧ ಚಿತ್ರ ಸ್ಪರ್ಧೆ: ಮಂಡ್ಯಗೆ ಪ್ರಥಮ, ಧಾರವಾಡ ದ್ವಿತೀಯ – ಯಾವ ಜಿಲ್ಲೆಗಳಿಗೆ ಪ್ರಶಸ್ತಿ?

    ದಸರಾ ಸ್ತಬ್ಧ ಚಿತ್ರ ಸ್ಪರ್ಧೆ: ಮಂಡ್ಯಗೆ ಪ್ರಥಮ, ಧಾರವಾಡ ದ್ವಿತೀಯ – ಯಾವ ಜಿಲ್ಲೆಗಳಿಗೆ ಪ್ರಶಸ್ತಿ?

    ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಂಡ್ಯ (Mandya) ಜಿಲ್ಲೆ ರಂಗನತಿಟ್ಟು ಪಕ್ಷಿಧಾಮ (Ranganathittu Bird Sanctuary) ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು (KRS Dam) ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ.

    ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯ ಹಿರಿಮೆ ಮತ್ತು ಪ್ರತಿಷ್ಠೆಯಾದ ವಿಶ್ವವಿಖ್ಯಾತ ಕೆಆರ್‌ಎಸ್ ಜಲಾಶಯ ಹಾಗೂ ರಂಗನತಿಟ್ಟು ಪಕ್ಷಿಧಾಮದ ಪ್ರತಿರೂಪ ಮಾದರಿಯನ್ನು ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಕರ್ನಾಟಕದ ಪಕ್ಷಿಕಾಶಿ ಎಂದೇ ಹೆಸರುವಾಸಿಯಾಗಿರುವ ರಂಗನತಿಟ್ಟು ಪಕ್ಷಿಧಾಮ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಇದನ್ನೂ ಓದಿ: ದರ್ಶನ್‌, ಪವಿತ್ರಾಗೆ ನೋ ರಿಲೀಫ್‌ – ಕೋರ್ಟ್‌ ಜಾಮೀನು ನೀಡದ್ದು ಯಾಕೆ?

    ಯಾವ ಜಿಲ್ಲೆಗೆ ಯಾವ ಪ್ರಶಸ್ತಿ?
    ಪ್ರಥಮ – ಮಂಡ್ಯ (ರಂಗನತಿಟ್ಟು ಪಕ್ಷಿಧಾಮ ಹಾಗೂ ಕೆಆರ್‌ಎಸ್‌ ಅಣೆಕಟ್ಟು)
    ದ್ವಿತೀಯ – ಧಾರವಾಡ (ಇಸ್ರೊ ಗಗನಯಾನದಲ್ಲಿ ಹಣ್ಣಿನ ನೊಣಗಳು)
    ತೃತೀಯ – ಚಾಮರಾಜನಗರ (ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು)

    ಸಮಾಧಾನಕರ ಬಹುಮಾನ
    ಉಡುಪಿ – ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು
    ಗದಗ – ಗ್ರಾಮಸಭೆ–ಹಳ್ಳಿಯ ವಿಧಾನಸಭೆ
    ಮೈಸೂರು -ಮಾನವ ಕುಲದ ಸಮಾನತೆ–ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ
    ಚಿಕ್ಕಮಗಳೂರು – ತೇಜಸ್ವಿ ವಿಸ್ಮಯ ಲೋಕ

    ಇಲಾಖೆ, ನಿಗಮ ಹಾಗೂ ಮಂಡಳಿಗಳ ವಿಭಾಗ
    ಪ್ರಥಮ – ವಾರ್ತಾ ಇಲಾಖೆ (ವಿಶ್ವಗುರು ಬಸವಣ್ಣ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ)
    ದ್ವಿತೀಯ – ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಗ್ರಾಮೀಣ ಜನರ ಆರೋಗ್ಯದಲ್ಲಿ ಸುಸ್ಥಿರತೆ ಸಾಧಿಸುವುದು)
    ತೃತೀಯ – ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಮೈಸೂರು ಸ್ಯಾಂಡಲ್‌ವುಡ್‌ ಸೋಪು ಕಿರು ಪರಿಚಯ)

    ಸಮಾಧಾನಕರ ಬಹುಮಾನ
    ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ – ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
    ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ- ಸ್ವಸ್ಥ ಮೆದುಳು:ಸ್ಪಷ್ಟ ಮಾತು
    ಕಾರ್ಮಿಕ ಇಲಾಖೆ – ಕಾರ್ಮಿಕ ಹಿತರಕ್ಷಣೆ
    ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ – ನಿಗಮದ ಉತ್ಪನ್ನಗಳ ಮಾದರಿ

  • ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಶ್ಚಿಮ ಬಂಗಾಳ ಬಳಿಕ ಮಹಾರಾಷ್ಟ್ರ, ಬಿಹಾರ, ಕೇರಳ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕಾರ

    ಪಾಟ್ನಾ: ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ಸ್ತಬ್ಧಚಿತ್ರವನ್ನು ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‍ಗೆ ತಿರಸ್ಕರಿಸಲಾಗಿದೆ.

    ಬಿಹಾರ ಮಾಹಿತಿ ಕೇಂದ್ರ ಈ ಬಗ್ಗೆ ಸ್ಪಷ್ಟಗೊಳಿಸಿದೆ. ಪಶ್ಚಿಮ ಬಂಗಾಳ ನಂತರ ಮಹಾರಾಷ್ಟ್ರ, ಬಿಹಾರ, ಕೇರಳ ರಾಜ್ಯ ಕಳಿಸಿದ್ದ ಸ್ತಬ್ಧಚಿತ್ರಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಖಾತೆ ಮಾಹಿತಿ ಪ್ರಕಾರ, ತಜ್ಞರ ಸಮಿತಿಯ ಆಕ್ಷೇಪಣೆ ನಂತರ ಬಿಹಾರ ಸ್ತಬ್ಧಚಿತ್ರ ಪ್ರಸ್ತಾಪನೆಯನ್ನು ತಿರಸ್ಕರಿಸಲಾಗಿದೆ. ಪಶ್ಚಿಮ ಬಂಗಾಳ ಸರ್ಕಾರ ಕನ್ಯಾಶ್ರೀ, ಹಸಿರು ರಕ್ಷಣೆ -ಸ್ವಚ್ಛ ಪರಿಸರ ಹಾಗೂ ಜಲ ಧಾರೆ ಪರಿಕಲ್ಪನೆಯ ಪ್ರಸ್ತಾಪನೆಗಳನ್ನು ಸಲ್ಲಿಸಿತ್ತು. ವಿಶಿಷ್ಟ ಪರಿಕಲ್ಪನೆ ಟ್ಯಾಬ್ಲೋ ಆಯ್ಕೆಗೆ ಪ್ರಧಾನ ಮಾನದಂಡ. ಈ ಮೂರರಲ್ಲಿ ಯಾವುದೂ ವಿಶಿಷ್ಟವಲ್ಲ ಎಂದು ಪಶ್ಚಿಮ ಬಂಗಾಳದ ಟ್ಯಾಬ್ಲೋ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು.

    ಹಾಗೆಯೇ ಗಣರಾಜ್ಯೋತ್ಸವ ಪರೇಡ್‍ನ ಟ್ಯಾಬ್ಲೋಗಳಲ್ಲಿ ಯಾವುದೇ ರಾಜಕೀಯ ಪಕ್ಷ ಹಾಗೂ ರಾಜಕೀಯ ಅಜೆಂಡಾಗಳ ಪರಿಕಲ್ಪನೆ ಟ್ಯಾಬ್ಲೋ ಮಾಡುವಂತಿಲ್ಲ. ಆದರೆ ಬಿಹಾರ್ ಹಾಗೂ ಮಹಾರಾಷ್ಟ್ರ ರಾಜಕೀಯ ಪರಿಕ್ಪನೆ ಟ್ಯಾಬ್ಲೋಗಳ ಪ್ರಸ್ತಾವನೆ ಸಲ್ಲಿಸಿತ್ತು. ಆದ್ದರಿಂದ ಈ ರಾಜ್ಯಗಳ ಟ್ಯಾಬ್ಲೋಗಳನ್ನು ತಜ್ಞರ ಸಮಿತಿ ತಿರಸ್ಕರಿಸಿದೆ.

    ಈ ಬಗ್ಗೆ ಆರ್‍ಜೆಡಿ ವಕ್ತಾರ ಮ್ರಿತುಂಜನ್ ತಿವಾರಿ ಪ್ರತಿಕ್ರಿಯಿಸಿ, ಈ ಹಿಂದೆ ಕೇಂದ್ರ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ ಎಂಬ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈಗ ನಮ್ಮ ಗಣರಾಜ್ಯೋತ್ಸವದ ಟ್ಯಾಬ್ಲೋಗಳನ್ನು ತಿರಸ್ಕರಿದೆ. ಬಿಜೆಪಿ ಎರಡು ಇಂಜಿನ್ ಸರ್ಕಾರ ನಡೆಸುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದಾರೆ.

    ಇತ್ತ ಮಹಾರಾಷ್ಟ್ರ ಟ್ಯಾಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿದ್ದಕ್ಕೆ ಎನ್‍ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಟ್ಯಾಂಬ್ಲೋಗಳ ಪ್ರಸ್ತಾವಣೆ ತಿರಸ್ಕರಿಸಿದೆ. ಗಣರಾಜ್ಯೋತ್ಸವ ದೇಶದ ಹಬ್ಬ. ಆದ್ದರಿಂದ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಈ ಹಬ್ಬದಲ್ಲಿ ಭಾಗಿಯಾಗಲು ಅವಕಾಶ ಕೊಡಬೇಕು. ಆದರೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಕೆಲ ರಾಜ್ಯಗಳ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಗೆಯೇ ಕೇರಳ ಟ್ಯಾಂಬ್ಲೋ ಪ್ರಸ್ತಾವನೆ ತಿರಸ್ಕೃತಗೊಂಡಿರುವುದು ರಾಜಕೀಯ ಪ್ರೇರಿತ ಎಂದು ಕೇರಳ ಕಾನೂನು ಸಚಿವ ಎ.ಕೆ ಬಾಲನ್ ಕಿಡಿಕಾರಿದ್ದಾರೆ.

    ತಜ್ಞರ ಸಮಿತಿ ರಾಜ್ಯ, ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ ಇಲಾಖೆಗಳ ಟ್ಯಾಬ್ಲೋ ಪ್ರಸ್ತಾಪನೆಗಳನ್ನು ಪರಿಶೀಲಿಸಿ, ಗಣರಾಜ್ಯೋತ್ಸವ ಪರೇಡ್‍ನ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೋಗಳನ್ನು ಅಂತಿಮಗೊಳಿಸುತ್ತದೆ. 2020ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ರಾಜ್ಯಗಳಿಂದ 32 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 24 ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಒಟ್ಟು 22 ಪ್ರಸ್ತಾಪನೆಗಳನ್ನು ಅಂತಿಮ ಮಾಡಲಾಗಿದೆ.

  • ಗಣರಾಜ್ಯೋತ್ಸವದಲ್ಲಿ ಪ.ಬಂಗಾಳ ಟ್ಯಾಬ್ಲೋ ಇಲ್ಲ – ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

    ಗಣರಾಜ್ಯೋತ್ಸವದಲ್ಲಿ ಪ.ಬಂಗಾಳ ಟ್ಯಾಬ್ಲೋ ಇಲ್ಲ – ಪ್ರಸ್ತಾಪ ತಿರಸ್ಕರಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಜಟಾಪಟಿ ಮುಂದುವರಿದಿದ್ದು, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಪಶ್ಚಿಮ ಬಂಗಾಳ ಟ್ಯಾಬ್ಲೋ(ಸ್ತಬ್ಧಚಿತ್ರ) ಪ್ರದರ್ಶನ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ರಕ್ಷಣಾ ಸಚಿವಾಲಯಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ತಜ್ಞರ ಸಮಿತಿ ಎರಡು ಬಾರಿ ಟ್ಯಾಬ್ಲೋ ಮಾದರಿಯನ್ನು ಸಲ್ಲಿಕೆ ಮಾಡಿತ್ತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ 16 ರಾಜ್ಯಗಳಿಂದ 22, ಕೇಂದ್ರಾಡಳಿತ ಪ್ರದೇಶ ಹಾಗೂ 6 ಕೇಂದ್ರ ಸಚಿವಾಲಯಗಳ ಒಟ್ಟು 56 ಟ್ಯಾಬ್ಲೋಗಳು ಪ್ರದರ್ಶನಗೊಳ್ಳಲಿದೆ.

    ಪಶ್ಚಿಮ ಬಂಗಾಳ ಸಲ್ಲಿಕೆ ಮಾಡಿದ್ದ ಪ್ರಸ್ತಾಪಗಳನ್ನು 2 ಬಾರಿ ತಜ್ಞರ ಸಮಿತಿ ಸಭೆ ನಡೆಸಿ ಚರ್ಚೆ ನಡೆಸಿದ ಬಳಿಕ ತಿರಸ್ಕರಿಸಿದೆ. ಈ ಸಮಿತಿಯಲ್ಲಿ ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಒಳಗೊಂಡಿರುತ್ತದೆ. ತನ್ನ ನಿರ್ಧಾರವನ್ನು ಮಾಡುವ ಮೊದಲು ಸ್ತಬ್ಧಚಿತ್ರದ ಪರಿಕಲ್ಪನೆ, ವಿನ್ಯಾಸ ಮತ್ತು ದೃಶ್ಯ ಪ್ರಭಾವವನ್ನು ಪರಿಶೀಲನೆ ನಡೆಸುತ್ತದೆ. ಸಮಯದ ಅಭಾವದಿಂದ ಪ್ರಸ್ತಾವನೆಯಲ್ಲಿ ಬಂದಿರುವ ಪರಿಕಲ್ಪನೆಗಳಲ್ಲಿ ಉತ್ತಮವಾಗಿರುವುದನ್ನು ಮಾತ್ರ ಸಮಿತಿ ಆಯ್ಕೆ ಮಾಡುತ್ತದೆ.

    ಇತ್ತ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಕೆಲ ನಿರ್ಣಯಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇತ್ತೀಚೆಗಷ್ಟೇ ಸಿಎಂ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ಎನ್‍ಸಿಆರ್ ಹಾಗೂ ಪೌರತ್ವ ಕಾಯ್ದೆಯನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದರು.

  • ಮಳೆಯಲ್ಲೇ ಕೈಕೊಟ್ಟ ಮಳೆ ಕೊಯ್ಲು ಟ್ಯಾಬ್ಲೋ

    ಮಳೆಯಲ್ಲೇ ಕೈಕೊಟ್ಟ ಮಳೆ ಕೊಯ್ಲು ಟ್ಯಾಬ್ಲೋ

    ಉಡುಪಿ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ವರ್ಷಧಾರೆಯ ನಡುವೆಯೇ 73ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾಡಳಿತ ಕಡೆಯಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹೆಚ್ಚಿಸಿ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಪಂಚಾಯತ್ ಟ್ಯಾಬ್ಲೋ ಕೈಕೊಟ್ಟಿದೆ.

    ಜಲವರ್ಷ 2019- ಮಳೆ ನೀರು ಸಂರಕ್ಷಣೆಯನ್ನು ಸಾರುವ ಟ್ಲ್ಯಾಬ್ಲೋವನ್ನು ಉಡುಪಿ ಜಿಲ್ಲಾ ಪಂಚಾಯತ್ ಸಿದ್ಧಪಡಿಸಿತ್ತು. ಟ್ಯಾಬ್ಲೋವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ತಂದು ನಿಲ್ಲಿಸಲಾಗಿತ್ತು. ಪಥಸಂಚಲನ ನಂತರ ಇನ್ನೇನೋ ಮೈದಾನಕ್ಕೆ ಒಂದು ಸುತ್ತು ತರಬೇಕು ಎನ್ನುವಷ್ಟರಲ್ಲಿ ಭಾರೀ ಗಾಳಿ ಮಳೆಯಾಗಿದೆ. ಟ್ಯಾಬ್ಲೋ ವಾಹನ ನಿಂತಲ್ಲೇ ಕೈ ಕೊಟ್ಟಿದೆ.ಭಾರೀ ಮಳೆಗೆ ವಾಹನ ಚಾಲು ಆಗ್ತಿಲ್ಲ. ಕೆಟ್ಟು ನಿಂತಿದೆ ಸರ್ ಎಂದು ಚಾಲಕ ಪೊಲೀಸರಲ್ಲಿ ಹೇಳಿದ್ದಾನೆ.

    ತಳ್ಳಿ ಜರ್ಕ್ ಹಾಕುವ ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗಲೇ ಇಲ್ಲ. ಅಷ್ಟೊತ್ತಿಗೆ ಪಥ ಸಂಚಲನ ಮುಗಿದು ಡಿಸಿ ಭಾಷಣ ಶುರು ಮಾಡಿದ್ದರು. ಇನ್ನು ಟ್ಯಾಬ್ಲೋ ಮೈದಾನದ ಬದಿಯಲ್ಲೇ ನಿಂತಿದ್ದರೆ ಆಭಾಸ ಆಗುತ್ತೆ ಎಂದು ಸಂಬಂಧಪಟ್ಟವರು ಟ್ಯಾಬ್ಲೋವನ್ನು ಮೈದಾನದಿಂದ ಹೊರಕ್ಕೆ ತಳ್ಳಿ ಸೈಡಿಗಿಟ್ಟರು. ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ಮಳೆ ನೀರು ಉಳಿಸುವ ಜನಜಾಗೃತಿ ಕಾರ್ಯಕ್ರಮದ ಟ್ಯಾಬ್ಲೋ ಭಾರೀ ಮಳೆಗೇ ಕೈಕೊಟ್ಟಿದ್ದು ನಗೆಪಾಟಲಿಗೆ ಕಾರಣವಾಯಿತು.

  • ರಾಜಪಥ್ ರಸ್ತೆಯಲ್ಲಿ ಮೊದಲ ಬಾರಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು

    ರಾಜಪಥ್ ರಸ್ತೆಯಲ್ಲಿ ಮೊದಲ ಬಾರಿ ಪ್ರತಿಧ್ವನಿಸಲಿದೆ ಕನ್ನಡದ ಹಾಡು

    ನವದೆಹಲಿ: ಗಣರಾಜ್ಯೋತ್ಸವ ಆಚರಣೆಗೆ ಈಗ ದಿನಗಣನೆ ಶುರುವಾಗಿದೆ. ದೇಶದ ಹಬ್ಬಕ್ಕೆ ದೆಹಲಿಯ ರಾಜಪಥ ರಸ್ತೆ ಸಿಂಗಾರಗೊಳ್ಳುತ್ತಿದ್ದು, ಈ ಬಾರಿ ನಡೆಯಲಿರುವ ಟ್ಯಾಬ್ಲೊ ಪರೇಡ್ ಗಳಲ್ಲಿ ಗಾಂಧಿಯ ಶಾಂತಿ ಮಂತ್ರ ಪಠಣವಾಗಲಿದೆ.

    ದೇಶದ ಹಬ್ಬದ ಆಚರಣೆಗೆ ತಾಲೀಮು ಶುರುವಾಗಿದೆ. ಒಂದು ಕಡೆ ರಾಜಪಥ್ ರಸ್ತೆ ಸಿಂಗಾರಗೊಳ್ಳುತ್ತಿದರೆ, ಮತ್ತೊಂದು ಕಡೆ ದೇಶದ ಕಣ್ಮನ ಸೆಳೆಯಲು ಸ್ತಬ್ಧಚಿತ್ರಗಳು ತಯಾರಾಗುತ್ತಿವೆ. ಮಹಾತ್ಮ ಗಾಂಧೀಜಿ ಅವರ 150 ಜನ್ಮ ದಿನದ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಟ್ಯಾಬ್ಲೋ ಮೂಲಕ ಮಹಾತ್ಮ ಗಾಂಧಿಗೆ ವಿಶೇಷ ಗೌರವ ಸರ್ಮಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಪರೇಡ್ ನಲ್ಲಿ 17 ರಾಜ್ಯಗಳು ಭಾಗವಹಿಸುತ್ತಿದ್ದು, ಭಾಗವಹಿಸುತ್ತಿರುವ ಎಲ್ಲಾ ರಾಜ್ಯಗಳಿಗೂ ಮಹಾತ್ಮ ಗಾಂಧಿ ವಸ್ತು ವಿಷಯ ಆಧರಿಸಿ ಪ್ರತಿ ರಾಜ್ಯದಲ್ಲಿ ಗಾಂಧಿ ಬಿಟ್ಟು ಹೋಗಿರುವ ನೆನಪುಗಳು ಆಯ್ದು ಸ್ತಬ್ಧ ಚಿತ್ರಗಳನ್ನು ರಚನೆ ಮಾಡಲಾಗುತ್ತಿದೆ.

    ಕರ್ನಾಟಕದಿಂದಲೂ ಸ್ತಬ್ದಚಿತ್ರ ಪ್ರದರ್ಶನಕ್ಕೆ ಭರ್ಜರಿ ತಯಾರಿ ನಡೆದಿದೆ. ಸತತ ಹತ್ತು ವರ್ಷಗಳು ರಾಜಪಥ್ ರಸ್ತೆಯಲ್ಲಿ ಕರ್ನಾಟಕದ ತೇರು ಓಡಿಸಲು ಅವಕಾಶ ಸಿಕ್ಕಿದ್ದು ಈ ಬಾರಿಯೂ ರಾಜ್ಯದ ಸಂಸ್ಕೃತಿ ಅನಾವರಣಗೊಳ್ಳಲಿದೆ. 1924ರಲ್ಲಿ ಮೊದಲ ಬಾರಿ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‍ನ 39ನೇ ಬೆಳಗಾವಿ ಅಧಿವೇಶನದ ಕಥಾವಸ್ತುವನ್ನು ಕರ್ನಾಟಕ ಆಯ್ಕೆ ಮಾಡಿದ್ದು, ಕಲಾ ನಿರ್ದೇಶಕ ಶಶಿಧರ್ ಹಡಪಾ ನೇತೃತ್ವದಲ್ಲಿ 50 ಮಂದಿ ಕಲಾವಿದರು ರಚಿಸಿರುವ ರಾಜ್ಯದ ಸ್ತಬ್ಧ ಚಿತ್ರ ಕಣ್ಮನ ಸೆಳೆಯುತ್ತಿದೆ.

    ಸ್ತಬ್ಧ ಚಿತ್ರದ ವಿಶೇಷತೆ ಏನು?
    1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಚಿತ್ರಣ ಟ್ಯಾಬ್ಲೊ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು ಅಧಿವೇಶನದಲ್ಲಿ ಗಾಂಧಿ ಮಾಡಿದ ಭಾಷಣದ ವೇದಿಕೆ ಮತ್ತು ವೇದಿಕೆಯ ಸುತ್ತ ಬಸವಣ್ಣ ಮತ್ತು ಕೃಷ್ಣರಾಜ ಒಡೆಯರ್ ಫೋಟೋಗಳು ಇರಲಿದೆ.

    ಅಧಿವೇಶನದಲ್ಲಿ ಸರೋಜಿನಿ ನಾಯ್ಡು, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲರಿಂದ ಧ್ವಜರೋಹಣ, ಸ್ವತಂತ್ರ ಪೂರ್ವ ಮೊಟ್ಟಮೊದಲ ಕಲ್ಪನಾ ಧ್ವಜ ಹಾಗೂ ಬದಲಾವಣೆಗಳ ಚಿತ್ರಣ, ಹಿಂದೂ ಮುಸ್ಲಿಂ ಏಕತೆ, ವಿದೇಶಿ ವಸ್ತುಗಳ ಬಹಿಷ್ಕಾರ, ಖಾದಿಗೆ ಪ್ರೋತ್ಸಾಹ ಅಸ್ಪೃಶ್ಯತೆ ನಿವಾರಣೆ ಧ್ಯೆಯವಾಕ್ಯಗಳು ಇರಲಿವೆ.

    ಮೊದಲ ಬಾರಿಗೆ ರಾಜಪಥದಲ್ಲಿ ಕನ್ನಡದ ಹಾಡು ಕೇಳಿಸಲಿದ್ದು, ಗಾಂಧಿ ನೆನಪಿಗೆ ಹಿನ್ನೆಲೆ ಧ್ವನಿಯಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ `ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿದು’ ಹಾಡು ಕೇಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐತಿಹಾಸಿಕ ಮಡಿಕೇರಿ ದಸರೆಗೆ ಕ್ಷಣಗಣನೆ!

    ಐತಿಹಾಸಿಕ ಮಡಿಕೇರಿ ದಸರೆಗೆ ಕ್ಷಣಗಣನೆ!

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಈ ಬಾರಿ ಸರಳ ದಸರಾ ಅಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧವಾಗಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಜನರು ಕಾದು ಕುಳಿತಿದ್ದಾರೆ.

    ಪ್ರವಾಹದ ಹಿನ್ನೆಲೆಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಸರಳವಾಗಿ ಆಚರಿಸಲು ಈ ಬಾರಿ ನಿರ್ಧರಿಸಲಾಗಿದೆ. ಹೀಗಾಗಿ ದಶಮಂಟಪದ ಮೆರವಣಿಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಗಲಿನಲ್ಲಿ ಮೈಸೂರು ದಸರಾ, ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ದಿಕೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣ ರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ನಗರದ ಹಲವೆಡೆ ಮುಂಜಾನೆವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದೆ. ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಗಮಿಸೋ, ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ.

    ಯಾವೆಲ್ಲ ಮಂಟಪ ಇದೆ?
    ಶ್ರೀ ಪೇಟೆರಾಮ ಮಂದಿರ ದಸರಾ ಸಮಿತಿಯ ನಂದಿಯಿಂದ ಶಿವ ದರ್ಶನ, ದೇಚೂರು ಶ್ರೀ ರಾಮ ಮಂದಿರ ದಸರಾ ಸಮಿತಿಯ ಪಂಚಮುಖಿ ಆಂಜನೇಯನ ದರ್ಶನ, ಶ್ರೀ ದಂಡಿನ ಮಾರಿಯಮ್ಮ ದಸರಾ ಸಮಿತಿಯ ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿಯ ಗಣಪತಿಯಿಂದ ಗಜಾಸುರನ ಸಂಹಾರ, ಶ್ರೀ ಕಂಚಿ ಕಾಮಾಕ್ಷಿ ಮತ್ತು ಮುತ್ತು ಮಾರಿಯಮ್ಮ ಬಾಲಕ ಮಂಡಳಿ ದಸರಾ ಸಮಿತಿಯಿಂದ ಗಣಪತಿಯಿಂದ ಗಜಾಸುರನ ವಧೆ, ಶ್ರೀ ಕುಂದುರು ಮೊಟ್ಟೆಚೌಟಿ ಮಾರಿಯಮ್ಮ ದಸರಾ ಸಮಿತಿಯಿಂದ ಶಿವ ಪುರಾಣದ ಕುಮಾರಕಾಂಡ, ಶ್ರೀ ಕೋದಂಡರಾಮ ದಸರಾ ಸಮಿತಿಯಿಂದ ಶ್ರೀ ದೇವಿ ಮಹಾತ್ಮೆಯ ಚಂಡ ಮುಂಡರ ವಧೆ, ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ದಸರಾ ಸಮಿತಿಯಿಂದ ದಕ್ಷಯಜ್ಞ, ಶ್ರೀ ಕೋಟೆ ಗಣಪತಿ ದಸರಾ ಸಮಿತಿಯಿಂದ ಗಣಪತಿ ಪರಶುರಾಮ ಕಾಳಗ ಹಾಗೂ ಶ್ರೀ ಕರವಲೆ ಭಗವತಿ ದಸರ ಉತ್ಸವ ಸಮಿತಿಯ ಶ್ರೀ ದೇವಿ ಮಹಾತ್ಮೆಯ ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಲಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

    ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

    ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

    ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

    ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

    ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

    ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

    ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

    ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.

  • ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲೂ ರಾಜಕೀಯ- ಸರ್ಕಾರ ಸಾಧನೆ ಬಿಂಬಿಸುವ ಟ್ಯಾಬ್ಲೋ ರೆಡಿ

    ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲೂ ರಾಜಕೀಯ- ಸರ್ಕಾರ ಸಾಧನೆ ಬಿಂಬಿಸುವ ಟ್ಯಾಬ್ಲೋ ರೆಡಿ

    ಮೈಸೂರು: ದಸರಾದ ಪ್ರಮುಖ ವಿಶೇಷ ಆಕರ್ಷಣೆ ಜಂಬೂ ಸವಾರಿಯಾದರೆ ನಂತರದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವುದು ಸ್ತಬ್ಧಚಿತ್ರ ಪ್ರದರ್ಶನ. ಈ ಬಾರಿಯೂ ಪ್ರತಿ ವರ್ಷದಂತೆ ದಸರಾ ಸ್ತಬ್ಧಚಿತ್ರ ಪ್ರದರ್ಶನ ಕೈಗೊಳ್ಳಲಾಗಿದೆ. ಆದರೆ ಬಾರಿಯ ಸ್ತಬ್ಧಚಿತ್ರ ಪ್ರದರ್ಶನದ ಮೇಲೆ ಮುಂದಿನ ವಿಧಾನ ಸಭೆ ಚುನಾವಣೆಯ ಬಿಸಿ ತಟ್ಟಿದ್ದು, ಸರ್ಕಾರದ ಸಾಧನೆಯನ್ನು ಬಿಂಬಿಸುವಂತಹ ಸ್ತಬ್ಧಚಿತ್ರಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿವೆ.

    ಈ ಬಾರಿಯ ಜಂಬೂ ಸವಾರಿಯಲ್ಲಿ ಒಟ್ಟು 40 ಸ್ತಬ್ಧಚಿತ್ರಗಳು ಸಾಗಲಿದ್ದು, ರಾಜ್ಯದ ವಿವಿಧ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತಬ್ಧಚಿತ್ರಗಳು ಸಿದ್ಧವಾಗಿದೆ.

    ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಮುಖವಾಗಿ ಬೆಂಗಳೂರು ಜಿಲ್ಲೆಯ ಇಂದಿರಾ ಕ್ಯಾಂಟೀನ್ ಸ್ತಬ್ಧಚಿತ್ರ, ದಾವಣಗೆರೆ ಜಿಲ್ಲೆಯ ಸ್ವಚ್ಛ ಭಾರತ್ ಮಿಷನ್ ಸ್ತಬ್ಧಚಿತ್ರ, ಹಾವೇರಿ ಜಿಲ್ಲೆಯ ಕನಕದಾಸರ ಅರಮನೆ ಬಾಡಾದ ಸ್ತಬ್ಧಚಿತ್ರ ಹಾಗೂ ವಾರ್ತಾ ಇಲಾಖೆಯ ನುಡಿದಂತೆ ನಡೆದಿದ್ದೇವೆ ಅನ್ನೋ ಸರ್ಕಾರದ ಘೋಷವಾಕ್ಯ ಸ್ತಬ್ಧಚಿತ್ರ ಈ ಬಾರಿಯ ವಿಶೇಷವಾಗಿ ಕಾಣಿಸಲಿವೆ.

    ಇನ್ನುಳಿದಂತೆ ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ರಾಯಚೂರು ಜಿಲ್ಲೆಯ ಚಿಕ್ಕಬೂದುರು ಬಹು ಕಮಾನ್ ಚೆಕ್ ಡ್ಯಾಂ, ಬಾದಾಮಿಯ ಭೂತನಾಥ ದೇವಾಲಯ, ಬೀದರ ಜಿಲ್ಲೆಯ ಮಾಡಿವಾಳ ಮಾಚಿ ದೇವರ ಹೊಂಡ ಬಸವ ಕಲ್ಯಾಣ ಸ್ತಬ್ಧಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.