Tag: tablet

  • ಚಾಕ್ಲೇಟ್ ಅಂತಾ ಮಾತ್ರೆ ಸೇವಿಸಿದ್ದ ಕಂದಮ್ಮ ದುರ್ಮರಣ

    ಚಾಕ್ಲೇಟ್ ಅಂತಾ ಮಾತ್ರೆ ಸೇವಿಸಿದ್ದ ಕಂದಮ್ಮ ದುರ್ಮರಣ

    ಚಿತ್ರದುರ್ಗ: ಚಾಕ್ಲೇಟ್ (Chocolate) ‌ಎಂದು ಭಾವಿಸಿ ಮಾತ್ರೆ ಸೇವಿಸಿದ್ದ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ‌‌ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಕಳೆದ ನಾಲ್ಕು‌ ದಿನಗಳ ಹಿಂದೆ ಕಡಬನಕಟ್ಟೆ ಗ್ರಾಮದ ವಸಂತ್ ಕುಮಾರ್ ಹಾಗೂ ಪವಿತ್ರ ದಂಪತಿಯ ಪುತ್ರ ಹೃತ್ವಿಕ್(4) ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನೂ ಓದಿ: ನಮ್ಮ ಸರ್ಕಾರ ಉಗ್ರರನ್ನು ಹಿಡಿದು ಜೈಲಿಗೆ ಕಳಿಸುವ ಕೆಲಸ ಮಾಡುತ್ತೆ: ರಾಮಲಿಂಗಾ ರೆಡ್ಡಿ

    ಬಾಲಕ ಅಸ್ವಸ್ಥಗೊಂಡ ವಿಚಾರ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆತನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಕಳೆದ ನಾಲ್ಕು ದಿನಗಳಿಂದ‌ ಚಿಕಿತ್ಸೆ ನೀಡಲಾಗಿದ್ದು, ಬಾಲಕನ ಜೀವ ಉಳಿಸಲು ವೈದ್ಯರು ಶ್ರಮಪಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ‌ ಇಂದು ಬಾಲಕ ಕೊನೆಯುಸಿರೆಳೆದಿದ್ದಾನೆ.

    ಮೃತ ಮಗುವಿನ ತಾಯಿ ಪವಿತ್ರಾಗೆ ಈ ಹಿಂದೆ 3 ಶಸ್ತ್ರಚಿಕಿತ್ಸೆಗಳಾಗಿದ್ದು,ಆಕೆಗೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಆದರೆ ಚಾಕ್ಲೇಟ್ ಎಂದು ಭಾವಿಸಿದ್ದ ಮಗು ಆ ಮಾತ್ರೆಗಳನ್ನು ಸೇವಿಸಿತ್ತು.‌ ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದೆ. ಇದರಿಂದಾಗಿ ಮಗುವಿನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಪ್ರಕರಣ ತುರುವನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    – ಎರಡನೇ ಬಾರಿ ಕ್ಯಾನ್ಸರ್‌ ಬರುವುದನ್ನು ತಡೆಯುತ್ತೆ ಮಾತ್ರೆ
    – 10 ವರ್ಷಗಳ ಕಾಲ ದೀರ್ಘ ಸಂಶೋಧನೆ
    – FSSAI ಅನುಮೋದನೆಗಾಗಿ ಕಾಯುತ್ತಿದ್ದಾರೆ ಸಂಶೋಧಕರು

    ಮುಂಬೈ: ಎರಡನೇ ಬಾರಿಗೆ ಕ್ಯಾನ್ಸರ್ (Cancer) ಬರುವುದನ್ನು ತಡೆಯುವ ಮಾತ್ರೆಯನ್ನು (Tablet) ನಾವು ಅಭಿವೃದ್ಧಿ ಪಡಿಸಿರುವುದಾಗಿ ಭಾರತದ ಪ್ರಸಿದ್ಧ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ ಟಾಟಾ ಸ್ಮಾರಕ ಕೇಂದ್ರ (TMC) ಹೇಳಿಕೊಂಡಿದೆ.

    ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ (Radiation) ಮತ್ತು ಕೀಮೋಥೆರಪಿಯಂತಹ (Chemotherapy) ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್‌ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

    ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ (Rat) ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್‌ ಬರುತ್ತದೆ ಎಂದು ತಿಳಿಸಿದರು.

    ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು.  ಇದನ್ನೂ ಓದಿ: ಗೆದ್ದ ಬೆನ್ನಲ್ಲೇ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ್ ಜಿಂದಾಬಾದ್‌ ಘೋಷಣೆ

    R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.

    ಈ ಟ್ಯಾಬ್ಲೆಟ್ ಕ್ಯಾನ್ಸರ್ ಚಿಕಿತ್ಸೆಯ ಚಿಕಿತ್ಸೆಯ ಅಡ್ಡಪರಿಣಾಮಗಳನ್ನು ಸುಮಾರು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಮತ್ತು ಎರಡನೇ ಬಾರಿಗೆ ಇದು ಕ್ಯಾನ್ಸರ್ ತಡೆಗಟ್ಟುವಲ್ಲಿ ಸುಮಾರು 30% ಪರಿಣಾಮಕಾರಿಯಾಗಿದೆ. ಇದು ಮೇದೋಜೀರಕ ಗ್ರಂಥಿ, ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್‌ನ ಮೇಲೂ ಪರಿಣಾಮಕಾರಿಯಾಗಬಲ್ಲದು ಎಂದು ತಿಳಿಸಿದರು.

    ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.  ಇದನ್ನೂ ಓದಿ: ಗಗನಯಾನ ಕೈಗೊಳ್ಳುವ 4 ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಮೋದಿ

    ಈ ಮಾತ್ರೆ ಸೇವನೆಯ ಬಳಿಕ ಇಲಿಗಳು ಮತ್ತು ಮನುಷ್ಯರ ಮೇಲೆ ಆಗುವ ಅಡ್ಡ ಪರಿಣಾಮವನ್ನು ಪರೀಕ್ಷಿಸಲಾಗಿದೆ. ಮಾನವನ ಮೇಲಿನ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಐದು ವರ್ಷ ಬೇಕಾಯಿತು. ಸಂಶೋಧನೆಯ ಸಮಯದಲ್ಲಿ ಸವಾಲುಗಳು ಇದ್ದವು. ಈ ಸಂಶೋಧನೆ ಮಾಡುವಾಗ ಸಮಯ ಮತ್ತು ಹಣ ವ್ಯರ್ಥ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾವೆಲ್ಲ ಸಂತೋಷವಾಗಿದ್ದು ದೊಡ್ಡ ಯಶಸ್ಸು ಸಿಕ್ಕಿದೆ ಎಂದು ವೈದ್ಯರು ಬಣ್ಣಿಸಿದರು.

    ಕ್ಯಾನ್ಸರ್‌ ಎರಡನೇ ಬಾರಿ ಹೇಗೆ ಬರುತ್ತೆ?
    ಕೆಲವೊಮ್ಮೆ ಕ್ಯಾನ್ಸರ್ ಚಿಕಿತ್ಸೆಯ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆ. ಇದನ್ನು ಕ್ಯಾನ್ಸರ್ ಮರುಕಳಿಸುವಿಕೆ ಎಂದು ಕರೆಯಲಾಗುತ್ತದೆ. ಮೂಲ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಿದ ವಾರ, ತಿಂಗಳುಗಳು ಅಥವಾ ವರ್ಷಗಳ ನಂತರವೂ ಇದು ಬರಹುದು.

    ಕೆಲವು ರೀತಿಯ ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯು ಎರಡನೇ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಮಗು, ಹದಿಹರೆಯ ಅಥವಾ ಯುವ ವಯಸ್ಕರಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದಿದ್ದರೆ ಅಪಾಯವು ಹೆಚ್ಚು. ರೋಗಿಗೆ ಚಿಕಿತ್ಸೆ ಮುಗಿದ ನಂತರ ಕ್ಯಾನ್ಸರ್ ಮತ್ತೆ ಬರುತ್ತದೆಯೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

     

  • 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆಗೆ ನಾಳೆ ಸಿಎಂ ಚಾಲನೆ

    1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳ ವಿತರಣೆಗೆ ನಾಳೆ ಸಿಎಂ ಚಾಲನೆ

    – ರಾಜ್ಯ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿ ಉಪಕ್ರಮ

    ಬೆಂಗಳೂರು : ಉನ್ನತ ಶಿಕ್ಷಣ ಕಲಿಕೆಯಲ್ಲಿ ಇಡೀ ದೇಶದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೆ ಹೊಂದಿರುವ ‘ಕಲಿಕಾ ನಿರ್ವಹಣಾ ವ್ಯವಸ್ಥೆ’ (Learning Management System) ಬೋಧನೆ-ಕಲಿಕೆಗೆ ಅನುಕೂಲವಾಗುವಂತೆ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡುವ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ.

    ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ತಾರತಮ್ಯ ನಿವಾರಣೆ ಹಾಗೂ ಡಿಜಿಟಲ್ ಅಂತರವೂ ಅಳಿಸಿಹಾಕುವ ಧ್ಯೇಯದೊಂದಿಗೆ ಸರಕಾರ ಇಷ್ಟು ಬೃಹತ್ ಪ್ರಮಾಣದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ವಿತರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿಎ.ನ್.ಅಶ್ವತ್ಥನಾರಾಯಣ ತಿಳಿಸಿದರು.

    ಈ ಕಾರ್ಯಕ್ರಮಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಕೈಜೋಡಿಸಿವೆ ಎಂದು ಅವರು ಹೇಳಿದರು.

    ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಟ್ಯಾಬ್ಲೆಟ್ ಪಿಸಿಗಳನ್ನು ವಿತರಣೆ ಮಾಡುವರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಆಯಾ ಜಿಲ್ಲೆಗಳಲ್ಲಿ ವಿತರಣೆ ಮಾಡುವರು. ವರ್ಚುಯಲ್ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಚಿವರು ಜಿಲ್ಲೆಗಳಿಂದ ಭಾಗಿಯಾಗುವರು ಹಾಗೂ ಕೆಲ ವಿದ್ಯಾರ್ಥಿಗಳು ಕೂಡ ಅಭಿಪ್ರಾಯ ಹಂಚಿಕೊಳ್ಳುವರು ಎಂದು ಡಿಸಿಎಂ ಮಾಹಿತಿ ನೀಡಿದರು.

    ಈ ಕಾರ್ಯಕ್ರಮ ಉನ್ನತ ಶಿಕ್ಷಣ ಇಲಾಖೆಯ ‘ವಿಜಯೀಭವ’, ಜ್ಞಾನನಿಧಿ ಯುಟ್ಯೂಬ್ ಚಾನೆಲ್‍ಗಳಲ್ಲಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಫೇಸ್‍ಬುಕ್ & ಟ್ವಿಟ್ಟರ್ ಖಾತೆಗಳಲ್ಲಿ ನೇರ ಪ್ರಸಾರ ಆಗಲಿದೆ. ವೀಕ್ಷಣೆಗೆ ಈ ಲಿಂಕ್ ಕ್ಲಿಕ್ ಮಾಡಿ..
    https://youtube.com/c/VijayiBhava
    https://youtube.com/c/JnanaNidhiDCE
    https://www.facebook.com/Department-of-Collegiate-Education-100568944804207/
    https://twitter.com/collegiate_of?s=09

    ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 87 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿಗಳನ್ನು ನೀಡಲಾಗುವುದು. ಈ ಯೋಜನೆಗಾಗಿ ರಾಜ್ಯ ಸರಕಾರ 163 ಕೋಟಿ ರೂ. ವೆಚ್ಚ ಮಾಡಿದೆ. ಇದರ ಜತೆಯಲ್ಲೇ ಸರ್ಕಾರಿ ಕಾಲೇಜುಗಳಲ್ಲಿ 2,500 ಸ್ಮಾರ್ಟ್ ಕ್ಲಾಸ್ ರೂಂಗಳಿಗೆ ಚಾಲನೆ ನೀಡಲಾಗುತ್ತಿದ್ದು, ನಾಳೆಯ ಕಾರ್ಯಕ್ರಮದ ನಿಮಿತ್ತ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸ್ಮಾರ್ಟ್ ಕ್ಲಾಸ್ ರೂಂನ ಒಂದರ ಪ್ರಾತ್ಯಕ್ಷಿಕೆಯೂ ಇರುತ್ತದೆ.

    ಯಾವುದೇ ವಿದ್ಯಾರ್ಥಿ ಸಾಮಾಜಿಕ, ಆರ್ಥಿಕ ಅಥವಾ ಇನ್ನಾವುದೇ ಕಾರಣದಿಂದ ಕೋವಿಡ್ ಕಾಲದಲ್ಲಿ ಕಲಿಕೆಯಿಂದ ವಂಚಿತರಾಗಬಾರದು ಎನ್ನುವುದೇ ಟ್ಯಾಬ್ಲೆಟ್ ಪಿಸಿ ಯೋಜನೆಯ ಮುಖ್ಯ ಉದ್ದೇಶ. ಕೋವಿಡ್ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಈ ಟ್ಯಾಬ್ಲೆಟ್ ಪಿಸಿಗಳ ಮೂಲಕ ಎಲ್‍ಎಂಎಸ್ ವ್ಯವಸ್ಥೆಯಲ್ಲಿ ಕಲಿಕೆ ಮುಂದುವರಿಸಬಹುದು.

    ಈಗಾಗಲೇ ಕಲಿಕಾ ನಿರ್ವಹಣಾ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ. ಅದರಂತೆ ವಿದ್ಯಾರ್ಥಿಗಳು ಸುಲಭ ವ್ಯಾಸಂಗಕ್ಕೆ ಈ ಟ್ಯಾಬ್ಲೆಟ್ ಗಳು ಸಹಾಯಕ. ವಿದ್ಯಾರ್ಥಿಗಳ ಜ್ಞಾನಾರ್ಜನೆ ಮಟ್ಟವನ್ನೂ ಹೆಚ್ಚಿಸಲು ಇವು ಪೂರಕ. ಇಂದಿನ ಜಾಗತಿಕ ಮಟ್ಟದ ಆಧುನಿಕ ಕಲಿಕಾ ಮಟ್ಟಕ್ಕೆ ತಕ್ಕಂತೆ ಕಲಿಕೆಯನ್ನು ನಿರಂತರವಾಗಿ ಮುಂದುವರಿಸುವುದು ಹಾಗೂ ಆನ್‍ಲೈನ್ ಮೂಲಕವೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಗಳು ನೆರವಾಗುತ್ತವೆ.

    ಈ ಟ್ಯಾಬ್ಲೆಟ್‍ಗಳು ಉತ್ತಮವಾಗಿವೆ ಹಾಗೂ ಕಲಿಕೆಗೆ ಬೇಕಾದ ಎಲ್ಲ ಫೀಚರುಗಳನ್ನು ಒಳಗೊಂಡಿವೆ. ವೈಫೈ, ಸಿಮ್ ಬಳಕೆಯಿಂದ ಇವುಗಳಿಗೆ ಇಂಟರ್ ನೆಟ್ ಸಂಪರ್ಕ ಕಲ್ಪಿಸಬಹುದು. ವೈಫೈ ಲಭ್ಯತೆ ಇಲ್ಲದ ಕಡೆಗಳಲ್ಲಿ ಸಿಮ್ ಬಳಕೆಯ ಮೂಲಕವೇ ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳಬಹುದು.

    ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಕಲಿಕೆಗೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಸರಕಾರದ್ದು. ಇಂಥ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಗಳನ್ನು ನೀಡುವ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಸರಕಾರಿ-ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ತಾರತಮ್ಯವನ್ನು ಸಂಪೂರ್ಣವಾಗಿ ಅಳಿಸಿ ಹಾಕಿದಂತಾಗಿದೆ.

  • ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    ಆರ್‌ಎಂಪಿ ವೈದ್ಯ ಕೊಟ್ಟ ಮಾತ್ರೆ ಸೇವಿಸಿ ಬಾಲಕಿ ಸಾವು

    – ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ಯಾದಗಿರಿ: ಆರ್‌ಎಂಪಿ ವೈದ್ಯ ನೀಡಿದ ಮಾತ್ರೆ ಸೇವಿಸಿ 13 ವರ್ಷದ ಬಾಲಕಿ ಮೃತಪಟ್ಟ ಘಟನೆ ಹುಣಸಗಿ ತಾಲೂಕಿನ ಕೋಳಿಹಾಳ ಗ್ರಾಮದಲ್ಲಿ ನಡೆದಿದೆ.

    ಹುಣಸಗಿ ತಾಲೂಕಿನ ಕೋಳಿಹಾಳ ದೊಡ್ಡ ತಾಂಡಾದ ನಿವಾಸಿ ಸಂತೋಷ್ ಚವಾಣ್ ಅವರ ಪುತ್ರಿ ವಸಂತಾ ಮೃತ ದುರ್ದೈವಿ. ಎಂ.ಪಿ.ಅಜಿತ್ ಬಾಲಕಿಗೆ ಮಾತ್ರೆ ನೀಡಿದ್ದ ವೈದ್ಯ.

    ಬಾಲಕಿ ವಸಂತಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಆಕೆಯ ಪೋಷಕರು ಗ್ರಾಮದಲ್ಲಿದ್ದ ವೈದ್ಯ ಎಂ.ಪಿ.ಅಜಿತ್ ಬಳಿಗೆ ಚಿಕಿತ್ಸೆಗೆಂದು ತೆರಳಿದ್ದರು. ಅಜಿತ್ ಬಾಲಕಿಗೆ 2 ಇಂಜೆಕ್ಷನ್ ಮಾಡಿ, ಮಾತ್ರೆಗಳನ್ನು ನೀಡಿದ್ದ. ಏಪ್ರಿಲ್ 22ರಂದು ಮಾತ್ರೆ ತೆಗೆದುಕೊಂಡಿದ್ದ ಬಾಲಕಿ ಬೆಳಗ್ಗೆ 5:30ಕ್ಕೆ ಮನೆಯಲ್ಲಿ ಮೃತಪಟ್ಟಿದ್ದಾಳೆ. ಈ ಸಂಬಂಧ ಬಾಲಕಿಯ ಪೋಷಕರು ಹುಣಸಗಿ ಠಾಣೆಯಲ್ಲಿ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಎಂ.ಪಿ.ಅಜಿತ್ ಆರ್‌ಎಂಪಿ ವೈದ್ಯನಾಗಿದ್ದು, ವೈದ್ಯೋಪಚಾರ ಮಾಡಿರುವುದೇ ನಿಯಮ ಬಾಹಿರವಾಗಿದೆ. ಜೊತೆಗೆ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜ್ವರದ ಪ್ರಕರಣಗಳನ್ನು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ಆದರೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವೈದ್ಯ ಸದ್ಯ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    ಜ್ವರ, ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವರ ವಿವರವನ್ನು ತೆಗೆದುಕೊಳ್ಳಿ

    – ಮೆಡಿಕಲ್ ಸ್ಟೋರ್‌ಗಳಿಗೆ ಆಂಧ್ರ ಸರ್ಕಾರ ಸೂಚನೆ

    ಹೈದರಾಬಾದ್: ಜ್ವರ, ಕೆಮ್ಮು ಮತ್ತು ಶೀತ ಎಂದು ಬಂದು ಮಾತ್ರೆ ತೆಗದುಕೊಂಡು ಹೋಗುವವರ ವಿವರವನ್ನು ಪಡೆದುಕೊಳ್ಳಿ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮೆಡಿಕಲ್ ಶಾಪ್‍ಗಳಿಗೆ ಸೂಚನೆ ನೀಡಿವೆ.

    ದೇಶದಲ್ಲಿ ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ದೇಶನ್ನೇ ಲಾಕ್‍ಡೌನ್ ಮಾಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕಿತರ ಪತ್ತೆಗಾಗಿ ರಾಜ್ಯ ಸರ್ಕಾರಗಳು ವಿವಿಧ ನಿಯಮಗಳನ್ನು ಅನುಸರಿಸುತ್ತಿವೆ. ಈ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ.

    ಲಾಕ್‍ಡೌನ್ ಇದ್ದರೂ ದೇಶದ್ಯಾಂತ ಮೆಡಿಕಲ್ ಶಾಪ್‍ಗಳು ಓಪನ್ ಇವೆ. ಈ ಮೆಡಿಕಲ್‍ಗಳಿಗೆ ನಮಗೆ ಶೀತ, ಕೆಮ್ಮು ಮತ್ತು ಜ್ವರ ಇದೆ ಎಂದು ಮಾತ್ರೆ ತೆಗೆದುಕೊಳ್ಳಲು ಬರುವವರ ವಿವರವನ್ನು ಮೆಡಿಕಲ್ ಶಾಪ್ ಮಾಲೀಕರು ಪಡೆದುಕೊಳ್ಳಬೇಕು. ಜೊತೆಗೆ ಪ್ರತಿದಿನ ನಾವು ಸೂಚಿಸಿದ ಸ್ಥಳೀಯ ಅಧಿಕಾರಿಗಳಿಗೆ ಅದನ್ನು ನೀಡಬೇಕು. ಆ ಅಧಿಕಾರಿಗಳು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುತ್ತಾರೆ ಎಂದು ಸರ್ಕಾರಗಳು ತಿಳಿಸಿವೆ.

    ಇತ್ತೀಚೆಗೆ ಕೊರೊನಾ ಲಕ್ಷಣಗಳು ಇಲ್ಲದಿರುವ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗುತ್ತಿದೆ. ಕೆಲವರು ರೋಗದ ಲಕ್ಷಣ ಇದ್ದರೂ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿಲ್ಲ ಆದ್ದರಿಂದ ಸರ್ಕಾರಗಳು ಈ ನಿರ್ಧಾರವನ್ನು ಕೈಗೊಂಡಿವೆ. ಈಗಾಗಲೇ ಅಂಧ್ರಪ್ರದೇಶದಲ್ಲಿ 603 ಕೊರೊನಾ ಪ್ರಕರಣಗಳು ಮತ್ತು ತೆಲಂಗಾಣದಲ್ಲಿ 800 ಕೊರೊನಾ ಪ್ರಕರಣಗಳು ದಾಖಲಾಗಿವೆ.

    ಇಡೀ ಭಾರತದಲ್ಲಿ 15,712 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 507 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 2,231 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಈವರೆಗೆ ಇಡೀ ವಿಶ್ವದಲ್ಲಿ 23,29,651 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 1,60,721 ಜನರು ಮೃತಪಟ್ಟಿದ್ದಾರೆ. ವಿಶ್ವವ್ಯಾಪಿ 5,95,433 ಜನರು ರೋಗದಿಂದ ಗುಣವಾಗಿ ಹೊರಬಂದಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಔಷಧಿ ಇಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಸಿಕ್ತು ನೆರವು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಔಷಧಿ ಇಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಸಿಕ್ತು ನೆರವು

    ದಾವಣಗೆರೆ: ಲಾಕ್‍ಡೌನ್‍ನಿಂದಾಗಿ ಅನಾರೋಗ್ಯಕ್ಕೆ ಓಳಗಾಗಿರುವ ಕೆಲವು ಔಷಧಿ ಸಿಗದೆ ಪರದಾಡುವಂತಾಗಿದೆ. ಇಂತಹದ್ದೇ ಸಮಸ್ಯೆಯ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಸಮಸ್ಯೆಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸ್ಪಂಧಿಸಿದ್ದಾರೆ.

    ರಾಮನಗರದ ಬಿಡದಿಯಿಂದ ದಾವಣಗೆರೆಯ ಮಗಳ ಮನೆಗೆ ಹಬ್ಬಕ್ಕೆ ಬಂದಿದ್ದ ಮುನಿಯಮ್ಮ ಎಂಬವರು ಲಾಕ್‍ಡೌನ್ ಹಿನ್ನೆಲೆ ಮಗಳ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಆದರೆ ಮುನಿಯಮ್ಮ ಅವರ ಮಗ ಮುನಿರಾಜು ಚಿಕ್ಕಂದಿನಿಂದಲೇ ಅಂಗವಿಕಲ ಹಾಗೂ ಮಾನಸಿಕ ಅಸ್ಪಸ್ಥನಾಗಿದ್ದಾನೆ. ಹೀಗಾಗಿ ಮಗನಿಗೆ ನಿತ್ಯವೂ ಮಾತ್ರೆಗಳನ್ನು ನೀಡಬೇಕಾಗಿದೆ. ಆದರೆ ಲಾಕ್‍ಡೌನ್ ಹಿನ್ನೆಲೆ ಔಷಧಿ ಸಿಗದೆ ಮುನಿಯಮ್ಮ ಪರದಾಡುವಂತಾಗಿತ್ತು.

    ಕೆಲವೊಂದು ಮಾತ್ರೆಗಳು ಕೇವಲ ನಿಮಾನ್ಸ್‍ನಲ್ಲಿ ಮಾತ್ರ ಸಿಗುತ್ತವೆ. ಎರಡು ದಿನಗಳಿಂದ ಮಾತ್ರೆಗಳು ಸಿಗದೆ, ತಮ್ಮ ಊರಿಗೆ ಹೋಗಲು ಸಾಧ್ಯವಾಗದೆ ಮುನಿಯಮ್ಮ ಕಣ್ಣೀರಿಟ್ಟಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದಕ್ಕೆ ಸ್ಪಂಧಿಸಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಯುವಕನಿಗೆ ಬೇಕಾಗುವ ಔಷಧಿಗಳನ್ನು ನೀಡಿ ನೆರವಾಗಿದ್ದಾರೆ.

    ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರು ಕಾರ್ಯಕರ್ತರಿಗೆ ಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಬೇಕು ಎಂದು ತಿಳಿಸಿದ್ದಾರೆ. ಅದರಂತೆ ನೂರಾರು ಕುಟುಂಬಗಳ ನೆರವಿಗೆ ಯುವ ಮೋರ್ಚಾದ ಕಾರ್ಯಕರ್ತರು ನಿಂತಿದ್ದಾರೆ. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಔಷಧಿ ಒಗದಿಸಿ, ನಿಮ್ಮ ಜೊತೆ ನಾವು ಇದ್ದೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ.

  • ಜ್ಯೂಸ್ ಕುಡಿದ ನರ್ಸ್ ದಿಢೀರ್ ಅಸ್ವಸ್ಥ

    ಜ್ಯೂಸ್ ಕುಡಿದ ನರ್ಸ್ ದಿಢೀರ್ ಅಸ್ವಸ್ಥ

    ಚಿಕ್ಕಬಳ್ಳಾಪುರ: ನಗರದಲ್ಲಿ ಜ್ಯೂಸ್ ಕುಡಿದ ನರ್ಸ್ ಒಬ್ಬರು ದಿಢೀರ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಅಸ್ವಸ್ಥರಾದ ಶುಶ್ರೂಷಕಿಯನ್ನು ರಾಜೇಶ್ವರಿ ಎಂದು ಗುರುತಿಸಲಾಗಿದೆ.

    ನರ್ಸ್ ಹೇಮಾವತಿಯನ್ನು ಭೇಟಿ ಮಾಡಲು ವಿಶಾಖಪಟ್ಟಣ ಮೂಲದ ಪ್ರಶಾಂತ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದನು. ಹೀಗೆ ಭೇಟಿ ವೇಳೆ ಆಸ್ಪತ್ರೆ ಎದುರಿದ್ದ ಬೇಕರಿಯಲ್ಲಿ ಜ್ಯೂಸ್ ಖರೀದಿಸಿ ಹೇಮಾವತಿ ಹಾಗೂ ಮತ್ತೊಬ್ಬ ನರ್ಸ್ ರಾಜೇಶ್ವರಿಗೆ ತಂದುಕೊಟ್ಟಿದ್ದಾನೆ.

    ಜ್ಯೂಸ್ ಕುಡಿದ ಕೆಲ ನಿಮಿಷಗಳ ನಂತರ ರಾಜೇಶ್ವರಿ ಅಸ್ವಸ್ಥರಾಗಿದ್ದಾರೆ. ನರ್ಸ್ ಹೇಮಾವತಿ ಹಾಗೂ ಪ್ರಶಾಂತ್ ಸ್ನೇಹಿತರು ಮಾತ್ರೆ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಶಾಂತ್ ಹಾಗೂ ಹೇಮಾವತಿ, ಹಾಗೂ ಬೇಕರಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಮಾತ್ರೆಯ ಆಕಾರದಲ್ಲಿ ಮೊಟ್ಟೆಯಿಟ್ಟ ಕೋಳಿ- ಕಾರವಾರದಲ್ಲೊಂದು ಅಚ್ಚರಿ

    ಕಾರವಾರ: ಕೋಳಿಯೊಂದು ಟ್ಯಾಬ್ಲೆಟ್ (ಮಾತ್ರೆ) ಆಕಾರದಲ್ಲಿ ಮೊಟ್ಟೆಯಿಟ್ಟ ಅಚ್ಚರಿಯ ಘಟನೆ ಕಾರವಾರದಲ್ಲಿ ನಡೆದಿದೆ.

    ಕೋಳಿ ಮೊಟ್ಟೆ ಹಾಕಿದರೆ ಓವೆಲ್ ಷೇಪ್ ನಲ್ಲಿ ಇರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿಯ ಸೆಣಬಾವಿ ಗ್ರಾಮದಲ್ಲಿ ಕೋಳಿ ಮಾತ್ರೆಯಾಕಾರದಲ್ಲಿ ಮೊಟ್ಟೆಯಿಟ್ಟಿದೆ.

    ಮಾಸ್ತಮ್ಮ ಮೊಗೇರ್ ಎಂಬವರ ಮನೆಯಲ್ಲಿ ಕೋಳಿ ಮಾತ್ರೆ ಆಕಾರದಲ್ಲಿ ಮೊಟ್ಟೆ ಇಡುವ ಮೂಲಕ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಕಳೆದ ಎರಡು ದಿನದ ಹಿಂದೆ ಕೋಳಿಯು 12 ಮೊಟ್ಟೆ ಇಟ್ಟಿದ್ದು, ಇದರಲ್ಲಿ ಮೊದಲ ಮೊಟ್ಟೆ ಮಾತ್ರೆ ಆಕಾರದಲ್ಲಿದ್ದು ಮೂರು ಸೆಂಟಿಮೀಟರ್ ನಷ್ಟು ಉದ್ದವಾಗಿದೆ.

    ಇನ್ನು ಈ ರೀತಿಯಾಗಿ ಮೊಟ್ಟೆಯಿಟ್ಟಿದ್ದ ಕೋಳಿ ಕಾವು ನೀಡುತ್ತಿದೆ. ಒಂದು ವೇಳೆ ಮರಿ ಆದಲ್ಲಿ ಯಾವ ರೀತಿ ಕೋಳಿ ಮರಿ ಇರಬಹುದೆಂದು ಕುತೂಹಲ ಎಲ್ಲರನ್ನು ಕಾಡುತ್ತಿದೆ.

  • ಪತಿಗೆ ಮತ್ತು ಬರುವ ಮಾತ್ರೆ ಹಾಕಿದ ಜ್ಯೂಸ್ ಕುಡ್ಸಿ, ಇಂಜೆಕ್ಷನ್ ಕೊಟ್ಟು ಸಾಯಿಸಿದ್ಳು? 

    ಪತಿಗೆ ಮತ್ತು ಬರುವ ಮಾತ್ರೆ ಹಾಕಿದ ಜ್ಯೂಸ್ ಕುಡ್ಸಿ, ಇಂಜೆಕ್ಷನ್ ಕೊಟ್ಟು ಸಾಯಿಸಿದ್ಳು? 

    ಹಾಸನ: ಪತಿಗೆ ಜ್ಯೂಸ್‍ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಬಳಿಕ ಇಂಜೆಕ್ಷನ್ ಮೂಲಕ ವಿಷವುಣಿಸಿ ಪತ್ನಿ ಸಾಯಿಸಿರೋ ಆರೋಪವೊಂದು ಕೇಳಿಬಂದಿದೆ.

    24 ವರ್ಷದ ಆಶಾ ಈ ಮೇಲೆ ಪತಿ ವಿಶ್ವನಾಥ್(28) ಎಂಬವರನ್ನು ಕೊಲೆಗೈದ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?: ಅರಸೀಕೆರೆ ತಾಲೂಕು ಕಿತ್ತನಗೆರೆ ಗ್ರಾಮದ ವಿಶ್ವನಾಥ್ ಮತ್ತು ಆಶಾ ಮದುವೆ ಫೆ. 17ಕ್ಕೆ ನಡೆದಿದ್ದು, ಏ. 28 ಕ್ಕೆ ಹಿಂದೆ ಪತ್ನಿ ಆಶಾ ಫ್ರೆಂಡ್ ಮನೆಯಲ್ಲಿ ನಾಮಕರಣ ಇದೆ ಅಂತಾ ವಿಶ್ವನಾಥ್ ಅವರನ್ನು ಕರೆದುಕೊಂಡು ಬಂದು ಮಹಾರಾಜ ಪಾರ್ಕ್ ನಲ್ಲಿ ಕುಳಿತಿರುತ್ತಾರೆ. ಈ ವೇಳೆ ಏಕಾಏಕಿ ಕುಸಿದು ಬಿದ್ದ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇದಾದ ಬಳಿಕ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ವಿಶ್ವನಾಥ್ ಅವರು ಮೇ 2ರ ಸಂಜೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ವಿಶ್ವನಾಥ್ ಹೇಳಿದ್ದೇನು?: ಮದುವೆಯಾದ ಬಳಿಕ ಹುಟ್ಟುವ ಮಗುವಿನ ಬಗ್ಗೆ ನಮ್ಮಲ್ಲಿ ಚರ್ಚೆ ನಡೆದಿತ್ತು. ಮಹಾರಾಜ ಪಾರ್ಕ್ ನಲ್ಲಿ ನಾವು ಕುಳಿತ್ತಿದ್ದಾಗ ಆಶಾ ಭವಿಷ್ಯದಲ್ಲಿ ಹುಟ್ಟುವ ಮಗು ಬೆಳ್ಳಗಿರಬೇಕು ಎಂದು ಹೇಳಿ ಮಾತ್ರೆ ಮತ್ತು ಜ್ಯೂಸ್ ನೀಡಿದ್ದಳು. ಆಕೆಯ ಮಾತನ್ನು ನಂಬಿ ನಾನು ಜ್ಯೂಸ್‍ನೊಂದಿಗೆ 4-5 ಮಾತ್ರೆ ನುಂಗಿದ್ದೇನೆ. ಬಳಿಕ ನನಗೆ ಏನಾಯ್ತು ಗೊತ್ತಿಲ್ಲ ಎಂದು ಎಂದು ವಿಶ್ವನಾಥ್ ಸಂಬಂಧಿಕರಿಗೆ ಆಸ್ಪತ್ರೆಯಲ್ಲಿ ತಿಳಿಸಿದ್ದರು.

    ಪಾರ್ಕ್ ನಿಂದ ಕಾಲ್ಕಿತ್ತ ಪತ್ನಿ: ಪತಿ ಪ್ರಜ್ಞೆ ತಪ್ಪಿ ಬಿದ್ದ ಕೂಡಲೇ ಆಶಾ ಪಾರ್ಕ್ ನಿಂದ ಕಾಲ್ಕಿತ್ತಿದ್ದಾಳೆ. ಹೀಗಾಗಿ ಈಕೆಯೇ ವಿಶ್ವನಾಥ್ ಅವರನ್ನು ಕೊಲೆ ಮಾಡಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿ ದೂರು ನೀಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆಶಾಳನ್ನು ವಶಕ್ಕೆ ಪಡೆದು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.