Tag: Tabala Nani

  • ಪ್ರಣಂ ದೇವರಾಜ್ ನಟಿಸಿರುವ `ಸನ್ ಆಫ್ ಮುತ್ತಣ್ಣ’ ರಿಲೀಸ್ ಡೇಟ್ ಫಿಕ್ಸ್

    ಪ್ರಣಂ ದೇವರಾಜ್ ನಟಿಸಿರುವ `ಸನ್ ಆಫ್ ಮುತ್ತಣ್ಣ’ ರಿಲೀಸ್ ಡೇಟ್ ಫಿಕ್ಸ್

    ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಪ್ರಣಂ ದೇವರಾಜ್ (Pranam Devaraj) ನಾಯಕನಾಗಿ ನಟಿಸಿರುವ `S\O ಮುತ್ತಣ್ಣ’ ಚಿತ್ರ (Son of Muthanna Movie) ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಈ ಚಿತ್ರದ ಕಮಂಗಿ ನನ್ನ ಮಗನೆ ಹಾಡು ಈಗಾಗಲೇ ಜನಮನ ಗೆದ್ದಿದೆ. ಟೀಸರ್ ಕೂಡ ಮೆಚ್ಚುಗೆ ಪಡೆದಿದೆ. ಬಹು ನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಆ ಕಾತುರಕ್ಕೆ ಈಗ ತೆರೆ ಬಿದ್ದಿದೆ.

    “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಪ್ರತಿಷ್ಠಿತ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಕರ್ನಾಟಕದಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಆಗಸ್ಟ್ ಮೊದಲವಾರದಲ್ಲಿ ಚಿತ್ರವನ್ನು ಅಮೆರಿಕ ಹಾಗೂ ದುಬೈನಲ್ಲಿ ಬಿಡುಗಡೆ ಮಾಡುವ ಸಿದ್ದತೆಯನ್ನು ಚಿತ್ರತಂಡ ನಡೆಸಿದೆ. ಇದನ್ನೂ ಓದಿ: ರಾಮಾಯಣ ಫಸ್ಟ್ ಟೈಟಲ್ ಟೀಸರ್ ರಿಲೀಸ್: ರಾಮ-ರಾವಣನ ಆರ್ಭಟ ಶುರು

    ಅಪ್ಪ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು (Rangayana Ragu) ಹಾಗೂ ಪ್ರಣಂ ದೇವರಾಜ್ ತಂದೆ – ಮಗನಾಗಿ ಅಭಿನಯಿಸದ್ದಾರೆ. ಅಪ್ಪ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗಲಿದೆ. ಇದನ್ನೂ ಓದಿ: 2026ರ ಹಾಲಿವುಡ್ ವಾಕ್ ಆಫ್ ಫೇಮ್‌ ಗೌರವಕ್ಕೆ ಪಾತ್ರರಾದ ದೀಪಿಕಾ ಪಡುಕೋಣೆ

    ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್‌ಆರ್‌ಕೆ ಫಿಲಂಸ್ ಸಾಥ್ ನೀಡಿದೆ. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ. ಇದನ್ನೂ ಓದಿ: ಡೆವಿಲ್ ಸಿನಿಮಾದಲ್ಲಿ ನಟಿಸಿಲ್ಲ ದರ್ಶನ್ ಪುತ್ರ

  • ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್: ಕಂಬನಿ ಮಿಡಿದ ತಬಲಾ ನಾಣಿ

    ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್: ಕಂಬನಿ ಮಿಡಿದ ತಬಲಾ ನಾಣಿ

    ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆ (Suicide) ಸುದ್ದಿ ತಿಳಿದು ನಟ ತಬಲಾ ನಾಣಿ (Tabala Nani) ಕಂಬನಿ ಮಿಡಿದಿದ್ದಾರೆ. ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್ ಎಂದಿದ್ದಾರೆ.  ಅವರ ಜೊತೆಗಿನ ಒಡನಾಟವನ್ನು ನಟ ‘ಪಬ್ಲಿಕ್‌ ಟಿವಿ’ ಜೊತೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮುನ್ನವೇ ಬದುಕಿನ ಆಟ ಮುಗಿಸಿದ ಗುರುಪ್ರಸಾದ್

    ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ಕೇಳಿ ಬೇಜಾರಾಯಿತು. ಅವರು 10 ಜನಕ್ಕೆ ಆಗೋವಷ್ಟು ಬುದ್ಧಿವಂತ, ಅವರಿಗೆ ಅಷ್ಟು ತಲೆ ಇತ್ತು. ಏನಿಕ್ಕೆ ಹೀಗೆ ಮಾಡಿಕೊಂಡರು ಗೊತ್ತಾಗುತ್ತಿಲ್ಲ. ಸಹವಾಸಗಳ ಸಮಸ್ಯೆನೋ, ಕೆಟ್ಟ ಚಟಗಳ ಸಮಸ್ಯೆಯೋ ತಿಳಿಯುತ್ತಿಲ್ಲ. ಈಗ ನಾವೇನಾದ್ರೂ ಮಾತನಾಡಿದ್ರೆ ಗುರು ನಿಂದನೆಯಾಗುತ್ತದೆ. ನನಗೆ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್. ‘ಮಠ’, ‘ಎದ್ದೇಳು ಮಂಜುನಾಥ’ ಸಿನಿಮಾ ಟೀಮ್ ಅದೆಷ್ಟು ಚೆನ್ನಾಗಿತ್ತು ಎಂದು ಸ್ಮರಿಸಿದರು ತಬಲಾ ನಾಣಿ.

    ಕಡೆಯದಾಗಿ ಒಂದು ಫಂಕ್ಷನ್‌ನಲ್ಲಿ ಸಿಕ್ಕಿದ್ದರು. ಎಷ್ಟು ಟ್ಯಾಲೆಂಟೆಡ್ ಆಗಿದ್ರೂ, ಅವರು ಹೀಗೆ ಮಾಡಿಕೊಂಡಿದ್ದಾರೆ ಅಂದರೆ ನಂಬೋಕೆ ಆಗ್ತಿಲ್ಲ. ಕೆಲಸದಲ್ಲಿ ಪಾದರಸದ ಹಾಗೇ ಇದ್ರೂ, ಒಂದು ಕೇಳಿದ್ರೆ 10 ಉತ್ತರ ಕೊಡುತ್ತಿದ್ದರು. ಮೊದಲ ಬಾರಿಗೆ ಅವರನ್ನು ಭೇಟಿಯಾದಾಗ ಒಂದು ಮಾತು ಹೇಳಿದ್ದರು. ನಿಮಗೆ ತುಂಬಾ ಟ್ಯಾಲೆಂಟ್ ಇದೆ, ನನ್ನ ಜೊತೆ ಇರಿ ಇಡೀ ಕರ್ನಾಟಕ ನಿಮ್ಮನ್ನು ಗುರುತಿಸಬೇಕು ಹಾಗೇ ಮಾಡುತ್ತೇನೆ ಎಂದಿದ್ದರು. ಅಂದು ಗುರುಪ್ರಸಾದ್ ಹೇಳಿದ ಮಾತನ್ನು ಅವರು ಉಳಿಸಿಕೊಂಡರು.

    ಮಠ, ಎದ್ದೇಳು ಮಂಜುನಾಥ ಸಿನಿಮಾನೇ ಮೂಲಕ ನಾನು ಯಾರು ಎಂದು ಜನಕ್ಕೆ ಗೊತ್ತಾಗಿದ್ದು. ಈಗ ಅವರ ಈ ಸುದ್ದಿ ಬೇಸರ ಆಗ್ತಿದೆ. ನಾನು 7 ವರ್ಷಗಳ ಕಾಲ ಅವರ ಜೊತೆ ಇದ್ದೆ, ನಾನು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದೆ. ಅವರಿಗೆ ದೇವರು ಎಲ್ಲಾ ಕೊಟ್ಟಿದ್ದ, ಆದ್ರೂ ಯಾಕೆ ಹೀಗೆ ಆಯ್ತು ಎಂದು ಬೇಸರ ವ್ಯಕ್ತಪಡಿಸಿದರು. ನಾವು ಕರೆ ಮಾಡಿದರೂ ಅವರು ಕಾಲ್ ರಿಸೀವ್ ಮಾಡುತ್ತಿರಲ್ಲಿಲ್ಲ. ಈಗೀನ ಅವರ ಪರಿಸ್ಥಿತಿ ಹೇಗಿತ್ತು ಎಂಬುದು ಗೊತ್ತಿಲ್ಲ. ಅಷ್ಟು ಬುದ್ಧಿವಂತ ವ್ಯಕ್ತಿಗೆ ಹೀಗೆ ಮಾಡಿಕೊಂಡಿದ್ದಾರೆ ಎಂಬುದು ಅರಗಿಸಿಕೊಳ್ಳಲು ಆಗ್ತಿಲ್ಲ. ಅವರಿಗೆ ಸಾಲವೇ ಶೂಲ ಆಗಿಬಿಟ್ಟಿತ್ತಾ? ಗೊತ್ತಾಗುತ್ತಿಲ್ಲ ಎಂದು ಗುರುಪ್ರಸಾದ್ ಆತ್ಮಹತ್ಯೆಗೆ ಕಂಬನಿ ಮಿಡಿದಿದ್ದಾರೆ.

  • ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ

    ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ

    ಸ್ಯಾಂಡಲ್‌ವುಡ್‌ನ  (Sandalwood) `ಟಗರು’ (Tagaru) ಚೆಲುವೆ ಮಾನ್ವಿತಾ ಕಾಮತ್ (Manvitha Kamath) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಯಂಗ್ ಹೀರೋ ಲವ್ಲಿ ಸ್ಟಾರ್ ಪ್ರೇಮ್‌ಗೆ ಮಾನ್ವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ.

    ʻಕೆಂಡಸಂಪಿಗೆʼ, ʻಟಗರುʼ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ಪ್ರತಿಭಾನ್ವಿತ ನಟಿ ಮಾನ್ವಿತಾ ಕಾಮತ್ ಅವರು ಕಳೆದ ವರ್ಷ `ಶಿವ 143′ (Shiva 143) ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಇದೀಗ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆಲ್ಲಲು `ಟಗರು’ ಬ್ಯೂಟಿ ಮಾನ್ವಿತಾ ರೆಡಿಯಾಗಿದ್ದಾರೆ. ತಮ್ಮ ಸಿನಿಮಾ ಮತ್ತು ಪಾತ್ರದ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟಿ ಮಾನ್ವಿತಾ ಮಾಹಿತಿ ನೀಡಿದ್ದಾರೆ.

    ಈ ಚಿತ್ರದ ಕಥೆ ತಂದೆಯ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ತಿಳಿಸುವ ಚಿತ್ರ ಇದಾಗಿದ್ದು, ತಂದೆ-ತಾಯಿಯನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬ ಒನ್‌ಲೈನ್ ಸ್ಟೋರಿಯನ್ನ ಹೊಂದಿದೆ. ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ ಜೊತೆ ನಟಿಸುತ್ತಿದ್ದೇನೆ ಈ ಬಗ್ಗೆ ಖುಷಿಯಿದೆ. ಅವರು ನಮ್ಮ ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ನಟ ಎಂದು ಮಾನ್ವಿತಾ ಅವರು ತಿಳಿಸಿದ್ದಾರೆ.

    ತಬಲಾ ನಾಣಿ (Tabala Nani) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಗೇಶ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಬಲಾ ನಾಣಿ ಮತ್ತು ಪ್ರೇಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್‌ಗೆ ಮಾನ್ವಿತಾ ನಾಯಕಿಯಾಗಿದ್ದಾರೆ. ಇದನ್ನೂ ಓದಿ: ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಇನ್ನೂ ನಟಿ ಮಾನ್ವಿತಾ ಅವರಿಗೆ ನಿರ್ದೇಶನದ (Direction) ಕಡೆಗೂ ಒಲವಿದೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಮಾನ್ವಿತಾ ಅವರು ನಿರ್ದೇಶನದ ಕಥೆ ಅದ್ಯಾವಾಗ ತೆರೆಯ ಮೇಲೆ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗುತ್ತಾ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ಬೆಂಗಳೂರು: ಪ್ರತಿ ಬಾರಿಯೂ ಅಪ್ಪು ಜೊತೆ ದಿ. ಡಾ. ರಾಜ್ ಕುಮಾರ್ ಸಮಾಧಿ ನೋಡಲು ಬರುತ್ತಿದ್ದೆವು. ಆದರೆ ಈಗ ಅವರದ್ದೇ ಸಮಾಧಿ ನೋಡಲು ಬರವಂತೆ ಆಗಿದೆ ಎಂದು ನಟ ತಬಲಾ ನಾಣಿ ಕಣ್ಣೀರು ಹಾಕಿದ್ದಾರೆ.

    ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪು ಅವರನ್ನು ಮರೆಯೋಕೆ ಆಗುತ್ತಿಲ್ಲ. ಅವರು ವಾಪಾಸ್ ಬರಲ್ಲ ಅನ್ನೋದು ಗೊತ್ತು. ಆದರೂ ಮನಸ್ಸು ಕೇಳುತ್ತಿಲ್ಲ. ಪುನೀತ್ ನಮ್ಮ ನಾಡಿನ ಹೆಮ್ಮೆ, ಎಷ್ಟು ಜನರನ್ನ ಸಂಪಾದನೆ ಮಾಡಿದ್ದಾರೆ. ಎಷ್ಟೋ ಸಮಾಜಮುಖಿ ಕೆಲಸ ಮಾಡಿದ್ದಾರೆ. ಅವರು ಇದ್ದಾಗ ಇವೆಲ್ಲ ಗೊತ್ತೇ ಆಗಿಲ್ಲ ಎಂದರು. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಈಗ ಅವರು ಏನೇಲ್ಲ ಮಾಡಿದ್ರು ಅನ್ನೋದು ನೋಡಿದ್ರೇ ಹೆಮ್ಮೆ ಅನಿಸುತ್ತಿದೆ. ಅಪ್ಪು ತರ ನಿಮ್ಮ ಮಕ್ಕಳನ್ನ ಬೆಳೆಸಿ. ಅಪ್ಪು ರೀತಿ ಡ್ಯಾನ್ಸ್, ಆಕ್ಟಿಂಗ್ ಕಲಿಸಿ, ಅಪ್ಪುಗೆ ಸಾವಿಲ್ಲ. ಅವರು ನಮ್ಮ ಜೊತೆಯೇ ಇರುತ್ತಾರೆ, ಅಪ್ಪುಗೆ ಮರಣವಿಲ್ಲ. ಅಪ್ಪು ಅಮರ ನಟ ಎಂದು ನಾಣಿ ಬಣ್ಣಿಸಿದರು. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

  • ‘ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್ ಔಟ್- ಸಿನಿಪ್ರಿಯರ ಮೆಚ್ಚುಗೆ

    ‘ಕ್ರಿಟಿಕಲ್ ಕೀರ್ತನೆಗಳು’ ಟ್ರೇಲರ್ ಔಟ್- ಸಿನಿಪ್ರಿಯರ ಮೆಚ್ಚುಗೆ

    ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಗೆಲುವಿನ ನಗೆ ಬೀರಿದ್ದ ನಿರ್ದೇಶಕ ಕುಮಾರ್ ಈಗ ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಐಪಿಎಲ್ ಬೆಟ್ಟಿಂಗ್ ಕಟ್ಟುವವರ ಕಥೆ-ವ್ಯಥೆಗಳನ್ನು ಹೇಳ ಹೊರಟಿದ್ದಾರೆ.

    ಸಿನಿಮಾ ಶೀರ್ಷಿಕೆಯೇ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡಿದೆ. ಟ್ರೇಲರ್ ಇಂಟ್ರಸ್ಟಿಂಗ್ ಆಗಿ ಮೂಡಿಬಂದಿದ್ದು, ಸಿನಿರಸಿಕರ ಮನಗೆದ್ದಿದೆ. ಚಿತ್ರದ ಹಾಡುಗಳ ಮೂಲಕ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ ಈಗ ಟ್ರೇಲರ್ ಮೂಲಕ ಮತ್ತಷ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿರ್ದೇಶಕರು ಮೊದಲೇ ಹೇಳಿದಂತೆ ಈ ಚಿತ್ರ ಐಪಿಎಲ್ ಬೆಟ್ಟಿಂಗ್ ಸುತ್ತ ಹೆಣೆಯಲಾಗಿದ್ದು ಹಾಸ್ಯದ ಮೂಲಕವೇ ಸಂದೇಶವೊಂದನ್ನು ರವಾನಿಸಲು ಹೊರಟಿದ್ದಾರೆ ನಿರ್ದೇಶಕ ಕುಮಾರ್.

    ಚಿತ್ರದಲ್ಲಿ ತಬಲ ನಾಣಿ, ಸುಚೇಂದ್ರ ಪ್ರಸಾದ್, ತರಂಗ ವಿಶ್ವ, ರಾಜೇಶ್ ನಟರಂಗ ಅಪೂರ್ವ, ಅರುಣಾ ಬಾಲರಾಜ್ ಒಳಗೊಂಡಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಶಿವ ಸೇನಾ ಮತ್ತು ಶಿವಶಂಕರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ನಿರ್ದೇಶನ `ಕ್ರಿಟಿಕಲ್ ಕೀರ್ತನೆಗಳು’ ಚಿತ್ರಕ್ಕಿದೆ.

    ಕೇಸರಿ ಫಿಲಂಸ್ ಕ್ಯಾಪ್ಚರ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ನಿರ್ದೇಶಕ ಕುಮಾರ್ ಹಾಗೂ ಸ್ನೇಹಿತರ ಬಳಗ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೊದಲ ಸಿನಿಮಾ ಯಶಸ್ಸಿನ ಸಂಭ್ರಮದಲ್ಲೇ ನಿರ್ದೇಶಕ ಕುಮಾರ್ ಈ ಸಿನಿಮಾ ಕೈಗೆತ್ತಿಕೊಂಡಿದ್ದು ಮತ್ತೊಂದು ಗೆಲುವನ್ನು ತಮ್ಮ ಖಾತೆಗೆ ಹಾಕಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು ರಾಜ್ಯದ ನಾಲ್ಕು ಭಾಗಗಳಲ್ಲಿ ನಡೆಯುವ ಕಥೆಯನ್ನು ಚಿತ್ರ ಒಳಗೊಂಡಿದೆರ. ಕಾಮಿಡಿ ಜೊತೆ ಭಾವನಾತ್ಮಕ ಅಂಶಗಳು ಸಿನಿಮಾದಲ್ಲಿದ್ದು, ಸೆನ್ಸಾರ್?ನಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ‘ಕ್ರಿಟಿಕಲ್ ಕೀರ್ತನೆಗಳು’ ಏಪ್ರಿಲ್ ಅಥವಾ ಮೇನಲ್ಲಿ ಚಿತ್ರಮಂದಿರಕ್ಕೆ ಬರಲಿದೆ.

  • ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಕೇಳೋಕೆ ಅದೇನೋ ಒಂಥರ ಖುಷಿ. ತನ್ನ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡವರು. ಇದೀಗ ಅದೇ ಖಡಕ್ ಡೈಲಾಗ್ ಹೊಡೆಯಲು ರೆಡಿಯಾಗಿದ್ದಾರೆ. ಹೌದು ಸಾಯಿಕುಮಾರ್ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇದೇ ತಿಂಗಳ 28ಕ್ಕೆ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

    ಟ್ರೇಲರ್ ನೋಡಿದವರಿಗೆ ಸಿನಿಮಾ ಹೇಗಿರಲಿದೆ ಎಂಬುದು ಅರ್ಥವಾಗಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ. ಸಾಯಿ ಕುಮಾರ್ ಇದ್ರೆ ಅಲ್ಲೊಂದು ರೌಡಿಸಂ ಡೈಲಾಗ್ ಗಳ ಸುರಿಮಳೆ ಅಲ್ವೆ. ಅದೇ ರೀತಿ ಸಿನಿಮಾದಲ್ಲಿ ಗನ್ನು, ಮಚ್ಚು-ಲಾಂಗು ಬೀಸುತ್ತೆ, ರಕ್ತ ಹರಿಯುತ್ತೆ, ಡೈಲಾಗ್ ಗಳ ಸುರಿಮಳೆ ಸುರಿಯುತ್ತೆ. ಹೆಚ್ಚು ರೌಡಿಸಂ ದೃಶ್ಯಗಳೆ ಟ್ರೇಲರ್ ನಲ್ಲಿ ಓಡಾಡುತ್ತಿವೆ. ಇದರ ನಡುವೆ ಕಾಮಿಡಿ ಜೊತೆಗೆ ನಾಯಕನಿಗೊಂದು ಲವ್ ಸ್ಟೋರಿ ಇರುವುದು ಟ್ರೇಲರ್ ನಲ್ಲಿ ವ್ಯಕ್ತವಾಗಿದೆ.

    ನಾಯಕ ಲಿಕಿತ್ ರಾಜ್ ಅಭಿನಯ ಕೂಡ ಮೆಚ್ಚುವಂತಿದೆ. ಪಕ್ಕಾ ಮಾಸ್ ಸ್ಟೋರಿಗೆ ಮ್ಯಾಚ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಂಶ ಕೂಡ ಇದೆ. ನಾಯಕ ಮತ್ತು ಖಡಕ್ ಪೊಲೀಸ್ ಆಫೀಸರ್ ಆಗಿರುವ ಸಾಯಿ ಪ್ರಕಾಶ್ ನಡುವೆ ಜುಗಲ್ ಬಂದಿ ಕ್ರಿಯೇಟ್ ಆಗುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ನಾಯಕ ರೌಡಿಸಂ, ಪ್ರೇಯಸಿಯ ಮುಗ್ಧತೆ, ತಾಯಿಯನ್ನ ಯಾರೋ ಕೊಲ್ಲುವುದು, ನಾಯಕ ಮುಂದೇನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದ್ದಾರೆ ಓಂ ಸಾಯಿ ಪ್ರಕಾಶ್. ಇದೇ 28 ರಂದು ಸಿನಿಮಾ ತೆರೆಗೆ ಬರಲಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲೆ ಉತ್ತರ ಕಂಡುಕೊಳ್ಳಬೇಕಿದೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಾಯಿ ಸರ್ವೇಶ್ ಸಾಹಿತ್ಯ ನೀಡಿದ್ದಾರೆ. ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್ ಹಾಗೂ ಲಿಖಿತ್ ರಾಜ್ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

  • ಮಂಜುಕವಿಯ ‘ಟೆಂಪರ್’ ಚಿತ್ರಕ್ಕೆ ಚಾಲನೆ

    ಮಂಜುಕವಿಯ ‘ಟೆಂಪರ್’ ಚಿತ್ರಕ್ಕೆ ಚಾಲನೆ

    ನ್ನಡ ಚಿತ್ರರಂಗದಲ್ಲಿ ಕಳೆದ ಐದಾರು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕನಾಗಿ ಕೆಲಸ ಮಾಡಿರುವ ಮಂಜುಕವಿ ಈಗ ಚಲನಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಹಳ್ಳಿ ಸೊಗಡಿನಲ್ಲಿ ನಡೆಯುವ ಮಾಸ್ ಲವ್‍ಸ್ಟೋರಿ ಹೊಂದಿರುವ ‘ಟೆಂಪರ್’ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ನಿರ್ದೇಶಕ ನಂದಕಿಶೋರ್ ಕ್ಲ್ಯಾಪ್ ಮಾಡಿದರೆ ನಟ ತಬಲಾನಾಣಿ ಕ್ಯಾಮರಾ ಚಾಲನೆ ಮಾಡಿದರು. ಇದೇ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಆರ್ಯನ್ ಸೂರ್ಯ ಹಾಗೂ ಕಾಶಿಮಾ ಈ ಚಿತ್ರದ ನಾಯಕ-ನಾಯಕಿ. ತಬಲಾ ನಾಣಿ ನಾಯಕನ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಪತ್ರಕರ್ತ ಧನು ಯಲಗಚ್ ನಾಯಕನ ಮತ್ತೊಬ್ಬ ಸ್ನೇಹಿತನಾಗಿಯೂ ಬಣ್ಣ ಹಚ್ಚುತ್ತಿದ್ದಾರೆ. ಪವನ್ ಈ ಚಿತ್ರದಲ್ಲಿ ಒಬ್ಬ ಮೂಗ ಹಾಗೂ ನಾಯಕನ ಮತ್ತೊಬ್ಬ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ಎಂ.ಪಿ. ಸಿನಿ ಕ್ರಿಯೇಷನ್ಸ್ ಮೂಲಕ ಡಾ.ಹೆಚ್.ಎಂ.ರಾಮಚಂದ್ರ ಹಾಗೂ ವಿ.ವಿನೋದ್‍ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಿಸುತ್ತಿದ್ದಾರೆ.

    ಮುಹೂರ್ತದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಂಜುಕವಿ, ಈ ಚಿತ್ರದ ನಾಯಕನಿಗೆ ಚಿಕ್ಕವನಾದಾಗಿನಿಂದ ಯಾವುದೇ ವಿಷಯಕ್ಕಾದರೂ ಶೀಘ್ರವೇ ಕೋಪಗೊಳ್ಳುವಂತಹ ಗುಣವಿರುತ್ತದೆ. ಒಂಥರಾ ಶಾರ್ಟ್ ಟೆಂಪರ್. ಹಾಗಾಗಿ ಅದನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಸೆಲೆಕ್ಟ್ ಮಾಡಿಕೊಂಡಿದ್ದೇವೆ. ಮಜಾ ಟಾಕೀಸ್ ಖ್ಯಾತಿಯ ಪವನ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ. ನಂಜನಗೂಡು, ಮೈಸೂರು, ಮಡಿಕೇರಿ, ಮಂಡ್ಯ ಸುತ್ತಮುತ್ತ 45 ದಿನಗಳ ಶೂಟಿಂಗ್ ಪ್ಲಾನ್ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

    ಖಳನಟ ಬಲ ರಾಜವಾಡಿ ಮಾತನಾಡಿ, ನಾನು ಹಳ್ಳಿಯ ಪ್ರಮುಖ. ಇಬ್ಬರು ತಮ್ಮಂದಿರೂ ದುಷ್ಟರು. ಆರಂಭದಲ್ಲಿ ಸಾಧ್ವಿಕನಾಗಿ ತೋರಿಸಿಕೊಂಡರೂ ಕೊನೆಯಲ್ಲಿ ತಮ್ಮಂದಿರು ಕೆಟ್ಟವರಾಗಲು ನಾನೇ ಕಾರಣ ಅಂತ ಗೊತ್ತಾಗುತ್ತೆ ಎಂದು ಹೇಳಿದರು.

    ನಟ ತಬಲಾನಾಣಿ ಮಾತನಾಡಿ, ನಾನು ನಾಯಕನ ತಂದೆ. ಮಕ್ಕಳಿಗೆ ಜನ್ಮ ಕೊಡಬಹುದು. ಆದರೆ ಹಣೆಬರಹ ಬರೆಯಲಿಕ್ಕಾಗುತ್ತಾ ಎಂಬ ಮನೋಭಾವನೆಯುಳ್ಳವನು. ಮಕ್ಕಳನ್ನು ಚಿಕ್ಕವರಿದ್ದಾಗಿನಿಂದಲೇ ಸುಸಂಸ್ಕೃತರಾಗಿ ಬೆಳೆಸದಿದ್ದರೆ ಅವರು ದೊಡ್ಡವರಾದ ಮೇಲೆ ಅದರ ಪರಿಣಾಮ ಏನಾಗುತ್ತದೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.

    ನಾಯಕಿ ಕಾಶಿಮಾ ಮಾತನಾಡಿ, ಚಿತ್ರದಲ್ಲಿ ನಾನು ಊರಗೌಡನ ಮಗಳು. ಮೆಡಿಕಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ನಾಯಕನನ್ನು ಲವ್ ಮಾಡಿದ ನಂತರ ಏನಾಗುತ್ತೆ ಅನ್ನೋದು ಈ ಚಿತ್ರದಲ್ಲಿದೆ ಎಂದು ಹೇಳಿದರು.

    ಈ ಚಿತ್ರದಲ್ಲಿ 4 ಹಾಡುಗಳಿದ್ದು ಆರ್. ಹರಿಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ತಬಲಾನಾಣಿ ಸಂಭಾಷಣೆ, ಆರ್.ಕೆ.ಶಿವಕುಮಾರ್ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ. ಯತಿರಾಜ್ ಹಾಗೂ ದಿನೇಶ್ ಊರಗೌಡನ ಇಬ್ಬರು ದುಷ್ಟ ಸಹೋದರರಾಗಿ ನಟಿಸುತ್ತಿದ್ದಾರೆ. ಬಿ.ಎಸ್. ಕೆಂಪರಾಜ್ ಈ ಚಿತ್ರದ ಸಂಕಲನಕಾರರು.

  • ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ನಕ್ಕು ನಿರಾಳವಾಗಲು ನೋಡಲೇ ಬೇಕಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ!

    ಬೆಂಗಳೂರು: ಸಮಸ್ಯೆಗಳು ಏನೇ ಇದ್ದರೂ ನಗುಮುಖದಿಂದಲೇ ಎದುರುಗೊಂಡರೆ ಎಲ್ಲವೂ ಸುಖಮಯವಾಗಿರುತ್ತದೆ ಅಂತೊಂದು ಮಾತಿದೆ. ಅದರ ಸಾರವನ್ನೇ ಆತ್ಮವಾಗಿಸಿಕೊಂಡು ಭರಪೂರ ನಗುವಿನ ಒಡ್ಡೋಲಗದಲ್ಲಿಯೇ ಗಂಭೀರ ವಿಚಾರವನ್ನ ಹೇಳೋ ವಿಭಿನ್ನ ಬಗೆಯ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇಲ್ಲಿ ಎಲ್ಲರ ಬದುಕಿಗೂ ಹತ್ತಿರಾದ ಗಂಭೀರ ವಿಚಾರಗಳಿವೆ. ಭಾವನಾತ್ಮಕ ಸನ್ನಿವೇಶಗಳೂ ಇವೆ. ಪ್ರೀತಿ, ಪ್ರೇಮ ಸೇರಿದಂತೆ ಎಲ್ಲವೂ ಇವೆ. ಆದರೆ ಯಾವುದೂ ಗೋಜಲಾಗದಂತೆ ನೋಡುಗರನ್ನೆಲ್ಲ ಜಂಜಾಟ ಮರೆತು ನಗುವಂತೆ ಮಾಡೋ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ.

    ಪೋಸ್ಟರ್‍ಗಳ ಮೂಲಕವೇ ಇದು ಭಿನ್ನ ಜಾಡಿನ ಚಿತ್ರ ಅನ್ನೋ ಸುಳಿವು ಸಿಕ್ಕಿತ್ತು. ಟ್ರೈಲರ್ ಹೊರ ಬಂದಾಗ ಈ ಸಿನಿಮಾ ಪೋಲಿತನ ಹೊದ್ದ ಸಂಭಾಷಣೆಗಳಿಂದಲೇ ಶೃಂಗರಿಸಲ್ಪಟ್ಟಿದೆಯಾ ಎಂಬ ಗುಮಾನಿಯೂ ಕಾಡಿತ್ತು. ಆದರೆ ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮುಖದಲ್ಲಿಯೂ ವಿಶಿಷ್ಟವಾದ ಚಿತ್ರವೊಂದನ್ನು ನೋಡಿದ ತೃಪ್ತಿಯ ಮಂದಹಾಸ ಸ್ಪಷ್ಟವಾಗಿಯೇ ಮೂಡಿಕೊಳ್ಳುತ್ತದೆ. ಇದುವೇ ಡಿಎಸ್ ಮಂಜುನಾಥ್ ನಿರ್ಮಾಣ ಮಾಡಿರೋ ಕುಮಾರ್ ನಿರ್ದೇಶನದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಗೆಲುವಿನ ಮೊದಲ ಹೆಜ್ಜೆ!

    ಈ ಸಿನಿಮಾ ಕಥೆ ತೀರಾ ಸಂಕೀರ್ಣವಾದದ್ದೇನೂ ಅಲ್ಲ. ಆದರೆ ಅದನ್ನು ಹೇಳಿರೋ ರೀತಿ, ದೃಶ್ಯ ಕಟ್ಟಿರೋ ಜಾಣ್ಮೆಯೇ ಎಲ್ಲರಿಗೂ ಆಪ್ತವಾಗಿಸುತ್ತದೆ. ಮಧ್ಯಮ ವರ್ಗದ ಅಪ್ಪ ಅಮ್ಮ ಮತ್ತು ಅವರಿಗೊಬ್ಬ ಮಗ ಉತ್ತರ ಕುಮಾರ. ಎದೆಮಟ್ಟ ಬೆಳೆದ ಮಗನಿಗೆ ಊರು ತುಂಬಾ ನೂರಾರು ಹುಡುಗೀರನ್ನ ನೋಡಿದರೂ ಸಂಬಂಧ ಕುದುರಿಕೊಳ್ಳೋದಿಲ್ಲ. ಇದರಿಂದಾಗಿ ಈ ಪುಟ್ಟ ಕುಟುಂಬದ ಯಜಮಾನ ಕರಿಯಪ್ಪನಿಗೆ ಮಹಾ ತಲೆನೋವು ಶುರುವಾಗಿ ಬಿಡುತ್ತದೆ. ಒಂದು ಕಡೆ ಮಗನ ವಯಸ್ಸು ಮದುವೆಯ ಗಡಿ ದಾಟುತ್ತಿದೆ. ಇನ್ನೊಂದು ಕಡೆ ಯಾವ ಸಂಬಂಧವೂ ಕುದುರುತ್ತಿಲ್ಲ ಅನ್ನೋ ಸಂಕಟದಲ್ಲಿ ಕರಿಯಪ್ಪ ಇರುವಾಗಲೇ ಪುತ್ರ ಉತ್ತರ ಕುಮಾರ ಚೆಂದದ ಹುಡುಗಿಯೊಬ್ಬಳಿಗೆ ಕಾಳು ಹಾಕಲಾರಂಭಿಸಿರುತ್ತಾನೆ.

    ಹೀಗೆ ಪ್ರೀತಿಸಿ ಮದುವೆಯಾಗೋ ಉತ್ತರ ಕುಮಾರನಿಗೆ ಮೊದಲ ರಾತ್ರಿಯ ದಿನವೇ ಮರ್ಮಾಘಾತ ಮಾಡೋ ಅಂಶ ಯಾವುದು, ಒಂದು ಏಜಿನಲ್ಲಿ ಹೆಣ್ಣುಮಕ್ಕಳು ಆತುರದಿಂದ ವರ್ತಿಸೋದರಿಂದಾಗಿ ಏನೇನೆಲ್ಲ ಸಂಭವಿಸುತ್ತದೆ ಅನ್ನೋ ಕುತೂಹಲ ತಣಿಸಿಕೊಳ್ಳಲು ನೇರವಾಗಿ ಚಿತ್ರ ಮಂದಿರಕ್ಕೆ ತೆರಳಿ. ಅಲ್ಲಿ ಕರಿಯಪ್ಪನ ಕೆಮಿಸ್ಟ್ರಿ ನಿಮ್ಮನ್ನು ಭರಪೂರವಾಗಿ ನಗಿಸುತ್ತಲೇ ಭಾವುಕರನ್ನಾಗಿಸುತ್ತದೆ. ಮತ್ತೆ ನಗುವಿನ ಕಡಲಿಗೆ ತಳ್ಳಿ ಖುಷಿಗೊಳಿಸುತ್ತದೆ. ಈ ಸಿನಿಮಾದ ಅಸಲೀ ಯಶಸ್ಸಿನ ಗುಟ್ಟಿರೋದೇ ಅಲ್ಲಿ.

    ನಿರ್ದೇಶಕ ಕುಮಾರ್ ಪ್ರತೀ ಹಂತದಲ್ಲಿಯೂ ಸೂಕ್ಷ್ಮವಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಅದರಿಂದಲೇ ಅವರು ಗೆದ್ದಿದ್ದಾರೆ. ನಾಯಕ ಚಂದನ್ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಚೆಂದಗೆ ನಟಿಸಿದ್ದಾರೆ. ಕರಿಯಪ್ಪನ ಪಾತ್ರಕ್ಕೆ ಜೀವ ತುಂಬಿರೋ ತಬಲಾ ನಾಣಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಪಾತ್ರವರ್ಗವೂ ಆಪ್ತವಾಗಿದೆ. ಬದುಕಿನ ಕಥೆಯನ್ನು ಹಾಸ್ಯದ ಮೂಲಕವೇ ಹೇಳೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಲ್ಲರಿಗೂ ಇಷ್ಟವಾಗೋ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ.

    ರೇಟಿಂಗ್- 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಗಸ್ಟ್ ಮೊದಲ ವಾರ ‘ಪರದೇಸಿ ಕೇರಾಫ್ ಲಂಡನ್’ ಆಡಿಯೋ ರಿಲೀಸ್

    ಆಗಸ್ಟ್ ಮೊದಲ ವಾರ ‘ಪರದೇಸಿ ಕೇರಾಫ್ ಲಂಡನ್’ ಆಡಿಯೋ ರಿಲೀಸ್

    ಬೆಂಗಳೂರು: ನಟ ವಿಜಯ ರಾಘವೇಂದ್ರ ಹಾಗೂ ನಿರ್ದೇಶಕ ಎನ್ ರಾಜಶೇಖರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ದ್ವಿತೀಯ ಚಿತ್ರ ‘ಪರದೇಸಿ ಕೇರಾಫ್ ಲಂಡನ್’. ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿದಿದ್ದು, ಈಗ ಡಿಟಿಎಸ್ ಹಂತದಲ್ಲಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಯಾಗಲಿದೆ.

    ಮೈಸೂರು ಪಾಂಡವಪುರ, ಬಳ್ಳಾರಿ ಹಾಗೂ ಸಂಡೂರು ಸುತ್ತಮುತ್ತ ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗಿದೆ. ಪಾಂಡವಪುರದಲ್ಲಿ ವಿಶೇಷ ಸೆಟ್ಟೊಂದನ್ನು ಹಾಕಿ ಅಲ್ಲಿ ಹದಿನೈದು ಎತ್ತಿನಗಾಡಿ ಹಾಗೂ ಹತ್ತಕ್ಕೂ ಹೆಚ್ಚು ಟ್ರಾಕ್ಟರ್ ಗಳನ್ನು ಬಳಸಿ ಹಾಡೊಂದನ್ನು ಚಿತ್ರೀಕರಿಸಲಾಯಿತು. ಯೋಗರಾಜ್ ಭಟ್ ಅವರು ಬರೆದ ಹಾಡೊಂದನ್ನು ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

    ಬಿ.ವಿ.ಎಸ್. ಮೂವೀಸ್ ಲಾಂಛನದಲ್ಲಿ ಬಿ. ಬದರಿನಾರಾಯಣ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಚಿದಾನಂದ್ ಹೆಚ್.ಕೆ. ಛಾಯಾಗ್ರಹಣ, ವೀರಸಮರ್ಥ ಸಂಗೀತ, ವಿಜಯ ಭರಮಸಾಗರ ಸಂಭಾಷಣೆ, ಯೋಗರಾಜ್ ಭಟ್, ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್, ಶಿವು ಬೆರಗಿ ಹಾಗೂ ಎಂ. ರಾಜಶೇಖರ್ ಸಾಹಿತ್ಯ, ಕೆ.ಎಂ. ಪ್ರಕಾಶ್ ಸಂಕಲನ, ಕಲೈ ಮಾಸ್ಟರ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸವಿದೆ. ವಿಜಯರಾಘವೇಂದ್ರ, ರಾಶಿ, ಪೂಜಾ, ಪ್ರಶಾಂತ್ ಸಿದ್ಧಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಶೋಭರಾಜ್, ಕುರಿ ಪ್ರತಾಪ್, ಡ್ಯಾನಿಯಲ್ ಕುಟ್ಟಪ್ಪ, ಮೋಹನ್ ಜುನೇಜ, ಉಮೇಶ್, ಪೆಟ್ರೋಲ್ ಪ್ರಸನ್ನ, ಸಂಗೀತಾ, ಕುರಿ ಸುನಿಲ್ ಮುಂತಾದವರ ತಾರಾಗಣವಿದೆ.