Tag: T20 World Cup

  • ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    – ತಮ್ಮದೇ ದೇಶದ ಅಭಿಮಾನಿಗಳಿಂದ ಪಾಕ್‌ ತಂಡದ ವಿರುದ್ಧ ವ್ಯಾಪಕ ಟೀಕೆ

    ಫ್ಲೋರಿಡಾ: 2024ರ ಟಿ20 ವಿಶ್ವಕಪ್‌ನಿಂದ (T20 World Cup) ಪಾಕಿಸ್ತಾನ ತಂಡ ಹೊರಬಿದ್ದ ಬಳಿಕ ತಮ್ಮದೇ ದೇಶದ ಕ್ರಿಕೆಟ್‌ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಬರ್‌ ಆಜಂ (Babar Azam), ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡದಿಂದಲೇ ಕಿತ್ತೊಗೆಯುವಂತೆ ಆಗ್ರಹಗಳು ಕೇಳಿಬರುತ್ತಿವೆ.

    ಪಾಕ್‌ನ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್‌ ಕ್ರಿಕೆಟಿಗ, ಅಹ್ಮದ್ ಶೆಹಜಾದ್ (Ahmed Shehzad) ಹಿರಿಯ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಾಕ್‌ ತಂಡದಲ್ಲಿರುವ ನಾಯಕ ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌, ಶಾಹೀನ್‌ ಶಾ ಅಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ತಂಡದಿಂದ ಕಿತ್ತೊಗೆಯಬೇಕು ಎಂದು ಪಾಕ್‌ ಕ್ರಿಕೆಟ್‌ ಮಂಡಳಿಗೆ ಒತ್ತಾಯಿಸಿದ್ದಾರೆ.

    ಬಾಬರ್‌ ಕ್ರಿಕೆಟ್‌ ತಂಡದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ, ತನ್ನ ಸ್ನೇಹಿತರನ್ನ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.‌ ಬಾಬರ್‌, ರಿಜ್ವಾನ್‌, ಅಫ್ರಿದಿ, ಫಖರ್‌ ಜಮಾನ್‌, ಹ್ಯಾರಿಸ್‌ ರೌಫ್‌ ಪಾಕಿಸ್ತಾನಕ್ಕಾಗಿ ಕಳೆದ 4-5 ವರ್ಷಗಳಿಂದ ನಿಯಮಿತವಾಗಿ ಆಡುತ್ತಿದ್ದಾರೆ. ಅವರ ಪ್ರದರ್ಶನ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಆದರೂ ತಂಡದಲ್ಲಿ ಗುಂಪುಗಾರಿಕೆಯಿಂದ ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ತಪ್ಪುಗಳಿಂದ ನಾವು ಕಲಿಯುತ್ತಿದ್ದೇವೆ ಅಂತ ಪ್ರತಿಬಾರಿಯೂ ಹೇಳ್ತಿದ್ದಾರೆ. ಕೆನಡಾ ವಿರುದ್ಧ ಸಹ ಕಡಿಮೆ ಎನ್‌ರೇಟ್‌ನಿಂದ ಗೆದ್ದು ನೀವು ಏನನ್ನು ಕಲಿಯುತ್ತಿದ್ದೀರಿ? ನಿಮ್ಮ ನಾಯಕತ್ವದಿಂದ ಪಾಕಿಸ್ತಾನದ ಕ್ರಿಕೆಟ್‌ ಹಾಳಾಗಿದೆ. ಬಾಬರ್‌ ಕೇವಲ ಸೋಷಿಯಲ್‌ ಮೀಡಿಯಾ ಸ್ಟಾರ್‌ಗಳಾಗಿದ್ದಾರೆ. ಬಾಬರ್‌ ವಿರುದ್ಧ ಪಿಸಿಬಿ (PCB) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೆಹಜಾದ್‌ ಒತ್ತಾಯಿಸಿದ್ದಾರೆ.

    ವಿಶ್ವಕಪ್‌ ನಿಂದ ಪಾಕ್‌ ಔಟ್‌:
    ಅಮೆರಿಕ (USA) ಮತ್ತು ಐರ್ಲೆಂಡ್‌ ನಡುವಿನ ಪಂದ್ಯ ಶುಕ್ರವಾರ ಮಳೆಯಿಂದ ರದ್ದಾದರಿಂದ ಪಾಕ್‌ ತಂಡ‌ 2024ರ ಆವೃತ್ತಿಗೆ ಗುಡ್‌ಬೈ ಹೇಳಿದೆ. ಭಾನುವಾರ ಐರ್ಲೆಂಡ್‌ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿ, ಬಳಿಕ ತವರಿಗೆ ಮರಳಲಿದೆ. ಇನ್ನೂ ಚೊಚ್ಚಲ ಆವೃತ್ತಿಯಲ್ಲೇ ಸೂಪರ್‌ -8ರ ಘಟಕ್ಕೆ ಪ್ರವೇಶಿಸಿರುವ ಅಮೆರಿಕ ತಂಡ 2026ರ ವಿಶ್ವಕಪ್‌ ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿದೆ.

  • ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    ಯುಎಸ್‌ಎ-ಐರ್ಲೆಂಡ್‌ ಪಂದ್ಯ ಮಳೆಗೆ ಬಲಿಯಾದ್ರೆ ಪಾಕ್‌ ಮನೆಗೆ – ಏಕೆ ಗೊತ್ತೆ?

    – ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌!

    ಫ್ಲೋರಿಡಾ: ಅಮೆರಿಕ ಮತ್ತು ಐರ್ಲೆಂಡ್‌ ನಡುವೆ ನಡೆಯಲಿರುವ ಇಂದಿನ (ಶುಕ್ರವಾರ) ಟಿ20 ವಿಶ್ವಕಪ್‌ (T20 World Cup) ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡ (Pakistan Team) ಮನೆಗೆ ತೆರಳುವುವುದು ಖಚಿತವಾಗಿದೆ.

    2024ರ ಟಿ20 ವಿಶ್ವಕಪ್‌ ಟೂರ್ನಿಯ ನಿರ್ಣಾಯಕ ಪಂದ್ಯ ಶುಕ್ರವಾರ ಅಮೆರಿಕದ (USA) ಲಾಡರ್ಹಿಲ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಯುಎಸ್‌ಎ-ಐರ್ಲೆಂಡ್‌ (USA vs Ireland) ತಂಡಗಳು ಕಾದಾಟ ನಡೆಸಲಿವೆ. ಸದ್ಯಕ್ಕೆ ಫ್ಲೋರಿಡಾ ನಗರದಲ್ಲಿ 89% ಸಾಂದ್ರತೆಯೊಂದಿಗೆ 23% ಮಳೆಯಾಗುವ ಸಾಧ್ಯತೆಯಿದ್ದು. 8 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಯುಎಸ್‌ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯ ಮಳೆಯಿಂದ ರದ್ದಾದರೇ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?

    ಪಾಕ್‌ ಏಕೆ ಮನೆಗೆ?
    ಟಿ20 ವಿಶ್ವಕಪ್‌ನಲ್ಲಿ A ಗುಂಪಿನಲ್ಲಿರುವ 5 ತಂಡಗಳ ಪೈಕಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಟೀಂ ಇಂಡಿಯಾ 6 ಅಂಕಗಳೊಂದಿಗೆ ಸೂಪರ್‌-8‌ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. A ಗುಂಪಿನಲ್ಲಿ ಸೂಪರ್‌ 8 ಪ್ರವೇಶಿಸಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶ ಇದೆ. ಯುಎಸ್‌ ತಂಡ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಿದೆ. ಪಾಕ್‌ ತಂಡ ಯುಎಸ್‌ಎಗಿಂತಲೂ ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದರೂ 2 ಪಂದ್ಯಗಳಲ್ಲಿ ಸೋತಿರುವುದರಿಂದ 2 ಅಂಕ ಪಡೆದು 3ನೇ ಸ್ಥಾನಕ್ಕೆ ಕುಸಿದಿದೆ. ಐರ್ಲೆಂಡ್‌ ವಿರುದ್ಧ ಯುಎಸ್‌ ಸೋತು, ಪಾಕ್‌ ಐರ್ಲೆಂಡ್‌ ವಿರುದ್ಧ ಮುಂದಿನ ಪಂದ್ಯದಲ್ಲಿ ಗೆದ್ದರೆ, ಸೂಪರ್‌-8ಗೆ ಅರ್ಹತೆ ಪಡೆದುಕೊಳ್ಳಲಿದೆ.

    ಒಂದು ವೇಳೆ ಐರ್ಲೆಂಡ್‌ ವಿರುದ್ಧದ ಪಂದ್ಯ ಮಳೆಗೆ ಬಲಿಯಾದರೆ ಆಗ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಪಡೆದುಕೊಳ್ಳಲಿದೆ. ಯುಎಸ್‌ 5 ಅಂಕದೊಂದಿಗೆ ಸೂಪರ್‌-8ಕ್ಕೆ ಅರ್ಹತೆ ಪಡೆದುಕೊಳ್ಳಲಿದೆ. ಪಾಕ್‌ ತಂಡ ಐರ್ಲೆಂಡ್‌ ವಿರುದ್ಧ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಫಿನಾಡಿನ ಯುವಕ – ಕೊರೊನಾ ವೇಳೆ ಚಿಕ್ಕಮಗಳೂರಿನಲ್ಲಿ ಅಭ್ಯಾಸ!

    ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌:
    ಈ ಬಾರಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಟಿ20 ವಿಶ್ವಕಪ್‌ ಟೂರ್ನಿಯ ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡದ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶ ದ್ರೋಹ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಬಗೆದಂತಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: India vs Pakistan: ಟ್ರ್ಯಾಕ್ಟರ್‌ ಮಾರಿ ಕ್ರಿಕೆಟ್‌ ನೋಡಲು ಬಂದ ಪಾಕ್ ಅಭಿಮಾನಿಗೆ ನಿರಾಸೆ

  • IND vs PAK T20 World Cup: ಪಾಕಿಸ್ತಾನಕ್ಕೆ 120 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

    IND vs PAK T20 World Cup: ಪಾಕಿಸ್ತಾನಕ್ಕೆ 120 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

    ನ್ಯೂಯಾರ್ಕ್‌: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಇಂದಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕಿಸ್ತಾನಕ್ಕೆ (Pakistan) ಭಾರತ (Team India) 120 ರನ್‌ಗಳ ಗುರಿ ನೀಡಿದೆ.

    ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಟೀಂ ಇಂಡಿಯಾ 19 ಓವರ್‌ಗಳಲ್ಲಿ ಕೇವಲ 119 ರನ್‌ ಗಳಿಸಿ ಆಲೌಟ್‌ ಆಯಿತು. ಈ ಮೂಲಕ ಪಾಕಿಸ್ತಾನ ಗೆಲುವಿಗೆ 120 ರನ್‌ಗಳ ಸಾಧಾರಣ ಗುರಿ ತಲುಪುವ ಅಗತ್ಯವಿದೆ.

    ಭಾರತದ ಪರ ರಿಷಬ್‌ ಪಂತ್‌ ಹೊರತುಪಡಿಸಿ, ಯಾರಿಂದಲೂ ತಂಡಕ್ಕೆ ಉತ್ತಮ ಕೊಡುಗೆ ಸಿಗಲಿಲ್ಲ. ಕೆಲವೊಂದು ಅನಗತ್ಯ ಹೊಡೆತಗಳ ಹೊರತಾಗಿಯೂ ಅದೃಷ್ಟದಿಂದ ಮೈದಾನದಲ್ಲಿ ಉಳಿದ ಪಂತ್‌ 40 ರನ್‌ ಗಡಿ ದಾಟಿದ ಏಕೈಕ ಆಟಗಾರರಾದರು. ಪಿಚ್‌ ಸಂಪೂರ್ಣ ಬೌಲರ್‌ ಸ್ನೇಹಿಯಾಗಿದ್ದು, ಟೀಂ ಇಂಡಿಯಾ ಬೌಲರ್‌ಗಳು ಉತ್ತಮ ದಾಳಿ ನಡೆಸಿದರೆ ಪಾಕ್‌ ತಂಡವನ್ನು ಕಟ್ಟಿಹಾಕುವ ಅವಕಾಶ ಭಾರತಕ್ಕಿದೆ.

    ಭಾರತ ಪರ ರಿಷಬ್‌ ಪಂತ್‌ 31 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿ 42 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅಕ್ಷರ್ ಪಟೇಲ್‌ 18 ಎಸೆತಗಳಲ್ಲಿ 20 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರೋಹಿತ್‌ ಶರ್ಮಾ 12 ಎಸೆತಗಳಲ್ಲಿ 13 ರನ್‌ಗಳನ್ನು ಕಲೆಹಾಕಿ ಔಟಾದರು. ಉಳಿದಂತೆ ಹಾರ್ದಿಕ್‌ ಪಾಂಡ್ಯ 7, ಸೂರ್ಯಕುಮಾರ್‌ ಯಾದವ್‌ 7, ಅರ್ಷದೀಪ್‌ ಸಿಂಗ್‌ 9, ಮೊಹಮ್ಮದ್‌ ಸಿರಾಜ್‌ 7 ರನ್‌ ಕಲೆ ಹಾಕಿ ನೀರಸ ಪ್ರದರ್ಶನ ತೋರಿದರು. ಉಳಿದಂತೆ ಜಸ್‌ಪ್ರೀತ್‌ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಶೂನ್ಯ ಸುತ್ತಿದರು.

    ಪಾಕ್‌ ಪರ, ನಸೀಮ್ ಶಾ, ಹಾರಿಸ್ ರೌಫ್ ತಲಾ 3, ಮೊಹಮ್ಮದ್ ಅಮೀರ್ 2, ಶಾಹೀನ್ ಶಾ ಆಫ್ರಿದಿ 1 ವಿಕೆಟ್‌ ಪಡೆದರು.

  • ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

    ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

    ಗಯಾನಾ: ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 134 ರನ್‌ಗಳ ಅಂತರದಿಂದ ಗೆದ್ದು T20 ವಿಶ್ವಕಪ್‌ನಲ್ಲಿ ವಿಶೇಷ ಸಾಧನೆ ಮಾಡಿದೆ. ಟಿ20 ವಿಶ್ವಕಪ್‌ ಇತಿಹಾಸದಲ್ಲೇ 2ನೇ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ. ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ 2007ರ ಚೊಚ್ಚಲ ಟೂರ್ನಿಯಲ್ಲಿ ಶ್ರೀಲಂಕಾ 172 ರನ್‌ಗಳಿಂದ ಕೀನ್ಯಾ ತಂಡವನ್ನು ಸೋಲಿಸಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ತಂಡ 20 ಓವರ್‌ಗಳಲ್ಲಿ 173 ರನ್ ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಉಗಾಂಡಾ ತಂಡ ಕೇವಲ 39 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. 173 ರನ್‌ಗಳ ಸ್ಪರ್ಧಾತ್ಮಕ ರನ್‌ ಗುರಿ ಬೆನ್ನತ್ತಿದ್ದ ಉಗಾಂಡಾ ತಂಡದ ಪರ ಯಾರೊಬ್ಬರೂ ಕ್ರೀಸ್‌ನಲ್ಲಿ ನೆಲೆಯೂರದ ಕಾರಣ 12 ಓವರ್‌ಗಳಲ್ಲಿ 39 ರನ್‌ನ್‌ಗಳಿಗೆ ಸರ್ವಪತನ ಕಂಡಿತು.

    ಸಂಘಟಿತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ವಿಂಡೀಸ್‌ ಪರ ಬೌಲಿಂಗ್‌ನಲ್ಲಿ ಅಕೇಲ್ ಹೊಸೈನ್ ಅಬ್ಬರಿಸಿ ಬೊಬ್ಬಿರಿದರು. ಉಗಾಂಡಾ ಬ್ಯಾಟರ್ಸ್‌ಗಳನ್ನ ದುಸ್ವಪ್ನವಾಗಿ ಕಾಡಿದರು. 4 ಓವರ್‌ ಬೌಲಿಂಗ್‌ ಮಾಡಿದ ಹೊಸೈನ್‌ ಕೇವಲ 11 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ಅಲ್ಝಾರಿ ಜೋಸೆಫ್‌ 2 ವಿಕೆಟ್‌ ಹಾಗೂ ರೊಮಾರಿಯೋ ಶೆಫರ್ಡ್ಚ್‌, ಆಂಡ್ರೆ ರಸ್ಸೆಲ್‌, ಗುಡಾಕೇಶ್ ಮೋತಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ಪರ ಜಾನ್ಸನ್ ಚಾರ್ಲ್ಸ್ 44 ರನ್‌, ಬ್ರಾಂಡನ್‌ ಕಿಂಗ್ಸ್‌ 13 ರನ್‌, ನಿಕೋಲಸ್‌ ಪೂರನ್‌ 22 ರನ್‌, ರೋವ್ಮನ್‌ ಪೋವೆಲ್‌ 23 ರನ್‌, ಶೆರ್ಫೇನ್ ರುದರ್ಫೋರ್ಡ್ 22 ರನ್‌, ಆಂಡ್ರೆ ರಸೆಲ್‌ 30 ರನ್‌ ಹಾಗೂ ರೋಮಾರಿಯೋ ಶೆಫರ್ಡ್‌ 5 ರನ್‌ ಗಳಿಸಿದರು.

    T20 ವಿಶ್ವಕಪ್‌ನಲ್ಲಿ ದೊಡ್ಡ ಗೆಲುವು ಸಾಧಿಸಿದ ತಂಡಗಳು
    * ಶ್ರೀಲಂಕಾ – 172 ರನ್‌ – ಕೀನ್ಯಾ ವಿರುದ್ಧ – 2007ರಲ್ಲಿ
    * ವೆಸ್ಟ್ ಇಂಡೀಸ್ – 134 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
    * ಅಫ್ಘಾನಿಸ್ತಾನ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2021ರಲ್ಲಿ
    * ದಕ್ಷಿಣ ಆಫ್ರಿಕಾ – 130 ರನ್‌ – ಸ್ಕಾಟ್‌ಲೆಂಡ್‌ ವಿರುದ್ಧ – 2009 ರಲ್ಲಿ
    * ಅಫ್ಘಾನಿಸ್ತಾನ – 125 ರನ್‌ – ಉಗಾಂಡಾ ವಿರುದ್ಧ – 2024ರಲ್ಲಿ
    * ಇಂಗ್ಲೆಂಡ್ – 116 ರನ್‌ – ಅಫ್ಘಾನಿಸ್ತಾನ ವಿರುದ್ಧ – 2012ರಲ್ಲಿ

  • ಪಾಕ್‌ ವಿರುದ್ಧ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಆಘಾತ – ಕಣಕ್ಕಿಳಿಯುತ್ತಾರಾ ನಾಯಕ ರೋಹಿತ್‌?

    ಪಾಕ್‌ ವಿರುದ್ಧ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ಆಘಾತ – ಕಣಕ್ಕಿಳಿಯುತ್ತಾರಾ ನಾಯಕ ರೋಹಿತ್‌?

    ನ್ಯೂಯಾರ್ಕ್‌: ಪಾಕಿಸ್ತಾನ (Pakistan) ವಿರುದ್ಧ ಸೂಪರ್‌ ಸಂಡೇ (ಜೂ.8) ನಡೆಯಲಿರುವ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಕ್ಕೆ ದೊಡ್ಡ ಆಘಾತವಾಗಿದೆ. ಐರ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರು ಕೈಗೆ ಗಾಯ ಮಾಡಿಕೊಂಡಿದ್ದಾರೆ. ಇದರಿಂದ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಾರಾ ಇಲ್ಲವೋ ಅನ್ನೋ ಪ್ರಶ್ನೆ ಮೂಡಿದೆ.

    ಹೌದು.. ಪ್ರಸಕ್ತ ವರ್ಷ ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಭಾರತ-ಪಾಕಿಸ್ತಾನ (Ind vs Pak) ಪಂದ್ಯ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:00 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಇದನ್ನೂ ಓದಿ: T20 World Cup: ವಿಶ್ವಚಾಂಪಿಯನ್​ ತಂಡದ ಮೇಲೆ ಹಣದ ಮಳೆ ಸುರಿಸಲಿದೆ ICC

    2024ರ ಟಿ20 ವಿಶ್ಚಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ತಂಡದ ವಿರುದ್ಧ ವಿರೋಚಿತ ಸೋಲಿಗೆ ತುತ್ತಾಗಿರುವ ಪಾಕಿಸ್ತಾನ ಟೀಂ ಇಂಡಿಯಾ (Team India) ವಿರುದ್ಧ ಪುಟಿದೇಳುವ ತವಕದಲ್ಲಿದೆ. ಇನ್ನೂ ಐರ್ಲೆಂಡ್‌ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ ಪಾಕ್‌ ವಿರುದ್ಧ ಗೆದ್ದು ಸೂಪರ್‌-8 ಹಂತಕ್ಕೆ ಲಗ್ಗೆಯಿಡುವ ಉತ್ಸಾಹದಲ್ಲಿದೆ. ಈ ಹೊತ್ತಿನಲ್ಲೇ ರೋಹಿತ್‌ ಶರ್ಮಾ ಅವರ ಕೈಬೆರಳು ಗಾಯಕ್ಕೆ ತುತ್ತಾಗಿದ್ದು, ಅವರ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. ಅಲ್ಲದೇ ಸೂಪರ್‌-8 ಪ್ರವೇಶಿಸಲು ಈ ಗೆಲುವು ನಿರ್ಣಾಯಕವೂ ಆಗಿದ್ದು, ಪಾಕ್‌ ತಂಡಕ್ಕೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

    ಐರ್ಲೆಂಡ್‌ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ 37 ಎಸೆತಗಳಲ್ಲಿ 52 ರನ್‌ ಬಾರಿಸಿದ್ದರು. ಈ ವೇಳೆ ವೇಗಿ ಜೋಶ್‌ ಲಿಟಲ್‌ ಅವರ ಎಸೆತವು ರೋಹಿತ್‌ ಕೈ ಬೆರಳಿಗೆ ಬಲವಾಗಿ ತಾಗಿ ಗಾಯಗೊಂಡಿದ್ದರು. ಇದರಿಂದ ಪಂದ್ಯದ ಮಧ್ಯದಲ್ಲಿಯೇ ಮೈದಾನ ತೊರೆದಿದ್ದರು. ಹಾಗಾಗಿ ಪಾಕಿಸ್ತಾನದ ವಿರುದ್ಧ ಅವರು ಕಣಕ್ಕಿಳಿಯುತ್ತಾರಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.

    ರೋಹಿತ್‌ ಶರ್ಮಾ ಅವರು ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಒಂದು ವೇಳೆ ರೋಹಿತ್‌ ಪಾಕ್‌ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರೆ, ಉಪನಾಯಕ ಹಾರ್ದಿಕ್‌ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್‌ ರೋಹಿತ್‌ ಶರ್ಮಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ವಿಶ್ವಕಪ್‌ನಲ್ಲಿ ಸೋಲನ್ನೇ ನೋಡದ ಭಾರತ:
    2007ರಿಂದ ಈವರೆಗೆ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪಾಕ್‌ ಎದುರು ಸೋಲನ್ನೇ ಕಂಡಿಲ್ಲ. ಏಷ್ಯಾಕಪ್‌ ಟೂರ್ನಿಯಲ್ಲಿ ಮಾತ್ರ ಸೋಲು ಕಂಡಿದೆ. 2007ರಿಂದ ಈವರೆಗೆ ನಡೆದ 12 ಟಿ20ಐ ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಮಾತ್ರ ಪಾಕಿಸ್ತಾನ ಗೆದ್ದಿದ್ದರೆ, ಟೀಂ ಇಂಡಿಯಾ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

  • ಪಾಂಡ್ಯ ಪರಾಕ್ರಮ, ಹಿಟ್‌ಮ್ಯಾನ್‌ ಪವರ್‌ ಫುಲ್‌ ಬ್ಯಾಟಿಂಗ್‌ – T20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

    ಪಾಂಡ್ಯ ಪರಾಕ್ರಮ, ಹಿಟ್‌ಮ್ಯಾನ್‌ ಪವರ್‌ ಫುಲ್‌ ಬ್ಯಾಟಿಂಗ್‌ – T20 ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ!

    ನ್ಯೂಯಾರ್ಕ್‌: ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಭಾರತ (Team India) ಶುಭಾರಂಭ ಕಂಡಿದೆ. ಐರ್ಲೆಂಡ್‌ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲೇ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಬೌಲಿಂಗ್‌ ಕಮಾಲ್‌, ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ನೆರವಿನಿಂದ ಐರ್ಲೆಂಡ್‌ ವಿರುದ್ಧ ಟೀಂ ಇಂಡಿಯಾ 8 ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ.

    ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಐರ್ಲೆಂಡ್‌ ತಂಡ 20 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾ 12.2 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿ ಗೆದ್ದು ಬೀಗಿತು.

    ಚೇಸಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ (Rohit Sharma) ಹಾಗೂ ವಿರಾಟ್‌ ಕೊಹ್ಲಿ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ವಿರಾಟ್‌ ಕೇವಲ 1 ರನ್‌ ಗಳಿಸಿ ಔಟಾದರು. ಬಳಿಕ ಜೊತೆಗೂಡಿದ ರಿಷಭ್‌ ಪಂತ್‌ ಹಾಗೂ ಸೂರ್ಯಕುಮಾರ್‌ ಜೋಡಿ ತಾಳ್ಮೆಯ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಾಯಕ ರೋಹಿತ್‌ ಶರ್ಮಾ 52 ರನ್‌ (37 ಎಸೆತ, 3 ಸಿಕ್ಸರ್‌, 4 ಬೌಂಡರಿ) ಚಚ್ಚಿದರೆ, ರಿಷಭ್‌ ಪಂತ್‌ 36 ರನ್‌, ಸೂರ್ಯಕುಮಾರ್‌ ಯಾದವ್‌ 2 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಐರ್ಲೆಂಡ್‌ ತಂಡ ಟೀಂ ಇಂಡಿಯಾ, ಬೌಲರ್‌ಗಳ ದಾಳಿಗೆ ರನ್‌ ಕಲೆಹಾಕಲು ತಿಣುಕಾಡಿತ್ತು. ಮಾರಕ ದಾಳಿಗೆ ತತ್ತರಿಸಿದ ಐರ್ಲೆಂಡ್‌ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಆರಂಭದಿಂದಲೇ ಪೆವಿಲಿಯನ್‌ ಪರೇಡ್‌ ನಡೆಸಿದರು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಗರೆಥ್ ಡೆಲಾನಿ 26 ರನ್‌, ಜೋಶ್ ಲಿಟಲ್ 14 ರನ್‌, ಕರ್ಟಿಸ್ ಕ್ಯಾಂಫರ್ 12 ರನ್‌, ಲೋರ್ಕನ್ ಟಕರ್ 10 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಎರಡಂಕಿಯ ಮೊತ್ತವನ್ನೂ ಗಳಿಸರ ಪರಿಣಾಮ ಐರ್ಲೆಂಡ್‌ ಅಲ್ಪ ಮೊತ್ತಕ್ಕೆ ಆಲೌಟ್‌ ಆಗಿ ಸೋಲು ಎದುರಿಸಬೇಕಾಯಿತು. ಇದನ್ನೂ ಓದಿ: ವಿಶ್ವದ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ!

    ಪಾಂಡ್ಯ ಭರ್ಜರಿ ಕಂಬ್ಯಾಕ್‌:
    2024ರ ಐಪಿಎಲ್‌ ಆವೃತ್ತಿಯಲ್ಲಿ ಕಳಪೆ ಬೌಲಿಂಗ್‌ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್‌ ಪಾಂಡ್ಯ ಟಿ20 ವಿಶ್ವಕಪ್‌ ಆರಂಭಿಕ ಪಂದ್ಯದಲ್ಲೇ ಭರ್ಜರಿ ಕಂಬ್ಯಾಕ್‌ ಮಾಡಿದ್ದಾರೆ. 4 ಓವರ್‌ಗಳಲ್ಲಿ 27 ರನ್‌ ಬಿಟ್ಟುಕೊಟ್ಟ ಪಾಂಡ್ಯ 3 ಪ್ರಮುಖ ವಿಕೆಟ್‌ ಪಡೆದಿದ್ದಾರೆ. ಇನ್ನೂ ಜಸ್ಪ್ರೀತ್‌ ಬುಮ್ರಾ, ಹರ್ಷ್‌ದೀಪ್‌ ಸಿಂಗ್‌ ತಲಾ 2 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌ ಮತ್ತು ಅಕ್ಷರ್‌ ಪಟೇಲ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಗೌತಮ್‌ ಗಂಭೀರ್‌ಗೆ ಬ್ಲ್ಯಾಂಕ್‌ ಚೆಕ್‌ ಆಫರ್‌ ಕೊಟ್ಟಿದ್ದೇಕೆ ಶಾರುಖ್‌?

  • T20 World Cup: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್‌ಗಳ ಜಯ

    T20 World Cup: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್‌ಗಳ ಜಯ

    ನ್ಯೂಯಾರ್ಕ್: ಇಲ್ಲಿನ ನಾಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಹಾಗೂ ದಕ್ಷಿಣ ಅಫ್ರಿಕಾ ನಡುವಿನ T20 World Cup ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ತಂಡ ದಕ್ಷಿಣ ಅಫ್ರಿಕಾ ತಂಡದ ಬೌಲರ್‌ ದಾಳಿಗೆ ತತ್ತರಿಸಿತು. 19.1 ಓವರ್​ಗಳಲ್ಲಿ ಕೇವಲ 77 ರನ್​ಗಳಿಗೆ ಶ್ರೀಲಂಕಾ ತಂಡ ಆಲೌಟ್ ಆಯಿತು. 78 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಅಫ್ರಿಕಾ ತಂಡ 16.2 ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 80 ರನ್‌ಗಳಿಸಿ ಗೆಲುವು ಸಾಧಿಸಿತು.

    ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟನ್ ಡೇ ಕೋಕ್ 27 ಎಸೆತಗಳಲ್ಲಿ 20, ಐಡೆನ್ ಮಾರ್ಕ್ರಾಮ್ 14 ಎಸೆತಗಳಲ್ಲಿ 12, ಟ್ರಿಸ್ಟಾನ್ ಸ್ಟಬ್ಸ್ 28 ಎಸೆತಗಳಲ್ಲಿ 13, ಹೆನ್ರಿಕ್ ಕ್ಲಾಸೆನ್ 22 ಎಸೆತಗಳಲ್ಲಿ 19 ರನ್‌ ಗಳಿಸಿದರು.

    ಶ್ರೀಲಂಕಾ ಪರ ನುವಾನ್ ತುಷಾರಾ, ದಾಸುನ್ ಶನಕ ತಲಾ 1, ವನಿಂದು ಹಸರಂಗ 2 ವಿಕೆಟ್‌ ಉರುಳಿಸಿದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ತಂಡ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಲೇ ಸಾಗಿತು. ಕುಸಾಲ್ ಮೆಂಡಿಸ್​ 30 ಎಸೆತಗಳಲ್ಲಿ 19, ಮ್ಯಾಥ್ಯೂಸ್ 16 ಎಸೆತಗಳಲ್ಲಿ 16, ಕುಮಿಂಡು ಮೆಂಡ್​​​ ಎರಡಂಕಿ ದಾಟಿದ ಬ್ಯಾಟ್ಸ್​ಮನ್​ಗಳೆನಿಸಿಕೊಂಡರು. ಉಳಿದ ಬ್ಯಾಟರ್​ಗಳೆಲ್ಲಾ ಒಂದಂಕಿ ರನ್‌ಗೆ ಸುಸ್ತಾದರು. ನಾಯಕ ವನಿಂದು ಹಸರಂಗ, ಸದೀರಾ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಪಾತುಮ್ ನಿಸ್ಸಾಂಕ(3), ಚರಿತ್ ಅಸಲಂಕಾ (6), ದಾಸುನ್ ಶನಾಕ (9), ತೀಕ್ಷಾಣ 7 ರನ್​ಗಳಿಸಿದರು.

    ದಕ್ಷಿಣ ಅಫ್ರಿಕಾ ಪರ ಎನ್ರಿಚ್ ನೋಕಿಯಾ 4 ಓವರ್​ಗಳಲ್ಲಿ 7 ರನ್​ ನೀಡಿದ 4 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ 22ಕ್ಕೆ 2, ಕಗಿಸೋ ರಬಾಡ 21ಕ್ಕೆ 2 ಹಾಗೂ ಬಾರ್ಟ್ಮನ್​ 9ಕ್ಕೆ 1 ವಿಕೆಟ್ ಪಡೆದರು.

    ಟಿ20 ಕ್ರಿಕೆಟ್​ನ ಕನಿಷ್ಠ ಮೊತ್ತ
    ತನ್ನ ಮೊದಲ ಲೀಗ್ ಪಂದ್ಯದಲ್ಲಿ ಕೇವಲ 77 ರನ್​ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ ಟಿ20 ವಿಶ್ವಕಪ್​ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. 2012 ರ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 87ಕ್ಕೆ ಆಲೌಟ್ ಆಗಿದ್ದು, ಈವರೆಗಿನ ಕನಿಷ್ಠ ಮೊತ್ತವಾಗಿತ್ತು.

  • ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    ಆರಂಭಿಕ ಪಂದ್ಯದಲ್ಲೇ ಐತಿಹಾಸಿಕ ಗೆಲುವು – T20 ವಿಶ್ವಕಪ್‌ನಲ್ಲಿ USA ಶುಭಾರಂಭ!

    – ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಸರಿಗಟ್ಟಿದ ಯುಎಸ್‌ ಆಟಗಾರ

    ಡಲ್ಲಾಸ್‌: ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಮೆರಿಕ ಕ್ರಿಕೆಟ್‌ ತಂಡ ಗೆಲುವಿನ ಶುಭಾರಂಭ ಕಂಡಿದೆ. ಆರನ್ ಜೋನ್ಸ್‌ (Aaron Jones) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನೊಂದಿಗೆ ಅಮೆರಿಕ ತಂಡವು ಕೆನಡಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಮೆರಿಕ ತಂಡದ (Cricket USA) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಇದು ಐತಿಹಾಸಿಕ ಗೆಲುವು ಸಹ ಆಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆನಡಾ (Canada) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 194 ರನ್‌ ಸಿಡಿಸಿತ್ತು. ಬೃಹತ್‌ ಮೊತ್ತದ ಗುರಿ ಪಡೆದ ಯುಎಸ್‌ಎ ಕೇವಲ 17.4 ಓವರ್‌ಗಳಲ್ಲೇ 3 ವಿಕೆಟ್‌ ನಷ್ಟಕ್ಕೆ 197‌ ರನ್‌ ಸಿಡಿಸಿ ಗೆಲುವಿನ ಖಾತೆ ತೆರೆಯಿತು.

    ಚೇಸಿಂಗ್‌ ಆರಂಭಿಸಿದ ಯುಎಸ್‌ ತಂಡ 6.3 ಓವರ್‌ಗಳಲ್ಲಿ 42 ರನ್‌ ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಗೂಡಿದ ಆಂಡ್ರೀಸ್ ಗೌಸ್ ಹಾಗೂ ಆರನ್ ಜೋನ್ಸ್‌ ಜೋಡಿ 58 ಎಸೆತಗಳಲ್ಲಿ ಬರೋಬ್ಬರಿ 131 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿತು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಕೈತಪ್ಪಿದ ಶತಕ:
    ಆರಂಭಿಕ ಪಂದ್ಯದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿ ತಂಡದ ಗೆಲುವಿಗೆ ಕಾರಣವಾದ ಆರನ್ ಜೋನ್ಸ್‌ 40 ಎಸೆತಗಳಲ್ಲಿ ಸ್ಫೋಟಕ 96 ರನ್‌ (10 ಸಿಕ್ಸರ್‌, 4 ಬೌಂಡರಿ) ಸಿಡಿಸಿ ಶತಕ ವಂಚಿತರಾದರು. ಇದರೊಂದಿಗೆ ಆಂಡ್ರೀಸ್ ಗೌಸ್ 46 ಎಸೆತಗಳಲ್ಲಿ 65 ರನ್‌ (3 ಸಿಕ್ಸರ್‌, 7 ಬೌಂಡರಿ), ಮೊನಾಂಕ್ ಪಟೇಲ್ 16 ರನ್‌ ಗಳಿಸಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕೆನಡಾ ತಂಡ ಸಹ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನೇ ನೀಡಿತ್ತು. ನವನೀತ್ ಧಲಿವಾಲ್44 ಎಸೆತಗಳಲ್ಲಿ 61 ರನ್‌ (3 ಸಿಕ್ಸರ್‌, 6 ಬೌಂಡರಿ), ನಿಕೋಲಸ್ ಕಿರ್ಟನ್ 51 ರನ್‌ (31 ಎಸೆತ, 3 ಬೌಂಡರಿ, 2 ಸಿಕ್ಸರ್‌) ಚಚ್ಚಿದರೆ, ಶ್ರೇಯಸ್ ಮೊವ್ವ 16 ಎಸೆತಗಳಲ್ಲಿ ಸ್ಫೋಟಕ 32 ರನ್‌ ಸಿಡಿ ಮಿಂಚಿದರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್ ಅಯ್ಯರ್

    ಕ್ರಿಸ್‌ಗೇಲ್‌ ಅಪರೂಪದ ದಾಖಲೆ ಉಡೀಸ್:‌
    ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಆರನ್ ಜೋನ್ಸ್‌, ಕ್ರಿಸ್‌ಗೇಲ್‌ ಅವರ ಅಪರೂಪದ ಸಿಕ್ಸರ್‌ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲೇ 10 ಸಿಕ್ಸರ್‌ ಸಿಡಿಸುವ ಮೂಲಕ 2007ರಲ್ಲಿ ಈ ಸಾಧನೆ ಮಾಡಿದ ಗೇಲ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ:T20 World Cup: ಸ್ಕಾಟ್‌ಲೆಂಡ್‌ ಬಳಿಕ ಐರ್ಲೆಂಡ್‌ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್‌!

    ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯವೊಂದರಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದವರ ಲಿಸ್ಟ್‌:
    * ಕ್ರಿಸ್‌ ಗೇಲ್‌ – 11 ಸಿಕ್ಸರ್‌ – 2016ರಲ್ಲಿ
    * ಕ್ರಿಸ್‌ ಗೇಲ್‌ – 10 ಸಿಕ್ಸರ್‌ – 2007ರಲ್ಲಿ
    * ಆರನ್‌ ಜೋಸ್‌ – 10 ಸಿಕ್ಸರ್‌ – 2024ರಲ್ಲಿ

  • T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    T20 World Cup: ಚುಟುಕು ಕ್ರಿಕೆಟ್ ಯುಗದ ಆರಂಭ – ಚೊಚ್ಚಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್!

    ಚೊಚ್ಚಲ ಟಿ20 ವಿಶ್ವಕಪ್ ಆರಂಭ: 2007
    ಆತಿಥ್ಯ: ದಕ್ಷಿಣ ಆಫ್ರಿಕಾ
    ವಿಶ್ವಕಪ್ ವಿಜೇತ ತಂಡ: ಭಾರತ
    ರನ್ನರ್‌ಅಪ್: ಪಾಕಿಸ್ತಾನ

    2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ (T20 World Cup) ಟೂರ್ನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ನೆನಪಿನಲ್ಲಿಡಬೇಕಾದ ವರ್ಷ. ಏಕೆಂದರೆ ಆಗಷ್ಟೇ ಮಹತ್ವ ಪಡೆದುಕೊಳ್ಳುತ್ತಿದ್ದ ಮೊಟ್ಟ ಮೊದಲ ಚುಟುಕು ಕ್ರಿಕೆಟ್‌ಗೆ ಬುನಾದಿ ಹಾಕಿಕೊಟ್ಟ ಟೂರ್ನಿ ಅದಾಗಿತ್ತು. ಅಲ್ಲದೇ ಎಂ.ಎಸ್ ಧೋನಿ ( MS Dhoni) ಅವರಂತಹ `ಮಹಾನಾಯಕ’ ಉದಯಕ್ಕೆ ಸಾಕ್ಷಿಯಾದ ಟೂರ್ನಿಯೂ ಅದಾಗಿತ್ತು.

    2007ರಲ್ಲಿ ಅದೇ ವರ್ಷ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ (2007 ODI World Cup) ಟೂರ್ನಿಯೂ ನಡೆದಿತ್ತು. ಆ ಆವೃತ್ತಿಯಲ್ಲಿ ಟೀಂ ಇಂಡಿಯಾ (Team India) ಲೀಗ್‌ ಹಂತದಲ್ಲೇ ಹೀನಾಯ ಸೋಲು ಕಂಡು ಹೊರಬಿದ್ದಿತ್ತು. ಇದಾದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆದು, ಪ್ರಮುಖ ಆಟಗಾರರ ಮೆನಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ಟೂರ್ನಿಯೂ ನಿಗದಿಯಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದ ಖ್ಯಾತನಾಮರು ಟಿ20 ಆಡಲು ಹಿಂದೇಟು ಹಾಕಿದ್ದ ಕಾರಣ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂ.ಎಸ್ ಧೋನಿ ಅವರಿಗೆ ನಾಯಕತ್ವದ ಹೊಣೆ ನೀಡಲಾಯಿತು. ಇದನ್ನೂ ಓದಿ: IPL 2024 Champions: 10 ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

    ಟಿ20 ಚುಕುಟು ಕ್ರಿಕೆಟ್ (T20 Cricket) ಆಗಿನ್ನು ಜನಪ್ರಿಯವಾಗಿರಲಿಲ್ಲ. ಇದರಿಂದ ಬಹಳಷ್ಟು ಜನರು ಇದನ್ನು ಟೀಕಿಸಿದ್ದರು. ಆದ್ರೆ ರಾಂಚಿ ಮೂಲದ ಎಂ.ಎಸ್ ಧೋನಿ ಅವರು ಆ ಟೂರ್ನಿಯಲ್ಲಿ ಕೈಗೊಂಡ ನಿರ್ಧಾರಗಳಿಂದ ಟೀಂ ಇಂಡಿಯಾ, ಚೊಚ್ಚಲ ಆವೃತ್ತಿಯಲ್ಲೇ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

    ಪಾಕ್ ವಿರುದ್ಧ ಗೆದ್ದು ಬೀಗಿದ್ದೇ ರೋಚಕ:
    ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಅಂದು ಇಡೀ ಭಾರತವೇ ಈ ಪಂದ್ಯವನ್ನು ಕುತೂಹಲದಿಂದ ನೋಡುತ್ತಿತ್ತು. ಇದನ್ನೂ ಓದಿ: IPL 2024: ದಣಿವರಿಯದೇ ದುಡಿದ ಕ್ರೀಡಾ ಸಿಬ್ಬಂದಿಗೆ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ ಜಯ್‌ ಶಾ

    ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 157 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 12 ರನ್ ಮಾತ್ರವೇ ಬೇಕಿತ್ತು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ಗೆಲುವಿಗೆ ಒಂದು ವಿಕೆಟ್ ಅಗತ್ಯವಿತ್ತು. ಪ್ರಮುಖ ಬೌಲರ್‌ಗಳು ತಮ್ಮ ಓವರ್ ಮುಕ್ತಾಯ ಗೊಳಿಸಿದ್ದರಿಂದ ಮಹಿ, ಜೋಗಿಂದರ್ ಶರ್ಮಾ ಅವರಿಗೆ ಬೌಲಿಂಗ್ ನೀಡಿದರು. ಪಾಕ್‌ನ ಸ್ಫೋಟಕ ಬ್ಯಾಟರ್ ಮಿಸ್ಬಾ ಉಲ್ ಹಕ್ ಸ್ಟ್ರೈಕ್‌ನಲ್ಲಿದ್ದರು. ಇದನ್ನೂ ಓದಿ: IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

    ಮೊದಲಿಗೆ ವೈಡ್ ರನ್ ಬಿಟ್ಟುಕೊಟ್ಟ ಜೋಗಿಂದರ್ ಶರ್ಮಾ ಮೊದಲ ಎಸೆತದಲ್ಲಿ ಹಿಡಿತ ಸಾಧಿಸಿದರು. ಆದ್ರೆ 2ನೇ ಎಸೆತದಲ್ಲಿ ಮಿಸ್ಬಾ ಉಲ್ ಹಲ್ ಸಿಕ್ಸರ್ ಸಿಡಿಸಿದಾಗ ಪಾಕ್‌ತಂಡ ಗೆದ್ದೇಬಿಟ್ಟೆವು ಎಂಬ ಸಂತಸದಲ್ಲಿ ಕುಣಿದು ಕುಪ್ಪಳಿಸಿತ್ತು, ಪಾಕ್ ಅಭಿಮಾನಿಗಳು ಕೇಕೆ ಹಾಕಲು ಶುರು ಮಾಡಿದ್ದರು. ಮರು ಎಸೆತದಲ್ಲಿ ಆನ್‌ಸ್ಟಂಪ್ ಮೂಲಕ ಶಾರ್ಟ್ ಫೈನ್‌ಲೆಗ್ ಶಾರ್ಟ್ ಪ್ರಯತ್ನಿಸಿದ ಮಿಸ್ಬಾ, ಶ್ರೀಶಾಂತ್‌ಗೆ ಕ್ಯಾಚ್ ನೀಡಿ ಔಟಾದರು. ಪಾಕ್ ಮೊದಲೇ 9 ವಿಕೆಟ್ ಕಳೆದುಕೊಂಡಿದ್ದ ಪರಿಣಾಮ ಪಾಕಿಸ್ತಾನ ತಂಡ ಆಲೌಟ್ ಆಗಿ ಟೀಂ ಇಂಡಿಯಾ ಎದುರು ಮಂಡಿಯೂರಿತು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿತು. ಕುತೂಹಲದಿಂದ ನೋಡುತ್ತಿದ್ದ ಇಡೀ ಭಾರತ ಸಂಭ್ರಮದಲ್ಲಿ ತೇಲಿತು.

  • USAಗೆ ಹಾರಿದ ಟೀಂ ಇಂಡಿಯಾ ಮೊದಲ ಬ್ಯಾಚ್‌ – ವಿಶ್ವಕಪ್‌ ಗೆದ್ದುಬರುವಂತೆ ಕೋಟ್ಯಂತರ ಅಭಿಮಾನಿಗಳ ಹಾರೈಕೆ!

    USAಗೆ ಹಾರಿದ ಟೀಂ ಇಂಡಿಯಾ ಮೊದಲ ಬ್ಯಾಚ್‌ – ವಿಶ್ವಕಪ್‌ ಗೆದ್ದುಬರುವಂತೆ ಕೋಟ್ಯಂತರ ಅಭಿಮಾನಿಗಳ ಹಾರೈಕೆ!

    ಮುಂಬೈ: ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಮುಂಬರುವ ಜೂನ್‌ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗಾಗಿ ಭಾರತ ತಂಡದ (Team India) 15 ಆಟಗಾರರ ಪೈಕಿ ಮೊದಲ ಬ್ಯಾಚ್‌ ಇಂದು (ಶನಿವಾರ) ಅಮೆರಿಕದತ್ತ (USA) ಹೊರಟಿದೆ.

    ಮೇ 19ಕ್ಕೂ ಮುನ್ನವೇ 2024ರ ಐಪಿಎಲ್‌ನಿಂದ ಔಟ್‌ ಆದ 6 ಫ್ರಾಂಚೈಸಿಯ ಆಟಗಾರರು ಮುಂಬೈ ವಿಮಾನ ನಿಲ್ದಾಣದಿಂದ (Mumbai Airport) ಹೊರಟಿದ್ದಾರೆ. ಇನ್ನುಳಿದ ಆಟಗಾರರು ಮೇ 27 ರಂದು 2ನೇ ಬ್ಯಾಚ್‌ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಇದನ್ನೂ ಓದಿ: Malaysia Masters: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು!

    ಶನಿವಾರ ಯುಎಸ್‌ಗೆ ತೆರಳುತ್ತಿರುವ ಮೊದಲ ಬ್ಯಾಚ್‌ನಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಹೊರತುಪಡಿಸಿ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ, ರಿಷಭ್‌ ಪಂತ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್, ಕುಲ್ದೀಪ್‌ ಯಾದವ್‌, ಅಕ್ಷರ್ ಪಟೇಲ್, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ, ಶುಭಮನ್‌ ಗಿಲ್‌ ಹೊರಟಿದ್ದಾರೆ. ಈ ವೇಳೆ ವಿರಾಟ್‌ ಕೊಹ್ಲಿ ಕಾಣಿಸಿಕೊಳ್ಳದೇ ಇರುವುದು ಕುತೂಹಲ ಮೂಡಿಸಿದೆ. ಉಳಿದ ಆಟಗಾರರಾದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್ ಮತ್ತು ಮೀಸಲು ಆಟಗಾರರಾದ ಅವೇಶ್ ಖಾನ್, ಖಲೀಲ್ ಅಹ್ಮದ್ ಮತ್ತು ರಿಂಕು ಸಿಂಗ್ ಮೇ 27 ರಂದು 2ನೇ ಬ್ಯಾಚ್‌ನೊಂದಿಗೆ ಹೊರಡಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಸಹ ಅಂದೇ ಯುಎಸ್‌ಎಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಟಿ20 ವಿಶ್ವಕಪ್‌ಗೆ ಭಾರತ ತಂಡ:
    ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ. ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್. ಯುಜ್ವೇಂದ್ರ ಚಹಾಲ್, ಅರ್ಷ್‌ದೀಪ್‌ ಸಿಂಗ್‌, ಮೊಹಮ್ಮದ್ ಸಿರಾಜ್, ಜಸ್ಪ್ರೀತ್‌ ಬುಮ್ರಾ. ಇದನ್ನೂ ಓದಿ: IPL 2024: ಫೈನಲ್‌ ಪಂದ್ಯಕ್ಕೆ ʻರೆಮಲ್‌ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?

    ಕೋಟ್ಯಂತರ ಅಭಿಮಾನಿಗಳ ಹಾರೈಕೆ:
    ಟಿ20 ವಿಶ್ವಕಪ್‌ (T20 World Cup) ಟೂರ್ನಿಗಾಗಿ ಹೊರಟಿರುವ ಭಾರತ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಸಾವಿರಾರು ಅಭಿಮಾನಿಗಳು ಮುಂಬೈ ವಿಮಾನ ನಿಲ್ದಾಣದ ಮುಂಭಾಗ, ಕೆಲ ಅಭಿಮಾನಿಗಳು ಏರ್ಪೋರ್ಟ್‌ ಆವರಣದಲ್ಲಿ ನಿಂತು ಶುಭಕೋರಿದ್ದಾರೆ. ಕೋಟ್ಯಂತರ ಅಭಿಮಾನಿಗಳು ತಮ್ಮ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಫೋಟೋ ಹಂಚಿಕೊಂಡಿದ್ದು, ʻಗೆದ್ದು ಬಾ ಭಾರತʼ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

    ವಿಶ್ವಕಪ್‌ ಟೂರ್ನಿ ಎಲ್ಲಿ? ಯಾವಾಗ?
    ಜೂನ್‌ 1 ರಿಂದ ಜೂನ್‌ 29ರ ವರೆಗೆ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ: ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ
    ಗ್ರೂಪ್‌-ಬಿ: ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌
    ಗ್ರೂಪ್‌-ಸಿ: ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ
    ಗ್ರೂಪ್‌-ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ