Tag: T20 World Cup

  • ಟಿ20 ವಿಶ್ವಕಪ್‌; 7 ಪಂದ್ಯಗಳಲ್ಲಿ ಕೇವಲ 75 ರನ್‌, 8ನೇ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ 76 ರನ್‌

    ಟಿ20 ವಿಶ್ವಕಪ್‌; 7 ಪಂದ್ಯಗಳಲ್ಲಿ ಕೇವಲ 75 ರನ್‌, 8ನೇ ಪಂದ್ಯದಲ್ಲಿ ಕಿಂಗ್‌ ಕೊಹ್ಲಿ 76 ರನ್‌

    – ಫೈನಲ್‌ನಲ್ಲಿ 76 ರನ್‌ ಸಿಡಿಸಿ ಕಳಪೆ ಬ್ಯಾಟಿಂಗ್‌ ಹಣೆಪಟ್ಟಿ ಕಳಚಿದ ವಿರಾಟ್‌ 

    ಬ್ರಿಡ್ಜ್‌ಸ್ಟೋನ್: 9ನೇ ಆವೃತ್ತಿಯ ಟಿ20 ವಿಶ್ವಕಪ್‌ (T20 World Cup 2024) ಗೆದ್ದು ಭಾರತ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ತಂಡಕ್ಕೆ ಗೆಲುವು ತಂದುಕೊಟ್ಟು ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಟಿ20ಗೆ ವಿದಾಯ ಹೇಳಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದರೂ, ಫೈನಲ್‌ ಪಂದ್ಯದಲ್ಲಿ ಭಾರತ ಗೆಲುವಿಗೆ ಕೊಹ್ಲಿ ಪ್ರಮುಖ ಪಾತ್ರ ವಹಿಸಿದರು.

    ಕೊಹ್ಲಿ ಶನಿವಾರ ನಡೆದ ಫೈನಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ವಿರಾಟ್‌ ಪಾಲಿಗೆ ಈ ಬಾರಿಯ ಟಿ20 ವಿಶ್ವಕಪ್‌ ಹೆಚ್ಚು ಸಂಭ್ರಮ ನೀಡುವಂಥದ್ದೇನು ಆಗಿರಲಿಲ್ಲ. ಏಕೆಂದರೆ ಫೈನಲ್‌ಗೂ ಮುನ್ನ ಕೊಹ್ಲಿ ಆಡಿದ 7 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 75 ರನ್‌. ಈ ಪೈಕಿ ಬಾಂಗ್ಲಾದೇಶದ ವಿರುದ್ಧ ಹೊಡೆದ 37 ರನ್ನೇ ಗರಿಷ್ಠವಾಗಿತ್ತು. ಅಷ್ಟೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿ ಕ್ರಿಕೆಟ್‌ ಪ್ರಿಯರ ಟೀಕೆಗೆ ಗುರಿಯಾಗಿದ್ದರು. ಇದನ್ನೂ ಓದಿ: 2 ಟಿ20 ವಿಶ್ವಕಪ್‌ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್‌

    ವಿರಾಟ್ ಕೊಹ್ಲಿ ಶನಿವಾರ ಬಾರ್ಬಡೋಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್‌ನಲ್ಲಿ ಅರ್ಧಶತಕದೊಂದಿಗೆ ತಮ್ಮ ಕಳಪೆ ಫಾರ್ಮ್ ಎಂಬ ಹಣೆಪಟ್ಟಿಯಿಂದ ಮುಕ್ತರಾದರು. ಈ ಪಂದ್ಯದಲ್ಲಿ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ಅರ್ಧಶತಕ ಗಳಿಸಿದ್ದರು. ಅಲ್ಲದೇ ಫೈನಲ್‌ ಒಂದೇ ಪಂದ್ಯದಲ್ಲಿ 76 ರನ್‌ ಸಿಡಿಸಿದರು.

    ಫೈನಲ್‌ನಲ್ಲಿ ಕೊಹ್ಲಿ ರೋಹಿತ್ ಶರ್ಮಾ ಅವರೊಂದಿಗೆ ಭಾರತಕ್ಕೆ ಇನ್ನಿಂಗ್ಸ್ ತೆರೆದರು. ಇವರಿಬ್ಬರು ಮೊದಲ ಓವರ್‌ನಲ್ಲಿ 15 ರನ್ ಗಳಿಸಿ ಚುರುಕಾದ ಆರಂಭವನ್ನು ಪಡೆದರು. ಆದಾಗ್ಯೂ, ರೋಹಿತ್ ಅವರನ್ನು ಎರಡನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಔಟ್ ಮಾಡಿದರು. ಅದರ ಬೆನ್ನಲ್ಲೇ ಕೇವಲ ಒಂದೆರಡು ಎಸೆತಗಳಲ್ಲಿ ಮೆನ್ ಇನ್ ಬ್ಲೂ ರಿಷಬ್ ಪಂತ್ ಅವರನ್ನು ಕಳೆದುಕೊಂಡಿತು. ಇದನ್ನೂ ಓದಿ: ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ

    ಸೂರ್ಯಕುಮಾರ್ ಯಾದವ್ ಔಟಾದ ನಂತರ ಭಾರತದ ಸ್ಕೋರ್‌ ಐದನೇ ಓವರ್‌ನಲ್ಲಿ 34/3 ಇತ್ತು. ಆದರೆ ಕೊಹ್ಲಿ ಮತ್ತು ಅಕ್ಸರ್ ಪಟೇಲ್ (47) ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವಾಡಿ ಗಮನ ಸೆಳೆದರು. ಆಲ್‌ರೌಂಡರ್ ಅಕ್ಷರ್‌ 14 ನೇ ಓವರ್‌ನಲ್ಲಿ ರನೌಟ್ ಆದರು. 19ನೇ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಎಸೆತಕ್ಕೆ ಕೊಹ್ಲಿ (76 ರನ್) ಕ್ಯಾಚ್‌ ನೀಡಿ ಹೊರನಡೆದರು. ಭಾರತ 20 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತ್ತು. 177 ರನ್‌ ಗುರಿ ಬೆನ್ನತ್ತಿದ ಆಫ್ರಿಕಾ ಪಡೆ ಸೋಲನುಭವಿಸಿತು. ಭಾರತ 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದು ಸಂಭ್ರಮಿಸಿತು.

  • ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಗಯಾನ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 (T20 World Cup) ರ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಟ್‌ಮ್ಯಾನ್‌ ಮಕ್ಕಳಂತೆ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಇಂಗ್ಲೆಂಡ್ (England) ವಿರುದ್ಧದ ಗೆಲುವಿನ ಬಳಿಕ ಎಲ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ರೋಹಿತ್ ಶರ್ಮಾ ಬಾಗಿಲ ಬಳಿ ಇದ್ದ ಕುರ್ಚಿಯಲ್ಲಿ ಕುಳಿತಿದ್ದರು. ಅಲ್ಲದೇ ಒಂದು ಕೈಯಿಂದ ಮುಖ ಮುಚ್ಚಿಕೊಂಡಿದ್ದು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅವರು ಶರ್ಮಾ ತಲೆ ಮೇಲೆ ಕೈಯಿಟ್ಟು ನಂತರ ಒಳಗೆ ಹೋಗುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ

    ಟೀಂ ಇಂಡಿಯಾ (Team India) ಫೈನಲ್ ತಲುಪಿರುವ ಕಾರಣ ಅವರು ಭಾವುಕರಾಗಿದ್ದಾರೆ. ಭಾರತಕ್ಕೆ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅತ್ಯುತ್ತಮ ಬೌಲಿಂಗ್ ಮೂಲಕ ತಲಾ 3 ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಒಗ್ಗಟ್ಟಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

    https://twitter.com/iMSIDPAK/status/1806421452322644307

    ಒಟ್ಟಿನಲ್ಲಿ ಕಳೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿತ್ತು. ಇದೀಗ ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ.

    ಮೂರನೇ ಬಾರಿ ಫೈನಲ್‌ಗೆ ಲಗ್ಗೆ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿತ್ತು. 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

  • ಮೊದಲ ಬಾರಿ ಸೆಮಿಗೆ ಪ್ರವೇಶ – ಅಫ್ಘಾನ್‌ ಸಾಧನೆಯ ಹಿಂದಿದೆ ಭಾರತದ ನೆರವು

    ಮೊದಲ ಬಾರಿ ಸೆಮಿಗೆ ಪ್ರವೇಶ – ಅಫ್ಘಾನ್‌ ಸಾಧನೆಯ ಹಿಂದಿದೆ ಭಾರತದ ನೆರವು

    ನವದೆಹಲಿ: ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದ ಅಫ್ಘಾನಿಸ್ತಾನ (Afghanistan) ತಂಡದ ಸಾಧನೆಯ ಹಿಂದೆ ಬಿಸಿಸಿಐ (BCCI) ಪಾಲಿದೆ.

    ಹೌದು. ಆಂತರಿಕ ಕಿತ್ತಾಟದಿಂದ ನಲುಗಿ ಹೋಗಿದ್ದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಿ ಆಟಗಾರರನ್ನು ಬಿಸಿಸಿಐ ಪ್ರೋತ್ಸಾಹಿಸಿದ ಪರಿಣಾಮ ಕ್ರಿಕೆಟ್‌ ಟೂರ್ನಿಗಳಲ್ಲಿ ಅಫ್ಘಾನ್‌ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    ಈ ಹಿಂದೆ ಪಾಕಿಸ್ತಾನದಲ್ಲಿ (Pakistan) ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ಸಿಕ್ಕಿತ್ತು. ಆದರೆ ತರಬೇತಿ ಅಷ್ಟೇನು ಚೆನ್ನಾಗಿ ಸಿಗದ ಕಾರಣ ಬಿಸಿಸಿಐ 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ನೆರವು ನೀಡಲು ಆರಂಭಿಸಿತು. ಗ್ರೇಟರ್‌ ನೋಯ್ಡಾದಲ್ಲಿರುವ ವಿಜಯ್‌ ಸಿಂಗ್‌ ಸ್ಫೋರ್ಟ್ಸ್‌ ಕಾಂಪ್ಲೆಕ್ಸ್‌ ಅಫ್ಘಾನಿಸ್ತಾನದ ಹೋಮ್‌ ಗ್ರೌಂಡ್‌ ಆಗಿತ್ತು. ಶಾರ್ಜಾದಿಂದ ನೋಯ್ಡಾಕ್ಕೆ ಶಿಫ್ಟ್‌ ಆಗಿದ್ದ ಅಫ್ಘಾನಿಸ್ತಾನ 2017ರಲ್ಲಿ ಗ್ರೇಟರ್‌ ನೋಯ್ಡಾದಲ್ಲೇ ಐರ್ಲೆಂಡ್‌ ವಿರುದ್ಧ ಸರಣಿ ಆಡಿತ್ತು.

    ಅಫ್ಘಾನಿಸ್ತಾನ ಡೆಹ್ರಾಡೂನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಸಹ ಆಯೋಜಿಸಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರರಾದ ಲಾಲ್‌ಚಂದ್‌ ರಜಪುತ್‌ ಮತ್ತು ಮನೋಜ್‌ ಪ್ರಭಾಕರ್‌ ಅವರು ಕೋಚ್‌ ಆಗಿ ಮಾರ್ಗದರ್ಶನ ಸಹ ನೀಡಿದ್ದರು. ಸಂಬಂಧ ಮತ್ತಷ್ಟು ಉತ್ತಮವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ ಪಂದ್ಯಕ್ಕೆ ಬಿಸಿಸಿಐ ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್‌ ಘನಿ ಅವರನ್ನು ಆಹ್ವಾನಿಸಿತ್ತು. ಅಂದು ಅಶ್ರಫ್‌ ಘನಿ ಟ್ವೀಟ್‌ ಮಾಡಿ ಅಫ್ಘಾನ್‌ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆಯನ್ನು ನೀಡಿದ್ದಕ್ಕಾಗಿ ನಾನು ನಮ್ಮ ಭಾರತೀಯ ಸ್ನೇಹಿತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದು ಧನ್ಯವಾದ ತಿಳಿಸಿದ್ದರು. ಇದನ್ನೂ ಓದಿ: T20 ವಿಶ್ವಕಪ್‌ ಸೆಮಿಸ್‌ಗೆ ಅಫ್ಘಾನ್‌ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ

    ಭಾರತ ಸರ್ಕಾರ ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಲು 1 ಮಿಲಿಯನ್‌ ಡಾಲರ್‌ ನೀಡಿತ್ತು. ಈ ಹಣದಲ್ಲಿ ಕಂದಹಾರ್‌ನಲ್ಲಿ ನಿರ್ಮಾಣವಾದ ಕ್ರಿಕೆಟ್‌ ಕ್ರೀಡಾಂಗಣವನ್ನು ಭಾರತದ ರಾಯಭಾರಿ 2018ರ ಏಪ್ರಿಲ್‌ನಲ್ಲಿ ಉದ್ಘಾಟಿಸಿದ್ದರು. ಸ್ನೇಹದ ಭಾಗವಾಗಿ 2019ರಲ್ಲಿ ಅಮುಲ್‌ ಕಂಪನಿ ಅಫ್ಘಾನಿಸ್ತಾನದ ಮುಖ್ಯ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕಳೆದ 2 ದಶಕಗಳಿಂದ ಅಮುಲ್ ತನ್ನ ಹಾಲಿನ ಪುಡಿ ಮತ್ತು ಮಗುವಿನ ಆಹಾರವನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತಿದೆ.

    ಐಪಿಎಲ್‌ನಲ್ಲಿ ಪಾಕ್‌ ಆಟಗಾರರಿಗೆ ನಿರ್ಬಂಧವಿದ್ದರೆ ಅಫ್ಘಾನ್‌ ಆಟಗಾರರು ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅದರಲ್ಲೂ ಸ್ಪಿನ್ನರ್‌ ರಶೀದ್‌ ಖಾನ್‌ ಅವರಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಹಿಂದೆ ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ರಶೀದ್‌ ಖಾನ್‌ ಅವರು ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿದ್ದರು. ದೆಹಲಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ ವೇಳೆ ಅಫ್ಘಾನಿಸ್ತಾನ ತಂಡವನ್ನು ಅಭಿಮಾನಿಗಳು ಹುರಿದುಂಬಿಸಿದ್ದರು. ಪ್ರೇಕ್ಷಕರ ಅಭಿಮಾನಕ್ಕೆ ರಶೀದ್‌ ಖಾನ್‌ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಡೇವಿಡ್‌ ವಾರ್ನರ್‌ ನಿವೃತ್ತಿ

    ಐಪಿಎಲ್‌ನಲ್ಲಿ ಆಡಿದ ರಶೀದ್, ಅಜ್ಮತುಲ್ಲಾ ಒಮರ್ಜಾಯ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್ ಮತ್ತು ಗುಲಬ್‌ದಿನ್‌ ನೈಬ್‌ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

  • ಅಂತಾರಾಷ್ಟ್ರೀಯ ಕ್ರಿಕೆಟಿಗೆ ಡೇವಿಡ್‌ ವಾರ್ನರ್‌ ನಿವೃತ್ತಿ

    ಅಂತಾರಾಷ್ಟ್ರೀಯ ಕ್ರಿಕೆಟಿಗೆ ಡೇವಿಡ್‌ ವಾರ್ನರ್‌ ನಿವೃತ್ತಿ

    ಮುಂಬೈ: ಆಸ್ಟ್ರೇಲಿಯಾ (Australia) ಸ್ಟಾರ್‌ ಕ್ರಿಕೆಟಿಗ ಡೇವಿಡ್‌ ವಾರ್ನರ್‌ (David Warner) ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದಾರೆ. ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಸೂಪರ್‌ 8 ಪಂದ್ಯದಲ್ಲಿ ಅಫ್ಘಾನಿಸ್ತಾನ (Afghanistan) ರೋಚಕ 8 ರನ್‌ಗಳ ಜಯ ಸಾಧಿಸುವುದರೊಂದಿಗೆ ಡೇವಿಡ್‌ ವಾರ್ನರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕು ಅಂತ್ಯವಾಗಿದೆ.

    ಡೇವಿಡ್‌ ವಾರ್ನರ್‌ ಅಧಿಕೃತವಾಗಿ ಎಲ್ಲಿಯೂ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿಲ್ಲ. ಆದರೆ ಟಿ20 ವಿಶ್ವಕಪ್‌ ಕ್ರಿಕೆಟ್‌ ಆರಂಭಕ್ಕೂ ಮುನ್ನ ಈ ವಿಶ್ವಕಪ್‌ನಲ್ಲಿ ನಾನು ಕೊನೆಯ ಬಾರಿ ಆಸ್ಟ್ರೇಲಿಯಾದ ಜರ್ಸಿ ಧರಿಸಿ ಆಡಲಿದ್ದೇನೆ ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದರು. ಇದನ್ನೂ ಓದಿ: T20 ವಿಶ್ವಕಪ್‌ ಸೆಮಿಸ್‌ಗೆ ಅಫ್ಘಾನ್‌ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ

    ಡೇವಿಡ್‌ ವಾರ್ನರ್‌ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದರೂ ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳುತ್ತಾರಾ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ಐಪಿಎಲ್‌ನಲ್ಲಿ (IPL) ಡೇವಿಡ್‌ ವಾರ್ನರ್‌ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಪರ ಆಡುತ್ತಿದ್ದಾರೆ. ಇದನ್ನೂ ಓದಿ: T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    ಸೋಮವಾರ ನಡೆದ ಪಂದ್ಯದದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 24 ರನ್‌ಗಳಿಂದ ಗೆದ್ದುಕೊಂಡಿತ್ತು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಒಂದು ವೇಳೆ ಸೋತಿದ್ದರೆ ರನ್‌ ರೇಟ್‌ ಆಧಾರದಲ್ಲಿ ಆಸ್ಟ್ರೇಲಿಯಾ ಸೆಮಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಅಫ್ಘಾನಿಸ್ತಾನ ಬಾಂಗ್ಲಾ ವಿರುದ್ಧ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸೆಮಿ ಪ್ರವೇಶದ ಬಾಗಿಲು ಬಂದ್‌ ಆಗಿದೆ.

    ಭಾರತದ ವಿರುದ್ಧ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿದಿದ್ದ ಡೇವಿಡ್‌ ವಾರ್ನರ್‌ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು.

    37 ವರ್ಷದ ಡೇವಿಡ್‌ ವಾರ್ನರ್‌ 161 ಏಕದಿನ ಪಂದ್ಯಗಳ 159 ಇನ್ನಿಂಗ್ಸ್‌ನಲ್ಲಿ 6,932 ರನ್‌ ಹೊಡೆದಿದ್ದಾರೆ. 112 ಟೆಸ್ಟ್‌ ಪಂದ್ಯಗಳ 205 ಇನ್ನಿಂಗ್ಸ್‌ನಲ್ಲಿ 8,786 ರನ್‌ ಚಚ್ಚಿದ್ದಾರೆ. 110 ಟಿ20 ಪಂದ್ಯಗಳ 110 ಇನ್ನಿಂಗ್ಸ್‌ನಲ್ಲಿ 3,277 ರನ್‌ ಬಾರಿಸಿದ್ದಾರೆ.

     

  • T20 ವಿಶ್ವಕಪ್‌ ಸೆಮಿಸ್‌ಗೆ ಅಫ್ಘಾನ್‌ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ

    T20 ವಿಶ್ವಕಪ್‌ ಸೆಮಿಸ್‌ಗೆ ಅಫ್ಘಾನ್‌ – ತಾಲಿಬಾನ್ ಅಭಿನಂದನೆ, ತವರಲ್ಲಿ ಅಭಿಮಾನಿಗಳ ಜಾತ್ರೆ

    ಕಿಂಗ್ಸ್‌ಟೌನ್‌: 2024ರ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ ಅಫ್ಘಾನಿಸ್ತಾನ ತಂಡಕ್ಕೆ ತಾಲಿಬಾನ್‌ ವಿದೇಶಾಂಗ ಸಚಿವ (Taliban Foreign Minister) ಅಭಿನಂದನೆ ಸಲ್ಲಿಸಿದ್ದಾರೆ.

    ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಸ್‌ಗೆ ಎಂಟ್ರಿ ಕೊಟ್ಟಿದೆ. ಇದರಿಂದ ಹರ್ಷಗೊಂಡ ತಾಲಿಬಾನ್‌ ವಿದೇಶಾಂಗ ಸಚಿವ ಕೂಡಲೇ ಅಫ್ಘಾನ್‌ ತಂಡದ ನಾಯಕ ರಶೀದ್‌ ಖಾನ್‌ಗೆ (Rashid Khan) ವೀಡಿಯೋ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    ಅಫ್ಘಾನ್‌ನಲ್ಲಿ ಅಭಿಮಾನಿಗಳ ಜಾತ್ರೆ:
    ಇನ್ನು ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್‌ ಅಭಿಮಾನಿಗಳಸಂಭ್ರಮವಂತೂ ಮುಗಿಲು ಮುಟ್ಟಿದೆ. ಗೆದ್ದ ಖುಷಿಯಲ್ಲಿದ್ದ ಅಫ್ಘಾನ್ ತಂಡದ ಆಟಗಾರರ ಕಣ್ಣಲ್ಲಿ ಖುಷಿಯಿಂದ ಆನಂದಬಾಷ್ಪ ಹರಿಸಿದರೆ, ತಂಡವು ಗೆಲ್ಲುತ್ತಿದ್ದಂತೆಯೇ ತಾಲಿಬಾನ್ ನಾಡಲ್ಲಿ ಜನರು ಖುಷಿಯಿಂದ ರಸ್ತೆಗಿಳಿದು, ಸಂಭ್ರಮಾಚರಣೆ ನಡೆಸಿದರು. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಅಫ್ಘಾನಿಸ್ತಾನದ ಪೊಲೀಸರು, ನೆರೆದಿದ್ದ ಜನರನ್ನು ಚದುರಿಸಲು ಜಲಫಿರಂಗಿ ಬಳಸಿದರಾದರೂ ಅಭಿಮಾನಿಗಳ ಸಂಭ್ರಮವನ್ನು ತಡೆಯಲಾಗಲಿಲ್ಲ. ಇದನ್ನೂ ಓದಿ: 24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

    ಅಮೆರಿಕದ ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಮಂಗಳವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು.

  • T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    T20 World Cup: ಇತಿಹಾಸ ಸೃಷ್ಟಿ, ಚಕ್ರವ್ಯೂಹ ಭೇದಿಸಿದ ಅಫ್ಘಾನ್‌ ಸೆಮಿಸ್‌ಗೆ – ಆಸ್ಟ್ರೇಲಿಯಾ ಮನೆಗೆ!

    ಕಿಂಗ್ಸ್‌ಟೌನ್‌: 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಫ್ಘಾನಿಸ್ತಾನ (Afghanistan) ಕ್ರಿಕೆಟ್‌ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 8 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ (T20WC SemiFinal) ಪ್ರವೇಶಿಸಿದೆ. ಆದ್ರೆ ವಿಶ್ವಕಪ್‌ ಸೆಮಿಸ್‌ ಪ್ರವೇಶಿಸುವ ಕನಸು ಕಂಡಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದಿದೆ.

    ಕಿಂಗ್ಸ್‌ಟೌನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಪಂದ ನಿರ್ಣಾಯಕ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನ್‌ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ ಕೇವಲ 115 ರನ್‌ ಗಳಿಸಿತ್ತು. ನಂತರ ಪಂದ್ಯಕ್ಕೆ ಮಳೆ ಅಡ್ಡಿಯುಂಟಾದ್ದರಿಂದ ಬಾಂಗ್ಲಾದೇಶ ಡಕ್ವರ್ತ್‌ ಲೂಯಿಸ್‌ ನಿಯಮದ ಅನ್ವಯ 19 ಓವರ್‌ಗಳಲ್ಲಿ 114 ರನ್‌ಗಳ ಅಲ್ಪ ಮೊತ್ತದ ಗುರಿ ಪಡೆದಿತ್ತು. ಆದ್ರೆ ಅಫ್ಘಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿದ ಬಾಂಗ್ಲಾ 105 ರನ್‌ಗಳಿಗೆ ಆಲೌಟ್‌ ಆಗಿ ವಿಶ್ವಕಪ್‌ಗೆ ವಿದಾಯ ಹೇಳಿತು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ

    ಚೇಸಿಂಗ್‌ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿ ಅಫ್ಘಾನ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. 6.3 ಓವರ್‌ಗಳಲ್ಲೇ 48 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಿದ್ದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಆರಂಭಿಕ ಆಟಗಾರ ಲಿಟ್ಟನ್‌ ದಾಸ್‌ 49 ಎಸೆತಗಳಲ್ಲಿ 54 ರನ್‌ಗಳಿಸಿ ನೆರವಾಗಿದ್ದರು. ಆದ್ರೆ ಸಹ ಆಟಗಾರರು ಉತ್ತಮ ಸಾಥ್‌ ನೀಡದ ಕಾರಣ ಬಾಂಗ್ಲಾ ಕೇವಲ 105 ರನ್‌ಗಳಿಗೆ ಸರ್ವಪತನ ಕಂಡಿತು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಅಫ್ಘಾನ್‌ ಪರ ರೆಹ್ಮಾನುಲ್ಲಾ ಗುರ್ಬಾಝ್‌ 55 ಎಸೆತಗಳಲ್ಲಿ 43 ರನ್‌, ರಶೀದ್‌ ಖಾನ್‌ 19 ರನ್‌, ಇಬ್ರಾಹಿಮ್‌ 18 ರನ್‌, ಅಝ್ಮತ್ತುಲ್ಲಾ ಒಮರ್ಝೈ 10 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: ಮಂದಾನ ಬ್ಯಾಟಿಂಗ್ ಕಮಾಲ್ – ಆಫ್ರಿಕಾ ವಿರುದ್ಧ ಕ್ಲೀನ್‍ಸ್ವೀಪ್ ಸಾಧನೆ

    ರಶೀದ್‌, ನವೀನ್‌ ಸಮಬಲ ಪ್ರದರ್ಶನ:
    ಬಾಂಗ್ಲಾ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಮಾರಕ ದಾಳಿ ನಡೆಸಿದ ನವೀನ್‌ ಉಲ್‌ ಹಕ್‌ ಹಾಗೂ ರಶೀದ್‌ ಖಾನ್‌ ಸಮಬಲ ಪ್ರದರ್ಶನ ಸಾಧಿಸಿದ್ದಾರೆ. ನವೀನ್‌ 3.5 ಓವರ್‌ಗಳಲ್ಲಿ 26 ರನ್‌ ಕೊಟ್ಟು 4 ವಿಕೆಟ್‌ ಕಿತ್ತರೆ, ರಶೀದ್‌ ಖಾನ್‌ 4 ಓವರ್‌ಗಳಲ್ಲಿ 23 ರನ್‌ ಕೊಟ್ಟು 4 ವಿಕೆಟ್‌ ಉರುಳಿಸಿದರು. ಫಸಲ್‌ಹಕ್‌ ಫರೂಕಿ ಮತ್ತು ಗುಲ್ಬದೀನ್‌ ನೈಬ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ:  24 ರನ್‌ಗಳ ಗೆಲುವು, ಸೆಮಿಗೆ ಎಂಟ್ರಿ – ವಿಶ್ವಕಪ್‌ ಫೈನಲ್ ಸೋಲಿಗೆ ಸೇಡು ತೀರಿಸಿದ ಭಾರತ

  • ಬಾಂಗ್ಲಾ ವಿರುದ್ಧ ಭಾರತಕ್ಕೆ 50 ರನ್‌ಗಳ ಭರ್ಜರಿ ಜಯ – ಸೆಮಿಸ್ ಹಾದಿ ಸುಗಮ

    ಬಾಂಗ್ಲಾ ವಿರುದ್ಧ ಭಾರತಕ್ಕೆ 50 ರನ್‌ಗಳ ಭರ್ಜರಿ ಜಯ – ಸೆಮಿಸ್ ಹಾದಿ ಸುಗಮ

    -ಭಾರತ 196/5, ಬಾಂಗ್ಲಾದೇಶ 146/8

    ನಾರ್ತ್ ಸೌಂಡ್ (ಆ್ಯಂಟಿಗಾ): ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಡೆದ 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಭಾರತ 196 ರನ್ ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದೆ.

    ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಭಾರತ ಒಟ್ಟು 20 ಓವರ್‌ಗಳಲ್ಲಿ 196 ರನ್ ಗಳಿಸಿ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿತು. 197 ರನ್‌ಗಳ ಬೆನ್ನಟ್ಟಿದ ಬಾಂಗ್ಲಾ 20 ಓವರ್‌ಗಳಲ್ಲಿ 146 ರನ್‌ಗಳಿಸಿ ಸೋಲನ್ನು ಅನುಭವಿಸಿತು.

    ಭಾರತ ತಂಡದಿಂದ ಓಪನಿಂಗ್ ಬ್ಯಾಟ್ಸ್ಮನ್‌ಗಳಾಗಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದರು. 11 ಎಸೆತಗಳಿಗೆ 23 ರನ್ ಸಿಡಿಸಿ ರೋಹಿತ್ ಶರ್ಮಾ ಔಟಾಗುವ ಮೂಲಕ ಟೀಂ ಇಂಡಿಯಾದ ಮೊದಲ ವಿಕೆಟ್ ಪತನಗೊಂಡಿತು. 11 ಬಾಲ್‌ಗಳಲ್ಲಿ ರೋಹಿತ್ ಶರ್ಮಾ 3 ಫೋರ್ ಹಾಗೂ 1 ಸಿಕ್ಸ್ ಸಿಡಿಸಿ ಒಟ್ಟು 23 ಅಂಕಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ವಿರಾಟ್ ಕೊಹ್ಲಿ 28 ಬಾಲ್‌ಗಳಿಗೆ ಒಟ್ಟು 37 ರನ್ ಸಿಡಿಸಿ 2ನೇ ವಿಕೆಟ್ ಬಿಟ್ಟುಕೊಟ್ಟರು.

    ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿ ಎರಡನೇ ಬಾಲ್ ಅನ್ನು ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡುವ ಮೂಲಕ ಒಟ್ಟು 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಷಭ್ ಪಂತ್ 4 ಫೋರ್ ಹಾಗೂ 2 ಸಿಕ್ಸ್ ಸಿಡಿಸಿ 24 ಬಾಲ್‌ಗಳಿಗೆ ಒಟ್ಟು 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    ನಂತರ ಕ್ರೀಸ್‌ಗೆ ಮರಳಿದ ಶಿವಂ ದುಬೆ 24 ಎಸೆತಗಳಿಗೆ 34 ರನ್ ಸಿಡಿಸಿ ಔಟಾದರು. ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ ತಂಡಕ್ಕೆ 54 ರನ್ ಗಳಿಸಿಕೊಟ್ಟರು. ಅಕ್ಷರ್ ಪಟೇಲ್ 5 ಎಸೆತಗಳಿಗೆ 3 ರನ್ ಗಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಲು ಸಹಕರಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ 1 ಬಾಲ್‌ನಲ್ಲಿ ಫೋರ್ ಸಿಡಿಸಿ 27 ಎಸೆತಗಳಿಗೆ ಅರ್ಧಶತಕ ಪೂರ್ಣಗೊಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಿ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿದರು.

    197 ರನ್‌ಗಳ ಬೆನ್ನಟ್ಟಿದ ಬಾಂಗ್ಲದೇಶ 20 ಓವರ್‌ಗಳಲ್ಲಿ 146 ರನ್ ಗಳಿಸಿ ಸೋಲನ್ನಪ್ಪಿತು. ಓಪನಿಂಗ್ ಬ್ಯಾಟ್ಸ್ಮೆನ್‌ಗಳಾಗಿ ಲಿಟನ್ ದಾಸ್ ಹಾಗೂ ತಂಜೀದ್ ಹಸನ್ ಬ್ಯಾಟ್ ಬೀಸಿದರು. 10 ಎಸೆತಗಳಿಗೆ 13 ರನ್ ಗಳಿಸಿ ಲಿಟನ್ ದಾಸ್ ಔಟಾದರು. 4.3 ಓವರ್‌ಗಳಿಗೆ ಬಾಂಗ್ಲಾ ಮೊದಲ ವಿಕೆಟ್ ಕಳೆದುಕೊಂಡಿತು. ಲಿಟನ್ ದಾಸ್ ಅವರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು.

    ತಂಜೀದ್ ಹಸನ್ 31 ಎಸೆತಗಳಿಗೆ 29 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ತೌಹಿದ್ ಹೃದೋಯ್ 6 ಬಾಲ್‌ಗಳಿಗೆ 4 ರನ್ ಸಿಡಿಸಿ ವಿಕೆಟ್ ಬಿಟ್ಟುಕೊಟ್ಟರು. ಇವರ ಬಳಿಕ ಶಕೀಬ್ ಅಲ್ ಹಸನ್ 7 ಎಸೆತಗಳಿಗೆ 11 ರನ್ ಗಳಿಸಿ ಔಟಾದರು. ಬೂಮ್ರಾ ಮಾರಕ ಬೌಲಿಂಗ್‌ಗೆ ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೋ 32 ಎಸೆತಗಳಲ್ಲಿ 40 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಜಾಕಿರ್ ಅಲಿ 4 ಎಸೆತಗಳಿಗೆ ಕೇವಲ 1 ರನ್, ರಶೀದ್ ಹೊಸೈನ್ 24 ರನ್, ಮಹಮ್ಮದುಲ್ಲಾ 15 ಬಾಲ್‌ಗಳಿಗೆ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಔಟಾಗದೆ ಮೆಹದಿ ಹಸನ್ 5 ರನ್ ಹಾಗೂ ತಂಜೀಮ್ ಹಸನ್ ಶಕೀಬ್ 1 ರನ್‌ಗಳಿಸಿ ಆಟವನ್ನು ಪೂರ್ಣಗೊಳಿಸಿದರು.

  • ಟಿ20 ವಿಶ್ವಕಪ್- ಅಫ್ಘಾನಿಸ್ತಾನಕ್ಕೆ 182 ರನ್ ಗುರಿ ಕೊಟ್ಟ ಟೀಂ ಇಂಡಿಯಾ

    ಟಿ20 ವಿಶ್ವಕಪ್- ಅಫ್ಘಾನಿಸ್ತಾನಕ್ಕೆ 182 ರನ್ ಗುರಿ ಕೊಟ್ಟ ಟೀಂ ಇಂಡಿಯಾ

    ಬ್ರಿಡ್ಜ್‍ಟೌನ್: ವಿಶ್ವಕಪ್ ಟಿ20, ಸೂಪರ್ 8 ಹಂತದಲ್ಲಿ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನ ನಡುವೆ ಹಣಾಹಣಿ ನಡೆಯಿತು. ಈ ಪಂದ್ಯದಲ್ಲಿ ಆರಂಭಿಕ ಆಘಾತ ಹೊರತಾಗಿಯೂ ಸೂರ್ಯ ಕುಮಾರ್ ಬಾರಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಅಫ್ಘಾನಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.

    ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಔಟಾದರು. 13 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಫಜಲ್‍ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು.

    ಇನ್ನೂ ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‍ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಕೇವಲ 10 ರನ್ ಗಳಿಸಿದರು.

    90 ರನ್‍ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ 5ನೇ ವಿಕೆಟ್‍ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 60 ರನ್‍ಗಳ ಅಮೂಲ್ಯ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ಕೊಟ್ಟರು.

    ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 32 ರನ್ ಬಾರಿಸಿ ನವೀನ್ ಉಲ್ ಹಕ್‍ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 12 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

    ಆಫ್ಘಾನಿಸ್ತಾನ ಪರ ನಾಯಕ ರಶೀದ್ ಖಾನ್ ಹಾಗೂ ಫಜಲ್‍ಹಕ್ ಫಾರೂಕಿ ತಲಾ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ ಒಂದು ವಿಕೆಟ್ ಉರುಳಿಸಿದರು.

  • 17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    – ನೀವೇನ್‌ ಕ್ರಿಕೆಟ್‌ ಆಡೋಕೆ ಹೋದ್ರಾ, ಮಜಾ ಮಾಡೋಕೆ ಹೋದ್ರಾ ಅಂತ ಟೀಕೆ

    ವಾಷಿಂಗ್ಟನ್‌: 2024ರ ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವ ಪಾಕಿಸ್ತಾನ ಕ್ರಿಕೆಟ್‌ ಆಟಗಾರರ ವಿರುದ್ಧ ತಮ್ಮದೇ ದೇಶದ ಅಭಿಮಾನಿಗಳು (Pak Cricket Fans) ಹಾಗೂ ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    ಹೌದು. ಸದ್ಯ ಟಿ20 ವಿಶ್ವಕಪ್‌ ಟೂರ್ನಿಯಿಂದ ಪಾಕ್‌ ತಂಡ ಹೊರಬಿದ್ದರೂ ಆಟಗಾರರು ಮರಳಿ ತವರಿಗೆ ಹಿಂದಿರುಗದೇ ಅಮೆರಿಕದಲ್ಲಿಯೇ ಉಳಿದಿದ್ದಾರೆ. ಐಷಾರಾಮಿ ರೂಮ್‌ಗಳನ್ನು (Luxury Rooms) ಬುಕ್ಕಿಂಗ್‌ ಮಾಡಿಕೊಂಡಿದ್ದು, ಯುಎಸ್‌ನಲ್ಲಿ ಹಾಲಿಡೆ ಎಂಜಾಯ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಪಾಕ್‌ ಆಟಗಾರರ ವಿರುದ್ಧ ಹಿರಿಯ ಕ್ರಿಕೆಟಿಗರ ಆಕ್ರೋಶ ಮುಂದುವರಿದಿದೆ.

    ಈ ಕುರಿತು ಮಾತನಾಡಿರುವ ಪಾಕ್‌ ಕ್ರಿಕೆಟ್‌ ಮಂಡಳಿ ಸದಸ್ಯ (PCB Member) ಅತೀಕ್‌, ಯುಎಸ್‌ನಲ್ಲಿ ನೀವೇನು ನಾಟಕ ಆಡ್ತಿದ್ದೀರಾ, ಹಿಂದೆಲ್ಲ ನಮ್ಮ ತಂಡಕ್ಕೆ ಒಬ್ಬ ಕೋಚ್‌ ಮತ್ತು ಓರ್ವ ಮ್ಯಾನೇಜರ್‌ ಮಾತ್ರ ಇರುತ್ತಿದ್ದರು. ಈಗ ನಿಮಗೆ 17 ಆಟಗಾರರಿಗೆ 17 ಮ್ಯಾನೇಜರ್‌ಗಳಿದ್ದಾರೆ. ನೀವು 60 ಕೊಠಡಿಗಳನ್ನ ಬುಕ್‌ ಮಾಡಿದ್ದೀರಿ. ರಜೆಯ ಮೇಲೆ ಹೋಗಿರುವಂತೆ ಹೆಂಡತಿ ಮಕ್ಕಳೊಂದಿಗೆ ಸುತ್ತಾಡುತ್ತಿದ್ದೀರಿ. ಅಮೆರಿಕಕ್ಕೆ ಹೋಗಿದ್ದು ಏತಕ್ಕೆ? ಕ್ರಿಕೆಟ್‌ ಆಡಲು ಹೋಗಿದ್ದೀರೋ ಅಥವಾ ರಜೆಯ ಮಜಾ ಮಾಡಲು ಹೋಗಿದ್ದೀರೋ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಶಿಸ್ತು ಎಂದರೆ ಯಾರಿಗೂ ತಿಳಿಯದೇ ಇರುವಂತಹ ಸಂಸ್ಕೃತಿಯನ್ನ ಹುಟ್ಟುಹಾಕುತ್ತಿದ್ದಾರೆ. ವಿಶ್ವಕಪ್‌ ಆಡಲು ಹೋದವರ ಗಮನ ಎಲ್ಲಿರಬೇಕು? ಕ್ರಿಕೆಟ್‌ ಮಂಡಳಿ ನಿಮಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ, ಹೀಗಿರುವಾಗ ನೀವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

    ಪ್ರಸಕ್ತ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗ್ರೂಪ್‌-ಎ ನಲ್ಲಿದ್ದ ಪಾಕ್‌ ತಂಡ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತು. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

  • ಶುಭಮನ್‌ ಗಿಲ್‌ರನ್ನ ಭಾರತಕ್ಕೆ ವಾಪಸ್‌ ಕಳಿಸಲು ಶಿಸ್ತಿನ ಕೊರತೆಯೇ ಕಾರಣವಾ? – ಕೋಚ್‌ ಹೇಳಿದ್ದೇನು?

    ಶುಭಮನ್‌ ಗಿಲ್‌ರನ್ನ ಭಾರತಕ್ಕೆ ವಾಪಸ್‌ ಕಳಿಸಲು ಶಿಸ್ತಿನ ಕೊರತೆಯೇ ಕಾರಣವಾ? – ಕೋಚ್‌ ಹೇಳಿದ್ದೇನು?

    ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ತಂಡದ ಲೀಗ್‌ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಅಗ್ರಸ್ಥಾನದೊಂದಿಗೆ ಸೂಪರ್‌-8 ಸುತ್ತಿಗೆ ಪದಾರ್ಪಣೆ ಮಾಡಿದೆ. ಮುಂದಿನ ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್‌ಗೆ ಪ್ರಯಾಣಿಸಲಿದೆ. ಲೀಗ್‌ ಸುತ್ತಿನ ಪಂದ್ಯಗಳ ಮುಕ್ತಾಯದ ಹಿನ್ನೆಲೆ ಭಾರತ ತಂಡಕ್ಕೆ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದ ಶುಭಮನ್‌ ಗಿಲ್‌ (Shubman Gill) ಹಾಗೂ ಅವೇಶ್‌ ಖಾನ್‌ (Avesh Khan) ಭಾರತಕ್ಕೆ ಮರಳಲು ಸಿದ್ಧವಾಗಿದ್ದಾರೆ.

    ಶುಭಮನ್‌ ಗಿಲ್‌ ಅವರು ಭಾರತಕ್ಕೆ ಮತ್ತೆ ಮರಳುತ್ತಿರುವುದಕ್ಕೆ ಅವರ ಅಶಿಸ್ತಿನ ವರ್ತನೆಯೇ ಕಾರಣ ಎಂಬ ವದಂತಿಗಳು ಜಾಲತಾಣದಲ್ಲಿ ಹುಟ್ಟಿಕೊಂಡಿದ್ದು ಇದಕ್ಕೆ ಬ್ಯಾಟಿಂಗ್‌ ಕೋಚ್‌ ರಾಥೋರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಪಾಕ್‌ ಔಟ್‌ – ಬಾಬರ್‌, ರಿಜ್ವಾನ್‌ನನ್ನ ತಂಡದಿಂದ ಕಿತ್ತೊಗೆಯುವಂತೆ ಆಗ್ರಹ

    ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ರಾಥೋಡ್‌, ಸೂಪರ್‌-8 ಪಂದ್ಯಗಳಗಾಗಿ ಟೀಂ ಇಂಡಿಯಾದ ಮೀಸಲು ಆಟಗಾರರಾಗಿ ರಿಂಕು ಸಿಂಗ್‌, ಖಲೀಲ್‌ ಅಹ್ಮದ್‌ ಮಾತ್ರ ಕೆರಿಬಿಯನ್‌ ನಾಡಿಗೆ ಪ್ರಯಾಣಿಸಲಿದ್ದಾರೆ. ಅವೇಶ್‌ ಖಾನ್‌ ಮತ್ತು ಶುಭಮನ್‌ ಗಿಲ್‌ ಅವರನ್ನು ಮರಳಿ ಭಾರತಕ್ಕೆ ಮರಳಿ ಕಳುಹಿಸುತ್ತಿರುವುದು ಅಶಿಸ್ತಿನ ವರ್ತನೆಯಿಂದಲ್ಲ, ಇದು ಪೂರ್ವನಿಯೋಜಿತ ಕ್ರಮ. ಕೆರಿಬಿಯನ್‌ನಲ್ಲಿ ಕೇವಲ ಇಬ್ಬರು ಮೀಸಲು ಆಟಗಾರರ ಸೇರ್ಪಡೆಗೆ ಮಾತ್ರ ಅವಕಾಶವಿದೆ. ಇದನ್ನು ಮೊದಲೇ ನಿರ್ಣಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇನ್ನೂ ಗಿಲ್‌ ಅವರನ್ನು ತವರಿಗೆ ವಾಪಸ್‌ ಕಳುಹಿಸುತ್ತಿರುವ ಬಗ್ಗೆ ವರದಿಗಳು ಹೊರಬೀಳುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಗಿಲ್‌ ಅನ್‌ಫಾಲೋ ಮಾಡಿದ್ದಾರೆ ಎಂಬುದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದನ್ನೂ ಓದಿ: ಬುಮ್ರಾ ಬೆಂಕಿ ಬೌಲಿಂಗ್‌, ಭಾರತಕ್ಕೆ ರೋಚಕ 6 ರನ್‌ ಜಯ – ಗುಂಪು ಹಂತದಲ್ಲೇ ಪಾಕ್‌ ಹೊರಕ್ಕೆ?

    ಕೆನಡಾ-ಭಾರತದ ನಡುವೆ ಶನಿವಾರ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಪಂದ್ಯವು ಮಳೆಯಿಂದ ರದ್ದಾಯಿತು. ಇದರೊಂದಿಗೆ ಉಭಯ ತಂಡಗಳ ಲೀಗ್‌ ಸುತ್ತಿನ ಪಂದ್ಯವು ಮುಕ್ತಾಯಗೊಂಡಿತು. ಎ ಗುಂಪಿನಲ್ಲಿ ಭಾರತ ಮತ್ತು ಅಮೆರಿಕ ತಂಡಗಳು ಸೂಪರ್‌-8 ಸುತ್ತಿಗೆ ಅರ್ಹತೆ ಪಡೆದುಕೊಂಡವು. ಜೂನ್ 20ರ ಗುರುವಾರ ಬಾರ್ಬಡೋಸ್‌ನಲ್ಲಿ ಸೂಪರ್-8 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ವಿರುದ್ಧ ಸೆಣಸಲಿದೆ. ಇದನ್ನೂ ಓದಿ: ‌250 ಕೋಟಿ ರೂ. ವೆಚ್ಚದಲ್ಲಿ ಐದೇ ತಿಂಗಳಲ್ಲಿ ನಿರ್ಮಿಸಿದ್ದ ನಸ್ಸೌ ಕೌಂಟಿ ಸ್ಟೇಡಿಯಂ ನೆಲಸಮ?