Tag: T20 match

  • ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟಿ-20 ವೀಕ್ಷಿಸಿದ 28 ವಿದ್ಯಾರ್ಥಿಗಳಿಗೆ ಕೊರೊನಾ

    ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟಿ-20 ವೀಕ್ಷಿಸಿದ 28 ವಿದ್ಯಾರ್ಥಿಗಳಿಗೆ ಕೊರೊನಾ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ಕ್ಯಾಂಪಸ್‍ನ 28 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ.

    ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ-20 ಸರಣಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊದಲ ಎರಡು ಟಿ-20 ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ್ದ ಗುಜಾರಾತ್ ಕ್ರಿಕೆಟ್ ಅಸೋಸಿಯೇಷನ್ ನಂತರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಉಳಿದ ಮೂರು ಪಂದ್ಯಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿತ್ತು. ಮೊದಲ ಪಂದ್ಯವನ್ನು ಸ್ಟೇಡಿಯಂಗೆ ತೆರಳಿ ವೀಕ್ಷಿಸಿದ್ದ, ಐಐಎಂಎ ಕ್ಯಾಂಪಸ್‍ನ 5 ವಿದ್ಯಾರ್ಥಿಗಳಲ್ಲಿ ಮೊದಲು ಕೊರೊನಾ ದೃಢಪಟ್ಟ ಹಿನ್ನೆಲೆ ಉಳಿದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದಾಗ ಒಟ್ಟು 28 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಈಗಾಗಲೇ ಕಾಲೇಜು ಕ್ಯಾಂಪಸ್‍ನ ಬಹುತೇಕ ಎಲ್ಲರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಉಳಿದವರ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಕಾಲೇಜಿನ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

  • ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಕ್ಯಾನ್ಬೆರಾ: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಭಾರತ 11 ರನ್‍ಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಅಂತಾರಾಷ್ಟೀಯ ಟಿ-20ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ವೇಗಿ ಟಿ ನಟರಾಜನ್ ಭರ್ಜರಿ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಆರಂಭದಲ್ಲಿ ಕೆಎಲ್ ರಾಹುಲ್ ಅರ್ಧಶತಕ ಮತ್ತು ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 160 ರನ್ ಪೇರಿಸಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮ ಆರಂಭ ಕಂಡರೂ ನಟರಾಜನ್ ಮತ್ತು ಚಹಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ 20 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 150 ರನ್ ಹೊಡೆದು 11 ರನ್ ಅಂತರದಿಂದ ಸೋತಿತು.

    ನಟರಾಜನ್ ಬೌಲಿಂಗ್ ಕಮಾಲ್:
    ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನಟರಾಜನ್ ವರುಣ್ ಚಕ್ರವರ್ತಿಗೆ ಗಾಯವಾದ ಕಾರಣ ಆಸೀಸ್ ಟೂರ್ನಿಗೆ ಆಯ್ಕೆಯಾಗಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ನಟರಾಜನ್ ತಾವಾಡಿದ ಮೊದಲ ಪಂದ್ಯದಲ್ಲೇ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು 30 ರನ್ ನೀಡಿದರು. ನಟರಾಜನ್‍ಗೆ ಉತ್ತಮ ಸಾಥ್ ನೀಡಿದ ಯುಜ್ವೇಂದ್ರ ಚಹಲ್ ನಾಲ್ಕು ಓವರ್ ಸ್ಪಿನ್ ಮಾಡಿ ಮೂರು ವಿಕೆಟ್ ಕಿತ್ತು 25 ರನ್ ನೀಡಿದರು.

    ಭಾರತ ನೀಡಿದ 161 ಟಾರ್ಗೆಟ್ ಬೆನ್ನಟ್ಟಲು ಬಂದ ಆಸೀಸ್ ಪಡೆಗೆ ಉತ್ತಮ ಆರಂಭ ದೊರಕಿತು. ಆರಂಭಿಕರಾಗಿ ಕಣಕ್ಕಿಳಿದ ಡಿ ಆರ್ಸಿ ಶಾರ್ಟ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಈ ಜೋಡಿ ಅರ್ಧಶತಕದ ಜೊತೆಯಾಟವಾಡಿ ಮುನ್ನುಗುತ್ತಿತ್ತು ಆದರೆ ಏಳನೇ ಓವರಿನಲ್ಲಿ ಹಾರ್ದಿಕ್ ಪಾಂಡ್ಯ 26 ಬಾಲಿಗೆ 35 ರನ್ ಗಳಿಸಿದ್ದ ಫಿಂಚ್ ಅನ್ನು ಔಟ್ ಮಾಡಿದರು. ನಂತರ ಬಂದ ಸ್ಟೀವನ್ ಸ್ಮಿತ್ ಚಹಲ್ ಸ್ಪಿನ್ ಮೋಡಿಗೆ 12 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ನಂತರ ಕ್ರೀಸಿಗೆ ಬಂದ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅನ್ನು ಟಿ ನಟರಾಜನ್ ಔಟ್ ಮಾಡಿದರು. ನಂತರ ಜೊತೆಯಾದ ಡಿ ಆರ್ಸಿ ಶಾರ್ಟ್ ಮತ್ತು ಮೊಯಿಸಸ್ ಹೆನ್ರಿಕ್ಸ್ ಉತ್ತಮ ಜೊತೆಯಾಟವಾಡಿದರು. ಆದರೆ 14ನೇ ಓವರಿನಲ್ಲಿ 34 ರನ್ ಸಿಡಿಸಿದ್ದ ಆರ್ಸಿ ಶಾರ್ಟ್ ಅನ್ನು ಔಟ್ ಮಾಟುವ ಮೂಲಕ ಟಿ ನಟರಾಜನ್ ಅವರು ಪಂದ್ಯಕ್ಕೆ ತಿರುವು ನೀಡಿದರು. ನಂತರ ಬಂದ ಮ್ಯಾಥ್ಯೂ ವೇಡ್ 7 ರನ್ ಗಳಿಸಿ ಚಹಲ್‍ಗೆ ಔಟ್ ಆದರು.

    ಈ ಮೂಲಕ ಪಂದ್ಯ ಭಾರತದ ಕಡೆ ವಾಲಿತು. ನಂತರ ಬ್ಯಾಟಿಂಗ್ ಬಂದ ಮಿಚೆಲ್ ಸ್ಟಾರ್ಕ್ ಅನ್ನು ಟಿ ನಟರಾಜನ್ ಬೌಲ್ಡ್ ಮಾಡಿದರು. 20 ಬಾಲಿಗೆ 30 ರನ್ ಸಿಡಿಸಿ ಆಡುತ್ತಿದ್ದ ಮೊಯಿಸಸ್ ಹೆನ್ರಿಕ್ಸ್ ದೀಪಕ್ ಚಹರ್ ಬೌಲಿಂಗ್‍ನಲ್ಲಿ ಔಟ್ ಆಗಿ ಹೊರನಡೆದರು. ಕೊನೆಯ ಓವರಿನಲ್ಲಿ ಆಸ್ಟ್ರೇಲಿಯಾಗೆ ಗೆಲ್ಲಲು 25 ರನ್ ಬೇಕಿತ್ತು. ಆದರೆ ಶಮಿ ಅವರ ಬಿಗಿಯಾದ ಬೌಲಿಂಗ್ ದಾಳಿಯಿಂದ 15 ರನ್ ಮಾತ್ರ ಆಸ್ಟ್ರೇಲಿಯಾಕ್ಕೆ ಬಂತು ಪರಿಣಾಮ 11 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಸೋತಿತು.