Tag: t20 cricket

  • ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಭಾರತ vs ನ್ಯೂಜಿಲೆಂಡ್ ಟಿ20 ಕಿಚ್ಚು ಹೆಚ್ಚಿಸಿದ ಚಹರ್, ಗುಪ್ಟಿಲ್ ದೃಷ್ಟಿಯುದ್ಧ

    ಜೈಪುರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಈ ನಡುವೆ ಪಂದ್ಯದ ವೇಳೆ ಭಾರತದ ವೇಗಿ ದೀಪಕ್ ಚಹರ್ ಮತ್ತು ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ನಡುವೆ ದೃಷ್ಟಿಯುದ್ಧ ನಡೆದಿದೆ. ಇದು ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿಸಿತು.

    ರೋಚಕವಾಗಿ ಕಂಡುಬಂದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 165 ರನ್ ಗಳ ಗುರಿಯನ್ನು ಭಾರತ ತಂಡ 19.4 ಓವರ್‌ಗಳ ಅಂತ್ಯಕ್ಕೆ 166 ರನ್ ಸಿಡಿಸಿ ಗುರಿ ಮುಟ್ಟಿತ್ತು. ಕೊನೆಯವರೆಗೂ ಕ್ರಿಕೆಟ್ ಪ್ರೇಮಿಗಳ ಎದೆ ಬಡಿತ ಹೆಚ್ಚಿಸಿದ ಈ ಪಂದ್ಯದಲ್ಲಿ ಆಟಗಾರರ ನಡುವೆ ನೆಕ್ ಟು ನೆಕ್ ಫೈಟ್ ಕೂಡ ಜೋರಾಗಿತ್ತು. ಇದನ್ನೂ ಓದಿ: ಸೂರ್ಯ ಸ್ಫೋಟಕ ಅರ್ಧಶತಕ – ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಕಿವೀಸ್ ತಂಡ ದೊಡ್ಡ ಮೊತ್ತ ಕಳೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 70 ರನ್ (42 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ 17 ನೇನಲ್ಲಿ ಓವರ್‍ ನಲ್ಲಿ ಔಟ್ ಆದರು. ಗುಪ್ಟಿಲ್ ಔಟ್ ಆಗುವ ಮೊದಲು 17 ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತವನ್ನು ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್‌ಗಟ್ಟಿ ಚಹರ್‌ರನ್ನು ದುರುಗುಟ್ಟಿ ನೋಡಿದರು. ಆಗ ಸುಮ್ಮನಿದ್ದ, ಚಹರ್ ಮರು ಎಸೆತದಲ್ಲೇ ಗುಪ್ಟಿಲ್ ವಿಕೆಟ್ ಪಡೆಯಲು ಯಶಸ್ವಿಯಾದರು. ಈ ವೇಳೆ ಚಹರ್ ಗುಪ್ಟಿಲ್‍ರನ್ನು ದುರುಗುಟ್ಟಿ ನೋಡಿ ಏಟಿಗೆ ಎದುರೇಟು ನೀಡಿದರು. ಇದನ್ನೂ ಓದಿ: ಐಸಿಸಿಯ 3 ಟೂರ್ನಿಗೆ ಭಾರತ ಆತಿಥ್ಯ, ಚಾಂಪಿಯನ್ ಟ್ರೋಫಿ ಪಾಕಿಸ್ತಾನದಲ್ಲಿ

    ಚಹರ್ ಮತ್ತು ಗುಪ್ಟಿಲ್ ದೃಷ್ಟಿಯುದ್ಧ ನೋಡಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಮೆಂಟ್‍ನೊಂದಿಗೆ ಪೋಸ್ಟ್ ಮಾಡಿ ಕಿಕ್ ಹೆಚ್ಚಿಸಿದರೆ, ಕೊರೊನಾ ಬಳಿಕ ಮೈದಾನಕ್ಕೆ ಎಂಟ್ರಿಕೊಟ್ಟು ಪಂದ್ಯ ವೀಕ್ಷಿಸಿದ ಪ್ರೇಕ್ಷಕರು ಈ ಸನ್ನಿವೇಶವನ್ನು ಎಂಜಾಯ್ ಮಾಡಿದರು.

  • ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್

    ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್

    ದುಬೈ: ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಸರದಾರನಾಗಿ ನೂತನ ಮೈಲಿಗಲ್ಲು ಸೃಷ್ಟಿಸಿದ್ದಾರೆ.

    ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‍ನ ಮುಂಬೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್ ಐಪಿಎಲ್ ಸಹಿತ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ 10 ಸಾವಿರ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಟಿ20 ಮಾದರಿ ಕ್ರಿಕೆಟ್‍ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಸಿಡಿಸಿದ 5ನೇ ಅಟಗಾರನಾಗಿ ಕೊಹ್ಲಿ ಹೊರ ಹೊಮ್ಮಿದ್ದಾರೆ. ಇದನ್ನೂ ಓದಿ: ಮ್ಯಾಕ್ಸಿ ಆಲ್‍ರೌಂಡರ್ ಆಟ, ಹರ್ಷಲ್ ಹ್ಯಾಟ್ರಿಕ್ – ಬೆಂಗಳೂರಿಗೆ 54 ರನ್‍ಗಳ ಭರ್ಜರಿ ಜಯ

    ವಿರಾಟ್ 10 ಸಾವಿರ ರನ್ ವೇಗವಾಗಿ ದಾಖಲಿಸಿದ ವಿಶ್ವದ ಎರಡನೇ ಆಟಗಾರ. ಈ ಮೊದಲು ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ 285 ಇನ್ನಿಂಗ್ಸ್‌ಗಳಿಂದ 10 ಸಾವಿರ ರನ್ ಬಾರಿಸಿ ಮಿಂಚಿದ್ದರು, ಇದೀಗ ಕೊಹ್ಲಿ ತಮ್ಮ 299ನೇ ಇನ್ನಿಂಗ್ಸ್‌ನಲ್ಲಿ 10 ಸಾವಿರ ರನ್ ಪೂರೈಸಿ ರನ್ ಶಿಖರವನ್ನೇರಿದ್ದಾರೆ. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್

    ಟಿ20 ಕ್ರಿಕೆಟ್‍ನಲ್ಲಿ ಕ್ರಿಸ್ ಗೇಲ್ 14,261 ರನ್‍ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಮುಂಬೈ ಪರ ಬ್ಯಾಟ್ ಬೀಸುವ ಕೀರನ್ ಪೊಲಾರ್ಡ್ 11,159ರನ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ 10,808 ರನ್ ಬಾರಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಹೈದರಾಬಾದ್ ಪರ ಆಡುವ ಡೇವಿಡ್ ವಾರ್ನರ್ ಇದ್ದಾರೆ. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್ 

  • ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    ಕೆಟ್ಟ ದಾಖಲೆ ಬರೆದ ಸಿಕ್ಸರ್ ಕಿಂಗ್ ಕ್ರಿಸ್ ಗೇಲ್

    ವೆಸ್ಟ್ ಇಂಡೀಸ್: ತನ್ನ ಆಕ್ರಮಣಕಾರಿ ಬ್ಯಾಟಿಂಗ್‍ನಿಂದಲೇ ಹೆಸರು ವಾಸಿಯಾಗಿರುವ ಕ್ರಿಸ್ ಗೇಲ್ ಟಿ20 ಯಲ್ಲಿ ಅತಿಹೆಚ್ಚು ಬಾರಿ ಶೂನ್ಯಕ್ಕೆ ಔಟ್ ಆಗಿರುವ ಕೆಟ್ಟ ದಾಖಲೆಯನ್ನು ಸಹ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

    ಕ್ರಿಸ್ ಗೇಲ್ ಬ್ಯಾಟಿಂಗ್ ಬಂದರೆ ಎದುರಾಳಿ ಬೌಲರ್ ಗಳು ನಡುಗುತ್ತಾರೆ. ಟಿ20 ಯಲ್ಲಿ ಅತಿ ಹೆಚ್ಚು ರನ್ ಬಾರಿಸುವ ಗೇಲ್ ಈಗ ಹೆಚ್ಚು ಬಾರಿ ಶೂನ್ಯಕ್ಕೆ ಬಲಿಯಾಗಿರುವ ಆಟಗಾರ ಎಂಬ ಕುಖ್ಯಾತಿಗೂ ಪಾತ್ರವಾಗಿದ್ದಾರೆ. ಕ್ರಿಕೆಟ್ ಪಂದ್ಯಗಳಲ್ಲಿ ಅಬ್ಬರಿಸುವ ಗೇಲ್ ಇದುವರೆಗೂ ಒಟ್ಟು 446 ಟಿ20 ಪಂದ್ಯಗಳನ್ನು ಆಡಿ 30 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಅಲ್ಲದೆ ಟಿ20ಯಲ್ಲಿ 175 ರನ್ ಹೊಡೆಯುವ ಮೂಲಕ ವೈಯಕ್ತಿಕವಾಗಿ ಅತಿಹೆಚ್ಚು ಸ್ಕೋರ್ ಗಳಿಸಿದ್ದಾರೆ.  ಇದನ್ನೂ ಓದಿ: 500 ಟಿ20 ಪಂದ್ಯವಾಡಿ ದಾಖಲೆ ಬರೆದ ಬ್ರಾವೋ

    ಶೂನ್ಯಕ್ಕೆ ಔಟಾಗಿರುವವರ ಪಟ್ಟಿಯನ್ನು ನೋಡುವುದಾದರೆ ಎರಡನೇ ಸ್ಥಾನದಲ್ಲಿ 373 ಪಂದ್ಯಗಳನ್ನಾಡಿರುವ ಸುನಿಲ್ ನರೈನ್ ಇದ್ದು 28 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಅಬ್ಬರದ ಹೊಡೆತಗಳಿಗೆ ಹೆಸರಾಗಿರುವ ಲೆಂಡ್ಲೆ ಸಿಮನ್ಸ್ 283 ಪಂದ್ಯಗಳಲ್ಲಿ 28 ಬಾರಿ ರನ್ ಗಳಿಸದೆ ವಿಕೆಟ್ ಒಪ್ಪಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

    ನಾಲ್ಕನೇ ಸ್ಥಾನದಲ್ಲಿ 337 ಪಂದ್ಯಗಳನ್ನಾಡಿರುವ ಡ್ವೈನೆ ಸ್ಮಿತ್ 28 ಬಾರಿ ಸೊನ್ನೆಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿರುವ ಉಮರ್ ಅಕ್ಮಲ್ 27 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

    ಚುಟುಕು ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸಿ ದಾಖಲೆ ಬರೆದಿರುವ ವೆಸ್ಟ್ ಇಂಡೀಸ್ ಆಟಗಾರರು ಶೂನ್ಯಕ್ಕೆ ಔಟ್ ಆಗಿರುವ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

     

  • 2 ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಕ್ಕೆ ಕಾರಣ ತಿಳಿಸಿದ ನೆಟ್ಟಿಗರು

    2 ಪಂದ್ಯಗಳಿಂದ ರೋಹಿತ್ ಶರ್ಮಾ ಹೊರಗುಳಿದಿದ್ದಕ್ಕೆ ಕಾರಣ ತಿಳಿಸಿದ ನೆಟ್ಟಿಗರು

    – ಕದ್ದು ತಿಂಡಿ ತಿಂದು ಸಿಕ್ಕಿಬಿದ್ದ ರೋಹಿತ್ ಶರ್ಮಾ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ಸರಣಿಯ 2 ಪಂದ್ಯಗಳಿಂದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೊರಗುಳಿದಿದ್ದರು. ಇದೀಗ ರೋಹಿತ್ ಶರ್ಮಾ ಯಾವ ಕಾರಣಕ್ಕೆ 2 ಪಂದ್ಯಗಳಿಂದ ಹೊರಗೆ ಉಳಿದಿದ್ದರು ಎಂಬ ಬಗ್ಗೆ ನೆಟ್ಟಿಗರು ಕಾರಣ ಕೊಟ್ಟಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಮತ್ತು ಎರಡನೇ ಪಂದ್ಯದಿಂದ ರೋಹಿತ್ ಶರ್ಮಾ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳದೆ ವಿಶ್ರಾಂತಿಯಲ್ಲಿದ್ದರು. ಆದರೆ ನೆಟ್ಟಿಗಾರು ಮಾತ್ರ ರೋಹಿತ್ ಯಾಕೆ ಆಡುವ ಬಳಗಲ್ಲಿ ಕಾಣಿಸಿಕೊಂಡಿಲ್ಲ ಎಂಬ ಬಗೆಗೆ ಒಂದು ವೀಡಿಯೋ ತುಣುಕನ್ನು ಹಾಕಿ ಉತ್ತರ ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ರೋಹಿತ್ ಶರ್ಮಾ ತರಬೇತಿ ಸಿಬ್ಬಂದಿ ಹಿಂದೆ ಕುಳಿತುಕೊಂಡು ಕದ್ದು ತಿಂಡಿ ತಿನ್ನುತ್ತಿದ್ದರು. ಇದನ್ನು ಗಮನಿಸಿದ ಕ್ಯಾಮೆರಾ ಮ್ಯಾನ್ ಈ ದೃಶ್ಯವನ್ನು ಸೆರೆ ಹಿಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಹಿಟ್ ಮ್ಯಾನ್‍ಗೆ ಪಂದ್ಯಕ್ಕಿಂತ ವಡಾಪಾವ್ ಮುಖ್ಯ 2ನೇ ಪಂದ್ಯದಿಂದ ಹೊರಗುಳಿಯಲು ಇದೇ ಕಾರಣ ಎಂದು ಟ್ರೋಲ್ ಮಾಡಿದ್ದಾರೆ.

    ವಡಾಪಾವ್ ತಿನ್ನುವ ಧಾವಂತದಲ್ಲಿದ್ದ ರೋಹಿತ್ ಕೆಳಗೆ ಬಗ್ಗಿಕೊಂಡು ತಿಂಡಿಯನ್ನು ಕಚ್ಚಿ ನಂತರ ಮೇಲೆ ನೋಡುತ್ತಿರುವ ದೃಶ್ಯವನ್ನು ನೋಡಿರುವ ನೆಟ್ಟಿಗರು ಹಲವು ಬಗೆ ಬಗೆಯ ಟ್ರೋಲ್‍ಗಳನ್ನು ಮಾಡುತ್ತಿದ್ದಾರೆ.

    ಟಿ20 ಸರಣಿಯ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್ ಮುಂದಿನ ಪಂದ್ಯಗಳಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು ಈಗಾಗಲೇ ತಂಡದೊಂದಿಗೆ ಅಭ್ಯಾಸದಲ್ಲಿ ತೋಡಗಿಕೊಂಡಿದ್ದಾರೆ.

    ಇದೀಗ ಎಲ್ಲೆಡೆ ಹಿಟ್‍ಮ್ಯಾನ್ ತಿಂಡಿ ಕದ್ದುತಿನ್ನುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಇದು ಸೊಗಸಾದ ಆಹಾರ ಸಿಕ್ಕಂತಾಗಿದೆ.

  • ಎಬಿಡಿಯೊಂದಿಗೆ ಸ್ಪೆಷಲ್ ಚಾಟ್ – ಬ್ಯಾಟಿಂಗ್ ಲಯಕ್ಕೆ ಮರಳಿದ ಕೊಹ್ಲಿ

    ಎಬಿಡಿಯೊಂದಿಗೆ ಸ್ಪೆಷಲ್ ಚಾಟ್ – ಬ್ಯಾಟಿಂಗ್ ಲಯಕ್ಕೆ ಮರಳಿದ ಕೊಹ್ಲಿ

    ಅಹಮದಾಬಾದ್: ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ಕೊಹ್ಲಿ ತನ್ನ ಬ್ಯಾಟಿಂಗ್ ಫಾರ್ಮ್‍ಗೆ ಮರಳಲು ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಅವರೊಂದಿಗೆ ಮಾಡಿದ ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಮತ್ತು ಮೊದಲ ಟಿ 20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಕಾರಣ ಅಭಿಮಾನಿಗಳಿಂದ ಭಾರಿ ಟೀಕೆಗೆ ಒಳಗಾಗಿದ್ದರು. ವಿರಾಟ್ ಬ್ಯಾಟಿಂಗ್ ಫಾರ್ಮ್ ಕೂಡ ಕೈ ಕೊಟ್ಟಿತ್ತು. ಆದರೆ ಎರಡನೇ ಟಿ20 ಯಲ್ಲಿ ವಿರಾಟ್ 73 ರನ್(49 ಎಸೆತ,5 ಬೌಂಡರಿ, 3 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಫಾರ್ಮ್‍ಗೆ ಮರಳಿದ್ದರು. ಆದರೆ ಪಂದ್ಯದ ಬಳಿಕ ಬ್ಯಾಟಿಂಗ್ ಲಯಕ್ಕೆ ಮರಳಲು ಎಬಿಡಿ ಜೊತೆ ಮಾಡಿದ ಆ ಒಂದು ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.

    ಪಂದ್ಯ ಮುಗಿದ ಬಳಿಕ ಎಬಿಡಿ ಜೊತೆ ಮಾಡಿದ ಸ್ಪೆಷಲ್ ಚಾಟ್ ಬಗ್ಗೆ ಮಾತನಾಡಿದ ಕೊಹ್ಲಿ ನಾನು ಪಂದ್ಯದ ಮೊದಲು ಎಬಿಡಿಗೆ ಸಂದೇಶ ಕಳುಹಿಸಿದ್ದೆ. ಅವರು ನನಗೆ ನೀನು ಬಾಲ್‍ನ್ನು ಸರಿಯಾಗಿ ಗಮನಿಸು ಎಂದಿದ್ದರು. ನಾನು ಅವರು ತಿಳಿಸಿದಂತೆ ಬಾಲ್‍ನ್ನು ಸರಿಯಾಗಿ ಗಮನಿಸಿ ಆಟವಾಡಿದೆ ಎಂದು ಸ್ನೇಹಿತನ ಜೊತೆಗಿನ ವಿಶೇಷ ಸಂದೇಶವನ್ನು ಕೊಹ್ಲಿ ಎಲ್ಲರೊಂದಿಗೆ ಹಂಚಿಕೊಂಡರು.

    ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಐಪಿಎಲ್ ನಲ್ಲಿ ಆರ್‌ಸಿಬಿ ತಂಡದ ಪರ ಇಬ್ಬರು ಆಡುತ್ತಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ವೇಳೆ ಕೊಹ್ಲಿ ಎಬಿಡಿ ಆರ್‌ಸಿಬಿಯ ಏಲಿಯನ್ ಆಟಗಾರನೆಂದು ವಿಶೇಷವಾಗಿ ಬಣ್ಣಿಸಿದ್ದರು.

    2ನೇ ಟಿ20 ಪಂದ್ಯದಲ್ಲಿ ರಾಹುಲ್ ಔಟ್ ಆದ ಬಳಿಕ ಕ್ರಿಸ್‍ಗೆ ಬಂದು ಉತ್ತಮವಾಗಿ ಆಡಿ ಕೊನೆಯವರೆಗೆ ಬ್ಯಾಟಿಂಗ್ ಮಾಡಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಇದರೊಂದಿಗೆ ಇದೇ ಪಂದ್ಯದಲ್ಲಿ ವಿರಾಟ್ ಟಿ20 ಕ್ರಿಕೆಟ್ ಪಂದ್ಯದಲ್ಲಿ 3 ಸಾವಿರ ರನ್ ಸಿಡಿಸಿದ ವಿಶ್ವದ ಮೊದಲ ಪುರುಷ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೂ ಕಾರಣರಾಗಿದ್ದರು.

  • ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 8 ವಿಕೆಟ್ ಅಂತರದಿಂದ ಗೆದ್ದು ಬೀಗಿದೆ.

    ಟೆಸ್ಟ್ ಪಂದ್ಯವನ್ನು 3-1 ಅಂತರದಿಂದ ಗೆದ್ದಿದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೋಟೆರಾ ಅಂಗಳದಲ್ಲಿ ಕಣಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಪವರ್ ಪ್ಲೇ ಮುಗಿಯುವ ಮೊದಲೇ ಕೆ.ಎಲ್ ರಾಹುಲ್, 1 ರನ್, ಕೊಹ್ಲಿ 0, ಧವನ್ 4 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ನಂತರ ಬಂದ ರಿಷಬ್ ಪಂತ್ ಸಿಡಿಯುವ ಸೂಚನೆ ನೀಡಿದರು ಕೂಡ ಅವರ ಆಟ 21ರನ್( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಕೊನೆಗೊಂಡಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆಕರ್ಷಕ 67 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು.

    125 ರನ್‍ಗಳ ಗುರಿ ಪಡೆದು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿ ಜೋಸನ್ ರಾಯ್ ಮತ್ತು ಜೋಸ್ ಬಟ್ಲರ್ ಸ್ಪೋಟಕ 72 ರನ್‍ಗಳ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಚಹಾಲ್, 28ರನ್( 24 ಎಸೆತ,2 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಬಟ್ಲರ್ ಅವರ ವಿಕೆಟ್ ಪಡೆದರು. ನಂತರ ಜೋಸನ್ ರಾಯ್ 49 ರನ್( 32 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ, ನಂತರ ಬಂದ ಡೇವಿಡ್ ಮಲಾನ್ 24 ರನ್( 20 ಎಸೆತ,2 ಬೌಂಡರಿ, 1 ಸಿಕ್ಸರ್) ಮತ್ತು ಜಾನಿ ಬೈರ್ಸ್ಟೋವ್ 26 ರನ್( 17 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಇಂಗ್ಲೆಂಡ್ 15.3 ಬೌಲರ್‌ಗಳಲ್ಲಿ ಇನ್ನು 27 ಎಸೆತ ಬಾಕಿ ಇರುವಂತೆ 130 ರನ್‍ಗಳಿಸಿ ಭಾರತ ವಿರುದ್ಧ ಭರ್ಜರಿ ಜಯ ಗಳಿಸಿತು.

  • ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್  ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಹೊಡೆದ ರಿವರ್ಸ್ ಸ್ಕೂಪ್ ಕಂಡು ಮಾಜಿ ಆಟಗಾರರು ಸಹಿತ ಕ್ರೀಡಾಭಿಮಾನಿಗಳು ದಂಗಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿದ್ದ ಭಾರತ ಅಹಮದಾಬಾದ್‍ನ ಮೋಟೆರಾ ಕ್ರೀಡಾಂಗಣದಲ್ಲಿ ಇದೇ ಹುರುಪಿನಲ್ಲಿ ಟಿ-20 ಪಂದ್ಯಕ್ಕೆ ಸಜ್ಜಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ಇಳಿಯುತ್ತಿದ್ದಂತೆ ಪವರ್ ಪ್ಲೇ ಮುಗಿಯುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. ಈ ವೇಳೆ ಬ್ಯಾಟಿಂಗ್ ಇಳಿದ ಪಂತ್, ಜೊಫ್ರಾ ಆರ್ಚರ್ ಎಸೆದ 3ನೇ ಓವರ್‍ ನ ನಾಲ್ಕನೇ ಎಸೆತವನ್ನು ಆಕರ್ಷಕ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್‌ಗಟ್ಟಿದರು. ಇದನ್ನು ಕಂಡು ಮಾಜಿ ಆಟಗಾರರಾದ ವಿ.ವಿ.ಎಸ್ ಲಕ್ಷಣ್, ಯುವರಾಜ್ ಸಿಂಗ್, ಇಂಗ್ಲೆಂಡ್‍ನ ಕೆವಿನ್ ಪೀರ್ಟಸನ್ ಸಹಿತ ಹಲವು ಕ್ರಿಕೆಟಿಗರು ದಂಗಾಗಿದ್ದಾರೆ.

    ಪಂತ್ ಈ ಮೊದಲು ನಡೆದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇದೇ ರೀತಿಯ ಸಿಕ್ಸ್ ಅನ್ನು ಇಂಗ್ಲೆಂಡ್‍ನ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಬಾರಿಸಿ ಮಿಂಚಿದ್ದರು.

    ಪಂತ್ 23 ಎಸೆತಗಳಲ್ಲಿ 21ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ಬೆನ್‍ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಭಾರತ ಅಂತಿಮವಾಗಿ 20 ಓವರ್‍ ಗಳಲ್ಲಿ 124 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್‍ಗೆ 125 ರನ್‍ಗಳ ಗುರಿ ನೀಡಿದೆ.

  • ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಮುಂಬೈ: ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಜಸ್ಪ್ರಿತ್ ಬುಮ್ರಾ ಅವರನ್ನು ಹಿಂದಿಕ್ಕುವ ಸನಿಹದಲ್ಲಿ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿದ್ದು, ಈ ಸಾಧನೆ ಮಾಡಲು ಅವರಿಗೆ ಎರಡು ವಿಕೆಟ್ ಬೇಕಿದೆ.

    ಭಾರತದ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‍ನಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಅವರು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಸ್ಪಿನ್ ಮಾಡಿದ ಚಹಲ್ ಅವರು ಬುಮ್ರಾ ಅವರನ್ನು ಹಿಂದಿಕ್ಕಲು ಕೇವಲ ಎರಡು ವಿಕೆಟ್‍ಗಳ ಅಂತರವನ್ನು ಹೊಂದಿದ್ದಾರೆ.

    ಭಾರತದ ಪರ ಒಟ್ಟು 50 ಟಿ-20 ಪಂದ್ಯಗಳನ್ನು ಆಡಿರುವ ಜಸ್ಪ್ರಿತ್ ಬುಮ್ರಾ 59 ವಿಕೆಟ್ ಪಡೆದು ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಬದಲಿ ಆಟಗಾರನಾಗಿ ಬಂದು ಮೂರು ವಿಕೆಟ್ ಪಡೆದು ಮಿಂಚಿದ ಚಹಲ್, 43 ಪಂದ್ಯಗಳನ್ನಾಡಿ 58 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೆರೆಡು ವಿಕೆಟ್ ಪಡೆದರೆ ಚಹಲ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ.

    ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಬುಮ್ರಾ ಮತ್ತು ಚಹಲ್ ಇದ್ದರೆ, 46 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿರುವ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ 43 ಪಂದ್ಯಗಳಿಗೆ 41 ವಿಕೆಟ್ ಪಡೆದಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, 43 ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಲೆಗ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರು ಐದನೇ ಸ್ಥಾನದಲ್ಲಿ ಇದ್ದಾರೆ.

    ಶುಕ್ರವಾರ ಕ್ಯಾನ್ಬೆರಾದಲ್ಲಿ ನಡೆದ ಮೊದಲನೇ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್ ವೇಳೆ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ತುತ್ತಾದ ಕಾರಣ ಆಡುವ 11ರ ಬಳಗಕ್ಕೆ ಬಂದ ಚಹಲ್, ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದ ಕೇವಲ 25 ರನ್ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  • ಯುವರಾಜ್ ಸಿಂಗ್ ವಿಶ್ವದಾಖಲೆ ಮೇಲೆ ಕಣ್ಣಿಟ್ಟ ಕೆಎಲ್ ರಾಹುಲ್

    ಯುವರಾಜ್ ಸಿಂಗ್ ವಿಶ್ವದಾಖಲೆ ಮೇಲೆ ಕಣ್ಣಿಟ್ಟ ಕೆಎಲ್ ರಾಹುಲ್

    ಮುಂಬೈ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ದಾಖಲೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದೆ. ಕೇವಲ 12 ಎಸೆತಗಳಲ್ಲಿ ಯುವಿ ಅರ್ಧ ಶತಕ ಗಳಿಸಿದ್ದರು. ಸದ್ಯ ಈ ದಾಖಲೆಯನ್ನು ನಾನು ಮುರಿಯುತ್ತೇನೆ ಎಂದು ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಕೆಎಲ್ ರಾಹುಲ್ ಚಾಟ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಯುವರಾಜ್ ಸಿಂಗ್ ಹೆಸರಿನಲ್ಲಿರುವ ವೇಗದ ಅರ್ಧ ಶತಕದ ದಾಖಲೆಯನ್ನು ಮುರಿಯುವ ಆಟಗಾರ ಯಾರು ಎಂಬ ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿರುವ ರಾಹುಲ್, ಈ ದಾಖಲೆ ನನ್ನದಾಗಿರಬೇಕು ಎಂದು ಭಾವಿಸುವುದಾಗಿ ಹೇಳಿದ್ದಾರೆ. ಅಂದಹಾಗೇ 2007 ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಈ ದಾಖಲೆಯನ್ನ ನಿರ್ಮಿಸಿದ್ದರು.

    ಕಳೆದ 13 ವರ್ಷಗಳಿಂದ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವಿ 16 ಎಸೆತಗಲ್ಲಿ 56 ರನ್ ಗಳಿಸಿದ್ದರು. ಇದರಲ್ಲಿ 7 ಸಿಕ್ಸರ್, 3 ಬೌಂಡರಿ ಸಿಡಿಸಿದ್ದರು. ಇದೇ ಇನ್ನಿಂಗ್ಸ್ ನಲ್ಲಿ ಯುವಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಆ ಬಳಿಕ ಹಲವು ಆಟಗಾರರು ದಾಖಲೆಯ ಸನಿಹಕ್ಕೆ ಬಂದರೂ ಸಹ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದರು.

    ಇತ್ತ ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‍ಮನ್ ಆಗಿರುವ ರಾಹುಲ್ ಕಳೆದ ವರ್ಷ ಉತ್ತಮ ಫಾರ್ಮ್ ನಲ್ಲಿದ್ದರು. ಐಪಿಎಲ್‍ನಲ್ಲಿ ಪಂಜಾಬ್ ತಂಡದ ಪರ ಬ್ಯಾಟ್ ಬೀಸಿದ್ದ ರಾಹುಲ್, 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಉಳಿದಂತೆ ಈ ವರ್ಷ ರಾಹುಲ್ ಪಂಜಾಬ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

  • ಇಬ್ಬರು ಲೆಗ್‍ಸ್ಪಿನ್ನರ್ಸ್ ಟೀಂ ಇಂಡಿಯಾದಲ್ಲಿ ಅಗತ್ಯವಿಲ್ಲ: ಸೌರವ್ ಗಂಗೂಲಿ

    ಇಬ್ಬರು ಲೆಗ್‍ಸ್ಪಿನ್ನರ್ಸ್ ಟೀಂ ಇಂಡಿಯಾದಲ್ಲಿ ಅಗತ್ಯವಿಲ್ಲ: ಸೌರವ್ ಗಂಗೂಲಿ

    ಕೋಲ್ಕತ್ತಾ: ಸಿಮೀತ ಮಾದರಿಯ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠವಾಗಿರಬೇಕಾದರೆ ತಂಡಕ್ಕೆ ಸ್ಪಿನ್ನರ್ ಗಳಾದ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರನ್ನು ಆಯ್ಕೆ ಮಾಡಬೇಕಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

    ಸದ್ಯ ಯುವ ಆಟಗಾರರಿಗೆ ಪರೀಕ್ಷೆ ನಡೆಸುವ ಉದ್ದೇಶದಿಂದ ಚಹಲ್‍ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ತಂಡದ ಬ್ಯಾಟಿಂಗ್ ಲೈನ್ ಬಲಿಷ್ಠ ಪಡಿಸುವ ಉದ್ದೇಶದಿಂದ ಪ್ರಯೋಗಕ್ಕೆ ಮುಂದಾಗಿದೆ. ಆದರೆ ಸಿಮೀತ ಮಾದರಿ ಕ್ರಿಕೆಟಿಗೆ ಚಹಲ್ ಅಗತ್ಯವಿದ್ದು, ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯುತ್ತಿರುವುದರಿಂದ ಕುಲ್ದೀಪ್ ಯಾದವ್ ಹಾಗೂ ಚಹಲ್ ತಂಡದಲ್ಲಿರುವುದು ಅಗತ್ಯವಿದೆ ಎಂದಿದ್ದಾರೆ.

    ಟಿ20 ಟೂರ್ನಿಯಲ್ಲಿ ತಂಡದ ನಾಯಕರಾಗಿ ಕೊಹ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಆದರೆ ಟೀಂ ಇಂಡಿಯಾಗೆ ಲೆಗ್ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ ಇಬ್ಬರು ಅಗತ್ಯವಿಲ್ಲ. ಇಬ್ಬರಲ್ಲಿ ಒಬ್ಬರಿದ್ದರೆ ಸಾಕು. ಇಬ್ಬರನ್ನು ಒಂದೇ ಪಂದ್ಯದಲ್ಲಿ ಕಣಕ್ಕಿಸುವ ಅಗತ್ಯತೆಯ ಅಂಶವನ್ನು ಆಯ್ಕೆ ಸಮಿತಿ ಗಮನಿಸಬೇಕಿದೆ ಎಂದು ಸೌರವ್ ಅಭಿಪ್ರಾಯ ಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.