Tag: t20 cricket

  • ಅಣ್ಣನ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್‌ – ಸಚಿನ್‌ ಬಳಗಕ್ಕೆ 4 ವಿಕೆಟ್‌ಗಳ ಜಯ

    ಅಣ್ಣನ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್‌ – ಸಚಿನ್‌ ಬಳಗಕ್ಕೆ 4 ವಿಕೆಟ್‌ಗಳ ಜಯ

    – ಕೊನೇ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿದ ಇರ್ಫಾನ್‌ ಪಠಾಣ್‌
    – ಯುವರಾಜ್‌ ಸಿಂಗ್‌ ಬಳಗಕ್ಕೆ ವಿರೋಚಿತ ಸೋಲು

    ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್ (One World- One Family Cup) ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ನೇತೃತ್ವದ ಒನ್‌ ವರ್ಲ್ಡ್ ತಂಡವು 4 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಣ್ಣ ಯುಸೂಫ್‌ ಪಠಾಣ್‌ (Yusuf Pathan) ಬೌಲಿಂಗ್‌ಗೆ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಇರ್ಫಾನ್‌ ಪಠಾಣ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

    ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ನಡೆದ  ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಒನ್‌ ವರ್ಲ್ಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಒನ್‌ ಫ್ಯಾಮಿಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಈ ಮೂಲಕ ಮೊದಲು ಬ್ಯಾಟಿಂಗ್‌ ಮಾಡಿದ ನಾಯಕ ಯುವರಾಜ್‌ ಸಿಂಗ್‌ (Yuvraj Singh) ನೇತೃತ್ವದ ಒನ್‌ ಫ್ಯಾಮಿಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು. 181 ರನ್‌ಗಳ ಗುರಿ ಬೆನ್ನತ್ತಿದ್ದ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಒನ್‌ ವರ್ಲ್ಡ್‌ ತಂಡ 19.5 ಓವರ್‌ಗಳಲ್ಲೇ 184 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

    ಚೇಸಿಂಗ್‌ ಆರಂಭಿಸಿದ ಒನ್‌ ವರ್ಲ್ಡ್‌ ತಂಡದ ಪರ ನಮನ್‌ ಓಜಾ ಹಾಗೂ ಸಚಿನ್‌ ತೆಂಡೂಲ್ಕರ್‌ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಸಚಿನ್‌ ಹಾಗೂ ಅಲ್ವಿರೋ ಪೀಟರ್ಸನ್ ಜೋಡಿ 22 ಎಸೆತಗಳಲ್ಲಿ 41 ರನ್‌ ಕಲೆಹಾಕಿತು. ನಂತರ 3ನೇ ವಿಕೆಟ್‌ಗೆ ಪೀಟರ್ಸನ್‌ ಹಾಗೂ ಉಪುಲ್ ತರಂಗ ಜೋಡಿ 44 ಎಸೆತಗಳಲ್ಲಿ 59 ರನ್‌ ಪೇರಿಸಿತು. ಇದರಿಂದ ತಂಡದ ಗೆಲುವಿನ ಹಾದಿ ಸುಗಮವಾಯಿತು.

    148 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಲ್ವಿರೋ ಪೀಟರ್ಸನ್ 50 ಎಸೆತಗಳಲ್ಲಿ 74 ರನ್‌ (5 ಬೌಂಡರಿ, 3 ಸಿಕ್ಸರ್‌) ಬಾರಿಸಿದರು. ಇನ್ನುಳಿದಂತೆ ನಮನ್ ಓಜಾ 25 ರನ್‌, ಸಚಿನ್‌ 27 ರನ್‌, ಉಪುಲ್ ತರಂಗ 29 ರನ್‌, ಸುಬ್ರಮಣ್ಯಂ ಬದರಿನಾಥ್ 4 ರನ್‌, ಹರ್ಭಜನ್ ಸಿಂಗ್ 4 ರನ್‌ ಗಳಿಸಿದ್ರೆ ಇರ್ಫಾನ್ ಪಠಾಣ್ (Irfan Pathan) 12 ರನ್‌ ಗಳಿಸಿ ಅಜೇಯರಾಗುಳಿದರು.

    ಚಮಿಂದಾ ವಾಸ್ ಮಾರಕ ದಾಳಿ:
    ಒನ್‌ ವರ್ಲ್ಡ್‌ ತಂಡದ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ಶ್ರೀಲಂಕಾ ತಂಡದ ಮಾಜಿ ಎಡಗೈ ವೇಗಿ ಚಮಿಂದಾ ವಾಸ್ 3 ವಿಕೆಟ್‌ ಪಡೆದರು. 4 ಓವರ್‌ಗಳಲ್ಲಿ 44 ರನ್‌ ಚಚ್ಚಿಸಿಕೊಂಡ ಹೊರತಾಗಿಯೂ 3 ವಿಕೆಟ್‌ ಪಡೆದುಕೊಂಡರು. ವಿಶೇಷವೆಂದರೆ ದಶಕಗಳ ಬಳಿಕ ಬೌಲಿಂಗ್‌ನಲ್ಲಿ ಎದುರಾದ ಮಿಂದಾ ವಾಸ್ದು ಬೌಲಿಂಗ್‌ಗೆ ಸಚಿನ್‌ ತೆಂಡೂಲ್ಕರ್‌ ಸತತ ಎರಡು ಮನಮೋಹಕ ಬೌಂಡರಿ ಸಿಡಿಸಿದರು. ಇನ್ನುಳಿದಂತೆ ಮುತ್ತಯ್ಯ ಮುರಳೀಧರನ್‌, ಯುವರಾಜ್‌ ಸಿಂಗ್‌, ಜೇಸನ್ ಕ್ರೆಜ್ಜಾ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    181 ಟಾರ್ಗೆಟ್‌ ನೀಡಿದ್ದ ಒನ್‌ ಫ್ಯಾಮಿಲಿ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಯುವರಾಜ್‌ ಸಿಂಗ್‌ ನೇತೃತ್ವದ ಒನ್‌ ಫ್ಯಾಮಿಲಿ ತಂಡ ಎದುರಾಳಿ ತಂಡಕ್ಕೆ 181 ರನ್‌ಗಳ ಗುರಿ ನೀಡಿತ್ತು. ಡ್ಯಾರೆನ್ ಮ್ಯಾಡಿ 51 ರನ್‌ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್‌ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್‌, ಪಾರ್ಥಿವ್ ಪಟೇಲ್ 19 ರನ್‌ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್‌ (23, 4 ಸಿಕ್ಸರ್‌, 1 ಬೌಂಡರಿ), ಯುವರಾಜ್ ಸಿಂಗ್ 23 ರನ್‌ (10 ಎಸೆತ, 2 ಸಿಕ್ಸರ್‌, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್‌ ಹಾಗೂ ಅಲೋಕ್ ಕಪಾಲಿ 1 ರನ್‌ ಗಳಿಸಿದ್ರೆ, ಹೆಚ್ಚುವರಿ 15 ರನ್‌ ತಂಡಕ್ಕೆ ಸೇರ್ಪಡೆಯಾಗಿತ್ತು.

  • 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ರಿಂಕು ಸಿಂಗ್‌ 190 ರನ್‌ಗಳ ಜೊತೆಯಾಟ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    4.3 ಓವರ್‌ಗಳಲ್ಲಿ 22 ರನ್‌ಗಳಿಸಿದ್ದ ಭಾರತ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 61 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಭಾರತ 150 ರನ್‌ ಗಳಿಸುವುದೂ ಕಷ್ಟವಾಗಿತ್ತು. ಬಳಿಕ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ರೋಹಿತ್‌-ರಿಂಕು (Rohit – Rinku) 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಜೊತೆಯಾಟವಾಡಿದ (Highest Partnership) ಹಾಗೂ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    T20I ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್‌ ಗಳಿಸಿದವರು:
    * ಶುಭಮನ್ ಗಿಲ್ 126 ರನ್‌ – VS ನ್ಯೂಜಿಲೆಂಡ್‌
    * ಋತುರಾಜ್‌ ಗಾಯಕ್ವಾಡ್‌ 123 ರನ್‌ – VS ಆಸ್ಟ್ರೇಲಿಯಾ
    * ವಿರಾಟ್‌ ಕೊಹ್ಲಿ 122 ರನ್‌ – VS ಅಫ್ಘಾನಿಸ್ತಾನ
    * ರೋಹಿತ್‌ ಶರ್ಮಾ 121 ರನ್‌ – VS ಅಫ್ಘಾನಿಸ್ತಾನ

    T20I ಕ್ರಿಕೆಟ್ ನಲ್ಲಿ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ
    * 190* ರನ್- ರೋಹಿತ್ ಶರ್ಮಾ- ರಿಂಕು ಸಿಂಗ್- ಭಾರತ VS ಅಫಘಾನಿಸ್ತಾನ-2024
    * 145 ರನ್- ಕುಶಾಲ್ ಮಲ್ಲ- ಡಿ.ಎಸ್ ಏರ್ರೇ- ನೇಪಾಳ VS ಹಾಂಗ್ ಕಾಂಗ್-2023
    * 121* ರನ್ – ಮಾರ್ಕ್ ಚಾಪ್ಮನ್- ಜೇಮ್ಸ್ ನಿಶಮ್- ನ್ಯೂಜಿಲೆಂಡ್ VS ಪಾಕಿಸ್ತಾನ-2023
    * 119* ರನ್- ಶೋಯೆಬ್ ಮಲ್ಲಿಕ್- ಮಿಸ್ಬಾ ಉಲ್ ಹಕ್- ಪಾಕಿಸ್ತಾನ VS ಆಸ್ಟ್ರೇಲಿಯಾ-2007
    * 119* ರನ್-ಕರ್ಟಿಸ್ ಕ್ಯಾಂಫರ್ – ಜಾರ್ಜ್ ಡಾಕ್ರೆಲ್- ಐರ್ಲೆಂಡ್ VS ಸ್ಕಾಟ್ಲೆಂಡ್-2022

    ಟಿ20 ಕ್ರಿಕೆಟ್ ನಲ್ಲಿ ಯಾವುದೇ ವಿಕೆಟ್ ಗೆ ಗರಿಷ್ಠ ಜೊತೆಯಾಟ
    * 190 ರನ್- ರೋಹಿತ್ ಶರ್ಮಾ – ರಿಂಕು ಸಿಂಗ್ – ಅಫಘಾನಿಸ್ತಾನ ವಿರುದ್ಧ- 2024
    * 176 ರನ್ – ಸಂಜು ಸ್ಯಾಮ್ಸನ್ – ದೀಪಕ್ ಹೂಡ – ಐರ್ಲೆಂಡ್ ವಿರುದ್ಧ- 2022
    * 165 ರನ್ – ರೋಹಿತ್ ಶರ್ಮಾ – ಕೆಎಲ್ ರಾಹುಲ್ – ಶ್ರೀಲಂಕಾ ವಿರುದ್ಧ- 2017
    * 165 – ಯಶಸ್ವಿ ಜೈಸ್ವಾಲ್ – ಶುಭ್ಮನ್ ಗಿಲ್ – ವೆಸ್ಟ್ ಇಂಡೀಸ್ ವಿರುದ್ಧ- 2023

    ಒಂದೇ ಓವರ್‌ನಲ್ಲಿ 36 ರನ್‌ ಚಚ್ಚಿದ ರಿಂಕು-ರೋಹಿತ್‌:
    ಪಂದ್ಯದ 19ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 176 ಕಲೆ ಹಾಕಿತ್ತು. ಆದ್ರೆ 20ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದರು. ಕರೀಮ್ ಜನ್ನತ್ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರೋಹಿತ್‌ ಒಂದು ಬೌಂಡರಿ, ನೋಬಾಲ್‌ ಸೇರಿ ಎರಡು ಸಿಕ್ಸರ್, ಒಂದು ರನ್‌ ಸಿಡಿಸಿದರೇ, ಇನ್ನಿಂಗ್ಸ್‌ನ ಕೊನೆಯ 3 ಎಸೆತಗಳಲ್ಲಿ ರಿಂಕು ಸಿಂಗ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 36 ರನ್ ಕಲೆಹಾಕಿದರು. ಇದರೊಂದಿಗೆ ತಂಡದ ಮೊತ್ತವನ್ನು 212 ರನ್‌ಗಳಿಗೆ ಏರಿಸಿದರು. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ 

  • ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    ಚಿಕ್ಕಬಳ್ಳಾಪುರ: ʻಒಂದು ಜಗತ್ತು-ಒಂದು ಕುಟುಂಬʼ (One World- One Family) ಘೋಷ ವಾಕ್ಯದಡಿ ಶ್ರೀ ಸದ್ಗುರು ಮಧುಸೂದನಸಾಯಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಳಿ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಕಾಳಗ ನಡೆಯುತ್ತಿದೆ.

    ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ಒಂದು ಜಗತ್ತು ಹಾಗೂ ಒಂದು ಕುಟುಂಬ ಎಂಬ (ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್) ಟಿ20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಸಾಯಿಕೃಷ್ಣನ್ ಕ್ರೀಡಾಂಗಣವನ್ನು ಸದ್ಗುರು ಮಧುಸೂದನಸಾಯಿ ಜೊತೆ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ಯುವರಾಜ್ ಸಿಂಗ್ (Yuvraj Singh) ಲೋಕಾರ್ಪಣೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಕ್ರಿಕೆಟ್‌ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದಡಿ 8 ದೇಶಗಳ 24 ಮಂದಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ

    ಟಾಸ್ ಗೆದ್ದ ಒನ್ ವರ್ಲ್ಡ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯುವರಾಜ್ ಸಿಂಗ್ ನಾಯಕತ್ವದ ಒನ್‌ ಫ್ಯಾಮಿಲಿ ತಂಡ ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಯುವಿ ನಾಯಕತ್ವದ ಒನ್ ಫ್ಯಾಮಿಲಿ ತಂಡ 20 ಒವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನ ಗಳಿಸಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್‌ ವರ್ಲ್ಡ್ ತಂಡಕ್ಕೆ 181 ರನ್ ಗಳ ಗುರಿ ನೀಡಲಾಗಿದೆ. ಅಂದಹಾಗೆ ವಸುಧೈವ ಕುಟುಂಬಕಂ ಅನ್ನೋ ಮಾತಿಗೆ ಸಾಕ್ಷಿಭೂತವೆಂಬಂತೆ ಭಾರತದ ಸನಾತನ ಸಂಸ್ಕೃತಿಯನ್ನ ಸಾರುವ ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರುವ ಸಲುವಾಗಿ ಈ ಒಂದು ಟೂರ್ನಿಯನ್ನ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂಪರ್ ಓವರ್ ಥ್ರಿಲ್ಲರ್ – ಟೀಂ ಇಂಡಿಯಾಗೆ ರೋಚಕ ಗೆಲುವು

    ಒನ್ ಫ್ಯಾಮಿಲಿ ತಂಡದ ಸ್ಕೋರ್‌ ಕಾರ್ಡ್‌: ಡ್ಯಾರೆನ್ ಮ್ಯಾಡಿ 51 ರನ್‌ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್‌ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್‌, ಪಾರ್ಥಿವ್ ಪಟೇಲ್ 19 ರನ್‌ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್‌ (23, 4 ಸಿಕ್ಸರ್‌, 1 ಬೌಂಡರಿ), ಯುವರಾಜ್ ಸಿಂಗ್ 23 ರನ್‌ (10 ಎಸೆತ, 2 ಸಿಕ್ಸರ್‌, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್‌ ಹಾಗೂ ಅಲೋಕ್ ಕಪಾಲಿ 1 ರನ್‌ ಗಳಿಸಿದ್ರೆ, ಹೆಚ್ಚುವರಿ 15 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಇದನ್ನೂ ಓದಿ: ರೋಹಿತ್ ಶತಕ, ರಿಂಕು ಹಾಫ್ ಸೆಂಚುರಿ, ವಿರಾಟ್ ಕೊಹ್ಲಿ 0- ಆಫ್ಘನ್‍ಗೆ 213 ರನ್ ಟಾರ್ಗೆಟ್

  • ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

    ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್‌ ಕೊಟ್ಟ ಶಿವಂ ದುಬೆ

    ಇಂದೋರ್‌: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್‌ರೌಂಡರ್‌ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್‌ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಅರ್ಪಿಸಿದ್ದಾರೆ.

    ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿವಂ ದುಬೆ, ತಮ್ಮ ವೃತ್ತಿಜೀವನದಲ್ಲಿ ಮೇಲೇಳುವಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಕೊಡುಗೆ ಅಪಾರ. ನಾಯಕ ಎಂ.ಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸೂಪರ್ ಕಿಂಗ್ಸ್‌ ತಂಡದ ಹಿರಿಯ ಆಟಗಾರರು ನನ್ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್‌ ಪಾದ ಮುಟ್ಟಿ‌, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ

    ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್‌ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್‌ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್‌ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ ನನ್ನ ಮೇಲೆ ನಂಬಿಕೆ ಇಟ್ಟರು. ಮೈಕ್‌ ಹಸ್ಸಿ ಮತ್ತು ಫ್ಲೆಮಿಂಗ್ ಅವರಂಥ ಹಿರಿಯರು ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಎಂದು ಭಾವುಕರಾಗಿದ್ದಾರೆ.

    ನಾನು ಸಿಎಸ್‌ಕೆ ತಂಡದಲ್ಲಿದ್ದಾಗ, ಮಹಿ ಅಣ್ಣ ನನಗೆ ಚೆನ್ನಾಗಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿದೆ ಎಂದು ಹೇಳಿದ್ದರು. ಆದರೆ ಸ್ಮಾರ್ಟ್‌ ಆಗಿ ಆಡಲು ಅವರು ಹೇಳಿದರು. ಹೀಗಾಗಿ ನಾನು ನನ್ನ ಮಿತಿಗಳನ್ನು ನೋಡಿಕೊಂಡು ಇನ್ನೂ ಉತ್ತಮವಾಗಿ ಆಡಲು ಏನು ಮಾಡಬಹುದು ಎಂಬುದರ ಮೇಲೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿ ಸುರಿಮಳೆ – ಯಶಸ್ವಿ, ದುಬೆ ಸ್ಫೋಟಕ ಫಿಫ್ಟಿ; ಅಫ್ಘಾನ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ:
    ಯುವ ಆಲ್‌ರೌಂಡರ್‌ ಶಿವಂ ದುಬೆ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಹಿರಿಯ ಆಟಗಾರರ ಗಮನ ಸೆಳೆದಿದ್ದಾರೆ. ಅಫ್ಘಾನ್‌ ವಿರುದ್ಧ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿಗಳೊಂದಿಗೆ 60 ರನ್‌ ಚಚ್ಚಿದ ದುಬೆ, 2ನೇ ಪಂದ್ಯದಲ್ಲಿ 32 ಎಸೆತಗಳಲ್ಲಿ ಸ್ಫೋಟಕ 63 ರನ್‌ (4 ಸಿಕ್ಸರ್‌, 5 ಬೌಂಡರಿ) ಬಾರಿಸಿ ಮಿಂಚಿದ್ದಾರೆ. ಅಲ್ಲದೇ ಎರಡೂ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದ್ದಾರೆ. ಜನವರಿ 17ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3ನೇ ಪಂದ್ಯ ನಡೆಯಲಿದ್ದು, ಅಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

    ಭಾರತಕ್ಕೆ ಸರಣಿ ಜಯ: ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ತನ್ನದಾಗಿಸಿಕೊಂಡಿರುವ ಭಾರತ, ತವರಿನಲ್ಲೇ ವೈಟ್‌ವಾಶ್‌ ಮಾಡುವ ಗುರಿ ಹೊಂದಿದೆ. ಭಾನುವಾರ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿತು.

    ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡವು ಗುಲ್ಬದೀನ್ ನಯೀಬ್ ಅವರ ಅರ್ಧಶತಕದ ನೆರವಿನಿಂದ 20 ಓವರ್​​​ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ್ದ ಭಾರತ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ ಸ್ಫೋಟಕ ಅರ್ಧಶತಕಗಳ ನೆರವಿನಿಂದ 15.4 ಓವರ್‌ಗಳಲ್ಲೇ 173 ರನ್‌ ಗಳಿಸಿ ಗೆಲುವು ಸಾಧಿಸಿತು.

  • ಮೈಲುಗಲ್ಲು ಸಾಧಿಸುವ ಸನಿಹದಲ್ಲಿ ರೋಹಿತ್‌ – ನೆಟ್ಸ್‌ನಲ್ಲಿ ಬೆವರಿಳಿಸಿದ ಹಿಟ್‌ಮ್ಯಾನ್‌

    ಮೈಲುಗಲ್ಲು ಸಾಧಿಸುವ ಸನಿಹದಲ್ಲಿ ರೋಹಿತ್‌ – ನೆಟ್ಸ್‌ನಲ್ಲಿ ಬೆವರಿಳಿಸಿದ ಹಿಟ್‌ಮ್ಯಾನ್‌

    ಇಂದೋರ್‌: ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆಯುತ್ತಿರುವ ಮೂರು ಟಿ20 ಸರಣಿಯ 2ನೇ ಭಾನುವಾರ (ಜ.14) ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7 ಗಂಟೆ ವೇಳೆಗೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನಾಡುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಮಹತ್ವದ ಮೈಲುಗಲ್ಲು ಸಾಧಿಸಲಿದ್ದಾರೆ. ಅದಕ್ಕಾಗಿ ಪಂದ್ಯ ಆರಂಭಕ್ಕೂ ಮುನ್ನವೇ ನೆಟ್ಸ್‌ನಲ್ಲಿ ಭರ್ಜರಿ ತಾಲೀಮು ನಡೆಸಿದ್ದಾರೆ.

    2ನೇ ಟಿ20 ಪಂದ್ಯವನ್ನಾಡುವ ಮೂಲಕ 150ನೇ ಟಿ20 ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಅತಿಹೆಚ್ಚು ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ, ಟೀಂ ಇಂಡಿಯಾದ (Team India) ಮೊದಲ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ – ಯುಪಿ ಮೂಲದ ಹೊಸ ಆಟಗಾರನಿಗೆ ಚಾನ್ಸ್

    ಅಫ್ಘಾನಿಸ್ತಾನದ ವಿರುದ್ಧ ಜ.11 ರಂದು ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ರನೌಟ್‌ ಆದರು. ಈ ಪಂದ್ಯದಲ್ಲಿ ಶಿವಂ ದುಬೆ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಭಾರತಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ಸೂಪರ್‌ ಸಂಡೇ 2ನೇ ಪಂದ್ಯ ನಡೆಯಲಿದ್ದು, ಸರಣಿ ಗೆಲ್ಲುವ ತವಕದಲ್ಲಿ ಭಾರತ ತಂಡ ಕಾಯುತ್ತಿದೆ.

    2007ರ ಸೆಪ್ಟೆಂಬರ್ 17 ರಂದು ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹಿಟ್‌ಮ್ಯಾನ್, ಇದುವರೆಗೂ ಆಡಿರುವ 149 ಪಂದ್ಯಗಳಿಂದ 4 ಶತಕ ಹಾಗೂ 29 ಅರ್ಧಶತಕದೊಂದಿಗೆ 3,853 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಮ್ಯಾರಥಾನ್ ಚಾಂಪಿಯನ್‌ಶಿಪ್‌ – ಭಾರತ ಪ್ರತಿನಿಧಿಸಲಿದ್ದಾರೆ ಕರ್ನಾಟಕದ ಬೆಳ್ಳಿಯಪ್ಪ

    T20I ಟಾಪ್‌ ಸ್ಕೋರರ್‌ ಯಾರು?
    ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಖ್ಯಾತಿ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 115 ಪಂದ್ಯಗಳಲ್ಲಿ 1 ಶತಕ, 37 ಅರ್ಧ ಶತಕಗಳೊಂದಿಗೆ 4,008 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್‌ ಗಳಿಸಿರುವ ರೋಹಿತ್‌ ಶರ್ಮಾ (4 ಶತಕ, 29 ಅರ್ಧಶತಕ) 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕಿವೀಸ್‌ನ ಮಾರ್ಟಿನ್‌ ಗಪ್ಟಿಲ್‌ 122 ಪಂದ್ಯಗಳಲ್ಲಿ 3,531 ರನ್‌, ಪಾಕಿಸ್ತಾನದ ಬಾಬರ್‌ ಆಜಂ 104 ಪಂದ್ಯಗಳಲ್ಲಿ 3,485 ರನ್‌ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಖೇಲೋ ಇಂಡಿಯಾಗೆ ಆಯ್ಕೆ – ಕ್ರೀಡಾಧಿಕಾರಿ, ವಿದ್ಯಾರ್ಥಿಗಳನ್ನು ಮೆರವಣಿಯೊಂದಿಗೆ ಬರಮಾಡಿಕೊಂಡ ಬೆಳ್ಳಾರೆ ಜನತೆ

    ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯವಾಡಿದ ಟಾಪ್‌-5 ಪ್ಲೇಯರ್ಸ್‌:
    * 149 ಪಂದ್ಯ- ರೋಹಿತ್ ಶರ್ಮಾ- ಭಾರತ-3,853 ರನ್
    * 134 ಪಂದ್ಯ- ಪಾಲ್ ಸ್ಟ್ರರ್ಲಿಂಗ್- ಐರ್ಲೆಂಡ್- 3,438 ರನ್
    * 128 ಪಂದ್ಯ- ಜಾರ್ಜ್ ಡೊಕ್ರೆಲ್- ಐರ್ಲೆಂಡ್- 969 ರನ್
    * 124 ಪಂದ್ಯ- ಶೋಯೆಬ್ ಮಲಿಕ್- ಪಾಕಿಸ್ತಾನ- 2,435 ರನ್
    * 122 ಪಂದ್ಯ- ಮಾರ್ಟಿನ್ ಗಪ್ಟಿಲ್- ನ್ಯೂಜಿಲೆಂಡ್- 3,531 ರನ್

  • ಅಂಧ ಮಹಿಳೆಯರ ಕಣ್ಣಲ್ಲಿ ಗೆಲುವಿನ ಹೊಳಪು – ನ್ಯಾಷನಲ್‌ T20 ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ಚಾಂಪಿಯನ್

    ಅಂಧ ಮಹಿಳೆಯರ ಕಣ್ಣಲ್ಲಿ ಗೆಲುವಿನ ಹೊಳಪು – ನ್ಯಾಷನಲ್‌ T20 ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ಚಾಂಪಿಯನ್

    ಹುಬ್ಬಳ್ಳಿ: ಕ್ರಿಕೆಟ್‌ ಅಸೋಸಿಯೇಷನ್ ಫಾರ್ ಬ್ಲೈಂಡ್‌ ಇನ್ ಇಂಡಿಯಾ (CABI) ಆಯೋಜಿಸಿದ್ದ ಅಂಧ ಮಹಿಳೆಯರ ರಾಷ್ಟ್ರೀಯ T20 ಕ್ರಿಕೆಟ್ ಟೂರ್ನಿಯಲ್ಲಿ (National T20 Cricket Tourney) ಒಡಿಶಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

    ಹುಬ್ಬಳ್ಳಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಒಡಿಶಾ (Odisha), ಆತಿಥೇಯ ಕರ್ನಾಟಕ ತಂಡದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಚಾಂಪಿಯನ್ ತಂಡ 1.04 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡ 80 ಸಾವಿರ ರೂ. ನಗದು ಬಹುಮಾನ ಪಡೆಯಿತು. ಇದನ್ನೂ ಓದಿ: ಯುವತಿ ಮೇಲೆ ಗ್ಯಾಂಗ್ ರೇಪ್ ಆಗಿದೆ – ಹಾವೇರಿ ನೈತಿಕ ಪೊಲೀಸ್ ಗಿರಿ ತನಿಖೆಗೆ ವಿಶೇಷ ತಂಡ ರಚಿಸಿ: ಬೊಮ್ಮಾಯಿ ಆಗ್ರಹ

    ಮೊದಲು ಬ್ಯಾಟ್ ಮಾಡಿದ ಕರ್ನಾಟಕ 18.3 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್‌ ಆಯಿತು. ರೇಣುಕಾ ರಜಪೂತ 17, ಟಿ.ಸಿ ದೀಪಿಕಾ 16, ದೀವಕ್ಕಾ 12, ಯು. ವರ್ಷಾ 10 ರನ್ ಗಳಿಸಿದರು. ಒಡಿಶಾ ಪರ ಜಮುನಾ ರಾಣಿ ಟುಡು 19 ರನ್‌ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಈ ರನ್‌ ಗುರಿ ಬೆನ್ನತ್ತಿದ್ದ ಒಡಿಶಾ 13.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 94 ರನ್ ಗಳಿಸಿ ಜಯ ಸಾಧಿಸಿತು. ಒಡಿಶಾ ಪರ ಬಸಂತಿ ಹಂಸಾ ಅಜೇಯ 34, ಜಮುನಾ ರಾಣಿ 24 ಹಾಗೂ ಪದ್ಮನಿ ಟುಡು ಅಜೇಯ 14 ರನ್ ಬಾರಿಸಿದರು. ಇದನ್ನೂ ಓದಿ: ನಿರುದ್ಯೋಗ ಸಮಸ್ಯೆ ಬಗೆಹರಿಸ್ಬೇಕು, ಯುವಕ-ಯುವತಿಯರಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು: ಸಿಎಂ

    ಒಡಿಶಾ ತಂಡದ ಜಿಲಿ ಬಿರುವಾ ಫೈನಲ್ ಪಂದ್ಯದ ಆಟಗಾರ್ತಿ, ಬಿ-1 ವಿಭಾಗದಲ್ಲಿ ರಾಜಸ್ಥಾನದ ಸಿಮು ದಾಸ್, ಬಿ-2 ವಿಭಾಗದಲ್ಲಿ ದೆಹಲಿಯ ಮೆಂಕಾ ಕುಮಾರಿ ಹಾಗೂ ಬಿ-3 ವಿಭಾಗದಲ್ಲಿ ಜಿಲಿ ಬಿರುವಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು. ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್‍ಗಿರಿ ಪ್ರಕರಣದಲ್ಲಿ ಯಾರ ರಕ್ಷಣೆಯನ್ನೂ ಸರ್ಕಾರ ಮಾಡಲ್ಲ: ಪರಮೇಶ್ವರ್

  • ಮೈಲುಗಲ್ಲು ಸಾಧಿಸುವತ್ತ ಹಿಟ್‌ಮ್ಯಾನ್ – ಕೊಹ್ಲಿಯನ್ನ ಹಿಂದಿಕ್ಕಿ ನಂ.1 ಪಟ್ಟಕ್ಕೇರುತ್ತಾರಾ ರೋಹಿತ್‌?

    ಮೈಲುಗಲ್ಲು ಸಾಧಿಸುವತ್ತ ಹಿಟ್‌ಮ್ಯಾನ್ – ಕೊಹ್ಲಿಯನ್ನ ಹಿಂದಿಕ್ಕಿ ನಂ.1 ಪಟ್ಟಕ್ಕೇರುತ್ತಾರಾ ರೋಹಿತ್‌?

    – ಜ.11ರಿಂದ ಟಿ20 ಅಫ್ಘಾನ್‌ ವಿರುದ್ಧ ಟಿ20 ಸರಣಿ
    – ಟೀಂ ಇಂಡಿಯಾಕ್ಕೆ ರೋಹಿತ್ ಸಾರಥಿ, ಕೊಹ್ಲಿ ಕಂಬ್ಯಾಕ್

    ಮುಂಬೈ: ಅಫ್ಘಾನಿಸ್ತಾನ (Afghanistan) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಜನವರಿ 11 ರಿಂದ ಪ್ರಾರಂಭಗೊಳ್ಳಲಿದ್ದು, ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಮಹತ್ವದ ಮೈಲುಗಲ್ಲು ಸ್ಥಾಪಿಸುಲು ಸಜ್ಜಾಗಿದ್ದಾರೆ.

    ಹೌದು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಆಗಿರುವ ರೋಹಿತ್‌ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) 4,000 ರನ್‌ ಪೂರೈಸುವ ಸನಿಹದಲ್ಲಿದ್ದಾರೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಶರ್ಮಾ 147 ರನ್‌ ಪೂರೈಸಿದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,000 ರನ್‌ ಪೂರೈಸಿದ ವಿಶ್ವದ ಹಾಗೂ ಭಾರತದ 2ನೇ ಬ್ಯಾಟರ್‌ ಎನಿಸಿಕೊಳ್ಳಲಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,000 ರನ್‌ ಪೂರೈಸಿದ ಟಾಪ್‌ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿದ್ದಾರೆ.

    T20I ಟಾಪ್‌ ಸ್ಕೋರರ್‌ ಯಾರು?
    ಕೊಹ್ಲಿ 115 ಪಂದ್ಯಗಳಲ್ಲಿ 1 ಶತಕ, 37 ಅರ್ಧ ಶತಕಗಳೊಂದಿಗೆ 4,008 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 148 ಪಂದ್ಯಗಳಲ್ಲಿ 3853 ರನ್‌ ಗಳಿಸಿರುವ ರೋಹಿತ್‌ ಶರ್ಮಾ (4 ಶತಕ, 29 ಅರ್ಧಶತಕ) 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಕಿವೀಸ್‌ನ ಮಾರ್ಟಿನ್‌ ಗಪ್ಟಿಲ್‌ 122 ಪಂದ್ಯಗಳಲ್ಲಿ 3,531 ರನ್‌, ಪಾಕಿಸ್ತಾನದ ಬಾಬರ್‌ ಆಜಂ 104 ಪಂದ್ಯಗಳಲ್ಲಿ 3,485 ರನ್‌ ಹಾಗೂ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪಡೆದ ಬೆಂಕಿ ಬೌಲರ್‌ ಮೊಹಮ್ಮದ್‌ ಶಮಿ – ಇನ್ಯಾರಿಗೆಲ್ಲಾ ಸಿಕ್ತು ಪ್ರಶಸ್ತಿ?

    ಈಗಾಗಲೇ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ರೋಹಿತ್ ಶರ್ಮಾ ಅವರಿಗೆ ಮತ್ತೆ ಟಿ20 ಪಂದ್ಯಗಳಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಇದನ್ನೂ ಓದಿ: 2023ರ ಅರ್ಜುನ ಪ್ರಶಸ್ತಿ ಪಡೆದ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ – ಸಾಧನೆಗಳೇನು?

    ಅಫ್ಘಾನ್ ವಿರುದ್ಧ ಭಾರತ ತಂಡ ಹೀಗಿದೆ:
    ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಮುಕೇಶ್ ಕುಮಾರ್.

    ಸರಣಿ ಎಲ್ಲಿ ಯಾವಾಗ?
    ಇದೇ ಜನವರಿ 11 ರಿಂದ ಸರಣಿ ಪ್ರಾರಂಭವಾಗಲಿದ್ದು, ಮೊದಲ ಟಿ20 ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಜ.14 ರಂದು ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ 2ನೇ ಪಂದ್ಯ ನಡೆಯಲಿದೆ. ಜನವರಿ 17 ರಂದು ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇದು ಭಾರತ ತಂಡಕ್ಕೆ ಕೊನೆಯ ಚುಟುಕು ಅಂತಾರಾಷ್ಟ್ರೀಯ ಸರಣಿಯಾಗಿರಲಿದೆ. ಹಾಗಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ಸೇರ್ಪಡೆಯಾದ 10 ದಿನದಲ್ಲೇ ವೈಎಸ್‌ಆರ್‌ ಕಾಂಗ್ರೆಸ್‌ಗೆ ಅಂಬಟಿ ರಾಯಡು ಗುಡ್‌ಬೈ

  • ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

    ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

    – ಅಫ್ಘಾನಿಸ್ತಾನ ವಿರುದ್ಧದ ಟಿ20ಗೂ ಹಾರ್ದಿಕ್‌ ಪಾಂಡ್ಯ ಅಲಭ್ಯ

    ಮುಂಬೈ: ಪಾದದ ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅವರು ಮುಂಬರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 ಸರಣಿ ಹಾಗೂ 2024ರ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗುಜರಾತ್‌ ಟೈಟಾನ್ಸ್‌ನಿಂದ (Gujarat Taitans) ಟ್ರೇಡ್‌ ವಿಂಡೋ (ಆಟಗಾರರ ಬದಲಾವಣೆ ಮಾಡಿಕೊಳ್ಳುವ ನಿಯಮ) ಮೂಲಕ ಮುಂಬೈ ಇಂಡಿಯನ್ಸ್‌ಗೆ (Mumbai Indians) ಮರಳಿ ನಾಯಕತ್ವ ಪಡೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವುದು ಫ್ರಾಂಚೈಸಿಗೆ ತಲೆನೋವು ಉಂಟುಮಾಡಿದೆ. ಇದನ್ನೂ ಓದಿ: ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್‌ ಭಾವುಕ

    2023ರ ಏಕದಿನ ವಿಶ್ವಕಪ್ (World Cup) ಟೂರ್ನಿ ವೇಳೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ವೇಳೆ ಹಾರ್ದಿಕ್‌ ಪಾಂಡ್ಯ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಕ್ರೀಸ್‌ನಲ್ಲಿದ್ದ ಲಿಟ್ಟನ್‌ ದಾಸ್‌ ಹಾರ್ದಿಕ್‌ ಅವರ ಎಸೆತವನ್ನು ಸ್ಟ್ರೈಟ್‌ಡ್ರೈವ್‌ ಮಾಡಿದಾಗ, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಪಾಂಡ್ಯ ಕಾಲು ಉಳುಕಿಸಿಕೊಂಡಿದ್ದರು. ನಂತರ ಪೆವಿಲಿಯನ್‌ಗೆ ಹಿಂದಿರುಗಿದರೂ ಮೈದಾನಕ್ಕೆ ಮರಳಲಿಲ್ಲ. ಅಂತಿಮವಾಗಿ ಅವರು ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.

    ಅಲ್ಲದೆ, ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗೂ ಅಲಭ್ಯರಾದರು. ಇದೀಗ ಗಾಯದ ಸಮಸ್ಯೆ ಮತ್ತೆ ಗಂಭೀರವಾಗುತ್ತಿದ್ದು, 2024ರ ಜನವರಿಯಲ್ಲಿ ನಿಗದಿಯಾಗಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು

    ಮತ್ತೊಂದೆಡೆ ಮಾರ್ಚ್‌ ಅಂತ್ಯದಲ್ಲಿ ಆರಂಭವಾಗುವ 2024ರ ಐಪಿಎಲ್‌ ಟೂರ್ನಿಯ ಒಳಗಾಗಿ ಅವರು ಸಂಪೂರ್ಣ ಗುಣಮುಖರಾಗುವುದು ಅನುಮಾನ ಎಂಬ ವಿಷಯಗಳು ಕೇಳಿಬರುತ್ತಿದೆ. ಇದರಿಂದ ಪಾಂಡ್ಯ ಐಪಿಎಲ್‌ನಿಂದಲೇ ಹೊರಗುಳಿಯಬಹುದು, ರೋಹಿತ್‌ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್‌ ನಾಯಕತ್ವ ವಹಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

    ಹಾರ್ದಿಕ್‌ ಅಲಭ್ಯರಾದ್ರೆ ನಾಯಕ ಯಾರು?
    10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ 5 ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಬಿಟ್ಟು ಹಾರ್ದಿಕ್ ಪಾಂಡ್ಯಗೆ ಮಿನಿ ಹರಾಜಿಗೂ ಮುನ್ನ ನಾಯಕತ್ವ ಹಸ್ತಾಂತರಿಸಲಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದರೂ ಮುಂಬೈ ಇಂಡಿಯನ್ಸ್ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿತ್ತು. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಇದರಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ಫ್ಯಾನ್ಸ್‌ ಮುಂಬೈ ಇಂಡಿಯನ್ಸ್‌ನ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು. ಒಂದು ವೇಳೆ ಹಾರ್ದಿಕ್ ಪಾಂಡ್ಯ ಐಪಿಎಲ್‌ಗೆ ಅಲಭ್ಯರಾದರೆ, ಮುಂಬೈ ಇಂಡಿಯನ್ಸ್‌ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈ ವೇಳೆ ರೋಹಿತ್ ಶರ್ಮಾ ಅವರನ್ನೇ ನಾಯಕತ್ವದಲ್ಲಿ ಮುಂದುವರಿಯುವಂತೆ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್‌ ಒತ್ತಾಯಿಸಬಹುದು ಎಂದು ಹೇಳಲಾಗಿದೆ.

  • ಮತ್ತೆ ಅದೇ ತಪ್ಪು – DRS ತೆಗೆದುಕೊಳ್ಳದೇ ಹರಿಣರ ಎದುರು ಮಕ್ಕರ್‌ ಆದ ಗಿಲ್‌!

    ಮತ್ತೆ ಅದೇ ತಪ್ಪು – DRS ತೆಗೆದುಕೊಳ್ಳದೇ ಹರಿಣರ ಎದುರು ಮಕ್ಕರ್‌ ಆದ ಗಿಲ್‌!

    ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆದ ನಿರ್ಣಾಯಕ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ಕುರಿತು ಚರ್ಚೆಗಳು ಹುಟ್ಟಿಕೊಂಡಿದೆ. ಹರಿಣರ ವಿರುದ್ಧ‌ ಸ್ಫೋಟಕ ಇನ್ನಿಂಗ್ಸ್‌ ಕಟ್ಟುವ ಉತ್ಸಾಹದಲ್ಲಿದ್ದ ಗಿಲ್‌ ಕೈಕೊಟ್ಟರು ಎಂಬ ಟೀಕೆಗಳ ಮಧ್ಯೆ ಗಿಲ್‌ ಔಟಾದ ಕುರಿತು ಚರ್ಚೆ ಹುಟ್ಟಿಕೊಂಡಿದೆ.

    5 ಎಸೆತಗಳಲ್ಲಿ 8 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ 3ನೇ ಓವರ್‌ನಲ್ಲಿ ಕೇಶವ್‌ ಮಹಾರಾಜ್‌ ಬೌಲಿಂಗ್‌ ವೇಳೆ ಸ್ವೀಪ್‌ಶಾಟ್‌ಗೆ ಯತ್ನಿಸಿದರು. ಈ ವೇಳೆ ಬಾಲ್‌ ಪ್ಯಾಡ್‌ಗೆ ಬಡಿಯಿತು. ಆನ್‌ಫೀಲ್ಡ್‌ ಅಂಪೈರ್‌ ನೇರವಾಗಿ ಎಲ್‌ಬಿಡಬ್ಲ್ಯೂ ಔಟ್‌ ತೀರ್ಪು ನೀಡಿದರು. ಶುಭಮನ್‌ ಗಿಲ್‌ಗೆ DRS ತೆಗೆದುಕೊಳ್ಳುವ ಅವಕಾಶವಿದ್ದರೂ ಕ್ರೀಸ್‌ನಿಂದ ಹೊರನಡೆದರು. ಶುಭಮನ್‌ ಗಿಲ್‌ ಮೈದಾನ ತೊರೆದ ಬಳಿಕ ಟಿವಿ ಅಂಪೈರ್‌ ಈ ಔಟ್‌ ಅನ್ನು ಪರಿಶೀಲಿಸಿದಾಗ ಅದು ನಾಟೌಟ್‌ ಆಗಿತ್ತು. ಇದರಿಂದ ಶುಭಮನ್‌ ಗಿಲ್‌ ಅವರ ನಡೆ ಟೀಂ ಇಂಡಿಯಾ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಸೇರಿದಂತೆ ಇಡೀ ತಂಡವನ್ನು ನಿರಾಸೆಗೊಳಿಸಿತು. ಇದನ್ನೂ ಓದಿ: ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ; ಶರ್ಟ್‌ ಆಯ್ಕೆ ಮಾಡದಂತೆ ಆಟಗಾರರಿಗೆ BCCI ಸೂಚನೆ

    ಶುಭಮನ್‌ ಗಿಲ್‌ ಮಕ್ಕರ್‌ ಆಗಿದ್ದು ಇದೇ ಮೊದಲೇನಲ್ಲ ಕೆಲ ದಿನಗಳ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ನಿರ್ಣಾಯಕ ಟಿ20 ಪಂದ್ಯದಲ್ಲೂ ಇದೇ ರೀತಿ ಔಟ್‌ಗೆ ತುತ್ತಾಗಿ, ನಾಟೌಟ್‌ ಅನ್ನು ಔಟ್‌ ಆಗಿ ಬಿಟ್ಟುಕೊಟ್ಟಿದ್ದರು. ಅಲ್ಲದೇ 2022ರ ಏಷ್ಯಾಕಪ್‌ ಟೂರ್ನಿಯಲ್ಲೂ ಕೆ.ಎಲ್‌ ರಾಹುಲ್‌ (KL Rahul) ಸಹ ನಾಕೌಟ್‌ ಪಂದ್ಯದಲ್ಲಿ ನಾಟೌಟ್‌ ಆಗಿದ್ದರೂ ಡಿಆರ್‌ಎಸ್‌ ತೆಗೆದುಕೊಳ್ಳದೇ ಔಟ್‌ ಅಂತಾ ಬಿಟ್ಟುಕೊಟ್ಟಿದ್ದರು. ಇದು ಪಂದ್ಯದ ಸೋಲಿಗೂ ಕಾರಣವಾಗಿತ್ತು. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್‌ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಸರಣಿ 1-1 ರಲ್ಲಿ ಸಮ

    ಗುರುವಾರ ಜೋಹಾನ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಶತಕ ಹಾಗೂ ಯಶಸ್ವಿ ಜೈಸ್ವಾಲ್‌ ಅರ್ಧಶತಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 201 ರನ್‌ ಗಳಿಸಿತ್ತು. 202 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಹರಿಣರ ಪಡೆ 13.5 ಓವರ್‌ಗಳಲ್ಲಿ 95 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 106 ರನ್‌ಗಳ ಭರ್ಜರಿ ಜಯ ಸಾಧಿಸಿ 1-1 ರಲ್ಲಿ ಸರಣಿ ಸಮಬಲ ಸಾಧಿಸಿತು. ಇದನ್ನೂ ಓದಿ: ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ

  • ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ

    ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ

    ಜೋಹಾನ್ಸ್‌ಬರ್ಗ್: ವಿಶ್ವದ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ದಕ್ಷಿಣ ಆಫ್ರಿಕಾ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

    ಟಿ20 ಕ್ರಿಕೆಟ್‌ ವೃತ್ತಿಜೀವನದ 4ನೇ ಹಾಗೂ ವೇಗದ ಶತಕ ಸಿಡಿಸಿದ ಸೂರ್ಯ, ಈ ಸಾಧನೆ ಮಾಡಿದ ರೋಹಿತ್‌ ಶರ್ಮಾ ಹಾಗೂ ಆಸೀಸ್‌ನ ಗ್ಲೇನ್‌ ಮ್ಯಾಕ್ಸ್‌ವೆಲ್‌ ದಾಖಲೆಯನ್ನ ಸರಿಗಟ್ಟಿದ್ದಾರೆ. ರೋಹಿತ್‌ ಶರ್ಮಾ 148 ಪಂದ್ಯಗಳು 140 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ಗ್ಲೇನ್‌ ಮ್ಯಾಕ್ಸ್‌ವೆಲ್‌ 100 ಪಂದ್ಯ, 92 ಇನ್ನಿಂಗ್ಸ್‌ನಲ್ಲಿ 4ನೇ ಶತಕ ಸಿಡಿಸಿದ್ದರು. ಆದ್ರೆ ಸೂರ್ಯಕುಮಾರ್‌ ಕೇವಲ 61 ಪಂದ್ಯ 57 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಗುರುವಾರ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ 178.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ ಮೊದಲ 25 ಎಸೆತಗಳಲ್ಲಿ 27 ರನ್‌ ಗಳಿಸಿದ್ರೆ, ಮುಂದಿನ 31 ಎಸೆತಗಳಲ್ಲಿ 73 ರನ್‌ ಚಚ್ಚಿ ಶತಕ ಪೂರೈಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕ ದಾಖಲಿಸಿದರು. ಇದರಲ್ಲಿ 7 ಬೌಂಡರಿ, 8 ಸಿಕ್ಸರ್‌ಗಳೂ ಸೇರ್ಪಡೆಯಾದವು.

    ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಸೂರ್ಯಕುಮಾರ್‌ ಶತಕದ ನೆರವಿನಿಂದ 201 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

    ಭಾರತದ ಪರ ನಾಯಕ ಸೂರ್ಯಕುಮಾರ್‌ ಯಾದವ್‌ 56 ಎಸೆತಗಳಲ್ಲಿ 100 ರನ್‌ (7 ಬೌಂಡರಿ, 8 ಸಿಕ್ಸರ್)‌ ಚಚ್ಚಿದರೆ, ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ 41 ಎಸೆತಗಳಲ್ಲಿ 60 ರನ್‌ (6 ಬೌಂಡರಿ, 3 ಸಿಕ್ಸರ್)‌ ಬಾರಿಸಿದರು. ಶುಭಮನ್‌ ಗಿಲ್‌ 8 ರನ್‌, ರಿಂಕು ಸಿಂಗ್‌ 14 ರನ್‌, ಜಿತೇಶ್‌ ಶರ್ಮಾ, ರವೀಂದ್ರ ಜಡೇಜಾ ತಲಾ 4 ರನ್‌, ಮೊಹಮ್ಮದ್‌ ಸಿರಾಜ್‌ 2 ರನ್‌ ಗಳಿಸಿದ್ರೆ ತಿಲಕ್‌ ವರ್ಮಾ ಶೂನ್ಯ ಸುತ್ತಿದರು.