Tag: T.Narasipur

  • ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರು ಸ್ಥಳದಲ್ಲೇ ಸಾವು

    ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರು ಸ್ಥಳದಲ್ಲೇ ಸಾವು

    – ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಸರಣಿ ಅಪಘಾತ

    ಮೈಸೂರು: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ (Bike Accident) ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ (T.Narasipur) ಹೆಳವರಹುಂಡಿ ಬಳಿ ನಡೆದಿದೆ. ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಟಿ.ನರಸೀಪುರದ ಆದಿಬೆಟ್ಟಳ್ಳಿಯ ನಾಗರಾಜು (35) ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಬಿಳಿಗಿರಿ (30) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಕಸ್ಟಡಿ ಅವಧಿ ಇಂದಿಗೆ ಅಂತ್ಯ – ಜೈಲುಪಾಲಾಗ್ತಾರಾ ರೀಲ್ಸ್ ಸ್ಟಾರ್?

    ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹೆದ್ದಾರಿಯಲ್ಲಿ ಸರಣಿ ಅಪಘಾತ:
    ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ (Old Bengaluru Mysuru Highway) ಸರಣಿ ಅಪಘಾತ ಸಂಭವಿಸಿದ್ದು, ರಾಮನಗರ ಸಮೀಪದ ಕಾಮತ್ ಹೋಟೆಲ್ ಬಳಿ ಮೂರ್ನಾಲ್ಕು ಬೈಕ್‍ಗಳು ಬಿದ್ದು, ಸವಾರರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು, ಸ್ಥಳೀಯರು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಡಾಂಬರ್ ಹಾಕಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನೂ ಓದಿ: ಕೈತಪ್ಪಿದ ಟಿಕೆಟ್ – ಕೀಟನಾಶಕ ಸೇವಿಸಿ ತಮಿಳುನಾಡಿನ ಸಂಸದ ಆತ್ಮಹತ್ಯೆಗೆ ಯತ್ನ

  • ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ

    ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ

    ಬೆಂಗಳೂರು: ಮೈಸೂರಿನಲ್ಲಿ (Mysuru) ನಡೆದ ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವಿನ ಭೀಕರ ಅಪಘಾತ (Accident) 10 ಜನರ ಬಲಿ ಪಡೆದುಕೊಂಡಿದೆ. ದುರ್ಘಟನೆಗೆ ಆಘಾತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಮೈಸೂರು ಜಿಲ್ಲೆಯ ಟಿ ನರಸೀಪುರ (T Narasipur) ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು‌. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

    ಕೊಳ್ಳೇಗಾಲದ ಟಿ ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, 10 ಜನ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಗುರುತು ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಗು ಸೇರಿ ಹಲವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

    ಸಾವನ್ನಪ್ಪಿರುವ 10 ಜನರಲ್ಲಿ ಮೂವರು ಮಕ್ಕಳು, ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ. ಮೃತರನ್ನು ಮಂಜುನಾಥ್ (35), ಪೂರ್ಣಿಮಾ (30), ಕಾರ್ತಿಕ್ (8), ಪವನ್ (8), ಗಾಯತ್ರಿ (28), ಶ್ರಾವ್ಯ (5), ಕೋಟ್ಯರೇಶ್ (45), ಸುಜಾತಾ (40), ಸಂದೀಪ್ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 16 ಜನ ಗಾಯಾಳುಗಳಿಗೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ

    ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ

    ಮೈಸೂರು: ಸಾವು ಪ್ರತಿ ಮನೆಯಲ್ಲೂ ದು:ಖದ ಕಡಲ ಸೃಷ್ಟಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಇಲ್ಲೊಂದು ಸಮುದಾಯದಲ್ಲಿ ಸಾವು ಬರೀ ದು:ಖದ ಕಡಲ ಸೃಷ್ಟಿಸುವ ಜೊತೆಗೆ ಸಾಲದ ಹೊರೆಯನ್ನು ಸೃಷ್ಟಿಸುತ್ತದೆ. ಸಾವು ಆಯ್ತು ಎಂಬ ನೋವು ಒಂದು ಕಡೆ, ಸಾವು ಸೃಷ್ಟಿಸೋ ಸಾಲದ ನೋವು ಮತ್ತೊಂದು ಕಡೆ.

    ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿನ ಕ್ರೈಸ್ತ ಧರ್ಮದ ಪ್ರೊಟೆಸ್ಟಂಟ್ ಸಮುದಾಯದವರು ಈ ರೀತಿಯ ತೊಂದರೆಯನ್ನು ಎದುರಿಸುತ್ತಿದ್ದಾರೆ. ಬಹುತೇಕರು ಬಡತನ ರೇಖೆಗಿಂತಾ ಕೆಳಗೆ ಇದ್ದಾರೆ. ಇವರ ಮನೆಯಲ್ಲಿ ಸಾವು ಸಂಭವಿಸಿದರೆ ಕನಿಷ್ಟ ಪಕ್ಷ 50 ಸಾವಿರ ರೂಪಾಯಿ ಸಾಲ ಅವರ ಬೆನ್ನಿಗೆ ಬೀಳೋದು ನಿಶ್ಚಿತ. ಸಾಲಕ್ಕೆ ಬಡ್ಡಿ ಎಲ್ಲಾ ಸೇರಿ ಬಿಟ್ಟರೆ ಸಾಲದ ಬೆಟ್ಟ ಲಕ್ಷ ರೂಪಾಯಿಯನ್ನೆ ಮುಟ್ಟುತ್ತದೆ.

    ಈ ಸಮುದಾಯಕ್ಕೆ ಟಿ. ನರಸೀಪುರ ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲ. ಪ್ರೊಟೆಸ್ಟಂಟ್ ಸಮುದಾಯದವರು ಯಾರಾದರೂ ಸತ್ತರೆ ಅವರನ್ನು ಹೂಳುವುದಕ್ಕೆ 40 ಕಿ.ಮೀ. ದೂರ ಇರುವ ಮೈಸೂರಿಗೆ ತರಬೇಕು. ಮೈಸೂರಿನಲ್ಲಿನ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ 12 ಸಾವಿರ ರೂಪಾಯಿ ಹಣ ನೀಡಬೇಕು. ಇದರ ಜೊತೆಗೆ ಶವ ತರಲು ವಾಹನ, ಸಂಬಂಧಿಕರು, ಮನೆಯವರು ಎಲ್ಲರೂ ಮೈಸೂರಿಗೆ ಬರುವುದಕ್ಕೆ ವಾಹನದ ವ್ಯವಸ್ಥೆ ಮಾಡಬೇಕು. ಟಿ. ನರಸೀಪುರದಿಂದ ಮೈಸೂರಿಗೆ ಶವ ತಂದು ಸಂಸ್ಕಾರ ಮಾಡಿ ವಾಪಾಸ್ ಹೋಗುವುದಕ್ಕೆ ಕನಿಷ್ಟ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಹೇಳಿ ಕೇಳಿ ಈ ಸಮುದಾಯದಲ್ಲಿ ಇರುವವರಲ್ಲಿ ಬಹುತೇಕರು ಬಡವರು. ಇವರ ಬಳಿ ಅಷ್ಟು ಹಣ ಇರೋದಿಲ್ಲ. ಹೀಗಾಗಿ 50 ಸಾವಿರ ರೂಪಾಯಿಯನ್ನು ಬಡ್ಡಿಗೆ ಸಾಲಕ್ಕೆ ತಂದು ಶವ ಸಂಸ್ಕಾರದ ಕಾರ್ಯ ಮಾಡುತ್ತಿದ್ದಾರೆ.

    ಕ್ರೈಸ್ತ ಸಮುದಾಯದ ಬೇರೆ ಪಂಗಡದ ಸ್ಮಶಾನದಲ್ಲಿ ಇವರಿಗೆ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇನ್ನೂ ಹಿಂದೂ ಧರ್ಮದ ಸ್ಮಶಾನಗಳಲ್ಲೂ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮೈಸೂರಿಗೆ ಬರಲೇಬೇಕಾದ ಅನಿವಾರ್ಯತೆ ಇದೆ. ಇದರಿಂದ ತಮಗೆ ಪ್ರತ್ಯೇಕವಾಗಿ ಒಂದು ಸ್ಮಶಾನ ಭೂಮಿ ಮಂಜೂರು ಮಾಡಿ ಅಂತಾ ಸಮುದಾಯದ ಮುಖಂಡ ಅಲೆಕ್ಸ್ ಸೇರಿದಂತೆ ಗ್ರಾಮಸ್ಥರು ಕೇಳುತ್ತಿದ್ದಾರೆ.

    ಪ್ರೊಟೆಸ್ಟಂಟ್ ಸಮುದಾಯದ ನೂರಕ್ಕೂ ಅಧಿಕ ಕುಟುಂಬದವರು ಟಿ. ನರಸೀಪುರ ಪಟ್ಟಣದಲ್ಲಿ ವಾಸವಾಗಿದ್ದು, ಪ್ರಾರ್ಥನೆಗೆ ಚರ್ಚ್ ಕೂಡ ಇಲ್ಲ. ಹೀಗಾಗಿ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ನಮಗೆ ಚರ್ಚ್ ಬೇಡ ಕನಿಷ್ಟ ಪಕ್ಷ ಸ್ಮಶಾನ ಭೂಮಿಯಾದರೂ ಕೊಡಿ ಅಂತಾ ಜನಪ್ರತಿನಿಧಿಗಳನ್ನು ಮೈಸೂರು ಜಿಲ್ಲಾಡಳಿತವನ್ನು ಕೇಳುತ್ತಿದ್ದಾರೆ.

    ಈ ಸಮುದಾಯಕ್ಕೆ ಶೀಘ್ರವೆ ಸ್ಮಶಾನ ಭೂಮಿ ನೀಡೋಕೆ ಮೈಸೂರು ಜಿಲ್ಲಾಡಳಿತ ಮುಂದಾಗಬೇಕಿದೆ. ಇಲ್ಲದೆ ಇದ್ದರೆ ಸಾವಿನ ನೋವಿನ ಜೊತೆ ಸಾಲದ ನೋವು ಈ ಕುಟುಂಬಗಳನ್ನು ಕಾಡುವುದು ಮುಂದುವರಿಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv