Tag: Syed Akbaruddin

  • ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

    ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗ – ಅಕ್ಬರುದ್ದೀನ್ ಉತ್ತರಕ್ಕೆ ಪಾಕ್ ಪತ್ರಕರ್ತರು ಕಕ್ಕಾಬಿಕ್ಕಿ

    ನ್ಯೂಯಾರ್ಕ್: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

    ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತದ ಸರ್ಕಾರ ಕೈಗೊಂಡ ನಿರ್ಧಾರದ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಲಾಯಿತು. ಶಿಷ್ಟಾಚಾರದಂತೆ ಹಾರ್ಸ್ ಶೂ ಟೇಬಲ್‍ನಲ್ಲಿ ಸಭೆಯನ್ನು ನಡೆಸಬೇಕು. ಆದರೆ ಈ ಸಭೆಯು ಭದ್ರತಾ ಮಂಡಳಿಯ ಸಮಾಲೋಚನಾ ಕೊಠಡಿಯಲ್ಲಿ ಅನೌಪಚಾರಿಕವಾಗಿ ನಡೆಯಿತು.

    ಕಾಶ್ಮೀರ ಕಣಿವೆಯಲ್ಲಿ ಮಾನವಹಕ್ಕುಗಳ ದಮನವಾಗುತ್ತಿದೆ. ಆ ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ತುಂಬಾ ಅಪಾಯಕಾರಿ ಎಂದು ಚೀನಾ ಸಭೆಯಲ್ಲಿ ಆತಂಕ ವ್ಯಕ್ತಪಡಿಸುವ ಮೂಲಕ ಪಾಕ್ ಪರ ಬ್ಯಾಟ್ ಬೀಸಿತ್ತು.

    ಭಾರತ ಉಪಖಂಡದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ. ಮಾತುಕತೆ ಮೂಲಕ ಜಮ್ಮು-ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಿ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನಕ್ಕೆ ಸಲಹೆ ನೀಡಿವೆ. ಜೊತೆಗೆ ಈ ಸಭೆಯಲ್ಲಿ ಪಾಕಿಸ್ತಾನದ ಬೆಂಬಲಕ್ಕೆ ಕೇವಲ ಚೀನಾ ಮಾತ್ರ ನಿಂತಿತ್ತು. ಆದರೆ ಭಾರತದ ಪರ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ನಿಂತಿತ್ತು.

    ಈ ಸಭೆಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ರಷ್ಯಾದ ಉಪ ಶಾಶ್ವತ ಪ್ರತಿನಿಧಿ ಡಿಮಿಟ್ರಿ ಪೋಲ್ಯಾನ್‍ಸ್ಕಿ ಅವರು, ಕಾಶ್ಮೀರ ವಿಷಯ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಮಸ್ಯೆ. ಅದನ್ನು ಎರಡು ರಾಷ್ಟ್ರಗಳು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು.

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಆ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿದ ಅಕ್ಬರುದ್ದೀನ್ ಅವರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತ ರಿಗೆ ಶೇಕ್ ಹ್ಯಾಂಡ್ ಮಾಡಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    50 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ರೀತಿಯ ಸಭೆ ನಡೆದಿತ್ತು‌.