Tag: sydney

  • ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸೀಸ್ ಆಟಗಾರ ವಾರ್ನರ್ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಈ ವೇಳೆ ವಾರ್ನರ್ ಕುಟುಂಬದಲ್ಲಿ ನಡೆದ ಕಹಿ ಘಟನೆಯನ್ನು ವಾರ್ನರ್ ಪತ್ನಿ ಬಹಿರಂಗ ಪಡಿಸಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನ ಕಹಿ ಘಟನೆಯ ಕುರಿತು ಮಾತನಾಡಿರುವ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್, ಆಸೀಸ್ ತಂಡದ ಉಪನಾಯಕನ ಸ್ಥಾನಕ್ಕೆ ಪತಿ ರಾಜೀನಾಮೆ ನೀಡಿದ್ದು, ಬಳಿಕ ನಿಷೇಧಕ್ಕೆ ಒಳಗಾಗಿದ್ದು ತಮ್ಮಲ್ಲಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಕಾರಣವಾಗಿತ್ತು. ಈ ವೇಳೆ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ನಾವು ಮಗುವನ್ನು ಕಳೆದು ಕೊಂಡೆವು ಎಂದು ತಿಳಿಸಿದ್ದಾರೆ.

    ವಾರ್ನರ್ ನಿಷೇಧಕ್ಕೊಳಗಾದ ವೇಳೆ ನಾನು ಗರ್ಭಿಣಿಯಾಗಿದ್ದೆ. ಘಟನೆಯ ನಂತರ ಮಾಧ್ಯಮ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪತಿಯ ಬಗ್ಗೆ ಕಠಿಣ ಬರಹಗಳು ಪ್ರಕಟವಾಗುತ್ತಿದ್ದವು. ಈ ಸಂದರ್ಭದಲ್ಲಿ ತೀವ್ರ ಒತ್ತಡಕ್ಕೆ ಒಳಗಾದ ಪರಿಣಾಮ ಅಧಿಕ ರಕ್ತಸ್ರಾವವಾಗಿ ಗರ್ಭಪಾತವಾಯಿತು. ಈ ಕುರಿತು ಪತಿಗೆ ಮಾಹಿತಿ ನೀಡಿದೆ. ಆಗಾಗಲೇ ತನಗೆ ಗರ್ಭಪಾತವಾಗಿದ್ದು ಖಚಿತವಾಗಿತ್ತು ಎಂದು ತನ್ನ ನೋವಿನ ವಿಚಾರವನ್ನು ಬಹಿರಂಗ ಪಡಿಸಿದರು.

    ತಮ್ಮ ಜೀವನದ ಆ ಕಹಿ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಮೂರನೇ ಮಗುವಿನ ಕುರಿತು ನಾವು ಎಷ್ಟು ಸಂತೋಷವಾಗಿದ್ದೆವೂ ಅದಕ್ಕಿಂತ ಹೆಚ್ಚು ದುಃಖವನ್ನು ನಾವು ಅನುಭವಿಸಿದ್ದೇವೆ. ದಕ್ಷಿಣ ಆಫ್ರಿಕಾ ಪ್ರವಾಸ ನಿಜಕ್ಕೂ ಭಯಾನಕವಾಗಿತ್ತು ಎಂದು ಹೇಳಿ ಭಾವುಕರಾದರು.

    ಡೇವಿಡ್ ವಾರ್ನರ್ ಹಾಗೂ ಕ್ಯಾಂಡಿಸ್ ದಂಪತಿಗೆ ಈಗಾಗಲೇ ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ನಮಗೆ ಮೂರನೇ ಮಗುವಿನ ಆಗಮನದ ಕುರಿತು ವೈದ್ಯರು ಮಾಹಿತಿ ನೀಡಿದ್ದರು ಎಂದು ಕ್ಯಾಂಡಿಸ್ ವಾರ್ನರ್ ತಿಳಿಸಿದರು.

  • ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

    ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಟೆಸ್ಟ್ ಓಪನರ್ ಜಸ್ಟಿನ್ ಲ್ಯಾಂಗರ್ ನೇಮಕಗೊಂಡಿದ್ದಾರೆ.

    ಸದ್ಯ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಪರ್ತ್ ಸ್ಕಾಚರ್ಸ್ ತಂಡದ ಕೋಚ್ ಕಾರ್ಯನಿರ್ವಹಿಸುತ್ತಿರುವ 47 ವರ್ಷದ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮುಂದಿನ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ 22ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

    ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಕೋಚ್ ಡ್ಯಾರೆನ್ ಲೆಹ್ಮನ್ ಜಾಗಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆಮಾಡಿದೆ. ಲ್ಯಾಂಗರ್ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿದಂತೆ ಮೂರು ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿಂದೆ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

    ಕೋಚ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಲ್ಯಾಂಗರ್, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 1993ರಿಂದ 2007 ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಲ್ಯಾಂಗರ್ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 23 ಶತಕಗಳು ಸೇರಿದಂತೆ 45.27 ಸರಾಸರಿಯಲ್ಲಿ 7,696 ರನ್‍ಗಳಿಸಿದ್ದಾರೆ. ಲ್ಯಾಂಗರ್ ಅವರ ಈ ನಾಲ್ಕು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಮುಖವಾಗಿ ಎರಡು ಆಶಸ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್, ಜಸ್ಟಿನ್ ಲ್ಯಾಂಗರ್ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    2013ರಲ್ಲಿ ಕೋಚ್ ಆಗಿ ನೇಮಗೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಲೆಹ್ಮನ್ 2019ರ ಆಶಸ್ ಸರಣಿಯವರೆಗೂ ಕೋಚ್ ಆಗಿ ಮುಂದುವರೆಯಬೇಕಿತ್ತು. ಆದರೆ ಮಾರ್ಚ್‍ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್‍ನಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್ ಕಣ್ಣೀರ ವಿದಾಯ ಹೇಳಿದ್ದರು. ಇದೇ ವೇಳೆ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಐಪಿಲ್‍ನಿಂದಲೂ ಹೊರಗುಳಿದಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‍ಮನ್ ಕ್ಯಾಮರೂನ್ ಬ್ಯಾನ್ ಕ್ರಿಫ್ಟ್ ರನ್ನು 9 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

  • ವಿಡಿಯೋ: ಉರಿಯುತ್ತಿದ್ದ ಕಟ್ಟಿಗೆಗೆ ಮತ್ತಷ್ಟು ಬೆಂಕಿ ಸುರಿದ ವ್ಯಕ್ತಿ-ಕ್ಷಣ ಮಾತ್ರದಲ್ಲಿ ಜ್ವಾಲೆಯಿಂದ ಪಾರು!

    ವಿಡಿಯೋ: ಉರಿಯುತ್ತಿದ್ದ ಕಟ್ಟಿಗೆಗೆ ಮತ್ತಷ್ಟು ಬೆಂಕಿ ಸುರಿದ ವ್ಯಕ್ತಿ-ಕ್ಷಣ ಮಾತ್ರದಲ್ಲಿ ಜ್ವಾಲೆಯಿಂದ ಪಾರು!

    ಸಿಡ್ನಿ: ಮನೆಯ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ಬೆಂಕಿಯ ತೊಟ್ಟಿಗೆ ವ್ಯಕ್ತಿಯೊಬ್ಬ ಮತ್ತಷ್ಟು ಬೆಂಕಿ ಸುರಿಯಲು ಯತ್ನಿಸಿ ಬೆಂಕಿಯ ಜ್ವಾಲೆಯಿಂದ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡಿರುವ ಘಟನೆ ವಾಯುವ್ಯ ಸಿಡ್ನಿಯಲ್ಲಿ ನಡೆದಿದೆ.

    ಈ ಘಟನೆ ಏಪ್ರಿಲ್ 1 ರಂದು ನಡೆದಿದ್ದು, ಬೆಂಕಿ ಸಂಪೂರ್ಣವಾಗಿ ವ್ಯಕ್ತಿಯನ್ನು ಆವರಿಸುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಘಟನೆಯಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಗೂ ಮುನ್ನ ಆತ ಬಕೆಟ್ ಒಂದರಲ್ಲಿದ್ದ ವಸ್ತುವನ್ನು ತನ್ನ ಸ್ನೇಹಿತರಿಗೆ ತೋರಿಸಿ ಬೆಂಕಿಗೆ ಎಸೆಯುತ್ತಾನೆ. ಕ್ಷಣ ಮಾತ್ರದಲ್ಲಿ ಬೆಂಕಿ ಆತನನ್ನು ಸಂಪೂರ್ಣವಾಗಿ ಆವರಿಸುತ್ತದೆ. ವಿಡಿಯೋ ದೃಶ್ಯಗಳ ಪ್ರಕಾರ ಆತ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದ್ದಾನೆ ಎಂದು ತಿಳಿಯುತ್ತದೆ. ಸದ್ಯ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://www.youtube.com/watch?v=TZUiGPMW2yg

  • ಫಸ್ಟ್ ಟೈಂ, ಪುರುಷರ ಕ್ರಿಕೆಟ್‍ಗೆ ಮಹಿಳಾ ಅಂಪೈರ್!

    ಫಸ್ಟ್ ಟೈಂ, ಪುರುಷರ ಕ್ರಿಕೆಟ್‍ಗೆ ಮಹಿಳಾ ಅಂಪೈರ್!

    ಸಿಡ್ನಿ: ಐಸಿಸಿ ಇತ್ತೀಚೆಗೆ ಹಲವು ಬದಲಾವಣೆಗಳನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ರಿಕೆಟ್‍ನಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯ ಸ್ಥಾನಮಾನ ನೀಡುವ ದೃಷ್ಟಿಯಿಂದ ಅನೇಕ ಬೆಳವಣಿಗೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಮಹಿಳೆಯೊಬ್ಬರು ಪುರುಷರ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಲು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ.

    ಹೌದು. ಕ್ರಿಕೆಟ್ ಜಗತ್ತಿನಲ್ಲಿ ಇಂತಹದ್ದೊಂದು ಇತಿಹಾಸ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ಮೂಲದ 29 ವರ್ಷದ ಕ್ಲೇರ್ ಪೊಲೊಸಾಕ್ ಆಯ್ಕೆಯಾಗುವ ಮೂಲಕ ಪುರುಷರ ಕ್ರಿಕೆಟ್‍ಗೆ ಅಂಪೈರ್ ಆದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

                       

    ಆಸ್ಟ್ರೇಲಿಯಾದ ಹಸರ್ಟ್ ವಿಲ್ಲೆ ಓವಲ್‍ನಲ್ಲಿ ನಡೆಯಲಿರುವ ಪುರುಷರ ಪ್ರಥಮ ದರ್ಜೆ ಪಂದ್ಯದಲ್ಲಿ ಮಹಿಳಾ ಅಂಪೈರ್ ಕ್ಲೇರ್ ಪೊಲೊಸಾಕ್ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 8ರಂದು ಭಾನುವಾರ ನಡೆಯಲಿರುವ ನ್ಯೂ ಸೌತ್ ವೆಲ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವನ್ ನಡುವಿನ ಏಕದಿನ ಪಂದ್ಯದಲ್ಲಿ ಪೊಲೊಸಾಕ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಈ ಬಗ್ಗೆ ಸಿಡ್ನಿಯಲ್ಲಿ ಮಾತನಾಡಿದ ಪೊಲೊಸಾಕ್, ನನಗೆ 29 ವರ್ಷ ವಯಸ್ಸಾಗಿದ್ದು ಈವರೆಗೂ ಯಾವುದೇ ಹಂತದ ಕ್ರಿಕೆಟ್ ಆಡಿಲ್ಲ. ಆದರೆ ಪಂದ್ಯಗಳನ್ನು ಕುತೂಹಲದಿಂದ ವಿಕ್ಷಣೆ ಮಾಡುತ್ತಿದ್ದೆ. ಇದರಿಂದ ನನ್ನ ತಂದೆ ಗೊಲ್ಬರ್ನ್‍ನಲ್ಲಿ ಇರುವ ಅಂಪೈರ್ ಕೋರ್ಸ್‍ಗೆ ಸೇರಿಸಿದರು. ಅಲ್ಲದೇ ಕೆಲವು ಬಾರಿ ಅಂಪೈರ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೆ. ಉತ್ಸಾಹ ಕಳೆದುಕೊಳ್ಳದೆ ಅಂತಿಮವಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ತೀರ್ಪುಗಾರ್ತಿಯಾಗಿ ಆಯ್ಕೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

                          

    ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಅಂಪೈರ್ ಆಗಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದೆ. ಇದೀಗ ಅಂತಾರಾಷ್ಟ್ರೀಯ ಪುರುಷರ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

    ಕ್ಲೇರ್ ಈ ಹಿಂದೆ ಕೆಲ ಪ್ರಾದೇಶಿಕ ಪಂದ್ಯಗಳಿಗೆ ಅಂಪೈರ್ ಆಗಿದ್ದು ಬಿಟ್ಟರೆ ನಂತರ ಕ್ಲಬ್ ಹಂತದ ಕ್ರಿಕೆಟ್‍ಗೆ ಅಂಪೈರ್ ಆಗಿದ್ದರು. ತದನಂತರ ಅಂತಾರಾಷ್ಟ್ರೀಯಾ ಮಹಿಳಾ ಪಂದ್ಯಗಳಿಗೆ ಪೊಲೊಸಾಕ್ ಆಯ್ಕೆಯಾಗಿ 2016ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್‍ನಲ್ಲಿ, 2017ರ ಐಸಿಸಿ ಮಹಿಳಾ ಎಕದಿನ ವಿಶ್ವಕಪ್‍ನಲ್ಲಿ ತಿರ್ಪುಗಾರರಾಗಿ ಕೆಲಸ ಮಾಡಿದ್ದಾರೆ.

    ಕ್ಲೇರ್ ಸಾಲಿನಲ್ಲಿ ನ್ಯೂಜಿಲೆಂಡ್‍ನ ಕೆಥಿ ಕ್ರಾಸ್, ವೆಸ್ಟ್ ಇಂಡೀಸ್ ಜಾಕ್ವೇಲಿನ್ ಮತ್ತು ಇಂಗ್ಲೆಂಡ್‍ನ ಸ್ಯೂ ರೆಡ್ಮಂಡ್ ಇವರುಗಳು ಇದ್ದಾರೆ. ಅಲ್ಲದೇ ಕಿರಿಯ ವಯಸ್ಸಿಗೆ ಕ್ಲೇರ್ ಇಂತಹ ಸಾಧನೆ ಮಾಡಿದ್ದಾರೆ. ಈ ಹಿಂದೆ ಪೊಲೊಸಾಕ್ ಕೂಡ ಸಣ್ಣ ಸಣ್ಣ ಪಂದ್ಯಗಳಲ್ಲಿ ಗುರುತಿಸಿಕೊಂಡವರು. ಉತ್ತಮ ಪರಿಶ್ರಮದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿದೆ ಎಂದು ಆಸ್ಟ್ರೇಲಿಯಾ ಸಿಇಓ ಜೇಮ್ಸ್ ಸುತರ್‍ಲೆಂಡ್ ಅಭಿನಂದನೆ ಸಲ್ಲಿಸಿದ್ದಾರೆ.

  • ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಸಿಡ್ನಿ: ಕಾರಿನಲ್ಲೋ ಬೈಕ್‍ನಲ್ಲೋ ಹೋಗುವಾಗ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿ ತಿಂಡಿ ತೆಗೆದುಕೊಳ್ಳೋದು ಕಾಮನ್. ಆದ್ರೆ ಹೆಲಿಕಾಪ್ಟರ್‍ನಲ್ಲಿ ಹೋಗ್ಬೇಕಾದ್ರೆ ಹಸಿವಾದ್ರೆ ಏನು ಮಾಡೋದು? ಪೈಲೆಟ್‍ವೊಬ್ಬರು ಹಸಿವಾಯಿತೆಂಬ ಕಾರಣಕ್ಕೆ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊಂರೆಂಟ್ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ತಿನಿಸನ್ನು ಪಾರ್ಸೆಲ್ ತೆಗೆದುಕೊಂಡು ಮತ್ತೆ ಟೇಕ್ ಆಫ್ ಮಾಡಿದ ಘಟನೆ ಶನಿವಾರ ಸಂಜೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ನೈನ್ ನ್ಯೂಸ್ ಆಸ್ಟ್ರೇಲಿಯಾ ವರದಿಯ ಪ್ರಕಾರ ಸಿಡ್ನಿಯ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊರೆಂಟಿನ ಬಳಿಯ ನಿವಾಸಿಗಳು ಹುಲ್ಲುಹಾಸಿನ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗೋದನ್ನ ನೋಡಿ ದಂಗಾಗಿದ್ದಾರೆ. ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸುದ್ದಿ ವಾಹಿನಿಯೊಂದಕ್ಕೆ ಕಳಿಸಿದ್ದಾರೆ. ಪೈಲೆಟ್ ತಿಂಡಿಯ ಪ್ಯಾಕೆಟ್‍ನೊಂದಿಗೆ ಹೊರಬಂದು ಮತ್ತೆ ಹೆಲಿಕಾಪ್ಟರ್ ಏರಿ ಟೇಕ್ ಆಫ್ ಆಗೋದನ್ನ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ “ನಾನು ಇದೇನೋ ತುರ್ತು ಭೂಸ್ಪರ್ಶವಿರಬಹುದು ಎಂದುಕೊಂಡಿದ್ದೆ” ಅಂತ ವ್ಯಕ್ತಿಯೊಬ್ಬರು ಹೇಳೋದನ್ನ ಕೇಳಬಹುದು.

    ಆಸ್ಟ್ರೇಲಿಯಾದ ನಾಗರೀಕ ವಿಮಾನಯಾನ ಸಂಸ್ಥೆಯ ವಕ್ತಾರರು ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಒಂದು ವೇಳೆ ಪೈಲೆಟ್‍ಗೆ ನಿರ್ದಿಷ್ಟ ಭೂಮಿಯ ಮಾಲೀಕನ ಸಮ್ಮತಿ ಇದ್ದರೆ ಹೆಲಿಕಾಪ್ಟರ್ ಲ್ಯಾಂಡ್ ಮಾಡೋದು ತಾಂತ್ರಿಕವಾಗಿ ಕಾನೂನು ಬಾಹಿರವಲ್ಲ ಎಂದಿದ್ದಾರೆ.

    ಅಧಿಕಾರಿಗಳು ಪೈಲೆಟ್ ಯಾರೆಂಬುದನ್ನು ದೃಢಪಡಿಸಿಲ್ಲ. ಆದ್ರೆ ಆಸ್ಟ್ರೇಲಿಯಾದ ಪ್ರಸಿದ್ಧ ರೇಡಿಯೋ ಚಾನೆಲ್‍ನಲ್ಲಿ ತಾನು ಪೈಲೆಟ್ ಎಂದು ಮಾತನಾಡಿದ ವ್ಯಕ್ತಿ ನನಗೆ ಮ್ಯಾಕ್ ಡೊನಾಲ್ಡ್ಸ್ ಆವರಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಇದೆ. ಆಗಾಗ ನಾವು ಈ ರೀತಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    ಪೈಲೆಟ್ ಹೆಲಿಕಾಪ್ಟರನ್ನು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವಾಗಿನ ಸುರಕ್ಷತೆಯ ಬಗ್ಗೆ ಹಾಗೂ ಈ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

    https://www.youtube.com/watch?v=iYMqdEZcf8o