Tag: Switch Off

  • ಕೊಲೆ ಆರೋಪಿ ಪತ್ತೆಗೆ ನೆರವಾಯ್ತು ಆ ಒಂದು ಮಿಸ್ಡ್‌ಕಾಲ್!

    ಕೊಲೆ ಆರೋಪಿ ಪತ್ತೆಗೆ ನೆರವಾಯ್ತು ಆ ಒಂದು ಮಿಸ್ಡ್‌ಕಾಲ್!

    ನವದೆಹಲಿ: ನಂಗ್ಲೋಯ್ ಪ್ರದೇಶದ 11 ವರ್ಷದ ಬಾಲಕಿಯ ಕೊಲೆ ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗಿದ್ದು ಒಂದು ಮಿಸ್ಡ್‍ಕಾಲ್ (Missed call). ಹತ್ಯೆಯಾದ ಬಾಲಕಿ ತಾಯಿಯ ಮೊಬೈಲ್‍ಗೆ (Mobile) ಅಪರಿಚಿತ ನಂಬರ್‍ನಿಂದ ಬಂದಿದ್ದ ಮಿಸ್ಡ್‌ಕಾಲ್‌ನಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.‌

    ಫೆ. 9ರಂದು ಮನೆಯಿಂದ ಶಾಲೆಗೆ ಹೊರಟಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಅದೇ ದಿನ ಬೆಳಗ್ಗೆ 11:50ರ ಸಮಯಕ್ಕೆ ಬಾಲಕಿಯ ತಾಯಿಗೆ ಅಪರಿಚಿತ ಸಂಖ್ಯೆಯಿಂದ ಮಿಸ್ಡ್‌ಕಾಲ್ ಬಂದಿತ್ತು. ನಂತರ ವಾಪಸ್ ಅದೇ ನಂಬರ್‍ಗೆ ಕರೆ ಮಾಡಿದಾಗ ಸ್ವಿಚ್ ಆಫ್ (switch off) ಆಗಿತ್ತು. ಇದನ್ನೂ ಓದಿ: ಸಚಿವರು ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವಂತಿಲ್ಲ, 5 ಸ್ಟಾರ್‌ ಹೋಟೆಲ್‌ನಲ್ಲಿ ಉಳಿಯುವಂತಿಲ್ಲ – ಪಾಕ್‌ ಸರ್ಕಾರ

    ಕೊಲೆಯಾದ ಬಾಲಕಿಯ ಪೋಷಕರು, ಆಕೆ ನಾಪತ್ತೆಯಾದ ದಿನವೇ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಮರುದಿನ ಫೆ. 10ರಂದು ಬಾಲಕಿ ಅಪಹರಣವಾಗಿರುವ ಶಂಕೆ ವ್ಯಕ್ತಪಡಿಸಿ ಮತ್ತೆ ದೂರು ದಾಖಲಿಸಿದ್ದರು. ಈ ಘಟನೆ ನಡೆದ 12 ದಿನಗಳ ಬಳಿಕ ಆರೋಪಿ ರೋಹಿತ್ ಅಲಿಯಾಸ್ ವಿನೋದ್‍ನನ್ನು (21) ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ತನಿಖೆ ಕೈಗೊಂಡು ಮೊಬೈಲ್ ಟ್ರೇಸ್ ಮಾಡಿ ಪಂಜಾಬ್ (Punjab) ಮತ್ತು ಮಧ್ಯಪ್ರದೇಶದಲ್ಲಿ (Madhya Pradesh) ದಾಳಿ ನಡೆಸಿದ್ದರು. ಫೆ. 21 ರಂದು ಆರೋಪಿಯನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಾಲಕಿಯ ಶವವನ್ನು ಘೇವ್ರಾ ಮೋರ್ ಬಳಿ ಎಸೆದಿದ್ದಾಗಿ ತಿಳಿಸಿದ್ದಾನೆ. ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಮುಂಡ್ಕಾ ಗ್ರಾಮದ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ಕಳುಹಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

    ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದ್ದರೆ ಮರಣೋತ್ತರ ಪರೀಕ್ಷೆಯ ವರದಿ ದೃಢಪಡಿಸಲಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಮಠ ಬಿಟ್ಟು ಪಕ್ಷ ಕಟ್ಟಿದ್ದಾರೆ- ಯಡಿಯೂರಪ್ಪ ಕೊಂಡಾಡಿದ ಯತ್ನಾಳ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾನುವಾರ ರಾತ್ರಿ ಲೈಟ್ ಆಫ್ ಮಾಡಿದ್ರೆ ಗ್ರಿಡ್‍ಗೆ ಸಮಸ್ಯೆ ಆಗುತ್ತಾ? ಭಾರತದ ಬೇಡಿಕೆ ಎಷ್ಟಿದೆ? – ಇಲ್ಲಿದೆ ಪೂರ್ಣ ಮಾಹಿತಿ

    ಭಾನುವಾರ ರಾತ್ರಿ ಲೈಟ್ ಆಫ್ ಮಾಡಿದ್ರೆ ಗ್ರಿಡ್‍ಗೆ ಸಮಸ್ಯೆ ಆಗುತ್ತಾ? ಭಾರತದ ಬೇಡಿಕೆ ಎಷ್ಟಿದೆ? – ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಮೇಣದ ದೀಪ/ ಮೊಬೈಲ್ ಟಾರ್ಚ್ ಬೆಳಗಿ ಎಂದು ಕರೆ ನೀಡಿರುವ ವಿಚಾರದ ಕುರಿತು ಪರ, ವಿರೋದ ಮಾತುಗಳು ಕೇಳಿಬಂದಿದೆ.

    ದೇಶಾದ್ಯಂತ ಒಂದೇ ಸಮಯದಲ್ಲಿ ಒಂದೇ ಬಾರಿಗೆ ವಿದ್ಯುತ್ ದೀಪಗಳನ್ನು ಆಫ್ ಮಾಡಿದರೆ ಗ್ರಿಡ್‍ಗೆ ಸಮಸ್ಯೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳಿದರೆ, ಕೇಂದ್ರ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ಗ್ರಿಡ್‍ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಮೋದಿ ಹೇಳಿದ್ದು ಏನು?
    ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತ ಒಂದಾಗಿ ಹೋರಾಡಬೇಕು. ಇದಕ್ಕಾಗಿ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಎಲ್ಲರು ವಿದ್ಯುತ್ ದೀಪ ಆಫ್ ಮಾಡಿ ದೀಪ/ ಮೇಣದ ಬತ್ತಿ/ ಮೊಬೈಲ್ ಟಾರ್ಚ್ ಅನ್ನು 9 ನಿಮಿಷಗಳ ಬೆಳಗಿಸಬೇಕು ಎಂದು ಕರೆ ನೀಡಿದ್ದರು.

    ಸಮಸ್ಯೆ ಏನು?
    ಸಾಮಾನ್ಯವಾಗಿ ರಾತ್ರಿ 7 ರಿಂದ 10 ಗಂಟೆಯ ಅವಧಿಯಲ್ಲಿ ದೇಶಾದ್ಯಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಸಂದರ್ಭದಲ್ಲಿ 9 ನಿಮಿಷಗಳ ಕಾಲ ಎಲ್ಲ ವಿದ್ಯುತ್ ದೀಪಗಳನ್ನು ಆಫ್ ಮಾಡಿದರೆ ವಿದ್ಯುತ್ ಮತ್ತೆ ಪವರ್ ಗ್ರಿಡ್‍ಗೆ ಹೋಗುತ್ತದೆ. ಒಂದೇ ಬಾರಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಮರಳಿದಾಗ ಆ ಒತ್ತಡವನ್ನು ಪವರ್ ಗ್ರಿಡ್ ತಡೆದುಕೊಳ್ಳುವುದು ಕಷ್ಟ. ನಿಗದಿತ ಮೆಗಾವ್ಯಾಟ್‍ನಲ್ಲಿ ವಿದ್ಯುತ್ ಪ್ರವಹಿಸದೇ ಇದ್ದಲ್ಲಿ ಏರುಪೇರಾಗಿ ಸಮಸ್ಯೆ ಆಗಬಹುದಲ್ಲ ಎನ್ನುವ ಪ್ರಶ್ನೆ ಎದ್ದಿದೆ.

    ಗ್ರಿಡ್ ಎಂದರೇನು? ನಮ್ಮ ಸಾಮರ್ಥ್ಯ ಎಷ್ಟಿದೆ?
    ಒಂದು ಭೌಗೋಳಿಕ ಪ್ರದೇಶಕ್ಕೆ ವಿದ್ಯುತ್ ರವಾನಿಸಲು ಮತ್ತು ವಿತರಿಸಲು ಬಳಸುವ ವಿದ್ಯುತ್ ತಂತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಧನಗಳ ಜಾಲವನ್ನು ಗ್ರಿಡ್ ಎಂದು ಕರೆಯಲಾಗುತ್ತದೆ. ಭಾರತ 370 ಗಿಗಾವ್ಯಾಟ್ ಸಾಮರ್ಥ್ಯ ಪ್ರಸರಣ ಜಾಲವನ್ನು ಹೊಂದಿದ್ದು ಸಾಧಾರಣವಾಗಿ 150 ಗಿಗಾವ್ಯಾಟ್ ವಿದ್ಯುತ್ ಬೇಡಿಕೆ ಇರುತ್ತದೆ. ರಾಷ್ಟ್ರೀಯ ಗ್ರಿಡ್ ನಿಯಂತ್ರಿಸುವ ಪವರ್ ಸಿಸ್ಟಂ ಆಪರೇಷನ್ ಕಾರ್ಪೋರೇಷನ್ ಲಿಮಿಟೆಡ್ ವಿದ್ಯುತ್ ಬೇಡಿಕೆ- ಪೊರೈಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ.

    ಸಮಸ್ಯೆ ಆಗುತ್ತಾ?
    ಭಾರತದಲ್ಲಿ ಕೃಷಿ ಮತ್ತು ಕೈಗಾರಿಕೆಗೆ ಕ್ರಮವಾಗಿ ಶೇ.40 ಮತ್ತು ಶೇ.20ರಷ್ಟು ವಿದ್ಯುತ್ ಬಳಕೆಯಾಗುತ್ತದೆ. ವಾಣಿಜ್ಯ ವಿದ್ಯುತ್ ಬಳಕೆ ಶೇ.8ರಷ್ಟಿದೆ. ಪ್ರಧಾನಿ ಮೋದಿಯವರು 9 ನಿಮಿಷದ ಮಾತ್ರ ವಿದ್ಯುತ್ ದೀಪ ಆರಿಸಿ ಎಂದು ಹೇಳಿದ್ದಾರೆಯೇ ವಿನಾ: ಮನೆಯಲ್ಲಿರುವ ಬೇರೆ ಉಪಕರಣಗಳನ್ನು ಆಫ್ ಮಾಡಿ ಎಂದು ಹೇಳಿಲ್ಲ. ಹೀಗಿರುವಾಗ ವಿದ್ಯುತ್ ಪ್ರಸರಣದಲ್ಲಿ ಯಾವುದೇ ದೊಡ್ಡ ಸಮಸ್ಯೆ ಆಗಲಾರದು ಎನ್ನುವ ಅಭಿಪ್ರಾಯ ಅಧಿಕಾರ ವರ್ಗದಿಂದ ಬಂದಿದೆ.

    ವಿದ್ಯುತ್ ಬೇಡಿಕೆ ಎಷ್ಟು ಇಳಿಕೆಯಾಗಿದೆ?
    ಕೊರೊನಾ ವೈರಸ್ ನಿಯಂತ್ರಿಸಲು ದೇಶದಲ್ಲಿ 21 ದಿನಗಳ ಲಾಕ್‍ಡೌನ್ ಘೋಷಣೆಯಾಗಿದೆ. ಲಾಕ್‍ಡೌನ್ ನಿರ್ಧಾರದಿಂದಾಗಿ ಕಂಪನಿಗಳು, ಕೈಗಾರಿಕೆಗಳು, ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳು.. ಮುಚ್ಚಿವೆ. ಇದರಿಂದಾಗಿ ವಿದ್ಯುತ್ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ಸಂಬಂಧ ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿದ್ಯುತ್ ಸರಬರಾಜಿಗೆ ಯಾವುದೇ ಸಮಸ್ಯೆಯಿಲ್ಲ. ಲಾಕ್‍ಡೌನ್ ನಿಂದಾಗಿ ಈಗಾಗಲೇ ಶೇ.20 ರಷ್ಟು ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಗ್ರಿಡ್ ಗಳು ದಿನದ ಯಾವ ಸಮಯದಲ್ಲಿ ಬೇಡಿಕೆ ಜಾಸ್ತಿ/ ಕಡಿಮೆ ಇದೆ ಎನ್ನುವುದನ್ನು ನೋಡಿಕೊಂಡು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಏಪ್ರಿಲ್ 5 ರಂದು ಬೇಡಿಕೆ ಕಡಿಮೆ ಬಂದರೂ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.

    ವಿದ್ಯುತ್ ಇಲಾಖೆಯ ದಾಖಲೆಗಳ ಪ್ರಕಾರ ಈ ವರ್ಷದ ಏಪ್ರಿಲ್ 2 ರಂದು ಅತಿ ಹೆಚ್ಚು 1,25,817 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದರೆ ಕಳೆದ ವರ್ಷದ ಏಪ್ರಿಲ್ 2 ರಂದು 1,68,326 ಮೆಗಾವ್ಯಾಟ್ ಬೇಡಿಕೆ ಇತ್ತು.

    ಕರ್ನಾಟಕದಲ್ಲಿ ಸಮಸ್ಯೆ ಆಗುತ್ತಾ?
    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಎಂಡಿ ರಾಜೇಶ್, ಕೆಪಿಟಿಸಿಎಲ್ ನಲ್ಲಿ ಲೋಡ್ ಕಡಿಮೆ ಹಾಗೂ ಲೋಡ್ ಹೆಚ್ಚಳ ಮಾಡುವ ವ್ಯವಸ್ಥೆ ಇದೆ. ನಾಲ್ಕು ಸಾವಿರ ಮೆಗಾ ವ್ಯಾಟ್ ಕಡಿಮೆಯಾಗಬಹುದು. ಈ ಸಂಬಂಧ ನ್ಯಾಷನಲ್ ಗ್ರಿಡ್ ಜೊತೆ ಮಾತುಕತೆ ನಡೆಸಿದ್ದೇವೆ. ತಾಂತ್ರಿಕವಾಗಿ ಗುಣಮಟ್ಟದ ವ್ಯವಸ್ಥೆ ಇರುವುದರಿಂದ ಸಮಸ್ಯೆ ಆಗಲಾರದು. ಜನ ಮೇನ್ ಸ್ವಿಚ್ ಆಫ್ ಮಾಡದೇ ಕೇವಲ ವಿದ್ಯುತ್ ಸ್ವಿಚ್ ಆಫ್ ಮಾಡಿದರೆ ಸಾಕು ಎಂದು ಹೇಳಿದ್ದಾರೆ

    ರಾಜಕೀಯ ನಾಯಕರು ಹೇಳಿದ್ದು ಏನು?
    ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಪ್ರತಿಕ್ರಿಯಿಸಿ, ವಿದ್ಯುತ್ ಕ್ಷೇತ್ರದ ಅನುಭವದ ಪ್ರಕಾರ 9 ನಿಮಿಷಗಳ ಕಾಲ ವಿದ್ಯುತ್ ದೀಪ ಆರಿಸಿದರೆ ಗ್ರಿಡ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೀತಿ ಯಾವುದೇ ಸಮಸ್ಯೆ ಆಗದಂತೆ ನಿರ್ವಹಣೆ ಆಗಬಹುದು ಎಂದು ನಾನು ನಂಬಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಸೇನೆಯ ಸಂಜಯ್ ರಾವತ್, ಈ ಹಿಂದೆ ಜನತಾ ಕರ್ಫ್ಯೂ ದಿನ ಮೋದಿ ಅವರು ಚಪ್ಪಾಳೆ ತಟ್ಟಲು ಜನರಿಗೆ ಹೇಳಿದ್ದರು. ಆದರೆ ಅವರು ರಸ್ತೆಗಳಲ್ಲಿ ಕಿಕ್ಕಿರಿದು ಡ್ರಮ್‍ಗಳನ್ನು ಬಾರಿಸಿದ್ದರು. ಈಗ ಅವರು ತಮ್ಮ ಸ್ವಂತ ಮನೆಗಳನ್ನು ಸುಟ್ಟುಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಸರ್ ದೀಪಗಳನ್ನು ಬೆಳಗಿಸಿ ಆದರೆ ದಯವಿಟ್ಟು ಕೊರೊನಾ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಏನು ಮಾಡುತ್ತಿದೆ ಎಂದು ನಮಗೆ ತಿಳಿಸಿ ವ್ಯಂಗ್ಯವಾದ ಟ್ವೀಟ್ ಮಾಡಿದ್ದಾರೆ.

    ಮೋದಿ ಅಭಿಮಾನಿಗಳು ಹೇಳೋದು ಏನು?
    ಪ್ರಧಾನಿ ಮೋದಿಯವರು 9 ನಿಮಿಷ ವಿದ್ಯುತ್ ದೀಪ ಮಾತ್ರ ಆರಿಸಿ ಎಂದು ಹೇಳಿದ್ದಾರೆಯೇ ವಿನಾ: ನಿಮ್ಮ ಮನೆಯಲ್ಲಿರುವ ಫ್ರಿಡ್ಜ್, ಗ್ರೈಂಡರ್, ಇನ್ನಿತರ ವಿದ್ಯುತ್ ಉಪಕರಣಗಳನ್ನು ಆಫ್ ಮಾಡಿ ಎಂದು ಹೇಳಿಲ್ಲ. ದೀಪ ಆಫ್ ಮಾಡಬೇಕು ಎನ್ನುವುದು ಕಡ್ಡಾಯವಲ್ಲ. ಇಷ್ಟ ಇದ್ದವರು ಮಾಡುತ್ತಾರೆ. ಮೋದಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.