Tag: Swimming

  • ನಾಲೆಯಲ್ಲಿ ಈಜಲು ಹೋಗಿ ಕಣ್ಣೆದುರೇ ಕೊಚ್ಚಿ ಹೋದ ಯುವಕ

    ನಾಲೆಯಲ್ಲಿ ಈಜಲು ಹೋಗಿ ಕಣ್ಣೆದುರೇ ಕೊಚ್ಚಿ ಹೋದ ಯುವಕ

    – ಹಗ್ಗ ಕೊಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ

    ಚಿಕ್ಕಮಗಳೂರು: ಸ್ನೇಹಿತರೊಂದಿಗೆ ಸ್ನಾನಕ್ಕೆ ಹೋದ ಯುವಕ ನಾಲೆಯಲ್ಲಿ ಕೊಚ್ಚಿ ಹೋಗಿ ಸ್ನೇಹಿತರ ಕಣ್ಣೆದುರೇ ಸಾವಿಗೀಡಾಗಿರೋ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಬಳಿ ನಡೆದಿದೆ.

    ಮೃತನನ್ನ ವಿಶ್ವಾಸ್(22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ವಿಶ್ವಾಸ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿಶ್ವಾಸ್ ನೀರಿನಲ್ಲಿ ಮುಳುಗುವ ವೇಳೆ ಜೊತೆಗಿದ್ದ ಸ್ನೇಹಿತರು ಆತನನ್ನ ಬದುಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನ ರಕ್ಷಿಸಲು ನಾಲೆ ಮೇಲಿದ್ದ ಯುವಕರು ಆತನಿಗೆ ಹಗ್ಗ ಎಸೆಯಲು ಮುಂದಾಗಿದ್ದಾರೆ. ಆದರೆ ಅದೂ ಸಾಧ್ಯವಾಗಿಲ್ಲ. ಹರಿಯುತ್ತಿದ್ದ ನೀರಿನಲ್ಲಿ ವಿಶ್ವಾಸ್ ಕೊಚ್ಚಿಕೊಂಡು ಮುಂದಕ್ಕೆ ಹೋಗುತ್ತಿದ್ದ ಪರಿಣಾಮ ಆತನಿಗೆ ಸರಿಯಾಗಿ ಹಗ್ಗ ಕೊಡಲು ಸಾಧ್ಯವಾಗಿಲ್ಲ.

    ವಿಶ್ವಾಸ್ ಜೊತೆಗಿದ್ದ ಸ್ನೇಹಿತರಿಗೆ ಕೂಡ ಸರಿಯಾಗಿ ಈಜು ಬಾರದ ಕಾರಣ ಅವರು ನೀರಿಗಿಳಿಯಲು ಭಯಗೊಂಡು, ವಿಶ್ವಾಸ್ ಗೆ ಹಗ್ಗ ಕೊಡಲು ಪ್ರಯತ್ನಿಸಿದ್ದಾರೆ. ನಾಲೆ ಮೇಲಿಂದ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ವಿಶ್ವಾಸ್ ಜೊತೆಯೇ ಹಗ್ಗ ಎಸೆಯಲು ಪ್ರಯತ್ನಿಸಿದರು ಸಾಧ್ಯವಾಗದ ಪರಿಣಾಮ ವಿಶ್ವಾಸ್ ಸ್ನೇಹಿತರ ಕಣ್ಣೆದುರೇ ಕೊನೆಯುಸಿರೆಳೆದಿದ್ದಾನೆ.

    ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತರೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಯುವಕನ ಮೃತದೇಹವನ್ನ ಮೇಲಕ್ಕೆತ್ತಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರೀಕೆರೆಯ ಹಳಿಯೂರು ಗೇಟ್, ದೊರನಾಳು ಸೇರಿದಂತೆ ತಾಲೂಕಿನಲ್ಲಿ ಅಲ್ಲಲ್ಲೇ ಈ ರೀತಿಯ ದುರ್ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ.

    ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಾಲ್ಕೈದು ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ ಗ್ರಾಮಗಳ ಅಂಚಿನಲ್ಲಿ ಹಾದುಹೋಗಿರುವ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಗೆ ಗ್ರಾಮದ ಸಮೀಪ ಬೇಲಿ ನಿರ್ಮಿಸುವಂತೆ ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  • ಈಜಲು ಭೀಮಾ ನದಿಗಿಳಿದ ನಾಲ್ವರು ನೀರುಪಾಲು

    ಈಜಲು ಭೀಮಾ ನದಿಗಿಳಿದ ನಾಲ್ವರು ನೀರುಪಾಲು

    ಯಾದಗಿರಿ: ಭೀಮಾ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಹುಡುಗರು ನೀರು ಪಾಲಾದ ಘಟನೆ ಯಾದಗಿರಿ ನಗರದ ಹೊರವಲಯದ ಗುರುಸಣಗಿ ಬ್ರಿಡ್ಜ್ ಬಳಿ ಸಂಜೆ ನಡೆದಿದೆ.

    ನಗರದ ಹೊರವಲಯದ ಗುರಸಣಗಿ ಬ್ರಿಡ್ಜ್ ಬಳಿಯ ಭೀಮಾ ನದಿಗೆ ಈಜಲು ಐವರು ಸ್ನೇಹಿತರು ತೆರಳಿದ್ದಾರೆ. ಇದರಲ್ಲಿ ಅಬ್ದುಲ್‍ನನ್ನು ದಡದಲ್ಲಿ ನಿಲ್ಲಿಸಿ, ಯಾದಗಿರಿಯ ಅಮಾನ್ (16), ಅಯಾನ್ (16), ರೆಹಮಾನ್ (16), ಕಲಬುರಗಿ ಮೂಲದ ರೆಹಮಾನ್ (15 ) ನಾಲ್ವರು  ನದಿಗೆ ಈಜಲು ಇಳಿದಿದ್ದಾರೆ. ಈ ವೇಳೆ ನೀರಿನ ರಭಸ ಜಾಸ್ತಿಯಾದ ಪರಿಣಾಮ ನಾಲ್ವರು ನೀರುಪಾಲಾಗಿದ್ದಾರೆ.

    ಸುದ್ದಿ ತಿಳಿದು ಸ್ಥಳಕ್ಕೆ ಡಿಸಿ ರಾಗಪ್ರಿಯ, ಎಸ್‍ಪಿ ಋಷಿಕೇಶ್ ಸೋನವಣೆ, ಎಐಡಿಸಿ ಪ್ರಕಾಶ್ ರಜಪೂತ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸಂಜೆ ಹೊತ್ತಿನಲ್ಲೆ ಅಗ್ನಿಶಾಮಕ ದಳದಿಂದ ಯುವಕರಿಗಾಗಿ ಶೋಧ ಕಾರ್ಯ ನಡೆಯಿತು. ಆದರೆ ಕತ್ತಲು ಹೆಚ್ಚಾದ ಹಿನ್ನೆಲೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಬೆಳಿಗ್ಗೆಯಿಂದ ಮತ್ತೆ ವಿಶೇಷ ಬೋಟ್ ಮತ್ತು ನುರಿತ ಈಜುಗಾರ ಮೂಲಕ ಶೋಧ ಕಾರ್ಯಾಚರಣೆ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

  • ನದಿಯಲ್ಲಿ ಈಜಲು ಹೋದ ಬೆಂಗಳೂರಿನ ಯುವಕ ನೀರುಪಾಲು

    ನದಿಯಲ್ಲಿ ಈಜಲು ಹೋದ ಬೆಂಗಳೂರಿನ ಯುವಕ ನೀರುಪಾಲು

    ಮಂಗಳೂರು: ಈಜಾಡಲು ನದಿ ನೀರಿಗಿಳಿದ ಮೂವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಕರ್ನಿರೆಯ ಶಾಂಭವಿ ನದಿಯಲ್ಲಿ ನಡೆದಿದೆ.

    ಬೆಂಗಳೂರು ನಿವಾಸಿ 32 ವರ್ಷದ ಅನಿಲ್ ಮೃತಪಟ್ಟಿರುವ ದುರ್ದೈವಿ. 7 ಮಂದಿ ಯುವಕರು ಬೆಂಗಳೂರಿನಿಂದ ಆಗಮಿಸಿದ್ದರು. ಕರ್ನಿರೆ ಬಳಿಯ ಶಾಂಭವಿ ನದಿಯ ಕಡೆಗೆ ಬಂದಿದ್ದು, ನದಿ ನೀರಿನಲ್ಲಿ ಈಜಾಡಲು ಮೂವರೂ ನೀರಿಗಿಳಿದ್ದಿದ್ದರು. ಈ ವೇಳೆ ಈಜಾಡುತ್ತಿದ್ದ ಮೂವರು ನೀರಿನ ಸೆಳೆತಕ್ಕೆ ಸಿಕ್ಕಿದ್ದು, ನೀರು ಅವರನ್ನು ಕೊಚ್ಚಿಕೊಂಡು ಹೋಗಿತ್ತು. ತಕ್ಷಣ ಅಲ್ಲೇ ಇದ್ದ ಸ್ಥಳೀಯರು ನೀರಿಗಿಳಿದು ಇಬ್ಬರನ್ನು ರಕ್ಷಿಸಿದ್ದಾರೆ.

    ಕೊನೆಯದಾಗಿ ಅನಿಲ್‍ನನ್ನು ರಕ್ಷಿಸುವಲ್ಲಿ ಪ್ರಯತ್ನಪಟ್ಟರೂ ಆತ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಮೂಲ್ಕಿ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

    ರಾಯಚೂರು: ಕೂಲಿ ಕೆಲಸಕ್ಕೆ ಹೋದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗುಡಗಲದಿನ್ನಿ ಗ್ರಾಮದ ಬಳಿ ನಡದಿದೆ.

    ಮಸ್ಕಿ ತಾಲೂಕಿನ ಬೋಗಾಪುರ ಗ್ರಾಮದ ಕೇಶವ (15) ಸಾವನ್ನಪ್ಪಿರುವ ಬಾಲಕ. ಕೂಲಿ ಕೆಲಸ ಮಾಡಲು ಹೋದಾಗ ಕೆರೆಯಲ್ಲಿ ಈಜಲು ಹೋಗಿದ್ದಾನೆ. ಈ ವೇಳೆ ಕೆರೆಯಲ್ಲಿ ಕೆಸರಿದ್ದ ಕಾರಣ ಈಜಲು ಆಗದೇ ಬಾಲಕ ಸಾವನ್ನಪ್ಪಿದ್ದಾನೆ.

    ಶಾಲೆ ಇಲ್ಲದ ಹಿನ್ನೆಲೆ ಬಾಲಕ ಕೃಷಿ ಕೂಲಿ ಕೆಲಸಕ್ಕೆ ತೆರಳಿದ್ದ. ಎರಡು ದಿನಗಳಿಂದ ಶವಕ್ಕಾಗಿ ಹುಡುಕಾಟ ನಡೆದಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರವಾಗಿ ಹುಡುಕಾಟ ನಡೆಸಿ ಶವ ಪತ್ತೆ ಹಚ್ಚಿದ್ದಾರೆ.

    ತುರವಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

  • ತುಂಬಿ ಹರಿಯೋ ವರದಾ ನದಿಯ ಸೇತುವೆಯಿಂದ ಜಿಗಿದು ಯುವಕರ ಹುಚ್ಚಾಟ

    ತುಂಬಿ ಹರಿಯೋ ವರದಾ ನದಿಯ ಸೇತುವೆಯಿಂದ ಜಿಗಿದು ಯುವಕರ ಹುಚ್ಚಾಟ

    ಹಾವೇರಿ: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಮಳೆರಾಯ ಎರಡು ದಿನಗಳಿಂದ ಕೊಂಚ ವಿಶ್ರಾಂತಿ ನೀಡಿದ್ದಾನೆ. ಆದರೆ ನದಿಗೆ ಹರಿದು ಬರುತ್ತಿರುವ ನೀರು ಮಾತ್ರ ಕಡಿಮೆಯಾಗಿಲ್ಲ. ಸೇತುವೆ ಮೇಲಿಂದ ತುಂಬಿ ಹರಿಯೋ ನದಿ ನೀರಲ್ಲಿ ಜಿಗಿದು ಈಜಾಡುವ ಮೂಲಕ ಯುವಕರು ಹುಚ್ಚಾಟ ಪ್ರದರ್ಶಿಸಿದ್ದಾರೆ.

    ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ವರದಾ ನದಿಯಲ್ಲಿ ಘಟನೆ ನಡೆದಿದ್ದು, ಕಳೆದ ಒಂದು ವಾರದಿಂದ ವರದಾ ನದಿ ಭರಪೂರ ತುಂಬಿ ಹರಿಯುತ್ತಿದೆ. ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರು ಯುವಕರು ಸೇತುವೆ ಮೇಲಿನಿಂದ ಜಿಗಿದು ಈಜಾಡುವ ಮೂಲಕ ಹುಚ್ಚಾಟ ಮೆರಿದ್ದಾರೆ. ಜೀವದ ಹಂಗು ಲೆಕ್ಕಿಸದೆ ಸೇತುವೆ ಮೇಲಿಂದ ಜಿಗಿದು, ಭರ್ಜರಿಯಾಗಿ ಹರಿಯುತ್ತಿರುವ ವರದಾ ನದಿಯಲ್ಲಿ ಈಜಾಡಿದ್ದಾರೆ.

    ಸೇತುವೆ ಮೇಲಿಂದ ಜಿಗಿದು ಈಜಿ ಯುವಕರು ದಡ ಸೇರಿದ್ದಾರೆ. ಇನ್ನೂ ಕೆಲ ಯುವಕರು ಸೇತುವೆ ಮೇಲೆ ನಿಂತು ಚೀರಾಡಿ, ಕೂಗಾಡಿ ನದಿಗೆ ಹಾರಿದ ಯುವಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಸ್ವಲ್ಪ ಯಾಮಾರಿದರೂ ಯುವಕರು ನೀರು ಪಾಲಾಗುತ್ತಿದ್ದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

  • ವಿಶ್ವ ಸಾಗರ ದಿನ- ಬಿಕಿನಿ ತೊಟ್ಟು ತಿಮಿಂಗಿಲದ ಜೊತೆ ಈಜಿದ ಕತ್ರಿನಾ

    ವಿಶ್ವ ಸಾಗರ ದಿನ- ಬಿಕಿನಿ ತೊಟ್ಟು ತಿಮಿಂಗಿಲದ ಜೊತೆ ಈಜಿದ ಕತ್ರಿನಾ

    – ಸಾಗರದೊಳಗೆ ವಿಹರಿಸಿದ ಸೋನಾಕ್ಷಿ

    ಮುಂಬೈ: ಸೋಮವಾರ ಇದ್ದ ವಿಶ್ವ ಸಾಗರ ದಿನದ ಅಂಗವಾಗಿ ಬಿಕಿನಿ ತೊಟ್ಟು ಬಾಲಿವುಡ್ ನಟಿ ಕತ್ರಿನಾ ಕೈಫ್ ತಿಮಿಂಗಿಲದ ಜೊತೆ ಈಜಿದ ವಿಡಿಯೋ ಸಖತ್ ವೈರಲ್ ಆಗಿದೆ.

    ಜೂನ್ 8ರಂದು ನಡೆದ ವಿಶ್ವ ಸಾಗರದ ದಿನದ ಅಂಗವಾಗಿ ತಾವು ತಿಮಿಂಗಿಲದ ಜೊತೆಗೆ ಈಜಿದ ಹಿಂದಿನ ಒಂದು ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಕತ್ರಿನಾ ಕೈಫ್ ಅವರು ಹಂಚಿಕೊಂಡಿದ್ದಾರೆ. ಇವರ ಜೊತೆ ನಟಿ ಸೋನಾಕ್ಷಿ ಸಿನ್ಹಾ ಕೂಡ ಸಾಗರದ ಒಳಗೆ ವಿಹರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/CBLDwE-Bhez/?utm_source=ig_embed

    ಬಿಳಿ ಬಣ್ಣದ ಬಿಕಿನಿ ತೊಟ್ಟು 2016 ಫಿಲಿಪೈನ್ ಬೀಚಿನಲ್ಲಿ ನಟಿ ಕತ್ರಿನಾ ಕೈಫ್ ತಿಮಿಂಗಿಲದ ಜೊತೆ ಈಜಿದ್ದಾರೆ. ಈ ಹಳೆಯ ವಿಡಿಯೋವನ್ನು ಕತ್ರಿನಾ ವಿಶ್ವ ಸಾಗರ ದಿನದ ಅಂಗವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನನ್ನ ಅಂತ್ಯಂತ ನಂಬಲಾಗದ ಸ್ನೇಹಿತನೊಂದಿಗೆ ಸಾಗರದಲ್ಲಿ ಒಂದು ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ. ಕತ್ರಿನಾ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://www.instagram.com/p/CBLNv4MA6c-/

    ಇದರ ಜೊತೆಗೆ ವಿಶ್ವ ಸಾಗರ ದಿನದ ಅಂಗವಾಗಿ ನಟಿ ಸೋನಾಕ್ಷಿ ಸಿನ್ಹಾ ಕೂಡ ಸಾಗರದ ಒಳಗೆ ವಿಹಾರ ಮಾಡಿದ್ದು, ನಮ್ಮ ದೈನಂದಿನ ಜೀವನದಲ್ಲಿ ಸಾಗರದ ಪ್ರಮುಖ ಪಾತ್ರವನ್ನು ನೆನಪಿಸಿಕೊಂಡು ಈ ಸಾಗರದ ದಿನವನ್ನು ಆಚರಿಸಬೇಕು. ಸಾಗರ ನಮ್ಮ ಭೂಮಿಯ ಶ್ವಾಸಕೋಶವಿದ್ದಂತೆ. ಅದು ನಮಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತವೆ. ಸಮುದ್ರದ ಸೌಂದರ್ಯ ಮತ್ತು ಸಂಪತ್ತನ್ನು ಒಟ್ಟಿಗೆ ಆಚರಿಸುವ ದಿನವಿದು ಎಂದು ಸೋನಾಕ್ಷಿ ಬರೆದುಕೊಂಡಿದ್ದಾರೆ.

    https://www.instagram.com/p/CBKlNLHpcT5/?utm_source=ig_embed

    ಈ ಇಬ್ಬರ ಜೊತೆಗೆ ಬಾಲಿವುಡ್‍ನ ಮತ್ತೋರ್ವ ನಟಿ ಭೂಮಿ ಪೆಡ್ನೇಕರ್ ಅವರು ಕೂಡ ವಿಶ್ವ ಸಾಗರ ದಿನದ ಅಂಗವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಭೂಮಿ ಸಮುದ್ರದ ದಡದಲ್ಲಿ ನಿಂತು ಫೋಟೋಶೂಟ್ ಮಾಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ನಾನು ಸಾಗರದಲ್ಲಿ ಇರುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜೊತೆಗೆ ಅಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಳ್ಳುವುದನ್ನು ತಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದು ವಿಶ್ವ ಸಾಗರ ದಿನ ಎಂಬ ಹ್ಯಾಶ್‍ಟ್ಯಾಗ್ ಹಾಕಿಕೊಂಡಿದ್ದಾರೆ.

  • ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    ಈಜಲು ನದಿಗೆ ಧುಮುಕಿದ ಯುವಕ ನಾಪತ್ತೆ

    – ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ

    ಯಾದಗಿರಿ: ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರ ಪೈಕಿ ಓರ್ವ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಶೇಳ್ಳಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಚಂದಣ್ಣ ಗೊಂಡಿಕಾರ (35) ನಾಪತ್ತೆಯಾಗಿರುವ ಯುವಕ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಇಬ್ಬರು ಸ್ನೇಹಿತರೊಂದಿಗೆ ಚಂದಣ್ಣ ಗ್ರಾಮದ ಹತ್ತಿರದ ಕೃಷ್ಣಾನದಿಗೆ ಈಜಲು ತೆರಳಿದ್ದ. ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದಾರೆ. ಚಂದಣ್ಣ ನದಿಯಿಂದ ಹೊರ ಬರದೆ ನಾಪತ್ತೆಯಾಗಿದ್ದಾನೆ.

    ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ನದಿಯಲ್ಲಿ ಮೀನಿನ ಬಲೆಗೆ ಸಿಲುಕಿ ಚಂದ್ರಣ್ಣ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ ಚಂದ್ರಣ್ಣನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಈ ಪ್ರಕರಣ ನಡೆದಿದೆ.

  • ಮೊನ್ನೆಯಷ್ಟೇ ಬರ್ತ್‍ಡೇ ಆಚರಿಸಿಕೊಂಡಿದ್ದ ಯುವಕ ಈಜಲು ಹೋಗಿ ಸಾವು

    ಮೊನ್ನೆಯಷ್ಟೇ ಬರ್ತ್‍ಡೇ ಆಚರಿಸಿಕೊಂಡಿದ್ದ ಯುವಕ ಈಜಲು ಹೋಗಿ ಸಾವು

    ಚಿಕ್ಕಮಗಳೂರು: ಹೇಮಾವತಿ ನದಿಯಲ್ಲಿ ಈಜಲು ಹೋಗಿ 27 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಬಳಿಯ ಹಾಲೂಕು ಕೂಡಿಗೆ ಬಳಿ ನಡೆದಿದೆ.

    ಮೃತ ಯುವಕ 27 ವರ್ಷದ ಗವಿರಾಜ್, ಅಂಡುಗುಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲ್ವರು ಸ್ನೇಹಿತರು ಗ್ರಾಮದ ಬಳಿ ಹಾದು ಹೋಗಿರೋ ಹೇಮಾವತಿ ನದಿಯಲ್ಲಿ ಈಜಲು ಹೋಗಿದ್ದರು. ಆದರೆ ಯಾರಿಗೂ ಈಜು ಬರುತ್ತಿರಲಿಲ್ಲ. ಈ ವೇಳೆ ಗವಿರಾಜ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜೊತೆಗಿದ್ದ ಸ್ನೇಹಿತರು ಆತನನ್ನು ನೀರಿನಿಂದ ಎಳೆದುಕೊಳ್ಳಲು ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

    ಮೃತ ಗವಿರಾಜ್ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಮೃತನ ಮೃತದೇಹಕ್ಕಾಗಿ ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದು, ಐದು ಗಂಟೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಮೃತ ಗವಿರಾಜ್ ಮಧ್ಯಾಹ್ನ ಮನೆಗೆ ಮಟನ್ ತೆಗೆದುಕೊಂಡು ಹೋಗಿ ಕೊಟ್ಟಿದ್ದ. ಅಲ್ಲದೇ ಸ್ನೇಹಿತರ ಜೊತೆ ಈಜಲು ಹೋಗುವ ಮುನ್ನ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಗೋಣಿಬೀಡು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇನ್ನು ತಾಲೂಕಿನ ಬಾಳೂರು ಬಳಿ ಟ್ರ್ಯಾಕ್ಟರ್ ಪಲ್ಪಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಟರ್ ಸಪ್ಲೈ ಟ್ಯಾಂಕರ್ ಬಾಳೂರಿನಿಂದ ಕೊಟ್ಟಿಗೆಹಾರದ ಕಡೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಳೆ ಇದ್ದ ಕಾರಣ ಟ್ರ್ಯಾಕ್ಟರ್ ಬ್ರೇಕ್ ಹಿಡಿದಿಲ್ಲ. ಹೀಗಾಗಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಆದರೆ, ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಈಜಲು ತೆರಳಿದ್ದ ಯುವ ಎಂಜಿನಿಯರ್ ನೀರುಪಾಲು

    ಈಜಲು ತೆರಳಿದ್ದ ಯುವ ಎಂಜಿನಿಯರ್ ನೀರುಪಾಲು

    ರಾಯಚೂರು: ದೇವದುರ್ಗ ತಾಲೂಕಿನ ಮೂಡಲಗುಡ್ಡ ಗ್ರಾಮದ ಬಳಿ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಈಜಲು ಹೋಗಿ ಯುವ ಎಂಜಿನಿಯರ್ ಸಾವನ್ನಪ್ಪಿದ್ದಾರೆ.

    23 ವರ್ಷದ ದಯಾನಂದ ಮೃತ ಎಂಜಿನಿಯರ್. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಕರಪುರ ಗ್ರಾಮದ ನಿವಾಸಿಯಾಗಿರುವ ದಯಾನಂದ, ಡಿ.ಎ.ಉಪ್ಪಾರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

    ಎಸ್.ಆರ್. ಸಂಪರ್ಕ ರಸ್ತೆ ಸರ್ವೆ ಕಾರ್ಯದಲ್ಲಿ ತೊಡಗಿದ್ದ ದಯಾನಂದ ಅವರು ಈಜಲು ಕಾಲುವೆಗೆ ಇಳಿದಾಗ ಕೊಚ್ಚಿಕೊಂಡು ಹೋಗಿದ್ದಾರೆ. ಕಾಲುವೆ ದಡದಲ್ಲಿ ದಯಾನಂದಗೆ ಸೇರಿದ ಶೂ, ಬಟ್ಟೆ ಪತ್ತೆಯಾಗಿವೆ. ಅಗ್ನಿಶಾಮಕ ದಳ, ಪೊಲೀಸರು ಹಾಗೂ ಮೀನುಗಾರರಿಂದ ಕಾಲುವೆಯಲ್ಲಿ ಶೋಧಕಾರ್ಯ ಮುಂದುವರಿದಿದೆ.

    ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ನಾಪತ್ತೆಯಾಗಿರುವ ಎಂಜಿನಿಯರ್ ದೇಹ ಇನ್ನೂ ಪತ್ತೆಯಾಗಿಲ್ಲ. ಘಟನೆ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈಜಲು ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಈಜಲು ತೆರಳಿದ್ದ ವಿದ್ಯಾರ್ಥಿ ನೀರು ಪಾಲು

    ಚಾಮರಾಜನಗರ: ಕೆರೆಯಲ್ಲಿ ಈಜಲು ಹೋಗಿ ಮುಳಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ.

    ಗುಂಡ್ಲುಪೇಟೆ ತಾಲೂಕಿನ ಅರೇಪುರ ಗ್ರಾಮದ ಕೊರೆಯ ಬಳಿ ಇರುವ ಕೆರೆಯಲ್ಲಿ ಘಟನೆ ನಡೆದಿದ್ದು, ಬೇಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಕಿಲ್.ಎನ್ (17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಕಾಲೇಜು ವತಿಯಿಂದ ಅರೇಪುರ ಗ್ರಾಮದಲ್ಲಿ ಎನ್‍ಎಸ್‍ಎಸ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಂದು ಮಧ್ಯಾಹ್ನ ಊಟ ಮಾಡಿಕೊಂಡು ಪಕ್ಕದಲ್ಲಿಯೇ ಇದ್ದ ಕೆರೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳ ಜೊತೆಯಲ್ಲಿ ತೆರಳಿ ಕೆರೆಗೆ ಇಳಿದಿದ್ದರು. ಅಕಿಲ್ ಈಜು ಬಾರದೆ ಕೆರೆಯಲ್ಲಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭೇಟಿ ನೀಡಿ ಶವವನ್ನ ಹೊರತೆಗೆದಿದ್ದಾರೆ. ಈ ಸಂಬಂಧ ಬೇಗೂರು ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.