Tag: Swimming

  • ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

    ರಾಜೇಶ್ ಕುಮಾರ್(26) ಮತ್ತು ಮಧುಕಿರಣ್ (25) ಮೃತರು. ಇವರು ಹೈದ್ರಾಬಾದ್ ಮೂಲದವರಾಗಿದ್ದು, ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಂತರ ಮೃತ ದೇಹ ಪತ್ತೆಯಾಗಿವೆ. ಪ್ರವಾಸಕ್ಕೆ ಬಂದಿರುವ  ನಾಲ್ವರು ಯುವಕರು ಸಾಣಾಪುರ ಕೆರೆ ದಡದ ಮೇಲೆ ಸ್ನಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ನಾಲ್ವರ ಪೈಕಿ ಕೇವಲ ಒಬ್ಬರಿಗೆ ಮಾತ್ರ ಈಜು ಬರುತ್ತಿತ್ತು. ಅಲೋಕ್ ಕುಮಾರ್ ಮಾತ್ರ ಕೆರೆಯಲ್ಲಿ ಈಜಲು ಹೋಗಿದ್ದ ಇನ್ನೂಳಿದ ಮೂವರು ಕೆರೆ ದಡದ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು. ಇನ್ನೂ ಅಲೋಕ್ ಕುಮಾರ್ ಸ್ವೀಮೀಂಗ್ ಮುಗಿಸಿಕೊಂಡು ಮೇಲೆ ಬಂದಿದಾನೆ. ಈ ವೇಳೆ ಇನ್ನೂ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಮೂವರಲ್ಲಿ ನರಸಿಂಹ ಎಂಬಾತ ಕಾಲು ಜಾರಿ ಕೆರಯಲ್ಲಿ ಬಿದ್ದಿದ್ದಾನೆ. ನರಸಿಂಹ ಕೆರೆಯಲ್ಲಿ ಬಿಳುತ್ತಿದ್ದಂತೆ ಆತನನ್ನು ಕಾಪಡಲು ಈಜು ಬಾರದ ರಾಜೇಶ್ ಮತ್ತು ಮಧು ಕಿರಣ ಕೆರೆಗೆ ಹಾರಿದ್ದಾರೆ. ಇದನ್ನು ನೋಡಿದ ಅಲೋಕ್ ಮೂವರನ್ನು ಕಾಪಾಡಲು ಆತನು ಕೆರೆಗೆ ಹಾರಿದ್ದಾನೆ ಆದರೆ ವಿಧಿಯಾಟ ಕಾಲು ಜಾರಿ ಬಿದ್ದ ನರಸಿಂಗ್ ನನ್ನು ಮಾತ್ರ ಅಲೋಕ್ ಕಾಪಾಡಲು ಸಾಧ್ಯವಾಯಿತು ನರಸಿಂಗ್‍ನನ್ನು ದಡೆಕ್ಕೆ ತಂದು ಬಿಡುವಷ್ಟರಲ್ಲಿ ತನ್ನ ಇನ್ನಿಬರು ಸ್ನೇಹಿತರು ನೀರುಪಾಲಾಗಿದ್ದರು. ಇನ್ನೂ ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:  ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ

  • ಈಜಲು ಹೋದ ಯುವಕ ನೀರು ಪಾಲು

    ಈಜಲು ಹೋದ ಯುವಕ ನೀರು ಪಾಲು

    ಮಂಡ್ಯ: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್‍ನಲ್ಲಿ ಜರುಗಿದೆ.

    ಬೆಂಗಳೂರು ಮೂಲದ ಯುವಕ ವಿಶಾಲ್ ವರ್ಗೀಸ್ ಜಾರ್ಜ್ (24) ಮೃತ ಯುವಕ. ವಿಶಾಲ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ತನ್ನ ನಾಲ್ವರು ಸ್ನೇಹಿತರೊಂದಿಗೆ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಪ್ರವಾಸಕ್ಕೆಂದು ಬಂದಿದ್ದಾನೆ. ಈ ಸಂದರ್ಭದಲ್ಲಿ ಮಳವಳ್ಳಿ ಸಮೀಪದ ಗಾಣಾಳು ಫಾಲ್ಸ್‍ಗೆ ಬಂದಿದ್ದಾರೆ.

    ಈ ವೇಳೆ ವಿಶಾಲ್ ಹಾಗೂ ಇತರ ಸ್ನೇಹಿತರು ಈಜಲು ಮುಂದಾಗಿದ್ದಾರೆ. ಆಗ ಈಜಲು ಸಾಧ್ಯವಾಗದೆ ವಿಶಾಲ್ ನೀರಿನಲ್ಲಿ ಮುಳುಗಿದ್ದಾರೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತರು ಕಾಪಾಡುವಷ್ಟರಲ್ಲಿ ವಿಶಾಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪೊಲೀಸಪ್ಪನ ಕೈ ಕಚ್ಚಿದ ಮಹಿಳೆ

  • ಈಜು ಕಲಿಯಲು ಹೋಗಿದ್ದ ಬಾಲಕ, ಯುವಕ ನೀರು ಪಾಲು

    ಈಜು ಕಲಿಯಲು ಹೋಗಿದ್ದ ಬಾಲಕ, ಯುವಕ ನೀರು ಪಾಲು

    ಚಿಕ್ಕೋಡಿ/ಬೆಳಗಾವಿ: ಈಜು ಕಲಿಯಲು ಹೋಗಿ ಬಾಲಕ ಹಾಗೂ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ನಾವಿ ತೋಟದಲ್ಲಿ ನಡೆದಿದೆ.

    ಮಹಾಂತೇಶ ಶ್ರೀಕಾಂತ ನಾವಿ(25) ಹಾಗೂ ಶ್ರೀಶೈಲ ಬಸವರಾಜ್ ನಾವಲಗೇರ(10) ಮೃತ ದುರ್ದೈವಿಗಳು. ಇಂದು ಮಧ್ಯಾಹ್ನ ಈಜು ಕಲಿಯಲು ಬಾವಿಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕನನ್ನು ರಕ್ಷಿಸಲು ಹೋಗಿ ಯುವಕ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ, ಬಾವಿಯಿಂದ ಮೃತ ಬಾಲಕನ ಶವ ಹೊರಕ್ಕೆ ತೆಗೆದು, ಬಳಿಕ ಯುವಕನ ಶವವನ್ನ ಹೊರತೆಗೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಾಡಿ ಯುವಕನ ಹುಚ್ಚಾಟ

    ಹಾವೇರಿ: ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದರೂ ಕೂಡ ಕಾರವಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ವರದಾ ನದಿಯ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಈ ನಡುವೆ ಭರಪೂರ ತುಂಬಿ ಹರಿಯುತ್ತಿರುವ ವರದಾ ನದಿ ನೀರಿನಲ್ಲಿ ಯುವಕನೋರ್ವ ಈಜಾಡಿ ಹುಚ್ಚಾಟ ಪ್ರದರ್ಶಿಸಿದ್ದಾನೆ.

    ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ವರದಾ ನದಿಯ ಬ್ರಿಡ್ಜ್ ಮೇಲಿನಿಂದ ಯುವಕನೋರ್ವ ಜಿಗಿದು ಭರಪೂರ ಹರಿಯೋ ನೀರಿನಲ್ಲಿ ಈಜಾಡಿ ಹುಚ್ಚಾಟ ಮೆರೆದಿದ್ದಾನೆ. ಸ್ಥಳೀಯರಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಕೂಡ ಯುವಕರ ಈ ವರ್ತನೆ ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವರದಾ ನದಿ ಪ್ರವಾಹದಲ್ಲಿ ವಾನರಸೇನೆ ಸಿಲುಕಿ ಪರದಾಟ

    ಯುವಕ ನದಿಯಲ್ಲಿ ಈಜಾಡುತ್ತಿರುವ ವೀಡಿಯೋ ಮಾಡಿರುವ ಸ್ಥಳೀಯರು ಸಾಮಾಜಿಕ ಜಾಲತಾನದಲ್ಲಿ ಹರಿಬಿಟ್ಟಿದ್ದಾರೆ. ಬ್ರಿಡ್ಜ್ ಮೇಲಿನಿಂದ ಜಿಗಿದು ಈಜಿಕೊಂಡು ಬಂದ ಯುವಕ ಕೊನೆಯಲ್ಲಿ ಧೀರೇಂದ್ರ ಮಠದ ಹತ್ತಿರ ದಡ ಸೇರಿದ್ದಾನೆ. ನೀರಿನ ಸೆಳೆತ ಹೆಚ್ಚಾಗಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯ ಬಗ್ಗೆ ಜಿಲ್ಲಾಡಳಿತ ಸ್ಥಳೀಯ ಯುವಕರಲ್ಲಿ ಹಲವು ಬಾರಿ ಎಚ್ಚರಿಕೆ ನೀಡಿದೆ ಆದರು ಯುವಕರು ಮಾತ್ರ ತಮ್ಮ ಹುಚ್ಚಾಟ ಕೊನೆಗೊಳಿಸುತ್ತಿಲ್ಲ.

  • ಈಜಲು ಹೋಗಿದ್ದ 4 ಮಕ್ಕಳು ನೀರುಪಾಲು

    ಈಜಲು ಹೋಗಿದ್ದ 4 ಮಕ್ಕಳು ನೀರುಪಾಲು

    ವಿಜಯಪುರ: ಈಜಲು ಹೋಗಿದ್ದ ನಾಲ್ಕು ಮಕ್ಕಳು ಭೀಮಾ ನದಿಯಲ್ಲಿ ಕೊಚ್ಚಿಹೋದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ದಕ್ಷಿಣ ಸೋಲಾಪುರ ತಾಲೂಕಿನ ಲವಗಿ ಗ್ರಾಮದ ಬಳಿ ನಡೆದಿದೆ.

    ನಿನ್ನೆ ಸಂಜೆ ಘಟನೆ ನಡೆದಿದ್ದು, ನದಿಯಲ್ಲಿ ಕೊಚ್ಚಿ ಹೋದ ಮಕ್ಕಳ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಲವಗಿ ಗ್ರಾಮದ ಶಿವಾನಂದ ಪಾರ್ಶೆಟ್ಟಿ ಅವರ ಮಕ್ಕಳಾದ ಆರತಿ(13), ವಿಠ್ಠಲ(10) ಹಾಗೂ ಶಿವಾಜಿ ತಾನವಡೆ ಅವರ ಮಕ್ಕಳಾದ ಸಮೀಕ್ಷಾ(14), ಅರ್ಪಿತಾ(13) ನೀರುಪಾಲಾದ ಮಕ್ಕಳು. ಇದನ್ನೂ ಓದಿ: ಮಳೆ ಬರದಿದ್ರೂ ಭಟ್ಕಳದಲ್ಲಿ ಮುಳಗಡೆಯಾಯ್ತು ಇಡೀ ಗ್ರಾಮ

    ಸದ್ಯ ಆರತಿ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಮೂವರಿಗಾಗಿ ಹುಡುಕಾಟ ಮುಂದುವರೆದಿದೆ. ಕುಟುಂಬಸ್ಥರು ಮನೆ ಕೆಲಸದಲ್ಲಿ ತೊಡಗಿದ್ದಾಗ ಮಕ್ಕಳು ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ಮಂದ್ರೂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರುಪಾಲು

    ಸ್ನೇಹಿತರೊಂದಿಗೆ ಈಜಲು ಹೋದ ಬಾಲಕ ನೀರುಪಾಲು

    ಚಿಕ್ಕಬಳ್ಳಾಪುರ: ಗೆಳೆಯರ ಜೊತೆ ಸೇರಿ ಕೆರೆಯಲ್ಲಿ ಈಜಲು ಹೋದ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ನಡೆದಿದೆ.

    30ನೇ ವಾರ್ಡಿನ ಅಂಬೇಡ್ಕರ್ ನಗರದ ನಿವಾಸಿಗಳಾದ ಮುನಿರಾಜು, ವೆಂಕಟಲಕ್ಷ್ಮಮ್ಮ ದಂಪತಿಯ ಪುತ್ರ ವಿಜಯ್(17) ಮೃತ ದುರ್ದೈವಿಯಾಗಿದ್ದಾನೆ. ನಾಲ್ವರು ಗೆಳೆಯರೊಂದಿಗೆ ವಿಜಯ್ ಅಮಾನಿ ಗೋಪಾಲಕೃಷ್ಣ ಕೆರೆಗೆ ಈಜಲು ಹೋಗಿದ್ದು, ಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಈಜು ಕಲಿಯಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

    ಈಜು ಕಲಿಯಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಯಾದಗಿರಿ: ಈಜು ಕಲಿಯಲು ಹೋದ ಯುವಕ ಬಾವಿ ನೀರಲ್ಲಿ ಮುಳುಗಿ ಸಾವನಪ್ಪಿದ ಆಘಾತಕಾರಿ ಘಟನೆ ಜಿಲ್ಲೆಯ ಸುರಪುರದ ಫಕೀರ್ ಮೊಹಲ್ಲಾದಲ್ಲಿನ ತಂಗಿಬಾವಿಯಲ್ಲಿ ನಡೆದಿದೆ.

    ಫಕೀರ್ ಮೊಹಲ್ಲಾದ ನಿವಾಸಿ ಅಲ್ತಾಫ್ ಬಾವಿಯಲ್ಲಿ ಮುಳುಗಿ ಮೃತಪಟ್ಟ ಯುವಕ. ಅಲ್ತಾಫ್ ಸಂಜೆ ತನ್ನ ಸ್ನೇಹಿತರೊಂದಿಗೆ ಈಜು ಕಲಿಯಲು ಮೀನುಗಾರಿಕೆ ಇಲಾಖೆ ಬಳಿಯ ತಂಗಿಬಾವಿಗೆ ತೆರಳಿದ್ದ, ಈಜು ಕಲಿಯಲು ಸೊಂಟಕ್ಕೆ ಪ್ಲಾಸ್ಟಿಕ್ ಬಾಕ್ಸ್ ಕಟ್ಟಿಕೊಂಡು, ಬಾವಿ ಮೇಲಿಂದ ಕೇಳಗೆ ಹಾರಿದ್ದಾನೆ. ಹಾರುವ ರಭಸದಲ್ಲಿ ಅಲ್ತಾಫ್ ಸೊಂಟ ಮತ್ತು ಪ್ಲಾಸ್ಟಿಕ್ ಬಾಕ್ಸ್ ನಡುವೆ ಕಟ್ಟಿದ ದಾರ ತುಂಡಾಗಿದೆ. ಅಲ್ತಾಫ್ ಗೆ ಸರಿಯಾಗಿ ಈಜು ಬಾರದ ಹಿನ್ನೆಲೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

    ಅಗ್ನಿ ಶಾಮಕದಳ ಹಾಗೂ ಸ್ಥಳೀಯ ನುರಿತ ಮೀನುಗಾರರು ಯುವಕನ ಶವವನ್ನು ಬಾವಿಯಿಂದ ಹೊರ ತೆಗೆದಿದ್ದಾರೆ. ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾವಿಯ ಸುತ್ತಲೂ ಮೃತ ಅಲ್ತಾಫ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

  • ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವು

    ಹಾವೇರಿ: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ನಡೆದಿದೆ.

    ಅಖ್ತರ್ ರಜಾ ಯಳವಟ್ಟಿ(16), ಅಹ್ಮದ್ ರಜಾ ಅಂಚಿ(16) ಮತ್ತು ಸಾಹಿಲ್ ಡೊಂಗ್ರಿ(17) ಮೃತ ಬಾಲಕರು. ಈ ಮೂವರು ಸೇರಿಕೊಂಡು ಗ್ರಾಮದ ಬಳಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಸ್ಥಳೀಯರು ಮೂವರು ಬಾಲಕರ ಮೃತದೇಹವನ್ನು ಕೆರೆಯಿಂದ ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಸ್ನೇಹಿತನನ್ನು ಬಾವಿಗೆ ನೂಕಿ ವೀಡಿಯೋ ಚಿತ್ರೀಕರಣ – ಈಜು ಬಾರದೆ ಯುವಕ ಸಾವು

    ಸ್ನೇಹಿತನನ್ನು ಬಾವಿಗೆ ನೂಕಿ ವೀಡಿಯೋ ಚಿತ್ರೀಕರಣ – ಈಜು ಬಾರದೆ ಯುವಕ ಸಾವು

    ರಾಮನಗರ: ಸ್ನೇಹಿತನನ್ನು ಬಾವಿಗೆ ನೂಕಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಈಜು ಬಾರದೆ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವ ಸಾವಿಗೀಡಾಗಿರುವ ಘಟನೆ ಮಾಗಡಿ ತಾಲೂಕಿನ ತಗಚ್ಚಕುಪ್ಪೆ ಗ್ರಾಮದಲ್ಲಿ ನಡೆದಿದೆ.

    ಹೆಬ್ಬೂರು ಮೂಲದ ಲಕ್ಷ್ಮಿಕಾಂತ್(27) ಮೃತ ದುರ್ದೈವಿ. ಮಾಚೋಹಳ್ಳಿ ಅದೀಶ್ವರ್ ಕಂಪನಿಯಲ್ಲಿ ಎಕ್ಸ್ ಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ರಜೆ ಹಾಕಿ ಪಾರ್ಟಿ ಮುಗಿಸಿ ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ತಗಚ್ಚಕುಪ್ಪೆ ಬಳಿಯ ಗೊಲ್ಲರಪಾಳ್ಯ ಬಲರಾಮು ಎಂಬವರ ಕಲ್ಲು ಬಾವಿಗೆ ಈಜಾಡಲು ಮುಂದಾದರು.

    ಈಜು ಬಾರದ ಲಕ್ಷ್ಮಿಕಾಂತ್ ನ ಬಾವಿಗೆ ತಳ್ಳಿ ಸ್ನೇಹಿತರು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಮೇಲೆ ಬಾರದನ್ನು ಕಂಡ ಈ 7 ಮಂದಿ ಯುವಕರು ಬಾವಿಯಿಂದ ಮೇಲೆ ಎತ್ತಲು ಪ್ರಯತ್ನಿಸಿದರು. ಆದರೆ ಬಾವಿಯ ನೀರಿನ ಪಾಚಿಗೆ ಸಿಲುಕಿ ಲಕ್ಷ್ಮಿಕಾಂತ್ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನ ಪೊಲೀಸರು ವಶಪಡೆದುಕೊಂಡಿದ್ದಾರೆ.

    ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

  • ಹಬ್ಬಕ್ಕೆ ಬಂದ ಬಾಲಕ- ಈಜಲು ಬಾರದೆ ನೀರಲ್ಲಿ ಮುಳುಗಿ ಸಾವು

    ಹಬ್ಬಕ್ಕೆ ಬಂದ ಬಾಲಕ- ಈಜಲು ಬಾರದೆ ನೀರಲ್ಲಿ ಮುಳುಗಿ ಸಾವು

    ಗದಗ: ಗೆಳೆಯರೊಂದಿಗೆ ಈಜಲು ಹೋದ 15 ವರ್ಷದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಹೊಂಡದಲ್ಲಿ ಘಟನೆ ನಡೆದಿದೆ. ಬ್ಯಾಡಗಿ ಮೂಲದ ಹರ್ಷವರ್ಧನ್ ಅರಕೇರಿ ಈಜಲು ಬಾರದೆ ಹೊಂಡದಲ್ಲಿ ಸಾವನ್ನಪ್ಪಿದ ಬಾಲಕ. ದೀಪಾವಳಿ ಹಬ್ಬಕ್ಕೆಂದು ಬ್ಯಾಡಗಿಯಿಂದ ಲಕ್ಷ್ಮೇಶ್ವರದ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕ, ಸ್ಥಳೀಯ ನಾಲ್ಕು ಜನ ಸ್ನೇಹಿತರೊಂದಿಗೆ ಈಜಲು ಹೋಗಿದ್ದಾನೆ. ಬಟ್ಟೆಗಳನ್ನು ಹೊಂಡದ ದಡದಲ್ಲಿಟ್ಟು ನೀರಿಗೆ ಹಾರಿದ್ದಾರೆ.

    ಹೊಂಡದಲ್ಲಿದ್ದ ಹೂಳಲ್ಲಿ ಸಿಲುಕಿದ್ದರಿಂದ ಈಜಲು ಬಾರದೆ ಹರ್ಷವರ್ದನ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಹರ್ಷವರ್ಧನ್ ಮುಳುಗಿದ್ದನ್ನು ಗಮನಿಸಿದ ಇತರ ಸ್ನೇಹಿತರು, ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

    ಹಬ್ಬಕ್ಕೆಂದು ಬಂದ ಬಾಲಕ ಸಾವನ್ನಪ್ಪಿರುವುದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.