Tag: Swimmer

  • ನುರಿತ ಈಜುಗಾರರಿಗಾಗಿ ಕಲಬುರಗಿ ಜಿಲ್ಲಾಡಳಿತದಿಂದ ಹುಡುಕಾಟ

    ನುರಿತ ಈಜುಗಾರರಿಗಾಗಿ ಕಲಬುರಗಿ ಜಿಲ್ಲಾಡಳಿತದಿಂದ ಹುಡುಕಾಟ

    ಕಲಬುರಗಿ: ಸದ್ಯ ಕೊರೊನಾ ನಂತರ ಇದೀಗ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ ಪ್ರವಾಹ ಬಂದ ಸಮಯದಲ್ಲಿ ನೀರಿನಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಕಲಬುರಗಿ ಜಿಲ್ಲಾಧಿಕಾರಿ ವಿ ವಿ.ಜ್ಯೋತ್ಸ್ನಾ ಗ್ರಾಮದಲ್ಲಿನ ನುರಿತ ಈಜು ತಜ್ಞರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ : ಸಚಿವ ಕೆ.ಎಸ್ ಈಶ್ವರಪ್ಪ

    ಪ್ರವಾಹದ ನೇರವಿಗೆ ಸಂಕಷ್ಟದಲ್ಲಿರುವ ಜನರ ನೇರವಿಗಾಗಿ ಈಗಾಗಲೇ 45 ಮಾಜಿ ಸೈನಿಕರು ಕೈ ಜೋಡಿಸಿದ್ದು, ಅವರನ್ನು ಕಲಬುರಗಿ ಅಪ್ಪಾ ಕೆರೆಯಲ್ಲಿ ಎನ್‍ಡಿಆರ್‍ಎಫ್ ತಂಡದಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಬಗ್ಗೆ ಈಗ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಬೆಣ್ಣೆತೋರಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆ ನದಿಗೆ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದೆ. ಇದರ ಪರಿಣಾಮ ಕಮಲಾಪುರ,ಚಿಂಚೋಳಿ ತಾಲೂಕಿನ ನದಿಯಂಚಿನ ಹಲವು ಗ್ರಾಮಗಳು ಮುಳುಗಡೆಯಾಗುವದ ಸಾಧ್ಯತೆಯಿದೆ. ಹೀಗಾಗಿ ಆ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

    ಮಹಾರಾಷ್ಟ್ರದಲ್ಲಿ ಸಹ ಹೆಚ್ಚಿನ ಮಳೆಯಾಗುತ್ತಿದ್ದು, ಅಫಜಲಪುರದ ಸೊನ್ನ ಬ್ಯಾರೇಜಗೂ ಸಹ ಜೂಲೈ ಎರಡನೇ ಅಥವಾ ಮೂರನೇ ವಾರದಲ್ಲಿ ನೀರು ಬರವಂತಹ ಸಾಧ್ಯತೆಯಿದೆ. ಹೀಗಾಗಿ ಅಲ್ಲಿವರೆಗೆ 100ಕ್ಕೂ ಅಧಿಕ ನುರಿತ ಈಜುಗಾರರ ತಂಡವನ್ನು ಕಟ್ಟಿ ಅವರಿಗೆ ಸುರಕ್ಷಿತ ಕಿಟ್ ಕೊಡಲು ಜಿಲ್ಲಾಡಳಿತ ಸಜ್ಜಾಗಿದೆ.

  • ರಾಷ್ಟ್ರಮಟ್ಟದ ಈಜುಪಟು ಆತ್ಮಹತ್ಯೆಗೆ ಶರಣು

    ರಾಷ್ಟ್ರಮಟ್ಟದ ಈಜುಪಟು ಆತ್ಮಹತ್ಯೆಗೆ ಶರಣು

    ಪುಣೆ: ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಏಳು ಚಿನ್ನದ ಪದಕ ಗೆದ್ದಿದ್ದ 21 ವರ್ಷದ ಈಜುಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಸಾಹಿಲ್ ಜೋಶಿ(21) ಅತ್ಮಹತ್ಯೆ ಮಾಡಿಕೊಂಡ ಈಜುಪಟು. ಕೋಥ್ರೂಡ್ ಪ್ರದೇಶದ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಸೀಲಿಂಗ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಹಿಲ್ ತಂದೆ ತನ್ನ ಮಗನಿಗೆ ಆಫೀಸ್‍ನಿಂದ ಕರೆ ಮಾಡಿದ್ದಾರೆ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ತಂದೆ ಮನೆಗೆ ಬಂದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ರೀತಿಯ ಡೆತ್ ನೋಟ್ ಸಿಕಿಲ್ಲ. ಯಾವುದೋ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಎಂಬಿಬಿಎಸ್ ಓದುತ್ತಿದ್ದ ಜೋಶಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಆದ್ದರಿಂದ ನಾವು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ ಅವರ ಕೋಚ್ ಮನೋಜ್ ಎರಾಂಡೆ, ಜೋಶಿ ಅತ್ಯಂತ ಪ್ರತಿಭಾವಂತ ಈಜುಗಾರನಾಗಿದ್ದ. ಅವನು ರಾಷ್ಟ್ರೀಯ ಮಟ್ಟದಲ್ಲಿ 9 ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಚಿನ್ನದ ಪದಕ ಗೆದ್ದಿದ್ದಾನೆ. ಅವನ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಎಂದು ಹೇಳಿದ್ದಾರೆ.

  • ಅಪಘಾತದಲ್ಲಿ ರಾಷ್ಟ್ರೀಯ ಈಜು ಪಟು ದುರ್ಮರಣ

    ಅಪಘಾತದಲ್ಲಿ ರಾಷ್ಟ್ರೀಯ ಈಜು ಪಟು ದುರ್ಮರಣ

    ಚೆನ್ನೈ: ರಸ್ತೆ ಅಪಘಾತದಲ್ಲಿ ರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‍ರೊಬ್ಬರು ಬೈಕಿನಿಂದ ಬಿದ್ದು ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಎಂ.ಬಿ.ಬಾಲಕೃಷ್ಣನ್ ಮೃತ ಈಜುಪಟು. ಇವರು ಅರುಂಬಕ್ಕಂನಿಂದ ಶೆಣೈನಗರದ ಜಯಲಕ್ಷ್ಮಿ ಕಾಲೋನಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಬೈಕ್ ಹಿಂಬದಿಯಲ್ಲಿ ಬಾಲಕೃಷ್ಣನ ಗೆಳತಿ ಕುಳಿತಿದ್ದು, ಆಕೆ ಅಪಘಾತದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಬಾಲಕೃಷ್ಣ ಬೈಕಿನಲ್ಲಿ ಗೆಳತಿ ಕೂರಿಸಿಕೊಂಡು ಬರುತ್ತಿದ್ದು, ಮುಂದೆ ಹೋಗುತ್ತಿದ್ದ ಟ್ರಕ್ ಅನ್ನು ಹಿಂದಿಕ್ಕುವ ಭರದಲ್ಲಿ ವೇಗವಾಗಿ ಬಂದು ಟ್ರಕ್‍ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸದಲ್ಲಿ ಬೈಕ್ ನಿಯಂತ್ರಣ ತಪ್ಪಿ ನೇರವಾಗಿ ಟ್ರಕ್ ಚಕ್ರಕ್ಕೆ ಸಿಕ್ಕಿದೆ. ಪರಿಣಾಮ ಬಾಲಕೃಷ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ಬಾಲಕೃಷ್ಣ ವೈದ್ಯ ದಂಪತಿಯ ಪುತ್ರನಾಗಿದ್ದು, ಅವರು ಗಿಂಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅಮೆರಿಕದಲ್ಲಿ ಎಂ.ಎಸ್ ಪೂರ್ಣಗೊಳಿಸಿ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಬಾಲಕೃಷ್ಣ ರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಸಾಧನೆ ಮಾಡಿರುವ ಅನುಭವಿ ಈಜು ಪಟುವಾಗಿದ್ದರು. 2010 ಢಾಕಾದಲ್ಲಿ ನಡೆದ 11ನೇ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.

    ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಬಾಲಕೃಷ್ಣನ ಮೃತ ದೇಹವನ್ನು ಕಿಲ್ಪಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಜೊತೆಗೆ ಟ್ರಕ್ ಚಾಲಕ ಸುಬ್ರಹ್ಮಣ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • 16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    16ರ ಹರೆಯದ ರಾಷ್ಟ್ರ ಮಟ್ಟದ ಈಜುಗಾರ್ತಿ ನೇಣಿಗೆ ಶರಣು!

    ಕೋಲ್ಕತ್ತಾ: 16 ವರ್ಷದ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

    ಮೌಪ್ರಿಯಾ ಮಿತ್ರಾ (16) ಆತ್ಮಹತ್ಯೆಗೆ ಶರಣಾದ ಆಟಗಾರ್ತಿ. ಈಕೆ ಪಶ್ಚಿಮ ಬಂಗಾಳದ ಗರ್ಲ್ಸ್ ಹೈಸ್ಕೂಲ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹೂಗ್ಲಿಯ ತಮ್ಮ ನಿವಾಸದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಚಿನ್ಸುರಾ ಇಮಾಂಬರಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಿತ್ರಾ ನಿವಾಸದಿಂದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮಿತ್ರಾ ಕೊಲಂಬೊದಲ್ಲಿ ನಡೆದ 2016 ರ ದಕ್ಷಿಣ ಏಷ್ಯಾದ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದಿದ್ದರು. ಜೂನ್ ತಿಂಗಳಲ್ಲಿ ನಡೆಯುವ ಪುಣೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು.

    ಮಿತ್ರಾ ಸೋಮವಾರ ಬೆಳಗ್ಗೆ ಚಿನ್ಸುರಾದಲ್ಲಿ ಈಜು ಅಭ್ಯಾಸಕ್ಕೆ ಹೋಗಿದ್ದರು. ಸುಮಾರು 11 ಗಂಟೆಗೆ ಮಳೆ ಬರುತ್ತಿದ್ದು, ಆ ಸಂದರ್ಭದಲ್ಲಿ ಅವರು ಮನೆಗೆ ಹಿಂದಿರುಗಿದ್ದರು. ಮನೆಗೆ ಬಂದ ನಂತರ  ತನ್ನ ರೂಮಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. ಈ ವೇಳೆ ಮಿತ್ರಾ ಪೋಷಕರು 1ನೇ ಮಹಡಿಯಲ್ಲಿದ್ದರು.

    ಮಿತ್ರಾ 2016ರ ಸೌತ್ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಹೈಬೋರ್ಡ್ ಚಿನ್ನದ ಪದಕ ಮತ್ತು 3 ಎಮ್ ಸ್ಪ್ರಿಂಗ್ ಬೋರ್ಡ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 16 ರ ವಯಸ್ಸಿಲ್ಲಿಯೇ 2016 ಜೂನಿಯರ್ ನ್ಯಾಷನಲ್ ಆಕ್ವಾಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಉನ್ನತ ಬೋರ್ಡ್ ಚಿನ್ನ, 3ಎಮ್ ಸ್ಪ್ರಿಂಗ್ ಬೋರ್ಡ್ ಬೆಳ್ಳಿ ಮತ್ತು 1 ಎಮ್ ಸ್ಪ್ರಿಂಗ್ ಬೋರ್ಡ್ ಕಂಚಿನ ಪದಕವನ್ನು ಗೆದ್ದಿದ್ದಾರೆ.

    ಈ ಘಟನೆ ಸಂಬಂಧ ಕುಟುಂಬ ದೂರು ದಾಖಲಿಸಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣವನ್ನು ತಿಳಿದು ಬರುತ್ತದೆ. ನಂತರ ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.