Tag: swift car

  • ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ

    ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ – ನಾಲ್ವರ ದುರ್ಮರಣ

    ರಾಮನಗರ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru-Mysuru Expressway) ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ರಾಮನಗರ (Ramanagara) ತಾಲೂಕಿನ ಜಯಪುರ ಗೇಟ್ ಸಮೀಪ ನಡೆದಿದೆ.

    ಕೆಆರ್ ಪೇಟೆ ಮೂಲದ ಮುತ್ತುರಾಜು (55), ತಮ್ಮನಗೌಡ (27), ಸಂಜು (28) ಹಾಗೂ ಚಾಲಕ‌ ಸಚಿನ್‌(27) ಮೃತ ದುರ್ದೈವಿಗಳು. ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗ್ತಿದ್ದ ಸ್ವಿಫ್ಟ್ ಕಾರು, ಚಾಲಕನ ನಿದ್ರೆಯ ಮಂಪರಿನಿಂದ ಹೆದ್ದಾರಿಯಲ್ಲಿನ ತಡೆಗೋಡೆಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಕೋರ್ಟ್ ಮೊರೆಹೋದ ಆಡಳಿತ ಮಂಡಳಿ

    ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯ | ಸ್ನಾನಘಟ್ಟದ ಬಳಿ ಈಜಲು ಹೋಗಿದ್ದ ಮೂವರು ಯುವಕರು ನಾಪತ್ತೆ

  • ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರಿಗೆ ಗಂಭೀರ ಗಾಯ

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರಿಗೆ ಗಂಭೀರ ಗಾಯ

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ಪಲ್ಟಿಯಾದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ತುಮಕೂರು (Tumakuru) ಜಿಲ್ಲೆ ಶಿರಾ (Shira) ತಾಲೂಕಿನ ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.

    ಕುಟುಂಬವೊಂದು ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಗಾಯಾಳುಗಳನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 1 FB ಪೋಸ್ಟ್‌ ಮತ್ತೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ – ರಾತ್ರಿ ಬೀದಿಗಿಳಿದ ವಿದ್ಯಾರ್ಥಿಗಳು

    ಇನ್ನು ಚಿಕ್ಕನ ಹಳ್ಳಿ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಅಪಘಾತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಡರಾತ್ರಿ ಕೆಲ ಕಾಲ ಹೆದ್ದಾರಿ ರಸ್ತೆ ತಡೆದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್- ಜೈಲು ನಿಯಮ ಏನು ಹೇಳುತ್ತೆ?

  • ಮಂಡ್ಯ ವಿಸಿ ನಾಲೆಗೆ ಕಾರು ಬಿದ್ದು ಓರ್ವ ಸಾವು

    ಮಂಡ್ಯ: ತಡೆಗೋಡೆ ಇಲ್ಲದ ಕಾರಣ ಮಂಡ್ಯದ (Mandya) ವಿಸಿ ನಾಲೆಯಲ್ಲಿ ಮತ್ತೊಂದು ದುರಂತ ಜರುಗಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

    ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಜರುಗಿದೆ. ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ನಾಲೆಗೆ ಶಿಫ್ಟ್ ಕಾರು (Swift Car) ಉರುಳಿದೆ. ಇದರಿಂದ ಕಾರು ಸಂಪೂರ್ಣ ಜಖಂ ಆಗಿದೆ. ಈ ಪರಿಣಾಮ ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಗೊಂಡ ವ್ಯಕ್ತಿಯ ವಿಳಾಸ ಇನ್ನೂ ತಿಳಿದು ಬಂದಿಲ್ಲ.

    ಗಾಯಗೊಂಡ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ವಿಸಿ ನಾಲೆಯ‌ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದರೂ ಸಹ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚು ಗಮನವರಿಸುತ್ತಿಲ್ಲ. ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನೂ ಎಳೆದಾಡಿದ್ರು!

  • ಭೀಮಾತೀರದಲ್ಲಿ ಶುರುವಾಯ್ತು ಹಣಕ್ಕಾಗಿ ಕಿಡ್ನಾಪ್ ದಂಧೆ

    ಭೀಮಾತೀರದಲ್ಲಿ ಶುರುವಾಯ್ತು ಹಣಕ್ಕಾಗಿ ಕಿಡ್ನಾಪ್ ದಂಧೆ

    ವಿಜಯಪುರ: ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರು ಖದೀಮರಿಂದ ಬೇಕರಿ ಮಾಲೀಕರೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿನ್ನೆ ಸಂಜೆ 6.30ರ ಸುಮಾರಿಗೆ ನಡೆದಿದೆ.

    ರಾಜಸ್ಥಾನ ಮೂಲದ ಅರ್ಬುದಾ ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ಆದ ವ್ಯಕ್ತಿ. ಮಾಲೀಕನನ್ನು ಕಿಡ್ನಾಪ್ ಮಾಡಿಕೊಂಡು ಹೊದ ಬಿಳಿ ಸ್ವಿಫ್ಟ್ ಕಾರು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಸಸಿಂಗ್ ಅವರನ್ನು ಕಿಡ್ನಾಪ್ ಮಾಡಿ, 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಖದೀಮರು ವ್ಯಕ್ತಿಯನ್ನು ಕಿಡ್ನಾಪ್ ಮಾಡಿ, ಕೈ ಹಾಗೂ ಕಾಲಿಗೆ ಚಾಕು ಚುಚ್ಚಿ ಮನಬಂದಂತೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಹಲ್ಲೆಗೊಳಗಾದ ಮಾಸಸಿಂಗ್ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವೀಟ್ ಆರ್ಡರ್ ಕೊಡೊದಿದೆ ಅಂತ ಮಾಲೀಕನನ್ನು ಕಾರಿನ ಬಳಿ ಕರೆದಿದ್ದರು. ಈ ವೇಳೆ ಅವರು ಕಾರಿನ ಹತ್ತಿರ ಬರುತ್ತಿದ್ದಂತೆ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್‍ರಗಳು ಅವರಿಗೆ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಲ್ಲದೇ 20 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದು, ಝಳಕಿ ಬಳಿ ಬಂದು ಹಣ ಕೊಡುವಂತೆ ಹೇಳಿದ್ದರು. ಮಾಸಸಿಂಗ್ ಕಳೆದ ಹತ್ತು ವರ್ಷಗಳಿಂದ ಇಂಡಿಯಲ್ಲಿ ಬೇಕರಿ ನಡೆಸುತ್ತಿದ್ದರು.

    ಮಾಸಸಿಂಗ್ ಕಿಡ್ನಾಪ್ ಮತ್ತು ಟಾರ್ಚರ್ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಂಡಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ಬೇಕರಿ ಮಾಲೀಕ ಮಾಸಸಿಂಗ್ ಕಿಡ್ನಾಪ್ ವಿಚಾರ ತಿಳಿಯುತ್ತಿದ್ದಂತೆ ಜಾಗೃತಗೊಂಡಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಮಾಸಸಿಂಗ್ ಕುಟುಂಬಸ್ಥರು, ದರೋಡೆಕೋರರು ಝಳಕಿ ಬಳಿ ಬಂದು 20 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರಿಂದ ಹಣ ಕೊಡಲು ಸಿದ್ಧವಾಗಿದ್ದರು. ಈ ವೇಳೆ ಪೊಲೀಸರು ಕಿಡ್ನಾಪರ್ಸ್ ಸೆರೆಗೆ ಜಾಲ ರಚಿಸಿದ್ದರು. ಝಳಕಿ ಬಳಿ ಬರುತ್ತಿದ್ದಂತೆ ಪೊಲೀಸರು ಬಂದಿರುವ ವಿಚಾರ ತಿಳಿದ ಕಿಡ್ನಾಪರ್ಸ್ ಇದ್ದಕ್ಕಿದ್ದಂತೆ ಲೋಣಿ ಗ್ರಾಮದ ಕಡೆ ಕಾರು ತಿರುಗಿಸಿದ್ದಾರೆ.

    ಬಳಿಕ ಕಾರನ್ನು ಬೆನ್ನಟ್ಟಿದ ಪೊಲೀಸರು ಕಿಡ್ನಾಪರ್ಸ್ ಅನ್ನು ಸರೆ ಹಿಡಿದು ಪೊಲೀಸರು ಬೇಕರಿ ಮಾಲೀಕನನ್ನು ರಕ್ಷಿಸಿದ್ದಾರೆ. ತಡರಾತ್ರಿ ವರೆಗೂ ಕಾರ್ಯಾಚರಣೆ ನಡೆಸಿ ಕೊನೆಗೂ ಕಿಡ್ನಾಪ್ ಪಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

    ಘಟನೆಯು ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸ್ವಿಫ್ಟ್ ಕಾರ್ ಡಿಕ್ಕಿಯ ರಭಸಕ್ಕೆ 50 ಮೀ ದೂರ ಬಿದ್ದ ಬೈಕ್ ಸಾವಾರ ಸಾವು

    ಸ್ವಿಫ್ಟ್ ಕಾರ್ ಡಿಕ್ಕಿಯ ರಭಸಕ್ಕೆ 50 ಮೀ ದೂರ ಬಿದ್ದ ಬೈಕ್ ಸಾವಾರ ಸಾವು

    ಗದಗ: ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರ ಗ್ರಾಮದ ಬಳಿ ನಡೆದಿದೆ.

    ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಿಳೇಕಲ್ ಗ್ರಾಮದ ರಂಗನಗೌಡ ಭಾವಿಮನಿ(27) ಮೃತ ಬೈಕ್ ಸವಾರ. ಕಾರ್ ಚಾಲಕ ನಾಗರಾಜ್ ಅಜಾಗರುಕತೆಯಿಂದ ಘಟನೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

    ರಂಗನಗೌಡ ಭಾವಿಮನಿ ಅವರು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಲೋಗಲ್ ಕೆವಿಜಿ ಬ್ಯಾಂಕ್‍ನಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ನಿಮಿತ್ತ ಇಂದು ಗಜೇಂದ್ರಗಡದಿಂದ ರೋಣಕ್ಕೆ ತೆರಳುತ್ತಿದ್ದಾಗ ವೇಗವಾಗಿ ಸ್ವಿಫ್ಟ್ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ನಾಗರಾಜ್ ನಿಯಂತ್ರಣ ತಪ್ಪಿ, ರಂಗನಗೌಡ ಅವರ ಬೈಕ್‍ಗೆ ಡಿಕ್ಕಿಹೊಡೆದಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ರಂಗನಗೌಡ ಸ್ಥಳದಿಂದ ಸುಮಾರು 50 ಮೀಟರ್ ಗೂ ಅಧಿಕ ದೂರ ಬಿದ್ದಿದ್ದಾರೆ. ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ರಂಗನಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗಜೇಂದ್ರಗಡ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರು ಚಾಲಕ ನಾಗರಾಜ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.

  • ಹೊಯ್ಸಳಕ್ಕೆ ಸ್ವಿಫ್ಟ್ ಕಾರ್ ಡಿಕ್ಕಿ- ಕೂದಲೆಳೆ ಅಂತರದಲ್ಲಿ ಮೂವರು ಪಾರು

    ಹೊಯ್ಸಳಕ್ಕೆ ಸ್ವಿಫ್ಟ್ ಕಾರ್ ಡಿಕ್ಕಿ- ಕೂದಲೆಳೆ ಅಂತರದಲ್ಲಿ ಮೂವರು ಪಾರು

    – ಸ್ಥಳಕ್ಕೆ ಡಿಸಿಪಿ ಅಣ್ಣಾಮಲೈ ಭೇಟಿ

    ಬೆಂಗಳೂರು: ಹೊಯ್ಸಳ ಪೊಲೀಸ್ ವಾಹನಕ್ಕೆ ಸ್ವಿಫ್ಟ್ ಕಾರ್ ಡಿಕ್ಕಿ ಹೊಡೆದ ಘಟನೆಯೊಂದು ಬೆಂಗಳೂರಿನ ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಬಳಿ ನಡೆದಿದೆ.

    ಹೊಯ್ಸಳದಲ್ಲಿ ಮೂವರು ಪೊಲೀಸರು ಗಸ್ತು ತಿರುಗುತ್ತಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿ ಕಾರಿನ ಚಾಲಕ ಹೊಯ್ಸಳಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕಾರ್ ಡಿಕ್ಕಿ ಹೊಡೆದ ಪರಿಣಾಮ ಹೊಯ್ಸಳ ವಾಹನದಲ್ಲಿದ್ದ ಮೂವರು ಪೊಲೀಸರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೂವರು ಪೊಲೀಸರು ಹೊಯ್ಸಳದಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ದೂರು ಬಂದ ಹಿನ್ನೆಲೆ ಕೋಣನಕುಂಟೆ ಕ್ರಾಸ್ ಬಳಿ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ವಿಫ್ಟ್ ಕಾರ್ ಹಿಂಬದಿಯಿಂದ ವೇಗವಾಗಿ ಬಂದು ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದೆ.

    ಸ್ವಿಫ್ಟ್ ಕಾರ್ ಚಾಲಕ ಕುಡಿದು ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗುತ್ತಿದೆ. ಮೂವರು ಪೊಲೀಸರು ಕಾರ್ ಡಿಕ್ಕಿಯಿಂದ ಪಾರಾಗಿದ್ದು, ಸ್ವಿಫ್ಟ್ ಕಾರ್ ಚಾಲಕನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಟಾ ಸುಮೋ, ಸ್ವಿಫ್ಟ್ ಕಾರ್ ಡಿಕ್ಕಿ- ಸರ್ಕಾರಿ ಮಹಿಳಾ ಅಧಿಕಾರಿ ಗಂಭೀರ

    ಟಾಟಾ ಸುಮೋ, ಸ್ವಿಫ್ಟ್ ಕಾರ್ ಡಿಕ್ಕಿ- ಸರ್ಕಾರಿ ಮಹಿಳಾ ಅಧಿಕಾರಿ ಗಂಭೀರ

    ಚಿಕ್ಕಬಳ್ಳಾಪುರ: ಸರ್ಕಾರಿ ಟಾಟಾ ಸುಮೋ ಹಾಗೂ ಖಾಸಗಿ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸರ್ಕಾರಿ ಮಹಿಳಾ ಆಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ತೀಲಕುಂಟಹಳ್ಳಿ ಕ್ರಾಸ್ ಬಳಿ ನಡೆದಿದೆ.

    ಅಪಘಾತದಲ್ಲಿ ಗುಡಿಬಂಡೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಜಯಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಜಯಲಕ್ಷ್ಮಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಸ್ವಿಫ್ಟ್ ಕಾರಿನ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಿಂದಾಗಿ ಟಾಟಾ ಸುಮೋ ಪಲ್ಟಿಯಾಗಿದ್ದು, ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ.

    ಈ ಸಂಬಂಧ ಗುಡಿಬಂಡೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿ- ಸ್ಥಳದಲ್ಲೇ ಚಾಲಕ ದುರ್ಮರಣ

    ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿ- ಸ್ಥಳದಲ್ಲೇ ಚಾಲಕ ದುರ್ಮರಣ

    ಕಲಬುರಗಿ: ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ತಾಲೂಕಿನ ಫರಹತ್ತಬಾದ್ ಬಳಿ ನಡೆದಿದೆ.

    32 ವರ್ಷದ ಓಂಕಾರ್ ಪವಾರ್ ಮೃತ ಚಾಲಕ. ಸ್ವಿಫ್ಟ್ ಕಾರ್ ತಡರಾತ್ರಿ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಹೋಗುತ್ತಿತ್ತು. ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ವಿಫ್ಟ್ ಕಾರು ನುಜ್ಜುಗುಜ್ಜಾಗಿದೆ.

    ಸದ್ಯ ಸ್ಥಳಕ್ಕೆ ಫರಹತ್ತಬಾದ್ ಪಿಎಸ್‍ಐ ವಾಹಿದ್ ಕೋತ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

     

  • ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಕಾರಿಗೆ ಡಿಕ್ಕಿಗೆ ಹೊಡೆದ ಟಿಪ್ಪರ್-ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು

    ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

    ಚಿಕ್ಕೋಡಿ ಪಟ್ಟಣದ ಹುಕ್ಕೇರಿ ಕ್ರಾಸ್ ಬಳಿ ಸ್ವಿಫ್ಟ್ ಕಾರಿಗೆ ಹಿಂಬದಿಯಿಂದ ಕಲ್ಲು ತುಂಬಿದ್ದ ಟಿಪ್ಪರ್ ಗುದ್ದಿದ ಪರಿಣಾಮ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದೆ. ಕಾರ್ ನುಜ್ಜಾಗುಜ್ಜಾಗಿದ್ದರಿಂದ ಒಳಗಡೆ ಯಕ್ಸಾಂಬಾ ಪಟ್ಟಣದ ಜಗದೀಶ್ ಸರಿಕರ್ ಮತ್ತು ಅಥಣಿಯ ಹೊನಕಪ್ಪ ಎಂಬವರು ಸಿಲುಕಿಕೊಂಡಿದ್ದರು.

    ಕಾರಿನೊಳಗೆ ಸಿಲುಕಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಚಿಕ್ಕೋಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕ್ಯಾಂಟರ್, ಸ್ವಿಫ್ಟ್ ಡಿಕ್ಕಿ- ದೇವರ ದರ್ಶನ ಮುಗಿಸಿ ವಾಪಸ್ಸಾಗ್ತಿದ್ದ ಐವರು ಜೀವದ ಗೆಳೆಯರ ದುರ್ಮರಣ

    ಕ್ಯಾಂಟರ್, ಸ್ವಿಫ್ಟ್ ಡಿಕ್ಕಿ- ದೇವರ ದರ್ಶನ ಮುಗಿಸಿ ವಾಪಸ್ಸಾಗ್ತಿದ್ದ ಐವರು ಜೀವದ ಗೆಳೆಯರ ದುರ್ಮರಣ

    ರಾಮನಗರ: ಅವರೆಲ್ಲಾ ಜೀವದ ಗೆಳೆಯರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನ್ಯೋನ್ಯವಾಗಿದ್ರು. ಆದ್ರೆ ಈಗ ಅವರೆಲ್ಲಾ ಬಾರದ ಲೋಕಕ್ಕೆ ತೆರಳಿದ್ದಾರೆ. ಕ್ಯಾಂಟರ್ ಹಾಗೂ ಕಾರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಐವರು ಗೆಳೆಯರೂ ಸಹ ಸಾವನ್ನಪ್ಪಿದ್ದಾರೆ.

    ನಜ್ಜುಗುಜ್ಜಾಗಿ ಹೋಗಿರುವ ಕಾರು. ಜಖಂ ಆಗಿ ಉರುಳಿಬಿದ್ದಿರುವ ಕ್ಯಾಂಟರ್. ಕಾರಿನಲ್ಲಿ ಸಿಕ್ಕು ಸಾವನ್ನಪ್ಪಿರುವ ಯುವಕರ ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿರುವ ಪೊಲೀಸರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ.

    ಹೆದ್ದಾರಿಯ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಗ್ರಾಮದ ಸಮೀಪ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ಬೆಂಗಳೂರಿನಿಂದ ಬರ್ತಿದ್ದ ಕ್ಯಾಂಟರ್ ಹಾಗೂ ಕನಕಪುರ ಮಾರ್ಗದಿಂದ ಹೊರಟಿದ್ದ ಸ್ವಿಫ್ಟ್ ಕಾರಿನ ನಡುವೆ ಅಪಘಾತ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ರಾಜು, ಗುಂಜೂರಿನ ಚಂದ್ರು, ಎಚ್‍ಎಸ್‍ಆರ್ ಲೇಔಟ್‍ನ ಅನಿಲ್ ಕುಮಾರ್, ಸಂತೋಷ್ ಹಾಗೂ ಮತ್ತೋರ್ವ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಈ ಹೆದ್ದಾರಿಯಲ್ಲಿನ ತಿರುವುಗಳೇ ಈ ಘಟನೆಗಳೇ ಮುಖ್ಯ ಕಾರಣವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

    ಮೃತರೆಲ್ಲಾ ಬೆಂಗಳೂರಿನ ನಿವಾಸಿಗಳಾಗಿದ್ದು ಐವರೂ ಸಹ ಆತ್ಮೀಯರಾಗಿದ್ರು. ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡುವ ಕೆಲಸ ಮಾಡ್ತಾ ಇದ್ರು. ಸಂತೋಷ್ ಡ್ಯಾನ್ಸರ್ ಆಗಿ ಡ್ಯಾನ್ಸಿಂಗ್ ಸ್ಕೂಲ್ ನಡೆಸ್ತಾ ಇದ್ದರು. ಮಂಗಳವಾರ ಕನಕಪುರ ತಾಲೂಕಿನ ಕಬ್ಬಾಳು ದೇವಾಲಯಕ್ಕೆ ಐವರೂ ಹೋಗಿದ್ದರು. ದೇವಸ್ಥಾನದಲ್ಲಿ ಪೂಜಾ ಕಾರ್ಯ ಮುಗಿಸಿದ ಬಳಿಕ ಮೋಜು ಮಸ್ತಿ ಮುಗಿಸಿಕೊಂಡು ವಾಪ್ಪಾಸ್ಸು ಬೆಂಗಳೂರಿಗೆ ತೆರಳ್ತಾ ಇದ್ರೂ. ಈ ವೇಳೆ ಅತೀವೇಗದಲ್ಲಿದ್ದ ಕಾರು ಹಾಗೂ ಕ್ಯಾಂಟರ್ ಎರಡೂ ಸಹ ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕ್ಯಾಂಟರ್ ಚಾಲಕನ ಕಾಲು ಮುರಿದಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆಯಲ್ಲಿ ಐವರ ಮೃತ ದೇಹಗಳೂ ಕೂಡಾ ಕಾರಿನಲ್ಲಿ ಕಚ್ಚಿಕೊಂಡಿದ್ವು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರಸಾಹಸ ಮಾಡಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

    ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.