Tag: sweet

  • ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಹಬ್ಬಕ್ಕೆ ಮಾಡಿ ಡ್ರೈ ಫ್ರೂಟ್ಸ್ ಬರ್ಫಿ!

    ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಡ್ರೈ ಫ್ರೂಟ್ಸ್ ಬಳಸಿ ಬರ್ಫಿ ಮಾಡೋದನ್ನ ಇವತ್ತು ನಾನಿಲ್ಲಿ ತಿಳಿಸಿಕೊಡ್ತೀನಿ.

    ಬೇಕಾಗುವ ವಸ್ತುಗಳು
    ಬಾದಾಮಿ – ಅರ್ಧ ಕಪ್
    ಗೋಡಂಬಿ – ಅರ್ಧ ಕಪ್
    ಮಖಾನಾ – ಅರ್ಧ ಕಪ್
    ಕೊಬ್ಬರಿ ತುರಿ – ಅರ್ಧ ಕಪ್
    ಪುಟಾಣಿ, ಹುರಿಗಡಲೆ – 1 ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಜಾಯಿಕಾಯಿ ಪುಡಿ – ಒಂದು ಚಿಟಿಕೆ
    ಕೇಸರಿ – ಒಂದು ಚಿಟಿಕೆ
    ಬೆಲ್ಲ – 300 ಗ್ರಾಂ
    ತುಪ್ಪ – ಅಗತ್ಯಕ್ಕೆ ತಕ್ಕಂತೆ

    ಮಾಡುವ ವಿಧಾನ
    ಮೊದಲಿಗೆ, ಒಲೆ ಆನ್ ಮಾಡಿ ಪಾತ್ರೆ ಇಟ್ಟು ಮಖಾನಗಳನ್ನು ಗರಿಗರಿಯಾಗಿ ಹುರಿಯಬೇಕು. ಹುರಿದ ಬಳಿಕ ಒಲೆ ಆಫ್ ಮಾಡಿ, ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಹುರಿದ ಮಖಾನವನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು. ಅದೇ ಮಿಕ್ಸರ್ ಜಾರ್‌ನಲ್ಲಿ ಬಾದಾಮಿ ಮತ್ತು ಗೋಡಂಬಿ ಸೇರಿಸಿ ನುಣ್ಣಗೆ ಪುಡಿ ಮಾಡಿ ಮಖಾನ ಮಿಶ್ರಣಕ್ಕೆ ಸೇರಿಸಬೇಕು.

    ಮಖಾನ ಹಾಗೂ ಬಾದಾಮಿ ಮಿಶ್ರಣಕ್ಕೆ ತುರಿದ ಕೊಬ್ಬರಿ, ಏಲಕ್ಕಿ ಪುಡಿ, ಜಾಯಿಕಾಯಿ ಪುಡಿ, ಕೇಸರಿ ಸೇರಿಸಿ, ಒಲೆ ಆನ್ ಮಾಡಿ ಅದರಲ್ಲಿ ಒಂದು ಪಾತ್ರೆ ಇಟ್ಟು ತುರಿದ ಬೆಲ್ಲ, ಸ್ವಲ್ಪ ತುಪ್ಪ ಮತ್ತು ಕಾಲು ಕಪ್ ನೀರು ಸೇರಿಸಿ ಸ್ವಲ್ವ ಪಾಕ ಆಗುವವರೆಗೆ ಬೇಯಿಸಬೇಕು. ಇನ್ನೊಂದು ಪಾತ್ರೆ ಇಟ್ಟು ಒಂದು ಟೀಸ್ಪೂನ್ ತುಪ್ಪ ಸೇರಿಸಿ ಬಿಸಿ ಮಾಡಿ ಕಡಲೆಕಾಯಿ, ಬಾದಾಮಿ ಪುಡಿಗಳನ್ನು ಕಡಿಮೆ ಉರಿಯಲ್ಲಿ ಹುರಿದು, ಪರಿಮಳ ಬಂದ ಬಳಿಕ ಬೆಲ್ಲದ ಪಾಕ ಸೇರಿಸಿ ಮಿಶ್ರಣ ಮಾಡಿ ಬೇಯಿಸಬೇಕು.

    ಇದಕ್ಕೆ ಹಿಟ್ಟಿನ ಪೇಸ್ಟ್‌ನಲ್ಲಿ ಸೇರಿಕೊಂಡು ದಪ್ಪವಾಗಿ ಹದವಾಗಿ ಬೆಂದ ಬಳಿಕ ಒಲೆ ಆಫ್ ಮಾಡಿ, ಒಂದು ತಟ್ಟೆಗೆ ತುಪ್ಪ ಹಚ್ಚಿ ಈ ಮಿಶ್ರಣವನ್ನು ಸೇರಿಸಿ ಸಮವಾಗಿ ಹರಡಬೇಕು. ಬಳಿಕ ಡ್ರೈ ಫ್ರೂಟ್ಸ್ ಸೇರಿಸಿ, ಚಿಕ್ಕ ಪೀಸ್​ಗಳಾಗಿ ಕತ್ತರಿಸಬೇಕು. ತಣ್ಣಗಾದ ಬಳಿಕ ಬರ್ಫಿ ಸೇವಿಸಲು ಸಿದ್ಧ.

  • ಮನೆಯಲ್ಲೇ ಮಾಡಿ ಕೇರಳದ ಫೇಮಸ್ ಸ್ವೀಟ್‌ ಉಣ್ಣಿಯಪ್ಪಂ!

    ಮನೆಯಲ್ಲೇ ಮಾಡಿ ಕೇರಳದ ಫೇಮಸ್ ಸ್ವೀಟ್‌ ಉಣ್ಣಿಯಪ್ಪಂ!

    ಣ್ಣಿಯಪ್ಪಂ ಕೇರಳದ ಸ್ಪೆಷಲ್‌ ಸ್ವೀಟ್‌ ಆಗಿದೆ. ಈ ಸಿಹಿ ತಿಂಡಿಯನ್ನು ಹಬ್ಬ ಇನ್ನಿತರ ವಿಶೇಷ ದಿನಗಳಲ್ಲಿ ತಯಾರಿಸಲಾಗುತ್ತದೆ. ಈ ಸ್ವೀಟ್‌ ತಯಾರಿಸೋದು ಹೇಗೆ ಎಂಬ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    * 2 ಕಪ್ ಅಕ್ಕಿ ಹಿಟ್ಟು
    * 1 ಕಪ್ ಗೋಧಿ ಹಿಟ್ಟು
    * 250–300 ಗ್ರಾಂ ಬೆಲ್ಲ
    * 2-3 ಮಾಗಿದ ಬಾಳೆಹಣ್ಣು
    + 1/2 ಕಪ್ ತೆಂಗಿನಕಾಯಿ ಚೂರುಗಳು
    * 1.5 ಟೀ ಚಮಚ ಕಪ್ಪು ಎಳ್ಳು
    * 1/2–1 ಟೀ ಚಮಚ ಅಡುಗೆ ಸೋಡಾ
    * 1 ಟೀ ಚಮಚ ತುಪ್ಪ ಹಾಗೂ ಎಣ್ಣೆ

    ಮಾಡುವ ವಿಧಾನ
    ಒಂದು ಪಾತ್ರೆಯಲ್ಲಿ 1 ಕಪ್ ನೀರು ಹಾಗೂ ಬೆಲ್ಲದೊಂದಿಗೆ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಬೇಕು. ನಂತರ ಅದನ್ನು ಫಿಲ್ಟರ್ ಮಾಡಿ ಇರಿಸಿ. ​ತುಪ್ಪವನ್ನು ಬಿಸಿ ಮಾಡಿ, ಕಪ್ಪು ಎಳ್ಳು ಮತ್ತು ತೆಂಗಿನಕಾಯಿ ಚೂರುಗಳನ್ನು ಗೋಲ್ಡನ್ ಬ್ರೌನ್ ಆಗುವ ವರೆಗೆ ಹುರಿಯಬೇಕು ​

    ಬಳಿಕ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ ಸೋಸಿದ ಬೆಲ್ಲದ ಪಾಕ ಸೇರಿಸಿ ಮಿಕ್ಸ್‌ ಮಾಡಬೇಕು. ನಂತರ ಒಂದು ದೊಡ್ಡ ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಬಾಳೆಹಣ್ಣು ಮತ್ತು ಬೆಲ್ಲದ ಪಾಕ ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ, ಇಡ್ಲಿ ಹಿಟ್ಟಿನ ಹದ ಬರುವಂತೆ ನೀರು ಸೇರಿಸುತ್ತ ತಯಾರಿ ಮಾಡಬೇಕು.

    ನಂತರ, ಹುರಿದ ತೆಂಗಿನಕಾಯಿ ತುಂಡುಗಳು, ಎಳ್ಳು ಮತ್ತು ಅಡಿಗೆ ಸೋಡಾ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, 30–45 ನಿಮಿಷಗಳ ಕಾಲ ಬಿಡಬೇಕು.

    ನಂತರ ಒಲೆಯ ಮೇಲೆ ಪಡ್ಡು ತಯಾರಿಸುವ ಕಾವಲಿ ಇಟ್ಟು ಸ್ವಲ್ಪ ಸ್ವಲ್ಪ ತುಪ್ಪ ಸೇರಿಸುತ್ತಾ ತಯಾರಾದ ಹಿಟ್ಟನ್ನು ಬೇಯಿಸಬೇಕು. ಒಂದು ಬದಿ ಬೆಂದ ನಂತರ ಇನ್ನೊಂದು ಬದಿ ಮಗುಚಿ ಬೇಯಿಸಬೇಕು. ಈಗ ಕೇರಳದ ಸ್ಪೆಷಲ್‌ ಉಣ್ಣಿಯಪ್ಪಂ ರೆಡಿ!

  • ಗಣೇಶ ವಿಸರ್ಜನೆಯಂದು ರುಚಿಕರವಾದ ರವೆ ಒಬ್ಬಟ್ಟು ಮಾಡಿ

    ಗಣೇಶ ವಿಸರ್ಜನೆಯಂದು ರುಚಿಕರವಾದ ರವೆ ಒಬ್ಬಟ್ಟು ಮಾಡಿ

    ಇಂದು ಹಲವೆಡೆ ಗಣೇಶನ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗಣೇಶನಿಗೆ ವಿಭಿನ್ನವಾದ ರವೆ ಒಬ್ಬಟ್ಟನ್ನು ಪ್ರಸಾದವಾಗಿ ಅರ್ಪಿಸಿ.

    ಸಾಮಾನ್ಯವಾಗಿ ಎಲ್ಲೆಡೆ ಗಣೇಶನಿಗೆ ನೈವೇದ್ಯವಾಗಿ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇಂದು ವಿಭಿನ್ನವಾಗಿ ರವೆ ಒಬ್ಬಟ್ಟನ್ನು ಮಾಡಿ. ಹೂರಣದ ಒಬ್ಬಟ್ಟು ಮಾಡುವಂತೆಯೇ ರವೆ ಒಬ್ಬಟ್ಟು ಮಾಡುತ್ತಾರೆ. ಆದರೆ ಬಳಸುವ ಸಾಮಗ್ರಿಗಳು ಬೇರೆಯಷ್ಟೇ.

    ಬೇಕಾಗುವ ಸಾಮಗ್ರಿಗಳು:
    ರವೆ
    ಗೋಧಿ ಹಿಟ್ಟು
    ಎಣ್ಣೆ
    ಉಪ್ಪು
    ನೀರು
    ಸಕ್ಕರೆ
    ರವೆ
    ತುಪ್ಪ
    ಹಾಲು
    ಏಲಕ್ಕಿ ಪುಡಿ

    ಮಾಡುವ ವಿಧಾನ:
    ಮೊದಲಿಗೆ ಒಂದು ಪಾತ್ರೆಯಲ್ಲಿ ರವೆ, ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.

    ಇನ್ನೊಂದು ಬಾಣಲೆಗೆ ಹಾಲು ಹಾಕಿ ಕುದಿಯಲು ಬಿಡಿ, ಸ್ವಲ್ಪ ಹೊತ್ತಿನ ನಂತರ, ಅದಕ್ಕೆ ರವೆ ಹಾಕಿ ಕಲಸಿ. ರವೆ ಚೆನ್ನಾಗಿ ಬೇಯ್ದ ಮೇಲೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಸಕ್ಕರೆ ಕರಗಿದ ನಂತರ ತುಪ್ಪ ಹಾಕಿ ಹುರಿದುಕೊಳ್ಳಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣ ತಣ್ಣಗಾದ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ.

    ಒಬ್ಬಟ್ಟು ಮಾಡೋದು ಹೇಗೆ?
    ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್‌ ಮಾಡಿಕೊಳ್ಳಿ. ಅದನ್ನು ಎಣ್ಣೆ ಹಚ್ಚಿದ ಪ್ಲಾಸ್ಟಿಕ್ ಅಥವಾ ಹಾಳೆಯ ಮೇಲೆ ಚಪಾತಿ ರೀತಿಯಲ್ಲಿ ಚಿಕ್ಕದಾಗಿ ಮಾಡಿಕೊಳ್ಳಿ.

    ಕೊನೆಗೆ ಕಾದ ತವೆಯ ಮೇಲೆ ತುಪ್ಪ ಹಚ್ಚಿ, ಒಬ್ಬಟ್ಟನ್ನು ಬೇಯಿಸಿಕೊಳ್ಳಿ.

  • ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಶೇಂಗಾ ಚಿಕ್ಕಿ

    ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಶೇಂಗಾ ಚಿಕ್ಕಿ

    ಸಿಹಿತಿಂಡಿ ಅಂದ್ರೆ ಯಾರಿಗೆ ಇಷ್ಟ ಇಲ್ಲಾ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟ. ಸ್ವೀಟ್‌ ಅಲ್ಲಿ ಚಿಕ್ಕಿ ಅಂದ್ರೆ ಅಂತೂ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಶೇಂಗಾ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಂಗಡಿಗಳಿಂದ ಚಿಕ್ಕಿಯನ್ನ ತೆಗೆದುಕೊಂಡು ತಿಂತೀರಾ, ಹಾಗಿದ್ರೆ ಇಲ್ಲಿದೆ ಮನೆಯಲ್ಲೇ ಚಿಕ್ಕಿ ತಯಾರಿಸುವ ಸುಲಭ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    ಶೇಂಗಾ – 200 ಗ್ರಾಂ
    ಬಿಳಿ ಬೆಲ್ಲ – 250 ಗ್ರಾಂ
    ತುಪ್ಪ – 2 ಟೀಸ್ಪೂನ್
    ಅಡುಗೆ ಸೋಡಾ – ಸ್ವಲ್ಪ
    ತುರಿದ ಒಣ ಕೊಬ್ಬರಿ- 50 ಗ್ರಾಂ
    ರೋಸ್ ಎಸೆನ್ಸ್ – ಒಂದು ಟೀಸ್ಪೂನ್‌

    ಮಾಡುವ ವಿಧಾನ:
    *ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಶೇಂಗಾ ಹಾಕಿ. ಶೇಂಗಾಗಳನ್ನು ಕೆಂಪಾಗುವಂತೆ ಚೆನ್ನಾಗಿ ಫ್ರೈ ಮಾಡಿ.
    *ಶೇಂಗಾಗಳು ಬೇಯಿಸಿದ ನಂತರ ಸಿಪ್ಪೆಯನ್ನು ತೆಗೆದುಹಾಕಿ.
    *ಸಿಪ್ಪೆ ತೆಗೆದ ಶೇಂಗಾ ಬಟ್ಟೆಯಲ್ಲಿ ಹಾಕಿ ಲತ್ತುಗುಣಿಯಿಂದ ಒತ್ತಬೇಕಾಗುತ್ತದೆ. ಲತ್ತುಗುಣಿ ಹೀಗೆ ಉರುಳಿಸುವುದರಿಂದ ಶೇಂಗಾ ಸಣ್ಣಗೆ ಒಡೆಯುತ್ತವೆ. ಚಿಕ್ಕಿ ತುಂಬಾ ಚೆನ್ನಾಗಿ ಆಗುತ್ತದೆ.
    *ಪಾತ್ರೆಯನ್ನು ಒಲೆಯ ಮೇಲೆ ಇರಿಸಿ. ಅದಕ್ಕೆ ಬಿಳಿ ಬೆಲ್ಲ ಹಾಕಿ.
    *ಬೆಲ್ಲದಲ್ಲಿ ಒಂದು ಹನಿ ನೀರು ಕೂಡ ಹಾಕಬೇಡಿ. ಬೆಲ್ಲವು ಶಾಖದಲ್ಲಿ ಕರಗುತ್ತದೆ.
    *ಬೆಲ್ಲವು ಸಂಪೂರ್ಣವಾಗಿ ಕರಗಿ ಬೆಲ್ಲದ ಪಾಕ ಸಿದ್ಧವಾಗುತ್ತದೆ. ನಂತರ, ಅರ್ಧ ಚಮಚ ತುಪ್ಪವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
    *ಬೆಲ್ಲದ ಪಾಕ ಕೆಂಪು ಬಣ್ಣಕ್ಕೆ ಬಂದಾಗ ಸ್ವಲ್ಪ ಕಟುವಾದ ವಾಸನೆ ಬರುತ್ತದೆ. ಈಗ ಒಲೆಯನ್ನು ಕಡಿಮೆ ಉರಿಯಲ್ಲಿ ಹಾಕಿ. ಈ ಹಂತದಲ್ಲಿ ಚಿಟಿಕೆ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    *ಅಡುಗೆ ಸೋಡಾವನ್ನು ಸೇರಿಸುವುದರಿಂದ ಪಾಕ ಸ್ವಲ್ಪ ಉಬ್ಬುತ್ತದೆ. ನಂತರ ಈ ಪಾಕಕ್ಕೆ ಶೇಂಗಾ, ಒಣ ಕೊಬ್ಬರಿ ತುರಿ ಮತ್ತು ರೋಸ್ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    *ಬೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
    *ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಯಲ್ಲಿ ಹಾಕಿ ಎಲ್ಲಾ ಕಡೆ ಹರಡಿ.
    *ನಂತರ ಸ್ವಲ್ಪ ತುರಿದ ಕೊಬ್ಬರಿಯನ್ನು ಮೇಲೆ ಸಿಂಪಡಿಸಿ ಮತ್ತು ಬೌಲ್​ನಿಂದ ಮತ್ತೊಮ್ಮೆ ಒತ್ತಿರಿ.
    *ಈ ಮಿಶ್ರಣವನ್ನು ಹೊರತೆಗೆಯಿರಿ. ತುಪ್ಪ ಲೇಪಿತ ಚಪಾತಿ ಲತ್ತುಗುಣಿ ಕಡ್ಡಿಯಿಂದ ಸಮವಾಗಿ ಸುತ್ತಿಕೊಳ್ಳಿ.
    *ಬೇಕಾದ ಗಾತ್ರದ ಮೇಲಿನ ಅರ್ಧವನ್ನು ಕತ್ತರಿಸಿ.  ರುಚಿಕರವಾದ ಶೇಂಗಾ ಕೊಬ್ಬರಿ ಚಿಕ್ಕಿ ತಿನ್ನಲು ರೆಡಿ.

  • ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಉತ್ತರ ಕರ್ನಾಟಕ ದಸರಾದ ಸಿಹಿ ‘ತರಗ’ ಮಾಡುವ ವಿಧಾನ

    ಹಬ್ಬ ಬಂತೆಂದರೆ ಸಾಕು ಮೊದಲು ನೆನಪಾಗುವುದೇ ಸಿಹಿ, ರುಚಿಕರವಾದ ಅಡುಗೆ ಹಾಗೂ ಇನ್ನಿತರ ಖಾದ್ಯಗಳು.

    ಯಾವುದೇ ಹಬ್ಬ ಇರಲಿ, ಸಿಹಿಯಾದ ಅಡುಗೆ ಮಾಡುವುದು ಒಂದು ರೀತಿಯ ಸಂಪ್ರದಾಯವೇ ಹೌದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೋಳಿಗೆ, ಪಾಯಸ ಹೀಗೆ ವಿಭಿನ್ನವಾದ ಸಿಹಿ ಪದಾರ್ಥಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡಲಾಗುತ್ತದೆ.

    ದಸರಾ ಹಬ್ಬವನ್ನು ರಾಜ್ಯದಲ್ಲಿ ಬೇರೆ ಬೇರೆ ಕಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇವಿಯ ಪೂಜೆ, 9 ದಿನ ಉಪವಾಸ, ಜಂಬೂಸವಾರಿ, ಹೀಗೆ ವಿಭಿನ್ನ ವಿಚಾರಗಳನ್ನು ಒಳಗೊಂಡು ದಸರಾ ಆಚರಿಸಲಾಗುತ್ತದೆ.

    ಕರ್ನಾಟಕದಲ್ಲಿ ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಹೀಗೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಹಾಗೆ ಉತ್ತರ ಕರ್ನಾಟಕದಲ್ಲಿ ದಸರಾ ಆಚರಿಸುವ ರೀತಿ ವಿಭಿನ್ನವಾಗಿದೆ. ನವರಾತ್ರಿಯ ಮೊದಲನೇ ದಿನ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಈ ದಿನವನ್ನು ಘಟಸ್ಥಾಪನೆಯೆಂದೇ ಕರೆಯಲಾಗುತ್ತದೆ. ಈ ಘಟಸ್ಥಾಪನೆ ವೇಳೆ 9 ರೀತಿಯ ದ್ವಿದಳ ಧಾನ್ಯಗಳನ್ನ ಮಣ್ಣಿನಲ್ಲಿ ಹಾಕಿ, ಒಂಬತ್ತು ದಿನಗಳ ಕಾಲ ದೇವರ ಮನೆಯಲ್ಲಿ ಇಡಲಾಗುತ್ತದೆ. ನವರಾತ್ರಿಯ ಕೊನೆಯ ದಿನ ಬನ್ನಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ತರಗ (ಸಿಹಿ ಪೂರಿ) ಎಂಬ ಸಿಹಿ ಪದಾರ್ಥವನ್ನು ಮಾಡಲಾಗುತ್ತದೆ. ಈ ತರಗವನ್ನು ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಮೈದಾ ಹಿಟ್ಟು
    ಸಕ್ಕರೆ ಅಥವಾ ಬೆಲ್ಲ
    ಅರಿಶಿಣ ಪುಡಿ

    ಮಾಡುವ ವಿಧಾನ:
    ಮೈದಾ ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಅದಕ್ಕೆ ಅರಿಶಿನವನ್ನು ಹಾಕಿ ಪೂರಿ ಮಾಡುವ ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಬಳಿಕ ಇದನ್ನು ದಿನನಿತ್ಯ ಪೂರಿ ತಯಾರಿಸಿದಂತೆ ಮಾಡಲಾಗುತ್ತದೆ.

    ಕೊನೆಯ ದಿನ ತರಗವನ್ನು ತಯಾರಿಸಿ, ದೇವರ ಮನೆಯಲ್ಲಿ ಕಟ್ಟಿಗೆಯ ʻಪೂಲಾರಿಗೆʼ ಎಂಬುವುದಕ್ಕೆ ತರಗವನ್ನು ಕಟ್ಟಲಾಗುತ್ತದೆ. ಪೂಲಾರಿಗೆ ಎಂದರೆ 3*3 ಎಂಬಂತೆ 9 ಚೌಕಗಳು ಸಿದ್ಧವಾಗುವಂತೆ  ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಅದನ್ನು ದೇವರ ಮನೆಯಲ್ಲಿ ಮೇಲೆ ಕಟ್ಟಲಾಗುತ್ತದೆ. ಅದಕ್ಕೆ ತಯಾರಿಸಿರುವ ತರಗವನ್ನು ದಾರದ ಸಹಾಯದಿಂದ ಕಟ್ಟಲಾಗುತ್ತದೆ. ಅದರ ಜೊತೆಗೆ ತೋರಣವನ್ನು ಕಟ್ಟಲಾಗುತ್ತದೆ. ಈ ತರಗವನ್ನು ಬನ್ನಿ ಕೊಟ್ಟು ಬಳಿಕ ದೇವರ ಮನೆಯಲ್ಲಿ ಕಟ್ಟಲಾದ ಪೂಲಾರಿಗೆಯಿಂದ ಕಿತ್ತು ತೆಗೆದುಕೊಳ್ಳಲಾಗುತ್ತದೆ. ದೇವರಿಗೆ ಬನ್ನಿ ಅರ್ಪಿಸಿ ಇದನ್ನೂ ತಿನ್ನುವ ಸಂಪ್ರದಾಯವಿದೆ.

  • ಊಟದ ನಂತರ ಸವಿಯಲು ಮಾಡಿ ಸಿಹಿ ಸಿಹಿ ದೂದ್ ಪಾಕ್

    ಊಟದ ನಂತರ ಸವಿಯಲು ಮಾಡಿ ಸಿಹಿ ಸಿಹಿ ದೂದ್ ಪಾಕ್

    ದೂದ್ ಪಾಕ್ ಹಾಲು, ಅಕ್ಕಿ ಮತ್ತು ಒಣ ಬೀಜಗಳನ್ನು ಬಳಸಿ ಮಾಡುವ ಕೆನೆಭರಿತ ಭಾರತೀಯ ಸಿಹಿ. ಹಬ್ಬ ಹರಿದಿನಗಳಲ್ಲಿ ಸಾಮಾನ್ಯವಾಗಿ ಇದನ್ನು ತಯಾರಿಸಿ ಹಂಚಲು ಸೂಕ್ತವಾಗಿದೆ. ಊಟದ ನಂತರ ಇದನ್ನು ಸವಿದರೆ ಭೋಜನ ಸಂಪೂರ್ಣವಾಗುತ್ತದೆ. ಇದನ್ನು ತಯಾರಿಸಿದ ಬಳಿಕ ತಣ್ಣಾಗಿಸಿ ಸವಿದರೆ ಅದ್ಭುತ ಎನಿಸುತ್ತದೆ. ಸಿಹಿಯಾದ ದೂದ್ ಪಾಕ್ ನೀವೂ ಮಾಡಿ, ಊಟದ ಬಳಿಕ ಮನೆಮಂದಿಗೆ ಹಂಚಿ.

    ಬೇಕಾಗುವ ಪದಾರ್ಥಗಳು:
    ಹಾಲು – 1 ಲೀಟರ್
    ತೊಳೆದು ನೆನೆಸಿದ ಅಕ್ಕಿ – ಅರ್ಧ ಕಪ್
    ಸಕ್ಕರೆ – ಅರ್ಧ ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಕೇಸರಿ ಎಳೆಗಳು – ಚಿಟಿಕೆ
    ಕತ್ತರಿಸಿದ ಬಾದಾಮಿ – 2 ಟೀಸ್ಪೂನ್
    ಕತ್ತರಿಸಿದ ಪಿಸ್ತಾ – 2 ಟೀಸ್ಪೂನ್ ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ತಳವಿರುವ ಪ್ಯಾನ್‌ನಲ್ಲಿ ಹಾಲನ್ನು ಕಡಿಮೆ ಉರಿಯಲ್ಲಿ ಕುದಿಸಿಕೊಳ್ಳಿ.
    * ತೊಳೆದು ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ, ಅಕ್ಕಿ ಮೃದುವಾಗುವವರೆಗೆ ಮತ್ತು ಹಾಲು ದಪ್ಪವಾಗುವವರೆಗೆ ಬೇಯಿಸಿ.
    * ಹಾಲಿನ ಮಿಶ್ರಣಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಚಿಟಿಕೆ ಕೇಸರಿ ಸೇರಿಸಿ ಚೆನ್ನಾಗಿ ಬೆರೆಸಿ.
    * ಸಕ್ಕರೆ ಕರಗುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ.
    * ಬಳಿಕ ಉರಿಯನ್ನು ಆಫ್ ಮಾಡಿ, ತಣ್ಣಗಾಗಲು ಬಿಡಿ.
    * ನಂತರ ಅದನ್ನು ಫ್ರಿಜ್‌ನಲ್ಲಿ 1-2 ಗಂಟೆ ಇಡಿ.
    * ಬಡಿಸುವುದಕ್ಕೂ ಮೊದಲು ಹೆಚ್ಚಿದ ಬೀಜಗಳಿಂದ ಅಲಂಕರಿಸಿ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

  • ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    ದೀಪಾವಳಿ ಹಬ್ಬ ಬಂತು ಎಂದರೆ ಚಳಿಗಾಲವೂ ಆರಂಭವಾಯ್ತು ಎಂದರ್ಥ. ಈ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾವು ಈ ವಿಶೇಷ ದಿನಕ್ಕೆ ವಾಲ್ನಟ್ ಬರ್ಫಿ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ನೀವು ಟ್ರೈ ಮಾಡಿ, ಸವಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೂ ಹಂಚಿ ಸಂಬಂಧಗಳನ್ನು ಗಟ್ಟಿಗೊಳಿಸಿ.

    ಬೇಕಾಗುವ ಪದಾರ್ಥಗಳು:
    ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್
    ಸಕ್ಕರೆ – 4 ಟೀಸ್ಪೂನ್
    ಹಾಲಿನ ಪುಡಿ – 4 ಟೀಸ್ಪೂನ್
    ಹಾಲು – 4 ಟೀಸ್ಪೂನ್
    ಜಾಯಿಕಾಯಿ ಪುಡಿ – ಚಿಟಿಕೆ
    ತುಪ್ಪ – 4 ಟೀಸ್ಪೂನ್
    ಮಾವಾ – ಕಾಲು ಕಪ್ ಇದನ್ನೂ ಓದಿ: ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ

    ಬೇಕಾಗುವ ಪದಾರ್ಥಗಳು:
    * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ.
    * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ.
    * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ 1 ನಿಮಿಷ ಬೆರೆಸಿ. ಅದನ್ನು 2 ನಿಮಿಷಗಳ ಕಾಲ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆ ಮಿಶ್ರಣ ಸೇರಿಸಿ ಮೈಕ್ರೊವೇವ್‌ನಲ್ಲಿ 1 ನಿಮಿಷ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಈಗ ಗ್ರೀಸ್ ಮಾಡಿದ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹರಡಿ, 1 ಗಂಟೆ ತಣ್ಣಗಾಗಲು ಪಕ್ಕಕ್ಕೆ ಇರಿಸಿ.
    * ನಂತರ ಅದನ್ನು ಚಾಕುವಿನ ಸಹಾಯದಿಂದ ಚೌಕಾಕಾರ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳಿ.
    * ಇದೀಗ ವಾಲ್ನಟ್ ಬರ್ಫಿ ತಯಾರಾಗಿದ್ದು, ಕುಟುಂಬ, ಸ್ನೇಹಿತರಿಗೆ ಹಂಚಿ. ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

  • ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ

    ರ್ಫಿ ಭಾರತೀಯ ಸಿಹಿಯಾಗಿದ್ದು ಹೆಚ್ಚಾಗಿ ಹಾಲನ್ನು ಬಳಸಿ ಮಾಡಲಾಗುತ್ತದೆ. ಇತರ ಹಲವು ಪದಾರ್ಥಗಳನ್ನು ಬಳಸಿ ವಿಧವಿಧವಾಗಿಯೂ ಮಾಡಲಾಗುತ್ತದೆ. ಡ್ರೈಫ್ರೂಟ್ಸ್ ಬರ್ಫಿ ಮಾಡೋದು ಹೇಗೆಂದು ನಾವು ಕೆಲ ದಿನಗಳ ಹಿಂದೆ ನೋಡಿದ್ದೇವೆ. ನಾವಿಂದು ಅಂಜೂರ ಹಾಗೂ ಖರ್ಜೂರ ಬಳಸಿ ಸಿಹಿಯಾದ ಬರ್ಫಿ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವು ಕೂಡಾ ಇದನ್ನು ಮನೆಯಲ್ಲಿ ಮಾಡಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಅಂಜೂರ – 1 ಕಪ್
    ಖರ್ಜೂರ – 1 ಕಪ್
    ನೀರು – 1 ಟೀಸ್ಪೂನ್
    ಸೂರ್ಯಕಾಂತಿ ಎಣ್ಣೆ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಬಾದಾಮಿ – 3 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಗೋಡಂಬಿ – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಪಿಸ್ತಾ – 2 ಟೀಸ್ಪೂನ್
    ಏಲಕ್ಕಿ – 3 ಇದನ್ನೂ ಓದಿ: ನಾಗರ ಪಂಚಮಿ ಸ್ಪೆಷಲ್: ಸುಲಭವಾಗಿ ಅಕ್ಕಿ ಉಂಡೆ ಈ ರೀತಿ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಅಂಜೂರ ಹಾಗೂ ಖರ್ಜೂರವನ್ನು ಪ್ರತ್ಯೇಕವಾಗಿ ಬೆಚ್ಚಗಿನ ನೀರಿನಲ್ಲಿ 15-20 ನಿಮಿಷಗಳ ಕಾಲ ನೆನೆಸಿಡಿ.
    * ಬಳಿಕ ನೀರನ್ನು ಹರಿಸಿ, ಅವೆರಡನ್ನೂ ಮಿಕ್ಸರ್ ಜಾರ್‌ಗೆ ಹಾಕಿ ಮೃದುವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ರುಬ್ಬುವ ವೇಳೆ 1-2 ಟೀಸ್ಪೂನ್ ನೀರು ಸೇರಿಸಿಕೊಳ್ಳಬಹುದು.
    * ಸೂರ್ಯಕಾಂತಿ ಎಣ್ಣೆ ಮತ್ತು ತುಪ್ಪವನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿ. ಬಳಿಕ ಅದನ್ನು ತಳವಿರುವ ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ.
    * ಅದಕ್ಕೆ ಅಂಜೂರ ಹಾಗೂ ಖರ್ಜೂರದ ಪೇಸ್ಟ್ ಅನ್ನು ಸೇರಿಸಿ ಆಗಾಗ ಮಿಶ್ರಣ ಮಾಡುತ್ತಾ ಸುಮಾರು 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ನಂತರ ಅದಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಏಲಕ್ಕಿ ಬೀಜಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಮಧ್ಯಮ ಉರಿಯಲ್ಲಿ ಬೇಯಿಸುವುದನ್ನು ಮುಂದುವರಿಸಿ, ಆಗಾಗ ಕೈಯಾಡಿಸುತ್ತಾ ಇನ್ನೊಂದು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಈಗ ಉರಿಯನ್ನು ಆಫ್ ಮಾಡಿ, ಗ್ರೀಸ್ ಮಾಡಿದ ತಟ್ಟೆಗೆ ಈ ಮಿಶ್ರಣವನ್ನು ವರ್ಗಾಯಿಸಿ, ಸಮಾನವಾಗಿ ಹರಡಿ.
    * ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಚೌಕಾಕಾರ ಇಲ್ಲವೇ ವಜ್ರಾಕಾರವಾಗಿ ಕತ್ತರಿಸಿಕೊಳ್ಳಿ.
    * ಇದೀಗ ಅಂಜೂರ ಹಾಗೂ ಖರ್ಜೂರ ಬರ್ಫಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಹೀಗೆ ಮಾಡಿ ಸಿಂಪಲ್ ಪೀನಟ್ ಬಟರ್‌ನ ಮಿಠಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

    ಸ್ವೀಟ್ ರಂಗೀಲಾ ಬರ್ಫಿ ಟೇಸ್ಟ್ ಮಾಡಿ ಥ್ರಿಲ್ ಆಗಿ

    ಸಿಹಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಸಿಹಿ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಕಡಿಮೆ ಸಮಯದಲ್ಲಿ ಸಿಹಿ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ ನೋಡಿ. ಇವತ್ತಿನ ನಮ್ಮ ರೆಸಿಪಿಯ ಹೆಸರು ರಂಗೀಲಾ ಬರ್ಫಿ. ಹಾಗಿದ್ದರೆ ಇದನ್ನು ಹೇಗೆ ಮಾಡೋದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಉಳಿದ ಅನ್ನ ಇದ್ರೆ ಖಂಡಿತ ಟ್ರೈ ಮಾಡಿ ಬೆಳ್ಳುಳ್ಳಿ ರೈಸ್

    ಬೇಕಾಗುವ ಸಾಮಗ್ರಿಗಳು:
    ಹಾಲಿನ ಪೌಡರ್- 2 ಕಪ್
    ಹಾಲು- 1 ಕಪ್
    ಸಕ್ಕರೆ- ಅರ್ಧ ಕಪ್
    ತುಪ್ಪ- ಅರ್ಧ ಕಪ್
    ಕಲರ್ ಪೌಡರ್- ಸ್ವಲ್ಪ
    ಏಲಕ್ಕಿ ಪುಡಿ- ಸ್ವಲ್ಪ

    ಮಾಡುವ ವಿಧಾನ:

    • ಮೊದಲಿಗೆ ಒಂದು ಪ್ಯಾನ್‌ನಲ್ಲಿ ತುಪ್ಪ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಅದನ್ನು ಕರಗಿಸಿಕೊಳ್ಳಿ. ಬಳಿಕ ಅದಕ್ಕೆ ಹಾಲನ್ನು ಹಾಕಿ ಚನ್ನಾಗಿ ತಿರುವಿಕೊಳ್ಳಬೇಕು.
    • ಬಳಿಕ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲಿನ ಪೌಡರ್ ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವು ಮಂದವಾಗುತ್ತಾ ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿಕೊಂಡು ತಿರುವಿಕೊಳ್ಳಿ.
    • ನಂತರ ಆ ಮಿಶ್ರಣವನ್ನು ಒಂದು ಬೌಲಿಗೆ ಹಾಕಿಕೊಂಡು ಅದಕ್ಕೆ ಕಲರ್ ಪೌಡರ್ ಸೇರಿಸಿಕೊಳ್ಳಿ. ಬಳಿಕ ಒಂದು ಟ್ರೇ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿಕೊಳ್ಳಿ. ಬೇಕಿಂಗ್ ಪೇಪರ್ ಕೂಡಾ ಬಳಸಿಕೊಳ್ಳಬಹುದು.
    • ಬಳಿಕ ಆ ಟ್ರೇಗೆ ಮಿಶ್ರಣವನ್ನು ಹಾಕಿಕೊಂಡು ಎಲ್ಲಾ ಕಡೆ ಹರಡಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಬಾದಾಮಿ ಪೀಸ್‌ಗಳಿಂದ ಅಲಂಕರಿಸಿ. ರಂಗೀಲಾ ಬರ್ಫಿ ತಿನ್ನಲು ರೆಡಿ. ಇದನ್ನೂ ಓದಿ: ದೇಹಕ್ಕೆ, ಮನಸ್ಸಿಗೆ ಮುದನೀಡುವ ಡ್ರೈಫ್ರೂಟ್ಸ್ ಮಿಲ್ಕ್‌ಶೇಕ್

  • ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    ವಿಶೇಷ ದಿನಗಳಿಗಾಗಿ ಸಿಹಿ ಸಿಹಿ ಮಲಾಯಿ ಲಡ್ಡು ರೆಸಿಪಿ

    ನುದಿನ ಒಂದಿಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಹುಟ್ಟುಹಬ್ಬ ಇಲ್ಲವೇ ವಾರ್ಷಿಕೋತ್ಸವ. ಮನೆಯಲ್ಲಿ ಸಣ್ಣ-ಪುಟ್ಟ ಫಂಕ್ಷನ್ ಇರೋವಾಗ ಏನಾದರೂ ಸಿಹಿ ಮಾಡಬೇಕಲ್ವಾ. ನಾವಿಂದು ಒಂದು ಸ್ಪೆಷಲ್ ಆದ ಸಿಹಿ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸುಲಭದ ಮಲಾಯಿ ಲಡ್ಡು (Malai Laddu) ಒಮ್ಮೆ ನೀವೂ ಮಾಡಿ, ವಿಶೇಷ ದಿನಗಳನ್ನು ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಪನೀರ್ – 200 ಗ್ರಾಂ
    ಕಂಡೆನ್ಸ್‌ಡ್ ಮಿಲ್ಕ್ – ಮುಕ್ಕಾಲು ಕಪ್
    ಕುದಿಸಿದ ಹಾಲು – ಕಾಲು ಕಪ್
    ಸಕ್ಕರೆ – 1 ಟೀಸ್ಪೂನ್
    ತುಪ್ಪ – ಅಗತ್ಯಕ್ಕೆ ತಕ್ಕಂತೆ
    ಏಲಕ್ಕಿ – 2
    ರೋಸ್ ಎಸೆನ್ಸ್ – 2 ಹನಿ
    ಕೇಸರಿ – ಕೆಲವು ಎಸಳು
    ಕತ್ತರಿಸಿದ ಪಿಸ್ತಾ – ಅಲಂಕಾರಕ್ಕೆ ಇದನ್ನೂ ಓದಿ: ಅತಿಥಿಗಳು ಬಂದಾಗ ಫಟಾಫಟ್ ಅವಲಕ್ಕಿ ಲಾಡು ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ, ಅದರಲ್ಲಿ ಪನೀರ್ ಅನ್ನು ಸುಮಾರು 10-15 ನಿಮಿಷಗಳ ವರೆಗೆ ಇರಿಸಿ. ಇದರಿಂದ ಪನೀರ್ ಮೃದುವಾಗುತ್ತದೆ.
    * ಬಳಿಕ ಪನೀರ್ ಅನ್ನು ನೀರಿನಿಂದ ತೆಗೆದು, ನಿಮ್ಮ ಬೆರಳುಗಳಿಂದ ಪುಡಿ ಮಾಡಿ.
    * ಈಗ ಪನೀರ್ ಅನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ಅದಕ್ಕೆ ಕುದಿಸಿ ಆರಿಸಿದ ಹಾಲು, ಕಂಡೆನ್ಸ್‌ಡ್ ಮಿಲ್ಕ್, ಕೇಸರಿ, ಏಲಕ್ಕಿ, ಸಕ್ಕರೆ ಹಾಗೂ ರೋಸ್ ಎಸೆನ್ಸ್ ಅನ್ನು ಸೇರಿಸಿ ರುಬ್ಬಿಕೊಳ್ಳಿ.
    * ಈಗ ಕಡಿದ ಮಿಶ್ರಣವನ್ನು ಒಂದು ಪ್ಯಾನ್‌ಗೆ ಹಾಕಿ ಕುದಿಸಿ.
    * ಉರಿಯನ್ನು ಮಧ್ಯಮದಲ್ಲಿಟ್ಟು ಕೈಯಾಡಿಸುತ್ತಾ ದಪ್ಪವಾಗುವವರೆಗೆ ಬೇಯಿಸಿ.
    * ಮಿಶ್ರಣ ಪ್ಯಾನ್ ಅನ್ನು ಬಿಟ್ಟು ಮುದ್ದೆಯಂತಾದಾಗ ಉರಿಯನ್ನು ಆಫ್ ಮಾಡಿ, ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
    * ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.
    * ಪ್ರತಿ ಉಂಡೆಗಳಿಗೂ ಕತ್ತರಿಸಿದ ಪಿಸ್ತಾವನ್ನು ಇಟ್ಟು ಅಲಂಕರಿಸಿದರೆ ಮಲಾಯಿ ಲಡ್ಡು ತಯಾರಾಗುತ್ತದೆ.
    * ಮಲಾಯಿ ಲಡ್ಡುಗಳನ್ನು ನೀವು ಬೇಕೆಂದರೆ 5-6 ದಿನಗಳ ವರೆಗೆ ಕೆಡದಂತೆ ಇಡಬಹುದು. ಇದನ್ನೂ ಓದಿ: ರುಚಿಯಾದ ರಾಗಿ ಪಾಯಸ ಮಾಡುವ ವಿಧಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k