Tag: Sweater

  • ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ವೆಂಬರ್ ತಿಂಗಳು ಬರುತ್ತಿದ್ದಂತೆಯೇ ಚಳಿ, ಗಾಳಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನ ಚಳಿಯಿಂದ ಬೆಚ್ಚಗಿರಲು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗಿರುತ್ತಾರೆ. ಅಲ್ಲದೇ ಚಳಿಗಾಲದಲ್ಲಿ ಎಂತಹ ಉಡುಪುಗಳನ್ನು ಧರಿಸಬೇಕು ಎಂಬುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ವರ್ಷಾಂತ್ಯದಲ್ಲಿ ಬರುವ ಚಳಿಗಾಲದಲ್ಲಿ ಜನರ ಕಣ್ಣು ಕುಕ್ಕುವಂತಹ ನಾನಾ ವೆರೈಟಿ ಹೊದಿಕೆಗಳು, ಸ್ಟೆಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಅಲೆನ್ ಸೋಲಿ ಮೆನ್ ಸ್ವೆಟ್‍ಶರ್ಟ್
    ಕಿತ್ತಳೆ ಬಣ್ಣದ ಈ ಸ್ವೆಟ್‍ಶರ್ಟ್ ನಿಮ್ಮನ್ನು ಬೆಚ್ಚಗಿರಿಸುವುದಷ್ಟೇ ಅಲ್ಲದೇ ಸಖತ್ ಅಟ್ರ್ಯಾಕ್ಟಿವ್ ಲುಕ್ ನೀಡುತ್ತದೆ. ಇದು ಚಳಿಗಾಲದಲ್ಲಿಯೂ ಬೇಸಿಗೆ ಎಂಬಂತಹ ಭಾವನೆ ಮೂಡಿಸುವಷ್ಟು ನಿಮ್ಮನ್ನು ಬೆಚ್ಚಗಿರಿಸುತ್ತದೆ. ಜೊತೆಗೆ ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ನೂಲಿನಿಂದ ಮಾಡಲಾಗಿರುವ ಈ ಜಾಕೆಟ್ ಮದ್ಯದಲ್ಲಿ ಜಿಪ್ ಇರುವುದನ್ನು ಕಾಣಬಹುದಾಗಿದೆ.

    ಮಾಂಟೆ ಕಾರ್ಲೊ ವುಮೆನ್ಸ್ ಬ್ಲಾಕ್ ಪಾರ್ಕ್ ಜಾಕೆಟ್
    ಮುಂಭಾಗ ಜಿಪ್ ಮತ್ತು ಬಟನ್‍ಗಳೊಂದಿಗೆ, ದೊಡ್ಡ ಜೇಬಿಗಳಿರುವ ಈ ಜಾಕೆಟ್ ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಫ್ಯಾಶನ್ ಲುಕ್ ನೀಡುವ ಈ ಜಾಕೆಟ್ ಉಷ್ಣಾಂಶವನ್ನು ಹೆಚ್ಚಾಗಿಸುತ್ತದೆ. ಈ ಜಾಕೆಟ್ ಅನ್ನು ಜೀನ್ಸ್ ಜೊತೆಗೆ ಶೂಗಳೊಂದಿಗೆ ಧರಿಸುವುದರಿಂದ ಬೆಸ್ಟ್ ಎಂದೇ ಹೇಳಬಹುದು.

    ಜಾಮ್ & ಹನಿ ಬಾಯ್ಸ್ ಸ್ವೆಟರ್
    ಸ್ಲೀವ್ಸ್ ಇಲ್ಲದ ಈ ಸ್ವೆಟರ್ ಕುತ್ತಿಗೆ ಪೂರ್ತಿ ಬರುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಲರ್ ಉಡುಪು ಚೆನ್ನಾಗಿಯೇ ಕಾಣಿಸುತ್ತದೆ. ಸದ್ಯ ಈ ಸ್ವೆಟರ್ ಕೂಡ ಬ್ಲಾಕ್ ಕಲರ್ ಆಗಿದ್ದು, ಮದ್ಯದಲ್ಲಿ ಬಿಳಿ ಬಣ್ಣದ ಸ್ಟಾರ್ ಡಿಸೈನ್ ಎದ್ದು ಕಾಣುತ್ತದೆ. ವಿಷೇಶವೆಂದರೆ ಈ ಸ್ವೆಟರ್ ಅನ್ನು ಯಾವುದೇ ಶರ್ಟ್ ಮೇಲೆ ಬೇಕಾದರೂ ಧರಿಸಬಹುದಾಗಿದೆ.

    ಸಿಂಬಲ್ ಗರ್ಲ್ಸ್‌  ಜಾಕೆಟ್
    ಯೆಲ್ಲೋ ಕಲರ್‌ನ ಈ ಜಾಕೆಟ್ ಹುಡುಗಿಯರಿಗೇ ಚಳಿಗಾಲದಲ್ಲಿ ಬೆಸ್ಟ್ ಎಂದೇ ಹೇಳಬಹುದು. ಈ ಜಾಕೆಟ್‍ನ ಮುಂಭಾಗದಲ್ಲಿ ಜಿಪ್ ಇರುತ್ತದೆ. ಈ ಜಾಕೆಟ್ ಒಳಗಡೆ ಕಪ್ಪು ಲೈನಿಂಗ್ ಮತ್ತು ಮ್ಯಾಂಡರಿನ್ ಕಾಲರ್ ಇದೆ. ಇದು ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಧರಿಸಲು ಕಂಫರ್ಟ್ ಆಗಿರುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ದಾಖಲೆಯ ಚಳಿ- ಸ್ವೆಟರ್‌ಗಾಗಿ ಬಿಬಿಎಂಪಿಗೆ ಶಾಲಾ ಮಕ್ಕಳ ಮನವಿ

    ಬೆಂಗಳೂರಿನಲ್ಲಿ ದಾಖಲೆಯ ಚಳಿ- ಸ್ವೆಟರ್‌ಗಾಗಿ ಬಿಬಿಎಂಪಿಗೆ ಶಾಲಾ ಮಕ್ಕಳ ಮನವಿ

    ಬೆಂಗಳೂರು: ಚಳಿಗಾಲ ಬಂತು ಸ್ವೆಟರ್ಸ್ (Sweater) ಕೊಡಿ ಪ್ಲೀಸ್ ಎಂದು ಅಂಗಲಾಚುತ್ತಿರುವ 25 ಸಾವಿರ ಬಿಬಿಎಂಪಿ (BBMP) ಶಾಲಾ ಮಕ್ಕಳ ಕೂಗು ಪಾಲಿಕೆ ಆಡಳಿತಕ್ಕೆ ಕೇಳಿಸದಿರುವುದು ಮಾತ್ರ ದುರಂತವೇ ಸರಿ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಚಳಿಗಾಲ ಸಮೀಪಿಸುತ್ತಿದೆ. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸ್ವೆಟರ್ಸ್‍ಗಳು ಹಾಳಾಗಿ ಮೂಲೆ ಸೇರಿವೆ. ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಶಾಲಾ ಮಕ್ಕಳಿಗೆ ಸ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ. ಅರ್ಧ ವರ್ಷವೇ ಮುಗಿದ್ರೂ ಸಿಗದ ಸ್ವೆಟರ್ಸ್ ಗಳಿಗಾಗಿ 25 ಸಾವಿರ ಮಕ್ಕಳು ಜಾತಕಪಕ್ಷಿಗಳಂತಾಗಿದ್ದಾರೆ. ಶಾಲೆಗಳತ್ತ ಹೋದ್ರೆ ಸಾಕು, ನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್..ಪ್ಲೀಸ್.. ಎಂದು ಅಂಗಲಾಚುತ್ತಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಕೋತಿಗಳ ಕಾಟ- ಕೈಯಲ್ಲಿರೋ ಬ್ಯಾಗನ್ನೂ ಬಿಡದೇ ಚೆಲ್ಲಾಟ

    ಚಳಿಗಾಲ (Winter) ಶುರುವಾದ್ರೂ ಬಿಬಿಎಂಪಿ ಶಾಲೆಯ ಬರೋಬ್ಬರಿ 25 ಸಾವಿರ ಮಕ್ಕಳಿಗೆ ಇನ್ನೂ ಸ್ವೆಟರ್ಸ್ ವಿತರಣೆಯಾಗಿಲ್ಲ. ಸ್ವೆಟರ್ಸ್ ವಿತರಣೆಯಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಪರಿಹಾರವೇನು? ಎಂದು ಕೇಳಿದ್ರೆ ಹೊಸದೊಂದು ಪ್ಲಾನ್ ಹಾಕ್ಕೊಂಡು ಕೂತಿದ್ದೇವೆ ಅಂತಾರೆ ಪಾಲಿಕೆ ಅಧಿಕಾರಿಗಳು. ಅವರ ಪ್ರಕಾರ ರೀ ಟೆಂಡರ್ ಕರೆದು ಸ್ವೆಟರ್ಸ್ ಕೊಡೋದಕ್ಕೆಲ್ಲಾ 2-3 ತಿಂಗ್ಳಾಗುತ್ತದೆ. ಹಾಗಾಗಿ ಟೆಂಡರ್ ಸಹವಾಸವೇ ಬೇಡ. ಮಕ್ಕಳ ಪೋಷಕರ ಖಾತೆಗೆ ಸ್ವೆಟರ್ಸ್‍ಗೆ ನಿಗದಿಯಾಗಿರುವಷ್ಟು ಹಣವನ್ನು ಜಮಾ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಾರೆ.

    ಬಿಬಿಎಂಪಿ ಏನೋ ಪೋಷಕರು ಅಥವಾ ಮಕ್ಕಳ ಖಾತೆಗೆ ಹಣ ಹಾಕೋ ಪ್ಲಾನ್‍ನಲ್ಲಿದೆ. ಆದರೆ ಖಾತೆಗೆ ಹಣ ಹಾಕಿದ್ರೆ ನಿಜಕ್ಕೂ ಮಕ್ಕಳು ಅದರಲ್ಲಿ ಸ್ವೆಟರ್ ಖರೀದಿ ಸಾಧ್ಯನಾ ಅನ್ನೊದೇ ಪ್ರಶ್ನೆ. ಕಾರಣ ಬಿಬಿಎಂಪಿ ಶಾಲೆಯಲ್ಲಿ ಓದೋ ಮಕ್ಕಳು ಬಹುತೇಕ ಬಡವರ ಮಕ್ಕಳು, ಈ ಹಣವನ್ನೂ ಬೇರೆ ಉದ್ದೇಶಕ್ಕೆ ಬಳಸಿಕೊಂಡ್ರೆ ಮಕ್ಕಳಿಗೆ ಸ್ವೆಟರ್ ಕೊಡಿಸಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಇದರ ಮಧ್ಯ ಬಿಬಿಎಂಪಿ ಪ್ರತಿಮಕ್ಕಳ ಖಾತೆಗೆ 650 ರೂಪಾಯಿ ವರ್ಗಾವಣೆ ಮಾಡಲು ಸಿದ್ಧತೆ ನಡೆಸ್ತಿದೆ. ಮುಂದಿನ ಶೈಕ್ಷಣೆಕ ವರ್ಷದಿಂದ ಶೂ, ಸಾಕ್ಸ್ ಗೂ ಇದೆ ರೀತಿ ಮಾಡುವ ಪ್ಲ್ಯಾನ್‍ನಲ್ಲಿದೆ.

    ಒಟ್ಟಾರೆ ಮಕ್ಕಳ ಪೋಷಕರ ಖಾತೆಗಳಿಗೆ ಹಣವನ್ನು ಜಮಾ ಮಾಡಿ ಅವರೇ ಸ್ವೆಟರ್ಸ್ ಕೊಳ್ಳುವಂತೆ ಮಾಡಲು ಹೊರಟಿರುವ ವಿನೂತನ ವ್ಯವಸ್ಥೆಯಿಂದ ಪ್ರಯೋಜನಗಳಿಗಿಂತ ಸಮಸ್ಯೆನೇ ಹೆಚ್ಚಾಗುವ ಆತಂಕವಿದೆ. ಅಲ್ಲದೇ ಇನ್ನೂ ಬಿಬಿಎಂಪಿ ಅಧಿಕಾರಿಗಳು ಈ ಯೋಜನೆಯಿಂದ ಮತ್ತೆಷ್ಟು ಮಕ್ಕಳಿಗೆ ಹಣ ವಂಚನೆ ಮಾಡ್ತಾರೋ ಅನ್ನೋದೇ ಸಾರ್ವಜನಿಕರ ಪ್ರಶ್ನೆ.

    Live Tv
    [brid partner=56869869 player=32851 video=960834 autoplay=true]

  • ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್​ ಈ ಕೆಳಗಿನಂತೆ ನೀಡಲಾಗಿದೆ.

    ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ:   ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್

    * ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
    * ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    * ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
    * ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.

    * ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
    * ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

    * ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
    * ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.

    * ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
    * ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.


    * ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.

  • 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್

    1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ಹೆಸರು ಕೇಳಿಬರುತ್ತೀರುವ ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ನಟ ಕೋಮಲ್ ವಿರುದ್ಧ ಕೇಳಿ ಬರುತ್ತಿರುವ ಹಗರಣಕ್ಕೆ ಸಂಬಂಧಿಸಿದ ಸ್ಫೋಟಕ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ತಿರುವು ಸಿಕ್ಕಿದ್ದು, ಹಂಚಿಕೆ ಹಗರಣ ಕೈ ಬಿಡುವಂತೆ ಒತ್ತಡ ಹೇರಲಾಗಿದೆ. ಆರೋಪ ಕೇಳಿ ಬಂದ ಬಳಿಕ ಸಂಧಾನ ಸಭೆ ನಡೆಸಲಾಗಿದೆ. ಬಿಬಿಎಂಪಿ ಶಿಕ್ಷಣ ಸಹಾಯಕ ಆಯುಕ್ತ ಹನುಮಂತಪ್ಪ ಸಂಧಾನದಲ್ಲಿ ಭಾಗಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಸಿಎಸ್ ರಘು ಜೊತೆ ಬಿಬಿಎಂಪಿ ದಲಿತ ನೌಕರರ ಸಂಘದ ಕಚೇರಿಯಲ್ಲಿ ಸಂಧಾನ ನಡೆಸಲಾಗಿದೆ. ಸಂಧಾನಕ್ಕೆ ಶಿಕ್ಷಣ ಸಹಾಯಕ ಆಯುಕ್ತ ಹನುಮಂತಪ್ಪ ಆಹ್ವಾನಿಸಿದ್ದರು.

    ಸಹೋದರ ಕೋಮಲ್ ಪರ ನಟ ಜಗ್ಗೇಶ್ ಬೆದರಿಕೆಯನ್ನು ಹಾಕಿ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಸ್ವೆಟರ್ ಟೆಂಡರ್‍ನಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಡವನ್ನು ಹೇರಿದ್ದರು. ನಟ ಜಗ್ಗೇಶ್, ನಟ ಕೋಮಲ್‍ರಿಂದ ರಾಜಕೀಯ ಒತ್ತಡ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಆರೋಪ ಕೇಳಿ ಬಂದಿದೆ.

    ಕೋಮಲ್ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಜಗ್ಗೇಶ್ ಅವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಸಂಧಾನ ಸಭೆಯಲ್ಲಿ ನಡೆದಿರುವ ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ:  ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ

    2020-21 ಸಾಲಿನಲ್ಲಿ ಪಾಲಿಕೆ ಶಾಲೆಗಳಿಗೆ ಸ್ವೆಟರ್ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ತರಾತುರಿಯಲ್ಲಿ ಸ್ವೆಟರ್ ಪೂರೈಕೆ ಮಾಡ್ಬೇಕಾಗಿರೋದ್ರಿಂದ ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‍ಗಳನ್ನು ಸರಬರಾಜು ಮಾಡಲು ಆದೇಶವೂ ಆಗಿತ್ತು. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದ್ದು, ಬಿಬಿಎಂಪಿಗೆ ನಟ ಕೋಮಲ್ ಸಹ ಸಾಥ್ ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪ ಮಾಡಿದೆ.

  • ಸೇಫ್ಟಿ ಪಿನ್ ಇರೋ 25 ಸಾವಿರದ ಸ್ವೆಟರ್ ಧರಿಸಿದ ಕತ್ರಿನಾ

    ಸೇಫ್ಟಿ ಪಿನ್ ಇರೋ 25 ಸಾವಿರದ ಸ್ವೆಟರ್ ಧರಿಸಿದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ 25 ಸಾವಿರ ಬೆಲೆಯ ಸ್ವೆಟರ್‍ವೊಂದನ್ನು ಧರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ದುಬಾರಿ ಬೆಲೆಯ ಸ್ವೆಟರ್ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡು ಕತ್ರಿನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹೌದು, ಹಲವು ನಟಿಯರ ಪೈಕಿ ನಟಿ ಕತ್ರಿನಾ ಕೈಫ್ ವಿಭಿನ್ನ ಶೈಲಿಯ ಉಡುಗೆಗಳನ್ನು ಆಯ್ಕೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ಇತ್ತೀಚೆಗಷ್ಟೇ ಕತ್ರಿನಾ 25 ಸಾವಿರ ರೂ. ಮೌಲ್ಯದ ಸ್ವೆಟರ್‍ವೊಂದನ್ನು ಖರೀದಿಸಿದ್ದಾರೆ.

     

    View this post on Instagram

     

    A post shared by Katrina Kaif (@katrinakaif)

    ಈ ಸ್ವೆಟರ್ ವಿಶೇಷವೆನಂದರೆ ಇದು ಕ್ರಾಪ್ ಶೇಪ್ ಹೊಂದಿದ್ದು, ಸೊಂಟದಷ್ಟು ಬರುತ್ತದೆ. ಜೊತೆಗೆ ರಿಬ್ಬಿಡ್ ಕಾಲರ್‍ನನ್ನು ಹೊಂದಿದ್ದು, ಸ್ವೆಟರ್ ಮಧ್ಯದಲ್ಲಿ ಬಟನ್‍ಗಳ ಬದಲಾಗಿ ಸೆಫ್ಟಿ ಪಿನ್ ಮೂಲಕ ವಿನ್ಯಾಸಗೊಳಿಸಲಾಗಿದೆ.

    ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುವ ವಿಭಿನ್ನ ಶೈಲಿಯ ಸ್ವೆಟರ್ ಧರಿಸಿ ಕತ್ರಿನಾ ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಸೊಂಟದಷ್ಟು ಉದ್ದ ಬರುವ ಈ ಸ್ವೇಟರ್ ಕತ್ರಿನಾಗೆ ಸಖತ್ ಸ್ಟೆಲಿಶ್ ಲುಕ್ ನೀಡುತ್ತಿದೆ. ಸದ್ಯ ಕತ್ರಿನಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದ್ದು, ಹೊಸ ಟ್ರೆಂಡ್‍ನನ್ನೇ ಸೃಷ್ಟಿ ಮಾಡುತ್ತಿದೆ.

  • ಸೂಟ್‍ಕೇಸ್‍ನಲ್ಲಿ ಶವ – ಪುತ್ರಿಯೇ ತಂದೆಯನ್ನು ಕತ್ತರಿಸಿ ನದಿಗೆ ಎಸೆದ್ಳು

    ಸೂಟ್‍ಕೇಸ್‍ನಲ್ಲಿ ಶವ – ಪುತ್ರಿಯೇ ತಂದೆಯನ್ನು ಕತ್ತರಿಸಿ ನದಿಗೆ ಎಸೆದ್ಳು

    – ಪೊಲೀಸರಿಗೆ ಸುಳಿವು ನೀಡಿದ ಸ್ವೆಟರ್

    ಮುಂಬೈ: ಇತ್ತೀಚಿಗೆ ಮುಂಬೈನ ಮಹೀಮ್ ಬೀಚ್‍ನಲ್ಲಿ ಸೂಟ್‍ಕೇಸ್‍ನಲ್ಲಿ ಕತ್ತರಿಸಿದ ಮನುಷ್ಯನ ಅಂಗಗಳು ಸಿಕ್ಕಿದ್ದವು. ಈ ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ದತ್ತುಪುತ್ರಿಯೇ ತಂದೆಯನ್ನು ಕೊಂದು ಎಸೆದಿದ್ದಾಳೆ ಎಂಬ ಅಘಾತಕಾರಿ ವಿಷಯ ಗೊತ್ತಾಗಿದೆ

    ಡಿಸೆಂಬರ್ 2 ರಂದು ಮಹೀಮ್ ಬೀಚ್‍ನ ಮಖ್ದೂಮ್ ಷಾ ಬಾಬಾ ದರ್ಗಾದ ಹಿಂಬದಿಯಲ್ಲಿ ದಾರಿಹೋಕರಿಗೆ ಕಪ್ಪಬಣ್ಣದ ಸೂಟ್‍ಕೇಸ್ ಕಾಣಿಸಿತ್ತು. ಅದರಲ್ಲಿ ಮನುಷ್ಯನ ಅಂಗಗಳು ಇರುವುದನ್ನು ಕಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದಾರಿಹೋಕರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಸೂಟ್‍ಕೇಸ್‍ನಲ್ಲಿ ಕತ್ತರಿಸಿದ ಮಾನವನ ಕಾಲು ಮತ್ತು ಕೈ ಹಾಗೂ ಅವನ ಖಾಸಗಿ ಅಂಗ ಸಿಕ್ಕಿತ್ತು.

    ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭ ಮಾಡಿದ ಪೊಲೀಸರಿಗೆ ಸೂಟ್‍ಕೇಸ್‍ನಲ್ಲಿ ಇದ್ದ ಅಂಗಗಳು ಬೆನೆಟ್ ರೀಬೆಲ್ಲೊ (59) ಅವರದ್ದು ಎಂದು ತಿಳಿದು ಬಂದಿದೆ. ಆತನ ದತ್ತುಪುತ್ರಿಯೇ ಬೆನೆಟ್ ಅವರನ್ನು ಗೆಳೆಯನ ಜೊತೆ ಸೇರಿಕೊಂಡು ಕೊಲೆ ಮಾಡಿ ನಂತರ ಮೃತ ದೇಹವನ್ನು ಕತ್ತರಿಸಿ ನದಿಗೆ ಎಸೆದಿದ್ದಾಳೆ ಎಂದು ತಿಳಿದು ಬಂದಿದೆ.

    ಸ್ವೆಟರ್ ನೀಡಿದ ಸುಳಿವು
    ಪ್ರಕರಣದ ತನಿಖೆ ಆರಂಭಿಸಿದ ಮಹೀಮ್ ಪೊಲೀಸ್ ಠಾಣೆಯ ಪೊಲೀಸರಿಗೆ ಶವ ಸಿಕ್ಕ ಸೂಟ್‍ಕೇಸ್‍ನಲ್ಲಿ ಎರಡು ಶರ್ಟ್, ಸ್ವೆಟರ್ ಮತ್ತು ಪ್ಯಾಂಟ್ ಸಿಕ್ಕಿತ್ತು. ಇಲ್ಲಿ ಸಿಕ್ಕ ಸ್ವೆಟರ್ ಮೇಲೆ ಪಶ್ಚಿಮ ಕುರ್ಲಾದ ಬೆಲ್ಗಾಮಿ ರಸ್ತೆಯಲ್ಲಿರುವ ಅಲ್ಮೋಸ್ ಮೆನ್ಸ್ ವೇರ್ ಅಂಗಡಿಯ ಗುರುತು ಸಿಕ್ಕಿತ್ತು. ಈ ಅಂಗಡಿಯ ಜಾಡನ್ನು ಹಿಡಿದ ಹೊರಟ ಪೊಲೀಸರಿಗೆ ಈ ಅಂಗಡಿಯಲ್ಲಿ ಇದನ್ನು ಖರೀದಿಸಿದವರು ಬೆನೆಟ್ ಎಂಬ ವ್ಯಕ್ತಿ ಎಂದು ತಿಳಿದು ಬಂದಿತ್ತು.

    ಈ ಹೆಸರನ್ನು ಫೇಸ್‍ಬುಕ್ ನಲ್ಲಿ ಹುಡುಕಿದಾಗ ಇದೇ ಸ್ವೆಟರ್ ಹಾಕಿಕೊಂಡು ಬೆನೆಟ್ ರೀಬೆಲ್ಲೊ ಎಂಬವರು ಫೋಟೋ ಹಾಕಿದ್ದನ್ನು ಪೊಲೀಸರು ಕಂಡುಹಿಡಿದ್ದಿದ್ದರು. ಫೇಸ್‍ಬುಕ್‍ಗೆ ನೀಡಿದ ವಿಳಾಸವನ್ನು ತಿಳಿದುಕೊಂಡು ಅವರ ಮನೆ ಬಳಿ ಹೋದಾಗ ಅಲ್ಲಿ ಅವರ ಮನೆ ಲಾಕ್ ಆಗಿತ್ತು. ನಂತರ ನಾವು ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದಾಗ ಈ ಮನೆಯಲ್ಲಿ ಬೆನೆಟ್ ತನ್ನ 19 ವರ್ಷದ ದತ್ತು ಪುತ್ರಿಯೊಂದಿಗೆ ವಾಸವಿದ್ದರು ಎಂದು ಹೇಳಿದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಆಗ ರಿಯಾ ಬೆನೆಟ್ ರೀಬೆಲ್ಲೊ ಎಂದೂ ಕರೆಯಲ್ಪಡುವ ಬೆನೆಟ್ ಅವರ ದತ್ತು ಮಗಳು ಆರಾಧ್ಯ ಜಿತೇಂದ್ರ ಪಾಟೀಲ್ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಮೊದಲಿಗೆ ನಮ್ಮ ತಂದೆ ಕೆನಾಡಗೆ ಹೋಗಿದ್ದಾರೆ ಎಂದು ಹೇಳಿದ್ದಾಳೆ. ನಂತರ ಅವರು ನನ್ನನ್ನು ಲೈಂಗಿಕವಾಗಿ ಹಿಂಸಿಸುತ್ತಿದ್ದರು. ಹಾಗಾಗಿ ನಾನು ಮತ್ತು ನನ್ನ ಗೆಳೆಯ ಸೇರಿಕೊಂಡು ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾಳೆ.

    ನವೆಂಬರ್ 26 ರಂದು ನಾನು ಮೊದಲು ಅವರನ್ನು ಕೋಲಿನಿಂದ ಹೊಡೆದು ಹತ್ಯೆ ಮಾಡಿದೆ ನಂತರ ಸಾಂತಾ ಕ್ರೊಜ್ ಅಲ್ಲಿ ಇರುವ ನಮ್ಮ ಮನೆಯಲ್ಲಿ ಮೂರು ದಿನ ಮೃತ ದೇಹವನ್ನು ಇಟ್ಟಿಕೊಂಡಿದ್ದೆವು. ಅಮೇಲೆ ನನ್ನ ಗೆಳೆಯನ ಸಹಾಯದಿಂದ ದೇಹನ್ನು ಕತ್ತರಿಸಿ ಸೂಟ್‍ಕೇಸ್‍ಗೆ ತುಂಬಿ ವಕೋಲಾದಲ್ಲಿ ಮಿಥಿ ನದಿಗೆ ಎಸೆದು ಬಂದಿದ್ದವು ಎಂದು ಹೇಳಿದ್ದಾಳೆ.

    ಮಿಥಿ ನದಿಯಲ್ಲಿ ಎಸೆಯಲಾದ ಸೂಟ್‍ಕೇಸ್ ನಂತರ ಬಂದು ಮಹೀಮ್ ಬೀಚ್‍ನಲ್ಲಿ ಸಿಕ್ಕಿದೆ. ಈಗ ದತ್ತುಪುತ್ರಿ ಮತ್ತು ಆಕೆಯ ಗೆಳೆಯನನ್ನು ಅರೆಸ್ಟ್ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ.

  • ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ದಾವಣಗೆರೆ: ಚಳಿಯನ್ನು ಲೆಕ್ಕಿಸದೇ ಬೀದಿಯಲ್ಲಿ ಮಲಗಿಕೊಂಡು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ದಾವಣಗೆರೆಯ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಎಂಬವರು ಸ್ವೆಟರ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಗುಂಡಿ ಸರ್ಕಲ್ ಬಳಿ ಅಸ್ಸಾಂ, ಬಿಹಾರದಿಂದ ಬಂದಂತಹ ಹತ್ತಾರು ಕುಟುಂಬಗಳು ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡು ಬಂದಿರುವ ಮಕ್ಕಳ ಪ್ರತಿನಿತ್ಯ ಚಳಿಯಲ್ಲಿ ಬೀದಿ ಬದಿಯಲ್ಲಿ ಮಲಗಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.

    ಇದನ್ನು ನೋಡಿದ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಹಾಗೂ ಅವರ ಕುಟುಂಬದವರು ಮಕ್ಕಳಿಗೆ ಸೇರಿದಂತೆ ಬಡ ಕುಟುಂಬದವರಿಗೆ ಸ್ವೆಟರ್ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸುಮಾರು 80ಕ್ಕೂ ಹೆಚ್ಚು ನಿರ್ಗತಿಕರಿಗೆ ಸ್ವೆಟರ್ ದಾನ ಮಾಡಿದ್ದಾರೆ.

    ಮನೆ ಇರುವವರು ಬೆಚ್ಚಗೆ ಮನೆಯಲ್ಲಿ ಮಲಗಿಕೊಳ್ಳುತ್ತಾರೆ. ಆದರೆ ಮನೆ ಇಲ್ಲದೇ ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಜನರು ಚಳಿಯಲ್ಲೇ ಮಲಗಿಕೊಳ್ಳುತ್ತಿದ್ದರು. ಅಂತಹವರಿಗೆ ನಮ್ಮದೊಂದು ಸಣ್ಣ ಕಾಣಿಕೆಯಾಗಿ ಈ ರೀತಿಯ ಸಹಾಯ ಮಾಡಿದ್ದೇವೆ. ಇದರಲ್ಲಿ ನಮಗೆ ತೃಪ್ತಿ ತಂದಿದೆ ಎಂದು ಆನಂದ ವ್ಯಕ್ತಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv