Tag: swamiji

  • ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಸ್ವಾಮೀಜಿ ಪೊಲೀಸರ ವಶಕ್ಕೆ

    ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಸ್ವಾಮೀಜಿ ಪೊಲೀಸರ ವಶಕ್ಕೆ

    ಕಾರವಾರ: ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರ ಜಿಲ್ಲೆಯ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಭಟ್ಕಳ ತಾಲೂಕಿನ ಮುರುಡೇಶ್ವರದ ಲಾಡ್ಜ್ ವೊಂದರಲ್ಲಿ ಯುವತಿ ಸಮೇತವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಠಕ್ಕೆ ಪಾದ ಪೂಜೆಗೆ ಬರುತ್ತಿದ್ದ 20 ವರ್ಷದ ಸ್ಥಳೀಯ ಯುವತಿ ಜೊತೆ ಫೆ. 27ರಂದು ಸ್ವಾಮೀಜಿ ನಾಪತ್ತೆಯಾಗಿದ್ದರು. ಈ ಸಂಬಂಧ ಯುವತಿ ಪೋಷಕರು ಯುವತಿಯ ಕಣ್ಮರೆ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    ಪ್ರತಿ ದಿನ ಜಾಗ ಬದಲಿಸುತ್ತಿದ್ದ ಈ ಜೋಡಿಗಾಗಿ ಕೋಲಾರ ಪೊಲೀಸರು ಹಲವು ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಎರಡು ದಿನದಿಂದ ಮುರಡೇಶ್ವರದ ಖಾಸಗಿ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು. ಇದನ್ನೂ ಓದಿ: ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?

    ಸ್ವಾಮೀಜಿಯ ಮೊಬೈಲ್ ಸಿಗ್ನಲ್ ಆಧರಿಸಿ ಕೋಲಾರ ಪೊಲೀಸರು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನು ಆಧರಿಸಿ ಇವರನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಮತ್ತು ಯುವತಿಯನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

  • ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    ಪರಾರಿಯಾಗಿದ್ದ ಸ್ವಾಮೀಜಿ ಯುವತಿಯೊಂದಿಗೆ ಮಿಲ್ಕಿ ಬಾಯ್ ಲುಕ್‍ನಲ್ಲಿ ಪ್ರತ್ಯಕ್ಷ

    – ಕಳ್ಳ ಸ್ವಾಮೀಜಿ ಮುರಡೇಶ್ವರದಲ್ಲಿ ಅರೆಸ್ಟ್

    ಕೋಲಾರ: 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಮಿಲ್ಕಿ ಬಾಯ್ ಲುಕ್‍ನಲ್ಲಿ ಪೋಸ್ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ. ಆದರೆ ಫೆಬ್ರವರಿ 24ರಂದು ಯುವತಿ ಶ್ಯಾಮಲ (19) ಜೊತೆ ಪರಾರಿಯಾಗಿದ್ದ. ಈ ಸಂಬಂಧ ಯುವತಿಯ ಪೋಷಕರು, ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ವಾಮೀಜಿ ಮುರುಡೇಶ್ವರದಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದ್ದಾರೆ.

    ಏನಿದು ಪ್ರಕರಣ?:
    ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮೀ ದೇವಾಲಯಕ್ಕೆ ಜನವರಿ 15ರಂದು ಬಂದಿದ್ದ ಸ್ವಾಮೀಜಿ, ನಾನು ಇಲ್ಲಿಯೆ ಇದ್ದು ದೇವಾಲಯದ ಅಭಿವೃದ್ಧಿಯ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದ. ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಮೂಲದ ರಾಘವೇಂದ್ರ ಆಲಿಯಾಸ್ ದತ್ತಾತ್ರೇಯ ಅವಧೂತನನ್ನು ಭೀಮಲಿಂಗೇಶ್ವರ ಸೇವಾಶ್ರಮದ ಸ್ವಾಮೀಜಿಯಾಗಿ ನೇಮಕ ಮಾಡಲಾಗಿತ್ತು.

    ಗ್ರಾಮಸ್ಥರು ಸ್ವಾಮೀಜಿ ಜೊತೆಗೆ ಮಾತುಕತೆ ನಡೆಸಿ ದೇವಾಲಯ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಸಿಎಂ ಯಡಿಯೂರಪ್ಪ ಅವರು ಸೇರಿದಂತೆ ರಾಜ್ಯದ ಉಪ ಮುಖ್ಯಮಂತ್ರಿ, ಸಚಿವರು ಗಣ್ಯರಿಗೆ ಆಹ್ವಾನ ನೀಡಿ ಅದ್ದೂರಿಯಾಗಿ ಜಾತ್ರೆ ಮಾಡಿದ್ದರು. ಆದರೆ ಗ್ರಾಮಕ್ಕೆ ಬಂದ ಕೆಲವೇ ದಿನಗಳಲ್ಲಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಅದೇ ಗ್ರಾಮದ 19 ವರ್ಷದ ಶ್ಯಾಮಲ ಎಂಬ ಯುವತಿಯ ಜೊತೆ ನಾಪತ್ತೆಯಾಗಿದ್ದ.

    ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದರು. ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಕೋಲಾರ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಯುವತಿ ಹಾಗೂ ಸ್ವಾಮೀಜಿ ಮುರುಡೇಶ್ವರದ ಬೀಚ್ ಇರುವುದನ್ನು ಪತ್ತೆಹಚ್ಚಿದ್ದರು. ದತ್ತಾತ್ರೇಯ ಅವಧೂತ ಸ್ವಾಮೀಜಿ ವೇಷ ತೆಗೆದು ಸಖತ್ ಕ್ಯೂಟ್ ಮಿಲ್ಕಿ ಬಾಯ್ ವೇಷದಲ್ಲಿ ಮಿಂಚುತ್ತಿದ್ದ. ಪೊಲೀಸರ ತಂಡವೊಂದು ಮುರಡೇಶ್ವರಕ್ಕೆ ಹೋಗಿ ಸ್ವಾಮೀಜಿಯನ್ನು ಬಂಧಿಸಿ ಜಿಲ್ಲೆಗೆ ಕರೆತರುತ್ತಿದೆ ಎಂಬ ಮಾಹಿತಿ ಲಭಿಸಿದೆ.

  • ಸ್ವಾಮೀಜಿಯಾಗಿ ಬದಲಾದ ಮೆಕ್ಯಾನಿಕ್- ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ದೋಖಾ

    ಸ್ವಾಮೀಜಿಯಾಗಿ ಬದಲಾದ ಮೆಕ್ಯಾನಿಕ್- ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ದೋಖಾ

    – ಮಹಿಳೆಗೆ 27 ಕೋಟಿ ರೂ. ವಂಚನೆ
    – ನಿಮ್ಮ ಮನೆ ಸ್ಮಶಾನ ಆಗುತ್ತೆ ಅಂತ ಬೆದರಿಕೆ
    – ಎಲ್ಲಾ ಆಸ್ತಿ ಮಾರಾಟ ಮಾಡಿಸಿದ ಕುಡುಕ ಸ್ವಾಮೀಜಿ

    ಕೋಲಾರ: ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್ ಮೈಮೇಲೆ ಅದ್ಯಾವಾಗ ದೇವಿ ಸೊಲ್ಲಾಪುರದಮ್ಮ ಬಂದು ಸೇರಿಕೊಂಡ್ಲೋ ಗೊತ್ತಿಲ್ಲ. ಅಂದಿನಿಂದ ಆತನ ಲಕ್ಕೇ ಬದಲಾಗಿ ಹೋಗಿತ್ತು. ಮೆಕಾನಿಕ್ ಸ್ವಾಮೀಜಿಯಾಗಿ ದೇವರ ಹೆಸರಲ್ಲಿ ಕೋಟಿ ಕೋಟಿ ದೋಖಾ ಮಾಡಿ ಈಗ ತಲೆಮರೆಸಿಕೊಂಡಿರುವ ಸ್ಟೋರಿ ಇಲ್ಲಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಗ್ರಾಮದ ಬಳಿ ಇರುವ ಸೊಲ್ಲಾಪುರಮ್ಮ ದೇವಾಲಯದ ಸ್ವಾಮೀಜಿ ಕಂ ಅರ್ಚಕ ನಾಗರಾಜ್, ದೇವರ ಹೆಸರಲ್ಲಿ ಮಹಿಳೆಗೆ ಬೆದರಿಸಿ ಕೋಟಿ ಕೋಟಿ ನಾಮ ಹಾಕಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಬಂಗಾರಪೇಟೆ ಪಟ್ಟಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್, ಕಳೆದ 15 ವರ್ಷಗಳ ಹಿಂದೆ ತನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ ಎಂದು ಬೆಂಗಳೂರು ಸಮೀಪದ ಬಂಗಾರಪೇಟೆ ಹೊರವಲಯದಲ್ಲಿ ಒಂದು ಬೆಳ್ಳಿ ಪೇಟೆಯನ್ನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದಾನೆ. ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ವಾಂಟೆಡ್ ಆರೋಪಿಯಾಗಿದ್ದು, ಕುಟುಂಬ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಗೆ ಸುಮಾರು 27 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

    ನನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ, ಅವಳು ಹೇಳಿದಂತೆ ಕೇಳಬೇಕು. ದೇವಿಗೆ ಸ್ವಲ್ಪ ಅಪಮಾನ ಆದರೂ ಇಡೀ ಕುಟುಂಬದಲ್ಲಿ ಯಾರೂ ಉಳಿಯಲ್ಲ. ನಿಮ್ಮ ಮನೆ ಸ್ಮಶಾನ ಆಗುತ್ತೆ ಎಂದು ಬೆಂಗಳೂರಿನ ರಾಮಮೂರ್ತಿ ನಗರ ನಿವಾಸಿ ಗೀತಾ ಅನ್ನೋರಿಗೆ ಬೆದರಿಸಿ ನಂಬಿಸಿದ್ದಾನೆ. ಅಲ್ಲದೆ ದೇವಿ ಮೈಮೇಲೆ ಬಂದ ಮೊದಲ ದಿನವೇ 5 ಕೆ.ಜಿ ಚಿನ್ನ ಪಡೆದಿದ್ದನಂತೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಹಿಳೆ ದೂರು ನೀಡಿದ್ದಾರೆ. ಕುಟುಂಬ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಮಹಿಳೆ ಬಳಿ ಮಕ್ಕಳಿಗೆ ಗೊತ್ತಿಲ್ಲದೆ ನಿವೇಶನ, ನಗ, ನಾಣ್ಯ ಸೇರಿದಂತೆ 27 ಕೋಟಿಯಷ್ಟು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಪ್ರತಿಬಾರಿ ದೇವಿ ಮೈಮೇಲೆ ಬಂದಾಗಲೆಲ್ಲಾ ಹಂತ ಹಂತವಾಗಿ ಬೆಂಗಳೂರು ಮೂಲದ ಮಹಿಳೆ ಗೀತಾ ಎಲ್ಲಾ ಆಸ್ತಿಗಳನ್ನ ಮಾರಾಟ ಮಾಡಿಸಿರುವ ನಾಗರಾಜ್, ಆ ಹಣವನ್ನೆಲ್ಲಾ ಕೊಲ್ಲಾಪುರ ದೇವಿ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿ ವಾಪಸ್ ಕೊಡ್ತೀನಿ ಎಂದು ನಂಬಿಸಿದ್ದ. ಆದರೆ ಈಗ ಪೂಜಾರಿ ನಾಟ್ ರೀಚೆಬಲ್ ಆಗಿದ್ದಾನೆ. ಪರಿಣಾಮ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವಂಚಕ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ವಾರೆಂಟ್ ಸಮೇತವಾಗಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯ ಹಾಗೂ ಮನೆಯನ್ನ ಹುಡುಕಾಡಿರುವ ಸಿಸಿಬಿ ಪೊಲೀಸರು ಒಂದಷ್ಟು ನಗದು ಹಾಗೂ ಮಹತ್ವದ ದಾಖಲೆಗಳನ್ನ ತೆಗಡದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೆ ದೇವಾಲಯಕ್ಕೆ ಬೀಗ ಜಡಿದಿರುವ ಸಿಸಿಬಿ ಪೊಲೀಸರು ಸ್ವಾಮೀಜಿ ನಾಗರಾಜ್ ಹಾಗೂ ಪತ್ನಿ ಲಕ್ಷ್ಮಮ್ಮರ ಹುಡುಕಾಟದಲ್ಲಿ ಇದ್ದಾರೆ. ಆದರೆ ಮಗ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ ಎಂದು ನಾಗರಾಜ್ ತಾಯಿ ಕಣ್ಣೀರು ಹಾಕುತ್ತಾರೆ.

    ಒಟ್ಟಿನಲ್ಲಿ ಕುಟುಂಬ ಸಮಸ್ಯೆ ಅಂತ ಬಂದ ಮಹಿಳೆಯ ಸಮಸ್ಯೆ ಬಗೆಹರಿಸಿದನೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವ ಸ್ವಾಮೀಜಿ, ಭರ್ಜರಿಯಾಗಿ ಮನೆ, ದೇವಸ್ಥಾನ ಕಟ್ಟಿಕೊಂಡು ನೆಮ್ಮದಿಯಾಗಿದ್ದಾನೆ. ಸದ್ಯ ತಲೆ ಮರೆಸಿಕೊಂಡಿರುವ ಸ್ವಾಮೀಜಿ ಪೊಲೀಸರಿಗೆ ಸಿಕ್ಕ ನಂತರವಷ್ಟೇ ಇದರ ಸತ್ಯಾಸತ್ಯತೆ ತಿಳಿಯ ಬೇಕಿದೆ..

  • ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?

    ಪಾದಪೂಜೆ ವೇಳೆ ಲವ್ – 20ರ ಯುವತಿ ಜೊತೆ 45ರ ಸ್ವಾಮೀಜಿ ಪರಾರಿ?

    ಕೋಲಾರ: ಮಧ್ಯಮ ವಯಸ್ಕ ಸ್ವಾಮೀಜಿ ತನ್ನ ಪಾದ ಪೂಜೆ ಮಾಡುತ್ತಿದ್ದ 20 ವರ್ಷದ ಯುವತಿಯೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ ಕಳೆದ 2 ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿ, ಯುವತಿ ಶ್ಯಾಮಲ(20) ಜೊತೆ ಸೋಮವಾರ ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

    ಸ್ವಾಮೀಜಿ ಮೂಲತಃ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದವರು ಎನ್ನಲಾಗಿದ್ದು, ಯುವತಿ ನಾಪತ್ತೆಯಾಗಿರುವ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದಾರೆ.

    ಜನವರಿ 15 ರಂದು ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿರುವ ಸ್ವಾಮೀಜಿ, ನಾನು ಇಲ್ಲಿಯೇ ಇದ್ದು ದೇವಾಲಯದ ಅಭಿವೃದ್ಧಿ ಜೊತೆಗೆ ಸೇವಾಶ್ರಮ ಮಾಡಿ ಪೀಠಾಧಿಪತಿಯಾಗಿ ಅಭಿವೃದ್ಧಿ ಮಾಡುತ್ತೇನೆ ಎಂಬುದಾಗಿ ನೀಡಿದ್ದ ಭರವಸೆಯನ್ನು ಗ್ರಾಮಸ್ಥರು ಒಪ್ಪಿಕೊಂಡಿದ್ದರು.

    ನಂತರ ದೇವಾಲಯವನ್ನು ಗ್ರಾಮಸ್ಥರು ಅಭಿವೃದ್ಧಿ ಮಾಡಿ ಗಣ್ಯರೆಲ್ಲರನ್ನು ಕರೆಸಿ ಅದ್ಧೂರಿಯಾಗಿ ಜಾತ್ರೆ ಮಾಡಲಾಗಿತ್ತು. ನಂತರ ಫೆ.21 ರಂದು ಶಿವರಾತ್ರಿ ಹಬ್ಬವನ್ನೂ ಸಂಭ್ರಮದಿಂದ ಆಚರಿಸಲಾಗಿತ್ತು. ಇದಾದ ಬಳಿಕ ಕಳೆದ ಎರಡು ದಿನಗಳಿಂದ ಸ್ವಾಮೀಜಿ ಹಾಗೂ ಯುವತಿ ಕಣ್ಮರೆಯಾಗಿದ್ದಾರೆ.

    ಯುವತಿ ನಾಪತ್ತೆಯಾಗಿರುವುದಕ್ಕೂ ಸ್ವಾಮೀಜಿ ಕಾಣೆಯಾಗಿರುವುದಕ್ಕೂ ಸಂಬಂಧ ಇದೆ ಎನ್ನಲಾಗಿದೆ. ಮಾತ್ರವಲ್ಲದೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯುವತಿ ಸಂಬಂಧಿಕರು ದೂರು ದಾಖಲು ಮಾಡಿದ ನಂತರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಈ ವೇಳೆ ಸ್ವಾಮೀಜಿ ಯುವತಿಯನ್ನು ಮದುವೆಯಾಗಿರಬಹುದು ಎಂದು ಶಂಕಿಸಿದ್ದಾರೆ.

    ಈ ಸಂಬಂಧ ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದು, 24 ಗಂಟೆಗಳಲ್ಲಿ ಪತ್ತೆ ಮಾಡುವ ಭರವಸೆ ನೀಡಿದ್ದಾರೆ.

  • ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    ಶಿವಮೊಗ್ಗದ ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ- ಬೆಂಗ್ಳೂರಿನ 18 ಎಕರೆ ಮೇಲೆ ಕಣ್ಣು

    – ಅಸಲಿ, ನಕಲಿ ಸ್ವಾಮೀಜಿಗಳ ಫೈಟ್

    ಶಿವಮೊಗ್ಗ: ನಗರದ ರಾಮಲಿಂಗೇಶ್ವರ ಮಠ, ಈ ಮಠದ ಹೆಸರಲ್ಲಿ ಬೆಂಗಳೂರಿನ ನಾಗಸಂದ್ರ ಬಳಿ 18 ಎಕರೆ ಜಮೀನಿದೆ. ನೂರಾರು ಕೋಟಿ ಬೆಲೆಬಾಳುವ ಈ ಜಾಗದ ಮೇಲೆ ಸ್ವಾಮೀಜಿಗಳು, ರಾಜಕಾರಣಿಗಳು, ಪ್ರಭಾವಿಗಳ ಕಣ್ಣು ಬಿದ್ದಿದೆ. ಸ್ವಾಮೀಜಿಗಳ ನಡುವೆಯೇ ಅಸಲಿ, ನಕಲಿ ಅಂತ ವಿವಾದ ತಾರಕಕ್ಕೇರಿದೆ.

    ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿರುವ ರಾಮಲಿಂಗೇಶ್ವರ ಮಠಕ್ಕೆ ನೂರಾರು ವರ್ಷ ಇತಿಹಾಸ ಇದೆ. ಕೆಳದಿ ಸಂಸ್ಥಾನದ ಅರಸರ ಕಾಲದಲ್ಲಿ ಈ ಮಠ ಅಸ್ತಿತ್ವಕ್ಕೆ ಬಂತಂತೆ. ಮಠ ಆರಂಭದ ದಿನಗಳಲ್ಲಿ ದಾಸೋಹ, ಪೂಜೆ-ಪ್ರವಚನ ಮಾಡಿಕೊಂಡು ಸಾಮಾಜಮುಖಿ ಕೆಲಸದಲ್ಲಿ ತೊಡಗಿತ್ತು. ಕಾಲಕ್ರಮೇಣ ಮಠ ಕೂಡ ಕಮರ್ಷಿಯಲ್ ಟಚ್ ಪಡೆದುಕೊಂಡಿತು. ಈ ಮಠಕ್ಕೆ ಬೆಂಗಳೂರಿನ ನಾಗಸಂದ್ರ ಬಳಿ ನೂರಾರು ಕೋಟಿ ರೂ. ಬೆಲೆ ಬಾಳುವ 18 ಎಕರೆ ಜಮೀನಿದ್ದು ಮಠದ ಆಸ್ತಿ ಕಬಳಿಸಲು ಸ್ವಾಮೀಜಿಗಳ ನಡುವೆ ಪೈಪೋಟಿ ಶುರುವಾಗಿದ್ಯಂತೆ.

    ಮಠದ ಆಸ್ತಿ ವ್ಯಾಜ್ಯ ಕೋರ್ಟಿನಲ್ಲಿದ್ದು 1988ರಿಂದ ಇಂದಿನವರೆಗೂ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯ ವಿಶ್ವರಾಧ್ಯ ಸ್ವಾಮೀಜಿ ಮಠದಲ್ಲಿ ವಾಸವಿದ್ದು, ಕಾಶಿ ಪ್ರವಾಸಕ್ಕೆ ಹೋಗಿದ್ದಾರೆ. ಇದೇ ವೇಳೆ ರಾಮಲಿಂಗೇಶ್ವರ ಮಠದ ಮೂಲ ಸ್ವಾಮೀಜಿ ನಾನೇ ಅಂತ ಹೇಳಿಕೊಂಡು ಶಿವಕುಮಾರ ಸ್ವಾಮಿ ಅಲಿಯಾಸ್ ಚಂದ್ರಮೌಳೇಶ್ವರ ಸ್ವಾಮೀಜಿ ತಮ್ಮ ಬೆಂಬಲಿಗರ ಜೊತೆ ಬಂದು ಮಠಕ್ಕೆ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಮಠದಲ್ಲಿದ್ದ ವಿಶ್ವರಾಧ್ಯ ಶ್ರೀ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಂಸಿ ಪೊಲೀಸರು ಗುಂಪು ಗಲಾಟೆ ತಪ್ಪಿಸಿದ್ದಾರೆ.

    ಬೆಂಗಳೂರಿನ ನಾಗಸಂದ್ರ ಬಳಿ ಮಠಕ್ಕೆ ಸೇರಿದ 18 ಎಕರೆ ಜಮೀನನ್ನು ಮೆಟ್ರೋ ಕಾಮಗಾರಿಗೆ ಬಿಎಂಆರ್‍ಸಿಎಲ್ ವಶಪಡಿಸಿಕೊಂಡಿದೆ. ಪರಿಹಾರ ಮೊತ್ತವಾಗಿ 88 ಕೋಟಿ ರೂ.ನೀಡಿದೆ. ಆದರೆ ಈ ಭೂಮಿ ನ್ಯಾಯಾಲಯದಲ್ಲಿದ್ದ ಕಾರಣ ಪರಿಹಾರದ ಹಣ ಸರ್ಕಾರದ ಬಳಿಯೇ ಇದೆ. ಹಾಗಾಗಿ ಈ ಹಣ ಲಪಟಾಯಿಸಲು ಮಠದ ಗಂಧ-ಗಾಳಿಯೇ ಗೊತ್ತಿಲ್ಲದವರು ಕೂಡ ನಾನು ಸ್ವಾಮೀಜಿ, ನಾನು ಪೀಠಾಧಿಪತಿ ಅಂತ ಹೊಸಹೊಸದಾಗಿ ಹುಟ್ಟಿಕೊಳ್ತಿದ್ದಾರಂತೆ.

    ಒಟ್ಟಾರೆ, ರಾಮಲಿಂಗೇಶ್ವರ ಮಠದ ಆಸ್ತಿ ವಿವಾದ ಗೊಂದಲದ ಗೂಡಾಗಿದೆ. ಈಗಾಗಿ ಇಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಆಗ ಸತ್ಯಾಸತ್ಯತೆ ಹೊರ ಬರಲಿದೆ ಅಂತ ಮಠದ ಭಕ್ತರು ಹಾಗು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರು ಕೊಡುಗೆ

    – ವೀರೇಂದ್ರ ಹೆಗ್ಗಡೆಯವರಿಗೆ ಕಾರು ಹಸ್ತಾಂತರಿಸಿದ ರಾಜಸ್ತಾನದ ನಂದಜೀ

    ಮಂಗಳೂರು: ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ರಾಜಸ್ತಾನದ ಸ್ವಾಮೀಜಿಯೊಬ್ಬರು ಕೊಡುಗೆ ನೀಡಿದ್ದಾರೆ.

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರ್ ಸಂಗ್ರಹದ ಅಭಿರುಚಿಯನ್ನು ನೋಡಿ ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜೀ ಪ್ರಶಂಸಿದ್ದರು. ಈಗ ಅವರು 1972ರ ಮೋಡೆಲ್‍ನ ಮರ್ಸಿಡಿಸ್ ಬೆನ್ಜ್ ಕಾರನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಕೊಡುಗೆಯಾಗಿ ನೀಡಿದರು.

    280 ಎಸ್.ಮಾದರಿಯ ಈ ಅತ್ಯುತ್ತಮ ಕಾರುನ್ನು ಸ್ವತಃ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರ ನಿವಾಸಕ್ಕೆ ಬಂದು ಕಾರಿನ ಕೀ ಹಸ್ತಾಂತರಿದ್ದಾರೆ. ಈ ಮೂಲಕ ಕಾರನ್ನು ಕೊಡುಗೆಯಾಗಿ ನೀಡಿದರು. ಬಳಿಕ ವೀರೆಂದ್ರ ಹೆಗ್ಗಡೆಯವರು ಕಾರನ್ನು ಚಲಾಯಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಈ ಸಂದರ್ಭ ಡಿ.ಹರ್ಷೇಂದ್ರ ಕುಮಾರ್ ಜೊತೆಗಿದ್ದರು.

    ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

  • ಜೀವ ಸಮಾಧಿಯಾಗ್ತೀನಿ ಅಂತ ಗುಂಡಿ ತೆಗೆದ- ಪೊಲೀಸ್ರು ಬಂದೊಡನೆ ಪರಾರಿ

    ಜೀವ ಸಮಾಧಿಯಾಗ್ತೀನಿ ಅಂತ ಗುಂಡಿ ತೆಗೆದ- ಪೊಲೀಸ್ರು ಬಂದೊಡನೆ ಪರಾರಿ

    ಚಿಕ್ಕಬಳ್ಳಾಪುರ: 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಾಗ್ತೀನಿ ಅಂತ ಸ್ವಾಮೀಜಿಯೋರ್ವ ಗುಂಡಿ ತೆಗೆಸಿ ಸಕಲ ಸಿದ್ಧತೆ ಮಾಡಿಕೊಂಡು ಕೊನೆಗೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಗ್ರಾಮಕ್ಕೆ ಆಗಮಿಸಿದ್ದ ಸ್ವಾಮೀಜಿಯೋರ್ವ ಗ್ರಾಮಸ್ಥರ ಜಮೀನುವೊಂದರ ಬಳಿ 9 ಅಡಿ ಆಳದ ಬೃಹದಾಕಾರದ ಗುಂಡಿ ತೆಗೆಯಲಾಗಿತ್ತು. ಗುಂಡಿಯೊಳಗೆ ತಾನು 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿ ಆಗುವುದಾಗಿ ಪತ್ರಗಳನ್ನು ಹಂಚಿಕೆ ಮಾಡಿ ಪ್ರಚಾರ ಮಾಡಿದ್ದನು. ಅಂತೆಯೇ ಜೀವಂತ ಯೋಗ ಸಮಾಧಿಗೆ ಜಮೀನುವೊಂದರಲ್ಲಿ ಗುಂಡಿ ಅಗೆದು ಗುಂಡಿ ಮೇಲ್ಭಾಗವನ್ನ ನೀಲಗಿರಿ ಸೊಪ್ಪು ಚಾಪೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿಕೊಂಡಿದ್ದ. ಇನ್ನೂ ಗುಂಡಿಯೊಳಗೆ ಇಳಿಯೋಕೆ ಅಂತ ಒಂದಷ್ಟು ಜಾಗ ಬಿಟ್ಟು ಏಣಿ ಹಾಕಿಕೊಂಡು ಸಕಲ ಸನ್ನದ್ಧನಾಗಿದ್ದನು.

    ಹೇಳಿದಂತೆ ಇಂದು ಬೆಳಗ್ಗೆ 11 ಗಂಟೆ 30 ನಿಮಿಷಕ್ಕೆ ಯೋಗ ಸಮಾಧಿಗೆ ಸ್ವಾಮೀಜಿ ಸಕಲ ತಯಾರಿಗಿದ್ದ. ಆದರೆ ಅಷ್ಟರಲ್ಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ವಾಮೀಜಿ ಕಾರ್ಯಕ್ಕೆ ಅನುಮತಿ ಪಡೆದಿಲ್ಲ. ಈ ರೀತಿ ಮಾಡುವ ಹಾಗಿಲ್ಲ ಮಾಡಿದ್ರೇ ಕೇಸ್ ದಾಖಲಿಸ್ತೀವಿ ಅಂತ ಎಚ್ಚರಿಕೆ ಕೊಟ್ಟ ಹಿನ್ನೆಲೆ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ.

    ಸ್ವಾಮೀಜಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಂಚಿದ್ದ ಪಾಂಪ್ಲೇಟ್ ನಲ್ಲಿ ‘ತಾರನೇಯಿ ಸಾಯಿ ಆದ ನಾನು ದೇವರ ಅನುಗ್ರಹದಿಂದ, ಭೂಮಿಯೊಳಗೆ 9 ಅಡಿ ಆಳದಲ್ಲಿ 72 ಗಂಟೆಗಳ ಕಾಲ ಜೀವಂತ ಯೋಗ ಸಮಾಧಿಯಗುತ್ತಿದ್ದೇನೆ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ಶಿವಲೋಕಂ ಸೃಷ್ಠಿಸಿ ಆಶ್ರಮ ಮಾಡಿ ಶಿವನ ದೇವಾಲಯ, ಆರ್ಯುವೇದ ಹಾಗೂ ಹೀಲಿಂಗ್ ಸೆಂಟರ್ ಸೇರಿದಂತೆ ಯೋಗ, ಧ್ಯಾನ ಶಿಬಿರಗಳನ್ನ ಆಯೋಜಿಸಲಾಗುವುದು ಅಂತ ಪ್ರಕಟಿಸಿ ಹಂಚಲಾಗಿತ್ತು.

    ಸದ್ಯ ಘಟನೆ ನಂತರ ಸ್ವಾಮೀಜಿ ಉತ್ತರಭಾರತ ಮೂಲದವನು ಅಂತ ಮಾಹಿತಿ ಸಿಕ್ಕಿದ್ದರೂ, ಈತ ಸ್ಪಷ್ಟವಾಗಿ ತೆಲುಗು ಭಾಷೆ ಮಾತನಾಡುತ್ತಿದ್ದ ಕಾರಣ ಆಂದ್ರಪ್ರದೇಶ ಮೂಲದವನು ಅಂತ ಹೇಳಲಾಗಿದೆ. ಇನ್ನೂ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಎಂಬವರ ಮನೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದು ಅವರದೇ ಜಮೀನಿನಲ್ಲಿ ಈ ರೀತಿ ಯೋಗ ಸಮಾಧಿಗೆ ಸ್ವಾಮೀಜಿ ಪ್ಲಾನ್ ಮಾಡಿ ಸದ್ಯ ಪೊಲೀಸರ ಭಯದಿಂದ ಪರಾರಿಯಾಗಿದ್ದಾನೆ.

  • ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ಸ್ಥಳದಲ್ಲೇ ಸ್ವಾಮೀಜಿ ಸೇರಿ ನಾಲ್ವರು ಸಾವು

    ಧಾರವಾಡ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ವಾಮೀಜಿಯೊಬ್ಬರು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಯರಿಕೊಪ್ಪ ಮನಸೂರ ಗ್ರಾಮ ಬೈಪಾಸ್ ಬಳಿ ಸಂಭವಿಸಿದೆ.

    ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದ ಶಿವಾನಂದ ಮಠದ ಬಸವೇಶ್ವರ ಸ್ವಾಮೀಜಿ, ಕಾರು ಚಾಲಕ ಶಂಕರಗೌಡ ಪಾಟೀಲ ಹಾಗೂ ಎದುರಿನ ಕಾರಿನಲ್ಲಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಹಾದೇವ ಕಾಡೇಶಗೋಳ ಮತ್ತು ಮಾರುತಿ ಕುಕನೂರ ಇಬ್ಬರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಸ್ವಾಮೀಜಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್‍ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಸ್ವಾಮೀಜಿ ಕಾರಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸೋಮರಾವ್ ದೇಸಾಯಿ ಹಾಗೂ ಸಿದ್ದಪ್ಪ ಇಂಗಳಹಳ್ಳಿ ಮತ್ತು ಬಸಪ್ಪ ಪೂಜಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗ್ಗೆಯಷ್ಟೇ ಮಠದ ಶಾಲೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸ್ವಾಮೀಜಿ ಧಾರವಾಡದ ಭಕ್ತರೊಬ್ಬರ ಕುಟುಂಬದ ಮದುವೆ ಸಮಾರಂಭಕ್ಕೆ ಆಗಮಿಸುತ್ತಿದ್ದಾಗ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಸ್ವಾಮೀಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಪ್ರಮಾಣದ ಭಕ್ತರು ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ಕಣ್ಣೀರು ಹಾಕಿದರು.

    ಇದೇ ವೇಳೆ ಮಾಜಿ ಸಚಿವ ಎಂ.ಎಸ್. ಅಕ್ಕಿ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಂಬನಿ ಮಿಡಿದರು. ಸ್ವಾಮೀಜಿ ಕಳೆದುಕೊಂಡಿದ್ದು ತುಂಬಾ ದುಃಖವಾಗಿದ್ದು, ಈ ರಸ್ತೆಯಲ್ಲಿ ಹಲವು ಘಟನೆ ನಡೆದರೂ ರಸ್ತೆ ಅಗಲಿಕರಣ ನಡೆದಿಲ್ಲವೆಂದು ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತ ಪಡಿಸಿದರು. ಈ ಬೈಪಾಸ್ ನಂದಿ ಹೈವೆಯವರಾದ ಅಶೋಕ್ ಖೇಣಿಗೆ ಸಂಬಂಧಿಸಿದ್ದು, ಈ ಸಂಬಂಧ ಬರುವ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಗಾಯಗೊಂಡವರನ್ನು ನೋಡಲು ಮಾಜಿ ಸಚಿವ ವಿನಯ ಕುಲಕರ್ಣಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಸ್ವಾಮೀಜಿಗಳು ಒತ್ತಡ ಹಾಕುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ಸ್ವಾಮೀಜಿಗಳು ಒತ್ತಡ ಹಾಕುವುದು ಸರಿಯಲ್ಲ: ದಿನೇಶ್ ಗುಂಡೂರಾವ್

    ಬೆಂಗಳೂರು: ನಿನ್ನೆ ಹರಿಹರದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಮಾತನಾಡಿದ್ದು ತಪ್ಪು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಒಂದು ಸಮಾಜ ನಿಮ್ಮ ಕೈ ಬಿಡುತ್ತದೆ ಎಂದು ಸ್ವಾಮೀಜಿ ಹೇಳಬಾರದಿತ್ತು. ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ಸರಿಯಲ್ಲ. ಸಹಜವಾಗಿ ಯಡಿಯೂರಪ್ಪ ಸ್ವಾಮೀಜಿ ಮಾತಿನಿಂದ ಕೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಯಡಿಯೂರಪ್ಪನವರಿಗೆ ಎರಡೂ ಕಡೆಗಳಿಂದ ಒತ್ತಡವಿದೆ. ಒತ್ತಡದಿಂದಾಗಿಯೇ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿ ಇಷ್ಟು ತಿಂಗಳಾಯ್ತು. ಇಲ್ಲಿವರೆಗೆ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಸಿಯೇ ಎಲ್ಲ ಎಂದು ಹೇಳಿದರು.

  • ಡಿಸಿಎಂ ಹುದ್ದೆ ತೆಗೆದ್ರೆ ಸಂತೋಷ: ವಾಲ್ಮೀಕಿ ಶ್ರೀ

    ಡಿಸಿಎಂ ಹುದ್ದೆ ತೆಗೆದ್ರೆ ಸಂತೋಷ: ವಾಲ್ಮೀಕಿ ಶ್ರೀ

    ದಾವಣಗೆರೆ: ವಾಲ್ಮೀಕಿ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದ ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಈಗ ಡಿಸಿಎಂ ಹುದ್ದೆ ತೆಗೆದರೆ ಸಂತೋಷ. ಇದರಿಂದ ಸರ್ಕಾರದಲ್ಲಿರುವ ಗೊಂದಲವಾದರೂ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

    ನಗರದಲ್ಲಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಡಿಸಿಎಂ ಹುದ್ದೆ ತೆಗೆಯಲು ನಮ್ಮದೇನೂ ವಿರೋಧವಿಲ್ಲ ಎಂದರು.

    ಆಕಸ್ಮಾತ್ ಡಿಸಿಎಂ ಹುದ್ದೆ ಮುಂದುವರಿಸಿದರೆ, ನಮ್ಮ ಸಮುದಾಯಕ್ಕೊಂದು ಅವಕಾಶ ನೀಡಬೇಕು. ಯಾಕಂದರೆ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ವಾಲ್ಮೀಕಿ ಸಮಾಜದ ಶಾಸಕರನ್ನು ಡಿಸಿಎಂ ಮಾಡುವುದಾಗಿ ಹೇಳಿದ್ದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅದರಲ್ಲೂ ವಾಲ್ಮೀಕಿ ಸಮಾಜ ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮಾಜವಾಗಿದ್ದು, ನಮ್ಮ ಸಮುದಾಯದಿಂದ ಇಬ್ಬರು ಡಿಸಿಎಂ ಹುದ್ದೆಗೆ ಪ್ರಭಲ ಆಕಾಂಕ್ಷಿಗಳಿದ್ದಾರೆ. ರಮೇಶ್ ಜಾರಕಿಹೊಳಿ, ಶ್ರೀರಾಮುಲು ಈ ಇಬ್ಬರಲ್ಲಿ ಇಬ್ಬರಲ್ಲಿ ಒಬ್ಬರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ತಿಳಿಸಿದರು.