Tag: swamiji

  • ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

    ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!

    ಬೆಂಗಳೂರು: ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಲ್ಲಿ ಮತ್ತೆ ಒಡಕು ಕಾಣಿಸಿಕೊಂಡಿದೆ. ಈಗಾಗಲೇ ಸಮುದಾಯದ ಎರಡು ಗುರುಪೀಠಗಳು ಇದ್ದರೂ, ಈಗ ಮೂರನೇ ಪೀಠ ರಚನೆಗೆ ಸಮುದಾಯದ ಇತರೆ ಸ್ವಾಮೀಜಿಗಳ ಬಣ ಕೈಹಾಕಿದೆ.

    ಮುಂದಿನ ದಿನಗಳಲ್ಲಿ ಮೂರನೇ ಪೀಠ ರಚನೆ ಆಗಬಹುದು ಎಂದು ಬಬಲೇಶ್ವರ ಬೃಹನ್ಮಠ ಮತ್ತು ಮನಗೊಳಿ ಹಿರೇಮಠದ ಸ್ವಾಮೀಜಿಗಳು ಸುಳಿವು ನೀಡಿದ್ದಾರೆ. ಸದ್ಯ ಇರುವ ಎರಡು ಪೀಠಗಳನ್ನು ದೂರವಿಟ್ಟು ಮೀಸಲಾತಿಗಾಗಿ ಇತರೆ ಪಂಚಮಸಾಲಿ ಸ್ವಾಮೀಜಿಗಳು ಸಿಎಂ ಬಳಿಗೆ ಹೋಗಲು ತೀರ್ಮಾನಿಸಿದ್ದಾರೆ. ಆದರೆ ಈ ಬಗ್ಗೆ ತಮಗೇನು ಗೊತ್ತಿಲ್ಲ.ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಲ್ಲ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

    ಈ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಲ್ಲಾ ಕಡೆ ಆಗುತ್ತಿದೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಮೀಸಲಾತಿ ಹೋರಾಟವನ್ನು ಯಾರು ಎಷ್ಟೇ ಒಡೆಯಲು ಪ್ರಯತ್ನ ಮಾಡಿದರೂ, ವಿರೋಧಿಗಳು ಸಹ ನಮ್ಮವರೇ ಎಂದು ಭಾವಿಸಿ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

  • ಸಿಎಂ ಬದಲಾದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ: ರಂಭಾಪುರಿ ಶ್ರೀ

    ಸಿಎಂ ಬದಲಾದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುತ್ತದೆ: ರಂಭಾಪುರಿ ಶ್ರೀ

    ರಾಯಚೂರು: ರಾಜಕೀಯದಲ್ಲಿ ಸಂಘರ್ಷ ಇರುವುದು ಸಹಜ, ಯಾರು ಏನೇ ಹೇಳಲಿ ನಮಗೆ ಆತ್ಮವಿಶ್ವಾಸವಿದೆ. ಇರುವಂತ ಅವಧಿವರೆಗೆ ಯಡಿಯೂರಪ್ಪನವರೇ ಸಿಎಂ ಆಗಿ ಇರುತ್ತಾರೆ. ಆಕಸ್ಮಿಕವಾಗಿ ಸಿಎಂ ಬದಲಾವಣೆ ಮಾಡಿದ್ರೆ ಬಿಜೆಪಿ ಪಕ್ಷದ ಮೇಲೆ ಬಹುದೊಡ್ಡ ಹೊಡೆತ ಬೀಳುವುದು ಅಂತ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಾಗವತ್ಪಾದರು ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಶ್ರೀಗಳು ತಮ್ಮ ಸ್ಪಷ್ಟನೆ ನೀಡಿದರು. ಯಡಿಯೂರಪ್ಪ ಇಳಿ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪಗೆ ಎಲ್ಲಾ ಜನಾಂಗದವರು ಬೆಂಬಲ ಕೊಟ್ಟಿದ್ದಾರೆ. ಬಿಎಸ್ ವೈ ಜನಪರ ಕಾಳಜಿ ಬಗ್ಗೆ ಯಾರು ಅಲ್ಲೆಗಳೆಯುವಂತೆ ಇಲ್ಲ. ನಾವು ಅಷ್ಟೇ ಅಲ್ಲ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು ಸಹ ಬೆಂಬಲ ಸೂಚಿಸಿದ್ದಾರೆ ಅಂತ ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಇದನ್ನೂ ಓದಿ: Exclusive ಸಿಎಂ ಬದಲಾವಣೆ ಫಿಕ್ಸ್ – ಕಟೀಲ್ ಆಡಿಯೋ ವೈರಲ್

    ರಾಜ್ಯದಲ್ಲಿ ಸಿಎಂ ಬದಲಾವಣೆಯ ಸುದ್ದಿ ಹಲವಾರು ದಿನಗಳಿಂದ ಹರಿದಾಡುತ್ತಿತ್ತು. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ: Exclusive: ಜುಲೈ 26ಕ್ಕೆ ಸಿಎಂ ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ – ರಾಜಾಹುಲಿಗೆ ಹೈಕಮಾಂಡ್ ಸೂಚನೆ!

    ಆಡೀಯೋದಲ್ಲಿ ಯಾರಿಗೂ ಹೇಳಬೇಡ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಅವರ ಟೀಮ್‍ನ್ನು ತೆಗೆಯುತ್ತೇವೆ. ಹೊಸ ತಂಡವನ್ನು ಕಟ್ಟುತ್ತೇವೆ. ಈಗ ಸದ್ಯಕ್ಕೆ ಯಾರಿಗೂ ಹೇಳಬೇಡ. ದೆಹಲಿಯಿಂದನೇ ಮಾಡುತ್ತಾರೆ. ಏನೂ ಸಮಸ್ಯೆ ಇಲ್ಲ, ಭಯಪಡಬೇಡ, ನಾವಿದ್ದೇವೆ. ಯಾರೇ ಆದ್ರೂ ಎಲ್ಲ ನಮ್ಮ ಕೈಯಲ್ಲೇ ಇರುತ್ತೆ. ಮೂರು ಹೆಸರು ಇದೆ, ಇದರಲ್ಲಿ ಯಾರಾದರೂ ಆಗುವ ಚಾನ್ಸ್ ಇದೆ ಎಂದು ಹೇಳಲಾಗಿದೆ. ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇದು ಎಂದು ವೈರಲ್ ಆಗುತ್ತಿದ್ದು, ಆದರೆ ಇದು ನಕಲಿ ಆಡಿಯೋ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆಗೆ ಕೂಡ ಆಗ್ರಹಿಸಿದ್ದಾರೆ.

  • ಅಯೋಧ್ಯೆಯಲ್ಲಿ ರಾಮಮಂದಿರ ಅಡಿಪಾಯ ಕಾಮಗಾರಿ ವೀಕ್ಷಿಸಿದ ಪೇಜಾವರಶ್ರೀ

    ಅಯೋಧ್ಯೆಯಲ್ಲಿ ರಾಮಮಂದಿರ ಅಡಿಪಾಯ ಕಾಮಗಾರಿ ವೀಕ್ಷಿಸಿದ ಪೇಜಾವರಶ್ರೀ

    ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಧರ್ಮನಗರಿಗೆ ಭೇಟಿ ನೀಡಿ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.

    ರಾಮಲಲ್ಲಾನ ತಾತ್ಕಾಲಿಕ ಗುಡಿಗೆ ತೆರಳಿದ ಪೇಜಾವರ ಶ್ರೀಗಳು ದರ್ಶನ ಪಡೆದರು. ದೇವರಿಗೆ ಪುಷ್ಪಾರ್ಚನೆ ಮತ್ತು ಚಾಮರ ಸೇವೆ ಮಾಡಿದರು. ಕೆಲಕಾಲ ಗುಡಿ ಮುಂದೆ ಕುಳಿತು ಜಪಗೈದರು. ಬಳಿಕ ಅಲ್ಲಿಂದ ಮಂದಿರ ನಿರ್ಮಾಣ ಮಾಡುವ ಬುನಾದಿ ತುಂಬಿಸುವ ಸ್ಥಳಕ್ಕೆ ತೆರಳಿದರು. ಇದನ್ನೂ ಓದಿ: ರಾಮಮಂದಿರ ನಿಧಿ ಸಂಗ್ರಹ – ಪೇಜಾವರ ಶ್ರೀಗಳ ನೇತೃತ್ವದಲ್ಲಿ ಭಾರೀ ದೇಣಿಗೆ ಸಂಗ್ರಹ

    ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ತುಂಬಿಸುವ ಕಾಮಗಾರಿ ಆರಂಭವಾದ ನಂತರ ಇದು ಅವರ ಮೊದಲ ಭೇಟಿಯಾಗಿದೆ. ಅಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ, ಈವರೆಗೆ ನಡೆದ ಕಾಮಗಾರಿಯ ಪ್ರಗತಿಯನ್ನು ಎಂಜಿನಿಯರ್ ಗಳು ಸ್ವಾಮೀಜಿಗೆ ವಿವರಿಸಿದರು. ತಳಹದಿ ಕಾಮಗಾರಿ, ಅದರ ಸಾಮರ್ಥ್ಯದ ಬಗ್ಗೆ ವಿವರಣೆ ನೀಡಿದರು. ಇದನ್ನೂ ಓದಿ: ರಾಮಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ಮಾಡ್ತೀರೋ 82ರ ವೃದ್ಧೆ

    ಈ ವೇಳೆ ಟ್ರಸ್ಟ್ ನ ವಿಶ್ವಸ್ಥ ಡಾ. ಅನಿಲ್ ಮಿಶ್ರಾ, ಮಂದಿರ ನಿರ್ಮಾಣ ಉಸ್ತುವಾರಿ ತಂಡದ ಗೋಪಾಲ ನಾಗರಕಟ್ಟೆ, ಮಂದಿರ ನಿರ್ಮಾಣ ಸಂಸ್ಥೆ ಎಲ್‍ಆಯಂಡ್‍ಟಿ ಮತ್ತು ಮೇಲುಸ್ತುವಾರಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿಯ ಎಂಜಿನಿಯರ್‍ ಗಳಿಂದಲೂ ಮಾಹಿತಿ ಪಡೆದರು. ಪೇಜಾವರ ಮಠದ ಆಪ್ತ ಕಾರ್ಯದರ್ಶಿ ವಿಷ್ಣು ಮತ್ತು ಕೃಷ್ಣ ಜೊತೆಗಿದ್ದರು.

  • ಕಣ್ವಕುಪ್ಪೆ ಮಠಕ್ಕೆ ಈಶ್ವರಪ್ಪ ಕುಟುಂಬ ಸಮೇತ ಭೇಟಿ- ಒಂದು ಗಂಟೆ ಕಾಲ ಚರ್ಚೆ

    ಕಣ್ವಕುಪ್ಪೆ ಮಠಕ್ಕೆ ಈಶ್ವರಪ್ಪ ಕುಟುಂಬ ಸಮೇತ ಭೇಟಿ- ಒಂದು ಗಂಟೆ ಕಾಲ ಚರ್ಚೆ

    -ಸ್ವಾಮೀಜಿ ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?

    ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕೂಗಿನ ನಡುವೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿರುವ ಕಣ್ವಕುಪ್ಪೆ ಮಠಕ್ಕೆ ಪತ್ನಿ ಹಾಗೂ ಪುತ್ರ ಕಾಂತೇಶ್ ಜೊತೆ ಕುಟುಂಬ ಸಮೇತರಾಗಿ ಸಚಿವ ಕೆಎಸ್ ಈಶ್ವರಪ್ಪ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿ ಆಶೀರ್ವಾದ ಪಡೆದಿದ್ದಾರೆ.

    ರಾಜ್ಯದಲ್ಲಿ ಕಳೆದ ಕೆಲದಿಗಳಿಂದ ನಾಯಕತ್ವ ಬದಲಾವಣೆ ಕುರಿತು ಚರ್ಚೆ ಜೋರಾಗಿದೆ. ಈ ಸಮಯದಲ್ಲೇ ಮಠಗಳಿಗೆ ಭೇಟಿ ನೀಡುತ್ತಿರುವ ಈಶ್ವರಪ್ಪ, ಕಣ್ವಕುಪ್ಪೆ ಮಠಕ್ಕೆ ಭೇಟಿ ನೀಡಿ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಜೊತೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ನಡೆಸಿದ್ದಾರೆ. ಸ್ವಾಮೀಜಿಗಳ ಈ ಭೇಟಿ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂಬ ಹಲವು ಅನುಮಾನಗಳು ಮೂಡಿದೆ. ಇದನ್ನೂ ಓದಿ: ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ : ಸಚಿವ ಕೆ.ಎಸ್ ಈಶ್ವರಪ್ಪ

    ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕೇದರನಾಥ್ ನಲ್ಲಿ ಪ್ರಧಾನಿ ಮೋದಿಯವರಿಗೆ ಧೀಕ್ಷೆ ನೀಡಿದ್ದ ಸ್ವಾಮೀಜಿಯಾಗಿದ್ದು, ರಾಷ್ಟ್ರ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಕೇದಾರನಾಥ್ ನಲ್ಲಿ ಕಣ್ವಕುಪ್ಪೆ ಸ್ವಾಮಿಜಿ ಅವರಿಂದಲೇ ವಿಶೇಷ ಪೂಜೆ ನಡೆಯುತ್ತದೆ. ಈ ಎಲ್ಲಾ ಆಗು ಹೋಗುಗಳ ನಡುವೆ ಈಶ್ವರಪ್ಪ ಕಣ್ವಕುಪ್ಪೆ ಸ್ವಾಮೀಜಿ ಭೇಟಿ ಸಾಕಷ್ಟು ಕೂತುಹಲ ಕೆರಳಿಸಿದ್ದು, ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.

  • ಕೊರೊನಾ ಬಾರದಂತೆ ಸ್ವಾಮೀಜಿಯಿಂದ ಬೆತ್ತ ಪೂಜೆ – ಮಧ್ಯರಾತ್ರಿ ಗ್ರಾಮದಲ್ಲಿ ನಡೆಯುತ್ತೆ ದಿಗ್ಬಂಧನ ಪೂಜೆ

    ಕೊರೊನಾ ಬಾರದಂತೆ ಸ್ವಾಮೀಜಿಯಿಂದ ಬೆತ್ತ ಪೂಜೆ – ಮಧ್ಯರಾತ್ರಿ ಗ್ರಾಮದಲ್ಲಿ ನಡೆಯುತ್ತೆ ದಿಗ್ಬಂಧನ ಪೂಜೆ

    ಹುಬ್ಬಳ್ಳಿ: ಕೊರೊನಾ ಬಾರದಂತೆ ಇಲ್ಲೊಂದು ಗ್ರಾಮದಲ್ಲಿ ಸ್ವಾಮೀಜಿಯಿಂದ ದಿಗ್ಬಂದನ ಪೂಜೆ ನಡೆಯುತ್ತಿದೆ. ರಾತ್ರಿ 10 ರಿಂದ 11 ರವರೆಗೆ ಪೂಜೆ ನಡೆಯುತ್ತಿದ್ದು, ಬಳಿಕ ಸ್ವಾಮೀಜಿ ಬೆತ್ತ ಹಿಡಿದು ಗ್ರಾಮದ ಸುತ್ತಲೂ ಓಂ ನಮಃ ಶಿವಾಯ ನಾಮ ಸ್ಮರಣೆಯೊಂದಿಗೆ ಸುತ್ತಾಡಿ ದಿಗ್ಬಂಧನ ಮಾಡುತ್ತಿದ್ದಾರೆ.

    ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಲ್ಲಿ ಕಳೆದ ಮೂರು ದಿನಗಳಿಂದ ದಿಗ್ಬಂಧನ ಪೂಜೆ ನಡೆಯುತ್ತಿದೆ. ಇಬ್ರಾಹಿಂಪುರದಲ್ಲಿ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಎರಡು ಮಠಗಳಿವೆ. ಇವುಗಳಲ್ಲಿ ಶಿವಯೋಗಿ ಹಿರೇಮಠ ಸ್ವಾಮೀಜಿ ಪೂಜೆ ಸಲ್ಲಿಸುತ್ತಿದ್ದಾರೆ. ಮಠದ ಗರ್ಭಗುಡಿಯಲ್ಲಿ ರಾತ್ರಿ ವೇಳೆ ಬೆತ್ತಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅದನ್ನು ಹಿಡಿದು ಶಿವಯೋಗಿ ಸ್ವಾಮೀಜಿ, `ಓಂ ನಮಃ ಶಿವಾಯ’ ಎಂದು ನಾಮ ಸ್ಮರಣೆ ಮಾಡುತ್ತಾ ಊರೆಲ್ಲ ಸುತ್ತು ಹಾಕುತ್ತಾರೆ.

    ಹೀಗೆ ಸುತ್ತು ಹಾಕುವುದರಿಂದ ಊರಲ್ಲಿ ಕೊರೊನಾ ಬಾರದಂತೆ ದಿಗ್ಬಂಧನ ಹಾಕಿದಂತೆ. ಇದರಿಂದ ಕೊರೊನಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ನಮ್ಮೂರಿನತ್ತ ಹಾಯುವುದಿಲ್ಲ ಎಂಬ ನಂಬಿಕೆ ಗ್ರಾಮಸ್ಥರು ಮತ್ತು ಶ್ರೀಗಳದ್ದಾಗಿದೆ. 5 ದಿನಗಳ ದಿಗ್ಬಂಧನ ಪೂಜೆಯಿದಾಗಿದ್ದು, ಈಗಾಗಲೇ ಮೂರು ದಿನಗಳ ಪೂಜೆ ಮುಗಿದಿದೆ. ಇನ್ನೆರಡು ದಿನ ಪೂಜೆ ಮಾಡುವುದು ಬಾಕಿಯಿದ್ದು, ಗುರುವಾರ ಮುಕ್ತಾಯವಾಗುತ್ತದೆ. ಕಳೆದ ವರ್ಷ ಕೊರೊನಾ ಮೊದಲ ಅಲೆಯ ವೇಳೆಯಲ್ಲೂ ಈ ರೀತಿ ಪೂಜೆ ಮಾಡಿ ದಿಗ್ಬಂಧನ ಹಾಕಲಾಗಿತ್ತು. ಆಗ ಹಾವಳಿ ಕಡಿಮೆಯಾಗಿತ್ತು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮೊದಲು ಇತ್ತು: ದಶಕಗಳ ಹಿಂದೆ ಬೂದಿಸ್ವಾಮಿ ಹಾಗೂ ರುದ್ರಮುನಿ ಸ್ವಾಮಿ ಎಂಬ ಇಬ್ಬರು ಈ ಊರಲ್ಲಿ ತಪಸ್ಸು ಮಾಡಿ ನೆಲೆ ನಿಂತಿದ್ದರಂತೆ. ಆಗ ಊರೆಲ್ಲೆಲ್ಲ ಪ್ಲೇಗ್ ಹಾವಳಿ ಇತ್ತು ಎನ್ನಲಾಗುತ್ತಿದ್ದು, ಇಬ್ರಾಹಿಂಪುರದಲ್ಲಿ ಈ ಮಹಾಮಾರಿ ಕಾಲಿಡಬಾರದೆಂದು ಈ ರೀತಿ ದಿಗ್ಬಂಧನ ಪೂಜೆ ಪ್ರತಿವರ್ಷ ಮಾಡುತ್ತಿದ್ದರಂತೆ. ಇದೀಗ ಕೊರೊನಾ ಹಾವಳಿ ಮಿತಿಮೀರಿದೆ. ಜೊತೆಗೆ ಕಳೆದ ವಾರ ಈ ಗ್ರಾಮದಲ್ಲಿ ಒಂದೇ ದಿನ ಏಳು ಜನರು ಸಾವಿಗೀಡಾಗಿದ್ದಾರೆ. (ಇಬ್ಬರು ಕೊರೊನಾದಿಂದ ಮೃತಪಟ್ಟರೆ, ಇನ್ನುಳಿದ ಐವರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ) ಈ ಕಾರಣದಿಂದ ಗ್ರಾಮಸ್ಥರೆಲ್ಲರೂ ಚರ್ಚಿಸಿ, ಹಿಂದೆ ಹಿರಿಯ ಸ್ವಾಮೀಜಿಗಳು ಮಾಡಿದಂತೆ ದಿಗ್ಬಂಧನ ಪೂಜೆ ಮಾಡಲು ನಿರ್ಧರಿಸಿ, ಈಗಿನ ಸ್ವಾಮೀಜಿ ಶಿವಯೋಗಿ ಹಿರೇಮಠರವರಿಗೆ ಹೇಳಿ ಅವರಿಂದ ಪೂಜೆ ಮಾಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ಇಬ್ರಾಹಿಂಪುರದಲ್ಲಿ ದಿಗ್ಬಂಧನ ಪೂಜೆ ಮಾಡುತ್ತಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ. ಈ ಪೂಜೆಯಲ್ಲಿ ಗ್ರಾಮದ ಶಿವಾನಂದ ಮಠದ ಶ್ರೀ ದಯಾನಂದ ಸ್ವಾಮಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಚಿಪ್ಪಾಡಿ, ಹೇಮಣ್ಣ ಬಡಿಗೇರ ಸೇರಿದಂತೆ ಮತ್ತಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಗ್ರಾಮಸ್ಥರು ಹೇಳುವುತ್ತಿರುವುದೇನು?
    ಗ್ರಾಮದಲ್ಲಿ ಒಂದೇ ದಿನಕ್ಕೆ 7 ಜನ ಮೃತಪಟ್ಟಿದ್ದಾರೆ. ಇದರಿಂದ ದೊಡ್ಡ ಆಘಾತವೇ ಉಂಟಾಗಿತ್ತು. ಈ ಹಿಂದೆ ಪ್ಲೇಗ್ ಬಂದಾಗ ಮಾಡುತ್ತಿದ್ದ ದಿಗ್ಬಂಧನ ಪೂಜೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಮಾಡಲು ನಿರ್ಧರಿಸಿ ಶ್ರೀಗಳ ಸನ್ನಿಧಾನದಲ್ಲಿ ಕೋರಿದೆವು. ಕೊರೊನಾ ಸೇರಿ ಯಾವುದೇ ರೋಗ ಗ್ರಾಮಕ್ಕೆ ಬರಬಾರದೆಂಬ ಉದ್ದೇಶದಿಂದ ನಿರ್ಣಯ ತೆಗೆದುಕೊಂಡಿದ್ದೇವೆ. ಇದರಿಂದ ಗ್ರಾಮಕ್ಕೆ ಒಳ್ಳೆಯದೇ ಆಗುತ್ತದೆ ಎಂದು ಗ್ರಾಮದ ಹಿರಿಯರು ಅಂತಿದ್ದಾರೆ.

  • ವೀಡಿಯೋ ಕಾಲ್ ಮಾಡಿ ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದ ಗವಿಮಠದ ಶ್ರೀಗಳು

    ವೀಡಿಯೋ ಕಾಲ್ ಮಾಡಿ ಕೋವಿಡ್ ಸೋಂಕಿತರೊಂದಿಗೆ ಮಾತನಾಡಿದ ಗವಿಮಠದ ಶ್ರೀಗಳು

    ಕೊಪ್ಪಳ: ಇತ್ತೀಚೆಗಷ್ಟೇ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರದ ಬೆನ್ನಲ್ಲೇ ಇದೀಗ ಶ್ರೀಗಳು ಸ್ವತಃ ವೀಡಿಯೋ ಕಾಲ್ ಮಾಡಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದ್ದಾರೆ.

    ನಗರದ ಗವಿ ಮಠದ ವೃದ್ಧಾಶ್ರಮದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ತೆರಯಲಾಗಿದೆ. ಈ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾದ ರೋಗಿಗಳಿಗೆ ವೀಡಿಯೋ ಕಾಲ್ ಮಾಡಿ ಶ್ರೀಗಳು ಮಾತನಾಡಿದ್ದಾರೆ. ಆರೋಗ್ಯ ವಿಚಾರಿಸಿ, ಯಾವುದೇ ರೀತಿಯ ಭಯಪಡದಂತೆ ರೋಗಿಗಳಲ್ಲಿ ಧೈರ್ಯ ತುಂಬಿದ್ದಾರೆ. ಕೋವಿಡ್ ಕೇರ್ ಸೆಂಟರ್ ತೆರೆಯುವುದಲ್ಲದೆ, ಸ್ವತಃ ತಾವೇ ರೋಗಿಗಳಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಕಾಳಜಿ ತೋರಿದ್ದಾರೆ. ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಶ್ರೀಗಳ ಮಾತಿಗೆ ಸೋಂಕಿತರು ಕೈ ಮುಗಿದಿದ್ದಾರೆ.

    ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಫುಲ್ ಆಗುತ್ತಿದ್ದಂತೆ ಐತಿಹಾಸಿಕ ಗವಿಮಠದಿಂದ 100 ಬೆಡ್ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಗವಿ ಮಠದ ಸ್ವಾಮೀಜಿ ಕಾರ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ. ಗವಿಮಠದ ವೃದ್ಧಾಶ್ರಮದಲ್ಲಿ 100 ಬೆಡ್‍ಗಳ ಆಸ್ಪತ್ರೆ ತಲೆ ಎತ್ತಿದ್ದು, ಕೊಪ್ಪಳ ಜಿಲ್ಲಾಡಳಿತದ ಮನವಿ ಹಿನ್ನೆಲೆ ಗವಿಸಿದ್ದೇಶ್ವರ ಸ್ವಾಮೀಜಿ 100 ಬೆಡ್‍ಗಳ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ.

    ಒಟ್ಟು 100 ಹಾಸಿಗೆಯಲ್ಲಿ 70 ಆಕ್ಸಿಜನ್ ಬೆಡ್, 20 ಸಾಮಾನ್ಯ ಬೆಡ್ ಮಾಡಲಾಗಿದ್ದು, ಬಾಕಿ 10 ಬೆಡ್ ನಲ್ಲಿ 6 ಎಚ್‍ಎಫ್‍ಎನ್‍ಸಿ ಬೆಡ್ ಮತ್ತು 4 ವೆಂಟಿಲೇಟರ್ ಬೆಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸ್ವಾಮೀಜಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ ಖಾವಿ ಬಿಚ್ಚಿ ರಾಜಕೀಯ ಮಾಡಿ: ನೆಹರು ಓಲೇಕಾರ್

    ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ ಖಾವಿ ಬಿಚ್ಚಿ ರಾಜಕೀಯ ಮಾಡಿ: ನೆಹರು ಓಲೇಕಾರ್

    – ಅಲ್ಪ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವಂತೆ ಮಾಡಬೇಡಿ

    ಚಿತ್ರದುರ್ಗ: ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ, ಖಾವಿ ಬಿಚ್ಚಿ ಹಾಕಿ ರಾಜಕೀಯ ಮಾಡಿ ಎಂದು ರಾಜ್ಯ ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿ ಆಯೋಗದ ಅಧ್ಯಕ್ಷ ನೆಹರು ಓಲೇಕರ್ ಅವರು ಛಲವಾದಿ ಗುರುಪೀಠದ ಶ್ರೀಬಸವ ನಾಗೀದೇವ ಸ್ವಾಮೀಜಿ ಅವರಿಗೆ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲೆಯ ಛಲವಾದಿ ಸಮುದಾಯದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರಾಜಕೀಯ ಮಾಡುವುದಾದರೆ ಖಾವಿ ಬಿಚ್ಚಿ ಹಾಕಿ, ರಾಜಕೀಯ ಮಾಡಿ. ಖಾವಿ ಹಾಕಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಪ್ರಮಾಣದ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಖಾವಿ ಹಾಕಿ ರಾಜಕೀಯ ಮಾಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜಕೀಯ ಸುಲಭವಾದ ಕೆಲಸ ಅಲ್ಲ. ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಮಾಡಿದರೆ ನಿಮ್ಮ ಮೇಲಿನ ಗೌರವ ಕಡಿಮೆ ಆಗಲಿದೆ. ಸ್ವಾಮೀಜಿ ಆಗಿ ಸಮಾಜವನ್ನು ಕಟ್ಟುವ ಕೆಲಸ ಮಾಡಿ, ಕೆಳಮಟ್ಟದ ಸಮುದಾಯವನ್ನು ಮೇಲೆ ಎತ್ತಿ. ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಬೆಳೆಸಿದರೆ ನಿಮ್ಮ ಜನರೆ ನಿಮ್ಮನ್ನು ಗೌರವಿಸುತ್ತಾರೆ ಎಂದರು. ಇದಕ್ಕೆ ವೇದಿಕೆಯಲ್ಲಿ ಸಾನಿಧ್ಯ ವಹಿಸಿ ಕುಳಿತಿದ್ದ ಶ್ರೀ ಬಸವ ನಾಗೀದೇವ ಸ್ವಾಮೀಜಿ ಮೌನ ವಹಿಸಿ ತಲೆಯಾಡಿಸಿದರು.

    ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹೆಚ್.ಸಿ.ನಿರಂಜನಮೂರ್ತಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಜಿ.ಪಂ.ಮುಖ್ಯ ಲೆಕ್ಕ ಅಧೀಕ್ಷಕ ಓಂಕಾರಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಗುರುಮೂರ್ತಿ, ಯಶವಂತ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

  • ಸಚಿವ ಶ್ರೀರಾಮುಲು ಮುಂದೆ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ

    ಸಚಿವ ಶ್ರೀರಾಮುಲು ಮುಂದೆ ಸ್ವಾಮೀಜಿ ಆತ್ಮಹತ್ಯೆಗೆ ಯತ್ನ

    ಚಿತ್ರದುರ್ಗ: ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರಸ್ವಾಮಿ ಸಚಿವ ಶ್ರೀರಾಮುಲು ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ನಗರದ ಬಿಜೆಪಿ ಕಚೇರಿ ಬಳಿ ನಡೆದ ಘಟನೆ ನಡೆದಿದ್ದು, ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕನಕಪುರದ ಯೋಗವನ ಬೆಟ್ಟದ ಪೀಠಾದ್ಯಕ್ಷ ಸ್ಥಾನ ತಪ್ಪಿದ ಹಿನ್ನೆಲೆ ಸಚಿವರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಹಣಬಲ, ಅಧಿಕಾರ ಬಲದಿಂದ ಪೀಠಾಧಿಕಾರ ತಪ್ಪಿಸಲಾಗಿದ್ದು, ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಸ್ವಾಮೀಜಿಸಿ ಹೇಳಿದ್ದಾರೆ. ತಕ್ಷಣವೇ ಸ್ವಾಮೀಜಿ ವಿಷ ಸೇವನೆಯನ್ನು ಸಚಿವ ಶ್ರೀರಾಮುಲು ತಡೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

  • ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಸ್ವಚ್ಛತಾ ಕಾರ್ಯ ಮಾಡಿ ಜಾಗೃತಿ ಮೂಡಿಸಿದ ಶ್ರೀಗಳು

    ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಮಾಸೂರಿನ ಮಹಾಂತ ಶ್ರೀ ಹಾಗೂ ಕೂಡಲಮಠದ ಶ್ರೀಗಳು ಪೂರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    ಮಾಸೂರಿನ ವರಕವಿ ಸರ್ವಜ್ಞನ ಪ್ರತಿಮೆ ಸುತ್ತಮುತ್ತವಿರುವ ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಹುಕ್ಕೇರಿ ಮಠದ ಶ್ರೀಗಳಿಗೆ ತಿಪ್ಪಾಯಿಕೊಪ್ಪದ ಮಹಂತದೇವರು, ಹಾವೇರಿ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು. ಅಲ್ಲದೆ ಈ ಕಾರ್ಯದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಕೆಲ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.

    ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

  • ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ರಾಮ ಮಂದಿರ ನಿರ್ಮಾಣ- ಆದಿಚುಂಚನಗಿರಿಯಲ್ಲಿ ನಿಧಿ ಸಮರ್ಪಣ ಸಂತ ಸಮಾವೇಶ

    ಮಂಡ್ಯ: ಆದಿಚುಂಚನಗಿರಿಯಲ್ಲಿ ಮಹಾಸಂಸ್ಥಾನ ಮಠದಿಂದ ಆಯೋಜಿಸಲಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಸಂತ ಸಮಾವೇಶ ನಡೆಸಲಾಯಿತು. ವಿವಿಧ ಮಠಾಧೀಶರು ನಿಧಿ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಸಿದರು.

    ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಭಾಗವಹಿಸಿ ನಿಧಿ ಸಂಗ್ರಹದ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು.

    ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಮ್ಮ ಮಠ ಮತ್ತು ಎಲ್ಲ ಶಾಖಾ ಮಠಗಳು ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣವಾಗಿ ಸಹಕರಿಸುತ್ತವೆ ಎಂದರು. ಪೇಜಾವರ ಶ್ರೀಗಳು ಮಾತನಾಡಿ, ಶ್ರೀರಾಮನ ಗುಣಗಳನ್ನು ನಾವೆಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಪ್ರಚಾರಕ ಸುಧೀರ್ ಮಾತನಾಡಿ, ರಾಮಜನ್ಮಭೂಮಿ 492 ವರ್ಷಗಳ ಹೋರಾಟ. ಈ ಅಭಿಯಾನ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು.

    ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹಾಗೂ ವಿಶ್ವ ಹಿಂದೂ ಪರಿಷದ್ ನ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕ ಬಸವರಾಜು ಇದ್ದರು.