Tag: swamiji

  • ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಆ್ಯಸಿಡ್ ನಾಗನನ್ನು ಹಿಡಿಯಲು ಸ್ವತಃ ಖಾವಿ ಧರಿಸಿದ್ದ ಪೊಲೀಸರು

    ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಚಾಲಾಕಿ ನಾಗನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆ್ಯಸಿಡ್ ನಾಗ ಎಲ್ಲಿ ತಲೆಮರೆಸಿಕೊಂಡಿದ್ದ? ಪೊಲೀಸರಿಗೆ ಆತನ ಸುಳಿವು ಸಿಕ್ಕಿದ್ದು ಹೇಗೆ? ನಾಗನನ್ನು ಹಿಡಿಯಲು ಪೊಲೀಸರು ಹಾಕಿದ್ದ ಪ್ಲ್ಯಾನ್ ನಿಜಕ್ಕೂ ರೋಚಕವಾಗಿದೆ.

    ಏಪ್ರಿಲ್ 28 ರಂದು ಯುವತಿಯ ಮೇಲೆ ಆಸಿಡ್ ಎರಚಿ ನಾಗೇಶ್ ಪರಾರಿಯಾಗಿದ್ದ. ದಾಳಿ ವೇಳೆ ನಾಗನ ಬಲಗೈ ಮೇಲೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ಆ ಗಾಯಗಳನ್ನೇ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ನಾಗೇಶ್ ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳಲು ಒಪ್ಪದಿದ್ದಾಗ ಅಲ್ಲಿಂದ ಕಾಲ್ಕಿತ್ತಿದ್ದ. ನಂತರ ತಮಿಳುನಾಡು ಗಡಿಭಾಗದ ಕ್ಲಿನಿಕ್‌ನಲ್ಲಿ ಗಾಯಗಳಿಗೆ ಚಿಕಿತ್ಸೆ ತೆಗೆದುಕೊಂಡು ಪ್ರಯಾಣ ಮುಂದುವರಿಸಿದ್ದ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್

    ಸ್ವಾಮೀಜಿ ವೇಷಧರಿಸಿದ್ದ ನಾಗ
    ನಾನೊಬ್ಬ ಭಕ್ತನೆಂದು ಹೇಳಿಕೊಂಡು ತಮಿಳುನಾಡಿನ ತಿರುವಣ್ಣಮಲ್ಲೈ ಆಶ್ರಮದಲ್ಲಿ ನಾಗ ಆಶ್ರಯ ಪಡೆದುಕೊಂಡಿದ್ದ. ಕಾವಿ ತೊಟ್ಟು ರಮಣಾ ಆಶ್ರಮದಲ್ಲಿ ನಾಗೇಶ ಅವಿತಿದ್ದ. ಭಿತ್ತಿ ಪತ್ರಗಳನ್ನು ಹೊರಡಿಸಿ ಆರೋಪಿಯ ಸುಳಿವು ಪತ್ತೆಗೆ ಪೊಲೀಸರು ಮುಂದಾಗಿದ್ದರು. ನೆರೆ ರಾಜ್ಯದ ಪೊಲೀಸರು ಕಾಮಾಕ್ಷಿಪಾಳ್ಯ ಪೊಲೀಸರ ನೆರವಿಗೆ ಬಂದಿದ್ದರು. ಶುಕ್ರವಾರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಆತನ ಚಹರೆ ಹಾಗೂ ಕೈ ಮೇಲಾಗಿದ್ದ ಗಾಯಗಳನ್ನು ಕಂಡು ಪೊಲೀಸರು ಶಂಕೆಗೊಂಡಿದ್ದಾರೆ. ಹತ್ತಿರ ಹೋಗುತ್ತಿದ್ದಂತೆ ಭೀತಿಯಿಂದ ಪರಾರಿಯಾಗಲು ನಾಗೇಶ ಯತ್ನಿಸಿದ್ದ. ಕೂಡಲೇ ನಾಗನನ್ನು ಹಿಡಿದು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಶಟರ್ ಮುರಿದು ಕಳ್ಳತನ – ಸಿಸಿಟಿವಿಯಲ್ಲಿ ದೃಶ್ಯ ಸೆರೆ 

    ನಾಗನನ್ನು ಹಿಡಿಯಲು ಖಾವಿ ತೊಟ್ಟಿದ್ದ ಪೊಲೀಸರು
    ಆ್ಯಸಿಡ್ ನಾಗ ಅಪ್ಪಟ ದೈವಭಕ್ತನಾಗಿದ್ದ. ವಾರದಲ್ಲಿ ಸೋಮವಾರ, ಶುಕ್ರವಾರ ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿದ್ದ. ಈ ಬಗ್ಗೆ ನಾಗೇಶ್ ಪೋಷಕರ ವಿಚಾರಣೆ ವೇಳೆ ಪೊಲೀಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನಲೆಯಲ್ಲಿ ಕಳೆದ ಒಂದು ವಾರದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಶೋಧ ನಡೆಸಿದ್ದರು. ಪೊಲೀಸರು ಬೆನ್ನು ಬಿದ್ದಿರುವ ಮಾಹಿತಿ ತಿಳಿದ ನಾಗೇಶ್, ಮಠದಲ್ಲಿ ಸ್ವಾಮಿ ವೇಷದಲ್ಲಿ ವಾಸವಾಗಿದ್ದ. ಪೊಲೀಸರು ಕೂಡ ಭಕ್ತರ ವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ನಾಗನನ್ನು ಹಿಡಿಯಲು ಸ್ವತಃ ಪೊಲೀಸರು ಸಹ ಖಾವಿ ಧರಿಸಿ ಹೊಂಚುಹಾಕಿದ್ದರು.

    ಪೊಲೀಸರು ತನ್ನನ್ನು ಹುಡುಕುತ್ತಿರುವ ಮಾಹಿತಿ ತಿಳಿದು ನಾಗ ಖಾವಿ ಧರಿಸಿ ದೇವಸ್ಥಾನದಲ್ಲಿ ಕುಳಿತಿದ್ದ. ಯಾರಿಗೂ ಅನುಮಾನ ಬರಬಾರದು ಎಂದು ಖಾವಿ ಧರಿಸಿದ್ದ. ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿತ್ತು. ಖಾವಿಧಾರಿ ನಾಗೇಶ್‌ನನ್ನು ನೋಡಿ ಅನುಮಾನಗೊಂಡ ಪೊಲೀಸರಿಗೆ ನಂತರ ಗುರುತು ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ನಾಗನನ್ನು ಬಂಧಿಸಿದ್ದಾರೆ. ನಂತರ ರಾತ್ರಿ 11 ಗಂಟೆ ವೇಳೆಗೆ ಬೆಂಗಳೂರಿಗೆ ಕರೆತರಲಿದ್ದಾರೆ.

  • ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗ್ತಿದ್ದೇವೆ: ಚಂದ್ರಶೇಖರ ಸ್ವಾಮೀಜಿ

    ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗ್ತಿದ್ದೇವೆ: ಚಂದ್ರಶೇಖರ ಸ್ವಾಮೀಜಿ

    ತುಮಕೂರು: ರಾಜಕಾರಣಿಗಳ ಜತೆ ಸೇರಿ ಮಠಾಧಿಪತಿಗಳು ಹಾಳಾಗುತ್ತಿದ್ದೇವೆ. ಮಠಾಧೀಶರು ಎಚ್ಚರದಿಂದ ದೇಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಧರ್ಮದಿಂದ ದೇಶ ಉಳಿಸುವ ಕೆಲಸ ಮಾಡಬೇಕು. ನಮಗೆ ರಾಜಕೀಯ ಬೇಡ ದೇಶ ಬೇಕಿದೆ ಎಂದು ಬೆಟ್ಟದಹಳ್ಳಿ ಗವಿಮಠದ ಅಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ವಿಷಾದಿಸಿದರು.

    ಗುಬ್ಬಿ ತಾಲೂಕಿನ ಬೆಟ್ಟದಹಳ್ಳಿ ಹಮ್ಮಿಕೊಂಡಿದ್ದ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಯೋಗಿಗಳ ಸಂಸ್ಮರಣೆ, ಗುರುಲಿಂಗ ಜಂಗಮರ ಪೂಜೆ, ಬಸವ ಜಯಂತಿ, ರಾಜ್ಯಮಟ್ಟದ ಭಜನಾ ಮೇಳ ಮತ್ತು ಸಾಮೂಹಿಕ ಲಿಂಗದೀಕ್ಷಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗ್ರಾಮೀಣ ಪ್ರದೇಶದಲ್ಲಿ ಆರ್ಕೆಸ್ಟ್ರಾಗಳಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಮನೆ ಮಠ ಹಾಳು ಮಾಡುತ್ತಿದ್ದಾರೆ. ಆದರೆ, ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಿಂದೇಟು ಹಾಕಲಾಗುತ್ತಿದೆ. ಹಲವು ದಾನಿಗಳು ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ತಲೆ ಹೊಡೆಯವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶ ಆಳುವವರು ಬಡ ಜನತೆಯ ಹಿತವನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.  ಇದನ್ನೂ ಓದಿ: ಪಬ್ಲಿಕ್ ಟಿವಿ ‘ನಮ್ಮ ಮನೆ’ಗೆ ಬನ್ನಿ – ಕನಸಿನ ಮನೆ ಖರೀದಿಸಿ

    ಬಸವಣ್ಣ ಅವರು ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ಲಿಂಗಧಾರಣೆ ಮಾಡಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಿದರು. ಆ ನಿಟ್ಟಿನಲ್ಲಿ ಅವರ ತತ್ವ, ಆದರ್ಶಗಳನ್ನು ಗವಿ ಮಠದಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಇದೇ ವೇಳೆ ಬೆಳ್ಳಾವಿ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಚಂದ್ರಶೇಖರ ಸ್ವಾಮೀಜಿ ಅವರು ಮಠದ ಮೂಲಕ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 13 ವರ್ಷಗಳಲ್ಲಿ 10 ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಎಲ್ಲರಿಗೂ ಮಾದರಿ ಆಗಿದ್ದಾರೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.

    40ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದವು. ಕೊಳಗುಂದ ಮಠದ ಜಯಚಂದ್ರಶೇಖರ ಸ್ವಾಮೀಜಿ, ಮಾಡಾಳು ಮಠದ ರುದ್ರಮುನಿ ಸ್ವಾಮೀಜಿ, ಮಾಗಡಿ ರುದ್ರಮುನೀಶ್ವರ ಮಠದ ಚಂದ್ರಶೇಖರ ಸ್ವಾಮೀಜಿ, ಕುಣಿಗಲ್ ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವಾ ವಿದ್ಯಾಶಂಕರ ಸ್ವಾಮೀಜಿ, ತೇವಡೆಹಳ್ಳಿಯ ಗೋಸಲ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಹಾಜರಿದ್ದರು.

  • ರಾಜೀನಾಮೆ ನೀಡಿದ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

    ರಾಜೀನಾಮೆ ನೀಡಿದ ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ

    ಶಿವಮೊಗ್ಗ: ಕೆ.ಎಸ್. ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ಇತರೆ ಸ್ವಾಮೀಜಿಗಳು ಭೇಟಿ ನೀಡಿ ಚರ್ಚೆ ನಡೆಸಿದರು.

    ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಪ್ರತಿ ಹುಣ್ಣಿಮೆಯ ದಿನ ಮನೆಯಲ್ಲಿ ವಿಶೇಷ ಪೂಜೆ ಇರುತ್ತದೆ. ಇವತ್ತು ಸಹ ಹುಣ್ಣಿಮೆ ಪೂಜೆ ಜೊತೆಗೆ ಸತ್ಯನಾರಾಯಣ ಪೂಜೆ ಮಾಡುತ್ತಿದ್ದೆವು. ಇದೇ ವೇಳೆ 10ಕ್ಕೂ ಹೆಚ್ಚು ಶ್ರೀಗಳು ನಮ್ಮ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರು ಬರುವ ಕಲ್ಪನೆ ಸಹ ನನಗೆ ಇರಲಿಲ್ಲ. ಪೂಜೆಯ ಸಮಯಕ್ಕೆ ದೇವರ ರೀತಿ ಬಂದು ಅವರೆಲ್ಲರೂ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.

    ಯಾವ ಲೋಪವೂ ಇಲ್ಲದೇ, ನಿರ್ದೋಷಿಯಾಗಿ ಹೊರಗೆ ಬರ್ತೀರಾ ಎಂದು ಸ್ವಾಮೀಜಿಗಳು ಅಭಯ ನೀಡಿದ್ದಾರೆ. ನಾನೇನು ಕುಗ್ಗಿರಲಿಲ್ಲ. ನನಗೆ ಆನೆಬಲದಷ್ಟು ಧೈರ್ಯ ಬಂದಿದೆ. ಎಲ್ಲಾ ಶ್ರೀಗಳು ಆಶೀರ್ವಾದ ಮಾಡಿದ್ದು, ನನಗೆ ಪೂರ್ವ ಜನ್ಮದ ಪುಣ್ಯವಾಗಿದೆ. ಜೊತೆಗೆ ಮಂತ್ರಾಲಯದ ಶ್ರೀಗಳು ಕರೆ ಮಾಡಿದ್ದರು. ರಾಯರ ಭಕ್ತರು ನೀವು. ನಿಮಗೆ ಒಳ್ಳೆಯದಾಗುತ್ತದೆ ಎಂದು ಹರಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್‍ನದ್ದು ಆತ್ಮಹತ್ಯೆಯೋ, ಕೊಲೆಯೋ? ಈಶ್ವರಪ್ಪ

    ಪರಿವಾರದ ಹಿರಿಯರು ಹಾಗೂ ಪಕ್ಷ ಹಾಗೂ ಸರ್ಕಾರಕ್ಕೆ ಇರಿಸು-ಮುರಿಸು ಆಗಬಾರದು. ಹಾಗಾಗಿ ನಿನ್ನೆ ಹೋಗಿ ರಾಜೀನಾಮೆ ಕೊಟ್ಟಿದ್ದೇನೆ. ರಾಜ್ಯ ನಾಯಕರು ಎಲ್ಲರೂ ಜೊತೆ ಮಾತಾಡಿಯೇ ನಿರ್ಧಾರ ಮಾಡಿದ್ದೇನೆ. ಕಾರ್ಯಕರ್ತರು ಅಭಿಮಾನವಿಟ್ಟು ಬೆಂಗಳೂರಿಗೆ ಬಂದಿದ್ದರು. ಅವರಿಗೆ ನಾನು ಅಭಾರಿ ಎಂದು ನುಡಿದರು.

    ನನ್ನ ವಿಚಾರದ ಬಗ್ಗೆ ಕಳೆದ 3-4 ದಿನಗಳಿಂದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಮಾತನಾಡುತ್ತಿದ್ದೆ. ಎಲ್ಲರ ಹಿರಿಯರ ಒಪ್ಪಿಗೆ ಪಡೆದು, ಯಾರಿಗೂ ಇರಿಸು ಮುರಿಸು ಆಗಬಾರದು ಎಂಬ ಕಾರಣದಿಂದ ಎಲ್ಲರ ಒಪ್ಪಿಗೆ ಪಡೆದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ಬಿಜೆಪಿಯಿಂದ ಹಲಾಲ್ ಆದ ಮೊದಲ ವ್ಯಕ್ತಿ: ಸತೀಶ್ ಜಾರಕಿಹೊಳಿ ವ್ಯಂಗ್ಯ

    ರಾಜೀನಾಮೆ ಕೊಡುವುದು ಬಲಪ್ರದರ್ಶನ ಅಲ್ಲ. ನಾನು ರಾಜೀನಾಮೆ ಕೊಡ್ತೀನಿ ಅಂತಾ ಹೇಳಿದ್ದೆ. ಈ ವಿಷಯ ಹೇಳಿದಾಗ ಕಾರ್ಯಕರ್ತರು ನನ್ನ ಜೊತೆ ಬರುತ್ತೇನೆ ಎಂದರು. ನಾನು ಒಂದು 3-4 ಕಾರಿನಲ್ಲಿ ಬರುತ್ತಾರೆ ಅಂದುಕೊಂಡಿದ್ದೆ. ಆದರೆ ನೂರಾರು ಕಾರಿನಲ್ಲಿ ಬರುತ್ತಾರೆ ಅಂತಾ ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನ, ಸ್ನೇಹ, ಭಾಂಧವ್ಯ ಬೆಂಗಳೂರುವರೆಗೆ ಬಂದು ಬೆಂಬಲ ಕೊಟ್ಟಿದ್ದು ನನಗೂ ಸಂತೋಷ ಆಯ್ತು ಎಂದರು.

  • ವಿವಾದದ ಹೇಳಿಕೆಯಿಂದ ಒಂಟಿಯಾದ್ರಾ..? – ಸಿದ್ದರಾಮಯ್ಯ ಆಪ್ತರ ಬಳಿ ಹೇಳಿಕೊಂಡಿದ್ದೇನು..?

    ವಿವಾದದ ಹೇಳಿಕೆಯಿಂದ ಒಂಟಿಯಾದ್ರಾ..? – ಸಿದ್ದರಾಮಯ್ಯ ಆಪ್ತರ ಬಳಿ ಹೇಳಿಕೊಂಡಿದ್ದೇನು..?

    ಬೆಂಗಳೂರು: ಹಿಜಬ್, ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ತಾವು ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಬಳಿಕವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂಟಿಯಾದ್ರಾ ಅನ್ನೋ ಅನುಮಾನವೊಂದು ಹುಟ್ಟಿಕೊಂಡಿದೆ.

    ಸ್ವಾಮೀಜಿಗಳ ಶಿರವಸ್ತ್ರದ ಹೇಳಿಕೆಯ ಬಳಿಕ ಸ್ವಪಕ್ಷೀಯರು ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಳ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಸಿದ್ದರಾಮಯ್ಯ ಹೇಳಿಕೆ ಪರ ಯಾರೂ ನಿಲ್ತಿಲ್ಲ. ಇದರಿಂದ ಅಸಮಾಧಾನದಲ್ಲಿರುವ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ  ಬೇಸರ ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ: ಡಿಕೆಶಿ ಅಂತರ ಕಾಯ್ದುಕೊಂಡಿದ್ದು ಏಕೆ..?

    SIDDARAMAIAH

    ನನ್ನ ವಿಲನ್ ಮಾಡುವುದಕ್ಕೆ ನೋಡ್ತಾರೆ ಕಣ್ರಯ್ಯ. ನಮ್ಮವರೇ ನನ್ನ ಹಳ್ಳಕ್ಕೆ ಕೆಡವಿ ಬಿಡ್ತಾರೆ ಅಂದ್ರೆ ಹೇಗೆ.?. ನಾನು ಹುಷಾರಾಗಿಲ್ಲ ಅಂತಂದ್ರೆ ರಾಜಕೀಯವಾಗಿ ನನಗೆ ಡೇಂಜರ್. ನಾನು ಯಾರನ್ನೂ ಟಾರ್ಗೆಟ್ ಮಾಡಿ ಮಾತಾಡಲಿಲ್ಲ. ದುಪ್ಪಟ್ಟ ಬಗ್ಗೆ ಸ್ವಾಭಾವಿಕವಾಗಿ ಹೇಳಿದೆ ಅಷ್ಟೇ. ಅದೂ ನನ್ನ ತಲೆಯಲ್ಲಿ ಇರಲಿಲ್ಲ, ಕೋತಿ ಹಿಂದಿದ್ದವನು ಹೇಳಿದ. ಅದನ್ನೇ ನಾನು ಹಿಂದು-ಮುಂದು ನೋಡದೇ ಹೇಳ್ಬಿಟ್ಟೆ ಎಂದು ಬೇಸರ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ

    ನಿರ್ದಿಷ್ಟ ಗುರಿ ಇಟ್ಕೊಂಡು ಮಾತಾಡಿಲ್ಲ. ಇಷ್ಟೊಂದು ವಿವಾದ ಆಗ್ಬಿಟ್ಟಿದೆ. ಬಿಜೆಪಿಯವರು ಇಂತಹದ್ದನ್ನೇ ಕಾಯ್ತಿರ್ತಾರೆ, ಇತ್ತ ನಮ್ಮವರು ಮೌನವಾಗಿದ್ದಾರೆ. ನಮ್ಮ ಪಕ್ಷದವರು ಯಾವೊಬ್ಬರೂ ಸಮರ್ಥಿಸಿಕೊಳ್ಳಲೇ ಇಲ್ಲ. ಬಿಜೆಪಿಗಷ್ಟೇ ಅಲ್ಲ ನಮ್ಮೊಳಗಿನ ವಿರೋಧಿಗಳಿಗೂ ಇದು ಮೈಲೇಜ್ ಅನ್ಸುತ್ತೆ. ನನಗೂ ಈ ರೀತಿ ರಾಜಕೀಯ ಸಾಕಾಗಿದೆ. ಲಾಸ್ಟ್ ಎಲೆಕ್ಷನ್, ನಾನು ಹುಷರಾಗಿರಬೇಕು, ಇಲ್ಲಂದ್ರೆ ಕಷ್ಟ ಕಣ್ರೋ ಎಂದು ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಬಳಿಕ ಹೇಳಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಕಾಂಗ್ರೆಸ್ ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ರು ಸಾಕು: ಕೆ.ಎಸ್ ಈಶ್ವರಪ್ಪ

    ಕಾಂಗ್ರೆಸ್ ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ರು ಸಾಕು: ಕೆ.ಎಸ್ ಈಶ್ವರಪ್ಪ

    ಬಾಗಲಕೋಟೆ: ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಕುಟು ಕುಟು ಅಂತಿದೆ. ಯಾವಾಗ ಇದು ಸಾಯುತ್ತೋ ಗೊತ್ತಿಲ್ಲ. ನಿರ್ನಾಮ ಮಾಡಲು ಸಿದ್ದರಾಮಯ್ಯನಂತವರು ಒಬ್ಬರು ಸಾಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೋರ್ಟ್‍ಗೆ ಗೌರವ ಕೊಡೋದನ್ನು ಮೊದಲು ಕಲಿತುಕೊಳ್ಳಲಿ. ಸಾಧು ಸಂತರ ಬಗ್ಗೆ ನೀವು ಮಾಡಿರೋ ಹೇಳಿಕೆ, ಅಕ್ಷ್ಯಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ ಹಾಗೆ, ಸಿದ್ದರಾಮಯ್ಯ ಇವರದ್ದೂ ನೂರು ತಪ್ಪಾಯ್ತು. ಇನ್ನು ಇವರದ್ದು ಯಾವುದೇ ಕಾರಣಕ್ಕೂ ಇಡೀ ದೇಶದಲ್ಲಿ ಅಧಿಕಾರ ಮಾಡಲು ಅಧಿಕಾರವೇ ಇಲ್ಲ. ಸಿದ್ದರಾಮಯ್ಯ ಅವರು, ರಾಜಕೀಯ ನಿವೃತ್ತಿ ತಗೊಳ್ಳಿ, ಇಲ್ಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಕಿತ್ತು ಬಿಸಾಕ್ಬೇಕು ಎಂದು ಒತ್ತಾಯಿಸಿದರು.

    SIDDARAMAIAH

    ವೀರಶೈವ ಲಿಂಗಾಯತ ಒಡೆದಾಯ್ತು, ಈಗ ಸ್ವಾಮೀಜಿಗಳಲ್ಲಿ ಹಿರಿಯ ಸ್ವಾಮೀಜಿಗಳು, ಕಿರಿಯ ಸ್ವಾಮೀಜಿಗಳು ಎಂದು ಒಡೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ಹಿರಿಯ ಸ್ವಾಮಿಜಿಗಳು ಅಂದ್ರೆ ಏನ್ ಲೆಕ್ಕ ಅವರದ್ದು, ಮಾನದಂಡ ಏನು. ದಪ್ಪ ಇದ್ದಾರೋ ಎತ್ತರ ಇದ್ದಾರೋ, ಹಣದಲ್ಲಿ ಜಾಸ್ತಿ ಇದ್ದಾರೋ. ಯಾಕಂದ್ರೆ ಸಿದ್ದರಾಮಯ್ಯ ಮೆದುಳೊಂದು ತೆಳ್ಳಗಿದೆ, ಅದನ್ನ ಬಿಟ್ರೆ ಅವರು ಹಿರಿಯರು ಅನ್ನೋ ಪ್ರಶ್ನೆ ಉದ್ಭವವಾಗಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ: ಶ್ರೀರಾಮುಲು

    ಯಾರು ಸರ್ವವನ್ನೂ ತ್ಯಾಗ ಮಾಡಿ ಬಂದಿರ್ತಾರೋ ಅವರನ್ನು ಸ್ವಾಮೀಜಿಗಳು ಎಂದು ನಮ್ಮ ಸಮಾಜದಲ್ಲಿ ಕರೆಯುತ್ತೇವೆ. ಸಿದ್ದರಾಮಯ್ಯ ಅವರದ್ದು, ಈ ಸಾಧು ಸಂತರನ್ನು ಒಡೆಯೋ ಪ್ರಯತ್ನವಾಗಿದೆ. ಹಿರಿಯ ಸ್ವಾಮೀಜಿಗಳು ವಿರೋಧ ಮಾಡಿಲ್ಲ ಅಂತಾರೆ, ಹಾಗಾದರೆ ಇವರ ಹೇಳಿಕೆಯನ್ನ ಸ್ವಾಗತ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

    ಇಡೀ ದೇಶ ಹಾಗೂ ರಾಜ್ಯದಲ್ಲಿ ಯಾರಾದರೂ ಒಬ್ಬ ಸ್ವಾಮೀಜಿ ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರಾ? ಅವರ ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತಿಲ್ಲ. ಅವರು ಹೇಳಿಕೆ ಕೊಟ್ಟಿದ್ದಾರೆ, ಅವರೇ ಉತ್ತರ ಕೊಟ್ಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ವಿಧಿಯಿಲ್ಲದೇ ಸಿದ್ದರಾಮಯ್ಯರ ಮಗ ಯತೀಂದ್ರ ಮಾತ್ರ ಅವರ ಜೊತೆಗಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ನ ಒಬ್ಬ ನಾಯಕರು ಸಿದ್ದರಾಮಯ್ಯ ಪರ ಬಾಯಿಬಿಟ್ಟಿಲ್ಲ. ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಹಿರಿಯ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಂತಾ ಒಡೆಯೋ ಪ್ರಯತ್ನ ಮಾಡಬೇಡಿ ಎಂದು ಈಶ್ಚರಪ್ಪ ಆಗ್ರಹಿಸಿದರು. ಇದನ್ನೂ ಓದಿ: ತಲೆ ತುಂಬಾ ಕೂದಲಿದ್ದಿದ್ದರಿಂದ ಬೋಳಿಸಿಕೊಳ್ಳುವೆ ಎಂದಿದ್ದೆ, ಈಗ ಕೂದಲಿಲ್ಲ: ಹೆಚ್‍ಡಿಕೆ

    ಹಿಂದೂ ಸಮಾಜ ಒಟ್ಟಾಗಿದೆ, ಲಿಂಗಾಯತರು, ವೀರಶೈವ ಎಂದು ಒಡೆದು ಒಂದು ಸಾರಿ ಅನುಭವಿಸಿದ್ದೀರಿ. ಕಾಂಗ್ರೆಸ್ ಸರ್ಕಾರವನ್ನೂ ಕಳೆಕೊಂಡ್ರಿ, ಚಾಮುಂಡೇಶ್ವರಿಯಲ್ಲಿ ಸೋತು ಆಯ್ತು ಇನ್ನೂ ನಿಮಗೆ ಬುದ್ಧಿ ಬಂದಿಲ್ಲ. ನೇರವಾಗಿ ನೀವು ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಹೋಗಿ, ಸ್ಪರ್ಧಿಸಬೇಕು. ಮುಸಲ್ಮಾನರ ವೋಟು ಬೇಕು, ಅದ್ಕೋಸ್ಕರ ಅವರನ್ನು ತೃಪ್ತಿಪಡಿಸಲು ಈ ರೀತಿ ಹೇಳಿಕೆ ಕೊಡ್ತಿದ್ದೇನೆ. ನಾನು ಚಾಮರಾಜನಗರದಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿಕೊಂಡುಬಿಡಿ. ಅ0ದು ಬಿಟ್ಟು ಹಿಂದೂ ಸಮಾಜದ ಬಗ್ಗೆ ಬಾಯಿಗೆ ಬಂದಂತೆ ಯಾಕೆ ಮಾತಾಡೋ ಪ್ರಯತ್ನ ನೆಡಸ್ತೀರಿ ಎಂದು ಪ್ರಶ್ನಿಸಿದರು.

    ಕೋರ್ಟ್ ತೀರ್ಮಾನ ಕೊಟ್ಟಿದೆ, ಕೆಲ ಮುಸ್ಲಿಮ್ ಸಂಘಟನೆಗಳು ತೀರ್ಪು ವಿರೋಧಿಸಿ ಬಂದ್ ಕರೆಕೊಟ್ಟವು. ಇದಕ್ಕೆ ಸಿದ್ದರಾಮಯ್ಯ ಅವರ ಅಸಮಾಧಾನ ತೋಡಿಕೊಳ್ಳಲು ಬಂದ್ ಕರೆಕೊಟ್ಟಿದ್ದಾರೆ, ಅದಕ್ಕೆ ನಾವು ನಾವು ಬೆಂಬಲ ಕೊಟ್ಟಿದ್ದೀವಿ ಅಂದರು. ಕೋರ್ಟ್ ತೀರ್ಪನ್ನು ವಿರೋಧ ಮಾಡೋ ವ್ಯಕ್ತಿಗಳ ಜೊತೆಗೆ ನೀವು ಇದ್ದರೇ ಹೇಗೆ. ನಿಮಗೆ ಏನು ಅಧಿಕಾರ ಇದೆ. ಸಿದ್ದರಾಮಯ್ಯ ಅವರು ಕೋರ್ಟ್ ಬಗ್ಗೆ ಮಾತಾಡೋಕೆ, ಸಂವಿಧಾನದ ಬಗ್ಗೆ ಮಾತಡೋಕೆ ಅಂಬೇಡ್ಕರ್ ಬಿಟ್ಟರೇ, ನಾನೇ ಅನ್ನೋ ರೂಪದಲ್ಲಿ ಪ್ರತಿಬಿಂಬ ಮಾಡ್ಕೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಮೂಲ ಕಾಂಗ್ರೆಸ್‍ನವರು ಈ ರೀತಿ ಮಾತಾಡಲ್ಲ, ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಬಿ.ಸಿ ನಾಗೇಶ್

    ಮೂಲ ಕಾಂಗ್ರೆಸ್‍ನವರು ಈ ರೀತಿ ಮಾತಾಡಲ್ಲ, ಸಿದ್ದರಾಮಯ್ಯ ಕನ್ವರ್ಟ್ ಕಾಂಗ್ರೆಸ್: ಬಿ.ಸಿ ನಾಗೇಶ್

    ತುಮಕೂರು: ಮೂಲ ಕಾಂಗ್ರೆಸ್ಸಿಗರು ಯಾರೂ ಸ್ವಾಮೀಜಿಗಳ ಶಿರವಸ್ತ್ರದ ವಿರುದ್ಧದ ಹೇಳಿಕೆ ನೀಡಲ್ಲ. ಸಿದ್ದರಾಮಯ್ಯ ಅವರು ಕನ್ವರ್ಟ್ ಕಾಂಗ್ರೆಸ್‍ನವರು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ವರ್ಟ್ ಆದವರು ಯಾವತ್ತೂ ಕಠಿಣವಾಗಿ ಪ್ರಾಕ್ಟಿಸ್ ಮಾಡುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಹೋದಾಗಿಂದ ಈ ರೀತಿಯ ವಿವಾದದ ಪ್ರಾಕ್ಟಿಸ್ ಮಾಡ್ತಾ ಇದ್ದಾರೆ. ಮೂಲ ಕಾಂಗ್ರೆಸ್ಸಿಗರು ಈ ರೀತಿ ಮಾತನಾಡುತ್ತಿಲ್ಲ. ಹೊಸದಾಗಿ ಕನ್ವರ್ಟ್ ಆದವರು ತುಂಬಾ ಸಲ ಚರ್ಚ್‍ಗೆ ಹೋಗುತ್ತಾರೆ. ಹಾಗೆ ಸಿದ್ದರಾಮಯ್ಯ ಕಠಿಣ ಪ್ರಾಕ್ಟಿಸ್ ಮಾಡೋಕೆ ಹೋಗಿ ವಿವಾದ ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಹಿಜಬ್ ವಿಚಾರದಲ್ಲಿ ಸ್ವಾಮಿಗಳನ್ನು ಎಳೆದು ತಂದಿರೋದು ದುಃಖ ತಂದಿದೆ. ಸರ್ವಸ್ವವನ್ನೂ ತ್ಯಾಗ ಮಾಡಿ, ಈ ದೇಶದ ಸಂಸ್ಕೃತಿ ರಕ್ಷಣೆ ಮಾಡೋರು ಸ್ವಾಮೀಜಿಗಳು. ಸಮಾಜದ ಒಳಿತಿಗೋಸ್ಕರ ತಮ್ಮ ಜೀವನ ಸವೆದವರನ್ನ ಹಿಜಬ್ ವಿವಾವದಲ್ಲಿ ಎಳೆದು ತಂದಿರೋದು ತುಂಬಾ ದುಃಖ ಆಗುತ್ತದೆ ಬೇಸರ ವ್ಯಕ್ತಪಡಿಸಿದರು.

    ಹಿಜಬ್ ವಿಚಾರವಾಗಿ ಮಾತನಾಡಿ, ಮುಲ್ಲಾಗಳು ಸಿದ್ದರಾಮಯ್ಯರ ಬಳಿ ಬಂದಿದರಂತೆ. ಆಗ ಸಿದ್ದರಾಮಯ್ಯ ಅವರು ಸುಪ್ರಿಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿವರೆಗೂ ಸುಮ್ಮನೀರಿ ಎಂದು ಅವರಿಗೆ ತಿಳಿ ಹೇಳಬಹುದಿತ್ತು. ಆದರೆ ಕಾಂಗ್ರೆಸ್ ಉದ್ದಕ್ಕೂ ಸಮಾಜ ಒಡೆಯುವ ಕೆಲಸ ಮಾಡಿಕೊಂಡು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾಶ್ಮೀರದಲ್ಲಿ 370 ಆಕ್ಟ್ ತಂದರು. ಕಾಂಗ್ರೆಸ್‍ನ ಅಧಿವೇಶನದಲ್ಲಿ ವಂದೇ ಮಾತರಂ ಹಾಡು ಹಾಡೋದನ್ನು ನಿಲ್ಲಿಸಿದರು. ಶಿಕ್ಷಣದ ಪಠ್ಯ ಪುಸ್ತಕದಲ್ಲಿ ಭಾರತದ ನಿಜವಾದ ಇತಿಹಾಸ ಮುಚ್ಚಿಟ್ಟಿದೆ. ಇದೆಲ್ಲವೂ ಕೂಡ ಮುಸಲ್ಮಾನರ ತುಷ್ಟೀಕರಣಕ್ಕಾಗಿ ಮಾಡಿಕೊಂಡು ಬಂದಿದ್ದಾರೆ. ವಿಧಾನಸಭೆಯಲ್ಲಿ ನಾನು ಮನವಿ ಮಾಡಿಕೊಂಡಿದ್ದೆ. ನಾವೆಲ್ಲ ಆ ಮಕ್ಕಳಿಗೆ ತುಂಬಾ ಸಲ ಬುದ್ಧೀ ಮಾತು ಹೇಳಿದ್ವಿ ಸಿದ್ದರಾಮಯ್ಯನವರೇ. ನಮ್ಮ ಮಾತು ಕೇಳಿಲ್ಲ, ನಿಮ್ಮ ಮಾತು ಕೇಳಬಹುದು. ಆ 6 ಹುಡುಗಿಯರಿಗೆ ಮನದಟ್ಟು ಮಾಡಿ. ದೇಶದ ಪ್ರಜೆಗಳು ಕೋರ್ಟ್‍ನ ತೀರ್ಪಿನ ವಿರುದ್ಧ ಹೋಗುವುದು ಒಳ್ಳೆಯದಲ್ಲ ಎಂದು ಹುಡುಗಿಯರಿಗೆ ಸಿದ್ದರಾಮಯ್ಯ ಅವರು ತಿಳಿಹೇಳಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೋಗಿಮಟ್ಟಿ ಗಿರಿಧಾಮಕ್ಕೆ ಕಿಡಿಗೇಡಿಗಳಿಂದ ಬೆಂಕಿ – ಅಪಾರ ಸಸ್ಯಕಾಶಿ ಸುಟ್ಟು ಭಸ್ಮ

    ಕೋರ್ಟ್ ತೀರ್ಪಿನ ವಿರುದ್ಧ ಹೋಗಬಾರದು ಎಂದು ಸಿದ್ದರಾಮಯ್ಯ ಅವರು ಬೇಕಾದಷ್ಟು ಬಾರಿ ಹೇಳಿದ್ದಾರೆ. ಅಂಥವರೇ ಯಾಕೆ ಹೀಗೆ ಆಡ್ತಾರೋ ಗೊತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯ ಅವರು ಸ್ವಂತ ಬುದ್ಧಿಯಿಂದ ಈ ರೀತಿ ಮಾತಾಡ್ತಾ ಇಲ್ಲ. ಕಾಂಗ್ರೆಸ್‍ನ ಒಳಗಿರುವವರ ಒತ್ತಡ ಅವರ ಮೇಲಿದೆ. ಸದನದಲ್ಲಿ ಅವರು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವಾಗ ಹಿಜಬ್ ಬಗ್ಗೆ ಮಾತನಾಡಿಲ್ಲ. ಬಳಿಕ ಜಮೀರ್ ಅಹಮದ್ ಮತ್ತು ಖಾದರ್ ಬಂದು ಸಿದ್ದರಾಮಯ್ಯ ಜೊತೆ ಏನೋ ಮಾತನಾಡಿದರು. ಆದಾದ ಬಳಿಕ ಸಿದ್ದರಾಮಯ್ಯ ಹಿಜಬ್ ಬಗ್ಗೆ ಮಾತನಾಡಿದರು ಎಂದರು. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

  • ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

    ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

    ಬೆಂಗಳೂರು: ಹಿಜಬ್ ಬಗ್ಗೆ ನಿನ್ನೆ ನಾನು ಪ್ರಸ್ತಾಪವನ್ನೇ ಮಾಡಿಲ್ಲ. ಹೀಗಿದ್ದಾಗ ಹಿಜಬ್‍ಗೂ ಮತ್ತು ಸ್ವಾಮೀಜಿಗಳ ಬಟ್ಟೆಗೂ ಹೋಲಿಕೆ ಮಾಡಲಾಗಿದೆ ಎಂಬಂಶ ಎಲ್ಲಿಂದ ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಮೇಲೆ ನನಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಅವರಿಗೆ ಅಗೌರವ ತೋರುವಂತೆ ಈ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಹೆಣ್ಣು ಮಕ್ಕಳು ಧರಿಸುವ ದುಪಟ್ಟ ಬಗ್ಗೆ ಮಾತನಾಡಿದ್ದೆ, ಹಿಜಬ್‍ಗೂ ದುಪಟ್ಟಗೂ ಭಾರಿ ವ್ಯತ್ಯಾಸವಿದೆ ಎಂದರು.

    ನಾನು ಸದನದಲ್ಲಿ ಮಾತನಾಡುವಾಗ ತರಗತಿ ಒಳಗೆ ಹಿಜಬ್ ಧರಿಸದಂತೆ ನ್ಯಾಯಾಲಯದ ಆದೇಶ ಇದೆ. ಹಾಗಾಗಿ ಸರ್ಕಾರ ಶಾಲಾ ಸಮವಸ್ತ್ರದ ಬಣ್ಣದ ದುಪಟ್ಟ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಸಚಿವರಾದ ಅಶ್ವತ್ಥ ನಾರಾಯಣ ಮತ್ತು ನಾಗೇಶ್ ಅವರಿಗೆ ಸಲಹೆ ನೀಡಿದ್ದೆ. ಇದನ್ನು ಸ್ವೀಕರಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಕಾರಣಕ್ಕೆ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕೆಲವು ಸಮುದಾಯಗಳ ಮೇಲೆ ಬಿಜೆಪಿಗೆ ಅಲರ್ಜಿ ಇದೆ: ಪ್ರಿಯಾಂಕ್ ಖರ್ಗೆ

    ನಾವು ಸಮವಸ್ತ್ರಕ್ಕೆ ವಿರುದ್ಧವಾಗಿಲ್ಲ, ಸಮವಸ್ತ್ರವನ್ನು ಧರಿಸಲಿ, ಅದರ ಜೊತೆಗೆ ಸಮವಸ್ತ್ರದ ಬಣ್ಣದ ದುಪಟ್ಟವನ್ನು ಧರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದೆ. ಮಕ್ಕಳಿಗೆ ಶಿಕ್ಷಣ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ, ಒಂದು ವೇಳೆ ಪರೀಕ್ಷೆಗೆ ಹಾಜರಾಗದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೂ ಸರ್ಕಾರವೇ ಜವಾಬ್ದಾರಿಯಾಗುತ್ತದೆ. ಸಲಹೆ ನೀಡುವುದು ವಿರೋಧ ಪಕ್ಷವಾದ ನಮ್ಮ ಕರ್ತವ್ಯ. ಅದನ್ನು ಸ್ವೀಕರಿಸದಿದ್ದರೆ ನಾವೇನು ಮಾಡೋದು ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ಡಿಕೆಶಿ

  • ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ

    ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ ಸ್ಪಷ್ಟನೆ

    ಬೆಂಗಳೂರು: ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಸಾಮಾನ್ಯವಾಗಿ ಎಲ್ಲರೂ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ. ಈ ಕುರಿತು ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳು ಮೌನವಾಗಿದ್ದಾರೆ, ಅವರಿಗೆ ಕೃತಜ್ಞತಾಪೂರ್ವಕ ನಮನಗಳು ಎಂದು ಮಾಜಿ ಸಿಎಂ ಹೇಳಿದ್ದಾರೆ.

    ಸರಣಿ ಟ್ವೀಟ್‍ನಲ್ಲೇನಿದೆ..?
    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ.

    ಸರ್ವ ಜಾತಿಗಳ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ, ದೀರ್ಘಕಾಲದಿಂದ ನನಗೆ ಅವರ ಜೊತೆ ಹಾರ್ದಿಕ ಸಂಬಂಧ ಇದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಇದನ್ನೂ ಓದಿ: ನಮ್ಮ-ನಿಮ್ಮೆಲ್ಲರ ರಕ್ತ ಒಂದೇ ಬಣ್ಣದ್ದು, ಮೂರು ದಿನಗಳ ಬಾಳಲ್ಲಿ ಏಕೆ ಕಿತ್ತಾಟ?: ಹ್ಯಾರೀಸ್

    ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳು ಕೂಡಾ ಸಾಥ್ ನೀಡಿರುವುದು ವಿಷಾದನೀಯ ಬೆಳವಣಿಗೆ. ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ಮಾಜಿ ಸಿಎಂ ಬರೆದುಕೊಂಡಿದ್ದಾರೆ.

    ಸಿದ್ದರಾಮಯ್ಯ ಹೇಳಿದ್ದೇನು..?
    ಮೈಸೂರು ಜಿಲ್ಲೆಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮೂರು ದಿನಗಳಕಾಲ ನಡೆಯುತ್ತಿರುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾಮಹೋತ್ಸವಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

    ಸ್ವಾಮೀಜಿಗಳು ಕೂಡ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ ಜನ ಬುದ್ದಿವಂತರು, ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ಹೇಳಿದ್ದರು.

  • ಹತ್ಯೆಯಾಗಿರುವ ಹರ್ಷ ಕುಟುಂಬಸ್ಥರಿಗೆ 10ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸಾಂತ್ವನ

    ಹತ್ಯೆಯಾಗಿರುವ ಹರ್ಷ ಕುಟುಂಬಸ್ಥರಿಗೆ 10ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸಾಂತ್ವನ

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಮನೆಗೆ 10ಕ್ಕೂ ಹೆಚ್ಚು ಮಂದಿ ಮಠಾಧೀಶರು ಇಂದು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ಮುರುಘಾಮಠದ ಡಾ. ಶಿವಮೂರ್ತಿ ಮುರುಘ ಶರಣ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರು ಹರ್ಷ ಮನೆಗೆ ಭೇಟಿ ಕೊಟ್ಟಿದ್ದಾರೆ. ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಡಾ.ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಡಾ.ಬಸವ ಮಾಚಿದೇವ ಸ್ವಾಮೀಜಿ, ಅಂಬಿಗರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ ಬಸವ ಮರುಳಸಿದ್ಧ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮೀಜಿಗಳು ಶಿವಮೊಗ್ಗ ನಗರದ ಸೀಗೇಹಟ್ಟಿಯಲ್ಲಿರುವ ಹರ್ಷ ನಿವಾಸಕ್ಕೆ ಭೇಟಿ ನೀಡಿದ್ದಾರೆ.

    ಹರ್ಷ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಶಿವಮೂರ್ತಿ ಮುರುಘಾ ಶರಣ ಶ್ರೀಗಳು, ಸಂತರ ನಡೆ ಸಾಂತ್ವಾನದ ಕಡೆ, ಹಾಗಾಗಿ ಎಲ್ಲಾ ಬಂದಿದ್ದೇವೆ. ಹರ್ಷ ತುಂಬಾ ಉತ್ಸಾಯಿ ಯುವಕನಾಗಿದ್ದ. ಸಂಘರ್ಷ ನಡೆಯಬೇಕು, ಆದರೆ ಹಿಂಸಾತ್ಮಕ ಸಂಘರ್ಷ ನಡೆಯಬಾರದು. ಹಿಂಸಾತ್ಮಕ ಸಂಘರ್ಷಕ್ಕೆ ಅವರನ್ನ ಕಳೆದುಕೊಂಡಿದ್ದೇವೆ. ಹರ್ಷ ಆಂತರಂಗ, ಬಹಿರಂಗದಲ್ಲಿ ರಾಷ್ಟ್ರ ಪ್ರೇಮ ಹೊಂದಿದ್ದ. ಅವರ ಹೆತ್ತವರು, ಸಹೋದರಿಯರಿಗೆ ಧೈರ್ಯ ತುಂಬಿ ಆಶೀರ್ವಾದ ಮಾಡಿದ್ದೇವೆ ಎಂದರು.  ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

    ಆರ್ಥಿಕ ಆಶೀರ್ವಾದವನ್ನೂ ಮಾಡಿದ್ದೇವೆ. ಸಮಕಾಲಿನ ಸಂತರ ನಡೆ ಶಾಂತಿ, ಸಾಮಾಜಿಕ ಸಂತ್ವಾನದ ಕಡೆ, ಹಾಗಾಗಿ 12ಕ್ಕೂ ಹೆಚ್ಚು ಶ್ರೀಗಳು ಬಂದಿದ್ದೇವೆ. ಇದು ನಮ್ಮ ಆದ್ಯ ಕರ್ತವ್ಯ ಕೂಡ. ಸಾರ್ವಜನಿಕರಲ್ಲಿ ಶಾಂತಿ-ಸಾಮಾರಸ್ಯ ಬಹಳ ಮುಖ್ಯ. ಎಲ್ಲಾ ಜಾತಿ-ಧರ್ಮದಲ್ಲೂ ಆಂತರಿಕ-ಸಾಮಾಜಿಕ ಶಾಂತಿ ನೆಲೆಸಲಿ ಎಂದು ಸ್ವಾಮೀಜಿ ತಿಳಿಸಿದರು. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

  • ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

    ಅ.1ರ ಒಳಗೆ ಮೀಸಲಾತಿ ಘೋಷಣೆ ಮಾಡಿ, ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭ: ಜಯಮೃಂತ್ಯುಜಯ ಸ್ವಾಮೀಜಿ

    – ಮೀಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ

    ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಮೀಸಲಾತಿ ಜಾರಿಗೆ 6 ತಿಂಗಳ ಕಾಲಾವಕಾಶ ಕೇಳಿತ್ತು. ಸರ್ಕಾರ ಕೇಳಿದ್ದ ಕಾಲಾವಕಾಶ ಮುಗಿಯುತ್ತಿದ್ದು, ಅ.1 ರೊಳಗೆ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಸತ್ಯಾಗ್ರಹ ಆರಂಭಿಸುವುದು ಅನಿವಾರ್ಯ ಆಗಲಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

    ಶಿವಮೊಗ್ಗದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಯವರು, ಪಂಚಮಸಾಲಿ ಸಮುದಾಯದ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಹಳೆ ಮೈಸೂರು ಭಾಗದಿಂದ ಅಭಿಯಾನ ಮಾಡುವ ಮೂಲಕ ಸಂಘಟನೆ ಮಾಡಲಾಗುತ್ತಿದೆ. ಆಗಸ್ಟ್ 26 ರಿಂದ ಅ.1 ರವರೆಗೆ ರಾಜ್ಯದ ಹಲವೆಡೆಗಳಲ್ಲಿ ಈ ಅಭಿಯಾನ ನಡೆಯಲಿದೆ. ಸರ್ಕಾರವನ್ನು ಎಚ್ಚರಗೊಳಿಸುವುದು ಮತ್ತು ಸಮುದಾಯ ಜಾಗೃತಿಗೊಳಿಸುವುದು ಈ ಅಭಿಯಾನದ ಉದ್ದೇಶ ಎಂದರು.ಇದನ್ನೂ ಓದಿ: ಮೀಸಲಾತಿ ಕೊಡುವುದನ್ನು ವಿಳಂಬ ಮಾಡಿದ್ರೆ ತಕ್ಕ ಪಾಠ: ಯತ್ನಾಳ್

    ಮೀಸಲಾತಿ ಸಿಗುವ ನಂಬಿಕೆ, ಭರವಸೆ:
    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರು 6 ತಿಂಗಳುಗಳ ಕಾಲ ಕಾಲಾವಕಾಶ ಕೇಳಿದ್ದರು. ಆ ಕಾಲಾವಕಾಶ ಸಹ ಮುಗಿಯುವುದರ ಜೊತೆಗೆ ಮುಖ್ಯಮಂತ್ರಿ ಅವರು ಸಹ ಬದಲಾಗಿದ್ದಾರೆ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಹೋರಾಟದ ಬಗ್ಗೆ ತಿಳಿದಿದೆ. ಪಾದಯಾತ್ರೆ ಆರಂಭದ ದಿನದಿಂದ ಇಲ್ಲಿಯವರೆಗೆ ನಮಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ. ನಿಮ್ಮ ಸಮುದಾಯದ ಜೊತೆ ನಾವಿದ್ದೇವೆ ನಮ್ಮ ಸರ್ಕಾರದ ಮೇಲೆ ನಂಬಿಕೆಯಿಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ನಮಗೆ ಮೀಸಲಾತಿ ದೊರೆಯುತ್ತದೆ ಎಂಬ ನಂಬಿಕೆ, ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮಯುದ್ಧ- ಎಂ.ಬಿ.ಪಾಟೀಲ್ ಧರ್ಮ ದಾಳಕ್ಕೆ ಕಾಂಗ್ರೆಸ್ ಮೌನ

    ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ:
    ಪಂಚಮಸಾಲಿ ಸಮುದಾಯದ ಮತ್ತೊಂದು ಪೀಠ ಸ್ಥಾಪನೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಾನು ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ಆದ್ದರಿಂದ ಈ ಬಗ್ಗೆ ಸಭೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಾನು ಪಂಚಮಸಾಲಿ ಪೀಠದ ಸ್ವಾಮೀಜಿಯಾಗಿ ಈ ಸಮಾಜವನ್ನು ತುಂಬಾ ಪ್ರಾಮಾಣಿಕವಾಗಿ ಕಟ್ಟುವಂತಹ ಪ್ರಯತ್ನ ಮಾಡುತ್ತಿದ್ದೇನೆ. ಈಡಿ ಜಗತ್ತಿಗೆ ನಮ್ಮ ಶಕ್ತಿ ಏನು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಈ ಸಮುದಾಯದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಎಲ್ಲಾ ಕಡೆ ಆಗುತ್ತಿದೆ. ಆದರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಮೀಸಲಾತಿ ಹೋರಾಟವನ್ನು ಯಾರು ಎಷ್ಟೇ ಹೊಡೆಯುವಂತಹ ಪ್ರಯತ್ನ ಮಾಡಿದರೂ, ವಿರೋಧಿಗಳು ಸಹ ನಮ್ಮವರೇ ಎಂದು ಭಾವಿಸಿ ಒಟ್ಟಾಗಿ ಕರೆದುಕೊಂಡು ಹೋಗುತ್ತೇನೆ. ಮೀಸಲಾತಿ ಸಿಗುವವರೆಗು ಯಾವ ಕಾರಣಕ್ಕು ವಿಚಲಿತನಾಗದೇ, ಮೀಸಲಾತಿ ಪಡೆದೇ ತೀರುವುದಾಗಿ ಸ್ವಾಮೀಜಿ ತಿಳಿಸಿದರು. ಇದನ್ನೂ ಓದಿ: ಪಂಚಮಸಾಲಿ ಸಮಾಜದ ಸ್ವಾಮೀಜಿಗಳ ನಡುವೆ ಒಡಕು!