Tag: swami sivananda

  • 125 ವಯಸ್ಸಿನ ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದರ ಆರೋಗ್ಯದ ಗುಟ್ಟೇನು ಗೊತ್ತಾ?

    125 ವಯಸ್ಸಿನ ಪದ್ಮಶ್ರೀ ಪುರಸ್ಕೃತ ಸ್ವಾಮಿ ಶಿವಾನಂದರ ಆರೋಗ್ಯದ ಗುಟ್ಟೇನು ಗೊತ್ತಾ?

    ನವದೆಹಲಿ: ಯೋಗ ಕ್ಷೇತ್ರದ ಸಾಧನೆಗಾಗಿ ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 125 ವಯಸ್ಸಿನಲ್ಲಿಯೂ ಸ್ಥಿರ ಆರೋಗ್ಯ, ಸದೃಢ ದೇಹವನ್ನು ಹೊಂದಿರುವ ಇವರು ತುಂಬಾ ವಿಭಿನ್ನ ಮತ್ತು ಸರಳ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ.

    125 ವರ್ಷ ವಯಸ್ಸಿನ ಯೋಗ ದಂತಕಥೆ ಆಗಿರುವ ಸ್ವಾಮಿ ಶಿವಾನಂದ ಅವರು ನಿನ್ನೆ ರಾಷ್ಟ್ರಪತಿ ಭವನದಲ್ಲಿ ಅನೇಕ ಮಹಾನ್ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿ ಇನ್ನೂ ಅನೇಕ ಗಣ್ಯರು ಭಾಗವಹಿಸಿದ್ದರು.

    ಈ ಸಮಾರಂಭದಲ್ಲಿ ತುಂಬ ಗಮನಸೆಳೆದವರು ವಾರಾಣಸಿಯ ಯೋಗ ಗುರು ಸ್ವಾಮಿ ಶಿವಾನಂದ  ಅವರು ನಿನ್ನೆ ಪ್ರಶಸ್ತಿ ಸ್ವೀಕಾರ ಮಾಡುವ ವೇಳೆ ಇವರು ನಡೆದುಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಗೌರವ ಸ್ವೀಕರಿಸುವ ಮೊದಲು ಪ್ರಧಾನಿ, ರಾಷ್ಟ್ರಪತಿಗಳ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಯೋಗ ಗುರುವಿನ ಗೌರವಾರ್ಥವಾಗಿ, ಪ್ರಧಾನಿ ಮೋದಿ ತಕ್ಷಣವೇ ನಮಸ್ಕರಿಸಿ ನೆಲವನ್ನು ಮುಟ್ಟಿದರು. ಗುರು ಸ್ವಾಮಿ ಶಿವಾನಂದ ಅವರು ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿ ತುಂಬಾ ಸರಳವಾಗಿ ಕಾಣಿಸಿಕೊಂಡಿದ್ದರು.

    ಹುಟ್ಟು: ಶಿವಾನಂದ ಬಾಬಾ ಅವರು 1896ರ ಆಗಸ್ಟ್ 8ರಂದು ಅವಿಭಜಿತ ಭಾರತದ ಸೈಲ್ಹೆಟ್‍ನಲ್ಲಿ ಜನಿಸಿದರು. 6 ನೇ ವಯಸ್ಸಿನಲ್ಲಿಯೇ ತಾಯಿ ಮತ್ತು ತಂದೆಯನ್ನು ಕಳೆದುಕೊಂಡವರು. ನಂತರ ಪಶ್ಚಿಮ ಬಂಗಾಳದ ನಬದ್ವೀಪ್‍ನಲ್ಲಿರುವ ಗುರೂಜಿಯ ಆಶ್ರಮದಲ್ಲಿ ತಂಗಿದ್ದರು. ಗುರು ಓಂಕಾರಾನಂದ ಗೋಸ್ವಾಮಿಗಳು ಅವರನ್ನು ನೋಡಿಕೊಂಡರು ಮತ್ತು ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ಮುಂಜಾನೆಯ ಯೋಗವನ್ನು ಒಳಗೊಂಡಿರುವ ಅವರ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಂಡರು. ಗುರು ಓಂಕಾರಾನಂದ ಅವರ ಶಿಷ್ಯರಾದರು. 1925ರ ಹೊತ್ತಿಗೆ ಗುರುವಿನ ಆಣತಿ ಮೇರೆಗೆ ಪ್ರಪಂಚ ಪರ್ಯಟನೆ ಮಾಡಲು ತೆರಳಿದ್ದರು. ಸುಮಾರು 34 ವರ್ಷಗಳ ಕಾಲ ಇವರು ದೇಶ-ವಿದೇಶಗಳನ್ನು ಸುತ್ತಿದ್ದಾರೆ. ನಂತರ ಯೋಗದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ.

    ಜೀವನ: ಸದ್ಯ ಅವರು ವಾರಾಣಸಿಯ ದುರ್ಗಾಕುಂಡ್‍ನಲ್ಲಿ ಮನೆಯೊಂದರ ಮೂರನೇ ಮಹಡಿಯಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಎರಡು ಬಾರಿ ಮೆಟ್ಟಿಲು ಹತ್ತಿ, ಇಳಿಯುತ್ತಾರೆ. ಅವರು ಯಾರದ್ದೂ ಸಹಾಯವಿಲ್ಲದೆ ಮೆಟ್ಟಿಲು ಹತ್ತುತ್ತಾರೆ ಎಂದು ಅವರ ಶಿಷ್ಯಂದಿರು ತಿಳಿಸಿದ್ದಾರೆ. ಶಿವಾನಂದ ಬಾಬಾರ ತಂದೆ-ತಾಯಿ ಸಾಯಲು ಕಾರಣ ಹಸಿವು. ಇವರೂ ಕೂಡ ಬಾಲ್ಯವನ್ನೆಲ್ಲ ಬಹುತೇಕ ಅರ್ಧಹೊಟ್ಟೆಯಲ್ಲೇ ಕಳೆದಿದ್ದಾರೆ. ಸ್ವಾಮಿ ಶಿವಾನಂದರು ತಮ್ಮ ಜೀವನವನ್ನು ಮಾನವ ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

    ಆಹಾರ ಪದ್ಧತಿ: ಅವರ ಶಿಸ್ತಿನ ಯೋಗದ ಜೊತೆಗೆ, ಅವರ ಆಹಾರ ಪದ್ಧತಿಗಳು ನಾವೆಲ್ಲರೂ ಗಮನಿಸಬೇಕಾದ ಸಂಗತಿಯಾಗಿದೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಅನುಸರಿಸುವುದು ಸುಲಭವಲ್ಲ. ಆದರೆ ಯೋಗ ಗುರುಗಳಿಗೆ ಇದು ರೋಗ ಮುಕ್ತ ಮತ್ತು ಉದ್ವೇಗ-ಮುಕ್ತ ಜೀವನವನ್ನು ನೀಡಿದೆ.

    ಸ್ವಾಮಿ ಶಿವಾನಂದರು ಯಾವಾಗಲೂ ಎಣ್ಣೆಯಿಲ್ಲದ ಮತ್ತು ಮಸಾಲೆಗಳಿಲ್ಲದ ಅತ್ಯಂತ ಸರಳವಾದ ಆಹಾರವನ್ನು ಸೇವಿಸುತ್ತಾರೆ. ಅನ್ನ ಮತ್ತು ಬೇಯಿಸಿದ ದಾಲ್  ತಿನ್ನಲು ಇಷ್ಟಪಡುತ್ತಾರೆ. ಅವರು ಹಾಲು ಅಥವಾ ಹಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ ಅವರು ಅಲಂಕಾರಿಕ ಆಹಾರಗಳು ಎಂದು ಭಾವಿಸುತ್ತಾರೆ.

    ನಾನು ಸರಳ ಮತ್ತು ಶಿಸ್ತಿನ ಜೀವನವನ್ನು ನಡೆಸುತ್ತೇನೆ. ನಾನು ತುಂಬಾ ಸರಳವಾಗಿ ತಿನ್ನುತ್ತೇನೆ. ಎಣ್ಣೆ ಅಥವಾ ಮಸಾಲೆಗಳಿಲ್ಲದ ಬೇಯಿಸಿದ ಆಹಾರ, ಅಕ್ಕಿ ಮತ್ತು ಒಂದೆರಡು ಹಸಿರು ಮೆಣಸಿನಕಾಯಿಗಳೊಂದಿಗೆ ಬೇಯಿಸಿದ ದಾಲ್ ಎಂದು ಈ ಹಿಂದೆ ಅವರ ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.

    125 ನೇ ವಯಸ್ಸಿನಲ್ಲಿಯೂ ಸಹ, ಅವರು ಇನ್ನೂ ಫಿಟ್ ಆಗಿದ್ದಾರೆ. ಯಾವುದೇ ವೈದ್ಯಕೀಯ ತೊಂದರೆಗಳಿಲ್ಲ. ಸೂರ್ಯ ಹುಟ್ಟುವ 3 ಗಂಟೆಗೂ ಮುನ್ನ ಎಚ್ಚರಗೊಳ್ಳುತ್ತಾರೆ. ಅವರ ಆರೋಗ್ಯಕರ ಮತ್ತು ದೀರ್ಘಾವಧಿಯ ಜೀವನವು ಹೆಚ್ಚಾಗಿ ಅಂತರರಾಷ್ಟ್ರೀಯ ಮಾಧ್ಯಮಗಳ ಗಮನವನ್ನು ಸೆಳೆಯುತ್ತದೆ.

  • ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ

    ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಪ್ರಧಾನಿ ಕಾಲಿಗೆ ನಮಸ್ಕರಿಸಿದ 125 ವಯಸ್ಸಿನ ಯೋಗಿ

    ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಪದ್ಮ ಪ್ರಶಸ್ತಿ ಪುರಸ್ಕಾರ ಸಮಾರಂಭ ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಯಿತು. ವಾರಣಾಸಿಯ 125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದ ಅವರು ಪ್ರಶಸ್ತಿ ಸ್ವೀಕರಿಸುವ ಮುನ್ನ ಪ್ರಧಾನಿ ಮೋದಿಗೆ ಪಾದಾಭಿವಂದನೆ ಮಾಡಿದರು. ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಶಿರಬಾಗಿ ನಮಸ್ಕರಿಸಿದರು.

    ರಾಷ್ಟ್ರಪತಿಗಳಿಗೂ ಸ್ವಾಮಿ ಶಿವಾನಂದರು ನಮಸ್ಕರಿಸಿದರು. ರಾಷ್ಟ್ರಪತಿಗಳು ಕೂಡಲೇ ಅವರನ್ನು ಎಬ್ಬಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್ ಮಾಲೀಕರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂಗ್ರೆಸ್ ಹಿರಿಯ ನಾಯಕ, ಪದ್ಮಭೂಷಣ ಗುಲಾಂ ನಬಿ ಆಜಾದ್ ಸೇರಿ ಒಟ್ಟು 63 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದನ್ನೂ ಓದಿ: ರಾಜಕೀಯ ಪಕ್ಷಗಳು ಜನರ ನಡುವೆ ಒಡಕು ಮೂಡಿಸುತ್ತಿವೆ: ಗುಲಾಂ ನಾಬಿ ಅಜಾದ್

    ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಸೇರಿದಂತೆ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಶೂಟರ್ ಅವನಿ ಲೇಖರಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಹಾಕಿ ಕ್ರೀಡಾಪಟು ವಂದನಾ ಕಟಾರಿಯಾ ಪ್ರಶಸ್ತಿ ಪಡೆದರು. ಇದನ್ನೂ ಓದಿ: ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ