Tag: Swami Agnivesh

  • ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

    ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ನಿಧನ

    ನವದೆಹಲಿ: ಹರಿಯಾಣ ಮಾಜಿ ಶಾಸಕ, ಸಾಮಾಜಿಕ ಕಾರ್ಯಕರ್ತ ಸ್ವಾಮಿ ಆಗ್ನಿವೇಶ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    80 ವರ್ಷದ ಸ್ವಾಮಿ ಅಗ್ನಿವೇಶ್ ಅವರು ಮಂಗಳವಾರ ನವದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಸ್‍ಬಿಎಸ್) ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಸಾವನ್ನಪ್ಪಿದ್ದಾರೆ.

    ಸೆ.21, 1939 ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂ ನಲ್ಲಿ ಜನಿಸಿದ್ದ ಅಗ್ನಿವೇಶ್ ಅವರು, ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು 1970 ರಲ್ಲಿ ಸ್ಥಾಪಿಸಿದ್ದರು. ಈ ಪಕ್ಷ ಆರ್ಯ ಸಮಾಜದ ತತ್ವಗಳನ್ನು ಆಧರಿಸಿದೆ. ಸ್ತ್ರೀ ಭ್ರೂಣ ಹತ್ಯೆ ಮತ್ತು ಮಹಿಳೆಯರ ಶೋಷಣೆಯ ವಿರುದ್ಧದ ಅಭಿಯಾನ, ಜೀತದಾಳುಗಳ ಮುಕ್ತಿಗಾಗಿ ಸೇರಿದಂತೆ ಸಾಮಾಜಿಕ ಕ್ರೀಯಾಶೀಲತೆಯ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

    ತಮ್ಮ ನಾಯಕರ ನಿಧನಕ್ಕೆ ಸಂತಾಪ ಸೂಚಿಸಿರುವ ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷಣ್, ಸ್ವಾಮಿ ಅಗ್ನಿವೇಶ್ ಅವರ ನಿಧನ ದೊಡ್ಡ ದುರಂತವಾಗಿದ್ದು, ಅವರು ಮಾನವೀಯತೆ ಮತ್ತು ಸಹಿಷ್ಣುತೆಯ ನಿಜವಾದ ಯೋಧರಾಗಿದ್ದರು. ಅಲ್ಲದೇ ಸಾರ್ವಜನಿಕರ ಒಳಿತಿಗಾಗಿ ಭಾರೀ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಅವರ ಮೇಲೆ ನಡೆದ ಹಲ್ಲೆಯಿಂದಾಗಿ ಅವರ ಯಕೃತ್ ಹಾನಿಗೊಳಗಾಗಿತ್ತು ಎಂದು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ವೇಳೆಯೂ ಅವರ ಮೇಲೆ ಹಲ್ಲೆ ನಡೆದಿತ್ತು.

  • ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ಬಿಜೆಪಿ ಯುವ ಕಾರ್ಯಕರ್ತರಿಂದ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

    ರಾಂಚಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹೊಡೆದು ಹಲ್ಲೆ ಮಾಡಿರುವ ಘಟನೆ ಜಾರ್ಖಂಡ್‍ನ ಪಾಕುರ್ ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಪೊಲೀಸರಿಗೆ ಆದೇಶಿಸಿದ್ದಾರೆ.

    ಸ್ವಾಮಿ ಅಗ್ನಿವೇಶ್ ಅವರು ಪಾಕುರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಲು ಬಂದು ಅಲ್ಲಿನ ಹೋಟೆಲ್‍ವೊಂದರಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸಮಾರಂಭಕ್ಕೆ ತೆರಳಲು ಹೋಟೆಲ್‍ನಿಂದ ಹೊರಬರುತ್ತಿದ್ದಂತೆ ಸುತ್ತುವರಿದು ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ಬುಡಕಟ್ಟು ಜನರನ್ನು ಮತಾಂತರಗೊಳಿಸಲು ಕ್ರೈಸ್ತ ಮಿಷನರಿಗಳ ಪರವಾಗಿ ಪ್ರವಚನ ನೀಡಲು ಆಗಮಿಸಿದ್ದಾರೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಸ್ವಾಮಿ ಅಗ್ನಿವೇಶ್‍ಅವರು, ತನ್ನ ಆಗಮನದ ಬಗ್ಗೆ ಪೊಲೀಸ್ ಆಡಳಿತ ವರ್ಗಕ್ಕೆ ತಿಳಿಸಿದ್ದರು. ಆದರೆ ಹೋಟೆಲ್‍ನಿಂದ ಹೊರ ಬರುವ ಸಂದರ್ಭದಲ್ಲಿ ಯಾರು ಇರಲಿಲ್ಲ ಆ ವೇಳೆ ದಾಳಿ ನಡೆಸಲಾಗಿದೆ.

    ದಾಳಿಕೋರರು ಮೊದಲಿಗೆ ಘೋಷಣೆಯನ್ನು ಕೂಗಿದ್ದಾರೆ. ಕಪ್ಪು ಧ್ವಜವನ್ನು ತೋರಿಸಿದ್ದಾರೆ. ಅನಂತರ ಅಗ್ನಿವೇಶ್ ಅವರನ್ನು ಹೊಡೆದು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಯೂ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದರ ಆಧಾರದ ಮೇರೆಗೆ 20 ದಾಳಿಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಸ್ಥಳವಿಲ್ಲ. ಆದರೆ ಸ್ವಾಮಿ ಅಗ್ನಿವೇಶ್ ತನ್ನ ಭದ್ರತೆಗಾಗಿ ಮೊದಲೇ ಸಂಘಟಿಸಬೇಕಾಗಿತ್ತು ಎಂದು ಜಾರ್ಖಂಡ್ ಬಿಜೆಪಿ ವಕ್ತಾರ ಪಿ ಶಾಹ್ದೇವ್ ಹೇಳಿದ್ದಾರೆ.