Tag: swab test

  • ಮಾಣಿ ವಲಯ ಸ್ಕೌಟ್, ಗೈಡ್ಸ್‌ನಿಂದ ಗಂಟಲು ದ್ರವ ಪರೀಕ್ಷಾ ಉಪಕರಣ ಕೊಡುಗೆ

    ಮಾಣಿ ವಲಯ ಸ್ಕೌಟ್, ಗೈಡ್ಸ್‌ನಿಂದ ಗಂಟಲು ದ್ರವ ಪರೀಕ್ಷಾ ಉಪಕರಣ ಕೊಡುಗೆ

    – ಸರ್ಕಾರಿ ಆಸ್ಪತ್ರೆಗೆ ಉಪಕರಣ ಹಸ್ತಾಂತರ

    ಮಂಗಳೂರು: ಬಂಟ್ವಾಳದ ಮಾಣಿ ವಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಗು, ಗಂಟಲ ದ್ರವ ಸಂಗ್ರಹಿಸುವ ಉಪಕರಣವನ್ನು ದಾನವಾಗಿ ನೀಡಲಾಯಿತು.

    ಜಿಲ್ಲಾ ಪಂಚಾಯತ್ ಸದಸ್ಯರಾದ ಮಂಜುಳಾ ಮಾಧವ ಮಾವೆಯವರು ಉಪಕರಣವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್-19 ಜಗತ್ತನ್ನೇ ಬಾಧಿಸಿದ್ದು, ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವ ಉದ್ದೇಶದಿಂದ ಮಾಣಿ ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಯ ಸಾಧನವನ್ನು ಕೊಡುಗೆಯಾಗಿ ನೀಡಿರುವುದು ಅಭಿನಂದನೀಯ ಎಂದರು.

    ಮಾಣಿ ಸ್ಥಳೀಯ ಸಂಸ್ಥೆ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ ಮಾತನಾಡಿ, ದಾನಿಗಳು ಹಾಗೂ ಸಮಾನ ಮನಸ್ಕರ ಸಹಕಾರದೊಂದಿಗೆ ಮಾಣಿ ಸ್ಥಳೀಯ ಸಂಸ್ಥೆಯ ವತಿಯಿಂದ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿ ಎಂಬಂತೆ ನಮ್ಮ ಸ್ಕೌಟ್ಸ್ ಸಂಸ್ಥೆ ವತಿಯಿಂದ ಮೂಗು, ಗಂಟಲು ದ್ರವ ಪರೀಕ್ಷಾ ಉಪಕರಣವನ್ನು ಕೊಡುಗೆಯಾಗಿ ನೀಡಿದ್ದೇವೆ, ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಒದಗಿಸಿದ್ದೇವೆ ಎಂದರು.

    ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಕೊರೊನಾ ನಿಗ್ರಹಕ್ಕೆ ಆಸ್ಪತ್ರೆ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದೇವೆ. ಸ್ಕೌಟ್ಸ್ ಸಂಸ್ಥೆ ವತಿಯಿಂದ ನಮ್ಮ ಆಸ್ಪತ್ರೆಗೆ ಕೊರೊನಾ ಟೆಸ್ಟ್ ಗೆ ಬಳಸುವ ಸಾಧನ ನೀಡಿರುವುದು ಹೆಚ್ಚು ಉಪಕಾರಿಯಾಗಿದೆ. ಇದಕ್ಕಾಗಿ ಹೆಚ್ಚು ಮುತುವರ್ಜಿ ವಹಿಸಿದ ಇಬ್ರಾಹಿಂ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾಣಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಇಬ್ರಾಹಿಂ ಕೆ. ಮಾಣಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    ರ‍್ಯಾಪಿಡ್ ಟೆಸ್ಟ್ ನೆಗೆಟಿವ್, ಸ್ವ್ಯಾಬ್ ಟೆಸ್ಟ್ ಪಾಸಿಟಿವ್ – 60ಕ್ಕೂ ಹೆಚ್ಚು ಮಂದಿ ಹೋಂ ಕ್ವಾರಂಟೈನ್

    – ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿ ಎಡವಟ್ಟು ಮಾಡಿದ ಆರೋಗ್ಯ ಇಲಾಖೆ

    ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ವರದಿ ಬರುವ ಮುನ್ನವೆ ಮೃತಪಟ್ಟ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿ ಆರೋಗ್ಯ ಇಲಾಖೆ ಎಡವಟ್ಟು ಮಾಡಿದೆ.

    ಮೃತ ವ್ಯಕ್ತಿಯ ಶವ ಪಡೆದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿ ಮೇಲೆ ಮೃತವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 60ಕ್ಕೂ ಹೆಚ್ಚು ಮಂದಿಯಲ್ಲಿ ಆತಂಕ ಶುರುವಾಗಿದೆ. ಯಳಂದೂರು ಬಳೇಪೇಟೆ ವರ್ಷದ ವೃದ್ಧರೊಬ್ಬರಿಗೆ ಗ್ಯಾಂಗ್ರಿನ್ ಆಗಿತ್ತು. ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಲು ಬಂದಾಗ ಅವರಿಗೆ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ನಂತರ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.

    ಆದರೆ ಅವರಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದಿದ್ದರಿಂದ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುಂಚಯೇ ಅವರು ಮೃತಪಟ್ಟಿದ್ದರು. ಈ ವೇಳೆ ಎಡವಟ್ಟು ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ವರದಿ ಬರುವವರೆಗೂ ಕಾಯದೆ ಮೃತ ವ್ಯಕ್ತಿಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಶವವನ್ನು ಯಳಂದೂರಿಗೆ ತೆಗೆದುಕೊಂಡು ಹೋದ ಸಂಬಂಧಿಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದೇ ವೇಳೆ ವರದಿ ಬಂದಿದ್ದು ಮೃತವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.

    ಈ ವಿಷಯ ತಿಳಿಯುವುದರೊಳಗೆ ಅಂತ್ಯಕ್ರಿಯೆ ಪೂರ್ಣ ಗೊಂಡಿತ್ತು. ಕೊರೊನಾ ಪಾಸಿಟಿವ್ ಸುದ್ದಿ ಕೇಳಿ ಮೃತನ ಕುಟುಂಬಸ್ಥರಲ್ಲಿ ಹಾಗೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರಲ್ಲಿ ಆತಂಕ ಶುರುವಾಗಿದೆ. ಇದೀಗ ಆರೋಗ್ಯ ಇಲಾಖೆ ಯಳಂದೂರಿನ ಬಳೇಪೇಟೆ ಪ್ರದೇಶಕ್ಕೆ ಸೋಂಕುನಿವಾರಕ ದ್ರಾವಣ ಸಿಂಪಡಿಸಿ ಸೀಲ್‍ಡೌನ್ ಮಾಡಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳ ಕೊರೊನಾ ಟೆಸ್ಟ್ ಗೆ ಮುಂದಾಗಿದೆ.

  • ಕೊಡಗಿನಲ್ಲಿ ಹೆಚ್ಚುತ್ತಿರೋ ಪಾಸಿಟಿವ್ ಪ್ರಕರಣ- ಸ್ವಾಬ್ ಟೆಸ್ಟ್‌ಗೆ ಮುಗಿಬಿದ್ದ ಜನ

    ಕೊಡಗಿನಲ್ಲಿ ಹೆಚ್ಚುತ್ತಿರೋ ಪಾಸಿಟಿವ್ ಪ್ರಕರಣ- ಸ್ವಾಬ್ ಟೆಸ್ಟ್‌ಗೆ ಮುಗಿಬಿದ್ದ ಜನ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲು ಪರೀಕ್ಷೆಗೆ ಜನತೆ ಮುಗಿ ಬಿಳುತ್ತಿದ್ದಾರೆ. ಈ ಘಟನೆ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರದ ಸಮುದಾಯದ ಅರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿ ಆಗುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಂಟಲ ದ್ರವ ಪರೀಕ್ಷೆಗೆ ತೆರಳಿದ್ದಾಗ ಜನ ಜಂಗುಳಿ ಏರ್ಪಟ್ಟಿದೆ. ತಪಾಸಣೆಗೆ ಹೋಗಿದ್ದ ಸಂದರ್ಭದಲ್ಲಿ ಹೊರ ರೋಗಿ ಸಮಸ್ಯೆ ಹಾಗೂ ಸಿಬ್ಬಂದಿ ವಿಳಂಬ ಧೋರಣೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಮುದಾಯ ಅರೋಗ್ಯ ಕೇಂದ್ರದಲ್ಲಿ ಕೆಲಕಾಲ ನೂಕು ನುಗ್ಗಲು ಉಂಟಾದ್ದರಿಂದ ಸಾರ್ವಜನಿಕರು ಮತ್ತು ಟೆಕ್ನಿಷಿಯನ್‍ಗಳ ನಡುವೆ ವಾಗ್ವಾದ ನಡೆದಿವೆ. ಅಲ್ಲದೆ ಗಂಟಲ ದ್ರವ ಪರೀಕ್ಷಿಸಲು ನಿರಾಕರಿಸಿದ ತಂತ್ರಜ್ಞರ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಶಾಲನಗರದ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಏಕಾಏಕಿ 50 ಜನರು ಆರೋಗ್ಯ ಕೇಂದ್ರಕ್ಕೆ ತೆರಳಿದ್ದರಿಂದ ಹೀಗೆ ಆಗಿದೆ ಎನ್ನಲಾಗಿದೆ.