Tag: suvarna tribhuja

  • ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ: ಸಚಿವೆ ಜಯಮಾಲಾ ಘೋಷಣೆ

    ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ: ಸಚಿವೆ ಜಯಮಾಲಾ ಘೋಷಣೆ

    ಉಡುಪಿ: ಉಡುಪಿಯ ಸುವರ್ಣ ತ್ರಿಭುಜ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಏಳು ಜನ ಮೀನುಗಾರರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸಮ್ಮಿಶ್ರ ಸರ್ಕಾರ ತೀರ್ಮಾನಿಸಿದೆ.

    ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉಡುಪಿಯಿಂದ ಸುವರ್ಣ ತ್ರಿಭುಜ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮೀನುಗಾರರು ಕಣ್ಮರೆಯಾಗಿದ್ದಾರೆ. ಮೀನುಗಾರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಧನ ನೀಡುವ ಆದೇಶವಾಗಿದೆ. ಮೀನುಗಾರ ಸಂಕಷ್ಟ ಪರಿಹಾರ ನಿಧಿ, ಸಿಎಂ ಪರಿಹಾರ ನಿಧಿಯಿಂದ ಹಣ ನೀಡಲಾಗುವುದು. ಸಮುದ್ರದಲ್ಲಿ ಕಣ್ಮರೆಯಾದವರು ಶೀಘ್ರ ಪತ್ತೆಯಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.

    ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ದೊಡ್ಡ ಮೊತ್ತದ ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ಭರವಸೆ ನೀಡಿದರು.

    ಉಡುಪಿ ಭಾಗಶಃ ಬರಪೀಡಿತ ಜಿಲ್ಲೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 126 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯಿದೆ. ಎಲ್ಲಾ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಬಜೆ ಡ್ಯಾಂ ನೀರು ಸಂಪೂರ್ಣ ಇಂಗಿ ಹೋಗಿದೆ. ಡ್ಯಾಂನ ಹೂಳೆತ್ತುವ, ಬಂಡೆ ಒಡೆಯುವ ಪ್ರಕ್ರಿಯೆ ಮಾಡುತ್ತೇವೆ ಎಂದು ಹೇಳಿದರು.

    ಬರ ನಿರ್ವಹಣೆಯ ಹಣಕಾಸಿಗೆ ತೊಂದರೆ ಇಲ್ಲ. 33 ಕೋಟಿ ರೂ. ಖಾತೆಯಲ್ಲಿದೆ. ಸಮುದ್ರಕ್ಕೆ ಹರಿಯುವ ನೀರನ್ನು ರಿಚಾರ್ಜ್ ಮಾಡಬೇಕಾಗಿದೆ. ಮಳೆನೀರು ಕೊಯ್ಲು ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ ಚರ್ಚೆ ಮಾಡಲಾಗುತ್ತದೆ. ಜಿಲ್ಲೆಯ 400 ಮದಗಗಳ ಹೂಳೆತ್ತುತ್ತೇವೆ. ನಗರ ಪ್ರದೇಶದ ಜನರಿಗೆ ಕುಡಿಯುವ ತೊಂದರೆ ಆಗುವುದಿಲ್ಲ. ನದಿಗೆ ಹಾಕಿರುವ ಎಲ್ಲಾ ಪಂಪ್ ಸೆಟ್ ಕಡಿತ ಮಾಡುತ್ತೇವೆ ಎಂದರು.

  • ಸುವರ್ಣ ತ್ರಿಭುಜಕ್ಕೆ ಡಿಕ್ಕಿ ಹೊಡೆದಿತ್ತ ಐಎನ್‍ಎಸ್ ಕೊಚ್ಚಿ?

    ಸುವರ್ಣ ತ್ರಿಭುಜಕ್ಕೆ ಡಿಕ್ಕಿ ಹೊಡೆದಿತ್ತ ಐಎನ್‍ಎಸ್ ಕೊಚ್ಚಿ?

    – ದುರಂತಕ್ಕೆ ಕಾರಣವಾಗಿದ್ದು ನೌಕಾದಳದ ನಿರ್ಲಕ್ಷವೇ!

    ಕಾರವಾರ: ಸುವರ್ಣ ತ್ರಿಭುಜ ಬೋಟ್‍ಗೆ ನೌಕಾದಳದ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಕ್ಕಿ ಹೊಡೆದಿತ್ತು ಎನ್ನುವ ಶಂಕೆ ವ್ಯಕ್ತವಾಗಿದೆ.

    163 ಮೀಟರ್ ಉದ್ದವಿರುವ ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆಯು ಡಿಸೆಂಬರ್ 15ರ ಮಧ್ಯರಾತ್ರಿ ಸುವರ್ಣ ತ್ರಿಭುಜ ಬೋಟ್ ಇದ್ದ ಜಾಗದಲ್ಲಿ ವೇಗವಾಗಿ ಹೋಗಿತ್ತು. ಈ ವೇಳೆ ಬೋಟ್ ಇರುವುದನ್ನು ಗಮನಿಸದ ಐಎನ್‍ಎಸ್ ನೌಕೆಯ ನಾವಿಕ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನೌಕಾಸೇನೆಯಿಂದ ಏಳು ಮೀನುಗಾರರ ಕೊಲೆ – ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ

    ಐಎನ್‍ಎಸ್ ಕೊಚ್ಚಿನ ಮುಂಭಾಗದ ತಳಭಾಗವು ಡ್ಯಾಮೇಜ್ ಆಗಿತ್ತು. ಅಷ್ಟೇ ಅಲ್ಲದೆ ನೌಕೆಗೆ ಅಳವಡಿಸಿದ್ದ ಕ್ಯಾಮೆರಾ ಸಹ ಸಂಪೂರ್ಣ ಜಖಂಗೊಂಡಿತ್ತು. ನಂತರ ಇದನ್ನು ಮುಂಬೈನ ಶಿಪ್‍ಯಾರ್ಡನಲ್ಲಿ ಸತತ ಮೂರು ತಿಂಗಳ ಕಾಲ ದುರಸ್ತಿಗೊಳಿಸಿ ಬಳಿಕ ಸಮುದ್ರಕ್ಕೆ ಇಳಿಸಲಾಗಿತ್ತು. ಹೀಗಾಗಿ ಸುವರ್ಣ ತ್ರಿಭುಜ ಮುಳುಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ

    ಈ ಸಂಬಂಧ ತನಿಖೆ ಕೈಗೊಳ್ಳಬೇಕು. ಐಎನ್‍ಎಸ್ ಕೊಚ್ಚಿ ಯುದ್ಧ ನೌಕೆ ಎಲ್ಲಿ? ಯಾವಾಗ ಡ್ಯಾಮೆಜ್ ಆಗಿತ್ತು ಅಂತ ನೌಕಾದಳದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ತನಿಖೆ ಕೈಗೊಂಡಲ್ಲಿ ಸುವರ್ಣ ತ್ರಿಭುಜದ ರಹಸ್ಯ ಬಯಲಾಗಲಿದೆ ಎಂದು ಮೀನುಗಾರರು ಆಗ್ರಹಿಸಿದ್ದಾರೆ.

  • ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ

    ಸುವರ್ಣ ತ್ರಿಭುಜ ಅವಶೇಷ ಪತ್ತೆ- ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ

    ಕಾರವಾರ: ಮುಂಬೈ-ಗೋವಾ ನಡುವಿನ ಮಾಲ್ವಾನ್ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆಳ ಸಮುದ್ರದಲ್ಲಿ ಪತ್ತೆಯಾದ ಬೋಟಿನ ಅವಶೇಷಗಳು ತಮ್ಮವರದ್ದೆಂದು ದೃಢೀಕರಿಸಿರುವುದಾಗಿ ಉಡುಪಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

    ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಶಾಸಕರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇದೀಗ ಬೋಟ್ ಅವಶೇಷ ಸಿಕ್ಕಿರುವ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೋಟ್ ಹಡಗಿಗೆ ಡಿಕ್ಕಿ ಹೊಡೆಯುವ ಮೂಲಕ ದುರಂತಕ್ಕೀಡಾಗಿದೆ ಎಂದು ತಿಳಿಸಿದ್ದಾರೆ.

    ಯಾವುದೋ ದೊಡ್ಡ ಹಡಗು ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ. ಈ ಬಗ್ಗೆ ತನಿಖೆಯಾಗಬೇಕು. ನಾವು ಮೀನುಗಾರರೊಂದಿಗೆ ಹುಡುಕಲು ತೆರಳದಿದ್ದಲ್ಲಿ ಪತ್ತೆಕಾರ್ಯ ನಡೆಯುತ್ತಿರಲಿಲ್ಲ. ಈ ಕುರಿತು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ ಎಂದರು. ಇದನ್ನೂ ಓದಿ: ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

    ಡಿಸೆಂಬರ್ 13 ರಂದು ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ಡಿ.15 ರಂದು ಕಾಣೆಯಾಗಿದೆ. ಸತತ ಐದು ತಿಂಗಳ ನಂತರ ಮೀನುಗಾರರು ಹಾಗೂ ಭಾರತೀಯ ನೌಕಾದಳ ಬೋಟಿನ ಅವಶೇಷಗಳನ್ನು ಮಹಾರಾಷ್ಟ್ರದ ಮಾಲ್ವನ್ ಪ್ರದೇಶದಿಂದ 33 ಕಿಲೋಮೀಟರ್ ವ್ಯಾಪ್ತಿಯ ಆಳ ಸಮುದ್ರದಲ್ಲಿ ಪತ್ತೆ ಮಾಡಲಾಗಿದೆ. ಈ ಪತ್ತೆ ಕಾರ್ಯಕ್ಕೆ ಶಾಸಕ ಹಾಗೂ ಕಾಣೆಯಾದ ಕುಟುಂಬದವರು ಸೇರಿದಂತೆ ಭಾನುವಾರದಂದು ಐಎನ್‍ಎಸ್ ನಿರೀಕ್ಷಕ್ ಹಡಗಿನಲ್ಲಿ 9 ಜನರು ತೆರಳಿದ್ದರು. ಇದೀಗ ಸೋನಾರ್ ಟೆಕ್ನಾಲಜಿ ಮಾಲಕ ಸುವರ್ಣ ತ್ರಿಭುಜ ಹಡಗನ್ನು ಪತ್ತೆ ಮಾಡಿದ್ದಾರೆ.

  • ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

    ದುರಂತಕ್ಕೀಡಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ!

     – ಕಾಣೆಯಾದ ಮೀನುಗಾರರ ಬಗ್ಗೆ ಸುಳಿವೇ ಇಲ್ಲ

    ಉಡುಪಿ/ಕಾರವಾರ: ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಮಹಾರಾಷ್ಟ್ರದ ಅರಬ್ಬೀ ಸಮುದ್ರದ ಮಲ್ವಾನ್ ಪ್ರದೇಶದಲ್ಲಿ ಪತ್ತೆಯಾಗಿದೆ.

    ಡಿಸೆಂಬರ್ 13 ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಕಾಣೆಯಾಗಿತ್ತು. ಮಾಲೀಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್, ಜೋಗಯ್ಯ ಎಂಬವರು ಕಾಣೆಯಾಗಿದ್ದು, ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ 5 ಮಂದಿ ಹಾಗೂ ಉಡುಪಿ ಜಿಲ್ಲೆಯ 2 ಮೀನುಗಾರರು ಸೇರಿದಂತೆ ಒಟ್ಟು ಏಳು ಜನ ಮೀನುಗಾರರು ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಕುಟುಂಬದವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಮೀನುಗಾರರನ್ನು ಹುಡುಕಿ ಕೊಡುವಂತೆ ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದಿದ್ದರು. ಬೋಟಿನ ಪತ್ತೆ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಡಿಐಜಿ ನೇತೃತ್ವದ ತನಿಖಾ ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿದ್ದರೆ, ಕೇಂದ್ರ ಸರ್ಕಾರ ಸಟಲೈಟ್ ತಂತ್ರಜ್ಞಾನ, ನೌಕಾದಳದ ಸಿಬ್ಬಂದಿಯನ್ನು ಹಾಗೂ ಮುಳುಗು ತಜ್ಞರ ಮೂಲಕ ಹುಡುಕಾಟ ನಡೆಸಿತ್ತು. ಆದರೆ ಅರಬ್ಬೀ ಸಮುದ್ರದಲ್ಲಿ ಅವಶೇಷಗಳಾಗಲಿ, ಶವವಾಗಲಿ ಸಿಗದ ಕಾರಣ ಉಗ್ರವಾದಿಗಳು ಅಥವಾ ಕಡಲಗಳ್ಳರು ಅಪಹರಿಸಿದ ಶಂಕೆ ವ್ಯಕ್ತಪಡಿಸಲಾಗಿತ್ತು. ಇದನ್ನೂ ಓದಿ: ಮಲ್ಪೆ : ಆಳ ಸಮುದ್ರಕ್ಕೆ ತೆರಳಿದ್ದ 8 ಮೀನುಗಾರರು ನಾಪತ್ತೆ

    ಕುಟುಂಬದೊಂದಿಗೆ ಶಾಸಕರಿಂದ ಪರಿಶೀಲನೆ:
    ಕಳೆದ ಐದು ತಿಂಗಳಿಂದ ನಾಪತ್ತೆಯಾದ ಮೀನುಗಾರರ ಸುಳಿವು ಸಿಗದೇ ಇರುವುದರಿಂದ ಉಡುಪಿಯ ಶಾಸಕ ಕೆ ರಘುಪತಿ ಭಟ್ ರವರ ನೇತೃತ್ವದಲ್ಲಿ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಮೀನುಗಾರರು ನಾಪತ್ತೆಯಾದ ಬಗ್ಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ನೀಡಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಅವರು ಮಾತುಕತೆ ಸಹ ನಡೆಸಿದ್ದರು. ಇದಾದ ಬಳಿಕ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೇ ವೇಳೆ ಕೇಂದ್ರ ಸರಕಾರ ಮತ್ತಷ್ಟು ಪತ್ತೆ ಕಾರ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡುವ ಜೊತೆ ಖುದ್ದು ಮೀನುಗಾರರನ್ನು ದೆಹಲಿಗೆ ಕರೆಸಿಕೊಂಡು ಹಲವು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಮಲ್ಪೆಯಿಂದ ಹೊರಟು ನಾಪತ್ತೆಯಾಗಿದ್ದ ಬೋಟ್ ಮಹಾರಾಷ್ಟ್ರದಲ್ಲಿ ಪತ್ತೆ?

    ಹುಡುಕಾಟ ಮಾಡಲು ಕುಟುಂಬಸ್ಥರ ಮನವಿಯ ಮೇರೆಗೆ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ಭಾರತೀಯ ಭೂಸೇನೆಯ ಅಧಿಕಾರಿಗಳ ಜೊತೆಗೆ ಮತ್ತು ನಾಪತ್ತೆಯಾದ ಮೀನುಗಾರರ ಕುಟುಂಬದ ಜೊತೆಗೆ ಪರಿಶೀಲನೆಗೆ ತೆರಳಿದ್ದರು.

    ಊಹಾ ಪೋಹಗಳಿಗೆ ಎಡೆ:
    ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಕಾಣೆಯಾದ ಒಂದೂವರೆ ತಿಂಗಳಲ್ಲಿ ಬೋಟಿನ ಮೀನು ತುಂಬುವ ಬಾಕ್ಸ್ ಸಿಕ್ಕಿದ್ದು ಯಾವುದೋ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು. ಇದರ ಅವಶೇಷಗಳು ಅಥವಾ ಮೀನುಗಾರರ ಶವವಾದರೂ ಸಿಗಬೇಕಿತ್ತು, ಅದೂ ಕೂಡ ದೊರೆಯದೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನೌಕಾದಳ ನಿರಂತರ ಐದು ತಿಂಗಳಿಂದ ಹುಡುಕಾಟ ನಡೆಸಿ ಮಹಾರಾಷ್ಟ್ರದ ಮಲ್ವಾನ್ ನ ಕಡಲತೀರದಿಂದ ಅರಬ್ಬೀ ಸಮುದ್ರದ 33 ಕಿಲೋಮೀಟರ್ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದ್ದು ಹೆಚ್ಚಿನ ಹುಡುಕಾಟ ನಡೆಸಿದೆ. ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ- ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಇದೀಗ ಅಧಿಕೃತವಾಗಿ ಅವಶೇಷಗಳು ಸಿಕ್ಕಿರುವ ಕುರಿತು ನೌಕಾದಳದ ಅಧಿಕೃತ ಟ್ಟಿಟ್ಟರ್ ಖಾತೆಯಿಂದ ಟ್ಟೀಟ್ ಮಾಡಿರುವುದು ಸುವರ್ಣ ತ್ರಿಭುಜ ಹಡಗು ದುರಂತಕ್ಕೀಡಾಗಿದೆ ಎನ್ನುವುದನ್ನು ದೃಢಪಡಿಸಿದೆ. ಆದರೆ ಹಡಗು ಡಿಕ್ಕಿ ಸಂಭವಿಸಿ ದುರಂತಕ್ಕಿಡಾಗಿದೆಯೇ ಅಥವಾ ಸಮುದ್ರದ ಅಲೆಗೆ ಕೊಚ್ಚಿಹೋಯ್ತಾ ಎನ್ನುವುದು ನೌಕಾದಳದವರಿಂದ ಅಧಿಕೃತವಾಗಿ ತಿಳಿದುಬರಬೇಕಿದೆ.

  • ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಮೀನುಗಾರರ ನಾಪತ್ತೆ ಪ್ರಕರಣ – ಪ್ರಧಾನಿಗೆ ಪೇಜಾವರ ಶ್ರೀ ಪತ್ರ, ಇತ್ತ 3 ರಾಜ್ಯಕ್ಕೆ 6 ಪೊಲೀಸ್ ಟೀಂ

    ಉಡುಪಿ: ಇಲ್ಲಿನ ಮಲ್ಪೆಯಿಂದ ಹೊರಟ ಬೋಟ್ ಸಮೇತ ಏಳು ಮಂದಿ ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀ ಪತ್ರ ಬರೆದಿದ್ದಾರೆ. ಇತ್ತ 3 ರಾಜ್ಯಕ್ಕೆ 6 ಮಂದಿಯ ಪೊಲೀಸ್ ಟೀಂ ನಿಯೋಜಿಸಲಾಗಿದೆ.

    ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಪೇಜಾವರ ಶ್ರೀಗಳು ಪ್ರಧಾನಿಗೆ ಒತ್ತಾಯಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸುವಂತೆ ಪತ್ರದಲ್ಲಿ ಪೇಜಾವರಶ್ರೀ ಒತ್ತಾಯಿಸಿದ್ದಾರೆ.

    ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ.  ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

    ಪೊಲೀಸ್ ಟೀಂ:
    ಅರಬ್ಬೀ ಸಮುದ್ರದಲ್ಲಿ ಏನಾದರೂ ಅವಘಡ ಸಂಭವಿಸಿ ಮೀನುಗಾರರು ನಾಪತ್ತೆಯಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಕೇರಳಕ್ಕೆ ಎರಡು ತಂಡಗಳನ್ನು ರವಾನಿಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಾಲ್ಕು ಟೀಂ ತೆರಳಿದ್ದು ಕಣ್ಮರೆಯಾದವರ ತನಿಖೆ ಮಾಡುತ್ತಿದೆ.

    ಮಹಾರಾಷ್ಟ್ರದ ಮರಾಠಿ ಪತ್ರಿಕೆಯೊಂದರಲ್ಲಿ ಆಚ್ರಾ ಮತ್ತು ಮೆಲ್ವಾನ್ ನಲ್ಲಿ ಬೋಟಿನ ಟ್ರೇಗಳು ದೊರಕಿವೆ ಎಂದು ವರದಿಯಾಗಿತ್ತು. ಇವು ಸುವರ್ಣ ತ್ರಿಭುಜ ಬೋಟಿಗೆ ಸೇರಿದ ಟ್ರೇಗಳಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿದ್ದು ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ಒತ್ತಡದಲ್ಲಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್

    ಗೋವಾ ಮೀನುಗಾರನದ್ದು ಎನ್ನಲಾದ ವಾಯ್ಸ್ ನೋಟ್ ನ ಜಾಡು ಹಿಡಿದಿರುವ ಪೊಲೀಸರು ಗೋವಾದಲ್ಲೂ ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ದಾಟಿ ಗೋವಾ ಗಡಿ ಕಡೆ ಸುವರ್ಣ ತ್ರಿಭುಜ ಬೋಟ್ ಹೋಗಿದ್ಯಾ? ಪಾಕ್ ಗಡಿಯಲ್ಲಿ ಬೋಟ್ ಅಪಹರಣವಾಯ್ತಾ ಆನ್ನೋ ಸಂಶಯವೂ ಮೀನುಗಾರರಿಂದ ಬಂದಿದ್ದು ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಶುರುಮಾಡಿದೆ.

    ಡಿಸೆಂಬರ್13 ಕ್ಕೆ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಡಿ. 15 ರಿಂದ ಜಿಪಿಎಸ್- ಫೋನ್ ಸಂಪರ್ಕ ಕಡಿತಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv