Tag: Suspense Thriller

  • ಅಶ್ವಿನಿಗೌಡ ಅಭಿನಯದ ‘ತ್ರಿಪುರ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ಅಶ್ವಿನಿಗೌಡ ಅಭಿನಯದ ‘ತ್ರಿಪುರ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್

    ಬೆಂಗಳೂರು: ರಂಗಭೂಮಿ ಚಿತ್ರರಂಗಕ್ಕೆ ಮೂಲಪ್ರೇರಣೆ. ಡಾ. ರಾಜ್‍ಕುಮಾರ್, ನರಸಿಂಹರಾಜು ಅವರಂಥ ದಿಗ್ಗಜರೆಲ್ಲ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು. ಇದೀಗ ಅದೇ ರಂಗಭೂಮಿ, ತಬಲಾ ವಿದ್ವಾಂಸರು, ಸಂಗೀತಗಾರರ ಫ್ಯಾಮಿಲಿಯಿಂದ ಬಂದ ಎಲ್.ಮಂಜುನಾಥ್ ‘ತ್ರಿಪುರ’ ಎಂಬ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಲವ್ ಸ್ಟೋರಿಯನ್ನು ನಿರ್ಮಿಸಿ ತೆರೆಯ ಮೇಲೆ ತರುತ್ತಿದ್ದಾರೆ. ಒಂದು ಹೆಣ್ಣಿನ ಹಿಂದೆ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂದು ಕುತೂಹಲಕರ ಕಥೆಯೊಂದಿಗೆ ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ.

    ವಿಶೇಷವಾಗಿ ಈ ಚಿತ್ರದಲ್ಲಿ ಐದು ನಿಮಿಷಗಳ ಹಿಸ್ಟಾರಿಕಲ್ ಕಥೆ ಕೂಡ ಇದೆ. ಈಗಿನ ಕಾಲದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯೋಮಾನದವರಿಗೆ ಇಷ್ಟವಾಗುವಂತ ಕಥೆ ಈ ಚಿತ್ರದಲ್ಲಿದೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದಿದ್ದು ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದ್ದು, ಚಿತ್ರವನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

    ಶ್ರೀ ಅಂಕುರ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಈ ಹಿಂದೆ ಮುಕ್ತಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕೆ.ಶಂಕರ್ ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಗೌರಿ ವೆಂಕಟೇಶ್ ಛಾಯಾಗ್ರಹಣ, ಡಿ.ಆರ್.ಹೇಮಂತಕುಮಾರ್ ಸಂಗೀತ, ಕೆ.ಶಂಕರ್ ಸಂಭಾಷಣೆ ಮತ್ತು ಸಾಹಿತ್ಯ, ಹರಿಕೃಷ್ಣ ನೃತ್ಯ ನಿರ್ದೇಶನ, ರಾಜಶೇಖರರೆಡ್ಡಿ ಸಂಕಲನವಿದೆ. ಅಶ್ವಿನಿಗೌಡ, ಶ್ರೀಧರ್, ಧರ್ಮ, ಟೆನ್ನಿಸ್ ಕೃಷ್ಣ, ಲಕ್ಷ್ಮಣ್ ರಾವ್, ಕಿಲ್ಲರ್ ವೆಂಕಟೇಶ್, ರಮಾನಂದ್, ಸುಂದರಶ್ರೀ, ಡಿಂಗ್ರಿ ನಾಗರಾಜ್, ಬೇಬಿ ಆದ್ಯ, ಪವಿತ್ರ, ಮಂಜುನಾಥ್ ಮುಂತಾದವರ ತಾರಾಬಳಗವಿದೆ.

  • ಚಿತ್ರಕಥಾ ಸೂತ್ರಧಾರಿಣಿ ಸುಧಾರಾಣಿ!

    ಚಿತ್ರಕಥಾ ಸೂತ್ರಧಾರಿಣಿ ಸುಧಾರಾಣಿ!

    ಸುಧಾರಾಣಿ ಎಂಬ ಹೆಸರು ಕೇಳಿದಾಕ್ಷಣ ಕನ್ನಡ ಸಿನಿಮಾ ಪ್ರೇಮಿಗಳ ಸ್ಮೃತಿಪಟಲದಲ್ಲಿ ವೈವಿಧ್ಯಮಯ ಪಾತ್ರಗಳು ಹಾದು ಹೋಗುತ್ತವೆ. ಇಂಥಾ ಪಾತ್ರಗಳ ಮೂಲಕವೇ ಅಭಿಮಾನ ಮಾತ್ರವಲ್ಲದೇ ಕನ್ನಡಿಗರ ಮನೆಮಗಳಂತೂ ತುಂಬು ಪ್ರೀತಿಯನ್ನು ತನ್ನದಾಗಿಸಿಕೊಂಡಿರುವವರು ಸುಧಾರಾಣಿ. ಓರ್ವ ಕಲಾವಿದೆ ಕಾಲ ಸರಿದಂತೆ ಹೊಂದೋ ರೂಪಾಂತರ, ಆ ಮೂಲಕವೇ ಮತ್ತೆ ಪ್ರೇಕ್ಷಕರನ್ನು ಮುಖಾಮುಖೀಯಾಗೋ ಪುಳಕಗಳನ್ನೂ ತಮ್ಮದಾಗಿಸಿಕೊಂಡಿರೋ ಸುಧಾರಾಣಿ ಇದೀಗ ಚಿತ್ರಕಥಾ ಮೂಲಕ ಮತ್ತೆ ಬಂದಿದ್ದಾರೆ.

    ಚಿತ್ರಕಥಾ ಈಗಾಗಲೇ ಕುತೂಹಲದ ಉತ್ತುಂಗದಲ್ಲಿರೋ ಚಿತ್ರ. ಇದು ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚೊಚ್ಚಲ ಚಿತ್ರ. ಇದರ ಹಿಂದೆ ಪ್ರತಿಭಾವಂತ ಯುವ ಮನಸುಗಳದ್ದೊಂದು ತಂಡವಿದೆ. ಅದರ ಹುಮ್ಮಸ್ಸೇನೆಂಬುದು ಈಗಾಗಲೇ ಪ್ರೇಕ್ಷಕರ ಗಮನಕ್ಕೂ ಬಂದಿದೆ. ಸೈಕಾಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರಕಥಾದಲ್ಲಿ ತಾರಾಗಣವೂ ಪ್ರಧಾನ ಆಕರ್ಷಣೆ. ಅದರಲ್ಲಿಯೂ ಸುಧಾರಾಣಿ ಇಲ್ಲಿ ನಿರ್ವಹಿಸಿರೋ ಪಾತ್ರವಂತೂ ಅಪರೂಪದ್ದು.

    ಯಾರೋ ಅನಾಮಿಕ ಕಲಾವಿದ ಬರೆದೊಂದು ಚಿತ್ರದ ಸುತ್ತಲಿನ ನಿಗೂಢದ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಈ ಚಿತ್ರದಲ್ಲಿದೆ. ಅದರ ಸೂತ್ರಧಾರಿಣಿಯಂಥಾ ಪಾತ್ರ ಸುಧಾ ರಾಣಿಯವರದ್ದು. ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಕಥೆ ಬರೆಯುವಾಗಲೇ ಇದೊಂದು ಪಾತ್ರಕ್ಕೆ ಸುಧಾರಾಣಿಯವರನ್ನು ಗಮನದಲ್ಲಿಟ್ಟುಕೊಂಡಿದ್ದರಂತೆ. ನಂತರ ಸುಧಾರಾಣಿಯವರು ಕೂಡಾ ಈ ಪಾತ್ರವನ್ನು ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ. ಸುಧಾರಾಣಿ ತಮ್ಮ ಪಾತ್ರವನ್ನು ಮಾತ್ರವೇ ಗಮನದಲ್ಲಿಟ್ಟುಕೊಳ್ಳದೇ ಇಡೀ ಚಿತ್ರವನ್ನು ತಮ್ಮದೆಂದೇ ಭಾವಿಸಿ ನಡೆದುಕೊಂಡ ರೀತಿಯ ಬಗ್ಗೆ ಈ ಹೊಸಬರ ತಂಡದಲ್ಲೊಂದು ಖುಷಿಯಿದೆ. ಈ ಚಿತ್ರ 12ನೇ ತಾರೀಕು ಅಂದರೆ ಈ ವಾರವೇ ಬಿಡುಗಡೆಯಾಗುತ್ತಿದೆ.

  • ಮೈಂಡ್ ಗೇಮ್ ಆಧಾರಿತ ‘ಆಪರೇಷನ್ ನಕ್ಷತ್ರ’

    ಮೈಂಡ್ ಗೇಮ್ ಆಧಾರಿತ ‘ಆಪರೇಷನ್ ನಕ್ಷತ್ರ’

    ಬೆಂಗಳೂರು: ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್, ಕಿಶೋರ್ ಕುಮಾರ್ ಮೇಗಳ ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿ, ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರು ಸೇರಿ ಈ 5 ಜನರು ಹುಟ್ಟು ಹಾಕಿರುವ ಸಂಸ್ಥೆಯೇ ಫೈವ್ ಸ್ಟಾರ್ ಫಿಲಮ್ಸ್ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ರೇಣುಕಾಂಬಾ ಥಿಯೇಟರ್ ನಲ್ಲಿ ನೆರವೇರಿತು.

    ನಿರಂಜನ್ ಒಡೆಯರ್, ಲಿಖಿತ್ ಸೂರ್ಯ, ಅದಿಥಿ ಪ್ರಭುದೇವ ಹಾಗೂ ಯಜ್ಞಾಶೆಟ್ಟಿ ಚಿತ್ರದ 4 ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇಗೌಡ (ಕಾಮಿಡಿ ಕಿಲಾಡಿಗಳು), ಪ್ರಶಾಂತ್, ನಟನಾ, ಶ್ರೀನಿವಾಸ್ ಪ್ರಭು, ದೀಪಕ್ ರಾಜ್ ಶೆಟ್ಟಿ, ವಿಕ್ಟರಿ ವಾಸು ಕೂಡ ಈ ಚಿತ್ರದಲ್ಲಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಧುಸೂದನ್ ಕಾನ್ಫಿಡಾದಲ್ಲಿ ಡೈರೆಕ್ಷನ್ ಕೋರ್ಸ್ ಮುಗಿಸಿದ ನಂತರ ಸ್ನೇಹಿತರೆಲ್ಲರ ಸಲಹೆಯ ಮೇರೆಗೆ ಥ್ರಿಲ್ಲರ್ ಕಥೆಯೊಂದನ್ನು ರೆಡಿ ಮಾಡಿದೆ. ಕಲಾವಿದರನ್ನೆಲ್ಲ ಫೈನಲ್ ಮಾಡಿಕೊಂಡು ಬೆಂಗಳೂರು, ಗೋವಾದಲ್ಲಿ 40 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಇದು ಮೈಂಡ್ ಗೇಮ್ ಮೇಲೆ ನಡೆಯುವ ಕಥೆ. 4 ಜನ ಪಾತ್ರಧಾರಿಗಳ ಜೀವನದಲ್ಲಿ ಬಂದು ಹೋಗುವ ಘಟನೆಗಳು ಅವರ ಜೀವನದಲ್ಲಿ ಹೇಗೆ ಟ್ವಿಸ್ಟ್ ಆಂಡ್ ಟರ್ನ್ ಕೊಡುತ್ತವೆ ಎಂದು ಆಪರೇಷನ್ ನಕ್ಷತ್ರ ಚಿತ್ರದ ಮೂಲಕ ಹೇಳಲು ಟ್ರೈ ಮಾಡಿದ್ದೇವೆ. ಈ ಎಲ್ಲಾ ಕ್ಯಾರೆಕ್ಟರ್‍ಗಳನ್ನು ಬಿಟ್ಟು ಮತ್ತೊಂದು ಪ್ರಮುಖ ಪಾತ್ರವಿದೆ. ಅದನ್ನು ತೆರೆಯ ಮೇಲೆ ನೋಡಬೇಕು ಎಂದು ಹೇಳಿದರು. ಜನರಿಗೆ ನಾವು ಮೋಸ ಮಾಡಲು ಪ್ರಯತ್ನಿಸಿದರೆ ಆಗ ನಾವೇ ಹೇಗೆ ಮೋಸ ಹೋಗ್ತೀವಿ ಎನ್ನುವುದೇ ಚಿತ್ರದ ಕಥೆ ಎನ್ನುವುದು ನಿರ್ದೇಶಕರ ಮಾತಾಗಿತ್ತು.

    ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಅರವಿಂದ್ ಮೂರ್ತಿ ಮಾತನಾಡಿ, ಈ ಕಥೆಯಲ್ಲಿರುವ ರೋಚಕ ಟ್ವಿಸ್ಟ್‍ಗಳು ನಮಗೆ ತುಂಬಾ ಇಷ್ಟವಾದವು. ಬಜೆಟ್ ಅಂದುಕೊಂಡದ್ದಕ್ಕಿಂತ ಸ್ವಲ್ಪ ಜಾಸ್ತಿಯಾದರೂ ಚಿತ್ರ ಚೆನ್ನಾಗಿ ಮೂಡಿಬಂದಿರುವುದರಿಂದ ನಮಗೆ ತೃಪ್ತಿಯಾಗಿದೆ ಎಂದು ಹೇಳಿದರು.

    ನಾಯಕ ನಟ ನಿರಂಜನ್ ಒಡೆಯರ್ ಮಾತನಾಡಿ ಪ್ರತಿ ನಿಸ್ವಾರ್ಥ ಮುಖದ ಹಿಂದೆ ಸ್ವಾರ್ಥ ಮನಸ್ಸಿರುತ್ತದೆ. ಅದು ಏನೇನು ಮಾಡಬಹುದು. ಅದರಲ್ಲೂ ಹಣ ಅಂತ ಬಂದಾಗ ಏನು ಮಾಡುತ್ತದೆ ಈ ಚಿತ್ರದಲ್ಲಿ ಹೇಳಲಾಗಿದೆ. ಹಿನ್ನೆಲೆ ಸಂಗೀತವೇ ಈ ಚಿತ್ರದಲ್ಲಿ ಹೀರೋ, ಕಥೆ ಚಿತ್ರದ ಮತ್ತೊಬ್ಬ ನಾಯಕ ಎಂದು ಹೇಳಿದರು. ನಾಯಕಿ ಅದಿತಿ ಪ್ರಭುದೇವ ಮಾತನಾಡಿ ನನಗೆ ಮೊದಲಿನಿಂದಲೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳೆಂದರೆ ತುಂಬಾ ಇಷ್ಟ. ನನ್ನ ಪಾತ್ರದ ಹೆಸರು ತುಂಬಾ ಚೆನ್ನಾಗಿದೆ. ಜೀವನದಲ್ಲಿ ತುಂಬಾ ಎಥಿಕ್ಸ್ ಇಟ್ಟುಕೊಂಡ ಹುಡುಗಿ. ಇದು ನನಗೆ ಅದೃಷ್ಟದ ಸಿನಿಮಾ. ಏಕೆಂದರೆ ಇದರಲ್ಲಿ ಆಕ್ಟ್ ಮಾಡುವಾಗಲೇ ನನಗೆ ತುಂಬಾ ಆಫರ್‍ಗಳು ಬಂದವು ಎಂದು ಹೇಳಿದರು. ಮತ್ತೊಬ್ಬ ನಾಯಕಿ ಯಜ್ಞಶೆಟ್ಟಿ, ಸಂಗೀತ ನಿರ್ದೇಶಕ ವೀರ ಸಮರ್ಥ್, ನಟ ಲಿಖಿತ್ ಸೂರ್ಯ ಕೂಡ ಈ ಚಿತ್ರದ ಕುರಿತಂತೆ ಮಾತನಾಡಿದರು.

  • ‘ಉದ್ಘರ್ಷ’ದಿಂದ ಎದ್ದು ಬಂದರು ದೇಸಾಯಿ

    ‘ಉದ್ಘರ್ಷ’ದಿಂದ ಎದ್ದು ಬಂದರು ದೇಸಾಯಿ

    ಬೆಂಗಳೂರು: ಕನ್ನಡ ಸಿನಿಮಾ ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ ದೇಸಾಯಿ ತಮ್ಮ ಸಿನಿಮಾಗಳ ಮೂಲಕ ತಮ್ಮದೇ ಆದ ಸೊಗಡನ್ನು ಉಳಿಸಿಕೊಂಡುಬಂದವರು. ನಡುವೆ ಒಂದಷ್ಟು ಸಿನಿಮಾಗಳಲ್ಲಿ ಅದು ಘಮ ಕಳೆದುಕೊಂಡಿದ್ದನ್ನು ಸ್ವತಃ ದೇಸಾಯಿಯೇ ಒಪ್ಪಿಕೊಂಡಿದ್ದಾರೆ. ಇವತ್ತು ರಿಲೀಸಾಗಿರುವ ಉದ್ಘರ್ಷ ಸಿನಿಮಾವನ್ನು ನೋಡಿದ ಯಾರಿಗೇ ಆದರೂ ಸುನೀಲ್ ಕುಮಾರ್ ದೇಸಾಯಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ ಅನ್ನಿಸದೇ ಇರಲಾರದು. ಯಾಕೆಂದರೆ, ಈ ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗಿ, ರೋಚಕ ಸಿನಿಮಾಗಳನ್ನು ಇಷ್ಟಪಡುವ ವರ್ಗಕ್ಕೆಂದೇ ದೇಸಾಯಿ `ಉದ್ಘರ್ಷ’ವನ್ನು ಹೆಣೆದುಕೊಟ್ಟಿದ್ದಾರೆ.

    ಕೊಲೆಯೊಂದರ ಸುತ್ತ ನಡೆಯುವ ಕಥೆ, ಅದಕ್ಕೊಂದು ಉಪಕತೆ ಸೇರಿಸಿ ಕ್ಷಣಕ್ಷಣಕ್ಕೂ ಗಾಬರಿ ಹುಟ್ಟಿಸುವ ಸನ್ನಿವೇಶಗಳನ್ನು ಸೃಷ್ಟಿಸಿ ಉದ್ಘರ್ಷವಾಗಿಸಿದ್ದಾರೆ ನಿರ್ದೇಶಕ ದೇಸಾಯಿ. ದಕ್ಷಿಣ ಭಾರತದ ಖ್ಯಾತ ಖಳನಟರೆಲ್ಲಾ ಇಲ್ಲಿ ಒಂದಾಗಿ ನಟಿಸಿದ್ದಾರೆ. ಠಾಕೂರ್ ಅನೂಪ್ ಸಿಂಗ್ ಬರೀ ವಿಲನ್ ಮಾತ್ರವಲ್ಲ, ಹೀರೋ ಆಗಿ ಕೂಡಾ ನೆಲೆ ನಿಲ್ಲಬಹುದು ಅನ್ನೋದು ಇಲ್ಲಿ ರುಜುವಾತಾಗಿದೆ.

    ಇದು ಥ್ರಿಲ್ಲರ್ ಮತ್ತು ಆಕ್ಷನ್ ವರ್ಗಕ್ಕೆ ಸೇರಿದ ಸಿನಿಮಾ ಆಗಿರೋದರಿಂದ ಒಂದಿಷ್ಟು ರಕ್ತದ ಕಲೆ, ಹೊಡೆದಾಟಗಳು ಹೆಚ್ಚಿವೆ. ಆದರೆ ಅವು ಅತಿರಂಜಕವೆನಿಸದೇ ಸಂದರ್ಭಕ್ಕೆ ಸೂಕ್ತವಾಗಿರೋದು ಸಮಾಧಾನದ ವಿಷಯ. ಬಹುತೇಕ ಸಿನಿಮಾ ದಟ್ಟಾರಣ್ಯದಲ್ಲೇ ಸಾಗುತ್ತದೆ. ಒಬ್ಬರ ಬೆನ್ನಟ್ಟಿ ಒಬ್ಬರು ಸಾಗೋ ದಾರಿಯಲ್ಲಿ ಬೆಚ್ಚಿಬೀಳುವಂಥಾ ಘಟನೆಗಳು, ಅದರೊಳಗೊಂದು ಪ್ರೀತಿಯ ಎಳೆ, ದ್ವೇಷ, ಹಣಕ್ಕಾಗಿ ಏನನ್ನು ಬೇಕಾದರೂ ಮಾಡುವ ದುಷ್ಟರ ಜಾಡು ಎಲ್ಲವೂ ತೆರೆದುಕೊಳ್ಳುತ್ತಾ ಸಾಗುತ್ತದೆ.

    ಹಿಂದೆ ಸುನೀಲ್ ಕುಮಾರ್ ದೇಸಾಯಿ ತರ್ಕ, ನಿಷ್ಕರ್ಷದಂಥಾ ಥ್ರಿಲ್ಲರ್ ಎಲಿಮೆಂಟುಗಳಿದ್ದ ಸಿನಿಮಾಗಳನ್ನು ಮಾಡಿದ್ದವರು. ಆಗ ಮೊಬೈಲ್ ಫೋನಿನ ಕಲ್ಪನೆಯೇ ಇರಲಿಲ್ಲ. ಆದರಿದು ಮೊಬೈಲ್ ಯುಗ. ಆ ಮೊಬೈಲೇ ಚಿತ್ರದ ಟರ್ನಿಂಗ್ ಪಾಯಿಂಟ್‍ಗಳಲ್ಲಿ ಒಂದಾಗಿರುವುದು ನಿರ್ದೇಶಕರು ಅಪ್‍ಡೇಟ್ ಆಗಿರೋದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಸಣ್ಣದೊಂದು ಕಥೆ ಮತ್ತು ಗಟ್ಟಿಯಾದ ಚಿತ್ರಕತೆಯನ್ನಿಟ್ಟುಕೊಂಡು ತಯಾರಿಸಿರುವ ದೇಸಾಯಿ ಬ್ರಾಂಡ್‍ನ ಈ ಸಿನಿಮಾ ಎಲ್ಲರಿಗೂ ರುಚಿಸಬಲ್ಲದು.

    ರೇಟಿಂಗ್: 4/5

  • ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಬೆಂಗಳೂರು: ಮರ್ಮ ಎಂಬ ಚಿತ್ರದಿಂದ ಆರಂಭವಾಗಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ಖುಷಿಗಳು ಒಂದೆರಡಲ್ಲ. ಕನ್ನಡ ಚಿತ್ರರಂಗ ಒಂಥರಾ ಏಕತಾನತೆಯಿಂದ ಕೂಡಿದ್ದ ಕಾಲದಲ್ಲಿಯೇ ಹೊಸಾ ಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ರುಚಿ ಹತ್ತಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?

    ತರ್ಕ, ಉತ್ಕರ್ಷದಂಥಾ ಚಿತ್ರಗಳ ಮೂಲಕ ಹೊಸಾ ಟ್ರೆಂಡಿಂಗ್ ಹುಟ್ಟು ಹಾಕಿದ್ದವರು ದೇಸಾಯಿ. ಅವರು ಬಹು ಕಾಲದದ ನಂತರ ಈ ಕಥೆ ಮಾಡಿಕೊಂಡು ಅಖಾಡಕ್ಕಿಳಿದಾಗ ಅಂಥಾದ್ದೇ ರಗಡ್ ಸೌಂಡಿಂಗ್ ಇರೋ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದರಂತೆ. ಕಡೆಗೂ ಅವರೇ ಉದ್ಘರ್ಷ ಅನ್ನೋ ಪದವನ್ನು ಹುಟ್ಟು ಹಾಕಿದ್ದರಂತೆ. ಅದರ ಅರ್ಥ ಅದೇನಿದೆಯೋ… ಆದರೆ ಅದರಲ್ಲೊಂದು ಸೌಂಡಿಂಗ್ ಇದೆ ಎಂಬ ಕಾರಣದಿಂದ ಅವರು ಈ ಟೈಟಲ್ ಅಂತಿಮಗೊಳಿಸಿದ್ದರಂತೆ.

    ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಉದ್ಘರ್ಷದ ಅಸಲೀ ಖದರ್ ಏನೆಂಬುದು ಜಾಹೀರಾಗಿದೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಹುಟ್ಟಿಸಿರೋ ಸಂಚಲನ ಸಣ್ಣ ಮಟ್ಟದ್ದೇನಲ್ಲ. ಉದ್ಘರ್ಷ ಎಂಬ ಅನಿರೀಕ್ಷಿತವಾಗಿ ಹುಟ್ಟು ಪಡೆದ ಟೈಟಲ್ಲೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

    ಪ್ರೇಕ್ಷಕರನ್ನ ಪ್ರತೀ ಕ್ಷಣವೂ ಕುತೂಹಲದ ಕಾವಲಿಯಲ್ಲಿ ಕೂರಿಸುವಂಥಾ ಉದ್ಘರ್ಷ ಈ ವಾರ ತೆರೆ ಕಾಣುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷದ ಅಬ್ಬರ ಈ ವಾರವೇ ಶುರುವಾಗಲಿದೆ!