ಲಕ್ನೋ: ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಲು ಸ್ಕೆಚ್ ಹಾಕಿದ್ದ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘನಿ ಜೊತೆ ನಮಗೆ ಸಂಪರ್ಕ ಇತ್ತು ಎನ್ನುವುದನ್ನು ಇಬ್ಬರು ಉಗ್ರರು ಉತ್ತರ ಪ್ರದೇಶದ ಭಯೋತ್ಪದನಾ ನಿಗ್ರಹ ದಳ (ಎಟಿಎಸ್) ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಪುಲ್ವಾಮಾ ದಾಳಿ ಬಳಿಕ ಪೊಲೀಸರು ಶಂಕೆ ಆಧಾರದ ಹಿನ್ನೆಲೆಯಲ್ಲಿ ಕಾಶ್ಮೀರ ಕುಲ್ಗಾವ್ ಮೂಲದ ಶಹಾನವಾಜ್ ಮತ್ತು ಪುಲ್ವಾಮಾದ ಅಬ್ದುಲ್ ಮಲ್ಲಿಕ್ ರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಇಬ್ಬರು ನಿಷೇಧಿತ ಜೈಷ್-ಇ-ಮೊಹಮ್ಮದ್ ಸಂಘಟನೆಯ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ.
ತನಿಖಾ ಅಧಿಕಾರಿಗಳು ಭಯೋತ್ಪಾದಕರು ಹಾಗೂ ಶಂಕಿತ ನಡುವಿನ ನಡೆದ ಸಂಭಾಷಣೆಯಲ್ಲಿ ದೊಡ್ಡ ದಾಳಿ ನಡೆಸುವ ಹಾಗೂ ದಾಳಿ ನಡೆಸಲು ಬಳಸಬೇಕಾದ ವಸ್ತುಗಳ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದ್ದು, ಫೋನಿನಲ್ಲಿ ಧ್ವನಿ ಸಂದೇಶ ರವಾನೆ ಮಾಡುವ ಮೂಲಕ ಮಾತುಕತೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಡಿಜಿಪಿ ಒಪಿ ಸಿಂಗ್ ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತನಿಖೆಯ ಮಾಹಿತಿಯನ್ನು ರವಾನಿಸಿದ್ದಾರೆ.

ಬಹುಮುಖ್ಯ ಶಂಕಿತ ಶಹಾನವಾಜ್ ಕಳೆದ 18 ತಿಂಗಳಿನಿಂದ ಉಗ್ರರೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ಹೇಳಿದ್ದು, ಮತ್ತೊಬ್ಬ ಆರೋಪಿ ಅಬ್ದುಲ್ ಮಲ್ಲಿಕ್ ಕಳೆದ 6 ತಿಂಗಳ ಹಿಂದೆಯಷ್ಟೇ ಸಂಪರ್ಕಕ್ಕೆ ಬಂದಿರುವ ಬಗ್ಗೆ ತಿಳಿಸಿದ್ದಾಗಿ ಪೊಲೀಸ್ ಅಧಿಕಾರಿ ಅರುಣ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಪುಲ್ವಾಮಾ ದಾಳಿಯ ಬಳಿಕ ಭಾರತ ಯೋಧರ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಘಜಿ ಜೊತೆಗೆ ಸಂಪರ್ಕ ಇದ್ದಿದ್ದಾಗಿ ಶಹಾನವಾಜ್ ಒಪ್ಪಿಕೊಂಡಿದ್ದಾನೆ.
ಈ ಇಬ್ಬರು ಯುವಕರನ್ನು ಜೈಶ್ ಸಂಘಟನೆ ಟಾಪ್ ಕಮಾಂಡರ್ ಗಳು ಸಂಘಟನೆಗೆ ಸೇರಿಸಿಕೊಳ್ಳಲು ಸಂಪರ್ಕಿಸಿದ್ದರು. ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ತಿಳಿಸಿ ಎಂಬ ಸಂದೇಶ ಹಾಗೂ ಕೃತ್ಯ ನಡೆಸಲು ಬೇಕಾದ ಆಯುಧಗಳನ್ನು ಎಲ್ಲಿ ಪಡೆಯಬೇಕು ಎಂಬ ಬಗ್ಗೆಯೂ ಮಾಹಿತಿ ಪಡೆದಿದ್ದರು. ಆದರೆ ಈ ಪ್ಲಾನ್ ಇನ್ನು ಪ್ರಗತಿಯಲ್ಲಿತ್ತು ಎಂದು ಐಜಿ ವಿವರಿಸಿದ್ದಾರೆ.

ಬಂಧಿತರಿಬ್ಬರು ಧ್ವನಿ ಸಂದೇಶ ಮಾತ್ರವಲ್ಲದೇ ಬಿಬಿಎಂ ಮೇಸೆಂಜರ್ ಬಳಕೆ ಮಾಡಿ ಸಂವಹನ ನಡೆಸಿದ್ದು, ತಮ್ಮ ಗುರುತು ಪತ್ತೆ ಆಗದಿರಲು ಈ ತಂತ್ರ ಬಳಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಹಾನವಾಜ್ ಬಿಎ ಮೊದಲ ವರ್ಷ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ್ದಾನೆ. ಆತನ ತಂದೆ ಕಾರ್ಪೆಂಟರ್ ಆಗಿದ್ದು, ಸಹೋದರ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಬ್ದುಲ್ ಮಲ್ಲಿಕ್ 12ನೇ ತರಗತಿಯನ್ನು ಪಾಸ್ ಮಾಡಿದ್ದು, ಆತನ ತಂದೆ ರೈತರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಇಬ್ಬರೊಂದಿಗೂ ಓದಿದ ಇತರೆ ವಿದ್ಯಾರ್ಥಿಗಳನ್ನು ಕೂಡ ತನಿಖೆಗೆ ಒಳಪಡಿಸಲು ಎಟಿಎಸ್ ನಿರ್ಧಾರ ಮಾಡಿದೆ.

ಶಹಾನವಾಜ್ ಅಹ್ಮದ್ ಗ್ರೆನೇಡ್ ಸ್ಫೋಟದಲ್ಲಿ ಪರಿಣತನಾಗಿದ್ದಾನೆ. ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಶುಕ್ರವಾರ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv