Tag: Suspected

  • ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

    ರಾಯಚೂರು: ಬೆಂಗಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಮೃತ ವ್ಯಕ್ತಿಯ ಮನೆ ಹತ್ತಿರ ಸುಳಿಯಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹೆದರಿಕೊಂಡಿರುವ ಘಟನೆ ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದಲ್ಲಿ ನಡೆದಿದೆ.

    ಮಲ್ಲಪ್ಪ ತಳವಾರ (54) ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೇವದುರ್ಗದ ಸೋಮನಮರಡಿ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಬಂದಿದ್ದರು. ಬಳಿಕ ತನ್ನ ಊರಾದ ಲಿಂಗಸುಗೂರಿನ ರೋಡಲಬಂಡಾಗೆ ಬಂದು ಎರಡು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ವ್ಯಕ್ತಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾನೆಂದು ಭಾವಿಸಿರುವ ಗ್ರಾಮಸ್ಥರು ಭಯಗೊಂಡಿದ್ದಾರೆ.

    ಮೃತ ದೇಹದ ಬಳಿ ಹೋಗಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹಿಂದೇಟು ಹಾಕಿದರು. ಮೃತ ದೇಹವನ್ನು ದೂರದಿಂದಲೇ ವೀಕ್ಷಣೆ ಮಾಡಿದರು. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಲಿಂಗಸೂಗೂರು ತಾಲೂಕಾ ವೈದ್ಯಾಧಿಕಾರಿ ಡಾ.ನಂದಕುಮಾರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವ್ಯಕ್ತಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ತಾಲೂಕು ವೈದ್ಯಾಧಿಕಾರಿ, ಲಿಂಗಸುಗೂರು ತಹಶೀಲ್ದಾರ್ ಗ್ರಾಮದಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ಮಲ್ಲಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಕುಟುಂಬಸ್ಥರನ್ನು ಹೋಮ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ.

  • 7ನೇ ಮಹಡಿಯಿಂದ ಜಿಗಿದು ಕೊರೊನಾ ಶಂಕಿತ ವ್ಯಕ್ತಿ ಆತ್ಮಹತ್ಯೆ

    7ನೇ ಮಹಡಿಯಿಂದ ಜಿಗಿದು ಕೊರೊನಾ ಶಂಕಿತ ವ್ಯಕ್ತಿ ಆತ್ಮಹತ್ಯೆ

    ನವದೆಹಲಿ: ಕೊರೊನಾ ವೈರಸ್ ಶಂಕಿತ ವ್ಯಕ್ತಿ 7ನೇ ಮಹಡಿಯಿಂದ ಜಿಗಿದು ಆತ್ಮಹೆತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ಸಾವನ್ನಪ್ಪಿದ ವ್ಯಕ್ತಿಯನ್ನು ತನ್ವೀರ್ ಎಂದು ಗುರುತಿಸಲಾಗಿದ್ದು, ಪಂಜಾಬ್ ಮೂಲದ ತನ್ವೀರ್ ಸಿಂಗ್ ಬುಧವಾರ ಸಂಜೆ ಸಿಡ್ನಿಯಿಂದ ಹಿಂದಿರುಗಿದ್ದ. ಈತನನ್ನು ಪರೀಕ್ಷೆಗಾಗಿ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಯ ಎಸ್‍ಎಸ್‍ಬಿ ಕಟ್ಟಡಕ್ಕೆ ಕರೆತರಲಾಗಿತ್ತು. ರಾತ್ರಿ 9 ಗಂಟೆಗೆ ವೇಳೆಗೆ ಎಸ್‍ಎಸ್‍ಬಿ ಕಟ್ಟಡ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಆತನ ಗಂಟಲಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬರುವುದನ್ನು ಕಾಯುತ್ತಿದ್ದೆವು. ಅಷ್ಟರಲ್ಲೇ ಪಿಎಸ್-ಸಫ್ದರ್‍ಜಂಗ್ ಎನ್‍ಕ್ಲೇವ್ ವೈಡ್ ಡಿಡಿ ನಂ.42ಎ ನಂಬರ್ ನ ರೋಗಿ ಎಸ್‍ಎಸ್‍ಬಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಶರಣಾದವನನ್ನು 35 ವರ್ಷದ ಪುರುಷ ಎಂದು ಗುರುತಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ಕೊರೊನಾ ಶಂಕಿತ ವ್ಯಕ್ತಿಯನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕರೆ ತಂದು ರಾತ್ರಿ 9ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಎಐ-301 ನಂಬರಿನ ವಿಮಾನದಲ್ಲಿ ಸಿಡ್ನಿಯಿಂದ ಆಗಮಿಸಿದ್ದ. ಕಳೆದ ಒಂದು ವರ್ಷದಿಂದ ಸಿಡ್ನಿಯಲ್ಲೇ ನೆಲೆಸಿದ್ದ. ಈತನಿಗೆ ವಿಪರೀತ ತಲೆನೋವು ಇತ್ತು ಎಂದು ನೋಡೆಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ದೇಶದಲ್ಲಿ ಕೊರೊನಾ ವೈರಸ್‍ನಿಂದಾಗಿ 3ಜನ ಸಾವನ್ನಪ್ಪಿದ್ದು, 151 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

  • ಚಾಮರಾಜನಗರದಲ್ಲಿ ಶಂಕಿತ ಉಗ್ರ, ಮೌಲ್ವಿ ಬಂಧನವಾಗಿದ್ದು ಹೇಗೆ?

    ಚಾಮರಾಜನಗರದಲ್ಲಿ ಶಂಕಿತ ಉಗ್ರ, ಮೌಲ್ವಿ ಬಂಧನವಾಗಿದ್ದು ಹೇಗೆ?

    ಚಾಮರಾಜನಗರ: ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಕೊಲೆಗೈಯಲ್ಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕರನ್ನು ಗುಂಡ್ಲುಪೇಟೆ ಪಟ್ಟಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಸೆರೆ ಹಿಡಿದಿದೆ.

    ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯ ಮಸೀದಿಯೊಂದರ ಮೌಲ್ವಿ ಸದಕತ್ ಉಲ್ಲಾ (35) ಹಾಗೂ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಎಂಬವನನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

    10 ದಿನಗಳಿಂದ ಆಶ್ರಯ:
    ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾಗೆ ಪಟ್ಟಣದ ಮದರಾಸದ ಮೌಲ್ವಿ ಸದಕಲ್ ಉಲ್ಲಾ ಆಶ್ರಯ ನೀಡಿದ್ದ. ಈ ತಂಡವು ಮುಂದಿನ ದಿನಗಳಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಶಾಂತಿ ಕದಡಲು ಕಾರ್ಯತಂತ್ರ ರೂಪಿಸಿತ್ತು ಎಂಬ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.

    ಸುಳಿವು ಸಿಕ್ಕಿದ್ದು ಹೇಗೆ?
    ತಮಿಳುನಾಡಿನಲ್ಲಿ ಹಿಂದು ಸಂಘಟನೆಯ ಪಾಂಡಿ ಸುರೇಶ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಂಡದ ಸದಸ್ಯರು ನೀಡಿದ ಸುಳಿವಿನಿಂದಾಗಿ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಪಟ್ಟಣದಲ್ಲಿ ಉಳಿದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

    ಮೆಹಬೂಬ್ ಪಾಷಾ ಕಳೆದ ಹಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡಿದ್ದ. ಅದರಂತೆ ಕೋಲಾರದಲ್ಲಿ ಈತನ ಮೊಬೈಲ್ ಸಂಖ್ಯೆಯನ್ನು ಪೊಲೀಸರು ಟ್ರೇಸ್ ಮಾಡಿದ್ದರು. 10 ದಿನಗಳಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ಉಳಿದುಕೊಂಡು ಸಂಚು ರೂಪಿಸಲು ತೊಡಗಿದ್ದ ಎಂದು ತಿಳಿದು ಬಂದಿದೆ.

    ಹಿಂದೂ ಸಂಘಟನೆಗಳ ಮುಖಂಡರೇ ಟಾರ್ಗೆಟ್:
    ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲೆ ಮಾಡುವ ನಿಟ್ಟಿನಲ್ಲಿ ಮೆಹಬೂಬ್ ಪಾಷಾ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಶಂಕಿತ ಉಗ್ರನ ಯಾರನ್ನು ಟಾರ್ಗೆಟ್ ಮಾಡಿದ್ದ ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕಾಗಿದೆ.

    ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಗುಂಡ್ಲುಪೇಟೆ ಹೊರವಲಯದಲ್ಲಿರುವ ಒಂಟಿ ಮನೆಗಳಿಗೆ ಇಂದಿಗೂ ಸ್ಥಳೀಯರಿಗೆ ಪ್ರವೇಶವಿಲ್ಲ. ನಕ್ಸಲ್ ಚಟುವಟಿಕೆಗಳು ಗರಿಗೆದರಿದಾಗ ಮಾತ್ರ ಇಲ್ಲಿ ಪೊಲೀಸರ ಗಸ್ತು ನಡೆಯುತ್ತದೆ. ಇದರ ಹೊರತಾಗಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಉಗ್ರರು ಮತ್ತು ನಕ್ಸಲರ ಬೀಡಾಗಿ ಬದಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.