Tag: Sushma swaraj

  • ನಾನು ಮಂಗಳ ಗ್ರಹದಲ್ಲಿ ಸಿಲುಕಿದ್ದೇನೆ ಎಂದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ ಈಗ ವೈರಲ್

    ನಾನು ಮಂಗಳ ಗ್ರಹದಲ್ಲಿ ಸಿಲುಕಿದ್ದೇನೆ ಎಂದ ವ್ಯಕ್ತಿಗೆ ಸುಷ್ಮಾ ಸ್ವರಾಜ್ ಕೊಟ್ಟ ಉತ್ತರ ಈಗ ವೈರಲ್

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ಟರ್ ಮೂಲಕ ಅನೇಕ ಜನರಿಗೆ ಸ್ಪಂದಿಸಿ ನೆರವು ನೀಡುವುದರಿಂದ, ಹಾಗೇ ಇನ್ನೂ ಕೆಲವರಿಗೆ ಟಾಂಗ್ ಕೊಡುವ ಮೂಲಕ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ವ್ಯಕ್ತಿಯೊಬ್ಬ ನಾನು ಮಂಗಳಗ್ರಹದಲ್ಲಿ ಸಿಲುಕಿದ್ದೇನೆ ಅಂತ ಟ್ವೀಟ್ ಮಾಡಿದ್ದು ಅದಕ್ಕೆ ಸುಷ್ಮಾ ಸ್ವರಾಜ್ ನೀಡಿದ ಉತ್ತರ ಇದೀಗ ವೈರಲ್ ಆಗಿದೆ.

    ಟ್ವಿಟ್ಟರ್‍ನಲ್ಲಿ 80 ಲಕ್ಷಕ್ಕೂ ಹೆಚ್ಚು ಫಾಲೋವರ್‍ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್ ಬಹುತೇಕ ಮಂದಿಯ ಟ್ವೀಟ್‍ಗಳಿಗೆ ಉತ್ತರ ನೀಡುವುದಲ್ಲದೆ ಅವರಿಗೆ ಬೇಕಾದ ನೆರವು ಕೂಡ ನೀಡಿದ್ದಾರೆ. ಆದ್ರೆ ಕೆಲವೊಮ್ಮೆ ಟ್ವಿಟ್ಟರಿಗರು ವಿಚಿತ್ರವಾಗಿ ಟ್ವೀಟ್ ಮಾಡಿ ಸಚಿವೆಯನ್ನ ಟ್ಯಾಗ್ ಮಾಡಿದ್ದೂ ಇದೆ.

    ಹೀಗೆ ಕರಣ್ ಎಂಬ ವ್ಯಕ್ತಿ, ನಾನು ಮಂಗಳಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ. ಮಂಗಳಯಾನದ ಮೂಲಕ 987 ದಿನಗಳ ಹಿಂದೆ ಕಳಿಸಿದ್ದ ಊಟ ಇನ್ನೇನು ಖಾಲಿಯಾಗುತ್ತಾ ಬಂದಿದೆ. ಮಂಗಳಯಾನ-2 ಯಾವಾಗ ಕಳಿಸ್ತೀರಾ? ಎಂದು ಪ್ರಶ್ನಿಸಿ ಸುಷ್ಮಾ ಸ್ವರಾಜ್ ಅವರ ಖಾತೆಗೆ ಹಾಗೂ ಇಸ್ರೋ ಖಾತೆಗೆ ಟ್ಯಾಗ್ ಮಾಡಿದ್ದಾರೆ.

    ಇದಕ್ಕೆ ಹಾಸ್ಯಾಸ್ಪದವಾಗಿಯೇ ಉತ್ತರ ನೀಡಿರುವ ಸುಷ್ಮಾ ಸ್ವರಾಜ್, ನೀವು ಮಂಗಳಗ್ರಹದಲ್ಲಿ ಸಿಲುಕಿದ್ರೂ ಸರಿ, ಭಾರತೀಯ ರಾಯಭಾರಿಗಳು ನಿಮಗೆ ಸಹಾಯ ಮಾಡಲು ಅಲ್ಲಿರ್ತಾರೆ ಎಂದಿದ್ದಾರೆ.

    https://twitter.com/ksainiamd/status/872614454923546625

    ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಮಾಡಿರುವ ಈ ಟ್ವೀಟ್ ಈಗಾಗಲೇ ವೈರಲ್ ಆಗಿದ್ದು, ಅನೇಕ ಟ್ವಿಟ್ಟರಿಗರು ಈ ಉತ್ತರವನ್ನ ಶ್ಲಾಘಿಸಿದ್ದಾರೆ.

    2013ರ ನವೆಂಬರ್‍ನಲ್ಲಿ ಭಾರತ ಮಂಗಳಯಾನ ಉಪಗ್ರಹವನ್ನು ಉಡಾವಣೆ ಮಾಡಿತ್ತು.

    https://twitter.com/akelabhartiya/status/872664173104177152

  • ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಉಡುಪಿ: ಭಾರತೀಯನ ಮೇಲೆ ಆಫ್ರಿಕಾದ ಮೊಜಾಂಬಿಕ್ ನಲ್ಲಿ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಉಡುಪಿಯ ಸಂತೆಕಟ್ಟೆಯ ಆನಂದ್ ಕೃಷ್ಣ ಸಿಂಗ್ ಎಂಬವರ ಮೇಲೆ ಆಫ್ರಿಕಾದ ಮೋಜಾಂಬಿಕ್‍ನಲ್ಲಿ ಹಲ್ಲೆಯಾಗಿ ಗೃಹ ಬಂಧನಕ್ಕೆ ತಳ್ಳಲಾಗಿದೆ.

    ಆನಂದ್ ಸಿಂಗ್ ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ ಎಂಬ ಕಾರಣಕ್ಕೆ ಆನಂದ್ ಮೇಲೆ ಅಂಗಡಿ ಮಾಲೀಕ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮಾಲೀಕ ಮತ್ತು ಅವರ ಮಗ ಮನಸೋ ಇಚ್ಛೆ ಥಳಿಸಿದ್ದಾರೆ. ಇವರ ಹಿಂಸೆಯಿಂದ ಬೇಸತ್ತ ಆನಂದ್ ಅವರ ಸ್ನೇಹಿತರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದ್ದಾರೆ.

    ಆನಂದ್ ಕೃಷ್ಣ ಸಿಂಗ್ ಅವರ ಭಾರತದ ಸ್ನೇಹಿತರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಆಫ್ರಿಕಾ ರಾಯಭಾರಿ ಜೊತೆ ಮಾತಾಡಿ, ಕೂಡಲೇ ಆನಂದ್ ಅವರನ್ನು ವಾಪಾಸ್ ಕರೆತರುವ ವ್ಯವಸ್ಥೆ ಮಾಡಲು ಆದೇಶಿದ್ದು, ಆನಂದ್ ಸಿಂಗ್ ಇಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಆನಂದ್ ಗೆಳೆಯರು ಮಾಹಿತಿ ನೀಡಿದ್ದಾರೆ.

    ಆನಂದ್ ಈ ಹಿಂದೆ ಉಡುಪಿಯ ಕೆಲ ಕಡೆಗಳಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಸಂತೆಕಟ್ಟೆಯ ಜಿಮ್ ಗೆ ಬರುತ್ತಿದ್ದರು ಎಂದು ಕೆಲವರು ತಿಳಿಸಿದ್ದಾರೆ. ಆದರೆ ಉಡುಪಿಯಲ್ಲಿ ಎಷ್ಟು ವರ್ಷಗಳಿಂದ ಇದ್ದರು. ಇಲ್ಲಿ ಅವರ ಸಂಬಂಧಿಗಳು ಇದ್ದಾರೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಆನಂದ್ ಸಿಂಗ್ ಗೆಳೆಯರು ಆತನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಫೇಸ್ ಬುಕ್ ಗೆ ಅಪ್‍ಲೋಡ್ ಮಾಡಿದ್ದಾರೆ.

     

  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಪರ ವಾದಿಸಲು ವಕೀಲ ಹರೀಶ್ ಸಾಳ್ವೆ ಸಂಭಾವನೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯಪಡ್ತೀರಿ

    ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಪರ ವಾದಿಸಲು ವಕೀಲ ಹರೀಶ್ ಸಾಳ್ವೆ ಸಂಭಾವನೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯಪಡ್ತೀರಿ

    ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಿಶ್ವ ಸಂಸ್ಥೆಯ ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್‍ನಲ್ಲಿ ಭಾರತದ ಪರವಾಗಿ ವಾದ ಮಾಡಲು ವಕೀಲರಾದ ಹರೀಶ್ ಸಾಳ್ವೆ ಎಷ್ಟು ಸಂಭವನೆ ಪಡೆಯುತ್ತಿದ್ದಾರೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಬಹಿರಂಗಪಡಿಸಿದ್ದಾರೆ.

    ಕುಲಭೂಷಣ್ ಜಾಧವ್ ಅವರ ಗಲ್ಲು ಶಿಕ್ಷೆಗೆ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ತಡೆ ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ, ಯಾವುದೇ ಒಳ್ಳೆಯ ಭಾರತೀಯ ವಕೀಲರಾದ್ರೂ ಇದೇ ಕೆಲಸವನ್ನ ಮಾಡ್ತಿದ್ರು. ಹಾಗೂ ಹರೀಶ್ ಸಾಳ್ವೆ ಅವರಿಗಿಂತ ಕಡಿಮೆ ಸಂಭಾವನೆ ಪಡೆದು ಮಾಡುತಿದ್ರು. ತೀರ್ಪಿಗಾಗಿ ಕಾಯೋಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಇದು ಸರಿಯಲ್ಲ. ಹರೀಶ್ ಸಾಳ್ವೆ ಅವರು ನಮ್ಮಿಂದ ಕೇವಲ 1 ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    https://twitter.com/goyalsanjeev/status/864160971350134784

    ಗೂಢಚಾರಿಕೆ ಆರೋಪದ ಮೇಲೆ ಜಾಧವ್ ಅವರಿಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಭಾರತದ ಮನವಿಯನ್ನ ಹೇಗೆ ಮಂಡಿಸಬೇಕು ಎಂಬ ಬಗ್ಗೆ ಭಾರತದ ಮಾಜಿ ಸಾಲಿಸಿಟರ್ ಜೆನರಲ್ ಹರೀಶ್ ಸಾಳ್ವೆ ಇಂದು ಒಂದೂವರೆ ಗಂಟೆಗಳ ಕಾಲ ಮಾತನಾಡಿದ್ರು.

    ಜಾಧವ್ ಅವರ ಗಲ್ಲು ಶಿಕ್ಷೆಯನ್ನ ಪ್ರಶ್ನಿಸಿ ಕಳೆದ ವಾರ ಭಾರತ ಇಂಟರ್ ನ್ಯಾಷನಲ್ ಕೋರ್ಟ್‍ನ ಮೊರೆ ಹೋಗಿತ್ತು. ಕೋರ್ಟ್ ತೀರ್ಮಾನಕ್ಕೂ ಮುನ್ನವೇ ಜಾಧವ್ ಅವರಿಗೆ ಶಿಕಗ್ಷೆಯಾಗಬಹುದೆಂಬ ಆತಂಕವಿತ್ತು. ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು ಹಾಗೂ ಅವಸರವಿತ್ತು. ಆದ್ದರಿಂದ ನಾವು ಬೇಗನೆ ಕೋರ್ಟ್ ಮೊರೆ ಹೋದೆವು ಎಂದು ಹರೀಶ್ ಸಾಳ್ವೆ ಹೇಳಿದ್ದಾರೆ.

  • ಇಂದು ಎನ್‍ಡಿಎ ಮಿತ್ರಪಕ್ಷಗಳ ಜೊತೆ ಮೋದಿ, ಷಾ ಸಭೆ- ರಾಷ್ಟ್ರಪತಿ ಆಯ್ಕೆಗೆ ಚರ್ಚೆ

    ಇಂದು ಎನ್‍ಡಿಎ ಮಿತ್ರಪಕ್ಷಗಳ ಜೊತೆ ಮೋದಿ, ಷಾ ಸಭೆ- ರಾಷ್ಟ್ರಪತಿ ಆಯ್ಕೆಗೆ ಚರ್ಚೆ

    – ಎಸ್‍ಎಂ ಕೃಷ್ಣ ಆಗ್ತಾರಾ ಉಪರಾಷ್ಟ್ರಪತಿ?

    ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಸಂಜೆ ಎನ್‍ಡಿಎ ಮೈತ್ರಿಕೂಟದ ಎಲ್ಲಾ 32 ಮಿತ್ರಪಕ್ಷಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳನ್ನ ಭೇಟಿ ಮಾಡಲಿದ್ದಾರೆ.

    ಮೋದಿ 2014ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಎರಡನೇ ಸಭೆಯಾಗಿದ್ದು, ಸರ್ಕಾರದ ಮುಂದಿನ ತಂತ್ರಗಾರಿಕೆ ಬಗ್ಗೆ ನಿರ್ಧರಿಸಲು ಈ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಮುಂದಿನ ರಾಷ್ಟ್ರಪತಿ ಯಾರಾಗಬೇಕೆಂಬ ಬಗ್ಗೆಯೇ ಸಭೆಯಲ್ಲಿ ಹೆಚ್ಚಿನ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ.

    ಇತ್ತೀಚೆಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಆಗಾಗ ವೈಮನಸ್ಸು ಕಾಣಿಸಿಕೊಂಡಿದ್ದರೂ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ವರದಿಯಾಗಿದೆ. ಅಲ್ಲದೆ ತೆಲುಗುದೇಶಂ ಪಕ್ಷದ ಮುಖ್ಯಸ್ಥರು ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಮತ್ತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಸಭೆಯಲ್ಲಿ ಹಾಜರಿರಲಿದ್ದಾರೆ.

    ಪ್ರಧಾನಿ ಮೋದಿ ಬಯಸಿದ ವ್ಯಕ್ತಿ ರಾಷ್ಟ್ರಪತಿ ಕುರ್ಚಿಯ ಮೇಲೆ ಕೂರಬೇಕಾದ್ರೆ, ಎಲ್ಲಾ ಪಕ್ಷಗಳ ಬೆಂಬಲ ಅಗತ್ಯ ಎಂಬುದು ಎನ್‍ಡಿಎ ನಾಯಕರಿಗೆ ತಿಳಿದಿದೆ. ಜುಲೈ 25ರ ಒಳಗೆ ದೇಶದ ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕಿದ್ದು, ಬಿಜೆಪಿ ಈಗಾಗಲೇ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗಿದೆ ಎಂದು ವರದಿಯಾಗಿದೆ.

    ಸಂಭಾವ್ಯ ಸ್ಪರ್ಧಿಗಳು ಯಾರು?

    1. ಎಲ್‍ಕೆ ಅಡ್ವಾಣಿ
    ರಾಜಕೀಯ ವಲಯದ ಮಾತುಗಳ ಪ್ರಕಾರ ಬಿಜೆಪಿಯ ಹಿರಿಯ ನಾಯಕರಾದ ಎಲ್‍ಕೆ ಅಡ್ವಾಣಿ ಅವರು ಮುಂದಿನ ರಾಷ್ಟ್ರಪತಿ ಆಗಬೇಕೆಂಬುದು ಪ್ರಧಾನಿ ಮೋದಿ ಅವರ ಆಶಯ ಎಂದು ಹೇಳಲಾಗಿದೆ. ಗುಜರಾತ್‍ನ ಸೋಮನಾಥ್‍ನಲ್ಲಿ ನಡೆದ ಸಭೆಯಲ್ಲಿ ಮೋದಿ, ಅಡ್ವಾಣಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಡ್ವಾಣಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವುದು ಅವರಿಗೆ ನಾವು ಗುರು ದಕ್ಷಿಣೆ ನೀಡಿದಂತೆ ಎಂದು ಮೋದಿ ಹೇಳಿದ್ದರು ಎನ್ನಲಾಗಿದೆ.

    2. ಮೋಹನ್ ಭಾಗವತ್
    ಆರ್‍ಎಸ್‍ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್, ರಾಷ್ಟ್ರಪತಿ ಹುದ್ದೆಯ ರೇಸ್‍ನಲ್ಲಿರುವ ಬಗ್ಗೆ ವರದಿಗಳನ್ನ ತಳ್ಳಿಹಾಕಿದ್ದರೂ ಕೂಡ ಇವರ ಹೆಸರು ಸಂಭಾವ್ಯ ರಾಷ್ಟ್ರಪತಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಭಾರತವನ್ನ ಹಿಂದೂ ರಾಷ್ಟ್ರ ಮಾಡಬೇಕಿದ್ದರೆ ರಾಷ್ಟ್ರಪತಿ ಸ್ಥಾನಕ್ಕೆ ಭಾಗವತ್ ಅವರೇ ಸೂಕ್ತ ಆಯ್ಕೆ. ಆದರೆ ಈ ನಿರ್ಧಾರವನ್ನು ಉದ್ಧವ್ ಠಾಕ್ರೆ ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನಾ ಮುಖಂಡರಾದ ಸಂಜಯ್ ರೌತ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾಗವತ್, ನಾವು ಸಂಘ ಹಾಗೂ ಸಮಾಜಕ್ಕಾಗಿ ಮಾತ್ರ ಕೆಲಸ ಮಾಡುತ್ತೇವೆ. ರಾಷ್ಟ್ರಪತಿ ಹುದ್ದೆಗೆ ನನ್ನ ಹೆಸರು ಬರುವುದಿಲ್ಲ. ಒಂದು ವೇಳೆ ನನ್ನ ಹೆಸರನ್ನು ಸೂಚಿಸಿದ್ರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿ ರೌತ್ ಅವರ ಸಲಹೆಯನ್ನು ತಿರಸ್ಕರಿಸಿದ್ದರು.

    3. ಸುಮಿತ್ರಾ ಮಹಾಜನ್
    ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನೂ ಕೂಡ ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಪರಿಗಣಿಸಲಿದೆ ಎಂದು ಹೇಳಲಾಗಿದೆ. ಆಡಳಿತ ಪಕ್ಷ ಬಿಜೆಪಿಯೊಂದಿಗಿನ ಸುಮಿತ್ರಾ ಮಹಾಜನ್ ಅವರ ಉತ್ತಮ ಸಂಬಂಧ ಹಾಗೂ ಅವರು ಲೋಕಸಭೆಯನ್ನು ಸಮರ್ಪಕವಾಗಿ ನಿರ್ವಹಿಸುವ ರೀತಿ ಮಹಾಜನ್ ಪರವಾಗಿ ಕಲಸ ಮಾಡಬಹುದು ಎಂದು ಅಭಿಪ್ರಾಯಿಸಲಾಗಿದೆ.

    4. ದ್ರೌಪದಿ ಮುರ್ಮು
    ಉತ್ತರಪ್ರದೇಶ ಹಾಗೂ ಗುಜರಾತ್‍ನಲ್ಲಿ ಸಿಎಂ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬಂದಾಗ ಹಲವರ ಹೆಸರು ಕೇಳಿ ಬಂದಿತ್ತು. ಆದ್ರೆ ಉತ್ತರಪ್ರದೇಶಕ್ಕೆ ಯೋಗಿ ಆದಿತ್ಯನಾಥ್ ಅವರನ್ನ ಹಾಗೂ ಗುಜರಾತ್‍ಗೆ ವಿಜಯ್ ರುಪಾನಿ ಅವರನ್ನ ಸಿಎಂ ಆಗಿ ಆಯ್ಕೆ ಮಾಡಿದ್ದು ಆಶ್ಚರ್ಯ ತಂದಿತ್ತು. ಇದೇ ರೀತಿ ಜಾರ್ಖಂಡ್ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಲೂಬಹುದು ಎಂದು ಹೇಳಲಾಗಿದೆ. ಮುರ್ಮು ಅವರು ಒಡಿಶಾದಿಂದ ಎರಡು ಬಾರಿ ಬಿಜೆಪಿ ಶಾಸಕಿಯಾಗಿದ್ದರು. ಅಲ್ಲದೆ ನವೀನ್ ಪಟ್ನಾಯಕ್ ಅವರ ಸಂಪುಟದಲ್ಲಿ ಸಚಿವೆ ಕೂಡ ಆಗಿದ್ದರು.

    5. ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಎಸ್‍ಎಂ ಕೃಷ್ಣ
    ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಕಾರ್ಯ ವೈಖರಿ ಮೂಲಕವೇ ವಿರೋಧ ಪಕ್ಷಗಳಿಂದಲೂ ಪ್ರಶಂಸೆ ಗಳಿಸಿದ್ದಾರೆ. ಈ ನಡುವೆ ಅವರ ಆರೋಗ್ಯ ಸರಿಯಿಲ್ಲದ ಕಾರಣವನ್ನು ಪರಿಗಣಿಸಿ ಬಿಜೆಪಿ, ಸುಷ್ಮಾ ಅವರ ಕೆಲಸದ ಭಾರವನ್ನ ಕಡಿಮೆ ಮಾಡಲು ಅವರನ್ನ ಉನ್ನತ ಹುದ್ದೆಗೆ ಆಯ್ಕೆ ಮಾಡಲೂಬಹುದು ಎನ್ನಲಾಗಿದೆ.

    ಅಲ್ಲದೆ ಉಪ ರಾಷ್ಟ್ರಪತಿ ಹುದ್ದೆಗೆ ಹಿರಿಯ ಸಚಿವ ವೆಂಕಯ್ಯ ನಾಯ್ಡು ಹಾಗೂ ಇತ್ತೀಚೆಗೆ ಬಿಜೆಪಿ ಸೇರಿದ ಕರ್ನಾಟಕದ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಹೆಸರುಗಳು ಕೇಳಿಬರುತ್ತಿವೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನ ವಿಸ್ತರಿಸಬೇಕು ಎಂದುಕೊಂಡಿರುವ ಬಿಜೆಪಿ, ಈ ಇಬ್ಬರಿಗೆ ಉಪ ರಾಷ್ಟ್ರಪತಿ ಹುದ್ದೆ ನೀಡಿದ್ರೆ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಮತದಾರರನ್ನ ಸೆಳೆಯಬಹುದು ಎಂದು ಉದ್ದೇಶಿಸಿದೆ ಎನ್ನಲಾಗಿದೆ.

  • ಪಾಕಿಸ್ತಾನದಲ್ಲಿರುವ ಪತ್ನಿಯನ್ನು ಕರೆತರಲು ಹುಬ್ಬಳ್ಳಿ  ಯುವಕನ ಪರದಾಟ

    ಪಾಕಿಸ್ತಾನದಲ್ಲಿರುವ ಪತ್ನಿಯನ್ನು ಕರೆತರಲು ಹುಬ್ಬಳ್ಳಿ ಯುವಕನ ಪರದಾಟ

    ಹುಬ್ಬಳ್ಳಿ: ಪಾಕಿಸ್ತಾನದ ಯುವತಿಯನ್ನು ಮದುವೆ ಆದ ಹುಬ್ಬಳ್ಳಿ ಯುವಕರೊಬ್ಬರು ತನ್ನ ಪತ್ನಿಯನ್ನು ಭಾರತಕ್ಕೆ ಕರೆತರಲು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ನವನಗರ ಮೂಲದ ಡೇನಿಯಲ್ ಹೆನ್ರಿ ದೇವನೂರು ಎಂಬವರೇ ತನ್ನ ಪತ್ನಿಗಾಗಿ ಪರದಾಡುತ್ತಿರುವ ವ್ಯಕ್ತಿ.

    ಡೇನಿಯಲ್ 2016 ಜೂನ್ 25 ರಂದು ದೂರದ ಸಂಬಂಧಿಯಾದ ಪಾಕಿಸ್ತಾನ ಮೂಲದ ಸಿಲ್ವಿಯಾ ನೂರಿನ್ ಎಂಬ ಯುವತಿಯನ್ನು ಲಾಹೋರ್‍ನ ಪೆಂಟ್ ಕೊಸ್ಟಲ್ ಚರ್ಚ್‍ನಲ್ಲಿ ವಿವಾಹವಾಗಿದ್ದರು. ನಂತರ ಜುಲೈ 11 ರಂದು ಭಾರತಕ್ಕೆ ಹಿಂದಿರುಗಿ ಬಂದಿದ್ದರು.

    ಆದರೆ ಈಗ 9 ತಿಂಗಳಾದ್ರು ಕೂಡ ವೀಸಾ ಸಿಗದೇ ಪರದಾಡುತ್ತಿದ್ದಾರೆ. ತನ್ನ ಪತ್ನಿಯನ್ನು ಭಾರತಕ್ಕೆ ಕರೆ ತರಲು ಸತತ ಪ್ರಯತ್ನ ಮಾಡುತ್ತಿರುವ ಡೇನಿಯಲ್‍ಗೆ ಪಾಕಿಸ್ತಾನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತನ್ನ ಪತ್ನಿ ಭಾರತಕ್ಕೆ ಬರಬೇಕಾದ್ರೆ ಸ್ಪಾನ್ಸರ್‍ಶಿಪ್ ಸರ್ಟಿಫಿಕೇಟ್ ಪಡೆಯಬೇಕು. ಅದಕ್ಕೆ `ಎ’ ಗ್ರೇಡ್ ಪಾಕಿಸ್ತಾನದ ಅಧಿಕಾರಿ ಸಹಿ ಮಾಡಬೇಕು. ಅಂದಾಗ ಮಾತ್ರ ಭಾರತಕ್ಕೆ ಬರಲು ವಿಜಿಟರ್ ವೀಸಾ ಸಿಗಲಿದೆ. ಆದ್ರೆ ಪಾಕಿಸ್ತಾನದ ಯಾವೊಬ್ಬ ಅಧಿಕಾರಿಯೂ ಕೂಡ ಸ್ಪಾನ್ಸರ್‍ಶಿಪ್ ಸರ್ಟಿಫಿಕೆಟ್‍ಗೆ ಸಹಿ ಮಾಡಲು ಮುಂದೆ ಬರುತ್ತಿಲ್ಲವಾದ ಕಾರಣಡೇನಿಯಲ್ ಪತ್ನಿಗಾಗಿ ಪರಿತಪಿಸುವಂತಾಗಿದೆ.

    ಭಾರತ ಹಾಗೂ ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಸರಿ ಇಲ್ಲದ ಕಾರಣ ನೀಡಿ ಯಾವ ಅಧಿಕಾರಿಯೂ ಸಹಿ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ತನ್ನ ಸಂಗಾತಿಯ ಭೇಟಿಗಾಗಿ ಹೆಣಗಾಡುತ್ತಿರುವ ಡೆನಿಯಲ್ ಕೊನೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಕೋರಿ ಮನವಿ ಮಾಡಿದ್ದಾರೆ.

     

  • ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ನವದೆಹಲಿ: 12ನೇ ತರಗತಿಯ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸೋಮವಾರದಂದು ಆಫ್ರಿಕಾ ಪ್ರಜೆಗಳ ಮೇಲೆ ದಾಳಿ ನಡೆದಿದ್ದು ಈ ಬಗ್ಗೆ ವರದಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೇಳಿದ್ದಾರೆ.

    ಶನಿವಾರದಂದು ಗ್ರೇಟರ್ ನೋಯ್ಡಾದಲ್ಲಿ 19 ವರ್ಷದ ಮನಿಷ್ ಖರಿ ಮೃತಪಟ್ಟಿದ್ದು, ಈತ ಮಾದಕ ದ್ರವ್ಯದ ಓವರ್‍ಡೋಸ್‍ನಿಂದ ಸಾವನ್ನಪ್ಪಿದ್ದಾನೆಂದು ಸ್ಥಳಿಯರು ಆರೋಪಿಸಿದ್ರು. ಮನಿಷ್ ಕೊನೆಯ ಬಾರಿಗೆ ನೈಜೀರಿಯಾ ಪ್ರಜೆಗಳ ಗುಂಪಿನ ಜೊತೆಯಲ್ಲಿದ್ದಿದ್ದು ನೋಡಿದ್ದೆವು ಎಂದು ಸ್ಥಳೀಯರು ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.

    ಯುವಕನ ಸಾವಿನ ಹಿನ್ನೆಲೆಯಲ್ಲಿ ಸೋಮವಾರದಂದು ನೂರಾರು ಜನ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಗ್ರೇಟರ್ ನೊಯ್ಡಾದ ಪರಿ ಚೌಕ್ ಬಳಿ 4 ನೈಜೀರಿಯಾ ಪ್ರಜೆಗಳ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ನೈಜೀರಿಯ ಪ್ರಜೆಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ನೈಜೀರಿಯಾದ ಯುವಕನೊಬ್ಬ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

  • ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಸಾವು- ಪ್ರತಾಪ್ ಸಿಂಹ ಟ್ವೀಟ್‍ಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

    ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಸಾವು- ಪ್ರತಾಪ್ ಸಿಂಹ ಟ್ವೀಟ್‍ಗೆ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್

    ಮೈಸೂರು: ಸೌದಿಯಲ್ಲಿ ಮೈಸೂರು ಮೂಲದ ವ್ಯಕ್ತಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಮಾಡಿದ ಟ್ವೀಟ್‍ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ.

    ಮಾರ್ಚ್ 25 ರಂದು ಶಬ್ಬಿರ್ (24) ಎಂಬವರು ಸೌದಿಯಲ್ಲಿ ಮೃತರಾಗಿದ್ದರು. 9 ತಿಂಗಳ ಹಿಂದೆ ಡ್ರೈವರ್ ಕೆಲಸಕ್ಕಾಗಿ ಶಬ್ಬಿರ್ ಸೌದಿಗೆ ತೆರಳಿದ್ದರು. ಮೂರು ದಿನಗಳ ಹಿಂದೆ ನೇಣುಬಿಗಿದ ಸ್ಥಿತಿಯಲ್ಲಿ ಶಬ್ಬೀರ್ ಶವ ಪತ್ತೆಯಾಗಿತ್ತು. ಶವದ ಸ್ಥಿತಿ ನೋಡಿದ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು.

    ಶಬ್ಬಿರ್ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಅಲ್ಲಿನ ಕಂಪೆನಿ ಮಾಲೀಕರು 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಬ್ಬಿರ್ ಮೃತದೇಹ ತರಿಸಿಕೊಡುವಂತೆ ಸಂಸದ ಪ್ರತಾಪ್ ಸಿಂಹಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರತಾಪ್ ಸಿಂಹ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಟ್ವೀಟ್ ಕೂಡ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್ ಭಾರತೀಯ ರಾಯಭಾರಿ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

  • ಪಾಕ್‍ನಲ್ಲಿ ಅತ್ತೆ ಮನೆಯವರ ಕಿರುಕುಳಕ್ಕೊಳಗಾದ ಭಾರತೀಯ ಮಹಿಳೆಗೆ ಸುಷ್ಮಾ ಸ್ವರಾಜ್ ನೆರವು

    ಪಾಕ್‍ನಲ್ಲಿ ಅತ್ತೆ ಮನೆಯವರ ಕಿರುಕುಳಕ್ಕೊಳಗಾದ ಭಾರತೀಯ ಮಹಿಳೆಗೆ ಸುಷ್ಮಾ ಸ್ವರಾಜ್ ನೆರವು

    ನವದೆಹಲಿ: ಪಾಕಿಸ್ತಾನದಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬರು ಅತ್ತೆ ಮನೆಯವರ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ವಿಷಯ ತಿಳಿದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಹಿಳೆಯ ನೆರವಿಗೆ ನಿಂತಿದ್ದಾರೆ.

    ಮಹಿಳೆಯ ತಂದೆ ಯೂಟ್ಯೂಬ್ ವೀಡಿಯೋ ಮೂಲಕ ಪಾಕಿಸ್ತಾನದಲ್ಲಿರವ ತಮ್ಮ ಮಗಳಿಗೆ ಆಕೆಯ ಅತ್ತೆ ಮನೆಯವರು ಕಿರುಕುಳ ನೀಡುತ್ತಿರುವ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸುಷ್ಮಾ ಸ್ವರಾಜ್, ಪಾಕಿಸ್ತಾನದಲ್ಲಿರುವ ಮಹಿಳೆಯನ್ನು ಭಾರತೀಯ ರಾಯಭಾರ ಕಚೇರಿ ಭೇಟಿ ಮಾಡಿದೆ ಎಂದು ಹೇಳಿ ಅವರ ಸುರಕ್ಷತೆ ಮತ್ತು ಭಾರತಕ್ಕೆ ಹಿಂದಿರುಗುವ ಬಗ್ಗೆ ಭರವಸೆ ನೀಡಿದ್ದಾರೆ.

    ಮೊಹಮದಿ ಬೇಗಂ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಆಕೆಯ ತಂದೆ ಮೊಹಮದ್ ಅಕ್ಬರ್ ಅವರಿಂದ ಯೂಟ್ಯೂಬ್ ವೀಡಿಯೋ ಬಂದಿರುವ ಬಗ್ಗೆ ಸುಷ್ಮಾ ಸ್ವರಾಜ್ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ. ಮೂಲತಃ ಹೈದರಾಬಾದ್‍ನವರಾದ ಮೊಹಮದಿ ಬೇಗಂ ಅವರ ಪಾಸ್‍ಪೋರ್ಟ್ ಅವಧಿ ಕಳೆದ ವರ್ಷವೇ ಮುಗಿದಿದ್ದು, ಭಾರತೀಯ ರಾಯಭಾರ ಕಚೇರಿಯವರಿಗೆ ಬೇಗಂ ಅವರ ಪಾಸ್‍ಪೋರ್ಟ್ ನವೀಕರಿಸಿ ಭಾರತಕ್ಕೆ ಮರಳಲು ನೆರವಾಗುವಂತೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.

    ಈ ನಡುವೆ ಭಾರತೀಯ ರಾಯಭಾರ ಕಚೇರಿಯವರು ಭೇಟಿಯಾದ ಬಳಿಕ ತನ್ನ ಗಂಡ ಮೊಹಮ್ಮದ್ ಯೂನಿಸ್ ತನ್ನನ್ನು ಹೊಡೆದು ಕೋಣೆಯಲ್ಲಿ ಕೂಡಿಹಾಕಿದ್ದಾರೆಂದು ಮೊಹಮದಿ ಬೇಗಂ ತನ್ನ ತಾಯಿ ಹಜಾರಾ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಹಜಾರಾ, ನನ್ನ ಮಗಳು ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಕುಗ್ಗಿ ಹೋಗಿದ್ದಾಳೆ. ಆಕೆಗೆ ಕೂಡಲೇ ವೈದ್ಯಕೀಯ ನೆರವಿನ ಅಗತ್ಯವಿದೆ. ಯೂನಿಸ್ ಹಾಗೂ ಬೇಗಂಗೆ 3 ಗಂಡುಮಕ್ಕಳು ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳೂ ಕೂಡ ಬೇಗಂ ಜೊತೆಗೆ ಬಂದರೆ ಒಳ್ಳೆಯದು. ಆಕೆಯನ್ನು ಆದಷ್ಟು ಬೇಗ ಮನೆಗೆ ಕರೆದುಕೊಂಡು ಬರಬೇಕೆಂದು ಮನವಿ ಮಾಡಿದ್ದಾರೆ.

    ಮೊಹಮದಿ ಬೇಗಂ ಅವರ ತಂದೆ ಅಕ್ಬರ್ ಸೈಕಲ್ ಮೆಕಾನಿಕ್ ಆಗಿದ್ದು, ಜನವರಿಯಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಇ-ಮೇಲ್ ಮಾಡುವ ಮೂಲಕ ಮಗಳನ್ನು ಭಾರತಕ್ಕೆ ಕರೆತರಲು ಸಹಾಯ ಕೋರಿದ್ದರು.

    ಸುಳ್ಳು ಹೇಳಿ ಮದುವೆಯಾಗಿದ್ದ: ಮೊಹಮ್ಮದ್ ಯೂನಿಸ್ ತನ್ನ ರಾಷ್ಟ್ರೀಯತೆಯ ಬಗ್ಗೆ ಮುಚ್ಚಿಟ್ಟು, ತಾನು ಓಮನ್‍ನವನು ಎಂದು ಹೇಳಿ 1996ರಲ್ಲಿ ಮಗಳನ್ನ ಮದುವೆಯಾಗಿದ್ದ. ಏಜೆಂಟ್‍ವೊಬ್ಬರ ಮುಖಾಂತರ ಫೋನಿನಲ್ಲೇ ನಿಖಾ ಮಾಡಲಾಗಿತ್ತು. ನಂತರ ಬೇಗಂ ಮೆಕಾನಿಕ್ ಆಗಿದ್ದ ಯೂನಿಸ್‍ನನ್ನು ಮಸ್ಕಟ್‍ನಲ್ಲಿ ಹೋಗಿ ಸೇರಿದಳು. ಆದ್ರೆ 12 ವರ್ಷಗಳ ನಂತರ ಕೆಲಸ ಕಳೆದುಕೊಂಡ ಯೂನಿಸ್ ತಾನು ಪಾಕಿಸ್ತಾನದವನೆಂದು ಬಾಯ್ಬಿಟ್ಟಾಗ ಮಹಮದಿ ಬೇಗಂಗೆ ಶಾಕ್ ಆಗಿತ್ತು ಎಂದು ಅಕ್ಬರ್ ಹೇಳಿದ್ದಾರೆ.

    2012ರಲ್ಲಿ ಬೇಗಂ ಹೈದರಾಬಾದ್‍ಗೆ ಬಂದಿದ್ದಳು. ಮದುವೆಯಾದ 21 ವರ್ಷಗಳಲ್ಲಿ ಆಕೆ ಭಾರತಕ್ಕೆ ಭೇಟಿ ನೀಡಿದ್ದು ಇದೊಂದೇ ಸಲ ಎಂದು ಅಕ್ಬರ್ ಹೇಳಿದ್ದಾರೆ.

  • ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

    ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ.

    ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಪ್ರತ್ಯಕ್ಷದರ್ಶಿ ಐಯಾನ್ ಗ್ರಿಲ್ಲೊಟ್ ಎಂಬವರ ಮೇಲೂ ಗುಂಡಿನ ದಾಳಿ ನಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್‍ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರೋ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ನನಗೆ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಶ್ರೀನಿವಾಸ್ ಅವರ ಮೃತದೇಹವನ್ನು ಹೈದರಾಬಾದ್‍ಗೆ ತರಲು ಎಲ್ಲಾ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಶ್ರೀನಿವಾಸ್ ಅವರು ಜಿಪಿಎಸ್ ಸಿಸ್ಟಮ್ ತಯಾರು ಮಾಡುವ ಅಮೆರಿಕದ ಎಂಎನ್‍ಸಿ ಯಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸಂಸ್ಥೆಯನ್ನು ಸೇರಿದ್ದರು. ಇವರ ಪತ್ನಿ ಸುನಯನ ಕೂಡ ಇದೇ ಪ್ರದೇಶದಲ್ಲಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.